ಗ.ನಾ.ಭಟ್ಟ
ಪ್ರತಿವರ್ಷದಂತೆ ಈ ವರ್ಷವೂ ಶಿಕ್ಷಕರ ದಿನಾಚರಣೆ ಬಂದಿದೆ. ಆ ದಿನವೆಂದರೆ ಶಿಕ್ಷಕರನ್ನು ಹೊಗಳುವುದು, ಅವರೇ ಇಂದ್ರ, ಚಂದ್ರ, ಬ್ರಹ್ಮ, ವಿಷ್ಣು, ಮಹೇಶ್ವರ, ಸಾಕ್ಷಾತ್ ಪರಬ್ರಹ್ಮ ಎಂದು ವರ್ಣಿಸುವುದು. ಎಲ್ಲದಕ್ಕಿಂತ ಮುಖ್ಯವಾಗಿ ಅದನ್ನು ಒಂದು ಸರ್ಕಾರಿ ಹಬ್ಬವಾಗಿ ಮಾಡಿರುವುದು ಒಂದು ಚೋದ್ಯವೆನಿಸುತ್ತದೆ.
ಶಿಕ್ಷಕರ ದಿನಾಚರಣೆಯು ಸರ್ಕಾರಿ ಹಬ್ಬವಾಗಿ ಮಾರ್ಪಟ್ಟ ಮೇಲೆ ಇದನ್ನು ಶಿಕ್ಷಕರು ಅಪ್ಪಿತಪ್ಪಿಯೂ ಶಾಲೆಗಳಲ್ಲಿ ಆಚರಿಸುವುದಿಲ್ಲ. ಅದನ್ನು ಶಾಲೆಯಲ್ಲಿ ಆಚರಿಸೋಣವೆಂದರೆ ಆ ದಿನ ಅವರೆಲ್ಲರೂ ಸರ್ಕಾರ ನಿರ್ದೇಶಿಸಿದ ಸ್ಥಳಕ್ಕೆ ಹೋಗಬೇಕು. ಮರುದಿನ ಆಚರಿಸೋಣವೆಂದರೆ ಅದು ಕಳೆದುಹೋದ ಸಂಗತಿಯೆಂದು ಶಿಕ್ಷಕರು ನೆಪವೊಡ್ಡಿ ಅದಕ್ಕೆ ತಿಲಾಂಜಲಿ ಕೊಡುತ್ತಾರೆ. ವಾಸ್ತವವೆಂದರೆ ಅದು ಯಾವ ಶಿಕ್ಷಕರಿಗೂ ಬೇಕಿರುವುದಿಲ್ಲ. ಇಂತಹ ವಿಪರ್ಯಾಸದಲ್ಲೇ ಶಿಕ್ಷಕ ದಿನಾಚರಣೆ ಅದೊಂದು ವಾರ್ಷಿಕ ವಿಧಿಯಂತೆ, ಸರ್ಕಾರಿ ಅಽಕಾರಿಗಳ ಮನಸೋ ಇಚ್ಛೆಯಂತೆ ಯಾಂತ್ರಿಕವಾಗಿ ಆಚರಿಸಲ್ಪಡುತ್ತದೆ. ಇಲ್ಲಿ ಶಿಕ್ಷಕ ಸಂಪೂರ್ಣ ಅಸಹಾಯಕ. ಅವನಿಗೆ ಅಂದು ಹೊಗಳಿಸಿಕೊಂಡಿದ್ದಷ್ಟೇ ಬಂತು ಭಾಗ್ಯ.
ಶಿಕ್ಷಕರ ದಿನಾಚರಣೆಯಂದು (ಉಳಿದ ದಿನಗಳೂ ಕೂಡ) ಉತ್ತಮ ಶಿಕ್ಷಕ-ಶಿಕ್ಷಕಿಯರು ಮಕ್ಕಳ ಪುರೋಭಿವೃದ್ಧಿಗಾಗಿ ಏನು ಮಾಡಬಹುದೆಂದು ಯೋಚಿಸುವ ಮತ್ತು ಅದನ್ನು ಅನುಷ್ಠಾನಕ್ಕೆ ತರುವ ಒಂದು ಸುವರ್ಣ ಕ್ಷಣವಿದು ಎಂದು ನನ್ನ ಭಾವನೆ. ಶಿಕ್ಷಕನ ಹೊಣೆಗಾರಿಕೆ ಬಹಳ ದೊಡ್ಡದು. ಶಿಕ್ಷಕನಾಗಿ ನೇಮಕಗೊಂಡ ಕೂಡಲೇ ಅವನು ಶಿಕ್ಷಕ ಅನಿಸಿಕೊಳ್ಳುವುದಿಲ್ಲ. ಶಿಕ್ಷಕತ್ವ, ಗುರುತ್ವ ಪ್ರಾಪ್ತವಾಗುವುದು ಸತತ ಅಧ್ಯಯನದಿಂದ ಮಾತ್ರ ಎಂಬುದನ್ನು ಶಿಕ್ಷಕರು ಮೊದಲು ಅರಿಯಬೇಕು. ಅವನು ಅಥವಾ ಅವಳು- ತಾವು ಕಲಿಸುವ ವಿಷಯದ ಮೇಲೆ ಅಪಾರ ಪರಿಣತಿ ಪಡೆಯುವುದರೊಂದಿಗೆ ಇತರ ವಿಷಯಗಳಲ್ಲೂ ಅಲ್ಪಸ್ವಲ್ಪ ಜ್ಞಾನ ಸಂಪಾದಿಸಿಕೊಳ್ಳಬೇಕು. ಪ್ರಪಂಚ ಜ್ಞಾನದಲ್ಲಿ ಆಸಕ್ತಿ ತಳೆಯುವುದರಿಂದ, ಸೌಜನ್ಯ-ಸಂಸ್ಕೃತಿ ರೂಢಿಸಿಕೊಳ್ಳುವುದರಿಂದ ಒಬ್ಬ ಉತ್ತಮ ಶಿಕ್ಷಕನೆನಿಸಿಕೊಳ್ಳಬಲ್ಲ. ನಮ್ಮ ದುರ್ದೈವವೆಂದರೆ ನಮ್ಮಲ್ಲಿ ಎಷ್ಟೋ ಮಂದಿ ಶಿಕ್ಷಕರಿಗೆ ಈ ಅರಿವೇ ಇಲ್ಲ.
ಶಿಕ್ಷಕರ ದಿನಾಚರಣೆಯ ದಿನ ಶಿಕ್ಷಕರನ್ನು ಹಾಡಿ ಹೊಗಳುವ ಜನ-ಲೇಖಕರು- ಮಂತ್ರಿಗಳು-ಸಮಾಜದ ಧುರೀಣರು ಕೆಲವು ಶಿಕ್ಷಕರ ದುಷ್ಟತನವನ್ನೂ, ನೀಚತನವನ್ನೂ, ಅವರ ಐಲು-ಪೈಲುಗಳನ್ನೂ, ವಿಚಿತ್ರ ಸ್ವಭಾವಗಳನ್ನೂ ಬಯಲಿಗೆಳೆಯುವ ಗೋಜಲಿಗೆ ಹೋಗುವುದೇ ಇಲ್ಲ. ಉದಾಹರಣೆಗೆ- ‘ಸಮಸ್ಯೆಯ ಮಗು’- Problem Child’ ಇರುವಂತೆಯೇ ‘ಸಮಸ್ಯೆಯ ಶಿಕ್ಷಕ- ‘”Problem Teacher’ ಕೂಡ ಇರುತ್ತಾನೆ ಎಂಬುದು ಬಹಳ ಮಂದಿಗೆ ಗೊತ್ತೇ ಇಲ್ಲ. ಇದು ವ್ಯಂಗ್ಯ, ಉತ್ಪ್ರೇಕ್ಷೆ ಅನಿಸಿದರೂ ಇದು ಸೂರ್ಯ ಬೆಳಕಿನಷ್ಟೇ ಸತ್ಯ. ಕೆಲವು ಹೊರಗೆ ಬರುತ್ತವೆ. ಇನ್ನು ಕೆಲವು ಹೊರಗೆ ಬರದೇ ಮುಚ್ಚಿಹೋಗುತ್ತವೆ. ಆದರೂ ಕೆಲವು ನೀಚ ಶಿಕ್ಷಕರು ಮಕ್ಕಳ ಮೇಲೆ ಮಾಡಿದ ಹಲ್ಲೆ, ವಿಧಿಸಿದ ಕ್ರೂರ ಶಿಕ್ಷೆ, ಹೆಣ್ಣು ಮಕ್ಕಳ ಮೇಲೆ ಮಾಡಿದ ಅತ್ಯಾಚಾರ, ಸದಾ ಜಗಳ ಮಾಡುತ್ತಿರುವುದು, ಕೊಲೆಯವರೆಗೂ ಹೋಗುವುದು- ಇವೆಲ್ಲವನ್ನೂ ನಾವು ಪತ್ರಿಕೆಗಳಲ್ಲಿ ಆಗಾಗ ಓದುತ್ತಿರುತ್ತೇವೆ.
೨೦೧೨ರಲ್ಲಿ ಜಾರಿಗೆ ಬಂದ POCSO Act ( Protection of Children from Sexual Offence) ನಿಂದ ಇದರ ಕಿರುಕುಳ ಸ್ವಲ್ಪ ಕಡಿಮೆಯಾದರೂ ಅಲ್ಲಲ್ಲಿ ಇದು ನಡೆಯುತ್ತಲೇ ಇರುತ್ತದೆ. ಇದಕ್ಕೆ ಕಾರಣ. ದಿನ ಬೆಳಗಾದರೆ ಜಗಳ ಎತ್ತುವ ಶಿಕ್ಷಕ, ಸದಾ ಹೊಟ್ಟೆಕಿಚ್ಚಿನಿಂದ ನರಳುವವ, ಮುಖ ಗಂಟಿಕ್ಕಿಕೊಂಡೇ ಇರುವವ, (ಇವು ಶಿಕ್ಷಕಿಯರಿಗೂ ಅನ್ವಯಿಸುತ್ತವೆ.) ಮಕ್ಕಳಿಗೆ ಹೊಡೆಯಲು ಕಾದಿರುವವ, ಸೆಕ್ಸ್ ಬಗ್ಗೆಯೇ ಮಾತನಾಡುವವ, ಪಾಠ ಮಾಡದೆ ಇರುವವ… ಹೀಗೆ ತರಹೇವಾರಿ ಶಿಕ್ಷಕರು ಇರುತ್ತಾರೆ. ಇಂತಹವರನ್ನು ಪತ್ತೆ ಮಾಡಿ ಶಿಕ್ಷಿಸುವ ಹೊಣೆಗಾರಿಕೆ ಕಾನೂನು, ಇಲಾಖೆ, ಸರ್ಕಾರ ಎಲ್ಲರಿಗಿಂತ ಪಾಲಕರ ಮೇಲೆಯೇ ಹೆಚ್ಚಾಗಿದೆ. ದೊಡ್ಡ ದೊಡ್ಡ ನಗರಗಳಲ್ಲಿ ಪಾಲಕರು, ಪೋಷಕರು ಇದರ ಬಗ್ಗೆ ಅಲ್ಪ ಸ್ವಲ್ಪ ಜಾಗೃತರಾಗಿದ್ದಾರೆ ಎಂಬುದೇ ಸಂತಸದ ಸಂಗತಿ.
ಇನ್ನು ದುಷ್ಟ, ನೀಚ ಶಿಕ್ಷಕರೊಟ್ಟಿಗೇ ಒಳ್ಳೆಯ ಶಿಕ್ಷಕರೂ ಇದ್ದಾರೆ ಅನ್ನುವುದೇ ಈ ಶಿಕ್ಷಣ ಕ್ಷೇತ್ರದ ಸೌಭಾಗ್ಯ. ಆದರೆ ಅಂತಹವರ ಸಂಖ್ಯೆ ಯಾವಾಗಲೂ ಕಡಿಮೆಯಾಗಿರುತ್ತದೆ. ಬಡತನದಲ್ಲಿರುವ ಮಕ್ಕಳಿಗೆ ಪುಸ್ತಕ-ಪೆನ್ನು-ಬಟ್ಟೆ ಕೊಡುವವರು, ಮಕ್ಕಳನ್ನು ಪ್ರೀತಿಯಿಂದ ಕಾಣುವವರು, ಅವರ ಬುದ್ಧಿಮತ್ತೆ-ಪ್ರತಿಭೆಯನ್ನು ಗುರುತಿಸಿ ಬೆನ್ನುತಟ್ಟಿ ಹುರಿದುಂಬಿಸುವವರು, ಪಾಠದ ಮಧ್ಯೆ ಜೀವನಮೌಲ್ಯಗಳನ್ನು ಹೇಳುವವರು, ಹೊಸ ಹೊಸ ಪುಸ್ತಕಗಳನ್ನು ಓದುವುದಕ್ಕೆ ಪ್ರೇರೇಪಿಸುವವರು ಇಲ್ಲದೇ ಇಲ್ಲ. ಇವರೇ ಅಥವಾ ಇಂತಹವರೇ ಶಾಲೆಯ ಕೀರ್ತಿಯನ್ನು ಹೆಚ್ಚಿಸುವವರು. ಇಂತಹವರನ್ನು ಹುಡುಕಿ ಗೌರವಿಸುವ ಅಗತ್ಯ ಇಂದು ಬಹಳ ಇದೆ. ಈ ಎಲ್ಲಾ ಒಳಿತು-ಕೆಡುಕುಗಳ ಮಧ್ಯೆಯೇ ಶಾಲೆಗಳ ದುರಂತವೆಂದರೆ ಸರ್ಕಾರದ ಅತಿಯಾದ ಹಸ್ತಕ್ಷೇಪ. ಎಂತಹ ಒಳ್ಳೆಯ ಸಮರ್ಥ, ದಕ್ಷ ಶಿಕ್ಷಕನಿದ್ದರೂ ಅವನಿಂದ ಉತ್ತಮವಾಗಿ ಪಾಠ ಮಾಡಲು ಸಾಧ್ಯವೇ ಇಲ್ಲ ಎಂಬ ವಾತಾವರಣ ಸೃಷ್ಟಿಯಾಗಿದೆ. ಸರ್ಕಾರವು ಮಕ್ಕಳಿಗೆ ಆಹಾರಧಾನ್ಯ, ಹಣ್ಣು, ಮೊಟ್ಟೆ, ಬಟ್ಟೆ ಕೊಡುವುದೂ ಸಾಕು, ನಾವು ಅದರ ಬಗ್ಗೆ ಲೆಕ್ಕ ಬರೆದು ಅದನ್ನುಡಿಪಾರ್ಟ್‌ಮೆಂಟಿಗೆ ಕಳುಹಿಸುವುದೂ ಸಾಕು ಎಂಬ ಸ್ಥಿತಿಗೆ ಶಾಲಾ ಶಿಕ್ಷಕರು ತಲುಪಿದ್ದಾರೆ. ಅವರ ನೋವು ಹೇಳತೀರದು. ಮೊಟ್ಟೆಗಳಿಗೆ ಲೆಕ್ಕ ಇಡುವುದು, ಅವುಗಳಲ್ಲಿ ಒಂದು ಒಡೆದುಹೋದರೂ ಅದಕ್ಕೆ ಕಾರಣ ಬರೆಯವುದು, ಅದರಲ್ಲಿರುವ ಪೌಷ್ಟಿಕಾಶಂಗಳನ್ನು ದಿನಾ ಪ್ರೇಯರ್ ಹಾಲಲ್ಲಿ ಹೇಳುವುದು, ಮಗುವೊಂದು ಬಾಳೆಹಣ್ಣು ತಿನ್ನದಿದ್ದರೆ ಅದಕ್ಕೆ ಕಾರಣ ಕೇಳಿ ಅದನ್ನು ಬರೆದಿಡುವುದು, ಊಟಕ್ಕೆ ದಿನಸಿಗಳನ್ನು ತೂಕಮಾಡಿ ಕೊಡುವುದು ಇವೇ ಮೊದಲಾದ ಶಿಕ್ಷಣೇತರ ಕೆಲಸಗಳೇ ಶಿಕ್ಷಕರನ್ನು ಹಣ್ಣುಗಾಯಿ ನೀರುಗಾಯಿ ಮಾಡಿವೆ. ಇಂತಹ ಅಪಸವ್ಯಗಳ ಮಧ್ಯೆಯೂ ಶಿಕ್ಷಕ ತನ್ನತನವನ್ನು ಉಳಿಸಿಕೊಳ್ಳಬೇಕಾಗಿದೆ. ಅದಕ್ಕೆ ಅವನಿಗಿರುವ ಸುವರ್ಣ ಮಾಧ್ಯಮವೆಂದರೆ ಉತ್ತಮ ಗ್ರಂಥಗಳ ವ್ಯಾಸಂಗ ಮತ್ತು ವ್ಯಾಪಕ ಓದು. ಒಂದಿಷ್ಟು ಬರಹ- ಚಿಂತನೆ. ಮೃದು ಹೃದಯ; ಪರೋಪಕಾರ ಬುದ್ಧಿ. ನಾನು ಅಂತಹ ಶಿಕ್ಷಕರನ್ನು ನೋಡಿದ್ದೇನೆ; ಗೌರವಿಸಿಯೂ ಇದ್ದೇನೆ.
ನಾನು ಏಳನೆಯ ತರಗತಿ ಓದುತ್ತಿದ್ದಾಗ ಎನ್.ಎಂ.ಗೌಡ ಅನ್ನುವವರು ಅತ್ಯುತ್ತಮ ಶಿಕ್ಷಕರಾಗಿ ವಿದ್ಯಾರ್ಥಿಗಳೆಲ್ಲರ ಹೃದಯವನ್ನು ಗೆದ್ದಿದ್ದರು. ಶಿಸ್ತುಬದ್ಧ ಜೀವನ, ಸ್ವಚ್ಛವಾದ, ಇಸ್ತ್ರಿ ಮಾಡಿದ ಗರಿಗರಿಯಾದ ಪ್ಯಾಂಟು-ಷರ್ಟುಗಳು, ಸಂದಿಗ್ಧತೆಯಿಲ್ಲದ ಪಾಠ, ಮಕ್ಕಳನ್ನು ಪ್ರೀತಿಸಿ ಪ್ರೋತ್ಸಾಹಿಸುವ ಅವರ ನಡವಳಿಕೆ ಇವೆಲ್ಲವೂ ಇಂದೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಇಂತಹದ್ದೇ ನಡವಳಿಕೆಯನ್ನು ಪರೋಕ್ಷವಾಗಿ ತಿಳಿಸುವ ಅಮೆರಿಕ ದೇಶದಅಧ್ಯಕ್ಷನಾಗಿದ್ದ ಅಬ್ರಹಾಂ ಲಿಂಕನ್‌ನ ಒಂದು ಪತ್ರ ಶಿಕ್ಷಕರಿಗೆಲ್ಲ ಅವನ ಒಂದರೆಡು ವಾಕ್ಯಗಳನ್ನು ಇಲ್ಲಿ ಉದ್ಧರಿಸಬಯಸುತ್ತೇನೆ. ಲಿಂಕನ್ ತನ್ನ ಮಗನನ್ನು ಶಾಲೆಗೆ ಸೇರಿಸುವ ದಿನ ಅಧ್ಯಾಪಕರಿಗೊಂದು ಪತ್ರ ಬರೆಯುತ್ತಾನೆ- “ನನ್ನ ಮಗ ಈ ದಿನ ಶಾಲೆಗೆ ಹೋಗಲಾರಂಭಿಸಿದ್ದಾನೆ. ಅವನ ಕೈಹಿಡಿದು ಕರೆದುಕೊಳ್ಳಿ. ಸ್ವಲ್ಪ ಕಾಲ ಅಲ್ಲಿ ಅವನಿಗೆ ಎಲ್ಲವೂ ಹೊಸದು, ವಿಚಿತ್ರ ಅನ್ನಿಸಬಹುದು. ಆದರೆ ನೀವು ಅವನೊಡನೆ ಮೃದುವಾಗಿ ಸಂಜೀವಿನಿಯಂತಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಅದಕ್ಕಾಗಿ ನಡೆದುಕೊಳ್ಳಿ. ಈ ತನಕ ಅವನು ತನ್ನದೇ ಆದ ಸಾಮ್ರಾಜ್ಯದ ದೊರೆಯಾಗಿದ್ದ. ತನ್ನ ಮನೆಯಂಗಳದ ಒಡೆಯನಾಗಿದ್ದ. ಅವನ ಮನಸ್ಸಿಗೆ ನೋವಾದಾಗಲೆಲ್ಲ ಅವನನ್ನು ಸಂತೈಸಲು ನಾನು ಅವನ ಬಳಿಯೇ ಇರುತ್ತಿದ್ದೆ. ಆದರೆ ಇನ್ನು ಎಲ್ಲವೂ ಭಿನ್ನವಾಗಿರುತ್ತದೆ… ಈ ಜಗತ್ತಿನಲ್ಲಿ ಬದುಕಲು ನಮಗೆ ಪ್ರೀತಿ, ವಿಶ್ವಾಸ, ಧೈರ್ಯದ ಅಗತ್ಯ ವಿದೆ. ಆದ್ದರಿಂದ ಅವನಿಗೆ ಬೇಕಾದುದೆಲ್ಲವನ್ನೂ ಪ್ರೀತಿಯಿಂದ ಕಲಿಸಿರಿ ಇತ್ಯಾದಿ. ಉತ್ತಮ ಶಿಕ್ಷಕರಾಗುವವರೆಲ್ಲರೂ ಮತ್ತೆ ಮತ್ತೆ ಮೆಲುಕು ಹಾಕುವ ಈ ಪತ್ರ ಶಿಕ್ಷಕರನ್ನು ಒಂದು ಎತ್ತರಕ್ಕೆ ಒಯ್ಯುವುದರಲ್ಲಿ ಸಂದೇಹವೇ ಇಲ್ಲ. ಅದು ಶಿಕ್ಷಕರ ಪಾಲಿಗೆ ಒದಗಿ ಬರಲಿ.
” ಶಿಕ್ಷಕರ ದಿನಾಚರಣೆಯಂದು (ಉಳಿದ ದಿನಗಳೂ ಕೂಡ) ಉತ್ತಮ ಶಿಕ್ಷಕ-ಶಿಕ್ಷಕಿಯರು ಮಕ್ಕಳ ಪುರೋಭಿವೃದ್ಧಿಗಾಗಿ ಏನು ಮಾಡಬಹುದೆಂದು ಯೋಚಿಸುವಮತ್ತು ಅದನ್ನು ಅನುಷ್ಠಾನಕ್ಕೆ ತರುವ ಒಂದು ಸುವರ್ಣ ಕ್ಷಣವಿದು ಎಂದು ನನ್ನ ಭಾವನೆ. ಶಿಕ್ಷಕನ ಹೊಣೆಗಾರಿಕೆ ಬಹಳ ದೊಡ್ಡದು.”





