Mysore
26
few clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಸಮ ಸಮಾಜಕ್ಕಾಗಿ ಬಡಿದಾಡಿದ ಸಮಾಜವಾದಿಯ ಕತೆ

ಉಳ್ಳವರ ಕೈಯಿಂದ ಉಳುವವನ ಕೈಗೆ ಭೂಮಿ ಕೊಡಿಸಲು ನಡೆಸಿದ ಹೋರಾಟ ಸಣ್ಣದೇ?

ಬಾನಂದೂರು ರಂಗಪ್ಪ ತಣ್ಣಗೆ ಕಿಟಕಿಯಾಚೆ ನೋಡಿದರು. ಮನೆಯೊಳಗೆ ಹೆಂಡತಿಯ ಗೊಣಗಾಟ ಕೇಳಿಸುತ್ತಿತ್ತು. ಆಕೆ ಮಗಳ ಜತೆ ಆಕ್ಷೇಪದ ಧ್ವನಿಯಲ್ಲಿ ಮಾತನಾಡುತ್ತಾ, ನಿಂದು, ನಿಮ್ಮಪ್ಪಂದು ಒಂದೇ ಗೋಳಾಗಿ ಹೋಯ್ತು. ನೀನು ನೋಡಿದರೆ ಶಾಲೆ ಫೀಸು ಕಟ್ಟಿಲ್ಲ ಅಂತ ಬಡ್ಕೋತೀಯಾ. ನಿಮ್ಮಪ್ಪನ ಬಳಿ ಹೇಳಿದರೆ ಧ್ವನಿ ಎತ್ತದೆ ಎಲ್ಲಿಗಾದರೂ ಹೋಗಿ ಬಿಡುತ್ತಾರೆ. ಮನೆಗೆ ಮಾರಿ, ಪರರಿಗೆ ಉಪಕಾರಿ ನಿಮ್ಮಪ್ಪ ಅಂತಹೆಂಡತಿ ಒಂದೇ ಸಮನೆ ಕೂಗಾಡುತ್ತಿದ್ದರೆ ರಂಗಪ್ಪನವರಿಗೆ ಸಣ್ಣದೊಂದು ದಿಗಿಲು.

ಬುದ್ಧಿ ಬರುತ್ತಿದ್ದಂತೆಯೇ ಈ ಶಾಂತವೇರಿ ಗೋಪಾಲಗೌಡರ ಭಾಷಣ  ಕೇಳಿ ಸಮಾಜವಾದದ ಹೋರಾಟಕ್ಕಿಳಿದೆ. ಗೋಪಾಲಗೌಡರ ಗುರು ಇದ್ದರಲ್ಲ ರಾಮಮನೋಹರ ಲೋಹಿಯಾ ಅವರ ಮಾತು ಕೇಳಬೇಕು, ಜಾತಿ, ವರ್ಗದಿಂದ ಹಿಡಿದು ಸಮಸಮಾಜದ ಕಲ್ಪನೆಯ ತನಕ ಎಂತಹ ಮಾತುಗಾರಿಕೆ ಅವರದು?

ಆ ಸಂದರ್ಭದಲ್ಲಿ ತಾವು ಗೋಪಾಲಗೌಡರ ಶಿಷ್ಯನಾಗಿ ಗುರುತಿಸಿ ಕೊಳ್ಳುವುದೇ ಒಂದು ಹೆಮ್ಮೆ. ಗೋಪಾಲಗೌಡರಾದರೂ ಅಷ್ಟೇ, ಜೇಬಿನಲ್ಲಿ ಒಂದು ಪೈಸೆ ಇಟ್ಟುಕೊಳ್ಳದಿದ್ದರೂ ಹೋರಾಟದ ಕೆಚ್ಚು ನೋಡಬೇಕು. ಅವತ್ತು ಅದನ್ನೆಲ್ಲ ನೋಡುತ್ತಾ, ನೋಡುತ್ತಾ, ಹೋರಾಟಗಳ ಪರಂಪರೆಯನ್ನು ಮುಂದುವರಿಸುತ್ತಾ, ಆಹಾ ಎಂತಹ ದಿನಗಳು ಅವು? ಸಮ ಸಮಾಜ ನಿರ್ಮಾಣವಾಗಬೇಕೆಂದರೆ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಂಪತ್ತಿನ ಸಮಾನ ಹಂಚಿಕೆಯಾಗಬೇಕು ಅಂತ ಉಳುವವನೇ ಹೊಲದೊಡೆಯ ಹೋರಾಟ ನಡೆಸಿದ್ದೇನು? ಯೋಚಿಸಿದರೆ ಸಮಾಜವಾದ ಎಂಬುದು ಇನ್ನೇನು ಜಾರಿಯಾಗಿ ಬಿಡುತ್ತದೆ. ಮೇಲು- ಕೀಳಿನ ಭೇದವಿಲ್ಲದೆ ಮನುಷ್ಯರೆಲ್ಲ ಸಮಾನತೆಯ ನೆಲೆಗಟ್ಟಿನ ಮೇಲೆ ಬದುಕುವುದು ಎಂದರೆ ಅದೇನು ಸಣ್ಣ ಕನಸೇ?

ಇದನ್ನು ಓದಿ: ದ್ವೇಷ ಕಾರುವವರಿಗೆ ಬೀಳಲಿದೆಯೇ ಕಡಿವಾಣ?

ನಮ್ಮ ಸಮಾಜವಾದಿ ಪಕ್ಷದ ಹೋರಾಟಕ್ಕೆ ದೊಡ್ಡ ಬಲ ಸಿಕ್ಕಿದ್ದು ದೇವರಾಜ ಅರಸರು ಮುಖ್ಯಮಂತ್ರಿಯಾದಾಗ. ಅವರು ಸಮ ಸಮಾಜದ ನಮ್ಮ ಕನಸಿಗೆ ಬೆಂಬಲ ಕೊಟ್ಟರಷ್ಟೇ ಅಲ್ಲ, ಭೂ ಸುಧಾರಣಾ  ಕಾಯ್ದೆಗೆ ತಿದ್ದುಪಡಿ ತಂದು ಉಳುವವನೇ ಹೊಲದೊಡೆಯನಾಗುವಂತೆ ನೋಡಿಕೊಂಡರು. ಆ ಸಂದರ್ಭದಲ್ಲಿ ನಾನೂ ಶಾಸಕನಾಗಿದ್ದೆನಲ್ಲ? ಉಳ್ಳವರ ಜಮೀನಿನಲ್ಲಿ ದುಡಿಯುತ್ತಿದ್ದವರು ಭೂಮಿಯನ್ನು ಪಡೆದ ಅತ್ಯಪರೂಪದ ಸಂದರ್ಭ ಅದು. ಕಾನೂನು ಬರಬಹುದು. ಆದರೆ ಗೇಣಿದಾರರಿಗೆ ಕಾನೂನಿನ ಜ್ಞಾನ ಇರಬೇಕಲ್ಲ? ಹೀಗಾಗಿ ಅವತ್ತು ನಾವು ಸಮಾಜವಾದಿ ಪಕ್ಷದವರು, ಅಂದರೆ ಸಾಗರದ ಕಾಗೋಡು ತಿಮ್ಮಪ್ಪನವರು, ಸೊರಬದ ಬಂಗಾರಪ್ಪನವರು, ಹೀಗೆ ಸಮಾಜವಾದಿ ಪಕ್ಷದಲ್ಲಿ ದುಡಿಯುತ್ತಿದ್ದ ಎಲ್ಲರೂ ಉಳ್ಳವರ ಕೈಯಿಂದ ಉಳುವವನ ಕೈಗೆ ಭೂಮಿ ಕೊಡಿಸಲು ನಡೆಸಿದ ಹೋರಾಟ ಸಣ್ಣದೇ? ಆ ಕಾನೂನಿನ ಸಮರದ್ದೇ ಒಂದು ಕತೆ.

ಹೀಗೆ ಒಂದು ದೊಡ್ಡ ಆದರ್ಶದ ಹಿನ್ನೆಲೆಯಲ್ಲಿ ದುಡಿದ ತನಗೆ ಈಗೀಗ ಮನೆಯಲ್ಲೇ ಮುಜುಗರದ ವಾತಾವರಣ. ಹೆಂಡತಿಯದು ಯಾವತ್ತೂ ವರಾತ. ಊರವರಿಗೆಲ್ಲ ಭೂಮಿ ಮಾಡಿಸಿಕೊಟ್ಟಿರಿ. ನಿಮಗೆ ಅಂತ ಒಂದು ತುಂಡು ಭೂಮಿಯನ್ನಾದರೂ ಮಾಡಿಕೊಂಡಿರಾ? ಹಾಗೆ ಮಾಡಿಕೊಂಡಿಲ್ಲ ಎಂಬ ಕಾರಣಕ್ಕೆ ಇವತ್ತು ನಮ್ಮ ಪರಿಸ್ಥಿತಿ ಏನಾಗಿದೆ ನೋಡಿ. ನಿಮ್ಮ ಪ್ರಯತ್ನದಿಂದ ಭೂಮಿ ಪಡೆದ ಹಲವರು ಇವತ್ತು ನಮ್ಮ ಮೇಲೇ ದರಕಾರು ಮಾಡಿಕೊಂಡು ತಿರುಗುತ್ತಿದ್ದಾರೆ. ಅವರ ಹೆಂಡಿರು, ಮಕ್ಕಳ ದವಲತ್ತು ನೋಡಬೇಕು. ಇನ್ನು ಕಷ್ಟ ಅಂತ ಬಂದವರಿಗೆಲ್ಲ ಕಂಡವರ ಹತ್ತಿರ ಸಾಲ ಮಾಡಿ ದುಡ್ಡು ಕೊಡುವ ಚಾಳಿ ಬೇರೆ ನಿಮಗೆ ಎಂಬುದು ಹೆಂಡತಿಯ ಆಕ್ಷೇಪ.

ಆಕೆ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ನನ್ನದೇ ಯಡವಟ್ಟು. ಅವತ್ತು ಹೋರಾಟ, ಹೋರಾಟ ಅಂತ ಮನೆಯನ್ನು ಮರೆತ ಫಲ ಇವತ್ತು ಕಾಣುತ್ತಿದೆ. ಇವತ್ತಿಗಿದ್ದರೆ ನಾಳೆಗಿಲ್ಲ ಎಂಬ ಪರಿಸ್ಥಿತಿ. ಹಾಗಂತ ಇವತ್ತು ಯಾರ ಮುಂದೆಯೋ ಕೈ ಚಾಚಲು ಸಾಧ್ಯವಿಲ್ಲ. ನಮ್ಮ ಹೋರಾಟದಿಂದ ಲಾಭ ಪಡೆದವರ ಬಳಿ ಹೋಗಿ ನಾವೇ ಕೈ ಚಾಚಿದರೆ ಅದಕ್ಕೆ ಅರ್ಥವೇನು? ಅಂತ ರಂಗಪ್ಪ ಯೋಚಿಸುತ್ತಾರೆ.

ಆದರೆ ಈಗಿನ ಸಮಸ್ಯೆ ಬೇರೆ. ಮಗಳ ಶಾಲೆಯ ಫೀಸು ಕಟ್ಟಬೇಕು. ಮನೆಯ ಕಿರಾಣಿಗೆ ಅಂತ ಶೆಟ್ಟರ ಅಂಗಡಿಯಲ್ಲಿ ಎಷ್ಟು ಅಂತ ಸಾಲ ಮಾಡಲು ಸಾಧ್ಯ? ಅಂತ ಯೋಚಿಸಿದಾಗ ರಂಗಪ್ಪನವರಿಗೆ ಕಿರಿಕಿರಿ ಯಾಯಿತು. ಹೋಗಲಿ, ಎಲ್ಲಾದರೂ ಕೆಲಸಕ್ಕೆ ಸೇರಿಬಿಡೋಣ ಎಂದರೆ ಊರಿನ ಜನ ಬೇರೆ ದೃಷ್ಟಿಯಲ್ಲಿ ನೋಡುತ್ತಾರೆ ಅನ್ನಿಸಿ ಖೇದವಾಯಿತು. ಹೀಗಾಗಿಯೇ ಹೆಂಡತಿ ಇಂತಹ ವರಾತಗಳನ್ನು ಎತ್ತಿದಾಗಲೆಲ್ಲ ರಂಗಪ್ಪನವರು ಮನೆಯಿಂದ ಹೊರಬಿದ್ದು ಬಿಡುತ್ತಾರೆ. ತಮ್ಮ ಸ್ನೇಹಿತರ ಬಳಿ, ಸಮಾಜವಾದಿ ಪಕ್ಷದ ಮುರುಕು ಕಚೇರಿಯ ಬಳಿ ಹೋದರೆ ಏನೋ ಸಮಾಧಾನ. ಆದರೆ ಕಳೆದ ಕೆಲ ದಿನಗಳಿಂದ ಅದೂ ಬೇಸರ ತರುತ್ತಿದೆ. ಹೋರಾಟ, ಹೋರಾಟ ಅಂತ ಅಲೆದ ದಿನಗಳ ಕತೆ ಬೇರೆ. ಆದರೆ ಈಗ ಮನೆಯಲ್ಲಿ ಅನ್ನ ಬೇಯಬೇಕಲ್ಲ? ಹುಟ್ಟಿಸಿದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ನೆಲೆ ಕಾಣಿಸಬೇಕಲ್ಲ? ಹಾಗಂತ ಯೋಚಿಸುವಾಗ ರಂಗಪ್ಪನವರಿಗೆ ದಾರಿ ಕಾಣುವುದಿಲ್ಲ.

ಇದನ್ನು ಓದಿ: ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ: ಆಕಾಂಕ್ಷಿಗಳ ಕಸರತ್ತು

ಹೀಗಾಗಿಯೇ ಅವತ್ತು ಮನೆಯಿಂದ ಹೊರಬಿದ್ದು ಸಮಾಜವಾದಿ ಪಕ್ಷದ ಮುರುಕು ಕಚೇರಿಗೆ ಹೋಗಿ ಕುಳಿತಾಗ ಪೊಲೀಸ್ ಒಬ್ಬ ಬಂದ. ಅರೇ ನೀನು ನೀಲಕಂಠಯ್ಯನವರ ಮಗ ರಾಘವೇಂದ್ರ ಅಲ್ಲವೇನಯ್ಯ? ಅಂತ ಕೇಳಿದರೆ ಹೌದು ಸಾರ್ ಎಂದ. ಬಂದ ಕೆಲಸವೇನು ಅಂತ ಕೇಳಿದರೆ, ಸಾರ್, ಬೆಂಗಳೂರಿನ ಡಿಜಿ ಆಫೀಸಿನಿಂದ ಫೋನು ಬಂದಿದೆ. ನೀವು ಅರ್ಜೆಂಟಾಗಿ ಮುಖ್ಯಮಂತ್ರಿ ದೇವರಾಜ ಅರಸರನ್ನು ನೋಡಬೇಕಂತೆ ಎಂದ.

ಆತ ಹೇಳಿದ ಮಾತು ಕೇಳಿ ರಂಗಪ್ಪನವರಿಗೆ ಅಚ್ಚರಿಯಾಯಿತು. ಮುಖ್ಯಮಂತ್ರಿಗಳೇಕೆ ನನ್ನನ್ನು ನೋಡಬೇಕು ಅನ್ನುತ್ತಿದ್ದಾರೆ? ನಾನು ನೋಡಿದರೆ ಹೋರಾಟದ ಸಂದರ್ಭದಲ್ಲಿ ಅವರನ್ನು ಟೀಕೆ ಮಾಡದ ದಿನಗಳೇ ಇಲ್ಲ. ಆದರೆ ಅವರೇಕೆ ಇವತ್ತು ನನ್ನನ್ನು ನೋಡಬೇಕೆಂದು ಬಯಸಿದ್ದಾರೆ ಅಂತ ಯೋಚಿಸಿ ಅಚ್ಚರಿಯಾಯಿತು. ಆದರೆ ಎಷ್ಟೇ ಆದರೂ ನಾಡನ್ನಾಳುವ ದೊರೆ. ಎಲ್ಲಕ್ಕಿಂತ ಮುಖ್ಯವಾಗಿ ಉಳುವವನೇ ಹೊಲದೊಡೆಯ ಎಂಬ ಸಮಾಜವಾದಿಗಳ ಮಂತ್ರಕ್ಕೆ ಧ್ವನಿ ಕೊಟ್ಟವರು. ಹೋರಾಟದ ಸಂದರ್ಭಗಳಲ್ಲಿ ಟೀಕೆ ಮಾಡುತ್ತಿದ್ದೆ ಎಂಬ ಕಾರಣಕ್ಕಾಗಿ ಈಗ ದೂರ ಉಳಿಯುವುದು ಸರಿಯಲ್ಲ ಎನ್ನಿಸಿತು. ಸರಿ ಎಂದವರೇ ಮನೆಗೆ ಬಂದು ಹೆಂಡತಿಯ ಬಳಿ ನನಗೆ ಅರ್ಜೆಂಟಾಗಿ ಬೆಂಗಳೂರಿನಲ್ಲಿ ಕೆಲಸವಿದೆ. ಬರುವುದು ಎರಡು ದಿನವಾಗಬಹುದು ಎಂದು ಬಟ್ಟೆ ಜೋಡಿಸಿಕೊಳ್ಳತೊಡಗಿದರು. ಯಥಾ ಪ್ರಕಾರ ಹೆಂಡತಿಯ ವರಾತ ಮುಂದುವರಿಯಿತು. ಮನೆಯ ಪರಿಸ್ಥಿತಿ ಏನು ಅನ್ನುವುದು ನಿಮಗೆ ಗೊತ್ತು.ಆದರೂ ಮತ್ತೆ ನಿಮ್ಮ ಹಾಳು ಸಮಾಜವಾದದ ಕತೆ ಎತ್ತಿಕೊಂಡು ಬೆಂಗಳೂರಿಗೆ ಹೋಗುತ್ತಿದ್ದೀರಿ ಎಂದಳು. ಆಕೆಯ ಮಾತಿಗೆ ದುಸುರಾ ಮಾತನಾಡದೆ ರಂಗಪ್ಪ ಮನೆಯಿಂದ ಹೊರಬಿದ್ದರು. ಮರುದಿನ ಬೆಳಿಗ್ಗೆ ಬೆಂಗಳೂರು ತಲುಪಿದವರು ಜನರಲ್ ಹಾಸ್ಟೆಲಿನಲ್ಲಿ ಸ್ನಾನ ಮುಗಿಸಿ, ತಿಂಡಿ ತಿಂದು ಮುಖ್ಯಮಂತ್ರಿಗಳ ಮನೆಯ ಕಡೆ ಹೋದ ರಂಗಪ್ಪನವರಿಗೆ ಅಚ್ಚರಿ ಕಾದಿತ್ತು. ಮನೆಯ ಹೊರಗಡೆ ಜನ ಕಾಣಲಿಲ್ಲ. ಇದ್ದಾರೋ ಇಲ್ಲವೋ ಎಂಬ ಅನುಮಾನದಲ್ಲೇ ದೇವರಾಜ ಅರಸರಿದ್ದ ಬಂಗಲೆಯೊಳಗೆ ನುಗ್ಗಿದರೆ ಆಪ್ತ ಸಹಾಯಕನೊಬ್ಬ ಇವರನ್ನು ನೋಡುತ್ತಲೇ ಸಾಹೇಬರು ನಿಮ್ಮನ್ನು ಕಾಯುತ್ತಿದ್ದಾರೆ ಬನ್ನಿ ಎಂದ.

ಒಳಗೆ ಹೋದರೆ ಹಾಲ್ ನಲ್ಲಿ ಏಕಾಂಗಿಯಾಗಿ ಕುಳಿತಿದ್ದ ದೇವರಾಜ ಅರಸರು ಬನ್ನಿ ರಂಗಪ್ಪನವರೇ ಎಂದು ಸ್ವಾಗತಿಸಿದರು. ಅವರನ್ನು ನೋಡಿ ಪ್ರಫುಲ್ಲರಾದ ರಂಗಪ್ಪ ಸಾರ್, ನೀವು ಬರಹೇಳಿದಿರಂತೆ. ಏನು ವಿಷಯ ಅಂತ ಗೊತ್ತಾಗಲಿಲ್ಲ ಎಂದರು. ಅರಸರು ಸುಮ್ಮನೆ ನಕ್ಕು ಅದು, ಇದು ಮಾತನಾಡುತ್ತಾ ಶಾಸ್ತ್ರಿ ಎಂದು ಕೂಗಿದರು.ಅವರು ಕೂಗಿದ ಕೆಲವೇ ನಿಮಿಷಗಳಲ್ಲಿ ಅವರ ಆಪ್ತ ಶಾಸ್ತ್ರಿ ಕೈಯಲ್ಲಿ ಒಂದು ಪೊಟ್ಟಣ ಹಿಡಿದು ಬಂದರು. ಅರಸರು ಆ ಪೊಟ್ಟಣವನ್ನುಕೈಗೆ ತೆಗೆದುಕೊಂಡು ರಂಗಪ್ಪ, ನಿಮ್ಮನ್ನು ತುಂಬ ನೆನಪಿಸಿಕೊಳ್ಳುತ್ತಿದ್ದೆ. ಸಮಾಜಕ್ಕಾಗಿ ಹೋರಾಡುವವರು ಈ ನೆಲದ ಆಸ್ತಿ ನೋಡಿ. ಅಂತಹ ಆಸ್ತಿಯನ್ನು ಗೌರವಿಸಬೇಕು ಅಂತ ಹೇಳಿ ಆ ಪೊಟ್ಟಣವನ್ನು ರಂಗಪ್ಪನವರ ಕೈಗೆ ಕೊಟ್ಟರು.

ಆ ಪೊಟ್ಟಣ ಕೈಗೆ ಬರುತ್ತಿದ್ದಂತೆಯೇ ರಂಗಪ್ಪನವರಿಗೆ, ಇದರಲ್ಲಿರುವುದು ದುಡ್ಡು ಎಂಬುದು ಗೊತ್ತಾಯಿತು. ಹೀಗಾಗಿ, ಸಾರ್, ಇದೆಲ್ಲ ಏಕೆ?ನಾನು ಹೋರಾಟದ ದಿನಗಳಲ್ಲಿ ನಿಮ್ಮ ಮೇಲೇ ಆರೋಪ ಮಾಡಿದ್ದೇನೆ. ಅವತ್ತು ನಿಮ್ಮ ಮೇಲೆ ಮಾಡುತ್ತಿದ್ದ ಆರೋಪದ ಪಟ್ಟಿ ಇನ್ನೂ ನನ್ನ ಮನಸ್ಸಿನಲ್ಲಿ ಜೀವಂತವಾಗಿದೆ ಎಂದರು ರಂಗಪ್ಪ. ಆದರೆ ದೇವರಾಜ ಅರಸರು ಸಣ್ಣಗೆ ನಗು ಬೀರಿ ಜನರಿಗಾಗಿ  ಹೋರಾಡುವವರು ಅಂತಹ ಟೀಕೆ ಮಾಡುವುದು ತಪ್ಪಲ್ಲ ರಂಗಪ್ಪ. ಆದರೆ ಸಮಾಜಕ್ಕಾಗಿ ಹೋರಾಡಿದ ನಿಮ್ಮಂತಹವರು ವೈಯಕ್ತಿಕ ಬದುಕಿನಲ್ಲಿ ಸುಸ್ತಾಗಬಾರದು. ಹಾಗೆ ಸುಸ್ತಾದರೆ ಸಮಾಜದ ಶಕ್ತಿ ಕುಗ್ಗಿದಂತೆ. ಹೀಗಾಗಿ ನಿಮ್ಮನ್ನು ನಾನು ನೆನಪಿಸಿಕೊಂಡೆ. ಇವತ್ತು ನಾನು ನಿಮ್ಮಂತಹವರನ್ನು ನೆನಪಿಸಿಕೊಳ್ಳದಿದ್ದರೆ ನಾಳೆ ಸಮಾಜಕ್ಕಾಗಿ ಹೋರಾಡುವ ನಿಮ್ಮಂತಹವರ ಸಂಖ್ಯೆ ಕಡಿಮೆಯಾಗುತ್ತದೆ. ಸಮಾಜಕ್ಕೆ ನಿಜವಾದ ಅಪಾಯ ಅದು. ಇನ್ನು ಯಾವ ಸಮಾಜಕ್ಕಾಗಿ ನೀವು ಹೋರಾಡಿದಿರೋ ಆ ಸಮಾಜ ಇವತ್ತು ನಿಮ್ಮನ್ನು ನೆನಪಿಸಿಕೊಳ್ಳುತ್ತದೆ ಅಂತೇನಲ್ಲ. ಹೊಳೆಯಲ್ಲಿ ನೀರು ಹರಿದಂತೆ ಸಮಾಜದಲ್ಲಿದ್ದವರ ಬದುಕೂ ಹರಿದು ಹೋಗುತ್ತಿರುತ್ತದೆ. ಹರಿಯುವ ನೀರು ತಣ್ಣಗೆ ತನ್ನ ಪಾಡಿಗೆ ಮುಂದುವರಿಯುತ್ತದೆ. ಆದರೆ ನಿಮ್ಮ ಬದುಕು ತಣ್ಣಗೆ ಮುಂದುವರಿಯುವುದಿಲ್ಲ ರಂಗಪ್ಪನವರೇ.

ಇದನ್ನು ಓದಿ: ಮದ್ಯಪಾನಿಗಳ ತಾಣವಾದ ಶಾಲಾ ಕಟ್ಟಡ

ಮೊನ್ನೆ ನಿಮ್ಮ ಬಗ್ಗೆ ವಿಚಾರಿಸಲು ನಮ್ಮ ಶಾಸ್ತ್ರಿಗೆ ಹೇಳಿದ್ದೆ. ಅವರು ನಿಮ್ಮ ಇವತ್ತಿನ ಸ್ಥಿತಿಯ ಬಗ್ಗೆ ವಿವರ ಪಡೆದುಕೊಂಡು ನನಗೆ ಹೇಳಿದರು. ಆದರೆ ಇವತ್ತು ನಿಮಗೆ ಒಂದು ಮಾತು ಹೇಳುತ್ತೇನೆ. ಇವತ್ತು ಸಮಾಜ ನಿಮ್ಮನ್ನು]ತಿರುಗಿ ನೋಡುತ್ತಿಲ್ಲ ಎಂದು ಬೇಸರ ಮಾಡಿಕೊಳ್ಳಬೇಡಿ.ಅದು ಸಮಾಜದ ಮೂಲಗುಣ. ಆದರೆ ಹಾಗಂತ ನಿಮ್ಮ ಹೋರಾಟದ ಕಾವನ್ನು ಕಳೆದುಕೊಳ್ಳಬೇಡಿ. ಏಕೆಂದರೆ ವ್ಯವಸ್ಥೆಯಲ್ಲಿ ಸಮಾನತೆ ಎಂಬುದು ಬರಬೇಕಲ್ಲ? ಅದು ಬರುವ ತನಕ ಎಲ್ಲರೂ ದುಡಿಯುತ್ತಲೇ ಇರಬೇಕು ಎಂದರು. ದೇವರಾಜ ಅರಸರ ಮಾತು ಕೇಳಿ ರಂಗಪ್ಪನವರ ಕಣ್ಣಲ್ಲಿ ನೀರು ಬಂತು. ಹಾಗಂತಲೇ ಅರಸರಿಗೆ ನಮಸ್ಕರಿಸಿ ಜನರಲ್ ಹಾಸ್ಟೆಲಿನ ರೂಮಿಗೆ ಬಂದು ಬಾಗಿಲು, ಕಿಟಕಿಗಳನ್ನೆಲ್ಲ ಮುಚ್ಚಿ ಆ ಪೊಟ್ಟಣ ತೆರೆದರು. ಅದರಲ್ಲಿ ಇಪ್ಪತ್ತು ಸಾವಿರ ರೂಪಾಯಿಗಳಿದ್ದವು. ರಂಗಪ್ಪ ಕಣ್ಣು ಮುಚ್ಚಿ ನಿಟ್ಟುಸಿರುಬಿಟ್ಟರು. ಅದು ಹತಾಶೆಯ ನಿಟ್ಟು ಸಿರೋ? ನೆಮ್ಮದಿಯ ನಿಟ್ಟುಸಿರೋ?ಅಂತ ಅವರಿಗೇ ಖಚಿತವಾಗಲಿಲ್ಲ.

(ಅಪ್ರಕಟಿತ ಕೃತಿಯೊಂದರ ಪ್ರೇರಣೆ)

ಗೋಪಾಲಗೌಡರ ಶಿಷ್ಯನಾಗಿ
ಗುರುತಿಸಿಕೊಳ್ಳುವುದೇ ಒಂದು ಹೆಮ್ಮೆ.

ಗೋಪಾಲಗೌಡರಾದರೂ ಅಷ್ಟೇ, ಜೇಬಿನಲ್ಲಿ ಒಂದು
ಪೈಸೆ ಇಟ್ಟುಕೊಳ್ಳದಿದ್ದರೂ ಹೋರಾಟದ ಕೆಚ್ಚು
ನೋಡಬೇಕು. ಅವತ್ತು ಅದನ್ನೆಲ್ಲ ನೋಡುತ್ತಾ,

ನೋಡುತ್ತಾ, ಹೋರಾಟಗಳ ಪರಂಪರೆಯನ್ನು
ಮುಂದುವರಿಸುತ್ತಾ, ಆಹಾ ಎಂತಹ ದಿನಗಳು ಅವು?

ಬೆಂಗಳೂರು ಡೈರಿ , ಆರ್.ಟಿ.ವಿಠ್ಠಲಮೂರ್ತಿ 

Tags:
error: Content is protected !!