Mysore
29
few clouds

Social Media

ಶುಕ್ರವಾರ, 13 ಫೆಬ್ರವರಿ 2026
Light
Dark

ವಿವಿಗಳಲ್ಲಿ ಸಾಮಾಜಿಕ ನ್ಯಾಯ: ಸಂಕಟಗಳು – ಸವಾಲುಗಳು

 ಡಾ.ಶಿವಲಿಂಗಸ್ವಾಮಿ ಎಚ್.ಕೆ.

ಯುಜಿಸಿ- ೨೦೨೬ ನಿಯಮಾವಳಿಗಳು ಹೇಳುವುದೇನು?

ಉನ್ನತ ಶಿಕ್ಷಣದಲ್ಲಿ ಸೃಷ್ಟಿಸಬೇಕಿರುವ ಸಮಾನತೆಗೆ ಸಂಬಂಧಿಸಿದಂತೆ ಯುಜಿಸಿ (ವಿಶ್ವವಿದ್ಯಾಲಯಗಳ ಅನುದಾನ ಆಯೋಗ)-೨೦೨೬ರ ನಿಯಮಾವಳಿಗಳು, ಭಾರತೀಯ ವಿಶ್ವವಿದ್ಯಾಲಯಗಳನ್ನು ರಾಷ್ಟ್ರ ಮಟ್ಟದ ಚರ್ಚೆಯ ಕೇಂದ್ರಬಿಂದುವಾಗಿ ಮಾಡಿವೆ.

ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಲ್ಲಿ ಕಂಡುಬರಬಹುದಾದ ಜಾತಿ ತಾರತಮ್ಯದ ವಿರುದ್ಧ ಸದ್ಯಕ್ಕಿರುವ ರಕ್ಷಣೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಹೊಸ ನಿಯಮಾವಳಿಗಳನ್ನು ಪರಿಚಯಿಸಲಾಯಿತು. ಆದರೆ ಈ ನಿಯಮಾವಳಿಗಳನ್ನು ರೂಪಿಸುವ ಹಂತದಲ್ಲಿ ಸ್ಪಷ್ಟತೆಯ ಕೊರತೆ, ಅವುಗಳ ವ್ಯಾಪ್ತಿಯ ನಿಖರತೆಯಲ್ಲಿ ಅಸ್ಪಷ್ಟತೆ ಮತ್ತು ಕಡೆಗೆ ಇವುಗಳುದುರುಪಯೋಗವಾಗುವ ಹಿನ್ನೆಲೆಯಲ್ಲಿ ಬಲವಾದ ವಿರೋಧಗಳು ವ್ಯಕ್ತವಾಗಿವೆ. ಹಾಗಾಗಿ, ೨೦೨೬ರ ನಿಯಮಾವಳಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ೨೦೧೨ರ ಮಾರ್ಗಸೂಚಿಗಳನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಹಾಗೆಯೆ, ಸುಪ್ರೀಂ ಕೋರ್ಟ್‌ನ ಈ ನಿರ್ಧಾರವು ವಿಶ್ವವಿದ್ಯಾಲಯಗಳಲ್ಲಿ ಸಮಾನತೆಯನ್ನು ಹೇಗೆ ಸಾಧಿಸಬೇಕು ಎಂಬ ಅತ್ಯಂತ ಮಹತ್ವದ ಪ್ರಶ್ನೆಗೆ ಎರಡು ಆಯ್ಕೆಗಳು ನಮ್ಮ ಮುಂದೆ ಇರುತ್ತವೆ: ೨೦೨೬ರ ಮಾರ್ಗಸೂಚಿಗಳಂತೆ ನಿಯಮಾವಳಿಗಳ ಕಠಿಣ ಅನುಷ್ಠಾನ ಅಥವಾ ೨೦೧೨ರ ಮಾರ್ಗಸೂಚಿಗಳಂತೆ ಸಮತೋಲನಯುತ ಕ್ರಮಗಳು. ವಾಸ್ತವವಾಗಿ, ಈ ಚರ್ಚೆ ಕೇವಲ ಕಾನೂನು ತಾಂತ್ರಿಕತೆಗಳಿಗೆ ಮಾತ್ರ ಸೀಮಿತವಾಗಿಲ್ಲ.

ಆದ್ದರಿಂದ, ದೇಶದಾದ್ಯಂತ ಎಲ್ಲ ವಿದ್ಯಾರ್ಥಿಗಳ, ಶಿಕ್ಷಕರ ಮತ್ತು ಶಿಕ್ಷಣ ಸಂಸ್ಥೆಗಳ ದಿನನಿತ್ಯದ ಅನುಭವಗಳನ್ನು ಸ್ಪರ್ಶಿಸುವ ಈ ನಿಯಮಾವಳಿಗಳಸಮಗ್ರ ಮತ್ತು ಕೂಲಂಕಷ ಗ್ರಹಿಕೆ ಅತ್ಯವಶ್ಯವಾಗುತ್ತದೆ. ಯುಜಿಸಿ-೨೦೨೬ ಮಾರ್ಗಸೂಚಿಗಳ ಶಿಫಾರಸ್ಸಿಗೆ ಇರುವ ಪ್ರಮುಖ ಕಾರಣವೆಂದರೆ, ೨೦೧೨ರ ಮಾರ್ಗಸೂಚಿಗಳು ಜಾತಿ ತಾರತಮ್ಯವನ್ನು ತಡೆಗಟ್ಟಲೆಂದೇ ಇದ್ದರೂ, ಅನೇಕ ವಿಶ್ವವಿದ್ಯಾಲಯಗಳು ಅವನ್ನು ಕೇವಲ ದಿನನಿತ್ಯದ ದಾಖಲೆಗಳಂತೆ ಪರಿಗಣಿಸಿವೆ ಎಂಬ ದೂರು ಕೇಳಿಬರುತ್ತಿದೆ. ಇದು ಸಾಲದೆಂಬಂತೆ, ದಾಖಲಾದ ದೂರುಗಳನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಬಹಳ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಹಲವು ಪ್ರಕರಣಗಳಲ್ಲಿ ಜಾತಿ, ಲಿಂಗ ಮತ್ತು ಸಾಮಾಜಿಕ ಹಿನ್ನೆಲೆಗೆ ಸಂಬಂಧಿಸಿದ ತಾರತಮ್ಯವನ್ನು ನಿರಾಕರಿಸಲಾಗಿದೆ ಮತ್ತು ಹಲವೆಡೆ ವಿನಾಕಾರಣ ವಿಳಂಬಗೊಳಿಸಲಾಗಿದೆ ಎಂಬುದು ಸಹ ಈ ಮಾರ್ಗಸೂಚಿಗಳ ಶಿಫಾರಸ್ಸಿಗೆ ಕಾರಣವಾಗಿವೆ. ಆದ್ದರಿಂದ, ೨೦೨೬ರ ಮಾರ್ಗಸೂಚಿಗಳನ್ನು ಸ್ಪಷ್ಟ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ನಿಶ್ಚಿತಗೊಳಿಸುವ ಉದ್ದೇಶದಿಂದ ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ೨೦೧೨ರ ಮಾರ್ಗಸೂಚಿಗಳನ್ನು ಗಟ್ಟಿಗೊಳಿಸುವಉದ್ದೇಶದಿಂದ, ೨೦೨೬ರ ಯುಜಿಸಿ ಮಾರ್ಗಸೂಚಿಗಳು ಕಡ್ಡಾಯ ಮತ್ತು ಜಾರಿಗೊಳಿಸಬಹುದಾದ ವ್ಯವಸ್ಥೆಗಳನ್ನು ಪ್ರಸ್ತಾಪಿಸಿವೆ. ಇವುಗಳಲ್ಲಿ ಸ್ಪಷ್ಟ ಅಧಿಕಾರಗಳನ್ನು ಹೊಂದಿರುವ ಸಮಾನತೆ ಸಮಿತಿಗಳು (Equity
Committees) ಮತ್ತು ಸಮಾನ ಅವಕಾಶ ಕೇಂದ್ರಗಳ (Equal Opportunity Centres)ನ್ನು ಸ್ಥಾಪಿಸುವುದು, ದೂರುಗಳ ಪರಿಹಾರಕ್ಕೆ ನಿಶ್ಚಿತ ಕಾಲಮಿತಿಗಳನ್ನು ನಿಗದಿಪಡಿಸುವುದು ಹಾಗೂ ಮಾರ್ಗಸೂಚಿಗಳನ್ನು ಪಾಲಿಸದ ವಿಶ್ವವಿದ್ಯಾಲಯ ಆಡಳಿತಗಳ ಮೇಲೆ ಹೊಣೆಗಾರಿಕೆಯನ್ನು ವಿಧಿಸುವುದು ಸೇರಿವೆ. ಹಾಗೆಯೇ, ಜಾತಿ ತಾರತಮ್ಯಕ್ಕೆ ಸಂಬಂಧಿಸಿದ ದೂರುಗಳನ್ನು ಕೇವಲ ಕಾಗದದ ಮೇಲಿನ ನಿರ್ವಹಣೆಗೆ ಮಾತ್ರ ಸೀಮಿತಗೊಳಿಸದೆ ಎಲ್ಲ ಸಂಸ್ಥೆಗಳೂ ತಮ್ಮ ಜವಾಬ್ದಾರಿಯನ್ನು ಕಡ್ಡಾಯವಾಗಿ ನಿರ್ವಹಿಸುವಂತಾಗಬೇಕು ಎಂಬುದೇ ಈ ಸಮಿತಿಗಳ ಉದ್ದೇಶವಾಗಿದೆ. ಅಂದರೆ, ಸಮಾನತೆ ಕೇವಲ ಭರವಸೆಯಾಗಿ ಅಥವಾ ಕನಸಾಗಿ ಉಳಿಯದೆ ಎಲ್ಲ ಕ್ಯಾಂಪಸ್‌ಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳಬೇಕು ಎಂಬ ಆಶಯ ಇಲ್ಲಿ ಕಂಡುಬರುತ್ತದೆ.

ಆದರೆ ಯುಜಿಸಿ ೨೦೨೬ರ ಮಾರ್ಗಸೂಚಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅವುಗಳಲ್ಲಿನ ಕೆಲವು ಅಂಶಗಳು ಸ್ಪಷ್ಟವಾಗಿ ರೂಪುಗೊಂಡಿಲ್ಲವೆಂದು ಹಾಗೂ ಅವು ಗೊಂದಲಕ್ಕೂ, ದುರುಪಯೋಗಕ್ಕೂ ಕಾರಣವಾಗಬಹುದೆಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ತಾರತಮ್ಯ ಮತ್ತು ಸಮಾನತೆಗೆ ಸಂಬಂಧಿಸಿದ ಪ್ರಮುಖ ಪದಗಳಿಗೆ ಇನ್ನಷ್ಟು ಸ್ಪಷ್ಟವಾದ ವ್ಯಾಖ್ಯಾನಗಳು ಹಾಗೂ ಬಲವಾದ ಕಾನೂನು ರಕ್ಷಣೆಗಳು ಅಗತ್ಯವೆಂದು ನ್ಯಾಯಾಲಯ ಗಮನಿಸಿದೆ. ಜೊತೆಗೆ, ಈ ಮಾರ್ಗಸೂಚಿಗಳು ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ನ್ಯಾಯ ಒದಗಿಸುತ್ತವೆಯೇ ಮತ್ತು ದೂರುದಾರರು ಹಾಗೂ ಆರೋಪಿತರಿಬ್ಬರಿಗೂ ಸಮರ್ಪಕ ಪ್ರಕ್ರಿಯಾತ್ಮಕ ರಕ್ಷಣೆಗಳಿವೆಯೇ ಎಂಬ ಬಗ್ಗೆ ಕೂಡ ಆತಂಕ ವ್ಯಕ್ತಪಡಿಸಲಾಗಿದೆ. ಹಾಗಾಗಿ, ಈ ಎಲ್ಲ ವಿಷಯಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸುವವರೆಗೆ, ಯಾವುದೇ ಗೊಂದಲ ಅಥವಾ ಅನ್ಯಾಯ ಸಂಭವಿಸದಂತೆ ೨೦೨೬ ಮಾರ್ಗಸೂಚಿಗಳ ಜಾರಿಗೆ ವಿರಾಮ ನೀಡಿ, ೨೦೧೨ರ ಮಾರ್ಗಸೂಚಿಗಳನ್ನು ಮುಂದುವರಿಸಲು ನ್ಯಾಯಾಲಯ ತೀರ್ಮಾನಿಸಿದೆ.

ಜಾತಿ ವ್ಯವಸ್ಥೆ ಭಾರತೀಯ ಸಮಾಜದಲ್ಲಿ ಎಷ್ಟು ಆಳವಾಗಿ ನೆಲೆಸಿದೆಯೆಂದರೆ ಅದು ವಿಶ್ವವಿದ್ಯಾಲಯಗಳಂತಹ ಆಧುನಿಕ ಸಂಸ್ಥೆಗಳಲ್ಲಿಯೂ ಜನರಮನೋಭಾವಗಳು ಮತ್ತು ಅಽಕಾರ ಸಂಬಂಧಗಳನ್ನು ರೂಪಿಸುತ್ತಲೇ ಇದೆ.ಈ ಕಾರಣದಿಂದಾಗಿ, ಜಾತಿ ವ್ಯವಸ್ಥೆಯ ನೈತಿಕ ಹಾಗೂ ಧಾರ್ಮಿಕ ನೆಲೆಗಳನ್ನು ನೇರವಾಗಿ ಪ್ರಶ್ನಿಸುವುದಕ್ಕಾಗಿ ಮತ್ತು ಪಾರಂಪರಿಕವಾಗಿ ಬೆಳೆದು ಬಂದಿರುವ ಪವಿತ್ರ ಸಂಪ್ರದಾಯಗಳು ಸಾಮಾಜಿಕ ಅಸಮಾನತೆಯನ್ನು ಹೇಗೆ ಮುಂದುವರಿಸುತ್ತವೆ ಎಂಬುದನ್ನು ಬಯಲಿಗೆಳೆಯುವುದಕ್ಕಾಗಿ ರಚಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ Annihilation of
Caste ಕೃತಿಯನ್ನು ಗಮನಿಸಬೇಕಾಗಿದೆ. ಈ ಕೃತಿಯಲ್ಲಿ ಹಿಂದೂ ಸಮಾಜವು ತನ್ನ ಜಾತಿ ಆಧಾರಿತ ಸಾಮಾಜಿಕ ಮೌಲ್ಯಗಳು ಎಂದೂ ಬದಲಾಗಲಾರವು ಎಂಬ ನಂಬಿಕೆಯನ್ನು ತ್ಯಜಿಸಬೇಕು ಎಂದು ಅವರು ಒತ್ತಿ ಹೇಳುತ್ತಾರೆ. ಎಲ್ಲ ಸಮಾಜಗಳಲ್ಲಿ ನೈತಿಕ ಮಾನದಂಡಗಳು ನಿರಂತರವಾಗಿ ಪರಿಷ್ಕರಣೆಗೆ ಒಳಪಡುವಂತೆ ಇರಬೇಕು ಎಂಬುದು ಅಂಬೇಡ್ಕರ್ ಅವರ ಅಭಿಪ್ರಾಯ.

ಮುಂದುವರಿದು, ‘ಸದಾಚಾರ’ ಎಂಬ ಹಿಂದೂ ಸಮಾಜದ ಪರಿಕಲ್ಪನೆಯನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವ ಅಂಬೇಡ್ಕರ್, ಅದು ನೈತಿಕವಾಗಿ ‘ಒಳ್ಳೆಯ’ ಕ್ರಿಯೆಗಳನ್ನು ಸೂಚಿಸುವುದಿಲ್ಲ; ಬದಲಾಗಿ ‘ಸದಾಚಾರ’ ಪುರಾತನ ಸಂಪ್ರದಾಯಗಳು ನ್ಯಾಯಯುಕ್ತವಾಗಿರಲಿ ಅಥವಾ ಇಲ್ಲದಿರಲಿ ಅವುಗಳನ್ನು ಅಂಧವಾಗಿ ಅನುಸರಿಸುವುದನ್ನೇ ಸೂಚಿಸುತ್ತದೆ ಎಂದು ಸ್ಪಷ್ಟಪಡಿಸುತ್ತಾರೆ. ಸಂಪ್ರದಾಯದ ಅಂಧಪಾಲನೆಯೇ ನೈತಿಕ ಮಾರ್ಗದರ್ಶಿ ಎಂಬ ಧೋರಣೆಯನ್ನು ಅವರು ಖಂಡಿಸಿ, ಸಾಮಾಜಿಕ ಸುಧಾರಣೆ ಕೇವಲ ಜಾತಿ ಆಚರಣೆಗಳನ್ನು ಸುಧಾರಿಸುವುದರಿಂದ ಆಗುವುದಿಲ್ಲ ಎಂದು ಅಭಿಪ್ರಾಯಪಡುತ್ತಾರೆ. ಕಡೆಯಲ್ಲಿ, ಭಾರತೀಯ ಸಮಾಜದಲ್ಲಿ ನಿಜವಾದ ಸಮಾನತೆ, ಗೌರವ ಮತ್ತು ಸ್ವಾತಂತ್ರ್ಯ ಸಾಽಸಬೇಕಾದರೆ ಜಾತಿಯನ್ನೇ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದು ಅಂಬೇಡ್ಕರ್ ಪ್ರತಿಪಾದಿಸುತ್ತಾರೆ.

ಡಾ.ಬಿ.ಆರ್.ಅಂಬೇಡ್ಕರ್ ಅವರ Annihilation of Caste(೧೯೩೬) ಕೃತಿಯ ಹೊರತಾಗಿಯೂ, Prevention of Atrocities (೧೯೯೦)ಕಾಯ್ದೆ ಜಾರಿಯ ನಂತರವೂ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯವನ್ನು ತಡೆಗಟ್ಟುವ ಉದ್ದೇಶದಿಂದ ೨೦೧೨ರ ಯುಜಿಸಿ ಮಾರ್ಗಸೂಚಿಗಳನ್ನು ಪರಿಚಯಿಸಿದ ಮೇಲೆಯೂ ಜಾತಿ ಸಮಸ್ಯೆ ಇನ್ನೂ ಗಂಭೀರವಾಗಿಯೇ ಉಳಿದು, ಅಂಬೇಡ್ಕರ್ ಅವರ Liberty, Equality ಮತ್ತು Fraternity ಆಧಾರಿತ ಮಾದರಿ ಸಮಾಜದ ಪರಿಕಲ್ಪನೆ ನಿಜವಾಗದೆ ಇರದಿರುವುದು ವಿಷಾದನೀಯ.

(ಲೇಖಕರು, ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು)

” ಜಾತಿ ವ್ಯವಸ್ಥೆ ಭಾರತೀಯ ಸಮಾಜದಲ್ಲಿ ಎಷ್ಟು ಆಳವಾಗಿ ನೆಲೆಸಿದೆಯೆಂದರೆ ಅದು ವಿಶ್ವವಿದ್ಯಾಲಯಗಳಂತಹ ಆಧುನಿಕ ಸಂಸ್ಥೆಗಳಲ್ಲಿಯೂ ಜನರ ಮನೋಭಾವಗಳು ಮತ್ತು ಅಧಿಕಾರ ಸಂಬಂಧಗಳನ್ನು ರೂಪಿಸುತ್ತಲೇ ಇದೆ.”

 

 

 

Tags:
error: Content is protected !!