ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಸುಪ್ರಸಿದ್ದ ಯಾತ್ರಾಸ್ಥಳ ಹಾಗೂ ಹುಲಿ ಸಂರಕ್ಷಿತ ಪ್ರದೇಶವಾದ ಬಿಳಿಗಿರಿರಂಗನಬೆಟ್ಟದ ವ್ಯಾಪ್ತಿಯಲ್ಲಿ ತಲತಲಾಂತರಗಳಿಂದ ವಾಸವಾಗಿರುವ ಬುಡಕಟ್ಟು ಸೋಲಿಗರು ತಮಗೆ ದೊರೆತಿರುವ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹಿಂದಿನ ಸರ್ಕಾರ ಬೆಟ್ಟದಲ್ಲಿರುವ ಸೋಲಿಗರಿಗೆ ವ್ಯವಸಾಯಕ್ಕೆ ಭೂಮಿ ಮಂಜೂರು ಮಾಡಿರುವ ಬಗ್ಗೆ ಮೂಲ ದಾಖಲೆಗಳಿಲ್ಲ ಎಂಬ ಕಾರಣವೊಡ್ಡಿ ಅರಣ್ಯ ಇಲಾಖೆಯು ಸುಮಾರು ೨೫ ಸೋಲಿಗ ಕುಟುಂಬಗಳ ಭೂಮಿಯನ್ನು ಕಂದಾಯ ಭೂಮಿ ಪಟ್ಟಿಯಿಂದ ಕೈಬಿಟ್ಟು ತಮ್ಮ ವಶಕ್ಕೆ ಪಡೆಯಲು ಮುಂದಾಗಿದೆ. ಅರಣ್ಯ ಇಲಾಖೆಯ ಈ ನಡೆ ಸೋಲಿಗರಲ್ಲಿ ಆತಂಕ ಸೃಷ್ಟಿಸಿದ್ದು ಹೋರಾಟದ ಹಾದಿ ಹಿಡಿಯುವಂತೆ ಮಾಡಿದೆ.
ಬಿಳಿಗಿರಿರಂಗನ ಬೆಟ್ಟದಲ್ಲಿ ೧೯೬೩ ರಲ್ಲಿ ಸೋಲಿಗರು ಮತ್ತು ಇತರೆ ಸಮುದಾಯದ ೯೫ ಕುಟುಂಬಗಳಿಗೆ ೪೩೫ ಎಕರೆ ಭೂಮಿಯನ್ನು ಅಂದಿನ ರಾಜ್ಯ ಸರ್ಕಾರ ಮಂಜೂರು ಮಾಡಿತ್ತು. ಇದರಲ್ಲಿ ೨೫ ಸೋಲಿಗರ ಕುಟುಂಬಗಳ ಜಮೀನುಗಳನ್ನು ಇಲ್ಲಿಯ ತನಕ ಪಕ್ಕಾ ಪೋಡಿ ಮಾಡಿಲ್ಲ. ಇದರಿಂದಾಗಿ ಸರ್ಕಾರದ ಸವಲತ್ತು ಪಡೆಯಲು ಸೋಲಿಗರಿಗೆ ತೊಂದರೆಯಾಗಿದೆ. ಇದನ್ನು ಮನಗಂಡ ಬೆಟ್ಟದ ನಿವಾಸಿ ಸೋಮಣ್ಣ ಎಂಬುವರು ೨೦೨೧ರಲ್ಲಿ ಲೋಕಾಯುಕ್ತರಿಗೆ ದೂರು ನೀಡಿ ಬೆಟ್ಟದಲ್ಲಿರುವ ಕಂದಾಯ ಭೂಮಿಯನ್ನು ಪಕ್ಕಾ ಪೋಡಿ ಮಾಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ನೋಟಿಸ್ ನೀಡಿ ಪಕ್ಕಾ ಪೋಡಿ ಮಾಡಿ ಸಂಬಂಧಪಟ್ಟವರ ಹೆಸರಿಗೆ ಹಕ್ಕು ಬಾಧ್ಯತೆ ನೀಡಬೇಕೆಂದು ಸೂಚಿಸಿತ್ತು. ಆದ್ದರಿಂದ ಕಂದಾಯ ಮತ್ತು ಅರಣ್ಯ ಇಲಾಖೆಗಳು ಬೆಟ್ಟದ ವ್ಯಾಪ್ತಿಯ ಕಂದಾಯ ಭೂಮಿಯನ್ನು ಜಂಟಿ ಸರ್ವೆ ನಡೆಸಿ ಪಕ್ಕಪೆೀಡಿ ಮಾಡುತ್ತಿವೆಫ. ಈ ಭೂಮಿಯನ್ನು ಸರ್ವೆ ಸಂಖ್ಯೆ ೧,೨,೩,೪ ಎಂದು ವಿಂಗಡಿಸಲಾಗಿದೆ. ಸರ್ವೆ ಸಂಖ್ಯೆ ೧,೨,೩ರ ನಕಾಶೆ ತಯಾರಿಸಲಾಗಿದೆ. ೨೫ ಸೋಲಿಗ ಕುಟುಂಬಗಳಢ ಭೂಮಿಯನ್ನು ಮಾತ್ರ ಸರ್ವೆ ಸಂಖ್ಯೆ ೪ ಎಂದು ಪ್ರತ್ಯೇಕಿಸಿ ಕಂದಾಯ ಭೂಮಿಯಿಂದ ಹೊರಗಿಡುವ ನಿರ್ಧಾರವನ್ನು ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದ ಡಿಎಫ್‌ಒ ಮತ್ತು ಜಿಲ್ಲಾಧಿಕಾರಿ ಹಂತದಲ್ಲಿ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ದಿ ಸಂಘದ ಮುಖಂಡರು ಆರೋಪಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೆ ಸೋಲಿಗರಿಗೆ ಭೂಮಿ ಮಂಜೂರು ಮಾಡಿರುವುದಕ್ಕೆ ಕಂದಾಯ ಇಲಾಖೆಯಿಂದ ಮೂಲ ದಾಖಲೆಗಳಿಲ್ಲ. ಆದ್ದರಿಂದ ಅವರಿಗೆ ಅರಣ್ಯ ಹಕ್ಕು ಕಾಯ್ದೆ ೨೦೦೬ ರಡಿ ಜಮೀನು ನೀಡಲಾಗುವುದು ಎಂದು ಹೇಳುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಯಾದರೆ ನ್ಯಾಯಾಲಯದಲ್ಲಿ ಮಾನ್ಯತೆ ಸಿಗುವುದಿಲ್ಲ. ಸರ್ಕಾರಿ ಸವಲತ್ತು ಪಡೆಯಲು ಸಾಧ್ಯವಾಗದು. ಆದ್ದರಿಂದ ಸೋಲಿಗರ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಬೇಕು ಎಂಬುದು ಸೋಲಿಗ ಮುಖಂಡರ ಆಗ್ರಹ. ಬಿಳಿಗಿರಿರಂಗನಬೆಟ್ಟ ಗ್ರಾಮ ವ್ಯಾಪ್ತಿಯ ಯರಕನಗದ್ದೆ, ಸೀಗೆಬೆಟ್ಟ, ಬಂಗ್ಲೆಪೆೀಡು ಹಾಗೂ ಇತರೆ ಪೆೀಡುಗಳಲ್ಲಿ ಆದಿವಾಸಿ ಸೋಲಿಗರು ಶತಮಾನಗಳಿಂದ ವಾಸಿಸುತ್ತಿದ್ದಾರೆ. ಈ ಬಿಳಿಗಿರಿಯ ಬನದಲ್ಲಿ ರಂಗನಾಥಸ್ವಾಮಿಯ ಪ್ರತಿಷ್ಠಾಪನೆಗೂ ಮೊದಲೇ ಆದಿವಾಸಿಗಳು ನೆಲೆಸಿದ್ದರು. ೧೯೬೧-೬೨ರಲ್ಲಿ ಸೋಲಿಗರ ಕೃಷಿ ಕಾಲೋನಿಗಳಿಗೆ ಜಮೀನು ಮಂಜೂರಾಗಿರುವ ಪತ್ರಗಳು ಹಾಗೂ ಆರ್ಟಿಸಿಗಳು ಇವೆ. ಆದರೂ ಅಧಿಕಾರಿಗಳು ಮೂಲ ದಾಖಲೆಗಳಿಲ್ಲ ಎಂದು ಹೇಳುವುದೇಕೆ ? ದಾಖಲಾತಿಗಳನ್ನು ಇಟ್ಟುಕೊಳ್ಳಬೇಕಾದುದು ಯಾರ ಜವಾಬ್ದಾರಿ. ಹಾಗಾದರೆ ಹಿಂದಿನ ರಾಜ್ಯ ಸರ್ಕಾರ ಸೋಲಿಗರಿಗೆ ಭೂಮಿ ಮಂಜೂರು ಮಾಡಿದ್ದು ಸುಳ್ಳೇ. ಈ ಭೂಮಿಯಲ್ಲಿ ಸೋಲಿಗ ಕುಟುಂಬಗಳು ೪೦ ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವುದು ಸುಳ್ಳೇನು ಎಂಬುದು ಸೋಲಿಗ ಮುಖಂಡರ ಪ್ರಶ್ನೆಯಾಗಿದೆ.
ಬೆಟ್ಟದಲ್ಲಿ ಭೂಮಿ ನೀಡುವುದಾದರೆ ಎಲ್ಲರಿಗೂ ಕಂದಾಯ ಜಮೀನು ನೀಡಬೇಕು. ಇಲ್ಲದಿದ್ದರೆ ಎಲ್ಲರಿಗೂ ಅರಣ್ಯಹಕ್ಕು ಕಾಯ್ದೆಯಡಿ ಜಮೀನು ನೀಡಬೇಕು. ತಾರತಮ್ಯ ನೀತಿ ಅನುಸರಿಸಬಾರದು. ಸೋಲಿಗರ ಜಮೀನುಗಳನ್ನು ಅರಣ್ಯ ಇಲಾಖೆಯು ಕಿತ್ತುಕೊಂಡು ಬೆಟ್ಟದಲ್ಲಿ ಭೂಮಿ ಹೊಂದಿರುವ ಸ್ಥಳೀಯ ಹಾಗೂ ಹೊರಗಿನ ಪ್ರಭಾವಿಗಳ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಲು ಮುಂದಾಗಿದೆ. ಇಂತಹ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಬಾರದು ಸೋಲಿಗರನ್ನು ಸಂಕಷ್ಟಕ್ಕೆ ನೂಕಬಾರದು. ಸರ್ಕಾರಗಳು ಸಂರಕ್ಷಿತಾರಣ್ಯಗಳಲ್ಲಿ ಹಿಂದೆ ಖಾಸಗಿಯವರಿಗೆ ರೆಸಾರ್ಟ್ ಪ್ರಾರಂಭಿಸಲು ಭೂಮಿ ನೀಡಿ ಅನುಮತಿ ಕೊಟ್ಟಿಲ್ಲವೇ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಇಂತಹದ್ದೆಲ್ಲ ನಡೆದಿದೆ. ಶತಮಾನಗಳಿಂದ ವಾಸಿಸುವ ಸೋಲಿಗರ ಮೇಲೇಕೆ ಅಧಿಕಾರಿಗಳಿಗೆ ಕಣ್ಣು. ನಾವು ಕಾಡಿನ ಮಕ್ಕಳು ಪ್ರಾಣಿ, ಪಕ್ಷಿ, ಮರ, ಗಿಡಗಳ ಜೊತೆ ಬದುಕುತ್ತಿದ್ದೇವೆ. ಕಾಡಿನ ಸಂರಕ್ಷಣೆ ಮಾಡುತ್ತಿದ್ದೇವೆ. ನಮಗೆ ಮಂಜೂರಾಗಿರುವ ಭೂಮಿಗೆ ದಾಖಲೆಗಳಿಲ್ಲ ಎಂದು ಹೇಳುವುದು ಎಷ್ಟು ಸರಿ. ಸೋಲಿಗ ಕುಟುಂಬಗಳು ವ್ಯವಸಾಯ ಮಾಡುವ ಭೂಮಿಯನ್ನು ಸಕ್ರಮಗೊಳಿಸಿ ಕಂದಾಯ ಭೂಮಿಯಾಗಿ ಪರಿವರ್ತಿಸಬಾರದೇಕೆ ? ಪ್ರಭಾವಿಗಳಂತೆ ನಾವೇನು ಭೂಮಿ ಒತ್ತುವರಿ ಮಾಡಿಲ್ಲ. ಸರ್ಕಾರ ನೀಡಿದ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದೇವೆ. ಫಸಲು ಸಹ ಕಾಡು ಪ್ರಾಣಿಗಳ ಪಾಲಾಗುತ್ತಿದೆ ಇಂತಹ ಪರಿಸ್ಥಿತಿಯಲ್ಲಿ ಜೀವನ ನಿರ್ವಹಣೆಯೇ ಕಷ್ಟವಾಗಿರುವಾಗ ಇರುವ ಭೂಮಿಯನ್ನು ಕಿತ್ತುಕೊಳ್ಳಲು ಮುಂದಾಗುವುದು ಸರಿಯಲ್ಲ. ಸಂಬಂಧಪಟ್ಟವರು ಸೋಲಿಗರ ಭೂಮಿಯನ್ನು ಸಕ್ರಮಗೊಳಿಸಿ ಪಕ್ಕಾ ಪೋಡಿ ಮಾಡಿ ಅವರ ಹೆಸರಿಗೆ ದಾಖಲೆಗಳನ್ನು ನೀಡಬೇಕು. ಅವರು ಸಹ ಸರ್ಕಾರಿ ಸವಲತ್ತುಗಳನ್ನು ಪಡೆದು ಅರಣ್ಯದೊಳಗೆ ನಾಗರೀಕರಂತೆ ಬದುಕಲು ಅವಕಾಶ ಮಾಡಿಕೊಡಬೇಕಿದೆ.