ರಾಜಸ್ತಾನ ಎಂದ ಕೂಡಲೇ ನಮ್ಮ ಕಣ್ಮುಂದೆ ಬರುವುದು ಮರಳುಗಾಡು ಪ್ರದೇಶ. ರಣ ಬಿಸಿಲು, ಮಳೆ ಕೊರತೆ, ಕುಡಿಯಲು ನೀರು ತರಲು ಹಳ್ಳಿಗಳ ಮಹಿಳೆಯರು ಮೈಲಿಗಟ್ಟಲೆ ತಲೆಮೇಲೆ ಎರಡು ಮೂರು ಕೊಡಗಳನ್ನು ಹೊತ್ತು ಕೆರೆ ಕಟ್ಟೆಗಳಿಂದ ನೀರು ತರುವ ಚಿತ್ರಣ. ದಿವಂಗತ ಖ್ಯಾತ ಅಭಿನೇತ್ರಿ ಸ್ಮಿತಾ ಪಾಟೀಲ್ ಅಭಿನಯಿಸಿರುವ ‘ಮಿರ್ಚ್ ಮಸಲಾ’ ಚಿತ್ರ ಮತ್ತು ಕೆಲವು ಸಾಕ್ಷ್ಯ ಚಿತ್ರಗಳನ್ನು ನೋಡಿದವರಿಗೆ ಹಾಗೂ ರಾಜಸ್ತಾನದಲ್ಲಿಯೇ ಹುಟ್ಟಿ ಬೆಳೆದವರಿಗೆ ನೀರಿಗಾಗಿ ನಿತ್ಯ ಅನುಭವಿಸುವ ನರಕಸದೃಶ್ಯದ ಸ್ಥಿತಿ ಅರಿವಾಗುತ್ತದೆ.
ಪಾಕಿಸ್ತಾನದ ಗಡಿಯಲ್ಲಿರುವ ಹಲವು ಹಳ್ಳಿಗಳಿಗೆ ಸರ್ದಾರ್ ಸರೋವರ ಜಲಾಶಯದಿಂದ ಇತ್ತೀಚಿನ ವರ್ಷಗಳಲ್ಲಿ ನೀರು ಹರಿಯುತ್ತಿದೆ. ಆದರೆ ಬಹುತೇಕ ಭಾಗ ಮಳೆಯ ಕೊರತೆಯಿಂದ ನೀರಿಗಾಗಿ ನಿತ್ಯವೂ ಪರದಾಡುವ ಸ್ಥಿತಿ ಮುಂದುವರಿದೇ ಇದೆ. ಇದು ಆ ರಾಜ್ಯದ ಪ್ರಾಕೃತಿಕ ಸ್ಥಿತಿಗತಿ. ರಾಜಸ್ತಾನ ಅರೆ ಒಣಬೇಸಾಯ ಮತ್ತು ಬೆಂಗಾಡು ಪ್ರದೇಶವನ್ನು ಹೊಂದಿದೆ. ವಾರ್ಷಿಕ ೧೨೦ ಮಿಲಿಮೀಟರ್ ಮಳೆ ಬೀಳುತ್ತದೆ. ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಬೋರ್‌ವೆಲ್ ಮತ್ತು ಕೆರೆ ಕಟ್ಟೆಗಳನ್ನೇ ಜನರು ಅವಲಂಬಿಸಿದ್ದಾರೆ. ಭೂಮಿಯ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಹಾಗಾಗಿ ಕೆರೆಕಟ್ಟೆಗಳ ನೀರು ಯೋಗ್ಯವಲ್ಲ.
ಆದರೂ ಹಲವು ಹಳ್ಳಿಗಳಲ್ಲಿ ಇದು ಅನಿವಾರ್ಯ. ಹೀಗಾಗಿಹಳ್ಳಿಗಳ ಜನರು ಕಲುಷಿತ ನೀರನ್ನೇ ಕುಡಿಯುವುದರಿಂದ ಅಂಗವೈಕಲ್ಯ ಮತ್ತು ಇತರೆ ಹಲವಾರು ರೋಗ ರುಜಿನಗಳಿಂದ ನರಳುತ್ತಾರೆ. ಇದು ರಾಜಸ್ತಾನದ ವಾಸ್ತವ ಸ್ಥಿತಿಗತಿ. ಈ ರಾಜ್ಯದ ಪಶ್ಚಿಮ ಭಾಗದಲ್ಲಿ ಮತ್ತು ಥಾರ್ ಮರುಭೂಮಿಯಲ್ಲಿರುವ ಬಡ್ಮೇರ್ (ಬರ್ಮಾರ್) ಜಿಲ್ಲೆಯು ಅನಾವೃಷ್ಟಿಯಿಂದ ತತ್ತರಿಸಿತ್ತು. ನಿತ್ಯವೂ ಕುಡಿಯುವ ನೀರಿಗಾಗಿ ಜನರು ವಿಶೇಷವಾಗಿ ಮಹಿಳೆಯರು ಪಡುತ್ತಿದ್ದ ಪಾಡು ಹೇಳತೀರದು. ನೀರು ಎನ್ನುವುದು ನರಕ ಸದೃಶ್ಯವನ್ನೇ ಸೃಷ್ಟಿಸಿ ಬಿಟ್ಟಿತ್ತು. ಇಂತಹ ಜಿಲ್ಲೆಯ ಅನೇಕ ಕಡೆಗಳಲ್ಲಿ ಜನರೀಗ ಕುಡಿಯುವ ನೀರಿಗಾಗಿ ಹಿಂದೆ ಅನುಭವಿಸುತ್ತಿದ್ದ ನರಕ ಸ್ಥಿತಿಯನ್ನು ಅನುಭವಿಸಬೇಕಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಕೇಂದ್ರ ಸರ್ಕಾರ ರೂಪಿಸಿದ ಪ್ರತಿಯೊಂದು ಮನೆಗೂ ಪೈಪಿನ ಮೂಲಕ ನೀರು ಪೂರೈಸುವ ‘ಜಲ ಜೀವನ ಮಿಷನ್’ ಯೋಜನೆ ಜೊತೆಗೆ ಮಳೆ ನೀರು ಸಂಗ್ರಹ, ಅಂತರ್ಜಲ ಮರುಪೂರಣಗೊಳಿಸುವ, ಇಂಗು ಗುಂಡಿಗಳ ನಿರ್ಮಾಣ, ಕೆರೆ ಕಟ್ಟೆಗಳ ಪುನಶ್ಚೇತನ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು.
ಇದನ್ನು ಓದಿ: ಶಿವನ ಸಸಿಗಳನ್ನು ನೋಡಿಕೊಳ್ಳಲು ತೆರಳಿದ ಸಾಲುಮರದ ತಿಮ್ಮಕ್ಕ
ಕೇಂದ್ರದಲ್ಲಿ ಈ ಹಿಂದೆ ಇದ್ದ ಸರ್ಕಾರ ಮತ್ತು ರಾಜ್ಯ ಸರ್ಕಾರವೂ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಆದರೆ ಅದನ್ನು ಜಾರಿಗೊಳಿಸುವಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕೆಲಸ ಮಾಡಿದ್ದು ಅಪರೂಪ. ಹಾಗಾಗಿ ಸಮಸ್ಯೆ ಮುಂದುವರಿದೇ ಇದೆ. ಆದರೆ ದಕ್ಷತೆಯಿಂದ ಹೊಸ ಹೊಸ ಆವಿಷ್ಕಾರದಿಂದ ಬದ್ಧತೆಯಿಂದ ಕೆಲಸ ಮಾಡುವ ಮತ್ತು ಮಾಡಿಸುವ ದಕ್ಷ ಅಽಕಾರಿಗಳಿದ್ದರೆ ಮಾತ್ರ ನಮ್ಮ ದೆಹಲಿಯ ನೀತಿ ಆಯೋಗದ ಕನಸುಗಳು ನನಸಾಗುವುದು. ಸಾಮಾನ್ಯವಾಗಿ ಅಧ್ಯಕ್ಷರು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಮೂಲಿ ಕೊಡದ ಹಾಗೂ ಯಾವ ರಾಜಕಾರಣಿಗಳಿಗೂ ತಲೆಬಾಗದ ಅಧಿಕಾರಿಗಳನ್ನು ಅನ್ನನೀರು ಸಿಗದ ಜಾಗಗಳಿಗೆ ವರ್ಗಾಯಿಸುವಂತಹ ಶಿಕ್ಷೆ ಅನೇಕ ರಾಜ್ಯಗಳಲ್ಲಿದೆ. ಅಽಕಾರಸ್ಥ ರಾಜಕಾರಣಿಗಳ ಇಂತಹ ತಂತ್ರಗಾರಿಕೆ ಕುತಂತ್ರ ವಿಶೇಷವಾಗಿ ನಮ್ಮ ಕರ್ನಾಟಕದ ಆಡಳಿತದಲ್ಲಿಯೂ ಜಾರಿಯಲ್ಲಿದೆ.
ಆದರೆ ರಾಜಸ್ತಾನದಲ್ಲೊಂದು ಅಪರೂಪದ ಬೆಳವಣಿಗೆ ಅಚ್ಚರಿ ಮೂಡಿಸುತ್ತದೆ. ಅತ್ಯುತ್ಸಾಹಿ ಯುವ ಮಹಿಳಾ ಜಿಲ್ಲಾಧಿಕಾರಿ ತನ್ನ ಯಶಸ್ವಿ ಕಾರ್ಯದತ್ತ ಇಡೀ ದೇಶವೇ ಕಣ್ಣುತೆರೆದು ನೋಡುವಂತೆ ಮಾಡಿರುವುದು ಕಳೆದ ಒಂದು ವಾರದಿಂದ ಸುದ್ದಿಯಾಗಿದೆ. ಆ ಉತ್ಸಾಹಿ ೨೦೧೫ರ ಐಎಎಸ್ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಗಳಿಸಿ ಐಎಎಸ್ ಅಧಿಕಾರಿಗಳಿಗೆ ರೋಲ್ ಮಾಡೆಲ್ ಆಗಿರುವ ಟೀನಾ ಡಾಬಿ ಎನ್ನುವ ‘ಭೀಮಪುತ್ರಿ’. ಟೀನಾ ಡಾಬಿ ಬಡ್ಮೇರ್ ಜಿಲ್ಲೆಗೆ ಡಿಸ್ಟ್ರಿಕ್ಟ್ ಕಲೆಕ್ಟರ್ ಆಗಿ ಬಂದಾಗ ನಿತ್ಯವೂ ಜನರು ಕುಡಿಯುವ ನೀರಿಗಾಗಿ ಅನುಭವಿಸುವ ನರಕ ಯಾತನೆ ಕಡೆ ಗಮನ ಹರಿಸಿದರು. ೨೦೨೨ರಲ್ಲಿ ನೀರಿನ ಹೊಂಡಗಳಿಗೆ ಇಳಿದು ನೀರು ಸೇದುವಾಗ ಆಯತಪ್ಪಿ ಬಿದ್ದು ೬೪ ಮಂದಿ ಮಹಿಳೆಯರು ಪ್ರಾಣ ಕಳೆದುಕೊಂಡ ಸಂಗತಿ ಈ ಯುವ ಉತ್ಸಾಹಿ ಅಧಿಕಾರಿಯ ನಿದ್ದೆಗೆಡಿಸಿತು. ಜಲಜೀವನ್ ಮಿಷನ್ ಯೋಜನೆಯಂತೆ ಪ್ರತಿ ಮನೆಗೂ ಪೈಪುಗಳ ಮೂಲಕ ನೀರು ಒದಗಿಸಬೇಕು. ಆದರೆ ನೀರಿದ್ದರೆ ತಾನೆ ಪೈಪಿನಲ್ಲಿ ನೀರು ಪೂರೈಸುವುದು.
ಇದಕ್ಕಾಗಿ ಕೇಂದ್ರ ಸರ್ಕಾರ ಹೊಸದಾಗಿ ಬರಪೀಡಿತ ಜಿಲ್ಲೆಗಳಿಗೆ ರೂಪಿಸಿದ ‘ಕ್ಯಾಚ್ ದ ರೈನ್’ ( ಮಳೆ ನೀರು ಸಂಗ್ರಹ) ಕಾರ್ಯಕ್ರಮವನ್ನು ಪೌರಾಣಿಕದ ಭಗೀರಥ ರಾಜನ ಪ್ರಯತ್ನದಂತೆ ಕೈಗೆತ್ತಿಕೊಂಡರು. ಎಲ್ಲಿ ಎಷ್ಟೇ ಮಳೆ ಬಿದ್ದರೂ ಹನಿ ನೀರು ಪೋಲಾಗದಂತೆ ಹಿಡಿದಿಡುವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಅದರಂತೆ ರಾಜಸ್ತಾನದಲ್ಲಿ ನೂರಾರು ವರ್ಷಗಳಿಂದ ಇದ್ದ ಹಳೆಯ ಪದ್ಧತಿಯಂತೆ ಇಟ್ಟಿಗೆಗಳಿಂದ ನಿರ್ಮಿಸಿದ ಗುಂಡಿಗಳು, ಕೆರೆ ಕಟ್ಟೆಗಳಿಗೆ ಮಳೆ ನೀರು ಸಲೀಸಾಗಿ ಹರಿದು ಬರುವಂತೆ ಮಾಡುವುದು, ಅಂತರ್ಜಲ ಮರುಪೂರಣ, ರೂಫ್ ಟಾಪ್ ಮಳೆ ನೀರು ಸಂಗ್ರಹಕ್ಕೆ ಒತ್ತು ನೀಡುವುದು. ಇಂತಹ ಕೆಲಸವನ್ನು ಕೇವಲ ಸರ್ಕಾರ ಮಾಡಿದರೆ ಯಶಸ್ಸು ಕಾಣುವುದು ಕಷ್ಟ. ಅದಕ್ಕಾಗಿ ಬರಪೀಡಿತ ಜಿಲ್ಲೆಗಳಿಗೆ ರೂಪಿಸಿರುವ ‘ಜಲಸಂಚಯ್ ಜನ ಭಾಗೀದಾರಿ’ ಕಾರ್ಯಕ್ರಮದಲ್ಲಿ ಸ್ಥಳೀಯ ಜನರು ಕೂಡ ಭಾಗಿ ಯಾಗುವಂತೆ ಪ್ರೇರೇಪಿಸಿ ಇಡೀ ಜಿಲ್ಲೆಯಲ್ಲಿ ೮೭ ಸಾವಿರಕ್ಕೂ ಹೆಚ್ಚು ಕೆರೆ ಕಟ್ಟೆಗಳ ನಿರ್ಮಾಣ, ನೀರು ಸಂಗ್ರಹದ ಗುಂಡಿಗಳು, ಅಂತರ್ ಜಲ ಮರುಪೂರಣ ಮತ್ತು ಟಾಪ್ ರೂಫ್ ನಂತಹ ಹತ್ತು ಹಲವು ಕಾರ್ಯಸಾಧು ಕೆಲಸಗಳನ್ನು ಯಶಸ್ವಿಯಾಗಿ ಮಾಡಿದರು.
ಹೀಗೆ ಮಾಡಿರುವ ನೀರು ಸಂಗ್ರಹ ಗುಂಡಿಗಳು ಕಡಿಮೆ ಎಂದರೂ ಮೂರ್ನಾಲ್ಕು ತಿಂಗಳು ಜನರಿಗೆ ಕುಡಿಯುವ ನೀರನ್ನು ಒದಗಿಸುತ್ತವೆ. ಇದರಿಂದ ಬಡ್ಮೇರ್ ಜಿಲ್ಲೆಯ ಹಳ್ಳಿಗಾಡಿನ ಮಹಿಳೆಯರು ಹತ್ತಾರು ಮೈಲಿ ತಲೆಮೇಲೆ ಕೊಡ ಹೊತ್ತು ಹೋಗುವ ಕಷ್ಟದ ದಿನಗಳು ಹಲವು ಕಡೆ ಮಾಯವಾಗಿದೆ. ಜಿಲ್ಲಾಧಿಕಾರಿ ಟೀನಾ ಡಾಬಿ ಅವರು ಈ ಹೊಸದಾದ ಕಲ್ಪನೆಯ ಯಶಸ್ವಿ ಕಾರ್ಯಕ್ಕಾಗಿ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ನೀಡುವ ಮೊದಲ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಡಾಬಿ ಅವರ ಈ ಸಾಧನೆ ಜಿಲ್ಲಾಡಳಿತಕ್ಕೆ ಎರಡು ಕೋಟಿ ರೂಪಾಯಿ ನಗದು ಪ್ರಶಸ್ತಿಯನ್ನೂ ತಂದುಕೊಟ್ಟಿರುವುದರಿಂದ ಆ ಜಿಲ್ಲೆಯ ವಿಶೇಷವಾಗಿ ರಾಜಸ್ತಾನದ ಜನರು ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಇದೇ ಯೋಜನೆಯನ್ವಯ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯದರ್ಶಿಯಾಗಿರುವ ತಿಪಟೂರಿನ ನಾಗಾರ್ಜುನಗೌಡ ಅವರು ಕೂಡ ತಮ್ಮ ಜಿಲ್ಲೆಯಲ್ಲಿನ ಸಾಧನೆಗಾಗಿ ರಾಷ್ಟ್ರಪತಿ ಅವರಿಂದ ಪ್ರಶಸ್ತಿ ಸ್ವೀಕರಿಸಿರುವುದು ಶ್ಲಾಘನೀಯ ಕಾರ್ಯ. ಟೀನಾ ಡಾಬಿಯ ತಂಗಿ ರಿಯಾ ಡಾಬಿ ಕೂಡ ಐಎಎಸ್ ಅಧಿಕಾರಿಯಾಗಿ ಉದಯ್‌ಪುರದ ಎಸ್‌ಡಿಎಂ ಆಗಿ ಮಾಡಿರುವ ಸಾಧನೆಗಾಗಿ ರಾಷ್ಟ್ರಪತಿ ಅವರಿಂದ ಜಲಸಂಪನ್ಮೂಲ ಸಚಿವಾಲಯದಿಂದ ಪ್ರಶಸ್ತಿ ಮತ್ತು ಒಂದು ಕೋಟಿ ರೂಪಾಯಿ ನಗದನ್ನು ಜಿಲ್ಲಾಡಳಿತಕ್ಕೆ ತಂದುಕೊಟ್ಟಿರುವುದು ಈ ಸಹೋದರಿಯರ ಸಾಧನೆಯ ವಿಶೇಷ. ಟೀನಾ ಡಾಬಿ ಮೂಲತಃ ಮಧ್ಯಪ್ರದೇಶದ ಭೋಪಾಲ್ ಮೂಲದವರು.
ಇದನ್ನು ಓದಿ: ನಾವೆಲ್ಲರೂ ಹೊರಗಿನಿಂದ ಬಂದ ಬಾಂಧವರೇ ಆಗಿದ್ದೇವೆ…..
ಆದರೆ ತಂದೆ ತಾಯಿ ಇಬ್ಬರು ದೆಹಲಿಯಲ್ಲಿ ಇಂಡಿಯನ್ ಎಂಜಿನಿಯರಿಂಗ್ ಸೇವೆಯಲ್ಲಿ ಅಧಿಕಾರಿಗಳು. ದೆಹಲಿಯ ಶ್ರೀರಾಂ ಮಹಿಳಾ ಕಾಲೇಜಿನಲ್ಲಿ ಅತ್ಯುತ್ತಮ ಅಂಕಗಳಿಸಿ ವರ್ಷದ ವಿದ್ಯಾರ್ಥಿಯಾಗಿ ಹೆಸರು ಗಳಿಸಿ ತಮ್ಮ ೨೨ನೇ ವಯಸ್ಸಿನಲ್ಲೇ ಮೊದಲ ಬಾರಿಗೆ ಐಎಎಸ್ ಪರೀಕ್ಷೆ ತೆಗೆದುಕೊಂಡು ಪ್ರಥಮ ರ‍್ಯಾಂಕ್ ಗಳಿಸಿದ ಹೆಗ್ಗಳಿಕೆ ಅವರದ್ದು. ರಾಜಸ್ತಾನ ಕೇಡರ್‌ನ ಈ ಐಎಎಸ್ ಅಧಿಕಾರಿ ಅಜ್ಮೀರ್, ಜೈಸಲ್ಮೆರ್, ಗಂಗಾನಗರ ಹೀಗೆ ಹಲವಾರು ಕಡೆಗಳಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಹೆಸರು ಗಳಿಸಿದ ಪ್ರತಿಭಾವಂತೆ. ಯಾವ ರಾಜಕಾರಣಿಗೂ ತಲೆಬಾಗದೆ ಸ್ವಾಭಿಮಾನದಿಂದ ಕೆಲಸ ಮಾಡುವ ದಿಟ್ಟೆ.
ಕರ್ನಾಟಕದ ಐಎಎಸ್ ಮಹಿಳಾ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಕೇಂದ್ರ ಸಚಿವರೊಬ್ಬರ ಕಾಲಿಗೆ ಬಿದ್ದು ನಮಸ್ಕರಿಸಿದ್ದು ಸಹಜವಾಗಿ ಟೀಕೆಗೆ ಒಳಗಾಯಿತು. ಜಿಲ್ಲಾಧಿಕಾರಿ ಎಂದರೆ ಜಿಲ್ಲೆಯ ಸರ್ಕಾರ. ಹಾಗಾಗಿ ಜಿಲ್ಲೆಯ ಆಡಳಿತವನ್ನೇ ಕೇಂದ್ರ ಸಚಿವರ ಕಾಲಿಗೆ ಒಪ್ಪಿಸಿದಂತೆ. ಖಾಸಗಿ ಆಚಾರ ವಿಚಾರ, ನಂಬಿಕೆ ಮತ್ತು ಧಾರ್ಮಿಕ ಶ್ರದ್ಧೆ ಮನೆಯೊಳಗಿರಬೇಕು ಎಂದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಯಸುತ್ತದೆ. ಟೀನಾ ಡಾಬಿ ಸೇರಿದಂತೆ ಅನೇಕ ಐಎಎಸ್ ಅಧಿಕಾರಿಗಳು ವಿಶೇಷವಾಗಿ ಮಹಿಳೆಯರು ಹೊಸಪೀಳಿಗೆಗೆ ಆದರ್ಶವಾಗಿದ್ದಾರೆ. ಆದರೆ ಕೆಲವರು ತಮ್ಮ ಸೇವಾವಧಿಯಲ್ಲಿ ಕೆಲವು ಎಡವಟ್ಟು ಮಾಡಿಕೊಂಡು ನಗಣ್ಯರಾಗಿರುವುದು ವಿಪರ್ಯಾಸ ” ಜಿಲ್ಲಾಧಿಕಾರಿ ಟೀನಾ ಡಾಬಿ ಅವರು ಈ ಹೊಸದಾದ ಕಲ್ಪನೆಯ ಯಶಸ್ವಿ ಕಾರ್ಯಕ್ಕಾಗಿ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ನೀಡುವ ಮೊದಲ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಡಾಬಿ ಅವರ ಈ ಸಾಧನೆ ಜಿಲ್ಲಾಡಳಿತಕ್ಕೆ ಎರಡು ಕೋಟಿ ರೂಪಾಯಿ ನಗದು ಪ್ರಶಸ್ತಿಯನ್ನೂ ತಂದುಕೊಟ್ಟಿರುವುದರಿಂದ ಆ ಜಿಲ್ಲೆಯ ವಿಶೇಷವಾಗಿ ರಾಜಸ್ತಾನದ ಜನರು ಹೆಮ್ಮೆ ಪಡುವಂತೆ ಮಾಡಿದ್ದಾರೆ.”
–ದೆಹಲಿ ಕಣ್ಣೋಟ ಶಿವಾಜಿ ಗಣೇಶನ್





