Mysore
29
scattered clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ರಾಷ್ಟ್ರಕವಿ ಕುವೆಂಪು ಕಟ್ಟಿದ ಸಂವಿಧಾನ ಸ್ವಾಗತ ಗೀತೆ 

ನಮ್ಮ ಸಂವಿಧಾನಕ್ಕೆ ಬರೋಬ್ಬರಿ 75ವರ್ಷಗಳು ತುಂಬಿವೆ. ಭಾರತದ ಪ್ರಜೆಗಳಾದ ನಮಗೆ ಸಂವಿಧಾನವೇ ‘ಸಾಮಾಜಿಕ ನ್ಯಾಯದ ತಾಯಿ’. ಸರ್ವಜನಾಂಗದ ಹಿತರಕ್ಷಣೆಯ ಹೊಣೆಹೊತ್ತ ಸಂವಿಧಾನ ಭಾರತೀಯರ ಬಾಳಿನ ಆಧುನಿಕ ಧರ್ಮವೂ, ಧರ್ಮಗ್ರಂಥವೂ ಆಗುತ್ತಿದೆ. ದೇಶದುದ್ದಕ್ಕೂ ಇದರಿಂದ ಪ್ರಗತಿಯ ಚಲನೆಗಳು ಉಂಟಾಗಿ ಸಾಕಷ್ಟು ದೃಢತೆಯ ಹೆಜ್ಜೆಗುರುತುಗಳು ಮೂಡಿವೆ. ಆದರೆ, ಅದಕ್ಕೆ ನಾನಾ ಕಡೆಗಳಿಂದ ಬಿಕ್ಕಟ್ಟುಗಳು ಎದುರಾಗುತ್ತಲೇ ಇವೆ. ಅದರ ಅಡಿಪಾಯವನ್ನೇ ಬುಡಮೇಲು ಮಾಡುವಂತೆ ಮಾತನಾಡುವ ಶಕ್ತಿಗಳು ಮುನ್ನೆಲೆಗೆ ಬರುತ್ತಿವೆ. ಅದರ ಪ್ರಸ್ತುತತೆಯ ಬಗ್ಗೆ ಕುಹಕಗಳು ಹೆಚ್ಚಾಗುತ್ತಿವೆ. ಕೆಲವರಿಗೆ ‘ಜಾತ್ಯತೀತ’ ರಾಷ್ಟ್ರದ ಪರಿಕಲ್ಪನೆಯ ಅರಿವಿಲ್ಲ. ಇನ್ನು ಕೆಲವರಿಗೆ ಅದರಲ್ಲಿನ ‘ಸಮಾಜವಾದ’ವು ಒಳಗೊಳ್ಳಬೇಕೆಂದು ಬಯಸುವ ‘ಸರ್ವಜನಾಂಗ’ಕ್ಕೆ ದೇಶದೊಳಗೆ ತಾವಿಲ್ಲ. ಮತ್ತೆ ಕೆಲವರಿಗಂತೂ ಎಲ್ಲರಿಗೂ ಸಮಾನ ಅವಕಾಶನೀಡಿ ಬೆಸೆಯಲು ಬಯಸುವ ಸಂವಿಧಾನದ ನೆರಳೂ ಬೇಕಿಲ್ಲ. ಸಂವಿಧಾನ ಜಾರಿಗೊಂಡ ಕ್ಷಣಗಳ ಕಡೆಗೊಮ್ಮೆ ಕುವೆಂಪು ಕಣ್ಣೋಟದ ಮೂಲಕ ಹೋಗಿ ನೋಡೋಣ.

೧೯೫೦ರ ಜನವರಿ ೨೬ನೆಯ ದಿನ. ದೇಶ ಹೊಸ ಸಂವಿಧಾನವನ್ನು ಒಪ್ಪಿಕೊಳ್ಳುವ ಐತಿಹಾಸಿಕ ಕ್ಷಣ. ಸಂವಿಧಾನ ಹೊಸದು. ಪ್ರಜಾಪ್ರಭುತ್ವ ಹೊಸದು. ನಾಗರಿಕಪ್ರಜ್ಞೆಯ ಕಲ್ಪನೆ ಹೊಸದು. ದೇಶ ಗುಲಾಮ ಗಿರಿಯಿಂದ, ದಾರಿದ್ರ್ಯದಿಂದ, ಹಳೆಯರೋಗ ಜಾತಿ- ಅಸ್ಪೃಶ್ಯತೆ, ಹೊಸರೋಗ ಮತಾಂಧತೆಯಿಂದ ದಿಕ್ಕು ಗೆಟ್ಟಿದ್ದ ಕಾಲವದು. ಅಂಥ ದುರವಸ್ಥೆಯ ಸಂದರ್ಭದಲ್ಲಿ ದಿಕ್ಸೂಚಿಯಾಗಿ ಜಾರಿಗೆಬಂದ ಸಂವಿಧಾನವನ್ನು ಕನ್ನಡ ಸಾಂಸ್ಕೃತಿಕಲೋಕ ಸ್ವೀಕರಿಸಿದ ಪರಿ ಎಂಥದು? ಅದರಲ್ಲೂ ಕುವೆಂಪು ಅವರಿಗೆ ಡಾ.ಬಿ.ಆರ್. ಅಂಬೇಡ್ಕರ್‌ರ ಹೊಸ ಸಂವಿಧಾನ ಹೇಗೆ ಕಂಡಿದೆ? ಸ್ವಾತಂತ್ರ್ಯ ಭಾರತದ ಮೊದಮೊದಲ ವಿಕಾಸದ ದೃಢಹೆಜ್ಜೆ ಕುರಿತ ಅವರ ಸ್ಪಂದನೆ ಎಂಥದು? ಕುವೆಂಪು ಜನ್ಮದಿನದ ನೆಪದಲ್ಲಿ, ಅವರು ಸಂವಿಧಾನ ಜಾರಿಯ ಸುವಾರ್ತೆಗೆ ಸ್ಪಂದಿಸಿ ಬರೆದ ಗೀತೆಯ ಬೆನ್ನಾಸರೆ ಹಿಡಿದು ಅದರ ಒಳಹೊರಗನ್ನು ಅರಿಯಲು ಪ್ರಯತ್ನಿಸೋಣ:

ನಮಗೆಲ್ಲ ತಿಳಿದಿರುವಂತೆ ಕುವೆಂಪು ಜೀವ ಸಮಾನತೆಯನ್ನು ಸಾಂವಿಧಾನಿಕ ಮೌಲ್ಯವಾಗಿ ಪ್ರತಿಪಾದಿಸಿದವರು. ಸಾಹಿತ್ಯದ ಆಶಯಗಳನ್ನು ‘ಸಾಂಸ್ಕೃತಿಕ ಸಂವಿಧಾನ’ದ ರೀತಿಯಲ್ಲಿ ಮಂಡಿಸಿ ದವರು. ತಾತ್ವಿಕವಾಗಿ ಮಹಾ ಪ್ರಜಾಸತ್ತಾತ್ಮಕವಾದಿ. ಆಧುನಿಕ ಜಗತ್ತಿನ ಸಮಾನತೆಯ ಹಿಂದಿನ ಪ್ರೇರಕಶಕ್ತಿಯಾದ ಪ್ರಜಾಪ್ರಭುತ್ವದ ಬಗ್ಗೆ ಅವರಿಗೆ ದೊಡ್ಡಮಟ್ಟದ ಗೌರವ. ಒಳಜಗಳ ಮತ್ತು ಜನವಿರೋಧಿ ಆಳ್ವಿಕೆಯ ಪರಿಣಾಮ ದುರ್ಬಲಗೊಂಡಿರುವ ಭಾರತಕ್ಕೆ ಪ್ರಜಾಪ್ರಭುತ್ವವೇ ಸೂಕ್ತವಾದ ವೇದಿಕೆ ಎಂಬುದು ಅವರ ಅಚಲ ನಂಬಿಕೆ. ಸಾರಸತ್ವದಲ್ಲಿ ಒಟ್ಟು ಕುವೆಂಪು ಸಾಹಿತ್ಯ ಪ್ರಜಾಸತ್ತೆಯ ಜೀವಮೌಲ್ಯಗಳಾದ ವ್ಯಕ್ತಿಸ್ವಾತಂತ್ರ , ಸಹೋದರತ್ವ ಮತ್ತು ಸರ್ವಸಮಾನತೆಯ ಗುಣಗಳಿಂದಲೇ ತುಂಬಿಕೊಂಡಿದೆ.

ಇದನ್ನು ಓದಿ: ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಸಂಚಲನ ಮೂಡಿಸಿದ ಬಿಜೆಪಿ-ಜಾ.ದಳ ಮೈತ್ರಿ ವಿಚಾರ

ಪ್ರಜಾಕಲ್ಯಾಣ ಸಂವಿಧಾನ ವಿಶೇಷವೆಂದರೆ, ಸಂವಿಧಾನ ಜಾರಿಯಾದ ಪ್ರಜಾಸತ್ತಾತ್ಮಕ ಗಣರಾಜ್ಯ ದಿನವೇ ಕುವೆಂಪು ‘ಶ್ರೀಸಾಮಾನ್ಯರ ದೀಕ್ಷಾಗೀತೆ’ ಹೆಸರಿನ ಹಾಡನ್ನು ಬರೆಯುತ್ತಾರೆ. ಇದನ್ನು ನಾನು ‘ಸಂವಿಧಾನ ಗೀತೆ’ಎಂದು ಕರೆಯಬಯಸುತ್ತೇನೆ. ಒಂದುಕಡೆ, ಅಲಿಖಿತ ಶಾಸನವಾಗಿ ಅಸಮಾನನೀತಿಗಳ ಮೂಲಕ ಜನಹಿಂಸೆಗೆ ಪ್ರಚೋದಿಸುತ್ತಿದ್ದ ಧರ್ಮಶಾಸ್ತ್ರ; ಇನ್ನೊಂದುಕಡೆ, ವಂಶಪಾರಂಪರ‍್ಯದ ಅರಾಜಕತೆಯ ಪ್ರತಿನಿಧಿ ರಾಜಪ್ರಭುತ್ವ. ಇವಲ್ಲದೆ ಮತ್ತೊಂದುಕಡೆ, ದಬ್ಬಾಳಿಕೆಯ ಮೂಲಕ ದೇಶವಾಸಿಗಳನ್ನು ಗುಲಾಮಗಿರಿಗಿಂತ ಕಡೆಯಾಗಿಸಿದ್ದ ವಸಾಹತುಶಾಹಿ ಆಡಳಿತ. ಈ ಮೂರೂ ಸರ್ವಾಧಿಕಾರಿ ಪ್ರಭುತ್ವಗಳು ಕೊನೆಯಾದ ಚಾರಿತ್ರಿಕ ಸಂತೋಷ ದೀಕ್ಷಾಗೀತೆ ಹುಟ್ಟಿನ ಹಿನ್ನೆಲೆಯಲ್ಲಿದೆ.

ಈ ಕನ್ನಡಗೀತೆ ಮೂಲಕ ಕುವೆಂಪು ದೇಶದ ಹೊಸ ಸಂವಿಧಾನವನ್ನು ಅತ್ಯುತ್ಸಾಹದಿಂದ ಸ್ವಾಗತಿಸುತ್ತಿದ್ದಾರೆ. ಇಡೀ ಗೀತೆ ಉದ್ಘೋಷಣೆಯ ಮಾದರಿಯಲ್ಲಿದೆ. ಅಂತಹ ಒಂದು ಪ್ರಮುಖ ಘೋಷಣೆ ‘ಕೊನೆಗಂಡಿತೊ ಓರೋರ್ವರ ಗರ್ವದ ಕಾಲ, ಇದು ಸರ್ವರ ಕಾಲ’ ಎಂಬುದು. ಅದರಂತೆ, ಸಂವಿಧಾನದ ಪರಿಣಾಮ ಇಲ್ಲಿನ ಜಾತಿ-ವರ್ಗ-ಧರ್ಮಗಳ ಯಜಮಾನಿಕೆಯ ಕಾಲ ಕೊನೆಯಾಗಲಿದೆ. ‘ಬಲವಿದ್ದವರಿಗೆ ಬಾಳುವೆ’ ಎನ್ನುವ ಕ್ಷಣಗಳು ಇನ್ನಿಲ್ಲವಾಗಿ, ‘ಸರ್ವಸಮಾನದ ಲೌಕಿಕರಾಜ್ಯ’ ಉದಯವಾಗಲಿದೆ. ಅದು ಜನತೆಯ ಬೇಕುಬೇಡಗಳನ್ನು ತಿಳಿದುಕೊಂಡು ರೂಪಿತವಾಗುವ ಪ್ರಜಾಕಲ್ಯಾಣರಾಜ್ಯ. ಅಲ್ಲಿ ಪ್ರಜೆಗಳೇ ಸಾರ್ವಕಾಲಿಕ ಸಾರ್ವಭೌಮ. ಪ್ರಜಾಸಮೂಹದ ಏಳಿಗೆಯ ಹಿತಚಿಂತನೆಯೇ ಪ್ರಧಾನ ಆಶಯ. ಅವರು ಘನತೆಯ ಬಾಳನ್ನು ಸಹಜವಾಗಿ ಜೀವಿಸಲು ಸಾಧ್ಯವಾಗುವ ಧೀಮಂತ ಅವಕಾಶ ನಿರ್ಮಿಸುವುದೇ ಆದ್ಯತೆ.

ಶ್ರೀ ಸಾಮಾನ್ಯರಿಗೆ ದೀಕ್ಷೆ ಹೇಳಿಕೇಳಿ ಇದು ಶ್ರೀಸಾಮಾನ್ಯರ ದೀಕ್ಷಾಗೀತೆ. ಇಲ್ಲಿ ಚಿತ್ರಿತಗೊಂಡಿರುವ ‘ಸಾಮಾನ್ಯ’ ಇಲ್ಲಿತನಕ ದೈನೇಸಿ ಸ್ಥಿತಿಯಿಂದ ಬಸವಳಿದಿರುವ ಆಸಾಮಿ. ಇನ್ನುಮುಂದೆ ಸಂವಿಧಾನವೆಂಬ ದೈವದ ಕಣ್ಣಿಗೆ ಅಸಾಮಾನ್ಯ, ಅರ್ಥಾತ್ ‘ಭಗವದ್ ಮಾನ್ಯ’. ಆದಕಾರಣ ಇಂತಹ ‘ಶ್ರೀಸಾಮಾನ್ಯರ ಉದ್ಧಾರದ ಪೂಜೆಗೆ ದೀಕ್ಷೆಯ ಕೈಕೊಳ್ಳಿ’ ಎಂದು ಪ್ರಜ್ಞಾವಲಯಕ್ಕೆ ಕರೆಕೊಡುತ್ತಾ ಗೀತೆ ಶುರುವಾಗುತ್ತದೆ. ಇಲ್ಲಿ ಶ್ರೀಸಾಮಾನ್ಯರ ಉದ್ಧಾರ ಎಂದರೆ, ‘ಅವರು ತಮ್ಮ ದೈನಂದಿನ ಉಣಿಸು ಮತ್ತು ಉಡುಪಿಗಾಗಿ ಯಾರೆದುರೂ ಕೈಚಾಚದಂತೆ ಬಾಳ್ವೆ ನಡೆಸಲು ಬಲತುಂಬುವುದು. ಮೇಲುಕೀಳಿನ ಅಸಹಜಗರ್ವಕ್ಕೆ ಬಲಿಪಶುವಾಗದೆ, ‘ಲೌಕಿಕದಲಿ ಲೌಕಿಕರ’ ಕಾಲು ಹಿಡಿಯದೆ ನಡೆಯಲು ಭಯಮುಕ್ತ ವಾತಾವರಣ ಸೃಷ್ಟಿಸುವುದು. ಪ್ರಜೆಗಳ ಎದೆಗೂಡೊಳಗೆ ‘ತೊಲಗಿತು ನಿನ್ನೆಯ ನಾಯ್‌ಪಾಡು, ಇನ್ನಿದು ದಿಟಕೂ ನಿನ್ನಯ ತಾಯ್‌ನಾಡು’ ಎಂಬ ನಂಬಿಕೆಯ ಬಿತ್ತುತ್ತಾ ಆತ್ಮಗೌರವ ಹೆಚ್ಚಿಸುವುದು. ಹೆಣ್ಣುಗಂಡೆಂಬ ಭೇದತೋರದೆ ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳನ್ನು ನಿಷ್ಠೆಯಿಂದ ಮೀಸಲಿಡುವುದು’. ವರ್ತಮಾನ ಸಮಾಜದ ಪ್ರಜ್ಞಾಸ್ತರದಲ್ಲಿ ಯಾವುದನ್ನು ಪ್ರಜಾಪ್ರಭುತ್ವದ ನೆಲೆಗಟ್ಟು ಎಂದು ನಿರ್ಧರಿಸಿ ಮುನ್ನಡೆಯಲಾಗುತ್ತಿದೆಯೋ, ಅನ್ನ-ಬಟ್ಟೆ-ವಸತಿ ಜೊತೆಗೆ ಸ್ವಾಭಿಮಾನದ ಬದುಕು ಮೂಲಭೂತ ಅವಶ್ಯಕತೆ ಎಂದು ಸಾರಲಾಗುತ್ತಿದೆಯೋ, ಸಮಾನತೆ ಸಾಧಿಸುವುದನ್ನು ಜಾಗತಿಕ ಮರ್ಯಾದೆಯ ವಿದ್ಯಮಾನ ಎಂದು ಭಾವಿಸಲಾಗುತ್ತಿದೆಯೋ ? ಅವನ್ನು ಕುವೆಂಪು ಈ ಜನ‘ಪರ’ ಗೀತೆಯಲ್ಲಿ ಒಕ್ಕೊರಲಿನಿಂದ ಸಾರುತ್ತಿದ್ದಾರೆ.

ಇದನ್ನು ಓದಿ: ಆಟಿಕೆ ಮಾರಾಟಗಾರರ ಸುರಕ್ಷತೆಗೆ ಸರ್ಕಾರಗಳು ಮುಂದಾಗಲಿ

ಸಾಮಾನ್ಯಜನರು ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಬೇಕಾದ ಹಾಗೂ ಶೈಕ್ಷಣಿಕ- ಸಾಂಸ್ಕೃತಿಕವಾಗಿ ಸತ್ವಶೀಲರಾಗಬೇಕಾದ ಅಗತ್ಯವನ್ನು ಪರಮ ಕರ್ತವ್ಯವೆಂಬಂತೆ ಮಂಡಿಸುತ್ತಿದ್ದಾರೆ. ಅದನ್ನವರು ಹೀಗೆ ಮಂಡಿಸುತ್ತಿರುವುದು ನಮ್ಮ ದೇಶಕ್ಕೆ ಸಮಾನತೆಯ ಆಳಕಾಳಜಿಯ ಸಂವಿಧಾನ ಜಾರಿಯಾದ ಭರವಸೆಯಲ್ಲಿ ಎಂಬುದು ಮಹತ್ವದ ಸಂಗತಿ.

ಚಾರಿತ್ರಿಕ ಪ್ರತಿಸ್ಪಂದನೆ ಕವಿಚೇತನಕ್ಕೆ ಗೊತ್ತಿದೆ: ನಮ್ಮದು ಹಲಬಗೆಯ ದೌರ್ಜನ್ಯಗಳ ದಾಳಿಯಿಂದ ಗಾಯಗೊಂಡು ಬಿದ್ದಿರುವ ಸಮಾಜ. ಮೈತ್ರಿ ಹಾಗೂ ಕಾರುಣ್ಯದ ಜೀವಪಸೆ ಸೋಕದೆ ಸಮಾನತೆಯು ತಬ್ಬಲಿಯಾದ ಸ್ಥಿತಿಯಲ್ಲಿ ದಿಕ್ಕುತೋಚದಂತಾಗಿದೆ. ಹಸಿವು, ಅಸ್ಪೃಶ್ಯತೆ, ಅವುಗಳಿಂದ ಉಂಟಾಗುವ ಅವಮಾನಗಳಿಂದ ಮನುಷ್ಯ ಚೈತನ್ಯದ ಅಂತಸಾಕ್ಷಿಯೇ ನಾಶವಾಗಿದೆ. ಮತ್ತು ಇದು ಇಲ್ಲಿನ ಎಲ್ಲ ಬಹುಜನಸಾಮಾನ್ಯರ ಬಾಳಿನ ನಿತ್ಯದ ಬವಣೆಯೇ ಆಗಿದೆ. ಅದನ್ನು ಕಂಡುಕಂಡು ರೋಸಿಹೋದ ಕವಿಕುವೆಂಪು, ಪ್ರಜಾಪ್ರಭುತ್ವವು ನಮಗೆ ಅತ್ಯವಶ್ಯಕವಾದುದೆಂಬ ಕಾಳಜಿಯಿಂದಲೂ, ತುಂಬುಸಂಭ್ರಮದಿಂದಲೂ ಸ್ವಾಗತಿಸುತ್ತಿದ್ದಾರೆ. ದೇಶದಲ್ಲಿ ಇನ್ನುಮುಂದೆ ಅದು ಚಿಗುರೊಡೆದು ಅರಳುತ್ತಿರುವ ಸೂಚನೆಗಳನ್ನು ಮುಂಗಾಣುತ್ತಿದ್ದಾರೆ.

ಹೀಗೆ, ಶ್ರೀಸಾಮಾನ್ಯರನ್ನು ಸನ್ಮಾನ್ಯರ ಸ್ಥಾನದಲ್ಲಿ ಸ್ಥಾಪಿಸುತ್ತ ಹಾರೈಸುವ ಇದು ಕನ್ನಡದ ಅಪೂರ್ವ ‘ಸಂವಿಧಾನ ಸ್ವಾಗತಗೀತೆ’ಯಾಗಿದೆ. ಇದರಲ್ಲಿ, ಅಂಬೇಡ್ಕರರ ಸಬಾಲ್ಟರ್ನ್ ದಾರ್ಶನಿಕ ಚಿಂತನೆಯ ತಿರುಳನ್ನು ಹಿಡಿದು ಮಿಡಿಯುವ ಸಕಾಲಿಕ ಸ್ಪಂದನವಿದೆ; ಸಂವಿಧಾನವು ಪ್ರಜಾಸರ್ಕಾರಗಳ ಮೂಲಕ ಸಾಮಾನ್ಯಜನರ ಸಾರ್ವಭೌಮತ್ವಕ್ಕೆ ಜಯದೊರಕಿಸಬಲ್ಲ ಸರ್ವಶಕ್ತ ಸಾಧನ ಆಗಬಹುದೆಂಬ ನಂಬಿಕೆಯಿದೆ; ಸಾವಿರಕೈಗಳ ಚಿತ್ತಾರವಾಗಬಲ್ಲ ಜನಾಧಿಕಾರವನ್ನು ಈ ನೆಲದತುಂಬ ವಿಸ್ತರಿಸಬಹುದೆಂಬ ದೂರದೃಷ್ಟಿಯ ಕನಸಿದೆ. ಆದ್ದರಿಂದಲೇ, ಸಂವಿಧಾನದ ಬಗ್ಗೆ ಅವರಿಗಿದ್ದ ಆಶಾಭಾವನೆ ಮಹಾ ದಾರ್ಶನಿಕ ಚಿಂತಕರೊಬ್ಬರ ಚಾರಿತ್ರಿಕ ಮಹತ್ವದ ಪ್ರತಿಸ್ಪಂದನೆಯಾಗಿ ಇಂದು ನಮಗೆ ಕಾಣುತ್ತದೆ.

Tags:
error: Content is protected !!