Mysore
22
overcast clouds

Social Media

ಶುಕ್ರವಾರ, 22 ಮೇ 2026
Light
Dark

ಏಕ ಪರದೆಯ ಚಿತ್ರಮಂದಿರ ಅಸ್ತಿತ್ವ , ಚಿತ್ರಗಳ ಪ್ರದರ್ಶನ, ನಿರ್ಮಾಣ ಮಿತವ್ಯಯ ಇತ್ಯಾದಿ

ವೈಡ್‌ ಆಂಗಲ್‌ 

ಬಾ.ನಾ.ಸುಬ್ರಹ್ಮಣ್ಯ 

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಭಾನುವಾರ ವಿಚಾರಸಂಕಿರಣವೊಂದನ್ನು ಹಮ್ಮಿಕೊಂಡಿದೆ. ಕನ್ನಡ ಚಿತ್ರರಂಗದ ಸಮಸ್ಯೆಗಳತ್ತ ಪಕ್ಷಿನೋಟ ಬೀರಬಹುದಾದ ಈ ವಿಚಾರಸಂಕಿರಣ ನಡೆಸುವ ನಿರ್ಧಾರ ಆಗುತ್ತಿದ್ದಂತೆ ಬೇರಬೇರೆ ಗುಂಪುಗಳಲ್ಲಿ ಅಪಸ್ವರಗಳೂ ಅಲ್ಲಲ್ಲಿ ಪ್ರಕಟವಾದವು. ಈಗ ಯಾರು ಯಾವಾಗ ಏನು ಬೇಕಾದರೂ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಮುಂತಾದ ಜಾಗಗಳಲ್ಲಿ ಮನಸೋ ಇಚ್ಛೆ ಹೇಳಿಕೊಳ್ಳಬಹುದು, ಬರೆಯಬಹುದು! ಇಲ್ಲೂ ಹಾಗಿತ್ತು.

ಅದರಲ್ಲೆಲ್ಲ ಮುಖ್ಯವಾಗಿ ಪ್ರಸ್ತಾಪ ಆದ ವಿಷಯ ಎಂದರೆ, ಸರ್ಕಾರದಿಂದ ಸಹಾಯಧನ ಕೊಡಿಸಲು ವಾಣಿಜ್ಯ ಮಂಡಳಿ ಮುಂದಾಗಬೇಕು ಎನ್ನುವುದು. ೨೦೧೯, ೨೦೨೦, ೨೦೨೧ರ ಸಾಲಿನ ಸಹಾಯಧನ ಮತ್ತು ಪ್ರಶಸ್ತಿಗಳ ಆಯ್ಕೆ ಆಗಿದೆ. ಸಹಾಯಧನಕ್ಕೆ ಆಯ್ಕೆಯಾದ ಚಿತ್ರಗಳ ನಿರ್ಮಾಪಕರಲ್ಲಿ ಕೆಲವರು ಈಗಾಗಲೇ ಪಡೆದಿದ್ದು, ಉಳಿದವರಿಗೆ ಸಿಗಬೇಕಷ್ಟೆ. ೨೦೨೦ ಮತ್ತು ೨೦೨೧ರ ಸಾಲಿನ ಪ್ರಶಸ್ತಿಪ್ರದಾನ ಕೂಡ ಆಗಬೇಕಿದೆ.

ಇನ್ನು ನಂತರದ ವರ್ಷಗಳು. ೨೦೨೨, ೨೦೨೩, ೨೦೨೪ ಮತ್ತು ೨೦೨೫ರ ಸಾಲಿಗೆ ಸಹಾಯಧನ ಮತ್ತು ಪ್ರಶಸ್ತಿ ಆಯ್ಕೆಗೆ ಚಿತ್ರಗಳನ್ನು ಕಳುಹಿಸಲು ಇನ್ನೂ ಸರ್ಕಾರ ಪ್ರಕಟಿಸಿಲ್ಲ. ಇಷ್ಟರಲ್ಲೇ ಆ ಪ್ರಕಟಣೆ ಆಗಲಿದೆ ಎನ್ನುತ್ತಿವೆ ಮೂಲಗಳು. ಈ ನಾಲ್ಕು ವರ್ಷಗಳಲ್ಲಿ ಕಡಿಮೆ ಎಂದರೂ ಸರಾಸರಿ ೨೫೦ರಂತೆ, ಒಂದು ಸಾವಿರ ಚಿತ್ರಗಳಾದರೂ ಸಹಾಯಧನ ಕೋರಿ ಅರ್ಜಿ ಸಲ್ಲಿಸಬಹುದು. ಅವುಗಳಲ್ಲಿ ವಾರ್ಷಿಕ ೧೨೫ರಂತೆ ೫೦೦ ಗುಣಮಟ್ಟದ ಚಿತ್ರಗಳು ಸಹಾಯಧನ ಪಡೆಯಬಹುದು. ಅದರಲ್ಲಿ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು, ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಚಿತ್ರೋತ್ಸವಗಳಲ್ಲಿ ಸ್ಪಽಸಿ, ಗೆದ್ದ ಚಿತ್ರಗಳು, ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾದ ಚಿತ್ರಗಳು ಸೇರುತ್ತವೆ.

ತಯಾರಾದ ಎಲ್ಲ ಚಿತ್ರಗಳಿಗೂ ಸಹಾಯಧನ ಸಿಗುತ್ತದೆ ಎಂದುಕೊಂಡಿರುವ ನಿರ್ಮಾಪಕರ ಸಂಖ್ಯೆಯೇ ಇಲ್ಲಿ ಹೆಚ್ಚು ಇದ್ದಂತಿದೆ. ಅವುಗಳ ಗುಣಮಟ್ಟವನ್ನು ಆಧರಿಸಿ ನೀಡಲಾಗುತ್ತದೆ ಎನ್ನುವ ವಿಷಯ ಅವರಿಗೆ ತಿಳಿದಿರುವಂತಿಲ್ಲ. ಹಾಗಾಗಿಯೇ ಈ ಒತ್ತಾಯ, ಒತ್ತಡ. ಚಲನಚಿತ್ರ ಮಾಧ್ಯಮದ ಪ್ರಾಥಮಿಕ ತಿಳಿವಳಿಕೆಯೂ ಇಲ್ಲದ ತಂತ್ರಜ್ಞರು, ಅದರ ವ್ಯವಹಾರದ ಗಂಧಗಾಳಿಯೂ ಇಲ್ಲದ ನಿರ್ಮಾಪಕರ ಸಂಖ್ಯೆ ಏರುತ್ತಿವೆ. ಹಾಗಾಗಿ ಚಿತ್ರಗಳ ನಿರ್ಮಾಣ ಸಂಖ್ಯೆ ಏರತೊಡಗಿದೆ. ಅವುಗಳ ಗುಣಮಟ್ಟ ಕುಸಿಯತೊಡಗಿದೆ ಎಂದು ಬೇರೆ ಹೇಳಬೇಕಾಗಿಲ್ಲ.

ಗಮನಿಸಿ. ಮೇ ತಿಂಗಳು ಇನ್ನೂ ಮುಗಿದಿಲ್ಲ. ಅದಾಗಲೇ ೧೦೩ ಕನ್ನಡ ಚಿತ್ರಗಳು ತೆರೆಕಂಡಿವೆ. ಜನವರಿ ತಿಂಗಳಲ್ಲಿ ೨೦, ೨೮ ದಿನಗಳಿರುವ ಫೆಬ್ರವರಿಯಲ್ಲಿ ೩೪, ಮಾರ್ಚ್ ತಿಂಗಳಲ್ಲಿ ೧೮, ಏಪ್ರಿಲ್‌ನಲ್ಲಿ ೨೨, ಮೇ ತಿಂಗಳ ಮೊದಲೆರಡು ವಾರಗಳಲ್ಲಿ ೯ ಹೀಗೆ ೧೦೩ ಚಿತ್ರಗಳು. ಇವುಗಳಲ್ಲಿ ‘ಲವ್ ಮಾಕ್‌ಟೈಲ್ ೩’ ಹೊರತಾಗಿ ಗೆದ್ದ ಚಿತ್ರಗಳು ಇಲ್ಲ. ಒಂದು ವೇಳೆ ಇದ್ದರೆ ಅದು ಕೆಲವು ಮಾಧ್ಯಮಗಳಲ್ಲಿ ಮಾತ್ರ ಎನ್ನುವ ಮಾತು ಸುಳ್ಳೇನೂ ಅಲ್ಲ ಮುಖ್ಯವಾಹಿನಿ ಮತ್ತು ಕಲಾತ್ಮಕ ಚಿತ್ರಗಳಲ್ಲಿ ಕಲಾತ್ಮಕ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುವುದು ಈ ದಿನಗಳಲ್ಲಿ ಕಷ್ಟಸಾಧ್ಯ, ಬದಲಾಗುತ್ತಿರುವ ಉದ್ಯಮದ ವ್ಯವಹಾರ ರೀತಿ, ಏಕಪರದೆಯ ಚಿತ್ರಗಳಿಗೆ ಇರುವ ಸಮಸ್ಯೆ, ವಿಕೇಂದ್ರೀಕರಣಗೊಂಡ ವಿತರಣಾ ವ್ಯವಸ್ಥೆ ಎಲ್ಲವೂ ಸೇರಿ, ಕಡಿಮೆ ವೆಚ್ಚದಲ್ಲಿ ತಯಾರಾದ ಗಂಭೀರ ಚಿತ್ರ ಪರಂಪರೆಗೆ ಕೊಡಲಿಯೇಟು ಹಾಕುತ್ತಿದೆ. ಈ ಬೆಳವಣಿಗೆ ಕರ್ನಾಟಕಕ್ಕೆ ಸೀಮಿತ ಆಗಿಲ್ಲ. ಎಲ್ಲ ಭಾರತೀಯ ಭಾಷಾ ಚಿತ್ರರಂಗದಲ್ಲೂ ಇರುವ ಸಮಸ್ಯೆ ಇದು.

ಇದಕ್ಕೆ ಸಂಬಂಧಪಟ್ಟಂತೆ ಆದ ಬೆಳವಣಿಗೆಯೊಂದರ ಸುದ್ದಿ ಕಾನ್ ಚಿತ್ರೋತ್ಸವದಿಂದ ಬಂದಿದೆ. ಅದು ಹೊಸ ಸಂಸ್ಥೆಯೊಂದರ ಸ್ಥಾಪನೆಯ ವರ್ತಮಾನ. ೧೨೦ಕ್ಕೂ ಹೆಚ್ಚು ಭಾರತೀಯ ಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರು ಭಾರತೀಯ ಸ್ವತಂತ್ರ ಚಲನಚಿತ್ರ ನಿರ್ಮಾತೃಗಳ ಸಂಘ ಸ್ಥಾಪಿಸಿದ ಸುದ್ದಿ. ದೇಶದಲ್ಲಿ ಸ್ವತಂತ್ರ ಸಿನಿಮಾಗಳಿಗೆ ಚಿತ್ರಮಂದಿರ ಒದಗಿಸುವ, ಹಂಚಿಕೆ ಮತ್ತು ಸ್ಟ್ರೀಮಿಂಗ್ ಅವಕಾಶಗಳನ್ನು ಕೊಡಮಾಡುವ ಗುರಿಯನ್ನು ಹೊಂದಿರುವ ಲಾಭರಹಿತ ಸಂಸ್ಥೆ ಇದು.

ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡರೂ, ಒಟಿಟಿ ತಾಣಗಳಲ್ಲಿ ಅವುಗಳ ಪ್ರದರ್ಶನಕ್ಕೆ ಅವಕಾಶ ಸಿಗದೆ ಇರುವ ಹಲವು ಚಿತ್ರಗಳಿವೆ. ಚಿತ್ರಮಂದಿರಗಳು ಸಿಗದ ಪ್ರಸಂಗಗಳಿವೆ. ಹಿಂದೆ ಗೋವಾದಲ್ಲಿ ನಡೆದಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡ ನಟ, ನಿರ್ಮಾಪಕ ನಿರ್ದೇಶಕ ರಿಷಭ್ ಶೆಟ್ಟಿ ಅವರು ಅಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇದೇ ವಿಷಯವನ್ನು ಪ್ರಸ್ತಾಪಿಸಿದ್ದರು. ಕೇಂದ್ರ ಸರ್ಕಾರ ಮುಂದೆ ಬಂದು ಇದಕ್ಕೆ ನೆರವಾಗಬೇಕು ಎಂದು ಅವರು ಒತ್ತಾಯಿಸಿದ್ದರು.

ಇದೀಗ ಸ್ಥಾಪನೆಯಾಗಿರುವ ಸಂಘದ ಸ್ಥಾಪಕ ಮಂಡಳಿಯಲ್ಲಿ ಆರತಿ ಕಡವ್, ಅಲಂಕೃತ ಶ್ರೀವಾಸ್ತವ, ಅಂಶುಮಾನ್ ಝಾ, ಬೌದ್ಧಾಯನ್ ಮುಖರ್ಜಿ, ದೇವಶಿಶ್ ಮಖಿಜಾ, ಹರ್ಷ್ ಅಗರ್ವಾಲ್, ಹನಿ ಟ್ರೆಹಾನ್, ಕಾನು ಬೆಹ್ಲ್, ಪಾರ್ಥ್ ಸೌರಭ್, ರುಚಿ ನರೈನ್ ಮತ್ತು ಸುಧಾಂಶು ಸರಿಯಾ, ನಟಿ, ನಿರ್ದೇಶಕಿ ನಂದಿತಾ ದಾಸ್ ಮತ್ತು ನಟ ಅಭಯ್ ಡಿಯೋಲ್ ಸೇರಿದಂತೆ ಇತರ ಚಲನಚಿತ್ರ ನಿರ್ದೇಶಕರು ಇದ್ದಾರೆ.

ಚಿತ್ರಮಂದಿರಗಳಲ್ಲಿ ತಮ್ಮ ಚಿತ್ರಗಳ ಬಿಡುಗಡೆಗೆ ಅವಕಾಶ ಸಿಗುತ್ತಿಲ್ಲ ಎನ್ನುವವರು ಒಂದೆಡೆಯಾದರೆ, ಚಿತ್ರದ ಪ್ರದರ್ಶನ ಸಮಯ ಪ್ರೇಕ್ಷಕರಿಗೆ ಅನುಕೂಲಕರವಾಗಿಲ್ಲದ ಸಂದರ್ಭಗಳೇ ಹೆಚ್ಚು ಎನ್ನುವ ದೂರೂ ಇದೆ. ಇದು ಬಹುತೇಕ ಬಿಡುಗಡೆಯಾಗುವ ಎಲ್ಲ ಕನ್ನಡ ಚಿತ್ರಗಳಿಗೂ ಅನ್ವಯವಾಗುವ ಮಾತು. ಚಿತ್ರವೊಂದರ ಬಿಡುಗಡೆಗೆ ಮುನ್ನ ಮಾಡಬೇಕಾದ ಪ್ರಚಾರವೂ ಆ ಚಿತ್ರ ನೋಡಲು ಪ್ರೇಕ್ಷಕ ಚಿತ್ರಮಂದಿರದತ್ತ ಬರುವಂತೆ ಮಾಡಲು ಸಹಕಾರಿ. ಡಿಜಿಟಲ್ ದಿನಗಳಿವು. ಸಾಮಾಜಿಕ ತಾಣಗಳ ಮೂಲಕ, ಇನ್‌ಫ್ಲುಯೆನ್ಸರ್‌ಗಳ ಮೂಲಕ ಮತ್ತಿತರ ಮಾಧ್ಯಮಗಳ ಮೂಲಕವೂ ಪ್ರಚಾರ ಮಾಡಬೇಕಾದ ಅಗತ್ಯ ಇದೆ. ಚಿತ್ರದ ಪ್ರಚಾರಕ್ಕಾಗಿ ಎಂದೇ ನಿರ್ಮಾಣವೆಚ್ಚದಲ್ಲಿ ಒಂದು ಭಾಗ ಸೇರಿಸಬೇಕಾದ ಅಗತ್ಯ ಇದೆ. ಅದು ಚಿತ್ರದಿಂದ ಚಿತ್ರಕ್ಕೆ ವ್ಯತ್ಯಾಸ ಆಗಬಹುದು.

ಮೊನ್ನೆ ನಿರ್ದೇಶಕ ಪವನ್ ಒಡೆಯರ್, ಸಂದರ್ಶನವೊಂದರಲ್ಲಿ ಪ್ರಚಾರದ, ಅದರ ವೆಚ್ಚದ ಕುರಿತಂತೆ ಮಾತನಾಡುತ್ತಿದ್ದರು. ಬಹುಕೋಟಿ ವೆಚ್ಚದ ಚಿತ್ರಗಳ ಪ್ರಚಾರಕ್ಕೆ ನಿರೀಕ್ಷಿಸುವ ಮೊತ್ತವನ್ನು ಸಣ್ಣಪುಟ್ಟ ಚಿತ್ರಗಳ ಪ್ರಚಾರಕ್ಕೆ ನಿರೀಕ್ಷಿಸುವುದರ ಕುರಿತು ಅವರ ಮಾತುಗಳಿದ್ದವು. ಹೊಸದಾಗಿ ಬಂದ ಈ ಮಂದಿಗೆ ಚಿತ್ರೋದ್ಯಮದ ಬೆಳವಣಿಗೆಯ ಕುರಿತಂತೆಯೂ ಗಮನ ಇರಬೇಕು ಎನ್ನುವುದ ಅವರ ಮಾತಿನ ಒಟ್ಟು ಸಾರವಾಗಿತ್ತು.

ಬಹುಪರದೆಯ ಚಿತ್ರಮಂದಿರಗಳು ಬರಲು ಆರಂಭಿಸಿದ ನಂತರ ಏಕಪರದೆಯ ಚಿತ್ರಮಂದಿರಗಳು ಹೆಚ್ಚು ಸಮಸ್ಯೆಗೆ ಈಡಾದಂತಿದೆ. ಹಿಂದೆ ೧,೨೦೦ಕ್ಕಿಂತ ಹೆಚ್ಚು ಏಕಪರದೆಯ ಚಿತ್ರಮಂದಿರಗಳಿದ್ದವು. ಈಗ ಆ ಸಂಖ್ಯೆ ಅದರ ಅರ್ಧಕ್ಕಿಂತಲೂ ಕಡಿಮೆ ಆಗಿದೆ ಎನ್ನಲಾಗಿದೆ. ಮಲ್ಟಿಪ್ಲೆಕ್ಸ್‌ಗಳಿವೆ. ಆದರೆ ಅವುಗಳಿಗೆ ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಆದ್ಯತೆ ನೀಡಬೇಕು ಎನ್ನುವುದೇನೂ ಇಲ್ಲ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಬಲವಾದ ಕಾನೂನು ಮಾಡಿಲ್ಲ. ಮಹಾರಾಷ್ಟ್ರದಲ್ಲಿ ಮರಾಠಿ ಚಿತ್ರಗಳ ಪ್ರದರ್ಶನಕ್ಕೆ ಅಲ್ಲಿನ ಚಿತ್ರಮಂದಿರಗಳು ಪ್ರಮುಖ ವೇಳೆ ನೀಡಬೇಕು. ಇಲ್ಲದೆ ಹೋದರೆ, ಅವುಗಳ ಲೈಸೆನ್ಸ್ ನವೀಕರಣ ಮಾಡುವುದಿಲ್ಲ. ಆದರೆ ಇಲ್ಲಿ ಕನ್ನಡ ಚಿತ್ರಗಳಿಗೆ ಸಂಬಂಧಪಟ್ಟಂತೆ ಅಂಥಹದೊಂದು ನಿಯಮವನ್ನು ಮಾಡಿ, ಕಟ್ಟುನಿಟ್ಟಾಗಿ ಜಾರಿಗೆ ತರಬಹುದು.

ಅದಕ್ಕೆ ಇಚ್ಛಾಶಕ್ತಿ ಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ಸರ್ಕಾರಗಳು ಸ್ಥಳೀಯ ಚಿತ್ರೋದ್ಯಮ ಬೆಳೆಯಲು ಪೂರಕವಾಗಿ ಕೆಲಸ ಮಾಡುತ್ತಿವೆ. ಕೇರಳದಲ್ಲಿ ಸದಭಿರುಚಿಯ ಉತ್ತಮ ಚಿತ್ರಗಳ ಪ್ರಸಾರ ಮಾಡಲು ಸರ್ಕಾರದ್ದೇ ಆದ ಒಟಿಟಿ ಎರಡು ವರ್ಷಗಳ ಹಿಂದೆ ಆರಂಭವಾಗಿದೆ. ನೆರೆಯ ತಮಿಳುನಾಡಿನಲ್ಲಿ ನಟ ವಿಜಯ್ ಮುಖ್ಯಮಂತ್ರಿ ಆಗುತ್ತಲೇ, ಅಲ್ಲಿನ ಚಿತ್ರೋದ್ಯಮಿಗಳು ಅವರನ್ನು ಭೇಟಿಯಾಗಿ ಶುಭಕೋರಿ ಚಿತ್ರೋದ್ಯಮಕ್ಕೆ ಪೂರಕ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಕಮಲಹಾಸನ್ ಅವರು, ಕೇರಳದಲ್ಲಿದ್ದಂತೆ ಸರ್ಕಾರವೇ ಒಟಿಟಿ ಆರಂಭಿಸಬೇಕು ಎಂದು ಕೋರಿದ್ದಾರೆ. ಚಿತ್ರನಿರ್ಮಾಣದ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಅವರೇ ಮೊದಲ ಹೆಜ್ಜೆ ಇಟ್ಟ ಸುದ್ದಿ ಸಾಕಷ್ಟು ವೈರಲ್ ಆಗಿದೆ. ಚಾರ್ಟರ್ಡ್ ಯಾನದ ಬದಲು ಅವರು ಚಿತ್ರೀಕರಣಕ್ಕೆ ಎಕಾನಮಿ ಕ್ಲಾಸಿನಲ್ಲಿ ಪ್ರಯಾಣ ಮಾಡಿದ್ದಾರೆ. ನಿರ್ಮಾಪಕರು ಇದು ಮಾದರಿ ಎಂದು ಅಭಿನಂದಿಸಿದ್ದಾರೆ.

ಚಿತ್ರನಿರ್ಮಾಣ ವೆಚ್ಚವನ್ನು ಕಡಿತಗೊಳಿಸಲು ಮೊದಲು ಜನಪ್ರಿಯ ನಟರು ತಮ್ಮ ಸಂಭಾವನೆಯನ್ನು ಇಳಿಸಬೇಕು ಎನ್ನುವ ಒತ್ತಾಯವನ್ನು ಎಲ್ಲ ಭಾಷೆಗಳ ನಿರ್ಮಾಪಕರೂ ಮಾಡುತ್ತಿದ್ದಾರೆ. ಇದರ ಜೊತೆ ಜೊತೆಯಲ್ಲೇ ಇತರ ನಿರ್ಮಾಣ ವೆಚ್ಚಗಳ ನಿಯಂತ್ರಣದ ಮಾತೂ ಕೇಳಿಬರುತ್ತಿದೆ. ಭಾರತದಾದ್ಯಂತ ಸುಮಾರು ೫,೦೦೦ದ ವರೆಗೆ ಏಕಪರದೆಯ ಚಿತ್ರಮಂದಿರಗಳಿದ್ದು, ಅವುಗಳಲ್ಲಿ ಪ್ರತಿಶತ ೭೦ ದಕ್ಷಿಣ ಭಾರತದಲ್ಲಿ ಇವೆ. ಪ್ರತಿ ವರ್ಷ ಅವರದೇ ಆದ ಸಮಸ್ಯೆಗಳ ಕಾರಣ ಕೆಲವು ಮುಚ್ಚುತ್ತವೆ. ಕೆಲವು ಚಿತ್ರಮಂದಿರಗಳು, ಜನಪ್ರಿಯ ನಟರ ಚಿತ್ರಗಳು ಬಂದಾಗ ಮಾತ್ರ ತೆರೆಯುತ್ತವೆ. ಕರ್ನಾಟಕದಲ್ಲಿ ಕೂಡ ಈ ಸ್ಥಿತಿ ಇದೆ. ನೆರೆಯ ತೆಲಂಗಾಣದಲ್ಲಿ ನಿಗದಿತ ಬಾಡಿಗೆಯ ಬದಲು ಗಳಿಕೆಯ ಆಧಾರದಲ್ಲಿ ಇಂತಿಷ್ಟು ಬಾಡಿಗೆ ನಿಗದಿಪಡಿಸಬೇಕು ಎಂದು ಅಲ್ಲಿನ ಪ್ರದರ್ಶಕರ ಸಂಘ ಒತ್ತಾಯಿಸುತ್ತಿದೆ. ಇಲ್ಲೂ ಆ ನಿಟ್ಟಿನಲ್ಲಿ ಮಾತುಕತೆಗಳು ಆಗುತ್ತಿವೆ. ಏಕಪರದೆಯ ಚಿತ್ರಮಂದಿರಗಳ ಉಳಿವು ಆಯಾ ರಾಜ್ಯಭಾಷೆಗಳ ಚಿತ್ರಗಳನ್ನು ಉಳಿಸಲು ಹೆಚ್ಚು ಸಹಕಾರಿ ಆಗಬಹುದು ಎನ್ನುವ ಮಾತು ನಿಜ ಎನಿಸುತ್ತಿದೆ. ಮಲ್ಟಿಪ್ಲೆಕ್ಸ್‌ಗಳ ಬದಲು ಏಕ ಪರದೆಯ ಚಿತ್ರಮಂದಿರಗಳನ್ನು ಹೆಚ್ಚು ಹೆಚ್ಚು ಕಟ್ಟಲು ಆಯಾ ಸರ್ಕಾರಗಳೂ ನೆರವಾಗಬೇಕು. ಕರ್ನಾಟಕ ಅದಾಗಲೇ ನೆರವಾಗುತ್ತಿದೆ.

” ಭಾರತದಾದ್ಯಂತ ಸುಮಾರು ೫,೦೦೦ದವರೆಗೆ ಏಕಪರದೆಯ ಚಿತ್ರಮಂದಿರಗಳಿದ್ದು, ಅವುಗಳಲ್ಲಿ ಪ್ರತಿಶತ ೭೦ ದಕ್ಷಿಣ ಭಾರತದಲ್ಲಿ ಇವೆ. ಪ್ರತಿ ವರ್ಷ ಅವರದೇ ಆದ ಸಮಸ್ಯೆಗಳ ಕಾರಣ ಕೆಲವು ಮುಚ್ಚುತ್ತವೆ. ಕೆಲವು ಚಿತ್ರಮಂದಿರಗಳು, ಜನಪ್ರಿಯ ನಟರ ಚಿತ್ರಗಳು ಬಂದಾಗ ಮಾತ್ರ ತೆರೆಯುತ್ತವೆ. ಕರ್ನಾಟಕದಲ್ಲಿ ಕೂಡ ಈ ಸ್ಥಿತಿ ಇದೆ.”

 

 

Tags:
error: Content is protected !!