Mysore
22
overcast clouds

Social Media

ಮಂಗಳವಾರ, 27 ಜನವರಿ 2026
Light
Dark

ನಾ ಕಂಡ ಗುರೂಜಿ : ಕೆಲವು ನೆನಪುಗಳು 

ಇಂದು ಸಂಗೀತ ದಿಗ್ಗಜ ದಿ.ರಾಜೀವ ತಾರಾನಾಥ್‌ರ ೯೦ನೇ ಹುಟ್ಟುಹಬ್ಬ 

ಮೂವತ್ತಾರು ವರ್ಷಗಳ ಕಾಲ ಒಬ್ಬ ಗುರುವಾಗಿ, ತಂದೆಯಾಗಿ, ತಾಯಿಯಂತೆಯೇ ಅಕ್ಕರೆ ಕಾಳಜಿ ತೋರಿ ನನ್ನ ಬದುಕನ್ನು ರೂಪಿಸಿಕೊಟ್ಟವರು ಮೇರು ವ್ಯಕ್ತಿತ್ವದ ಪಂಡಿತ ರಾಜೀವ ತಾರಾನಾಥರು.

ನಾನು ಪಂಡಿತ ರಾಜೀವ ತಾರಾನಾಥರನ್ನು ಮೊಟ್ಟಮೊದಲ ಬಾರಿ ಭೇಟಿ ಮಾಡಿದ ಘಟನೆ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆ. ೧೯೮೮ರಲ್ಲಿ ನಾನು ಓದು ಮುಂದುವರಿಸಲು ಅಮೆರಿಕಾಗೆ ಹೋಗಲು ಸಿದ್ಧಳಾಗಿದ್ದೆ. ನನ್ನ ಇಂಗ್ಲಿಷ್ ಪ್ರೊಫೆಸರ್ ಟಿ.ಜಿ.ವೈದ್ಯನಾಥನ್ ಅವರಿಂದ ಒಂದು recommendation letter ತೆಗೆದುಕೊಳ್ಳಲು ಅವರ ಮನೆಗೆ ಹೋಗಿದ್ದೆ. ಅಲ್ಲಿ ಎಂದಿನಂತೆ Freud ಸಾಹಿತ್ಯ, ಸಿನೆಮಾಗಳ ಚರ್ಚೆ ಜೋರಾಗಿ ನಡೆದಿತ್ತು. ಸಣ್ಣ ಕಿಟಕಿಗಳ, ಮಧ್ಯಾಹ್ನದಲ್ಲೂ ಬೆಳಕಿರದ, ಆ ಕೋಣೆಯಲ್ಲಿ ಮಾತಿನ ಮಿಂಚು ಹರಿದಾಡುತ್ತಿತ್ತು. ಧೂಮಲೀಲೆಯ ಹಿಂದೊಂದು ಪ್ರಖರ ಬೆಳಕು! ಗುರುಗಳು ಮಾತನಾಡುತ್ತಿದ್ದರೆ, ಸಾಮಾನ್ಯವಾಗಿ ಬೇರೆಯವರು ಕೇಳುತ್ತಾ ಕುಳಿತುಕೊಳ್ಳುವುದು ಪರಿಪಾಠ. ನಾನೂ, ಎಲ್ಲರೂ ಕೇಳುತ್ತಿದ್ದೆವು.

ಮಧ್ಯೆ ಮಧ್ಯೆ TGV ಪ್ರಶ್ನೆಗಳು. ರಾಜೀವರ ವಿಚಾರಧಾರೆ, ಅರಿವಿನ ಹರವು, ಮಾತಿನ ಶೈಲಿ, ಎಲ್ಲಾ ತುಂಬಾ ವಿಶಿಷ್ಟ. ಸಂಗೀತ, ಸಾಹಿತ್ಯ ಎರಡೂ ತುಂಬಿದ್ದ ಮನೆಯಿಂದ ಬಂದ ನನಗೆ ಈ ವ್ಯಕ್ತಿಯ ಬಗ್ಗೆ ಆಗಲೇ ಗೊತ್ತಿತ್ತು. ಇಂಗ್ಲಿಷ್ ಸಾಹಿತ್ಯ ಓದುತ್ತಿದ್ದ ನನಗೆ ಸಂಗೀತದ ಬಗ್ಗೆಯೂ ತುಂಬಾ ಆಸಕ್ತಿ. ನಮ್ಮ ತಂದೆಗೆ ಸರೋದ್ ಕಲಿಯಬೇಕು ಅನ್ನುವ ಆಸೆ ಇತ್ತಂತೆ. ಆದರೆ,  ಅದು ಸಾಧ್ಯವಾಗದೆ ಆ ಕನಸು ಹಾಗೆ ಉಳಿದಿತ್ತು. ಯಾವುದೇ ಸಂಗೀತ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದರೆ ನನ್ನನ್ನು ಮನೆಯ ಜನ ಕರೆದುಕೊಂಡು ಹೋಗುತ್ತಿದ್ದರು. ಹೀಗೆ, ಸಣ್ಣವಳಿದ್ದಾಗ ಗುರುಗಳು, ಅವರ ಗುರುಗಳಾದ ಉಸ್ತಾದ್ ಅಲಿ ಅಕ್ಬರ್ ಖಾನ್ ಸಾಹೇಬ್ ಅವರೊಂದಿಗೆ ನುಡಿಸಿದ ಕಛೇರಿ ಕೂಡ ಕೇಳಿದ್ದೆ. ಆ ಬೆರಗು ವರ್ಷಗಳ ನಂತರ ಹಾಗೇ ಉಳಿದಿತ್ತು.

ಇದನ್ನು ಓದಿ: ಅವರವರ ಭಾವಕ್ಕೆ, ಅವರವರ ಭಕ್ತಿಗೆ, ಅವರವರ ಶಕ್ತಿಗೆ, ಅವರವರ ಸಾಹಸಕೆ… 

ಆ ದಿನ, TGV ಮನೆಯಲ್ಲಿ ಮಾತು ಸಾಹಿತ್ಯದಿಂದ ಸಂಗೀತದ ಕಡೆಗೂ ಹೊರಳಿತ್ತು. TGVಯವರು ತಮಿಳಿನಲ್ಲಿ ಹೇಳಿದ ಮಾತು ‘ರಾಜೀವ್ ನೀ ವಾಶಿಕರ ಮಾರಿಯೇ ಪೇಶ್ರೆ, ಪೇಶ್ರೆ ಮಾರಿಯೇ ವಾಶಿಕ್ರೆ’ (ರಾಜೀವ್, ನೀನು ನುಡಿಸುವ ಹಾಗೇ ಮಾತನಾಡ್ತಿಯಾ, ಮಾತನಾಡುವ ಹಾಗೇ ನುಡಿಸ್ತಿಯಾ) ಎಂದು, ಅವರ ಮಾತು, ನುಡಿಸಾಣಿಕೆ ಎರಡರ brilliance ಅನ್ನೂ ಕುರಿತು ಹೇಳಿದ್ದು. ಚರ್ಚೆ, ಮಾತು ಮುಗಿದಿತ್ತು. ಅಪರೂಪದ ರಾಜೀವರ ಮಾತಿನ ಮಾಯೆ ಇನ್ನೂ ನಮ್ಮನ್ನೆಲ್ಲಾ ದಟ್ಟವಾಗಿ ಅವರಿಸಿತ್ತು. ಆರಡಿಯ ಆಜಾನುಬಾಹು ಎದ್ದು ನಿಂತರು. ನಾನು ಇದ್ದಕ್ಕಿದ್ದಂತೆ ಕೇಳಿಯೇ ಬಿಟ್ಟೆ. ‘ನೀವು ನನಗೆ ಸರೋದ್ ಹೇಳಿಕೊಡ್ತೀರಾ?’. ಒಂದು ಕ್ಷಣ ಸುಮ್ಮನಿದ್ದ ರಾಜೀವರು, ‘ಆಯ್ತು, ನಾನು ಸ್ವಲ್ಪ ಯೋಚಿಸಬೇಕು. ನಿನ್ನಲ್ಲಿ ಕಲಿಯೋ ಶಿಸ್ತು, ಸ್ವರಜ್ಞಾನ ಎಲ್ಲಾ ಎಷ್ಟಿದೆ ನೋಡಬೇಕು. ನಾಳೆ ಬೆಳಿಗ್ಗೆ ನಮ್ಮ ಮನೆಗೆ ಬಂದು ಭೇಟಿ ಮಾಡು’ ಎಂದರು.

ಆ ಕ್ಷಣ ಅಮೆರಿಕಾ, ಎಲಿಯಟ್, MA ಮನಸಿನಿಂದ ಹಾರಿ ಹೋಗಿದ್ದವು. ಸರೋದಿನ ಮಾಂತ್ರಿಕ ಶಕ್ತಿ ನನ್ನನ್ನು ಆವರಿಸಿತ್ತು. ಆಮೇಲೆ, ನನ್ನ ಹಿತೈಷಿಗಳು, ಕೆಲವು ಹಿರಿಯರು, ಪ್ರೊಫೆಸರುಗಳು ನನ್ನನ್ನು ಎಷ್ಟೋ ತಡೆಯಲು ನೋಡಿದ್ದರು. ಆದರೆ, ನನ್ನ ನಿರ್ಧಾರ ಗಟ್ಟಿಯಾಗಿತ್ತು. ಮಾರನೇ ದಿನ, ಬೆಳಿಗ್ಗೆ ೫.೩೦ಕ್ಕೆ ಬಸವನಗುಡಿಯ ನಮ್ಮ ಮನೆಯ ಹತ್ತಿರವೇ ಜಯನಗರದಲ್ಲಿದ್ದ ಗುರುಗಳ ಮನೆಗೆ ಹೆದರಿಕೆ, ಅಷ್ಟೇ ಕಾತರ, ಏನೋ ಉತ್ಸಾಹದಿಂದ ಹೊರಟೆ. ಜಯನಗರದ ಒಂದನೇ ಬ್ಲಾಕ್‌ನ ಹಳೇ ಮನೆ ಗುರೂಜಿಯವರ ತಾಯಿ ಸುಮತಿಬಾಯಿ ಕಟ್ಟಿಸಿದ್ದು. ಗುರೂಜಿ ಎಷ್ಟೋ ಸಲ ಮನೆ ಬದಲಾಯಿಸಿದ್ದಾರೆ. ಪ್ರತಿಯೊಂದು ಮನೆಯಲ್ಲೂ ಅವರ ಮಾತು, ಸಂಗೀತ, ಜನರ ಬಗ್ಗೆ ಇಟ್ಟಿದ್ದ ಪ್ರೀತಿ ಎಲ್ಲಾ ತುಂಬಿರುತ್ತಿತ್ತು. ಈಗ, ನಾನಿರುವ ಮನೆಯಲ್ಲೂ ಹಾಗೆ. ಇಲ್ಲಿರುವ ಪ್ರತಿಯೊಂದು ವಸ್ತುವೂ ಅವರನ್ನು ನೆನಪಿಸುತ್ತದೆ. ನಾನು ಮೊದಲು ಸರೋದ್ ಕಲಿಯಲು ಶುರು ಮಾಡಿದ ದಿನಗಳು, ಆ ಘಟನೆಗಳು ನನ್ನ ಮೇಲೆ ಗಾಢವಾದ ಪರಿಣಾಮ ಬೀರಿವೆ. ಇವತ್ತಿವರೆಗೂ, ಗುರೂಜಿ ನನಗೆ ಮೊದಲ ದಿನ ಹೇಳಿದ ಮಾತುಗಳು ನೆನಪಾಗುತ್ತವೆ. “ನಾನು ನಿನಗೆ ಒಂದು ಸರೋದ್ ಕೊಟ್ಟು ಹೇಗೆ ನುಡಿಸಬೇಕು

ಅಂತ ಹೇಳ್ತೀನಿ. ಆ ಸಣ್ಣ ರೂಮಿನಲ್ಲಿ ಕೂತು practice  ಮಾಡು. ನಾನು ಕರೆದಾಗ ಮಾತ್ರ ಹೊರಗೆ ಬಾ‘’. ಅವರು ಹೇಳಿ ಕೊಟ್ಟಿದ್ದು ಭೈರವ್ ರಾಗದ scale  – ‘ಸರೆ ಗ ಮ ಪದನೆ ಸ-ಸನೆದಪ ಮ ಗ ರೆ ಸ’… ಇಷ್ಟೇ… ಇದನ್ನು ನಾನು ಗಂಟೆಗಟ್ಟಲೆ ನುಡಿಸುತ್ತಲೇ ಇದ್ದೆ. ನನಗೆ ಸ್ವರಜ್ಞಾನ ಇತ್ತು. ನುಡಿಸುತ್ತಿದ್ದೆ. ಒಂದೋ, ಎರಡೊ ಗಂಟೆ ಆದ ಮೇಲೆ ಕರೆಯುತ್ತಿದ್ದರು, ಊಟ ಹಾಕುತ್ತಿದ್ದರು. ಅಮೇಲೆ ಮಾತಾನಾಡುತಿದ್ದರು. ಆದರೆ ಆ ಎರಡು ಗಂಟೆಗಳ ಕಾಲ ನಾನು ಏಕೆ ಬರೀ ‘ಸ ರಿ ಗ ಮ ಪ ದ ನೆ ಸ’ ಬಾರಿಸುತ್ತಿದ್ದೆ ಎಂದು ಬಹಳ ಯೋಚನೆ ಮಾಡುತ್ತಿದ್ದೆ. ನಂತರ ಅರ್ಥ ಆಯಿತು. ಇದು ಶಿಸ್ತಿನ ಪಾಠ ಎಂದು. ಹತ್ತು ದಿನಗಳ ನಂತರ ಕರೆದು ಹೇಳಿದರು ‘ಇವತ್ತಿಂದ ನೀನು ನನ್ನ ಶಿಷ್ಯೆ’. ಅದು ನನ್ನ ಜೀವನದ ಬಹಳ ಮುಖ್ಯ ದಿನ. ನಾನು ಹತ್ತು ವರ್ಷ ಸರೋದ್ ಕಲಿತೆ.

ಇದನ್ನು ಓದಿ: ಕಬ್ಬಿಗೆ ಗೊಣ್ಣೆ ಹುಳು ಬಾಧೆ: ಇಳುವರಿ ಕುಸಿತ

ಅದಾದ ಮೇಲೆ, ನನಗೆ ಒಂದು ಸಣ್ಣ break ಬೇಕು ಅನ್ನಿಸಿತು. ಎರಡು ವರ್ಷ ಅಮೆರಿಕಾಗೆ ಹೋಗಿಬರಬೇಕು ಎಂದು ನಿರ್ಧರಿಸಿದೆ. ಅಮೆರಿಕದಲ್ಲಿ ಎಂ.ಎ. ಮಾಡಲು ಹೊರಟೆ. ಆದರೆ ಎಷ್ಟೋ ವರ್ಷಗಳು ಅಲ್ಲೇ ಉಳಿದುಬಿಟ್ಟೆ. ಮತ್ತೆ ನಾನು ಸರೋದ್ ನುಡಿಸಲಿಲ್ಲ. Practice ಮಾಡಲಾಗಲಿಲ್ಲ. ಇದು ನನ್ನ loss. ಗುರುಗಳಿಗೆ ಅದರ ಬಗ್ಗೆ ಕೊನೆಯವರೆಗೂ ಬೇಜಾರಿತ್ತು. ಕೊನೆಕೊನೆಗೆ ಅವರು ಅಸ್ಪತ್ರೆಯಲ್ಲಿದ್ದಾಗ ನಾನು promise ಮಾಡಿದ್ದೆ. ‘ನೀವ್ ಮನೆಗೆ ವಾಪಸ್ ಬನ್ನಿ. ನಾನು ಮತ್ತೆ ಸರೋದ್ ನುಡಿಸ್ತೀನಿ’ ಎಂದು ಅವರು ಹಿಂತಿರುಗಿ ಬರಲಿಲ್ಲ.

ಗುರೂಜಿಯವರ ಎಷ್ಟೋ ಮಾತು ಮತ್ತೆ ಮತ್ತೆ ಮರುಕಳಿಸಿ ನೆನಪಾಗುತ್ತವೆ. ‘ಸಂಗೀತದ ಬಗ್ಗೆ ಮಾತನಾಡಬಾರದು. ಸಂಗೀತ ನುಡಿಸಬೇಕು’ ಎಂದು ಹೇಳುತ್ತಿದ್ದರು. ಒಂದು ವಾದ್ಯ, ರಾಗ, ತಾಳದ ಸಾಧ್ಯತೆಗಳನ್ನು ಎಷ್ಟರ ಮಟ್ಟಿಗೆ ವಿಸ್ತರಿಸಬಹುದು ಅನ್ನುವುದು ನಮ್ಮ creativityಯನ್ನು ಅವಲಂಬಿಸಿದೆ. ಅದನ್ನು ಅತ್ಯಂತ ಪರಿಣಾಮಕಾರಿ ಯಾಗಿ ಮಾಡಿ  ತೋರಿಸಿದವರು ಗುರುಗಳು, ಗಾಯಕಿಯಾಗಲಿ, ಲಯಕಾರಿಯಾಗಲಿ ಅವರ ಕೈಯಲ್ಲಿ ನುಡಿದ ಹಾಗೆ ಬೇರೆಯವರ ಕೈಯಲ್ಲಿ ನಾನು ಕೇಳಿಸಿಕೊಂಡಿಲ್ಲ. ಗುರೂಜಿಯವರನ್ನು ನೆನೆಯುತ್ತಾ ಹೋದರೆ ಸಾವಿರಾರು ನೆನಪುಗಳು. ಗುರೂಜಿಯಂತಹ ವ್ಯಕ್ತಿ ಒಂದು ಶತಮಾನದಲ್ಲಿ ಒಬ್ಬರು ಹುಟ್ಟಬಹುದು.

(ಮೂಲ: ‘ಹೇಳತೀನಿ ಕೇಳಾ’ ಮಾಲಿಕೆಯ ನುಡಿನಮನ ಕಾರ್ಯಕ್ರಮ)

” ಗುರುಗಳು ನನಗೆ “model’ ಆಗಿ ಮಾರ್ಗದರ್ಶನ ಮಾಡಿದ್ದು ಸಾಹಿತ್ಯದ ಬಗ್ಗೆ. ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ಯು.ಆರ್.ಅನಂತಮೂರ್ತಿ, ಚಂದ್ರಶೇಖರ ಕಂಬಾರರು ತಾವು ಏನೇ ಬರೆದರೂ ಗುರುಗಳಿಗೆ ತೋರಿಸಿ ಅವರು ಸೈ ಅಂದ ಮೇಲೆ publish ಮಾಡುತ್ತಿದ್ದರು”

-ಕೃಷ್ಣಾ ಮನವಳ್ಳಿ

Tags:
error: Content is protected !!