Mysore
17
broken clouds

Social Media

ಮಂಗಳವಾರ, 14 ಜನವರಿ 2025
Light
Dark

ನಿನ್ನೆ ಮೊನ್ನೆ ನಮ್ಮ ಜನ : 1980ರ ಆರಂಭದ ದಿನಗಳು

ಸಾಲಗಾಮೆ ರೈತ ಜಾತಾ – ರಾಜ್ಯ ರೈತಸಂಘದ ಉದಯ 

 ರಸಗೊಬ್ಬರದ ಬೆಲೆ ಗಗನಕ್ಕೇರಿತ್ತು. ರೈತನ ಬೆಳೆಗಳ ಬೆಲೆ ಭೂಮಿಗಿಳಿದು ಪಾತಾಳಕಂಡಿತ್ತು. ಕಂಪನಿಗಳು  ತಯಾರಿಸುವ ಸೋಪು, ಸೀಗೇಪುಡಿ, ಸೈಕಲ್ಲು ಹೀಗೆ ಎಲ್ಲ ವಸ್ತುಗಳಿಗೂ ಬೆಲೆ ನಿಗದಿ ಪಡಿಸಿದ್ದಾರೆ. ಎಂಆರ್ ಪಿ ಫಿಕ್ಸ್ ಆಗಿದೆ. ಆದರೆ ರೈತ ಬೆಳೆದದ್ದಕ್ಕೆ ಮಾತ್ರ ಚೌಕಾಸಿ ಚೌಕಾಸಿ. ಅಸಲೂ ಹುಟ್ಟದ ದುಸ್ಥಿತಿ.

ಹಾಸನದ ಜೆ.ಪಿ. ಚಳುವಳಿಯ ಯುವಕರಲ್ಲಿ ಈ ಚರ್ಚೆ ಬಂತು. ಇದಕ್ಕೆ ಸ್ವಲ್ಪ ಸಮಯದ ಹಿಂದೆ ಸಮಾಜವಾದಿಗಳ ಚಿಂತನಾ ಶಿಬಿರ ಬೆಂಗಳೂರಿನಲ್ಲಿ ನಡೆದಿತ್ತು.

 ಹಿಂದಿನ ಹತ್ತು ವರ್ಷಗಳಿಂದ ವಿವಿಧ ಚಳುವಳಿಗಳ ಮೂಲಕ ಹೋರಾಟ ಮಾಡಿದ್ದವರು ಈ ಯುವಕರು. ಜೆ.ಪಿ. ಚಳುವಳಿಯೊಂದಿಗೆ ಮೂಢನಂಬಿಕೆಗಳ ವಿರುದ್ಧ ಹೋರಾಟ ಮತ್ತು ಸರಳ ವಿವಾಹಗಳನ್ನು ಹಳ್ಳಿ ಹಳ್ಳಿಗಳಲ್ಲಿ ಮಾಡಿಸುತ್ತಿದ್ದುದರಿಂದ ಅವರಿಗೆ ಹಳ್ಳಿಗರ ಬವಣೆ ಚೆನ್ನಾಗಿ ಗೊತ್ತಿತ್ತು. ಸರಳ ವಿವಾಹಗಳ ಅತ್ಯಗತ್ಯತೆ ಬಗ್ಗೆ ಮಾತಾಡುವಾಗ ಹಳ್ಳಿಗರ ನಾನಾ ಸಮಸ್ಯೆಗಳು ಬೆಳಕಿಗೆ ಬರುತ್ತಿದ್ದವು. ಎಷ್ಟೋ ಮಂದಿಗೆ ಸರಳ ಮದುವೆ ಮಾಡಲೂ ತತ್ವಾರವಿತ್ತು. ಇಷ್ಟಾದರೂ ರೈತನಿಗಾಗುತ್ತಿರುವ ಅನ್ಯಾಯ, ಆತನ ಮೇಲಾಗುತ್ತಿರುವ ದಬ್ಬಾಳಿಕೆ ದೌರ್ಜನ್ಯಗಳನ್ನು ಕೇಳುವವರೇ ಇಲ್ಲವಾಗಿದೆಯಲ್ಲಾ? ರೈತಾಪಿ ಜನರನ್ನು ಸಂಘಟಿಸಿ ಒಂದು ದೊಡ್ಡ ಜಾತಾ ತೆಗೆಯಬೇಕೆಂದು ನಿರ್ಣಯಿಸಿದರು.

 ಯಾವುದೇ ಜನಪರ  ಚಳವಳಿ ಬಲವತ್ತರವಾದ ಕಾರಣವಿಲ್ಲದೆ ಹುಟ್ಟದು.

 ೧೯೮೦ರ ಜೂನ್ ತಿಂಗಳಲ್ಲಿ ಸಮಾಜವಾದಿ ನಾಯಕರಾದ ಪ್ರೊ. ಎಂ.ಡಿ ನಂಜುಂಡಸ್ವಾಮಿ, ಕಿಶನ್ ಪಟ್ನಾಯಕ್, ಕೇಶವರಾವ್ ಜಾಧವ್ ಮುಂತಾದವರ ನಾಯಕತ್ವದಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ಸಮತಾ ಸಮಾವೇಶ ನಡೆದಿತ್ತು.

 ಈ ಸಮಾವೇಶದಲ್ಲಿ ಜೆ.ಪಿ. ಚಳವಳಿಯಲ್ಲಿ ಸಕ್ರಿಯರಾಗಿದ್ದ ಹಲವರು ಪಾಲ್ಗೊಂಡಿದ್ದರು. ಜೆ.ಪಿ ಚಳವಳಿ ನಗರಗಳಿಗೆ ಹೆಚ್ಚು ಸೀಮಿತವಾಗುತ್ತಿದೆ ಈ ದಿಶೆಯಲ್ಲಿ ಸಮಾಜವಾದಿಗಳು ಗ್ರಾಮಾಂತರ ಪ್ರದೇಶಗಳಿಗೆ ಹೋಗಿ  ರೈತರ ಸಮಸ್ಯೆ ಕೈಗೆತ್ತಿಕೊಂಡು ಕೆಲಸ ಮಾಡಬೇಕೆಂದೂ ನಿರ್ಧಾರ ಮಾಡಲಾಯಿತು. ಹಾಸನದ ಯುವಕರೆಲ್ಲ ಜೆಪಿ ಚಳವಳಿಯಲ್ಲಿದ್ದು  ಸ್ಫೂರ್ತಿ ಪಡೆದವರು. ಹೋರಾಟಕ್ಕೆಂದೇ ದೀಕ್ಷೆ ಪಡೆದಿದ್ದವರು.

 ಆದರೆ ಇವರು ಕರೆದರೆಂದು ರೈತರು ಬಂದಾರೆಯೇ? ಚರ್ಚಿಸುತ್ತಿದ್ದ ಯುವಕರೆಲ್ಲ ರೈತಾಪಿ ಕುಟುಂಬಗಳಿಂದ ಬಂದವರೇ ಆಗಿದ್ದರೂ ಎಲ್ಲರೂ ಹಾಸನ ಟೌನಿನಲ್ಲಿ ವಾಸವಾಗಿದ್ದವರು. ಯಾರೊಬ್ಬರೂ ಗ್ರಾಮವಾಸಿಗಳಲ್ಲ. ಎಲ್ಲಿಂದ ಮೆರವಣಿಗೆ ಶುರು ಮಾಡಬೇಕು? ರೈತ ಜಾತಾ ಹೊರಡಿಸುವುದಾದರೆ ಹಾಸನಕ್ಕೆ ಹತ್ತಿರವಿರುವ ಹಳ್ಳಿಗಳಿಂದ ಹೊರಟರೆ ಹೇಗೆ?

 ಅದೂ ಸಾಧ್ಯವಾಗುವಂತಿರಲಿಲ್ಲ. ಹಾಸನಕ್ಕೆ ಹತ್ತಿರದ ಹಳ್ಳಿಗಳ ರೈತರು ನಾನಾ ಪಕ್ಷಗಳ ಬಾಲದ ಚುಂಗು ಹಿಡಿದು ಓಡಾಡುತ್ತಿದ್ದರು. ಮನೆ ಹೆಂಗಸರನ್ನು ಜಮೀನಿನಲ್ಲಿ ದುಡಿಯಲು ಬಿಟ್ಟು ಕ್ಲಬ್ಬು ಬಾರು ಎಂದು ಚಂಗಲು ಬಿದ್ದಿದ್ದರು. ಅವರ್ಯಾರೂ ಆಸಕ್ತಿಯನ್ನೇ ತೋರಲಿಲ್ಲ.

 ಯುವ ಗೆಳೆಯ ಜುಂಡಿ ( ಎನ್. ಆರ್. ನಂಜುಂಡೇಗೌಡರು ನಂತರದಲ್ಲಿ ಸಂಕ್ರಾಂತಿ , ಹೆಬ್ಬೆಟ್ಟು ರಾಮಕ್ಕ, ಚುಕ್ಕಿ ಚಂದ್ರಮ, ನವತಾರೆ ಇತ್ಯಾದಿ ಚಿತ್ರಗಳ ನಿರ್ದೇಶಕರಾದರು)  ತನ್ನೂರು ಸಾಲಗಾಮೆಯಿಂದಲೇ ಸಂಘಟನೆ ಮಾಡೋಣವೆಂದ. ಅದಕ್ಕೂ ಮೊದಲು ಜೆ.ಪಿ. ಸಂಪೂರ್ಣ ಕ್ರಾಂತಿಯ ಪಾದಯಾತ್ರೆಯನ್ನು ಸಾಲಗಾಮೆಯಿಂದ ಹೊರಡಿಸಿದ್ದ ಅನುಭವವಿತ್ತು. ಜುಂಡಿ ಸುತ್ತಮುತ್ತಲ ಹಳ್ಳಿಗಳಲ್ಲಿ ನೂರಾರು ಸರಳ ವಿವಾಹಗಳನ್ನು ನಡೆಸಿ ಅಲ್ಲೆಲ್ಲ  ಚಿರಪರಿಚಿತನಾಗಿದ್ದ‌ ಯುವಕ .

ಈಗ ʼ ರೈತಕ್ರಾಂತಿʼ ಹೆಸರಿನಲ್ಲಿ ತನ್ನೂರು ಸಾಲಗಾಮೆಯಿಂದಲೇ ಮೊದಲಿಗೆ ರೈತರ ಸಂಘಟನೆ ಶುರು ಮಾಡೋಣವೆಂದ.  ಜನಜಾಗೃತಿ ನಗರ ಬಿಟ್ಟು  ಹಳ್ಳಿಗಳಿಂದ ಶುರುವಾಗಬೇಕು ಎಂಬ ಹಂಬಲ. ಗೆಳೆಯರೆಲ್ಲ ಜೈ ಅಂದರು.

 ಜನತಾ ಮಾಧ್ಯಮ ಪತ್ರಿಕೆಯ ಮಂಜುನಾಥ ದತ್ತ ಅಧ್ಯಕ್ಷರಾದರೆ, ಸಂಪಾದಕ ಆರ್.ಪಿ. ವೆಂಕಟೇಶಮೂರ್ತಿ ಸಂಚಾಲಕರಾದರು. ಯಾವ ದೊಡ್ಡ ಹೆಸರಿನ ವ್ಯಕ್ತಿಯೂ ಇಲ್ಲ. ಎಲ್ಲರೂ ಸ್ವಯಂ ಆಸಕ್ತಿಯ ಯುವಕರೇ. ಅವರಿಗೆ ಚಳುವಳಿಯೇ ನಾಯಕ. ಸುಮಾರು ಎಂಭತ್ತು ಹಳ್ಳಿಗಳಲ್ಲಿ ಸಂಘಟನೆ ಶುರು ಮಾಡಿದರು. ಈ ಕುರಿತು ಪತ್ರಿಕೆಯಲ್ಲಿ ಲೇಖನಗಳನ್ನು ಬರೆದರು. ಹನ್ನೆರಡರಿಂದ ಹದಿನೈದು ಸಾವಿರ ರೈತರ ಭಾರಿ ಜಾತಾ ಮಾಡಿದರೆ ರಾಷ್ಟ್ರದ ಗಮನ ಸೆಳೆಯಬಹುದು. ಗೊಬ್ಬರದ ಸಮಸ್ಯೆ ಇಡೀ ರಾಷ್ಟ್ರದ ಸಮಸ್ಯೆಯಾಗಿತ್ತು. ರೈತರ ನಾನಾ ಸಮಸ್ಯೆಗಳತ್ತ ಜನರಲ್ಲಿ ಜಾಗೃತಿ ಮೂಡಿಸಬಹುದು ಎಂಬ ಆಶಾಭಾವ.

ಕಲಾವಿದ ಕೆ.ಟಿ.ಶಿವಪ್ರಸಾದ್ , ಡಾ.ಹನುಮಂತೇಗೌಡ, ಯಮಸಂಧಿ ನಂಜೇಗೌಡ , ಹೆರಗಿನ ವಾಸುದೇವ್ , ಸಕಲೇಶಪುರದ ವಿಶ್ವನಾಥ್ (ಮುಂದೆ ಶಾಸಕರಾದರು) , ಕೆ.ಎಂ.ರಾಜೇಗೌಡ, ಪೀಟರ್ ಫಿಲಿಪ್, ಪ್ರಕಾಶ್ ಪಾಟೀಲ್, ಜಾನ್ ಗೊನ್ಸಾಲ್ಟೆಸ್ ಮುಂತಾದ ಯುವಕರು ಬರೋಬ್ಬರಿ ಎರಡು ತಿಂಗಳು ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಜಾತಾಗೆ ಬರುವಂತೆ ಮನವೊಲಿಸಿದ್ದರು.

 ರೈತರಿಗೂ ಅಚ್ಚರಿ. ಸಂಘಟನೆ ಮಾಡುತ್ತಿರುವ ಹುಡುಗರಾರೂ ಹಳ್ಳಿಗರಲ್ಲ. ರೈತಾಪಿ ಕುಟುಂಬಗಳಿಂದ ಬಂದವರಾದರೂ ಯಾರೊಬ್ಬರೂ ಗ್ರಾಮವಾಸಿಗಳಲ್ಲ. ಇವರ್ಯಾಕೆ ಓಡಾಡುತ್ತಿದ್ದಾರೆ? ಎಂಬ ಕೊಂಕು ಬೇರೆ. ಆದರೆ ರಸಗೊಬ್ಬರದ ಬೆಲೆ ವಿಪರೀತ ದುಬಾರಿಯಾಗಿದ್ದರಿಂದ ವಿಧಿ ಇಲ್ಲದೆ ಜಾತಾಗೆ ಬರುತ್ತೇವೆಂದರು.

 ಈ ಜಾತಾ ಕುರಿತಂತೆ ಪತ್ರಿಕೆಗಳಲ್ಲಿ ಕ್ಷೀಣವಾದ ವರದಿ ಬಂದವು. ಹಳ್ಳಿ ಗಮಾರರು ತೆಗೆಯುವ ಜಾತಾ? ಅದರಲ್ಲಿ ಏನಿದ್ದಾತು? ಆ ಕಾಲಕ್ಕೆ ಕಲ್ಪನೆಗೂ ನಿಲುಕದ ಸಂಗತಿ. ಅಂದಿನ ಪತ್ರಿಕೆಗಳಿಗಂತೂ ಸ್ವಾರಸ್ಯವಿಲ್ಲದ ಸುದ್ದಿ.

 ಆದರೆ ಹಳ್ಳಿಯ ಜನ ಲೇವಡಿಯನ್ನೂ ಮಾಡಲಿಲ್ಲ. ಅತಿಯಾದ ಆಸಕ್ತಿಯನ್ನೂ ತೋರಲಿಲ್ಲ.

 ೧೯೮೦ ರ ಜೂನ್ ೨೩ ರಂದು ರೈತರ ಜಾತಾ ಹೊರಡುವುದೆಂದು ದಿನ ನಿಗದಿಯಾಯಿತು. ಆ ದಿನ ಸೋಮವಾರ. ರೈತರಿಗೆ ಬಿಡುವಿನ ದಿನ. ಮೋಟಾರು ಬೈಕುಗಳಲ್ಲಿ ಹಳ್ಳಿಹಳ್ಳಿಗೆ ಯುವಕರು ಹೋಗಿ ರೈತರನ್ನು ವಿನಂತಿಸಿದರು. ನಿರೀಕ್ಷೆಯ ದಿನ ಹತ್ತಿರವಾಗುತ್ತಿತ್ತು. ಅಂಬೆಗಾಲಿನ ಆಂದೋಲನಕ್ಕೆ ದಿನಕ್ಕೊಂದು ಸ್ಫೂರ್ತಿ ಸಿಗುತ್ತಿತ್ತು. ರೈತರ ಸ್ಪಂದನೆ ಕಂಡು ಹೊಸದೊಂದು ಐಡಿಯಾ ಹೊಳೆಯಿತು.  ಮೆರವಣಿಗೆಗೆ ಮುನ್ನ ಸಾಲಗಾಮೆಯಲ್ಲಿ ಒಂದು ರೈತ ಜಾಗೃತಿ ಸಮಾವೇಶ ಮಾಡೋಣ. ಆಮೇಲೆ ಮೆರವಣಿಗೆ ತೆಗೆಯೋಣ ಎಂದು ನಿರ್ಧಾರವಾಯಿತು.

 ೧೯೮೦ರ ಜೂನ್ ೨೨ರಂದು ನಡೆದ ರೈತ ಸಮಾವೇಶವನ್ನು ಯುವ ವಕೀಲ ರವಿವರ್ಮ ಕುಮಾರ್  ಉದ್ಘಾಟಿಸಿದರು. ಆವರೆಗಿನ ಯುವಕರ ಮುಖ್ಯ ಕಾರ್ಯಕ್ರಮವಾಗಿದ್ದ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಒಂದು ಜೋಡಿಯ ಸರಳ ವಿವಾಹ ಕೂಡ ನಡೆಯಿತು.  ಈ ಸಮಾವೇಶದಲ್ಲಿ ಸುಮಾರು ೨೦೦೦ ರೈತರು ಭಾಗವಹಿಸಿದ್ದರು. ಸಾಲಗಾಮೆಯಲ್ಲೇ ಊಟದ ವ್ಯವಸ್ಥೆ ಮಾಡಿದ್ದರು. ನಾಳಿನ ಬೃಹತ್ ಮೆರವಣಿಗೆಗೆ ಹದಿನೈದು ಸಾವಿರ ರೈತರು ಬರುತ್ತಾರೆಂಬುದು ಖಾತ್ರಿಯಾಯಿತು.

 ಗ್ರಾಮೀಣ ಅಧ್ಯಯನಕ್ಕೆಂದು ಬೆಂಗಳೂರಿಗೆ ಬಂದಿದ್ದ ಅಂದಿನ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್ಯೂ) ವಿದ್ಯಾರ್ಥಿಗಳ ತಂಡ ಸಂಘಟನೆ ಮಾಡುತ್ತಿದ್ದ ಯುವಕರ ಜೊತೆ ಬೆರೆತು ಸಾಲಗಾಮೆಯ ಸುತ್ತಲಿನ ಹಳ್ಳಿಗಳಲ್ಲಿ ಅಧ್ಯಯನ ನಡೆಸಿತು. ರಾಜಕೀಯದ ಗಂಧಗಾಳಿ ಅರಿಯದ ಸಾವಿರಾರು ರೈತರು ತಾವಾಗಿ ಮೆರವಣಿಗೆ ಬರುತ್ತಾರೆಂಬುದು ಅವರಿಗೆಲ್ಲಾ ಅಚ್ಚರಿಯ ಸಂಗತಿ. ಎರಡು ವರ್ಷದ ಹಿಂದೆ ೧೯೭೯ ರಲ್ಲಿ ಪ್ರಧಾನಿ ಚರಣ್ ಸಿಂಗರ ಕಿಸಾನ್ ರ್ಯಾಲಿ ದೆಹಲಿಯಲ್ಲಿ ನಡೆದಿತ್ತು. ಆದರದು ಸರ್ಕಾರಿ ಪೋಷಿತವಾಗಿತ್ತು . ಇದು ರೈತರೇ ನಡೆಸುವ ಮೊದಲ ಮೆರವಣಿಗೆ. ದೇಶ ಕಂಡರಿಯದ್ದು. ಜೂನ್ ೨೨ರ ಬೃಹತ್ ರೈತ ಸಮಾವೇಶ ನೋಡಿ ಇತರ ಪತ್ರಿಕೆಯವರೂ ಹಿಂಡಾಗಿ ಬಂದರು.

 ಮಾರನೇ ದಿನ ಜೂನ್ ೨೩ರಂದು ಸೋಮವಾರ ಗಂಟೆ ಹತ್ತಾದರೂ ನಿರೀಕ್ಷಿತ ಸಂಖ್ಯೆಯಲ್ಲಿ ರೈತರ ಸಂದಣಿ ಸೇರಲಿಲ್ಲ. ಮೊದಲು ಎಂಟೂವರೆಗೆ ಬಂದಿದ್ದ ರೈತರೆಷ್ಟೋ ಅಷ್ಟೇ ಜನ. ನಿರೀಕ್ಷಿತ  ಹದಿನೈದು ಸಾವಿರದ ಬದಲಿಗೆ ಮೂರು ಸಾವಿರದಷ್ಟು ಜನ ಸೇರಿದ್ದರು. ಆ ಕಾಲಕ್ಕೆ ಅದೂ ದೊಡ್ಡ ಸಂಖ್ಯೆಯೇ. ತಮ್ಮ ಶ್ರಮಕ್ಕೆ ತಕ್ಕ ಜನ ಬರಲಿಲ್ಲವೆಂದು ಯುವಕರು ಪೆಚ್ಚಾದರು. ಹತ್ತೂವರೆಯಾದರೂ ಸಂಖ್ಯೆ ಏರಲಿಲ್ಲ. ಬಂದಿದ್ದವರಲ್ಲೂ ಒಂದಷ್ಟು ಜನ ಲೇಟಾಯಿತೆಂದು ವಾಪಸ್ ಹೊರಡುವವರಂತೆ ಆಡತೊಡಗಿದರು. ಜಾತಾ ಶುರು ಮಾಡದೆ ನಿರ್ವಾಹವಿರಲಿಲ್ಲ. ಜೆಪಿ ಚಳುವಳಿಯ ರೀತಿಯಲ್ಲೇ ಜಾತಾ ಹೋಗುವುದೆಂದು ಯುವಕರು ತೀರ್ಮಾನಿಸಿದ್ದರು. ಅಂತೆಯೇ ಹೊರಟಿತು.

ಹದಿನೈದು ಸಾವಿರಕ್ಕೂ ಹೆಚ್ಚು ಜನ ಸೇರುತ್ತಾರೆಂದು ಪ್ರಚಾರವಾಗಿದ್ದರಿಂದ ಜಿಲ್ಲೆಯ ನಾನಾ ಕಡೆಗಳಿಂದ ಪೊಲೀಸ್ ಅಧಿಕಾರಿಗಳನ್ನು ಬಂದೋಬಸ್ತಿಗೆ ಕರೆಸಲಾಗಿತ್ತು . ಹೊಳೆನರಸೀಪುರ ಠಾಣೆಯಲ್ಲಿದ್ದ ನಾನೂ ಮೆರವಣಿಗೆಗೆ ಬಂದಿದ್ದೆ.

 ಯಾವುದೇ ಘೋಷಣೆಗಳಿಲ್ಲ, ಮೈಕು ಪಟಾಕಿ ತಮಟೆಗಳ ಅಬ್ಬರವಿಲ್ಲ. ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು , ಇಬ್ಬರ ಸಾಲು ಮಾಡಿಕೊಂಡು ಮೌನ ಮೆರವಣಿಗೆ ಹೊರಟಿತು. ಅಷ್ಟೊಂದು ಜನ ರೈತರ ನಿಶ್ಶಬ್ದ ಸಾಲನ್ನು ಜನರು ಬೆಕ್ಕಸ ಬೆರಗಾಗಿ ನಿಂತು ನೋಡಿದರು.

(ಮುಂದುವರೆಯಲಿದೆ..)

Tags: