ಜನಪರ ವ ಕ್ತಿ; ಚಳವಳಿಗಳ ಸಂಗಾತಿ
ಡಾ.ಕೆ.ಕರಿಸ್ವಾಮಿ
ಜೇಪಿ ಎಂದೇ ಹೆಸರಾಗಿರುವ ಬಂಜಗೆರೆ ಜಯಪ್ರಕಾಶ್ ಅವರ ಹೆಸರನ್ನು ಕೇಳಿದಾಕ ಣ, ಸಮಾಜದ ಎಲ್ಲಾ ಘಟಕಗಳನ್ನು ಮಾನವೀಯ ನೆಲೆಯಲ್ಲಿ ಬೆಸೆಯಲು ಸದಾ ತುಡಿಯುವ ರೂಪಕವೊಂದು ಮನದಲ್ಲಿ ಹೊಳೆಯುತ್ತದೆ.
ಸೃಜನಶೀಲ ಬರೆಹಗಾರ, ಸಂಶೋಧಕ, ಅಂಕಣಕಾರ, ಅನುವಾದಕರಾಗಿ ಸಾಹಿತ್ಯಲೋಕದಲ್ಲಿ ಗಟ್ಟಿಯಾಗಿ ಗುರುತಿಸಿಕೊಂಡಿರುವ ಬಂಜಗೆರೆಯವರು, ಸಂಸ್ಕ ತಿ ಚಿಂತಕರಾಗಿ ಸಾಮಾಜಿಕ ಹೋರಾಟಗಾರರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಸದಾ ಇರುವ ಜನಪರ ವ್ಯಕ್ತಿ; ಚಳವಳಿಗಳ ಸಂಗಾತಿ. ತಮ್ಮ ಅಗಾಧ ಓದು ಮತ್ತು ಬಹುಜನರ ಒಡನಾಟಗಳಿಂದ ರೂಪಿತಗೊಂಡಿರುವ ಜೇಪಿಯವರು ತನ ಆಳವಾದ ಮತ್ತು ವಿದ ತ್ಪೂರ್ಣ ಗ್ರಹಿಕೆ ಮತ್ತು ಅಭಿವ್ಯಕ್ತಿಗಳಿಂದ ಸದಾ ಕ್ರಿಯಾಶೀಲವಾಗಿರುವ ಸಾಮಾಜಿಕ ವ್ಯಕ್ತಿತ್ವವುಳ್ಳವರು. ಮಾತನಾಡುವುದಕ್ಕಿಂತ ಹೆಚ್ಚು ಕೇಳುವ ಗುಣದ ಜೇಪಿ ಅವರು ಸಮಾಜದ ಕಟ್ಟಕಡೆಯ ಮನುಷ್ಯನ ಸಂಕಟಗಳಿಗೆ ಮಿಡಿಯುವ, ಸಾಮಾಜಿಕ ಸಂವೇದನೆಗಳಿಗೆ ಅಪ್ಪಟ ಮನುಷ್ಯನಂತೆ ಸ್ಪಂದಿಸುವವರು.
ನನಗೆ ತಿಳಿದಿರುವಂತೆ, ಜೇಪಿ ಅವರು ತಮಗೆ ಸರಿ ಅನಿಸಿದ್ದನ್ನು ಅದು ಸಣ್ಣದು-ದೊಡ್ಡದು ಎಂಬುದನ್ನು ಯಾವುದೇ ಲೆಕ್ಕಾಚಾರದ ದೃಷ್ಟಿಯಿಂದ ನೋಡದೆ ಮಾಡಿಬಿಡುವ ಅನನ್ಯ ಗುಣದ ಕಾರಣದಿಂದ ಬಹುಜನರ ಪ್ರೀತಿಗೆ ಪಾತ್ರರಾಗಿರುವ ಲೋಕಪ್ರಿಯ ವ್ಯಕ್ತಿ. ಜೇಪಿಯವರ ಜೊತೆಗಿನ ಒಂದು ಘಟನೆಯೊಂದನ್ನು ನೆನಪಿಸಿಕೊಳ್ಳುವುದಾದರೆ, ನಾನಾಗ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಸಹಾಯಕ ಸಂಪಾದಕನಾಗಿ ಕೆಲಸ ಮಾಡುತ್ತಿದ್ದೆ. ಒಂದು ದಿನ ಇದ್ದಕ್ಕಿದ್ದಂತೆ ಜೇಪಿಯವರ ಫೋನ್ ಕಾಲ್ ಬಂತು. ಅತ್ತ ಕಡೆಯಿಂದ ಮಾತನಾಡುತ್ತಿದ್ದ ಜೇಪಿಯವರು, ಹಾರೋಹಳ್ಳಿ ಕಡೆಯ ವಿಜಯ ಕರ್ನಾಟಕದ ಬಿಡಿ ಸುದ್ದಿಗಾರನನ್ನು ಯಾವುದೋ ಮೂಗರ್ಜಿಯ ಕಾರಣದಿಂದ ತೆಗೆದು ಹಾಕಿದ್ದು, ಅವರನ್ನು ಮರುಸೇರ್ಪಡೆ ಮಾಡಿಕೊಳ್ಳಬಹುದೆ ಎಂದು ಕೇಳಿದ್ದರು. ಅವರ ಸಾಮಾಜಿಕ ಮತ್ತು ಸಾಂಸ್ಕ ತಿಕ ಬದ್ಧತೆಗಳ ಕುರಿತು ಬಲ್ಲವನಾಗಿದ್ದ ನಾನು ಮರು ಮಾತನಾಡದೆ, ಸಂಬಂಽಸಿದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆ ವರದಿಗಾರರನ್ನು ಅವರ ಮರು ಸೇರ್ಪಡೆ ಮಾಡಿಕೊಂಡೆ. ಅವರು, ಅಂತಹ ಸಣ್ಣ ಕೆಲಸಕ್ಕೆ ತಾವ್ಯಾಕೆ ಫೋನ್ ಮಾಡಬೇಕು ಎನ್ನಬಹುದಿತ್ತೆನೋ, ಆದರೆ ಅದು ಜೇಪಿಯವರ ಜಾಯಮಾನವಲ್ಲ. ಆದರೆ ಆ ಒಂದು ಸಣ್ಣ ಕೆಲಸವನ್ನು ಸಿಕ್ಕಾಗಲೆಲ್ಲ ಸ್ಮರಿಸಿ ಧನ್ಯವಾದ ಹೇಳುವಷ್ಟು ಅಗಾಧ ನೆನಪಿನ ಮತ್ತು ಕೃತಜ್ಞ ವ್ಯಕ್ತಿತ್ವ ಅವರದು.
‘ಆನು ದೇವ ಹೊರಗಣವನು’ ಕೃತಿಯ ಕುರಿತ ಮೆಚ್ಚುಗೆ, ಪ್ರತಿರೋಧಗಳೇನೇ ಇರಲಿ ಆದರೆ, ಆ ಕೃತಿಯ ಮೂಲಕ ಅವರು ಹುಟ್ಟುಹಾಕಿದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕ ತಿಕ ಲೋಕದ ತಲ್ಲಣಗಳಿಗೆ ಅದರದೇ ಆದ ವಿಶಿಷ್ಟತೆ ಇದೆ. ಇತ್ತೀಚೆಗಷ್ಟೇ ನಡೆದ ಮುಖ್ಯವಾಹಿನಿಗೆ ನಕ್ಸಲರ ಸೇರ್ಪಡೆಯ ಪ್ರಕ್ರಿಯೆಯಲ್ಲಿ ಜೇಪಿಯವರು ವಹಿಸಿದ ಪಾತ್ರ ಬಹು ದೊಡ್ಡದು. ಈ ಪ್ರಕ್ರಿಯೆಯ ಹಿಂದೆ ಅನೇಕ ವ್ಯಕ್ತಿ ಮತ್ತು ಸಂಘಟನೆಗಳು ಕೆಲಸ ಮಾಡಿದ್ದರೂ ಅವುಗಳನ್ನೆಲ್ಲಾ ಬೆಸೆದು ಮುಂದಕ್ಕೊಯ್ಯುವ ಸೂತ್ರದಾರ ರೊಬ್ಬರ ಅಗತ್ಯವನ್ನು ಜೇಪಿ ಪೂರೈಸಿದರು. ವ್ಯಕ್ತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಚಳವಳಿಗಳ ಸ್ವರೂಪಗಳಲ್ಲಿನ ಸೂಕ್ಷಗಳನ್ನು ಅರ್ಥ ಮಾಡಿಕೊಂಡು ನೆಲದ ಕಾನೂನಿನ ಚೌಕಟ್ಟಿನೊಳಗೆ ಸಂಬಂಧಿಸಿದವರೊಡನೆ ವ್ಯವಹರಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ನಿರ್ಧಾರಕ್ಕೆ ಬರುವುದು ಅಂದುಕೊಂಡಷ್ಟು ಸುಲಭವಲ್ಲ. ಇಂತಹ ಸೂಕ್ಷ ಪ್ರಕ್ರಿಯೆಗಳಿಗೆ ಪ್ರತಿಸ್ಪಂದಿಸಲು ಘನವಾದ ವ್ಯಕ್ತಿತ್ವವುಳ್ಳವರ ಅಗತ್ಯ ಯಾವಾಗಲೂ ಇರಬೇಕಾಗುತ್ತದೆ.
ಅಂತಹ ಕಾಲದ ಅಗತ್ಯವನ್ನು ಕಾಲಕಾಲಕ್ಕೆ ಜೇಪಿಯಂತಹವರು ಮಾತ್ರ ಪೂರೈಸಲು ಸಾಧ್ಯ. ನಾನು ಗಮನಿಸಿದಂತೆ, ನಮ್ಮ ಕಾಲದ ಬಹುತೇಕ ಸಾಮಾಜಿಕ ಮತ್ತು ಸಾಂಸ್ಕ ತಿಕ ನಾಯಕರಲ್ಲಿರುವ ಸಮಾಜವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ವರ್ತಿಸುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾರ್ವತ್ರಿಕ ಗುಣವನ್ನು ಜೇಪಿಯವರು ಸೂಕ್ತವಾಗಿಯೇ ಕಾಲಕಾಲಕ್ಕೆ ಪ್ರಕಟಿಸಿದ್ದಾರೆ. ಸ್ವತಃ ಹಿಂದುಳಿದ ಬುಡಕಟ್ಟು ಜಾತಿಯೊಂದರಲ್ಲಿ ಹುಟ್ಟಿರುವ ಜೊತೆಗೆ ನಮ್ಮ ಭಾರತೀಯ ಸಂದರ್ಭದ ಸಾಮಾಜಿಕ ವ್ಯಾಕರಣವನ್ನು ಸಮಷ್ಟಿಯಿಂದ ಗ್ರಹಿಸಿರುವ ಜೇಪಿ ಅವರದು ದನಿ ಇಲ್ಲದವರ ದನಿಯಾಗಿ ಕೆಲಸ ಮಾಡುತ್ತಲೇ ಇರುವ ಕಾಯಕ. ಆದ್ದರಿಂದಲೇ ಜೇಪಿ ಎಂದರೆ ಭಾಷೆ – ಗಡಿಗಳನ್ನು ದಾಟಿ ಮಿಡಿವ ಜನರಿದ್ದಾರೆ.
ಸಮಾಜದಲ್ಲಿನ ಸಾಮಾಜಿಕ ಮತ್ತು ಆರ್ಥಿಕ ವ್ಯತ್ಯಾಸ/ ತಾರತಮ್ಯಗಳ ನಡುವಿನ ದಟ್ಟ ಗೆರೆಯನ್ನು ಸ್ಪಷ್ಟವಾಗಿ ಗುರುತಿಸಿಕೊಂಡಿರುವ ಜೇಪಿ ಅದಕ್ಕೆ ತಕ್ಕಂತೆ ಸಾಮಾಜಿಕ ನ್ಯಾಯದ ಚೌಕಟ್ಟಿನ ನೆಲೆಯಲ್ಲಿ ಮಿಡಿಯುತ್ತಾರೆ. ಹಾಗಾಗಿ ತುಳಿತಕ್ಕೊಳಗಾದವರ ಕುರಿತ ಅವರ ನೈಸರ್ಗಿಕ ನ್ಯಾಯ ಯಾವಾಗಲೂ ಕಣದಲ್ಲಿರುವವರ ಪೈಕಿ ದುರ್ಬಲರ ಪರವಾಗಿರುತ್ತದೆ. ಇದಕ್ಕೆ ಅವರು ಕಾಲಕಾಲಕ್ಕೆ ಅನೇಕ ವಿಷಯಗಳ ಕುರಿತು ಎತ್ತಿರುವ ದನಿಯೇ ಸಾಕ್ಷಿ. ಸ್ವತಃ ಚಳವಳಿಗಳಲ್ಲಿ ಭಾಗವಹಿಸಿ ಅವುಗಳ ಸಾಧಕ-ಬಾಧಕಗಳನ್ನು ಅರಿತಿರುವ, ಕೇಸುಗಳನ್ನು ಎದುರಿಸಿರುವ ಜೇಪಿಯವರು ಯಾವುದೇ ಚಳವಳಿ ಮತ್ತು ಸಾರ್ವಜನಿಕ ಚರ್ಚೆಗಳಿಗೆ ಘನತೆ ತರಬಹುದಾದಂತಹವರು. ಇಂತಹ ಮಾತುಗಳು ಅವರಿಗೆ ಮುಜಗರ ತರಬಹುದಾದರೂ ಕಾಲದ ತಕ್ಕಡಿಯಲ್ಲಿ ಈ ವಿಷಯವಾಗಿ ಅವರಿಗೆ ಘನವಾದ ಸ್ಥಾನ ಇದ್ದೇ ಇರುತ್ತದೆ ಎಂಬುದನ್ನು ವಿನಮ್ರವಾಗಿ ದಾಖಲಿಸಲು ಇಚ್ಛಿಸುತ್ತೇನೆ.
ಜೇಪಿಯವರ ನಿಷ್ಠುರತೆ ಕುರಿತು ಹೇಳಬೇಕೆಂದರೆ, ನಕ್ಸಲ್ ನಾಯಕ ವಿಕ್ರಂ ಗೌಡ ಅವರ ಎನ್‌ಕೌಂಟರ್ ನಡೆದ ಸಂದರ್ಭದಲ್ಲಿ ಜೇಪಿ ಅವರು ಅದನ್ನು ಖಂಡಿಸಿ ನೀಡಿದ ದಿಟ್ಟ ಹೇಳಿಕೆ ಕರ್ನಾಟಕ ಸರ್ಕಾರದ ನಿಲುವನ್ನೇ ಬದಲಿಸಿಬಿಟ್ಟಿತು. ಇಲ್ಲದಿದ್ದರೆ ಬಹುಶಃ ಈಗ ಶರಣಾಗಿರುವ ನಕ್ಸಲರ ಒಂದೊಂದೇ ಹೆಣಗಳು ಈ ಹೊತ್ತಿಗೆ ಉರುಳಿರುತ್ತಿದ್ದವು. ಈ ನಿಟ್ಟಿನಲ್ಲಿ ನಕ್ಸಲರ ಶರಣಾಗತಿಯ ಪ್ರಕ್ರಿಯೆ ನಡೆಯಲು ಪೂರ್ವಭಾವಿಯಾಗಿಯೂ ಜೇಪಿಯವರು ವಹಿಸಿದ ಪಾತ್ರ ಬಹು ದೊಡ್ಡದು.
ಇನ್ನು ಜೇಪಿ ಅವರ ಸಂಪಾದಿತ ಕೃತಿಗಳ ಕುರಿತು ಹೇಳಬಹುದಾದರೆ, ಡಾ. ಮರುಳಸಿದ್ದಪ್ಪ ಅವರ ಪ್ರಧಾನ ಸಂಪಾದಕತ್ವದಲ್ಲಿ, ಎಡ್ಗರ್ ಥರ್ಸ್ಟನ್/ರಂಗಾಚಾರಿಯವರ ‘ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟುಗಳು’ ಎಂಬ ಏಳು ಸಂಪುಟಗಳ ಅಮೂಲ್ಯ ಕೆಲಸ ಬೆಲೆ ಕಟ್ಟಲಾಗದ್ದು. ಭಾರತಾದ್ಯಂತ ಜಾತಿ ಜನಗಣತಿ ಕುರಿತ ಚರ್ಚೆಗಳು ಮುಗಿಲು ಮುಟ್ಟಿರುವ ಈ ಸಂದರ್ಭದಲ್ಲಿ ಭಾರತದಂತಹ ದೇಶದ ಸಾಮಾಜಿಕ ಸಂದರ್ಭಗಳು ಮತ್ತು ಏಣಿ-ಶ್ರೇಣಿಗಳನ್ನು ಅರ್ಥ ಮಾಡಿಕೊಳ್ಳಲು ಜಾತಿ ಮತ್ತು ಬುಡಕಟ್ಟುಗಳ ಕುರಿತ ಅಧ್ಯಯನಗಳು ಎಷ್ಟು ಮುಖ್ಯ ಎಂಬುದನ್ನು ಈ ಸರಣಿಗಳು ಸಾರುತ್ತವೆ.
” ಬಂಜಗೆರೆ ಜಯಪ್ರಕಾಶ್ (ಜೇಪಿ) ಅವರು ಅರವತ್ತನೇ ವರ್ಷಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ, ಇದನ್ನೇ ನೆಪ ಮಾಡಿಕೊಂಡು ಅವರ ಎಲ್ಲ ಸ್ತರದ ಕೆಲಸಗಳನ್ನೂ ಕುರಿತು ನೆನಪು ಮಾಡಿಕೊಳ್ಳುವ, ಅವಲೋಕಿಸುವ ಇಡೀ ದಿನದ ಕಾರ್ಯಕ್ರಮ ಫೆಬ್ರವರಿ ೧೧, ೨೦೨೫ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆಯಾಗಿದೆ.”