ಪಂಜು ಗಂಗೊಳ್ಳಿ
ತನ್ವಿ ಚವಾಣ್ ದಿವೋರೆಗೆ ಚಿಕ್ಕಂದಿನಿಂದಲೂ ನೀರು ಅಂದರೆ ಸಾಕು, ಎಲ್ಲವನ್ನೂ ಮರೆತು ಬಿಡುತ್ತಿದ್ದರು. ಎಷ್ಟೆಂದರೆ, ಯಾವಾಗಲಾದರೂ ಅವರು ಯಾವುದೇ ಕಾರಣಕ್ಕೆ ಅಳುತ್ತಿದ್ದರೆ, ಯಾವುದಕ್ಕಾದರೂ ಹಟ ಮಾಡುತ್ತಿದ್ದರೆ ಅವಳ ತಂದೆ ತಾಯಿ ಅವರನ್ನು ನೀರಿನ ಟಬ್ಬಿನಲ್ಲಿ ಕುಳ್ಳಿರಿಸುತ್ತಿದ್ದರು, ಅಥವಾ ಆಡಲು ನೀರು ಕೊಡುತ್ತಿದ್ದರು. ಆಗ ತನ್ವಿ ತನ್ನ ಹಟ ಚಟ ಎಲ್ಲವನ್ನೂ ಮರೆಯುತ್ತಿದ್ದರು. ತನ್ವಿ ತುಸು ದೊಡ್ಡವರಾದ ನಂತರ ಈಜು ಕಲಿತು, ಶಾಲೆ ಮತ್ತು ಜಿಲ್ಲಾ ಮಟ್ಟದ ಈಜು ಚಾಂಪಿಯನ್ ಆದದ್ದು ಸಹಜವಾಗಿಯೇ ಇತ್ತು. ಆದರೆ, ಒಂಬತ್ತನೇ ತರಗತಿಯ ನಂತರ ಪುಸ್ತಕ ಕಲಿಕೆಯ ಹೊರೆ ಹೆಚ್ಚಾಗಿ, ಈಜು ಹಿಂದಕ್ಕೆ ಸರಿಯಿತು.
ಮುಂದಿನ ೧೮ ವರ್ಷಗಳ ಕಾಲ ತನ್ನ ಕುಟುಂಬದ ರೆಸಾರ್ಟ್‌ನ ಜವಾಬ್ದಾರಿ, ಅವಳಿ ಮಕ್ಕಳ ತಾಯಿಯ ಜವಾಬ್ದಾರಿ, ಒಬ್ಬಳು ಪತ್ನಿಯ ಜವಾಬ್ದಾರಿ ಮೊದಲಾದವುಗಳ ಭಾರದಲ್ಲಿ ತನ್ವಿಯವರ ಈಜಿನ ಆಸಕ್ತಿ ಎಲ್ಲೋ ಮರೆಯಾಯಿತು. ಎಲ್ಲೋ ಮರೆಯಾಯಿತು ಅಷ್ಟೆಯೇ ವಿನಾ ಸಂಪೂರ್ಣವಾಗಿ ಇಲ್ಲವಾಗಲಿಲ್ಲ. ನಡು ನಡುವೆ ಅದು ಅವರ ಮನಸ್ಸಿನ ಮೂಲೆಯಲ್ಲೆಲ್ಲೋ ಮಿಡಿಯುತ್ತಲೇ ಇರುತ್ತಿತ್ತು. ಒಂದು ದಿನ ಅದು ಧುತ್ತೆಂದು ಎದ್ದು ನಿಂತು, ‘ನಿನ್ನನ್ನು ನೀನು ಕಳೆದುಕೊಳ್ಳುತ್ತಿದ್ದೀಯಾ?’ ಅಂತ ಕೇಳಿಯೇ ಬಿಟ್ಟಿತು. ‘ಇಲ್ಲ’ ಎಂದು ತನಗೆ ಮಾತ್ರವೇ ಕೇಳಿಸುವ ಹಾಗೆ ಉತ್ತರಿಸಿದ ತನ್ವಿ ತನ್ನ ಬದುಕಿನ ಮೊದಲ ಪ್ರೀತಿಯಾದ ಈಜನ್ನು ಮತ್ತೆ ಕೈಗೆತ್ತಿಕೊಂಡರು.
ತನ್ವಿಗೆ ಆಗ ೩೩ ವರ್ಷ ಪ್ರಾಯ. ಒಂದು ದಿನ ಗಂಡನೊಂದಿಗೆ ಕುಳಿತು ಚಹ ಕುಡಿಯುತ್ತಿದ್ದಾಗ ತಾನು ಚಿಕ್ಕವಳಾಗಿದ್ದಾಗ ಕಾಣುತ್ತಿದ್ದ ಕನಸೊಂದನ್ನು ಅವರೊಂದಿಗೆ ಹೇಳಿಕೊಂಡರು. ಅವರ ಕನಸು ಏನು ಗೊತ್ತೇ? ೩೩ ಕಿ.ಮೀ. ಉದ್ದದ ಇಂಗ್ಲಿಷ್ ಕಾಲುವೆಯನ್ನು ಈಜಿ ದಾಟುವುದು! ಬಾಲ್ಯದಲ್ಲಿ ಯಾರೋ ಒಬ್ಬ ಈಜುಗಾರ ಇಂಗ್ಲಿಷ್ ಕಾಲುವೆಯನ್ನು ಈಜಿ ದಾಟಿದ ವರದಿಯೊಂದನ್ನು ಪತ್ರಿಕೆಯಲ್ಲಿ ಓದಿದ ನಂತರ ತನ್ವಿ ತಾನೂ ಒಂದು ದಿನ ಆ ಇಂಗ್ಲಿಷ್ ಕಾಲುವೆಯನ್ನು ಈಜುವ ಕನಸನ್ನು ಕಾಣುತ್ತಿದ್ದರು. ಆದರೆ, ಶಿಕ್ಷಣ, ಉದ್ಯೋಗ, ಮದುವೆ, ಮಕ್ಕಳು ಮೊದಲಾದ ಜವಾಬ್ದಾರಿಗಳು ಆ ಕನಸನ್ನು ಕನಸಾಗಿ ಇರಿಸಿದವು. ಈಗ ಅದನ್ನು ನನಸಾಗಿಸುವ ಹಟ ತನ್ವಿಯದು. ಮಗುವಾಗಿದ್ದಾಗ ನೀರು ಸಿಕ್ಕರೆ ತನ್ನ ಹಟವನ್ನು ಮರೆಯುತ್ತಿದ್ದ ತನ್ವಿ ಈಗ ನೀರು ಪಡೆಯುವ ಸಲುವಾಗಿಯೇ ಹಟ ಹಿಡಿದರು!
ಮುಂದಿನ ಎರಡು ವರ್ಷಗಳ ಸಮಯವನ್ನು ತನ್ವಿ ತನ್ನ ಹಟ ಸಾಧನೆಗೆ ಮುಡುಪಾಗಿರಿಸಿದರು. ಆ ಹಟದ ಫಲವಾಗಿಯೇ ೨೦೨೪ರ ಜೂನ್ ತಿಂಗಳಲ್ಲಿ ೩೩ ಕಿ.ಮೀ. ಉದ್ದದ ಇಂಗ್ಲಿಷ್ ಕಾಲುವೆಯನ್ನು ೧೭ ಗಂಟೆ, ೪೨ ನಿಮಿಷಗಳಲ್ಲಿ ಈಜಿ ತನ್ನ ಕನಸನ್ನು ನನಸಾಗಿಸಿಕೊಂಡರು. ಆದರೆ, ತನ್ವಿ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ನಡೆಸಿದ ಸಾಹಸ ಅಮೋಘವಾದುದು. ಹದಿನೆಂಟು ವರ್ಷಗಳ ನಂತರ ೨೦೨೨ರಲ್ಲಿ ಈಜುಕೊಳದೊಳಕ್ಕೆ ಇಳಿದಾಗ ತನ್ವಿಗೆ ತನ್ನ ಬಾಲ್ಯಕ್ಕೆ ಹಿಂದಿರುಗಿದ ಅನುಭವವಾಯಿತು. ಅವರ ಮೈಗೆ ನೀರು ತಾಕುತ್ತಿದ್ದಂತೆ ಅವರ ‘ಮಸಲ್ ಮೆಮರಿ (ಸ್ನಾಯು ಸ್ಮೃತಿ)’ ಎಚ್ಚೆತ್ತುಕೊಂಡಿತು. ಆ ಸಂತೋಷಕ್ಕೆ ಅವರಿಂದ ಕಣ್ಣೀರು ಬರುವುದನ್ನು ತಡೆಯಲಾಗಲಿಲ್ಲ.
ಶ್ರೀಕಾಂತ್ ವಿಶ್ವನಾಥನ್ ಎಂಬ ಒಬ್ಬ ಸಮರ್ಥ ಈಜು ಕೋಚಿನ ಬಳಿ ತರಬೇತಿಗೆ ಸೇರಿದರು. ಬೆಳಗಿನ ೪ ಗಂಟೆಗೆ ಅವರ ಈಜು ತರಬೇತಿ ಶುರುವಾಗುತ್ತಿತ್ತು. ಅದಕ್ಕಾಗಿ ತನ್ವಿ ರಾತ್ರಿ ಎಂಟೂವರೆ ಗಂಟೆಗೆ ಮಲಗಿ ಬೆಳಿಗ್ಗೆ ೩ ಗಂಟೆಗೆ ಏಳುತ್ತಿದ್ದರು. ಆಗ ಅವರ ಅವಳಿ ಮಕ್ಕಳಿಗೆ ಕೇವಲ ಮೂರು ವರ್ಷ ಪ್ರಾಯವಾಗಿತ್ತು. ಅಷ್ಟು ಚಿಕ್ಕ ಮಕ್ಕಳನ್ನು ಬಿಟ್ಟು ತರಬೇತಿಗೆ ಹೋಗುವಾಗಲೆಲ್ಲ ಅವರಿಗೆ ಅಪರಾಧಿ ಮನೋಭಾವನೆ ಕಾಡುತ್ತಿತ್ತು.
ತನ್ವಿಗೆ ತಮ್ಮ ದೈಹಿಕ ಹಾಗೂ ಮಾನಸಿಕ ಸವಾಲುಗಳನ್ನು ಎದುರಿಸಲು ಪ್ರಾರಂಭದ ದಿನಗಳಲ್ಲಿ ತೀರಾ ಕಷ್ಟಕರವಾಗಿದ್ದವು. ೨೦ ನಿಮಿಷ ಈಜುವುದರಲ್ಲಿ ಅವರ ಮೈ ಮನಸ್ಸು ಎರಡೂ ಬಳಲುತ್ತಿದ್ದವು. ನಿಧಾನಕ್ಕೆ ದೇಹದ ಕಸುವನ್ನು ಹೆಚ್ಚಿಸಿಕೊಂಡು, ಈಜುಕೊಳದ ಜೊತೆಯಲ್ಲಿ ವಾರಾಂತ್ಯದ ದಿನಗಳಲ್ಲಿ ನಾಸಿಕ್ನ ಅಣೆಕಟ್ಟೆಯ ನೀರಿನಲ್ಲೂ ಅಭ್ಯಾಸ ಮಾಡಿದರು. ಇಂಗ್ಲಿಷ್ ಕಾಲುವೆಯ ಮಂಜಿನಂತೆ ಕೊರೆಯುವ ತಣ್ಣಗಿನ ನೀರಿಗೆ ಹೊಂದಿಕೊಳ್ಳಲು ಬೆಳಗಿನ ಹೊತ್ತು ಶೀತಲೀಕರಿಸಿದ ನೀರಿನಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿದರು. ಇಂಗ್ಲಿಷ್ ಕಾಲುವೆಯ ತಣ್ಣಗಿನ ವಾತಾವರಣವಿರುವ ನೈನಿತಾಲ್‌ಗೆ ಹೋಗಿ ಅಲ್ಲಿನ ಕೊಳಗಳಲ್ಲಿ ಈಜಿನ ಅಭ್ಯಾಸ ಮಾಡಿದರು.
ಇಷ್ಟೆಲ್ಲ ಮಾಡಿದ ನಂತರವೂ ತನ್ವಿಗೆ ಏನೋ ಒಂದು ತಮ್ಮನ್ನು ಹಿಂದಕ್ಕೆ ಜಗ್ಗುತ್ತಿರುವುದರ ಅನುಭವವಾಗುತ್ತಿತ್ತು. ಅದೇನು ಎಂದು ಸೂಕ್ಷ ವಾಗಿ ಆಲೋಚಿಸಿದಾಗ ತಿಳಿಯಿತು, ತಮ್ಮ ತಾಯಿ ತಮ್ಮ ಈ ಸಾಹಸಕ್ಕೆ ಅನುಮತಿ ಕೊಟ್ಟು ಹಾರೈಸಿದ್ದರೂ ತಂದೆ ಕಿರಣ್ ಚವಾಣ್ ತಮಗಿನ್ನು ಅನುಮತಿಯೂ ಕೊಟ್ಟಿಲ್ಲ, ಹಾರೈಕೆಯನ್ನೂ ನೀಡಿಲ್ಲ ಎಂಬುದು ನೆನಪಾಯಿತು. ಕಿರಣ್ ಚವಾಣ್‌ಗೆ ಇಂಗ್ಲಿಷ್ ಕಾಲುವೆಯನ್ನು ಈಜುವುದು ಎಷ್ಟು ಅಪಾಯಕಾರಿ ಸಾಹಸವೆಂಬುದು ತಿಳಿದಿತ್ತು. ಆ ಸಾಹಸದಲ್ಲಿ ಪ್ರಾಣ ಕಳೆದುಕೊಂಡವರ ಬಗ್ಗೆ ಅವರಿಗೆ ತಿಳಿದಿತ್ತು. ಹಾಗಾಗಿ, ತನ್ವಿ ಆ ಸಾಹಸಕ್ಕೆ ಮುಂದಾದಾಗ ಸಹಜವಾಗಿಯೇ ಅವರು ಸಮ್ಮತಿಸಲಿಲ್ಲ. ಆದರೆ, ತನ್ವಿಯ ಕೋಚ್ ಅವರಿಗೆ ಸಂಪೂರ್ಣ ಭರವಸೆ ನೀಡಿದ ನಂತರ ಒಪ್ಪಿದರು. ಅದರ ನಂತರ ತನ್ವಿ ನಿರಾಳವಾಗಿ ತನ್ನ ಗುರಿಯತ್ತ ಗಮನವನ್ನು ಕೇಂದ್ರೀಕರಿಸಿದರು.
ತನ್ವಿಯವರಿಗೆ ಸಮಯವನ್ನು ಹೊಂದಿಸುವುದು ಬಹಳ ದೊಡ್ಡ ಸವಾಲಿನ ಕೆಲಸವಾಗಿತ್ತು. ಬೆಳಿಗ್ಗೆ ೪ ರಿಂದ ೭ರ ತನಕ ಈಜಿನ ಅಭ್ಯಾಸ. ನಂತರ, ಮಕ್ಕಳನ್ನು ತಯಾರು ಮಾಡಿ ಶಾಲೆಗೆ ಕಳಿಸುವುದು, ತನ್ನ ಆಫೀಸಿಗೆ ಹೋಗುವುದು. ನಂತರ, ಪುನಃ ಸಂಜೆಯಿಂದ ರಾತ್ರಿಯ ತನಕ ಈಜಿನ ಅಭ್ಯಾಸ. ಇನ್ನೂ ಹೆಚ್ಚಿನ ಸಮಯವನ್ನು ಗಳಿಸಲು ಏಳು ತಿಂಗಳು ಕಾಲ ಸೋಶಿಯಲ್ ಮೀಡಿಯಾ ಮತ್ತು ಎಲ್ಲಾ ರೀತಿಯ ಸಾಮಾಜಿಕ ಕಾರ್ಯಕ್ರಮಗಳಿಂದ ದೂರವಾದರು. ತನ್ನ ಅಭ್ಯಾಸದ ಕೊನೆಯ ಆರು ತಿಂಗಳು ಅವರು ಪ್ರತಿದಿನ ಎಂಟು ಗಂಟೆ ಈಜುವುದು, ಚೆನ್ನಾಗಿ ನಿದ್ರಿಸುವುದು ಮತ್ತು ಸಾಕಷ್ಟು ವಿಶ್ರಾಂತಿ ಪಡೆಯುವುದು ಮಾಡಿದರು. ಸರಿಯಾಗಿ ಒಂದು ತಿಂಗಳ ಮುಂಚೆ ತನ್ವಿ ತನ್ನ ಕೋಚ್ ಮತ್ತು ಕುಟುಂಬ ಸದಸ್ಯರ ಜೊತೆ ಇಂಗ್ಲಿಷ್ ಕಾಲುವೆ ಶುರುವಾಗುವ ಬ್ರಿಟನ್ನಿನ ಡೋವಗೆ ಹೋಗಿ, ಅಲ್ಲಿನ ಬೀಚ್‌ಗಳಲ್ಲಿ ಅಭ್ಯಾಸ ಮಾಡಿ, ತಮ್ಮ ಶರೀರ ಇಂಗ್ಲಿಷ್ ಕಾಲುವೆಯ ನೀರಿಗೆ ಹೊಂದಿಕೊಳ್ಳಲು ಸುಲಭವಾಗಿಸಿಕೊಂಡರು.
೨೦೨೪ರ ಜೂನ್ ೨೯ರಂದು ತನ್ವಿ ತಮ್ಮ ಗುರಿ ಸಾಧನೆಗೆ ಇಂಗ್ಲಿಷ್ ಕಾಲುವೆಗೆ ಇಳಿದಾಗ ಅವರೊಂದಿಗೆ ಅದೇ ಸಾಹಸ ಮಾಡಲು ಬಂದ ಇತರ ಏಳು ಜನರಿದ್ದರು. ಇಂಗ್ಲಿಷ್ ಕಾಲುವೆಯ ನೀರಲ್ಲಿ ಅವರಿಗೆ ಎದುರಾದ ಮೊತ್ತ ಮೊದಲ ಸವಾಲು ನೂರಾರು ಜೆಲ್ಲಿ ಫಿಶ್ (ತುರಿಕೆ ಮೀನು) ಗಳದ್ದು. ಅವುಗಳ ಕಡಿತದಿಂದ ಉರಿ, ತುರಿಕೆ ಮಾತ್ರವಲ್ಲದೆ ಕರೆಂಟ್ ಶಾಕ್ ಕೂಡ ಅನುಭವಿಸ ಬೇಕಾಯಿತು. ಸುಮಾರು ೧೦-೧೧ ಗಂಟೆ ಕಾಲ ಈಜಿದ ನಂತರ ವಾತಾವರಣ ಬಿರುಸಾಯಿತು. ನೀರಲ್ಲಿ ಎತ್ತರದ ಅಲೆಗಳು, ಒಳ ಸುಳಿಗಳು ಎದ್ದು ತನ್ವಿಗೆ ಈಜುವುದು ದುಸ್ತರವಾಯಿತು. ತೀವ್ರ ಸ್ವರೂಪದ ಒಂದು ಸುಳಿಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸಿಕ್ಕಿ ಹಾಕಿಕೊಂಡು ಒಂದಿಂಚೂ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಅವರ ಜೊತೆಗಿದ್ದ ಏಳು ಜನರಲ್ಲಿ ಮೂವರು ಸೋಲೊಪ್ಪಿಕೊಂಡು ತಮ್ಮ ಸಾಹಸವನ್ನು ಅಲ್ಲಿಗೇ ನಿಲ್ಲಿಸಿದರು.
ತನ್ವಿಯೂ ಕೂಡ ವಾಂತಿ ಮಾಡಿಕೊಂಡು, ಸಂಪೂರ್ಣ ನಿತ್ರಾಣಗೊಂಡು ಕೈ ಚೆಲ್ಲಿದರು. ಆದರೆ, ಬೋಟಿನಲ್ಲಿದ್ದ ತಂದೆ, ಗಂಡ ಮತ್ತು ಕೋಚಿನ ಸ್ಛೂರ್ತಿದಾಯಕ ಮಾತುಗಳಿಂದ ಮರು ಉತ್ಸಾಹ ಪಡೆದು, ಆ ಸುಳಿಯ ಹೊರ ಭಾಗದಲ್ಲಿ ಸುಮಾರು ೧೦ ಕಿ.ಮೀ. ಹೆಚ್ಚಿನ ದೂರ ಈಜಿ, ಫ್ರೆಂಚ್ ದೇಶದಲ್ಲಿ ಕೊನೆಯಾಗುವ ಇಂಗ್ಲಿಷ್ ಕಾಲುವೆಯ ವೀಸ್ಸಾಂಟ್ ಎಂಬ ಜಾಗವನ್ನು ತಲುಪಿ ಕೊನೆಗೂ ತಮ್ಮ ಗುರಿ ಸಾಧಿಸಿದರು. ಆ ಸುಳಿಯ ಕಾರಣ ತನ್ವಿ ೩೩ ಕಿ.ಮೀ. ಉದ್ದದ ಕಾಲುವೆಯನ್ನು ೪೨ ಕಿ.ಮೀ. ಉದ್ದ ಈಜ ಬೇಕಾಗಿ ಬಂದಿತು.
“ಎರಡು ವರ್ಷಗಳ ಸಮಯವನ್ನು ತನ್ವಿ ತನ್ನ ಹಟ ಸಾಧನೆಗೆ ಮುಡುಪಾಗಿರಿಸಿದರು. ಆ ಹಟದ ಫಲವಾಗಿಯೇ ೨೦೨೪ರ ಜೂನ್ ತಿಂಗಳಲ್ಲಿ ೩೩ ಕಿ.ಮೀ. ಉದ್ದದ ಇಂಗ್ಲಿಷ್ ಕಾಲುವೆಯನ್ನು ೧೭ ಗಂಟೆ, ೪೨ ನಿಮಿಷಗಳಲ್ಲಿ ಈಜಿ ತನ್ನ ಕನಸನ್ನು ನನಸಾಗಿಸಿಕೊಂಡರು. ಆದರೆ, ತನ್ವಿ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ನಡೆಸಿದ ಸಾಹಸ ಅಮೋಘವಾದುದು.”





