Mysore
23
overcast clouds
Light
Dark

ಸಿದ್ದರಾಮಯ್ಯ ಬಳಸಿದ ಅಸ್ತ್ರ ‘ಇಂಡಿಯಾ’ಗೂ ಪ್ರಬಲ ಅಸ್ತ್ರ ಆದೀತು

ಆರ್.ಟಿ.ವಿಠಲಮೂರ್ತಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಕರ್ನಾಟಕದ ಮಟ್ಟದಲ್ಲಿ ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನಿಸಿದ್ದಾರೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯ ವಿರುದ್ಧ ಹೊಸದಿಲ್ಲಿಯ ಜಂತರ್ ಮಂಥರ್‌ನಲ್ಲಿ ಫೆಬ್ರವರಿ 7ರಂದು ತಮ್ಮ ಸಂಪುಟದ ಸಹೋದ್ಯೋಗಿಗಳು ಮತ್ತು ಪಕ್ಷದ ಶಾಸಕರ ಜತೆಗೂಡಿ ಅವರು ನಡೆಸಿದ ಪ್ರತಿಭಟನೆ ಇದರ ಆರಂಭವೆಂಬುದು ನಿಜ.

ಅಂದ ಹಾಗೆ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಎಬ್ಬಿಸಿರುವ ರಾಮನ ಅಲೆಗೆ ಪರ್ಯಾಯವಾಗಿ ಕೇಂದ್ರ ಸರ್ಕಾರದ ವಿರುದ್ಧ ವಿರೋಧಿ ಅಲೆಯನ್ನು ಎಬ್ಬಿಸಲು ಸಿದ್ದರಾಮಯ್ಯ ಟೀಮು ಈ ದಾರಿ ಹಿಡಿದಿದೆ ಎಂಬ ಮಾತುಗಳು ನಿಜವೇ ಆದರೂ, ಸಿದ್ದರಾಮಯ್ಯ ಅವರ ಈ ಟೀಮು ಎಬ್ಬಿಸಲು ಯತ್ನಿಸಿರುವ ಈ ಅಲೆಗೆ ನಿಜವಾದ ಶಕ್ತಿ ಇದೆ ಎಂಬುದೂ ನಿಜ. ಕೇಂದ್ರ ಸರ್ಕಾರ ರಾಜ್ಯದ ವಿಷಯದಲ್ಲಿ ಮಲತಾಯಿ ಧೋರಣೆ ತೋರಿಸುತ್ತಿದೆ. ಕರ್ನಾಟಕದಿಂದ ವಿವಿಧ ತೆರಿಗೆಗಳ ರೂಪದಲ್ಲಿ ಸಂಗ್ರಹಿಸುವ ಹಣದ ಪೈಕಿ ಶೇ.12-13ರಷ್ಟು ಹಣವನ್ನು ಮಾತ್ರ ನಮಗೆ ನೀಡುತ್ತಿದೆ ಅಂತಸಿದ್ದರಾಮಯ್ಯ ಏನು ಹೇಳಿದ್ದಾರೆ ಇದನ್ನು ಕೇಂದ್ರ ಸರ್ಕಾರ ಈವರೆಗೂ ನಿರಾಕರಿಸಿಲ್ಲ. ಬದಲಿಗೆ, ತನ್ನನ್ನು ಸಮರ್ಥಿಸಿಕೊಳ್ಳಲು ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಕರ್ನಾಟಕಕ್ಕೆ ಏನು ಹಣ ನೀಡಿತ್ತೋ ಅದಕ್ಕಿಂತ ಹೆಚ್ಚು ಹಣವನ್ನು ನಾವು ನೀಡಿದ್ದೇವೆ ಎಂದು ಹೇಳುತ್ತಿದೆ. ಪ್ರಧಾನಿ ಮೋದಿಯವರಂತೂ ಇದು ದೇಶ ವಿಭಜಿಸುವ ಪ್ರಯತ್ನ ಎಂದಿದ್ದಾರೆ. ಆದರೆ ಇವೆಲ್ಲ ಸಿದ್ದರಾಮಯ್ಯ ಅವರು ಮಾಡಿದ ಆರೋಪಕ್ಕೆ ಸರಿಯಾದ ಉತ್ತರವಲ್ಲ.

ಒಂದು ವೇಳೆ ವಿವಿಧ ತೆರಿಗೆಗಳ ರೂಪದಲ್ಲಿ ನಾವು ಕರ್ನಾಟಕದಿಂದ ಸಂಗ್ರಹಿಸುತ್ತಿರುವ ಹಣದ ಪ್ರಮಾಣ ಇಷ್ಟು. ಅದರಲ್ಲಿ ನಾವು ಕರ್ನಾಟಕಕ್ಕೆ ಕೊಡುತ್ತಿರುವುದು ಎಷ್ಟು? ಅಂತ ಪ್ರಧಾನಿ ಮೋದಿಯವರಾಗಲೀ, ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಾಗಲೀ ಹೇಳ ಬೇಕಿತ್ತು. ಆದರೆ ಸಿದ್ದರಾಮಯ್ಯ ಹೊಸದಿಲ್ಲಿಗೆ ಹೋಗಿ ಆರೋಪ ಮಾಡಿ ಬಂದು ಇಷ್ಟು ದಿನಗಳು ಕಳೆದರೂ ಈ ಪ್ರಶ್ನೆಗೆ ನೇರವಾಗಿ ಉತ್ತರ ಕೊಡಲು ಕೇಂದ್ರ ಸರ್ಕಾರಕ್ಕೆ ಆಗಿಲ್ಲ. ಇದರರ್ಥ ಬೇರೇನೂ ಅಲ್ಲ, ಕರ್ನಾಟಕದ ವಿಷಯದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿರುವುದು ನಿಜ ಮತ್ತು ನಿಜ.ಆ ದೃಷ್ಟಿಯಿಂದ ಯಾರೇನೇ ಹೇಳಿದರೂ, ಬಿಜೆಪಿ ಅದೆಷ್ಟೇ ಸಮರ್ಥನೆ ಕೊಟ್ಟುಕೊಂಡರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರೀಕ್ಷೆಯಂತೆಗೆದ್ದಿದ್ದಾರೆ. ಅವರ ಈ ಗೆಲುವು ಕರ್ನಾಟಕಕ್ಕೆ ಕೇಂದ್ರದಿಂದಾಗುವ ಮಲತಾಯಿ ಧೋರಣೆಯನ್ನು ನಿವಾರಿಸುತ್ತದೆ ಅಂತ ಹೇಳಲು ಸಾಧ್ಯವಿಲ್ಲ. ಆದರೆ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯವಾಗುತ್ತಿದೆ ಎಂಬುದನ್ನು ದೇಶದ ಜನರಿಗೆ ಹೇಳುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ಅಂದ ಹಾಗೆ ಕೇಂದ್ರ ಸರ್ಕಾರದ ಧೋರಣೆಗಳ ವಿರುದ್ಧ ಬೀದಿಗಿಳಿಯುವ ಕೆಲಸ ಹಿಂದೆ ಹಲವು ರಾಜ್ಯಗಳಿಂದ ಆಗಿದೆ. ದಕ್ಷಿಣ ಭಾರತದ ಮಟ್ಟಿಗೆ ಹೇಳುವುದಾದರೆ ತಮಿಳುನಾಡು ಮುಂಚಿನಿಂದಲೂ ಕೇಂದ್ರದ ವಿಷಯದಲ್ಲಿ ಒಂದು ಅಸಹನೆಯನ್ನು ಬೆಳೆಸಿಕೊಂಡೇ ಬಂದಿದೆ. ನಮಗೆ ಪ್ರತ್ಯೇಕ ದ್ರಾವಿಡ ದೇಶ ಬೇಕು ಎಂಬ ಕೂಗು ಮೊದಲು ಶುರುವಾಗಿದ್ದು ತಮಿಳುನಾಡಿನಿಂದಲೇ ಎಂಬುದನ್ನು ಮರೆಯಬಾರದು. ಪಕ್ಕದ ಆಂಧ್ರಪ್ರದೇಶ ಕೂಡ ಕೇಂದ್ರದ ಮಲತಾಯಿ ಧೋರಣೆಯ ವಿರುದ್ಧ ಅಸಹನೆ ವ್ಯಕ್ತಪಡಿಸುತ್ತಲೇ ಬಂದಿದೆ. ಈಗ ಆ ಸಾಲಿಗೆ ಕರ್ನಾಟಕ ಸೇರಿದೆ.

ಅಂದ ಹಾಗೆ ಕೇಂದ್ರದ ಮಲತಾಯಿ ಧೋರಣೆಯ ವಿರುದ್ಧ ತಮಿಳುನಾಡು, ಆಂಧ್ರಪ್ರದೇಶ ಧ್ವನಿ ಎತ್ತುತ್ತಾ ಬಂದಿದ್ದರೂ, ಅಲ್ಲಿರುವ ರಾಜಕೀಯ ವ್ಯವಸ್ಥೆ ಆ ರಾಜ್ಯಗಳಿಗೆ ತೀರಾ ಅನ್ಯಾಯವಾಗಲು ಅವಕಾಶ ನೀಡಿಲ್ಲ. ಏಕೆಂದರೆ ಕಾಲದಿಂದ ಕಾಲಕ್ಕೆ ಆ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಭುಜ ಕೊಟ್ಟಿವೆಯಲ್ಲದೆ, ತಮ್ಮ ರಾಜ್ಯದ ಹಿತ ಕಾಪಾಡಿಕೊಳ್ಳುವ ವಿಷಯದಲ್ಲಿ ಒಂದಷ್ಟು ಮಟ್ಟಿಗಾದರೂ ಯಶಸ್ವಿಯಾಗಿವೆ. ಆದರೆ ಕರ್ನಾಟಕದ ವಿಷಯದಲ್ಲಿ ಹಾಗೆ ಹೇಳಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಅಧಿಕಾರಕ್ಕೆ ಬಂದ ಯಾವ ರಾಜಕೀಯ ಪಕ್ಷಗಳೂ ಕೇಂದ್ರದ ವಿರುದ್ಧ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿಲ್ಲ.

ಬದಲಿಗೆ ನಾವು ಧ್ವನಿ ಎತ್ತಿದರೆ ನಮಗೆ ಆಗುತ್ತಿರುವ ಅನ್ಯಾಯ ಮತ್ತಷ್ಟು ಹೆಚ್ಚಾಗಬಹುದು ಎಂಬ ಹಿಂಜರಿಕೆಯಿಂದಲೇ ವರ್ತಿಸಿವೆ. ಹೀಗಾಗಿ ತಗ್ಗಿದವನಿಗೆ ಗುದ್ದು ಜಾಸ್ತಿ ಎಂಬಂತೆ ಕೇಂದ್ರದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಕರ್ನಾಟಕಕ್ಕೆ ನಿರೀಕ್ಷಿತ ಪ್ರಮಾಣದ ಅನುಕೂಲಗಳಾಗುತ್ತಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಇಂತಹ ಸರ್ಕಾರ ಕರ್ನಾಟಕದಲ್ಲಿ ಇಂತಿಷ್ಟು ಕೆಲಸಮಾಡಿದೆ ಎಂದು ಸಮರ್ಥನೆ ಮಾಡುವವರು ಕಡಿಮೆಯೇನಲ್ಲ. ಆದರೆ ರಾಜ್ಯದಿಂದ ಕೇಂದ್ರ ಸಂಗ್ರಹಿಸುವ ತೆರಿಗೆ ಹಣವೆಷ್ಟು? ಇದರಲ್ಲಿ ಅದು ರಾಜ್ಯಕ್ಕೆ ಹಿಂತಿರುಗಿಸುವ ಪಾಲೆಷ್ಟು? ಎಂಬ ಪ್ರಶ್ನೆ ಹಾಕಿದರೆ ಉಲ್ಟಾ ಉತ್ತರ ನೀಡುವ ಪ್ರಯತ್ನಗಳಾಗುತ್ತವೆಯೇ ಹೊರತು ನೇರ ಉತ್ತರ ಸಿಗುವುದಿಲ್ಲ. ಆ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ದೇಶದ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಇದರ ರಾಜಕೀಯ ಲಾಭಗಳ ಬಗ್ಗೆ ಕರ್ನಾಟಕದ ನೆಲೆಯಲ್ಲಿ ಚರ್ಚೆ ಆರಂಭವಾಗಿದೆ.

ಹಾಗೆ ನೋಡಿದರೆ ಇತ್ತೀಚೆಗೆ ಬಿಜೆಪಿಗೆ ಪರ್ಯಾಯವಾಗಿ ತಲೆ ಎತ್ತಿರುವ ಇಂಡಿಯಾ ಒಕ್ಕೂಟ ಬಿಜೆಪಿ ಎಬ್ಬಿಸಿರುವ ರಾಮನ ಅಲೆಯ ವಿರುದ್ಧ ಸಮರ್ಥ ಅಸ್ತ್ರಗಳನ್ನು ಇನ್ನೂ ತಯಾರು ಮಾಡಿಟ್ಟುಕೊಂಡಿಲ್ಲ. ಯಾವುದೇ ವಿಷಯವನ್ನು ಹರಿತಗೊಳಿಸಿ ಕೇಂದ್ರದ ವಿರುದ್ಧ ಅಸ್ತ್ರ ಬಳಸಲು ಅದು ಯಶಸ್ವಿಯಾಗಿಲ್ಲ. ಮೋದಿ ಸರ್ಕಾರ ಭಾವನಾತ್ಮಕ ವಿಷಯಗಳ ಮೇಲೆ ದೇಶವನ್ನು ಒಡೆಯುವ ಯತ್ನ ಮಾಡುತ್ತಿದೆ. ಜಾತಿ, ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಹೇಳುವ ಮೂಲಕ ಪರ್ಯಾಯ ರಾಜಕಾರಣಕ್ಕೆ ಇಂಡಿಯಾ ಒಕ್ಕೂಟ ತಯಾರಾಗುತ್ತಿರುವುದೇನೋ ನಿಜ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಟೀಮಿನ ಜತೆ ಹೊಸದಿಲ್ಲಿಯಲ್ಲೇ ನಿಂತು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಹಾಕಿದ ಕೂಗು ಮತ್ತು ಕೇಂದ್ರ ಸರ್ಕಾರದಿಂದ ರಾಜ್ಯಕ್ಕಾಗಿರುವ ಅನ್ಯಾಯದ ಬಗ್ಗೆ ನೀಡಿದ ಅಂಕಿ ಅಂಶಗಳು ದೇಶದ ಜನರ ಗಮನ ಸೆಳೆದಿರುವುದು ನಿಜ.

ಆ ದೃಷ್ಟಿಯಿಂದ ಸಿದ್ದರಾಮಯ್ಯ ಅವರು ಬಳಸಿದ ಅಸ್ತ್ರ ಕರ್ನಾಟಕದ ನೆಲೆಯಲ್ಲಿ ಮಾತ್ರವಲ್ಲದೆ ಇಂಡಿಯಾ ಒಕ್ಕೂಟದ ಪಾಲಿಗೂ ಪ್ರಬಲ ಅಸ್ತ್ರವೇ ಆಗಬಹುದು. ಅರ್ಥಾತ್, ಕೇಂದ್ರ ಸರ್ಕಾರ ತನ್ನ ತಾರತಮ್ಯದ ಧೋರಣೆ ಯಿಂದ ಭಾರತದ ಅಭಿವೃದ್ಧಿಗೆ ಅಂಕುಶ ಹಾಕುತ್ತಿದೆ ಎಂದು ವಾದಿಸಬಹುದು. ಅದೇನೇ ಇರಲಿ, ಒಟ್ಟಿನಲ್ಲಿ ಕೇಂದ್ರ ಸರ್ಕಾರದ ತಾರತಮ್ಯದ ವಿರುದ್ಧ ಸಿದ್ದರಾಮಯ್ಯ ಮತ್ತವರ ಟೀಮು ಹೊಸದಿಲ್ಲಿಯ ರಣಾಂಗಣಕ್ಕೆ ನುಗ್ಗಿ ಹಾಕಿದ ಕೂಗು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸೈನ್ಯಕ್ಕೆ ಒಂದು ಸವಾಲು ಒಡ್ಡಿರುವುದು ಸ್ಪಷ್ಟ. ಅದರಲ್ಲೂ ಮೋದಿ ನೇತೃತ್ವದ ಬಿಜೆಪಿ ತಂಡ ಕರ್ನಾಟಕಕ್ಕೆ ಪ್ರಚಾರಕ್ಕೆ ಅಂತ ಬರುತ್ತದಲ್ಲ ಆಗ ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಮಾಡಿದ ಆರೋಪಕ್ಕೆ ಅದು ಉತ್ತರ ನೀಡಲೇಬೇಕಾಗುತ್ತದೆ.

ಹೀಗೆ ಉತ್ತರ ನೀಡುವಾಗ ಅದು ನೂರೊಂದು ಕಾರಣಗಳನ್ನು ನೀಡಬೇಕಿಲ್ಲ. ಬದಲಿಗೆ ಕರ್ನಾಟಕದಿಂದ ವಿವಿಧ ತೆರಿಗೆಗಳ ರೂಪದಲ್ಲಿ ಕೇಂದ್ರ ಸಂಗ್ರಹಿಸುವ ಹಣವೆಷ್ಟು? ಈ ಹಣದಲ್ಲಿ ರಾಜ್ಯದ ಪಾಲು ಅಂತ ತಾನು ನೀಡುವುದೆಷ್ಟು? ಎಂಬ ಪ್ರಶ್ನೆಗೆ ಅದು ನೇರ ಉತ್ತರ ನೀಡಿದರೆ ಸಾಕು.

ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಈ ಪ್ರಶ್ನೆಗೆ ಉತ್ತರ ಕೊಡುವ ಶಕ್ತಿ ಕೇಂದ್ರ ಸರ್ಕಾರಕ್ಕೆ ಇದ್ದಂತೆ ಕಾಣುವುದಿಲ್ಲ. ಆ ಮಟ್ಟಿಗೆ ಇದು ಸಿದ್ದರಾಮಯ್ಯ ಅವರ ವಿಜಯ ಎನ್ನಲೇಬೇಕು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ