Mysore
25
overcast clouds
Light
Dark

ಅದಕ್ಕೇ ನಾ ಹೇಳಿದ್ದು, ಓಡಿ ಹೋಗೋಣ ಬಾ

• ಪೂರ್ಣಿಮಾ ಭಟ್ ಸಣ್ಣಕೇರಿ

“ಓಡಿ ಹೋಗೋಣ್ಣಾ?’
ಇವನು ಇದೇ ವಾರದಲ್ಲಿ ಮೂರನೇ ಬಾರಿ ಈ ಪ್ರಶ್ನೆಯನ್ನು ಕೇಳುತ್ತಿರುವುದು. ಎದುರುಬದುರು ಕೂತು ಮಾತಾಡಿಯೇ ಬಗೆಹರಿಸಿಕೊಳ್ಳೋಣ ಎಂದುಕೊಂಡೆ. ನಮ್ಮಿಬ್ಬರ ಕೈಯನ್ನೂ ತಣ್ಣಗೆ ಕೊರೆಯುತ್ತಿರುವ ಶುಂಠಿ ಕಬ್ಬಿನ ಹಾಲಿನ ಉದ್ದನೆಯ ಲೋಟ.

“ನಾನು ಫ್ಯಾಕ್ಟರಿಯಿಂದ ಸುಸ್ತಾಗಿ ಮನೆಗೆ ಬಂದ ದಿನಗಳಲ್ಲಿ ಧಾರವಾಡದ ಭಾಷೆಯ ಒಂದಷ್ಟು ಬೈಗುಳ, ರೋದನೆ, ಒದರಾಟ ಎಲ್ಲವೂ ಇರುತ್ತದಲ್ಲ. ಸಹಿಸಿಕೊಳ್ಳೋದು ಕಷ್ಟ ಕಣೋ ಎಂದೆ. ಆ ದಿನ ಸಂಜೆ ಪೂರ್ತಿ ಮ್ಯೂಸಿಕ್ ಸಿಸ್ಟಮ್ಮಿನಲ್ಲಿ ಜೇಸುದಾಸ್ ಹಾಡುತ್ತಾರೆ, ತಪ್ಪಿದರೆ ಪರ್ವೀನ್ ಸುಲ್ತಾನಾ’ ಎಂದು ಕಣ್ಣುಹೊಡೆದ ಅವನು.

ಮನಸಲ್ಲೇ ಮುದ್ದು ಮಾರೀಚ ಎಂದುಕೊಂಡೆ.

‘ರಾತ್ರಿಯ ಊಟ ಇಬ್ಬರೂ ಜತೆಗೇ ಮಾಡಬೇಕು. ಆಗ ಮೊಬೈಲ್ ಹತ್ತಿರದಲ್ಲೆಲ್ಲೂ ಇರಬಾರದು. ವಾರದ ನಂತರ ಇದೇನಾದರೂ ಬದಲಾದರೆ ನಾನು ಚಂಡಿಯ ಪ್ರತಿರೂಪ’ ಎಂದೆ. ‘ನಾನು ಮೊಬೈಲ್ ಛಾರ್ಜಿಗೆ ಹಾಕುವುದೇ ಆ ಸಮಯಕ್ಕೆ. ಒಬ್ಬನೇ ಊಟ ಮಾಡಿದರೆ ನಂಗೂ ನನ್ನ ಹೊಟ್ಟೆಗೂ ಜಗಳವಾಗುತ್ತೆ. ಮಾರನೇದಿನ ಬೆಳಿಗ್ಗೆಯ ಕೆಲಸ ಕಷ್ಟ ಹಾಗಾಗಿ, ಜತೆಗೆ ಊಟ ಮಾಡುವುದು ನಂಗೂ ಇಷ್ಟ’ ಎಂದು ಸಮಾಧಾನಿಸಿದ.

‘ಕೆಲಸದ ತಲೆಬಿಸಿ ಕಮ್ಮಿ ಇದ್ದಾಗಲೊಮ್ಮೆ ಖುಷಿಯ ಹಾರ್ಮೋನು ಸೆರಟೊನಿನ್, ಆಡ್ರಿನಲಿನ್ ಎಲ್ಲವೂ ಅಡುಗೆ ಮನೆಯಲ್ಲಿ ನನ್ನ ಅಟ್ಟಾಡಿಸುತ್ತವೆ. ಮೂರು ಬಗೆಯ ಪಲ್ಯ, ಎರಡು ಕೋಸಂಬ್ರಿ ಸಮೇತ ತತ್ಸಂಬಂಧವಿಲ್ಲದ ಬನಾನಾ ಕೇಕ್ ಮಾಡುತ್ತೇನೆ. ಮಾಡುವುದಷ್ಟೇ ಅಲ್ಲದೆ ಎಲ್ಲವನ್ನೂ ತಿನ್ನು, ಇಷ್ಟೇ ಇಷ್ಟಿದೆ ಮುಗಿಸಿಬಿಡು ಎಂದು ಪ್ರಾಣ ತಿನ್ನುತ್ತೇನೆ. ತಿಂಗಳು ಕಳೆಯುತ್ತಿದ್ದಂತೆ ನಿನಗೆ ಇದೆಲ್ಲ ಬೋರು. ಹಾಗಾಗಿ ಇದನ್ನು ಇಲ್ಲಿಗೇ ಬಿಡೋಣ’ ಎಂದು ಗೋಗರೆದೆ. ‘ತಣ್ಣಗಿನ ಮೊಸರನ್ನಕ್ಕೆ ಪಾರ್ಲೆಜಿ ಬಿಸ್ಕೆಟ್ಟು ನಂಜಿಕೊಂಡು ತಿಂದವ ನಾನು. ಬೆಳ್ಳುಳ್ಳಿ ಸಾರಿನೊಂದಿಗೆ ಕೇಸರಿಬಾತು ಇಷ್ಟಪಡುವವನು. ಇದೇನೂ ದೊಡ್ಡದಲ್ಲ ಬಿಡು’ ಎಂದು ನನ್ನ ಸಮಸ್ಯೆಯನ್ನು ತಳ್ಳಿ ಹಾಕಿದ.

‘ಹತ್ತುಗಂಟೆಗೆ ಜಗದ ಆಯಾಸವೆಲ್ಲ ನನ್ನ ಸುತ್ತಿಕೊಳ್ಳುತ್ತದೆ. ಆಮೇಲೆ ಮಾತನಾಡಲಾರೆ, ಟೀವಿ ನೋಡಲಾರೆ, ನಿನ್ನ ರಮಿಸಲಾರೆ. ಹತ್ತೂಕಾಲಿಗೆ ರೂಮಿನ ದೀಪವಾರಲೇಬೇಕು. ಇಲ್ಲವಾದರೆ ಮುಂದೆ ಮೂರು ದಿನ ಹದಿನೆಂಟರ ಹುಡುಗಿಯಂತೆ ಹಟಮಾರಿಯಾಗುವೆ. ಬೇಕಾ ಇದೆಲ್ಲ ಈ ವಯಸ್ಸಿನಲ್ಲಿ ನಮಗೆ?’ ನಗುತ್ತಲೇ ಬೇಸರದ ದನಿಯಲ್ಲಿ ಕೇಳಿದೆ. ‘ಬೆಳಗಿಂಜಾವದ ಪ್ರಣಯದ ನಂತರ, ತೀರಿಹೋದ ಅಮ್ಮನ ಕತೆಯನ್ನು ನೀನು ಹೇಳಿದರೆ ಮುಖ ಸಿಂಡರಿಸದೇ ಕೇಳಿಸಿಕೊಳ್ಳಬಲ್ಲೆ. ಹರಳೆಣ್ಣೆಯ ಕಟುವಾಸನೆ ನನಗೆ ಯಾವಗಲೂ ಡೋಪಮೈನ್. ಇಷ್ಟು ಸಾಲದಾ?’ ದಾರ್ಶನಿಕನಂತೆ, ವಿಜ್ಞಾನಿಯಂತೆ ಮಾತಾಡಿದ.

ಅಳುಕಿನಿಂದಲೇ ಶುರು ಮಾಡಿದೆ. ಫ್ಯಾಕ್ಟರಿಯಲ್ಲಿ ಲೆಕ್ಕಾಚಾರ ತಪ್ಪಿದಾಗ, ಆರೋಗ್ಯ ಏರಿಳಿತವಾದಾಗ, ಚಿನ್ನದ ಸರವನ್ನು ಕೈತಪ್ಪಿ ಇಟ್ಟಾಗ, ಗೆಳತಿಯರು ಇದ್ದಕ್ಕಿದ್ದಂತೇ ಮಾತು ಬಿಟ್ಟಾಗ ನಾನು ಜಾತಕ, ಶಕುನ ಎಂದು ಕನವರಿಸಿದ್ದಿದೆ. ಮನೆಯಲ್ಲಿ ದಿಗ್ಧಂಧನ ಮಂಡಲ ಹಾಕಿದ್ದಿದೆ. ಇದೆಲ್ಲ ನಿನ್ನನ್ನು ಹೆದರಿಸಬಾರದಲ್ಲ. ನನ್ನ ಪಾಡು ನನಗಿರಲಿ ಬಿಡು’ ಆದಷ್ಟೂ ನಿರ್ಭಾವದಲ್ಲಿ ಹಲುಬಿದೆ. ಇಪ್ಪತ್ತು ವರ್ಷದ ಹಿಂದೆ ಮಲಯಾಳ ದೇಶದ ಮಾಂತ್ರಿಕ ಉಗ್ರಬಲಂ ಭಗವತೀ ಆಶ್ರಮದಲ್ಲಿ ಆರು ತಿಂಗಳ ಪಾಠವಾಗಿದೆ ನನಗೆ ಆ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕುವ ಹುಕಿ ಇತ್ತೀಚೆಗೆ ನನಗೂ’ ಮತ್ತೆ ತಿರುಮಂತ್ರ ಎಸೆದ. ‘ಪ್ರತಿ ತಿಂಗಳೂ ನಿನ್ನ ಸಂಬಳವಾದ ನಂತರ ಊರಿನ ಮನೆಯ ರಿಪೇರಿಗಾಗಿ ನಿನ್ನ ಅಕ್ಕ ಹಣ ಕೇಳುತ್ತಾಳಲ್ಲ. ಅವಳೊಂದಿಗೆ ನಾನು ಫೋನಿನಲ್ಲಿ ಮಾತಾಡುವುದಿಲ್ಲ. ಸಾಲುಸಾಲು ಸೋದರತ್ತೆಯರನ್ನು ನೀನು ಮನೆಗೆ ಕರೆಯುವಂತಿಲ್ಲ. ಸುಖ ದುಃಖ ಹೇಳಿಕೊಳ್ಳಲು ನಿಮ್ಮಮ್ಮ ಮನೆಗೆ ಬಂದರೆ ಅಡ್ಡಿಯಿಲ್ಲ; ಆದರೆ ನಾನು ಆಗ ಮನೆಯಲ್ಲಿ ಇರುವುದಿಲ್ಲ. ಇದೆಲ್ಲ ಸಂಭಾಳಿಸುವುದು ದೊಡ್ಡ ತಾಪತ್ರಯವಲ್ಲವಾ?’ ನಾನು ಬಾಯೆಳೆದೆ. ಅದಕ್ಕೇ ನಾನು ಹೇಳಿದ್ದು, ಓಡಿ ಹೋಗೋಣ ಬಾ’ ಅಂತಂದು ಮೂಗಿನ ತುದಿಯ ಮೆತ್ತಗೆ ಸವರಿದ ಪ್ರಶ್ನೆಗಳು ಸಾಕು ಎಂಬಂತೆ.

ಇಂಥವನ ಜತೆ ಓಡಿ ಹೋಗದೇ, ಇದ್ದಲ್ಲೇ ಇರಲು ನಂಗೆ ಕಾರಣವಾದರೂ ಏನಿದೆ?
poornimaubhat@gmail.com

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ