ಇತ್ತೀಚಿನ ವಾರಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರುತಮ್ಮ ದೇಶದೊಡನೆ ವ್ಯಾಪಾರ ಮಾಡುತ್ತಿರುವ ದೇಶಗಳ ಆಯಾತಗಳ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸುತ್ತಿದ್ದಾರೆ. ಇದಕ್ಕೆ ಬ್ರೆಜಿಲ್ ಒಂದು ಹೊರತಾಗಿದೆ ಎಂದು ಅವರೇ ಹೇಳಿದ್ದಾರೆ. ಈ ತೆರಿಗೆ ದರಗಳು ಶೇ.೧೦ರ ಮೂಲ ದರದೊಂದಿಗೆ ಹೆಚ್ಚುವರಿಯಾಗಿ ಶೇ.೨೫ರಿಂದ ಶೇ.೫೦ರ ವರೆಗೆ ಇರುತ್ತವೆ. ಟ್ರಂಪ್ ಅವರ ದೃಷ್ಟಿಯಿಂದ ಇದು ಸರಿಯಾಗಿಯೇ ಇದೆ. ಏಕೆಂದರೆ ಅವರು ತಮ್ಮ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕ ಮೊದಲು’ ಘೋಷವಾಕ್ಯದೊಂದಿಗೆ ಪ್ರಚಾರ ಮಾಡಿ ಗೆದ್ದಿದ್ದಾರೆ.
ಆದರೆ ಮೂರೂವರೆ ದಶಕಗಳಿಗೂ ಹೆಚ್ಚು ಸಮಯದಿಂದ ಪೋಷಿಸಿಕೊಂಡು ಬಂದಿದ್ದ ಜಾಗತಿಕ ಮುಕ್ತ ವ್ಯಾಪಾರ (ಕನಿಷ್ಠ ತೆರಿಗೆಗಳೊಂದಿಗೆ ಮತ್ತು ತೆರಿಗೆಯೇತರ ವ್ಯಾಪಾರ ಗೋಡೆಗಳಿಲ್ಲದೆ) ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಸ್ಪರ್ಧೆಗಿಳಿದಂತೆ ಇತರೆ ದೇಶಗಳು ಅಮೆರಿಕದಿಂದ ಬರುವ ಆಯಾತಗಳ ಮೇಲೆ ತೆರಿಗೆ ವಿಧಿಸಲಾರಂಭಿಸಿದರೆ ಪರಿಣಾಮ ಊಹಿಸುವುದೂ ಕಷ್ಟ. ಈ ರೋಗ ಇತರ ದೇಶಗಳಿಂದ ಬರುವ ಆಮದುಗಳ ಮೇಲೆಯೂ ಹರಡಿದರೆ ಜಾಗತಿಕ ಅರ್ಥ ವ್ಯವಸ್ಥೆಯ ಮೇಲೆ ಅದರ ಪರಿಣಾಮ ಇನ್ನೂ ಕೆಟ್ಟದಾಗಬಹುದು.
ಭಾರತದೊಂದಿಗೆ ನಡೆಯುತ್ತಿದ್ದ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದದ ಚರ್ಚೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಮೆರಿಕ ಪ್ರಕಟಿಸಿದೆ. ಅಲ್ಲದೆ ಭಾರತದ ಮೇಲೂ ಶೇ. ೫೦ರ ತೆರಿಗೆ ವಿಧಿಸಲಾಗಿದೆ ಎಂದೂ ಹೇಳಲಾಗಿದೆ. (ಮೊದಲೇ ಹೆಚ್ಚಿಸಿದ ಶೇ.೨೫ನ್ನೂ ಸೇರಿಸಿಕೊಂಡಂತೆ ) ಇದಕ್ಕೆ ಕೊಟ್ಟಿರುವ ಕಾರಣ ಭಾರತ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ ಎಂಬುದು. ಮುಂದುವರಿಯುತ್ತಿದ್ದ ವ್ಯಾಪಾರ ಚರ್ಚೆಗಳ ಭಾಗವಾಗಿ ಅಮೆರಿಕದ ವ್ಯಾಪಾರ ನಿಯೋಗವೊಂದು ಮುಂದಿನ ವಾರ ಭಾರತಕ್ಕೆ ಬರಬೇಕಾಗಿತ್ತು. ಈಗ ಅದು ಬರುವ ಸಾಧ್ಯತೆ ಇಲ್ಲ. ಆದರೂ ನಮ್ಮ ವಾಣಿಜ್ಯ ಮತ್ತು ಉದ್ದಿಮೆಗಳ ಕೇಂದ್ರ ಸಚಿವರಾದ ಪಿಯೂಷ್ ಗೋಯೆಲ್ರವರು ಅಮೆರಿಕವೂ ಸೇರಿದಂತೆ ಹಲವು ದೇಶಗಳೊಡನೆ ದ್ವಿಪಕ್ಷೀಯ ವ್ಯಾಪಾರ ಚರ್ಚೆಗಳು ಮುಂದುವರಿಯುತ್ತಿವೆ ಎಂದು ಹೇಳಿದ್ದಾರೆ. ಅದು ಹೇಗೋ ಅವರಿಗೇ ಗೊತ್ತು.
ಅರ್ಥಶಾಸ್ತ್ರಜ್ಞರ ಅಸಮಾಧಾನ: ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಮತ್ತು ಆರ್ಥಿಕ ನೀತಿ ಪ್ರಾಧ್ಯಾಪಕರಾಗಿರುವ ಕೆನೆಥ್ ರಗಾಫ್ ಅವರು ಅಮೆರಿಕ ಅಧ್ಯಕ್ಷ ಟ್ರಂಪ್‌ರವರ ಇತ್ತೀಚಿನ ಆಯಾತ ತೆರಿಗೆ ದರಗಳ ಪ್ರಕಟಣೆಯ ಬಗ್ಗೆ ಪ್ರತಿಕ್ರಿಯಿಸುತ್ತ ಸದ್ಯದಲ್ಲೇನೋ ಅಮೆರಿಕಕ್ಕೆ ಆಪ್ಯಾಯಮಾನವಾಗಿ ಕಾಣಬಹುದು. ಆದರೆ ದೀರ್ಘಾವಧಿಯಲ್ಲಿ ಅವರ ಆರ್ಥಿಕ ನೀತಿ ಗೆಲ್ಲುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಹಲವು ಅರ್ಥ ಶಾಸಜ್ಞರ ಅಭಿಪ್ರಾಯದಂತೆ ದೀರ್ಘಾವಧಿಯಲ್ಲಿ ಟ್ರಂಪ್ ತೆರಿಗೆ ನೀತಿಗಳು ಅಮೆರಿಕದ ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಮತ್ತು ಜಾಗತಿಕ ಆರ್ಥಿಕ ವ್ಯವಸ್ಥೆಗೆ ಧಕ್ಕೆಯಾಗುವ ಅಪಾಯವಿದೆ ಎಂದೂ ಎಚ್ಚರಿಸಿದ್ದಾರೆ.
ಟ್ರಂಪ್ ಆಯಾತ ತೆರಿಗೆ ಹೆಚ್ಚಳ ನಿರ್ಧಾರದ ಪರಿಣಾಮ ಎದುರಿಸುವ ದೇಶಗಳೂ ತಮ್ಮ ಅಮೆರಿಕದಿಂದ ಬರುವ ಆಯಾತಗಳ ಮೇಲೆ ತೆರಿಗೆ ಹಾಕುವುದಾದರೆ ಅದರಿಂದ ಅಮೆರಿಕದಲ್ಲಿ ಸ್ಥಳೀಯವಾಗಿ ಉದ್ಯೋಗಾವ ಕಾಶಗಳು ಕುಸಿದು ಬೆಲೆಯೇರಿಕೆಗಳ ಪರಿಣಾಮ ಹಣ ದುಬ್ಬರ ವಿಪರೀತ ಹೆಚ್ಚಾಗುವ ಆತಂಕವಿದೆ. ಅಮೆರಿಕದ ಆರ್ಥಿಕ ಬೆಳವಣಿಗೆ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುವ ಭಯ ಹೆಚ್ಚಾಗಿದೆ ಎಂದು ಹಲವು ಅರ್ಥ ಶಾಸಜ್ಞರು ಅಪಾಯದ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಲ್ಲದೆ ಈ ವರೆಗೆ ತೆರೆಯ ಮರೆಯಲ್ಲಿ ಮುಕ್ತ ಮಾರುಕಟ್ಟೆ ಭಾಗವಾಗಿ ನಡೆಯುತ್ತಿದ್ದ ಕ್ರಿಪ್ಟೋ ಕರೆನ್ಸಿ ವ್ಯವಹಾರಕ್ಕೆ ಕಾಯ್ದೆ ಬದ್ಧ ರೂಪ ಕೊಟ್ಟು ಅರ್ಥ ವ್ಯವಸ್ಥೆಯ ಮುಖ್ಯ ವಾಹಿನಿಗೆ ತರುವ ಹೊಸ ಕಾಯ್ದೆಯನ್ನು ಕಾಂಗ್ರೆಸ್ಸಿನಲ್ಲಿ (ಸೆನೆಟ್ ಮತ್ತು ಪ್ರಜಾ ಪ್ರತಿನಿಧಿ ಸಭೆ ) ಅಂಗೀಕಾರವಾಗುವಂತೆ ಟ್ರಂಪ್ ನೋಡಿಕೊಂಡಿದ್ದಾರೆ. ಈ ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಟ್ರಂಪ್ ಕುಟುಂಬದ ಬಿಲಿಯನ್ ಗಟ್ಟಲೆ ಡಾಲರ್‌ಗಳ ಆಸಕ್ತಿಯನ್ನು ಬಲ್ಲ ರಗಾಫ್ ರವರಂತಹ ಅನೇಕ ಅರ್ಥ ಶಾಸಜ್ಞರು ಇದರಲ್ಲಿ ಒಂದಕ್ಕೊಂದು ವಿರುದ್ಧ ಆಸಕ್ತಿಗಳ ತಾಕಲಾಟದ ಗೊಂದಲವು ಉಂಟಾಗುವುದಿಲ್ಲವೇ ಎಂದು ಗಂಭೀರವಾದ ಪ್ರಶ್ನೆಗಳನ್ನು ಕೇಳಿದ್ದಾರೆ.
ಟ್ರಂಪ್ ತೆರಿಗೆ ಮತ್ತು ಭಾರತ: ಮೊದಲೆ ಹೇಳಿದಂತೆ ಟ್ರಂಪ್‌ರವರು ಆಗಸ್ಟ್ ೭ರಂದು ಜಾರಿಗೆ ಬರುವಂತೆ ಭಾರತದಿಂದ ಆಯಾತವಾಗುವ ಉತ್ಪನ್ನಗಳ ಮೇಲೆ ಶೇ.೨೫ಹೆಚ್ಚುವರಿ ತೆರಿಗೆ ಹಾಕಿದರು. ನಂತರ ಆಗಸ್ಟ್ ೨೧ರಂದು ಜಾರಿಗೆ ಬರುವಂತೆ ಮತ್ತೊಮ್ಮೆ ಶೇ.೨೫ ತೆರಿಗೆ ಹೆಚ್ಚಿಸಿದರು. ಅಮೆರಿಕ ನಮ್ಮ ದೊಡ್ಡ ವಿದೇಶಿ ವ್ಯಾಪಾರ ಪಾಲುದಾರರಲ್ಲಿ ಒಂದು. ಇದರಿಂದ ಎರಡೂ ದೇಶಗಳಿಗೆ ಅನುಕೂಲಗಳಾಗಿವೆ.
ಅಮೆರಿಕಕ್ಕೆ ನಾವು ಕಳುಹಿಸುವ ಉತ್ಪನ್ನಗಳಲ್ಲಿ ಮೊದಲ ಗುಂಪಿನಲ್ಲಿ ಔಷಧಿಗಳು, ಸ್ಮಾರ್ಟ್ ಫೋನ್‌ಗಳು ಮತ್ತು ಶುದ್ಧೀಕರಿಸಿದ ಪೆಟ್ರೋಲಿಯಂ ಉತ್ಪನ್ನಗಳಿವೆ. ಇವೆಲ್ಲ ಶೇ. ೫೦ ತೆರಿಗೆ ಹಾಕಿದ ನಂತರವೂ ತೆರಿಗೆ ಮುಕ್ತವಾಗಿವೆ. ಇದಕ್ಕೆ ಅಮೆರಿಕದ ಸ್ವಂತದ ಸ್ಥಳೀಯ ಕಾರಣಗಳಿವೆ. ಅಲ್ಲಿಯ ಸಾಮಾನ್ಯ ಔಷಧೀಗಳ ಅವಶ್ಯಕತೆ ಒಂದು ಕಾರಣವಾದರೆ ಆ ದೇಶದ ಆಪಲ್ ಕಂಪೆನಿ ನಮ್ಮಲ್ಲಿಯೂ ಐಫೋನ್ ಉತ್ಪಾದಿಸುವುದರಿಂದ ಟ್ರಂಪ್ ನಮ್ಮ ದೇಶವನ್ನು ಬೇರೆಯಾಗಿ ಪರಿಗಣಿಸಲು ಸಾಧ್ಯವಿಲ್ಲ. ಟ್ರಂಪ್ ಗೆ ಇದು ಅನಿವಾರ್ಯ. ಎರಡನೇ ಗುಂಪಿನಲ್ಲಿರುವ ಸೋಲಾರ್ ಮಾಡ್ಯೂಲ್ಸ್, ಲಿನನ್ ಮತ್ತು ಶ್ರಿಂಪ್ಸ್ ಮುಂತಾದವುಗಳಿದ್ದು, ಇವುಗಳನ್ನು ನಾವು ಅಮೆರಿಕಕ್ಕೆ ಮಾತ್ರ ಕಳುಹಿಸುತ್ತೇವೆ. ಬೇರೆಲ್ಲೂ ಕಳುಹಿಸುವ ಅವಕಾಶವಿಲ್ಲ, ಆದ್ದರಿಂದ ತೆರಿಗೆ ಕೊಡುವುದು ಅನಿವಾರ್ಯ.
ಮೂರನೇ ದೊಡ್ಡ ಪಟ್ಟಿಯಲ್ಲಿ ವಿವಿಧ ಬಟ್ಟೆಗಳು, ರೆಡಿಮೇಡ್ ಉಡುಪುಗಳು ಸೇರಿದಂತೆ ಇತರ ಎಲ್ಲ ನಮ್ಮ ರಫ್ತುಗಳು ಸೇರಿದ್ದು, ಅಮೆರಿಕವೂ ಸೇರಿದಂತೆ ಎಲ್ಲ ದೇಶಗಳ ಪೇಟೆಗಳಿಗೂ ಕಳುಹಿಸುತ್ತೇವೆ. ಅಮೆರಿಕದಲ್ಲಿ ತೆರಿಗೆ ಗಳಿಂದ ನಮ್ಮ ದೇಶದ ವಸ್ತುಗಳು ತುಟ್ಟಿಯಾಗುವುದಾದರೆ ಬೇರೆ ತೆರಿಗೆ ಕಡಿಮೆ ಇರುವ ದೇಶಗಳ ಮತ್ತು ಹೆಚ್ಚು ಬೇಡಿಕೆಯುಳ್ಳ ಪೇಟೆಗಳಿಗೆ ಬದಲಿಸಬಹುದು.
ನಮ್ಮ ಎರಡನೇ ಮತ್ತು ಮೂರನೇ ಅತಿ ಹೆಚ್ಚು ರಫ್ತು ದೇಶಗಳಾದ ಯು.ಎ.ಇ. ಮತ್ತು ನೆದರ್‌ಲ್ಯಾಂಡ್‌ಗಳ ಕಡೆಗೆ ಹೆಚ್ಚು ಗಮನ ಕೊಡಬೇಕಾಗಬಹುದು. ಮೇಲಿನ ಎರಡನೇ ಗುಂಪಿನ (ಅಮೆರಿಕ ಮಾತ್ರ ಗ್ರಾಹಕ ದೇಶವಾಗಿರುವ ) ಉತ್ಪನ್ನಗಳ ಉತ್ಪಾದಕರು ಮತ್ತು ರಫ್ತುದಾರರಿಗೆ ಹೆಚ್ಚಿನ ಉತ್ತೇಜನಗಳನ್ನು ಕೊಡಬೇಕಾಗಬಹುದು. ಉಳಿದಂತೆ ಇತರ ದೇಶಗಳಲ್ಲಿ ವಿಸ್ತರಣೆ ಮಾಡಬೇಕಾಗುತ್ತದೆ.
” ಟ್ರಂಪ್ ಆಯಾತ ತೆರಿಗೆ ಹೆಚ್ಚಳ ನಿರ್ಧಾರದ ಪರಿಣಾಮ ಎದುರಿಸುವ ದೇಶಗಳೂ ತಮ್ಮಅಮೆರಿಕದಿಂದ ಬರುವ ಆಯಾತಗಳ ಮೇಲೆ ತೆರಿಗೆ ಹಾಕುವುದಾದರೆಅದರಿಂದ ಅಮೆರಿಕದಲ್ಲಿ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಕುಸಿದು ಬೆಲೆಯೇರಿಕೆಗಳ ಪರಿಣಾಮ ಹಣದುಬ್ಬರ ವಿಪರೀತ ಹೆಚ್ಚಾಗುವ ಆತಂಕವಿದೆ.”
-ಪ್ರೊ.ಆರ್.ಎಂ. ಚಿಂತಾಮಣಿ





