Mysore
20
overcast clouds
Light
Dark

ಅಮೇರಿಕ – ಚೀನಾ ಸ್ನೇಹ : ಭಾರತಕ್ಕೆ ಏಕೆ ಆತಂಕ ?

  • ಡಿ.ವಿ. ರಾಜಶೇಖರ

ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ನಡುವೆ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ಮಾತುಕತೆಗಳು ಉಭಯ ದೇಶಗಳ ನಡುವೆ ಇರುವ ದೊಡ್ಡ ಸಮಸ್ಯೆಗಳಿಗೆ ಪರಿಹಾರವನ್ನು ತಂದುಕೊಡುವಲ್ಲಿ ಸಫಲವಾಗಿಲ್ಲ. ಆದರೆ ಎರಡೂ ದೇಶಗಳ ನಾಯಕರ ನಡುವೆ ಸಂಪರ್ಕವೇ ಇಲ್ಲದಂತಾಗಿದ್ದ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಈ ಮಾತುಕತೆಗಳು ಸಫಲವಾಗಿವೆ.

ಏಷ್ಯಾ ಪೆಸಿಫಿಕ್ ದೇಶಗಳ ನಡುವಣ ಸಹಕಾರ ಕುರಿತಂತೆ 21 ಸದಸ್ಯ ದೇಶಗಳ ನಡುವೆ ನಡೆದ ಸಮಾವೇಶದ ಹಿನ್ನೆಲೆಯಲ್ಲಿ ಉಭಯ ನಾಯಕರೂ ಮಾತುಕತೆ ನಡೆಸಿದ್ದೇ ಒಂದು ಒಳ್ಳೆಯ ಬೆಳವಣಿಗೆ ವರ್ಷದ ಹಿಂದೆ ಅಮೆರಿಕದ ಮೇಲೆ ಚೀನಾದ ಸ್ಕೈ ಬಲೂನ್ ಹಾರಾಟ ಮಾಡಿದ ಮತ್ತು ಅದನ್ನು ಅಮೆರಿಕದ ನೌಕಾದಳ ಗುಂಡಿಟ್ಟು ನಾಶಮಾಡಿದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದಲೂ ಎರಡೂ ದೇಶಗಳ ನಡುವೆ ಬಾಂಧವ್ಯ ಕಡಿತಗೊಂಡಿತ್ತು. ಪರಸ್ಪರ ಸಂಪರ್ಕವೂ ಇಲ್ಲದಂತಾಗಿತ್ತು. ಅದರ ಜೊತೆಗೆ ಇನ್ನೂ ಹಲವು ಸಮಸ್ಯೆಗಳು ಸೇರಿಕೊಂಡು ಬಾಂಧವ್ಯ ಕೆಟ್ಟಿತ್ತು. ಇದೀಗ ಒಂದು ವರ್ಷದ ನಂತರ ಎರಡೂ ದೇಶಗಳ ನಾಯಕರು ಮುಖಕ್ಕೆ ಮುಖ ಕೊಟ್ಟು ಮಾತನಾಡಿದ್ದರಿಂದ ಉದ್ವಿಗ್ನ ವಾತಾವರಣ ತಿಳಿಯಾದಂತಾಗಿದೆ.

ಎರಡೂ ದೇಶಗಳ ನಾಯಕರು ಯಾವಾಗ ಬೇಕಾದರೂ ಇನ್ನು ಮುಂದೆ ನೇರವಾಗಿ ಫೋನ್ ಮಾಡಿ ಮಾತನಾಡಬಹುದು. ಅದೇ ರೀತಿ ಎರಡೂ ದೇಶಗಳ ರಕ್ಷಣೆ ಮತ್ತು ಜಾಗತಿಕ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ರಹಸ್ಯ ಮಾಹಿತಿಯನ್ನು ಹಂಚಿಕೊಳ್ಳುವ ಮಿಲಿಟರಿ ಇಂಟಲಿಜನ್ಸ್ ಮತ್ತೆ ಸ್ಥಾಪಿತವಾಗಲಿದೆ. ಮಾದಕ ವಸ್ತು ಫೆಂಟಾನಿಲ್ ಅಧಿಕ ಪ್ರಮಾಣದಲ್ಲಿ ಚೀನಾದಲ್ಲಿ ಉತ್ಪಾದನೆಯಾಗಿ ಅಮೆರಿಕಕ್ಕೆ ಪೂರೈಕೆಯಾಗುತ್ತಿದ್ದು ಅದನ್ನು ತಡೆಯುವ ದಿಸೆಯಲ್ಲಿ ಎರಡೂ ದೇಶಗಳ ನಡುವೆ ಒಪ್ಪಂದವಾಗಿದೆ. ವಾತಾವರಣದಲ್ಲಿ ಆಗುತ್ತಿರುವ ನಕಾರಾತ್ಮಕ ಬೆಳವಣಿಗೆಯನ್ನು ತಡೆಯುವ ದಿಸೆಯಲ್ಲಿ ಪರಿಣಾಮಕಾರಿಕ್ರಮತೆಗೆದುಕೊಳ್ಳಲು ಒಪ್ಪಿವೆ. ಇವು ಮೇಲ್ನೋಟಕ್ಕೆ ಕಂಡು ಬಂದಿರುವ ಪ್ರಮುಖ ಬೆಳವಣಿಗೆಗಳು.

ಆದರೆ ಎರಡೂ ದೇಶಗಳ ನಡುವೆ ಇರುವ ದೊಡ್ಡ ಸಮಸ್ಯೆಗಳು ಹಾಗೆಯೇ ಉಳಿದಂತೆ ಕಾಣುತ್ತಿವೆ. ತೈವಾನ್ ಸಮಸ್ಯೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿನ ಸಂಘರ್ಷ ಅವುಗಳಲ್ಲಿ ಮುಖ್ಯವಾದುವು. ತೈವಾನ್ ಸಮಸ್ಯೆ ಮಾತುಕತೆಯಲ್ಲಿ ಚರ್ಚಿತವಾದರೂ ಎರಡೂ ದೇಶಗಳು ತಮ್ಮ ನಿಲುವನ್ನು ಬಿಟ್ಟುಕೊಟ್ಟಿಲ್ಲ. ತೈವಾನ್ ಚುನಾವಣೆಗಳಲ್ಲಿ ಮತ್ತು ಆರ್ಥಿಕ ಸ್ವಾಯತ್ತತೆ ವಿಚಾರದಲ್ಲಿ ಚೀನಾ ತಲೆಹಾಕಬಾರದೆಂಬುದು ಅಮೆರಿಕದ ನಿಲುವು. ತೈವಾನ್ ತನ್ನ ಪ್ರದೇಶವಾಗಿರುವುದರಿಂದ ಏನೇ ಕ್ರಮ ತೆಗೆದುಕೊಂಡರೂ ಅದು ಸರಿ ಎಂಬುದು ಚೀನಾ ನಿಲುವು. ತೈವಾನ್ ಪ್ರದೇಶ ಚೀನಾ ವ್ಯಾಪ್ತಿಯದ್ದು ಎಂಬುದನ್ನು ಅಮೆರಿಕ ಒಪ್ಪುತ್ತದೆ. ಆದರೆ ಬಲವಂತವಾಗಿ ಅದನ್ನು ದೇಶದಲ್ಲಿ ವಿಲೀನ ಮಾಡಿಕೊಳ್ಳಬಾರದು ಎಂಬುದು ಅಮೆರಿಕದ ವಾದ. ತೈವಾನ್‌ಗೆ ನೀಡುತ್ತಿರುವ ಮಿಲಿಟರಿ ನೆರವನ್ನು ನಿಲ್ಲಿಸಬೇಕೆಂಬುದು ಚೀನಾದ ಒತ್ತಾಯ. ಆದರೆ ತೈವಾನ್‌ನಲ್ಲಿ ಪ್ರಜಾತಂತ್ರ ವ್ಯವಸ್ಥೆಯಿದ್ದು ಅದನ್ನು ರಕ್ಷಿಸುವುದು ತನ್ನ ಕರ್ತವ್ಯ ಎಂದು ಅಮೆರಿಕ ವಾದ ಮಾಡುತ್ತಿದೆ. ಉಭಯ ನಾಯಕರೂ ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡದ್ದರಿಂದ ಸಮಸ್ಯೆ ಹಾಗೆಯೇ ಉಳಿದಿದೆ. ಚೀನಾ ಕಳೆದ ಒಂದು ವರ್ಷದಿಂದ ಆರ್ಥಿಕ ಹಿಂಜರಿತಕ್ಕೆ ಸಿಕ್ಕಿದೆ. ಇಂಥ ಸಂದರ್ಭದಲ್ಲಿ ಅಮೆರಿಕವು ಚೀನಾದ ವಾಣಿಜ್ಯ ವಹಿವಾಟು ಕ್ಷೇತ್ರದಲ್ಲಿ ಸಂಘರ್ಷಕ್ಕೆ ಇಳಿದಿದೆ. ಅಮೆರಿಕವು ರಫ್ತು ಮಾಡುತ್ತಿದ್ದ ಸೆಮಿಕಂಡಕ್ಟರ್‌ಗಳು ಮತ್ತು ಎಲೆಕ್ಟ್ರಾನಿಕ್ ಚಿಪ್ಸ್ ಮತ್ತು ಅದಕ್ಕೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೇಲೆ ನಿರ್ಬಂಧ ಹೇರಿದ್ದು ಚೀನಾಕ್ಕೆ ಆಘಾತ ಉಂಟುಮಾಡಿದೆ. ಇದು ನಿಲ್ಲಬೇಕು ಎನ್ನುವುದು ಚೀನಾ ಆಗ್ರಹ. ಆದರೆ ಇದು ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರವಾದ್ದರಿಂದ ನಿರ್ಬಂಧ ತೆಗೆಯಲಾಗದು ಎನ್ನುವುದು ಅಮೆರಿಕದ ಉತ್ತರ. ಇದಲ್ಲದೆ ಬಹುಪಾಲು ಬಳಕೆದಾರರ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆ ವಿಚಾರದಲ್ಲಿ ಚೀನಾ ಏಕಸ್ವಾಮ್ಯ ಸಾಧಿಸಿದೆ. ಈ ಏಕಸ್ವಾಮ್ಯವನ್ನು ಮುರಿದು ಉತ್ಪಾದನೆಯನ್ನು ಬೇರೆ ಬೇರೆ ದೇಶಗಳಿಗೆ ವರ್ಗಾಯಿಸುವುದು ಅಮರಿಕದ ಲೆಕ್ಕಾಚಾರ. ಇದನ್ನು ಚೀನಾ ವಿರೋಧಿಸುತ್ತದೆ. ಈ ವಿಷಯದಲ್ಲಿ ಚೀನಾ ಹೇಳಬೇಕಾಗಿರುವುದನ್ನೆಲ್ಲಾ ಅಮೆರಿಕಕ್ಕೆ ತಿಳಿಸಿದೆ. ವಾಣಿಜ್ಯ ವಿಚಾರಗಳಲ್ಲಿ ಪೈಪೋಟಿ ಇರಲಿ ಆದರೆ ಸ್ಪರ್ಧೆ ದುರುದ್ದೇಶಪೂರಿತವಾಗಿರಬಾರದು ಎನ್ನುವುದು ಚೀನಾದ ವಾದ. ಸೌತ್ ಚೀನಾ ಸಮುದ್ರದ ಮೇಲೆ ಚೀನಾ ಹಿಡಿತ ಸಾಧಿಸಲು ಹೊರಟಿರುವುದನ್ನು ಅಮೆರಿಕ ವಿರೋಧಿಸುತ್ತದೆ. ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಚೀನಾ ಮಿಲಿಟರಿ ನೆಲೆ ಸ್ಥಾಪಿಸಿರುವುದು ಅಮೆರಿಕ ಸೇರಿದಂತೆ ನೆರೆಯ ದೇಶಗಳ ಕಣ್ಣು ಕೆಂಪಗಾಗುವಂತೆ ಮಾಡಿದೆ. ಈ ಪ್ರದೇಶದಲ್ಲಿನ ದೇಶಗಳ ಹಕ್ಕನ್ನು ನಿರಾಕರಿಸುವಂತಿಲ್ಲ ಎನ್ನುವುದು ಅಮೆರಿಕದ ವಾದ. ಇದನ್ನು ಚೀನಾ ಒಪ್ಪುವುದಿಲ್ಲ. ಈ ಎಲ್ಲ ವಿಚಾರಗಳು ಉಭಯ ನಾಯಕರ ನಡುವೆ ಚರ್ಚೆಗೆ ಬಂದಿವೆಯಾದರೂ ನಿಲುವುಗಳಲ್ಲಿ ಬದಲಾವಣೆ ಆಗಿಲ್ಲ. ಮಾತುಕತೆಗಳ ನಂತರ ಜಿನ್‌ಪಿಂಗ್ ಅವರನ್ನು ಬೈಡನ್ ಅವರು ಸರ್ವಾಧಿಕಾರಿ ಎಂದು ವರ್ಣಿಸಿರುವುದು ಚೀನಾದ ಆಕ್ಷೇಪಕ್ಕೆ ಗುರಿಯಾಗಿದೆ. ಮುಸುಕಿನ ಯುದ್ಧ ಮುಗಿಯಿತು ಎನ್ನುವಾಗ ಈ ವಿವಾದ ಎದ್ದಿರುವುದು ಒಂದು ನಕಾರಾತ್ಮಕ ಬೆಳವಣಿಗೆ.

ಈ ಮಾತುಕತೆಗಳು ಮೇಲ್ನೋಟಕ್ಕೆ ಅಮೆರಿಕ ಮತ್ತು ಚೀನಾಕ್ಕೆ ಸಂಬಂಧಿಸಿದವು ಎಂದು ಕಂಡರೂ ವಾಸ್ತವವಾಗಿ ಪರಿಣಾಮ ಜಾಗತಿಕವಾದುವು. ಈ ಮಾತುಕತೆಗಳು ಮುಖ್ಯವಾಗಿ ಭಾರತದ ಮೇಲೆ ಪರಿಣಾಮ ಬೀರುವಂಥವು. ಚೀನಾದ ಸಾಮ್ರಾಜ್ಯ ವಿಸ್ತರಣಾ ನೀತಿಯಿಂದ ಭಾರತ ತೊಂದರೆಗೆ ಒಳಗಾಗುತ್ತ ಬಂದಿದೆ. ಲಡಾಕ್‌ ಅಕ್ಷಾಯಿ ಚಿನ್ ಮತ್ತಿತರ ಕೆಲವು ಪ್ರದೇಶಗಳನ್ನು ಈಗಾಗಲೇ ಚೀನಾ ಆಕ್ರಮಿಸಿಕೊಂಡಿದೆ. ಈಗ ಅರುಣಾಚಲ ಪ್ರದೇಶ ತನ್ನದು ಎಂದು ಹೇಳುತ್ತ ಬಂದಿದೆ. ಚೀನಾದ ಈ ವಿಸ್ತರಣಾ ಪ್ರಯತ್ನಗಳಿಗೆ ತಡೆ ಹಾಕುವಲ್ಲಿ ಭಾರತಕ್ಕೆ ಅಮೆರಿಕದ ಒತ್ತಾಸೆ ಬೇಕಿದೆ. ರಷ್ಯಾ ಸದಾ ಭಾರತದ ಪರವಾಗಿ ನಿಂತಿದೆ. ಆದರೆ ಈಗ ರಷ್ಯಾ ದುರ್ಬಲವಾಗಿದೆ. ವಿಚಿತ್ರ ಎಂದರೆ ಈಗ ರಷ್ಯಾ ದೇಶ ಚೀನಾದ ಮೈತ್ರಿ ದೇಶವಾಗಿದೆ. ಹೀಗಾಗಿ ಭಾರತದ ನೆರವಿಗೆ ರಷ್ಯಾ ನಿಲ್ಲುವ ಸಾಧ್ಯತೆ ಇಲ್ಲ. ಈಗ ಚೀನಾವೂ ಅಮೆರಿಕದ ಜೊತೆ ಮೈತ್ರಿ ಬೆಳೆಸಿದರೆ ಭಾರತ ಏಕಾಂಗಿಯಾಗುತ್ತದೆ. ಶಕ್ತಿ ದೇಶಗಳಾವುವೂ ಭಾರತದ ಪರ ಇಲ್ಲ ಎಂದರೆ ಚೀನಾ ಅನಿಯಂತ್ರಿತವಾಗಲಿದೆ. ವಾಣಿಜ್ಯ ಕ್ಷೇತ್ರದಲ್ಲಿಯೂ ಇಂಥದ್ದೇ ಪರಿಸ್ಥಿತಿ ಇದೆ. ಭಾರತ ಇದೀಗ ತಾನೇ ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ್ದು ವಿಶ್ವ ವಾಣಿಜ್ಯ ಕ್ಷೇತ್ರದಲ್ಲಿ ಚೀನಾದ ಜೊತೆ ಪೈಪೋಟಿ ನಡೆಸುವುದು ಸಾಹಸದ ಕೆಲಸವೇ ಆಗಿದೆ. ಮಾರುಕಟ್ಟೆಯಲ್ಲಿ ತನಗೂ ಜಾಗ ಸಿಗಬೇಕಾದರೆ ಅದಕ್ಕೆ ಅವಕಾಶಗಳು ಸೃಷ್ಟಿಯಾಗಬೇಕು. ಅಂಥ ಅವಕಾಶಗಳನ್ನು ಚೀನಾ ನಾಶಮಾಡುತ್ತಿದೆ. ಈ ವಿಚಾರದಲ್ಲಿ ಅಮೆರಿಕವು ಚೀನಾದ ಸ್ನೇಹಕ್ಕೆ ಕಟ್ಟುಬಿದ್ದರೆ ಭಾರತದ ಏಳಿಗೆ ಕಷ್ಟವಾಗುತ್ತದೆ. ಚೀನಾ ತನ್ನಲ್ಲಿರುವ ಅಪಾರ ಆರ್ಥಿಕ ಬಂಡವಾಳವನ್ನು ಬಳಸಿಕೊಂಡು ಭಾರತದ ನೆರೆಯ ದೇಶಗಳನ್ನು ಸಾಲದ ಕೂಪದಲ್ಲಿ ಬೀಳಿಸಿದೆ.

ಇದೊಂದು ರೀತಿಯಲ್ಲಿ ಭಾರತವನ್ನು ಕಟ್ಟಿಹಾಕುವ ಪ್ರಯತ್ನ. ಈ ವಿಚಾರದಲ್ಲಿ ಅಮೆರಿಕ ಇದುವರೆಗೆ ತಲೆಹಾಕಿಲ್ಲ. ಆದರೆ ವಿಶ್ವ ಹಣಕಾಸು ನೆರವು ಸಂಸ್ಥೆಗಳನ್ನು ಈ ಬೆಳವಣಿಗೆ ಒತ್ತಡಕ್ಕೆ ಸಿಲುಕಿಸಿರುವುದಂತೂ ನಿಜ. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಭಾರತಕ್ಕೆ ಚೀನಾ ತಂದೊಡ್ಡಿದೆ. ಅಮೆರಿಕ ಮತ್ತು ಚೀನಾದ ನಡುವಣ ಬಾಂಧವ್ಯ ಏಷ್ಯಾ ವಲಯದಲ್ಲಿ ಶಕ್ತಿ ಸಮತೋಲನವನ್ನು ಸಾಧಿಸಬಲ್ಲದು. ಆದರೆ ಅಮೆರಿಕ ಸ್ವಹಿತಾಸಕ್ತಿಗೆ ಅಂಟಿಕೊಂಡರೆ ಸಮಸ್ಯೆ ದೊಡ್ಡದಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಭಾರತ ಮೊದಲಿನಿಂದಲೂ ರಷ್ಯಾದ ಮೈತ್ರಿ ದೇಶ. ಹೀಗಾಗಿ ಅಮೆರಿಕದ ಆಡಳಿತಗಾರರು ಭಾರತವನ್ನು ಮೈತ್ರಿ ದೇಶವೆಂದು ಪರಿಗಣಿಸಿರಲಿಲ್ಲ. ಸೋವಿಯತ್ ಒಕ್ಕೂಟ ಒಡೆದುಹೋದ ನಂತರವಷ್ಟೆ ಭಾರತ ಮತ್ತು ಅಮೆರಿಕದ ನಡುವೆ ಬಾಂಧವ್ಯ ಹೆಚ್ಚುತ್ತಿದೆ. ಆದರೆ ಅದು ಇನ್ನೂ ನೆಲೆಯೂರಿಲ್ಲ. ಸೋವಿಯತ್ ಒಕ್ಕೂಟದ ಕುಸಿತದ ಬೆನ್ನಲ್ಲಿಯೇ ಚೀನಾ ಬಲಿಷ್ಠ ದೇಶವಾಗಿ ಬೆಳೆದಿದೆ. ಹೀಗಾಗಿ ಅಮೆರಿಕದ ಕಣ್ಣೆಲ್ಲವೂ ಚೀನಾದ ಕಡೆಗೇ ಇದೆ. ಅಮೆರಿಕ ತನ್ನ ಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಳ್ಳುತ್ತ ಬಂದರೆ ಭಾರತ ಎಲ್ಲ ಕ್ಷೇತ್ರಗಳಲ್ಲಿಯೂ ಸಮಸ್ಯೆಗಳನ್ನು ಎದುರಿಸಬೇಕಾದುದು ಅನಿವಾರ್ಯ ವಾಗುತ್ತದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ