Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ದಲಿತ ಸಿಎಂ ಕನಸು; ಸಾಕಾರಕ್ಕೆ ಹಲವು ತೊಡಕು

parameshwar

ರಾಜಕೀಯ ಪಲ್ಲಟಗಳಲ್ಲಿ ಹಕ್ಕು ಪ್ರತಿಪಾದನೆ; ದಲಿತ ಸಮುದಾಯಕ್ಕೆ ದಕ್ಕುವುದೇ ಸ್ಥಾನ?

ಖ್ಯಾತ ದಲಿತ ಕವಿ ಸಿದ್ದಲಿಂಗಯ್ಯ ಅವರು ಎಂಬತ್ತರ ದಶಕದಲ್ಲಿ ಬರೆದ ಕ್ರಾಂತಿಗೀತೆಯ ಆಶಯಕ್ಕೆ ಪೂರಕವಾದ ಬೆಳವಣಿಗೆ ಕರ್ನಾಟಕದ ರಾಜಕಾರಣದಲ್ಲಿ ಕಾಣಿಸಿಕೊಂಡಿದೆ. ಎಂಬತ್ತರ ದಶಕದಲ್ಲಿ ದಲಿತ ಚಳವಳಿ ಬಲಿಷ್ಠವಾಗಿ ಬೆಳೆದು ನಿಂತ ಕಾಲದಲ್ಲಿ ಸಿದ್ದಲಿಂಗಯ್ಯ ಅವರು ಈ ಕ್ರಾಂತಿಗೀತೆಯನ್ನು ಬರೆದಿದ್ದರು. ಅದೆಂದರೆ: “ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ” ಎಂಬುದು.

ಕವಿ ಸಿದ್ದಲಿಂಗಯ್ಯನವರು ಈ ಕ್ರಾಂತಿಗೀತೆಯನ್ನು ಬರೆದ ಹಿನ್ನೆಲೆ ಯಲ್ಲಿ ಆತ್ಮವಿಶ್ವಾಸ ಹೇಗಿತ್ತೋ ಹಾಗೆಯೇ ಒಂದು ವಿಷಾದವೂ ಇತ್ತು. ವಿಷಾದ ಏಕೆಂದರೆ, ಕರ್ನಾಟಕದ ಜನಸಂಖ್ಯೆಯಲ್ಲಿ ದಲಿತರು ಅಗ್ರಗಣ್ಯರು. ಆದರೆ ಸ್ವಾತಂತ್ರ್ಯೋತ್ತರ ಕರ್ನಾಟಕದ ಇತಿಹಾಸದಲ್ಲಿ ಆ ಸಮುದಾಯದ ಒಬ್ಬೇ ಒಬ್ಬರು ಮುಖ್ಯಮಂತ್ರಿಯಾಗಿಲ್ಲ. ಅರ್ಥಾತ್, ಈ ನೆಲದ ಕಾನೂನನ್ನು ರೂಪಿಸುವ ಸರ್ವೋಚ್ಚ ಜಾಗದಲ್ಲಿಲ್ಲ ಎಂಬುದು.  ಸಿದ್ದಲಿಂಗಯ್ಯನವರು ಈ ಕ್ರಾಂತಿಗೀತೆಯನ್ನು ಬರೆದುಹತ್ತತ್ತಿರ ಅರ್ಧ ಶತಮಾನ ಕಳೆಯುತ್ತಾ ಬಂದಿದೆ. ಆದರೆ ಅವರ ಕ್ರಾಂತಿಗೀತೆಯ ಉದ್ದೇಶ ಈಡೇರಿಲ್ಲ. ರಾಜಕಾರಣದ ಪಲ್ಲಟಗಳ ನಡುವೆ ಕೆಲ ಬಾರಿ ದಲಿತ ನಾಯಕರಿಗೆ ಮುಖ್ಯಮಂತ್ರಿಯಾಗುವ ಕನಸು ಮೂಡಿದ್ದಿದೆ. ಆದರೆ ಅದು ಸಾಕಾರವಾಗಿಲ್ಲ.

ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ಜನತಾದಳ ಶಾಸಕಾಂಗ ನಾಯಕನ ಸ್ಥಾನಕ್ಕೆ ಚುನಾವಣೆ ನಡೆಯಿತು. ಶಾಸಕಾಂಗ ಪಕ್ಷದಲ್ಲಿ ನಡೆದ ಈ ಚುನಾವಣೆಯಲ್ಲಿ ಒಕ್ಕಲಿಗ ನಾಯಕ ಹೆಚ್.ಡಿ.ದೇವೇಗೌಡ ಮತ್ತು ಲಿಂಗಾಯತ ನಾಯಕ ಎಸ್.ಆರ್.ಬೊಮ್ಮಾಯಿ ಅವರ ಜತೆ ದಲಿತ ನಾಯಕ ಬಿ.ರಾಚಯ್ಯ ಅವರು ಸ್ಪರ್ಧಿಸಿದ್ದರು.

ಅವತ್ತಿನ ಲೆಕ್ಕಾಚಾರದ ಪ್ರಕಾರ, ಹೆಗಡೆ ಅವರಿಗೆ ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಕನಸಿದ್ದು, ತಮ್ಮ ಬೆಂಬಲಿಗರ ಮತಗಳನ್ನು ಬಿ.ರಾಚಯ್ಯ ಅವರಿಗೆ ಹಾಕಿಸುತ್ತಾರೆ ಎಂಬ ಮಾತಿತ್ತು. ಸ್ವತಃ ಹೆಗಡೆಯವರಿಗೂ ಇದು ಇಷ್ಟವಿತ್ತು. ಆದರೆ ಹೆಗಡೆ ಅವರ ಬೆಂಬಲಿಗರು ಎಸ್.ಆರ್.ಬೊಮ್ಮಾಯಿ ಅವರ ಪರವಾಗಿ ನಿಂತರು. ಅಷ್ಟೇ ಅಲ್ಲ, ಆ ಸಂದರ್ಭದಲ್ಲಿ ನಿಮ್ಮ ಜತೆ ನಿಲ್ಲುತ್ತೇವೆ ಅಂತ ರಾಚಯ್ಯ ಅವರಿಗೆ ಭರವಸೆ ನೀಡಿದ್ದ ಪರಿಶಿಷ್ಟ ಶಾಸಕರೂ ಹಿಂದೆ ಸರಿದುಬಿಟ್ಟರು. ಅವತ್ತು ಶಾಸಕಾಂಗ ಸಭೆಯಲ್ಲಿ ರಾಚಯ್ಯನವರ ಜತೆ ನಿಂತ ಏಕೈಕ ಪರಿಶಿಷ್ಟ ನಾಯಕರೆಂದರೆ ಹೆಚ್.ಸಿ. ಮಹದೇವಪ್ಪ ಮಾತ್ರ. ಪರಿಣಾಮ ಅವತ್ತು ದಲಿತರೊಬ್ಬರು ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಹೋಯಿತು.

ಇದಾದ ನಂತರ ೧೯೯೯ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿ ಅಧಿಕಾರ ಹಿಡಿಯಿತಲ್ಲ ಆ ಸಂದರ್ಭದಲ್ಲಿ ಪಕ್ಷದ ಶಾಸಕಾಂಗ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಯಾಗುವ ಕನಸು ಮೊಳೆತಿತ್ತು.ಆದರೆ ಚುನಾವಣೆ ಸಮೀಪದಲ್ಲಿದ್ದಾಗ ಕೆಪಿಸಿಸಿ ಅಧ್ಯಕ್ಷರಾದ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಪಟ್ಟವನ್ನು ತಮ್ಮದಾಗಿಸಿಕೊಂಡರು.

೨೦೦೪ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಮೂಡಿಬಂದಾಗ ಕಾಂಗ್ರೆಸ್-ಜಾ.ದಳ ಮೈತ್ರಿಕೂಟ ಸರ್ಕಾರ ರಚನೆ ಯಾಯಿತಲ್ಲ ಆ ಸಂದರ್ಭದಲ್ಲಿ ಜಾ.ದಳ ನಾಯಕ ಹೆಚ್.ಡಿ.ದೇವೇಗೌಡರು ಕಾಂಗ್ರೆಸ್ಸಿನ ಡಾ.ಜಿ.ಪರಮೇಶ್ವರ್ ಅವರು ಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿಯಾಗಲಿ ಎಂದು ಬಯಸಿದ್ದರು. ಆದರೆ ಆಪ್ತ ನಾಯಕರೊಬ್ಬರು ಪರಮೇಶ್ವರ್ ಅವರು ದಲಿತ ನಾಯಕ. ಒಂದು ಸಲ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಿದರೆ ಕೆಳಗಿಳಿಸುವುದು ಕಷ್ಟ.

ಹಾಗೇನಾದರೂ ಇಳಿಸಲು ಹೋದರೆ ನಿಮಗೆ ದಲಿತ ವಿರೋಧಿ ಎಂಬ ಹಣೆಪಟ್ಟಿ ಬರುತ್ತದೆ ಎಂದು ಎಚ್ಚರಿಕೆ ನೀಡಿದರು. ಅವರು ನೀಡಿದ ಈ ಎಚ್ಚರಿಕೆಯ ಮಾತು ದೇವೇಗೌಡರನ್ನು ಚಿಂತೆಗೀಡು ಮಾಡಿತು. ಇಂತಹ ಚಿಂತಾಗ್ರಸ್ತ ಸ್ಥಿತಿಯಲ್ಲಿ ಅವರಿಗೆ ಅದೇ ಆಪ್ತರು ಸೂಚಿಸಿದ ಮತ್ತೊಂದು ಹೆಸರು ಧರಂಸಿಂಗ್. ಎಷ್ಟೇ ಆದರೂ ಧರಂಸಿಂಗ್ ಅವರು ರಜಪೂತ ಸಮುದಾಯಕ್ಕೆ ಸೇರಿದ ನಾಯಕರು. ನಾಳೆ ರಾಜಕಾರಣದ ಅನಿವಾರ್ಯತೆಯ ನಡುವೆ ಧರಂಸಿಂಗ್ ಅವರನ್ನು ಕೆಳಗಿಳಿಸಿದರೂ ನಿಮಗೆ ಅಪಖ್ಯಾತಿ ತಟ್ಟುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಧರಂಸಿಂಗ್ ಅವರನ್ನು ಕೆಳಗಿಳಿಸಿದರೆ ಅವರ ಪರವಾಗಿ ಬೀದಿಗೆ ಇಳಿಯುವ ಶಕ್ತಿ ಕರ್ನಾಟಕದ ರಜಪೂತರಲ್ಲಿಲ್ಲ ಎಂದು ಈ ಆಪ್ತರು ಸೂಚಿಸಿದಾಗ ಧರಂ ಸಿಂಗ್ ಅವರು ಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿಯಾದರು.

ದಲಿತ ನಾಯಕ ಪರಮೇಶ್ವರ್ ಅವರ ಹೆಸರು ಸಿಎಂ ಪಟ್ಟದ ಸನಿಹ  ಬಂದು ಹಿಂದೆ ಸರಿಯಿತು. ಮುಂದೆ ೨೦೦೮ರ ವಿಧಾನಸಭೆ ಚುನಾವಣೆಯಲ್ಲಿ ೧೧೦ ಸ್ಥಾನಗಳೊಂದಿಗೆ ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದರೂ ಕಾಂಗ್ರೆಸ್, ಜಾ.ದಳ ಮತ್ತು ಪಕ್ಷೇತರರು ಸೇರಿ ೧೧೪ ಕ್ಷೇತ್ರಗಳಲ್ಲಿ ಗೆಲುವು ಗಳಿಸಿದ್ದರು. ಈ ಸಂದರ್ಭದಲ್ಲಿ ಜಾ.ದಳ ವರಿಷ್ಠರಾದ ಹೆಚ್.ಡಿ.ದೇವೇಗೌಡರು ಕಾಂಗ್ರೆಸ್ ನಾಯಕರಿಗೆ ಒಂದು ಸಂದೇಶ ರವಾನಿಸಿ, ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್, ಜಾ.ದಳ ಮತ್ತು ಪಕ್ಷೇತರರು ಸೇರಿ ಸರ್ಕಾರ ರಚಿಸೋಣ ಎಂದರು. ಆದರೆ ಅವರ ಮಾತನ್ನು ಕಾಂಗ್ರೆಸ್ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರು ನಿರ್ಲಕ್ಷಿಸಿದರು. ೨೦೦೬ರಲ್ಲಿ ಕಾಂಗ್ರೆಸ್-ಜಾ.ದಳ ಮೈತ್ರಿಕೂಟ ಸರ್ಕಾರವನ್ನು ಉರುಳಿಸಿ ತಮ್ಮ ಪುತ್ರನ ಸಾರಥ್ಯದಲ್ಲಿ ಜಾ.ದಳ – ಬಿಜೆಪಿ ಮೈತ್ರಿಕೂಟ ಸರ್ಕಾರ ಮೇಲೇಳುವಂತೆ ಮಾಡಿದವರೇ ದೇವೇಗೌಡರು. ಹೀಗಾಗಿ ಅವರನ್ನು ನಂಬುವುದು ಕಷ್ಟ ಎಂಬ ಭಾವನೆ ಸೋನಿಯಾ ಗಾಂಧಿ ಅವರಲ್ಲಿತ್ತು. ಅದೇನೇ ಆದರೂ ಈ ಬೆಳವಣಿಗೆಯ ಫಲವಾಗಿ ಕರ್ನಾಟಕದಲ್ಲಿ ದಲಿತ ನಾಯಕರೊಬ್ಬರು ಸಿಎಂ ಆಗುವುದು ಮತ್ತೆ ತಪ್ಪಿ ಹೋಯಿತು. ಇದಾದ ನಂತರ ಈಗ ಮತ್ತೊಮ್ಮೆ ದಲಿತ ನಾಯಕರು ಸಿಎಂ ಹುದ್ದೆಯ ರೇಸಿನಲ್ಲಿ ಮುಂದೆ ಬರುತ್ತಿದ್ದಾರೆ.

ಇದಕ್ಕೆ ಕಾರಣ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಳಗಿಳಿಯುತ್ತಾರೆ ಎಂಬ ಮಾತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ ಕಳೆಯುತ್ತಿರುವ ಸಂದರ್ಭದಲ್ಲಿ ಅಧಿಕಾರ ಬಿಟ್ಟುಕೊಡಿ ಎಂದು ಅವರನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೋರಲಿದ್ದಾರೆ ಎಂಬ ಮಾತಿನ ಹಿನ್ನೆಲೆಯಲ್ಲಿ ಪುನಃ ದಲಿತ ಸಿಎಂ ಕನಸು ಶುರುವಾಗಿದೆ. ಆದರೆ ಈ ಕನಸು ಈಡೇರುವುದು ಅಷ್ಟು ಸುಲಭವಲ್ಲ. ಏಕೆಂದರೆ ಸಿದ್ದರಾಮಯ್ಯ ಅವರ ನಂತರ ತಾವೇ ಸಿಎಂ ಆಗಬೇಕು ಎಂಬ ಲೆಕ್ಕಾಚಾರ ಡಿಸಿಎಂ  ಡಿ.ಕೆ.ಶಿವಕುಮಾರ್ ಅವರಲ್ಲಿದೆ. ವರಿಷ್ಠರ ಮನಸ್ಸಿನಲ್ಲಿ ಸಿದ್ದರಾಮಯ್ಯ ಅವರಿಗೆ ಪರ್ಯಾಯವಾದ ಹೆಸರು ಅಂತಿದ್ದರೆ ಅದು ಡಿ.ಕೆ. ಶಿವಕುಮಾರ್ ಅವರದೇ.

ಹೀಗಾಗಿ ದಲಿತರು ಮುಖ್ಯಮಂತ್ರಿ ಹುದ್ದೆ ಪಡೆಯುವುದು ಅಷ್ಟು ಸುಲಭವಲ್ಲ. ಆದರೆ ಜನಸಂಖ್ಯೆಯ ದೃಷ್ಟಿಯಿಂದ ನಂಬರ್ ಒನ್ ಸ್ಥಾನದಲ್ಲಿರುವ ದಲಿತ ಸಮುದಾಯ ತನ್ನ ಹಕ್ಕನ್ನು ಪ್ರತಿಪಾದಿಸುವುದರಲ್ಲಿ ತಪ್ಪೂ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿತ್ತಲ್ಲ ಆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದವರು ದಲಿತ ನಾಯಕ ಡಾ.ಜಿ.ಪರಮೇಶ್ವರ್. ಪಕ್ಷ ಅಧಿಕಾರಕ್ಕೆ ಬಂದಾಗ ಸಹಜವಾಗಿಯೇ ಅವರಿಗೆ ಸಿಎಂ ಆಗುವ ಅವಕಾಶಗಳಿದ್ದವು. ಆದರೆ ಇದು ಗೊತ್ತಿದ್ದುದರಿಂದಲೇ ಆ ಚುನಾವಣೆಯಲ್ಲಿ ಪರಮೇಶ್ವರ್ ಅವರು ತಮ್ಮ ಕ್ಷೇತ್ರದಲ್ಲಿ ಸೋಲು ವಂತೆ ಕಾಂಗ್ರೆಸ್‌ನ ಕೆಲ ನಾಯಕರು ಖೆಡ್ಡಾ ತೋಡಿದರು ಮತ್ತು ಯಶಸ್ವಿಯಾದರು. ಮತ್ತದರ ಫಲ ಸಿದ್ದರಾಮಯ್ಯ ಅವರಿಗೆ ಸಿಕ್ಕಿತ್ತು. ಹೀಗಾಗಿ ಪಕ್ಷಕ್ಕಾಗಿ ದಲಿತರು ಸೇವೆ ಸಲ್ಲಿಸಿರುವುದಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ನೀಡಿದ ಸಮುದಾಯವೂ ಹೌದು. ಆ ದೃಷ್ಟಿಯಿಂದ ಈಗ ಸಿದ್ದರಾಮಯ್ಯ ಅವರು ಕೆಳಗಿಳಿದರೆ ತಮಗೆ ಸಿಎಂ ಪಟ್ಟ ಕೊಡಬೇಕು ಎಂದು ಪಟ್ಟು ಹಿಡಿಯಲು ದಲಿತ ನಾಯಕರು ನಿರ್ಧರಿಸಿದ್ದಾರೆ.

ಇದಕ್ಕೆ ಪೂರಕವಾಗಿ ಅಕ್ಟೋಬರ್ ತಿಂಗಳಲ್ಲಿ ದಾವಣಗೆರೆಯಲ್ಲಿ ಐತಿಹಾಸಿಕ ದಲಿತ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಮೂವತ್ತು ಲಕ್ಷ ಜನ ಪಾಲ್ಗೊಳ್ಳಲಿದ್ದು ಆ ಮೂಲಕ ಅತ್ಯಂತ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ದಲಿತರಿಗೆ ಸಿಎಂ ಹುದ್ದೆ ನೀಡಬೇಕು ಎಂಬ ಹಕ್ಕೊತ್ತಾಯ ಮಂಡನೆಯಾಗಲಿದೆ. ದಲಿತರ ಈ ಬೇಡಿಕೆ ಯಾವ ಸ್ವರೂಪ ಪಡೆಯುತ್ತದೆ ಎಂಬುದು ಮುಂದೆ ಇತ್ಯರ್ಥವಾಗಬೇಕಾದ ವಿಷಯ. ಆದರೆ ಎಂಬತ್ತರ ದಶಕದಲ್ಲಿ ದಲಿತ ಕವಿ ಸಿದ್ದಲಿಂಗಯ್ಯ ಅವರು ರಚಿಸಿದ ಕ್ರಾಂತಿ ಗೀತೆಯ ಆಶಯಕ್ಕೆ ಪೂರಕವಾದ ಬೆಳವಣಿಗೆ ಕರ್ನಾಟಕದ ರಾಜಕಾರಣದಲ್ಲಿ ನಡೆಯುತ್ತಿದೆ. ಮುಂದೇನಾಗುತ್ತದೋ ಕಾದು ನೋಡಬೇಕು.

” ಸಿದ್ದಲಿಂಗಯ್ಯನವರು ‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’ ಕ್ರಾಂತಿಗೀತೆಯನ್ನು ಬರೆದು ಹತ್ತತ್ತಿರ ಅರ್ಧ ಶತಮಾನ ಕಳೆಯುತ್ತಾ ಬಂದಿದೆ. ಆದರೆ ಅವರ ಕ್ರಾಂತಿಗೀತೆಯ ಉದ್ದೇಶ ಈಡೇರಿಲ್ಲ. ರಾಜಕಾರಣದ ಪಲ್ಲಟಗಳ ನಡುವೆ ಕೆಲ ಬಾರಿ ದಲಿತ ನಾಯಕರಿಗೆ ಮುಖ್ಯಮಂತ್ರಿಯಾಗುವ ಕನಸು ಮೂಡಿದ್ದಿದೆ. ಆದರೆ ಅದು ಸಾಕಾರವಾಗಿಲ್ಲ.”

-(ಬೆಂಗಳೂರು ಡೈರಿ ) ಆರ್.ಟಿ.ವಿಠ್ಠಲಮೂರ್ತಿ

Tags:
error: Content is protected !!