Mysore
23
overcast clouds
Light
Dark

ಸ್ವಯಂ ಉದ್ಯೋಗದ ಸ್ವಾವಲಂಬಿ ಬದುಕು ಕಟ್ಟಿಕೊಂಡ ಶೋಭಾ

• ಶ್ರೀವಿದ್ಯಾ ಕಾಮತ್

ಮಮತೆ, ಪ್ರೀತಿಯ ಗಣಿ ಹೆಣ್ಣು. ಹೆಣ್ಣಿಲ್ಲದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಅಂತಹ ಹೆಣ್ಣುಮಕ್ಕಳು ತಮ್ಮ ಸೃಜನಾತ್ಮಕತೆಯಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವ ರೀತಿ ಮೆಚ್ಚುವಂತಹದ್ದು. ಸಂಸಾರ, ಗಂಡ, ಮಡಿವಂತಿಕೆ, ಮಕ್ಕಳು ಎಂಬ ಬಂಧಗಳನ್ನು ಮೀರಿ ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಕೊಡುಗೆಯನ್ನು ನೀಡುವ ಮೂಲಕ ಸಾಧನೆಯ ಹಾದಿಯಲ್ಲಿದ್ದಾಳೆ. ಅನೇಕ ಮಹಿಳೆಯರು ತಮ್ಮ ಸ್ವಾವಲಂಬಿ ಉದ್ಯೋಗಗಳ ಮೂಲಕ ಇಂದು ಆರ್ಥಿಕವಾಗಿಯೂ ಸಬಲರಾಗುತ್ತಿದ್ದಾರೆ.

ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡ ಸ್ವಯಂ ಉದ್ಯೋಗದ ಸ್ವಾವಲಂಬಿ ಬದುಕು ಕಟ್ಟಿಕೊಂಡ ಶೋಭಾ ಮಹಿಳೆಯರಲ್ಲಿ ಮೈಸೂರಿನ ಸ್ವಾವಲಂಬಿ ಮಹಿಳೆ ಶೋಭಾ ಕೂಡ ಒಬ್ಬರು. ಮೂಲತಃ ಮೈಸೂರಿನವರೇ ಆದ ಶೋಭಾ, ಪ್ರಾಥಮಿಕ ಶಿಕ್ಷಣ, ಪದವಿ ಶಿಕ್ಷಣ ಎಲ್ಲವನ್ನೂ ಮೈಸೂರಿನಲ್ಲಿಯೇ ಮುಗಿಸಿದರು. ಮುಂದೆ ಬನ್ನೂರಿನ ಶಂಕರ್‌ ಎಂಬವರೊಡನೆ ವೈವಾಹಿಕ ಜೀವನ ಪ್ರಾರಂಭಿಸಿದರು. ಆಶಿಶ್ ಮತ್ತು ಐಶ್ವರ್ಯ ಎಂಬ ಇಬ್ಬರು ಮಕ್ಕಳೂ ಇದ್ದಾರೆ.

ಮನೆಯೊಡತಿಯಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸುವುದರ ಜತೆಗೆ ಶೋಭಾಗೆ ಬಹಳಷ್ಟು ಕಾಲ ತನ್ನ ಸಾಮರ್ಥ್ಯಗಳು ವ್ಯರ್ಥವಾಗುತ್ತಿದ್ದಂತಹ ಭಾರವಾದ ಅನುಭವಾಯಿತು. ದುಡಿಯಲೇಬೇಕಾದ, ದುಡಿದು ಮನೆಯ ನೊಗ ಹೊರಬೇಕಾದ ಅನಿವಾರ್ಯತೆ ಇಲ್ಲದಿದ್ದರೂ, ತನ್ನ ವ್ಯಕ್ತಿತ್ವದ ಅಸ್ತಿತ್ವಕ್ಕಾಗಿ, ತನ್ನಲ್ಲಿರುವ ಸೃಜನಶೀಲತೆಯನ್ನು ಹೊರ ಹಾಕುವ ಸಲುವಾಗಿ ತನ್ನದೇ ಆದ ಗುರುತನ್ನು ಮೂಡಿಸುವ ಹಂಬಲದಿಂದ ಸ್ವಯಂ ಉದ್ಯೋಗಾಭಿಲಾಷಿಯಾಗಿ ಉದ್ಯೋಗ ಪ್ರೇರಣಾ ಶಿಬಿರ’ ವೊಂದಕ್ಕೆ ಸೇರುತ್ತಾರೆ. ಇದರಲ್ಲಿ, ಮತ್ತೊಬ್ಬ ಮೈಸೂರಿನ ಮಹಿಳಾ ಉದ್ಯಮಿಯಾದ, ಶ್ರೀವಿದ್ಯಾ ಕಾಮತ್‌ರವರ ತರಬೇತಿಯಿಂದ, ಮನೆಯಲ್ಲಿಯೇ ಸಣ್ಣ ಮಟ್ಟದಲ್ಲಿ ಗುಡಿ ಕೈಗಾರಿಕೆಯನ್ನು ನಡೆಸುವುದರ
ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿಕೊಳ್ಳುತ್ತಾರೆ.

ತರಬೇತಿಯಲ್ಲಿ ಮಾರ್ಗದರ್ಶಕರು ತೋರಿಸಿದ ಹಾದಿಯಲ್ಲಿ ಸಾಗಿದ ಶೋಭಾ ಒಂದೊಂದೇ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತ ತಮ್ಮ ಜೀವನದ ಮಹತ್ತರವಾದ ತಿರುವನ್ನು ಪಡೆದುಕೊಂಡಿದ್ದಾರೆ. ಹಂತ ಹಂತವಾಗಿ, ತಮ್ಮ ಆಸಕ್ತಿಗಳ ಕಡೆಗೆ ಹೆಚ್ಚು ಗಮನ ನೀಡುತ್ತಾ, ವಿವಿಧ ರೀತಿಯ ಉತ್ಪನ್ನಗಳ ಬಗ್ಗೆ ಮಾರುಕಟ್ಟೆಯ ಸಂಶೋಧನೆಗಳನ್ನು ನಡೆಸುತ್ತ ಬಂವಿದ್ದು, ಈಗ 4 ಮಹಿಳೆಯರಿಗೆ ಕೆಲಸ ನೀಡುವಷ್ಟು ಮುಂದೆ ಸಾಗಿದ್ದಾರೆ.

ಕೆಲ ವರ್ಷಗಳ ಹಿಂದೆ ಶೋಭಾ ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ತುಪ್ಪದ ಬತ್ತಿ’ ಉತ್ಪಾದನೆ ಆರಂಭಿಸಿದರು. ಈಗ ಅದು ಲಾಭದಾಯಕವಾಗಿ, ಬೇರೆಯವರ ಮನೆ ಬೆಳಗುವ ಕಾರ್ಯವನ್ನು ನಡೆಸುವಲ್ಲಿ ಸಹಾಯಕವಾಗಿದೆ.
ಪೂಜೆಗೆ ಶ್ರೇಷ್ಠವೆನಿಸಿಕೊಳ್ಳುವ ತುಪ್ಪದ ಬತ್ತಿಗಳು, ಅದನ್ನು ನಿಭಾಯಿಸುವ ಸರಳತೆ, ಅದರಲ್ಲಿನ ಪಾವಿತ್ರ್ಯತೆಗೆ ಹೆಸರುವಾಸಿ. ಇದರ ಬೇಡಿಕೆ ಮಾರುಕಟ್ಟೆಯಲ್ಲಿ ಹೆಚ್ಚು. ಆದರೆ, ಅಷ್ಟು ಶೀಘ್ರವಾಗಿ ಇದು ದೊರೆಯುವುದಿಲ್ಲ. ದೇಸಿ ಹಸುವಿನ ಶುದ್ಧ ತುಪ್ಪದಿಂದ ಮಾಡಲಾಗುವ ಈ ಬತ್ತಿಗಳು, ಇಂದು ಆರತಿಗೆ, ದೀಪಾಲಂಕಾರಗಳಿಗೆ ಬಳಕೆಯಾಗುವುದು ಹೆಚ್ಚು. ದೀಪದ ಬತ್ತಿಗಳು ಇಂದು ನಮ್ಮ ದೇಶದಲ್ಲಿ, ಸಹಸ್ರಾರು ಕೋಟಿಗಳ ವಹಿವಾಟನ್ನು ಹೊಂದಿದೆ. ಅದರ ಒಂದು ಸಣ್ಣ
ಪಾಲುದಾರರು ನಮ್ಮ ಮೈಸೂರಿನ ಶೋಭಾರವರು.

ತುಪ್ಪದ ಬತ್ತಿಗಳ ವಹಿವಾಟು ಜೋರಾದಂತೆ, ತಮ್ಮ ಕಾರ್ಯಕ್ಷೇತ್ರವನ್ನು ಹಂತ ಹಂತವಾಗಿ ವಿಸ್ತರಿಸಿದ ಶೋಭಾ, ನಂತರದ ದಿನಗಳಲ್ಲಿ, ಗಂಧದ ಕಡ್ಡಿ, ಕರ್ಪೂರ ಮತ್ತು ಧೂಪದ ಬತ್ತಿಗಳನ್ನು ಮಾಡುವುದನ್ನೂ ಆರಂಭಿಸಿದ್ದಾರೆ. ಇಂದು, ಅವರ ಮಗಳ ಹೆಸರಲ್ಲಿ ‘ಐಶ್ ಫ್ಯಾಮ್’ ಹೆಸರಲ್ಲಿ, ಈ ಎಲ್ಲ ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಿ, ಸದ್ಯದಲ್ಲೇ, ಹೊರದೇಶದ ವಹಿವಾಟಿನ ಕಡೆಗೆ ದಾಪುಗಾಲು ಹಾಕುತ್ತಿದ್ದಾರೆ ಶೋಭಾ.

ಇಂತಹ ಮಹಿಳೆಯರ ಯಶೋಗಾಥೆ, ನಮ್ಮ ನಿಮ್ಮೆಲ್ಲರ ಹೆಮ್ಮೆಗೆ ಕಾರಣ ಮತ್ತು ಅದೆಷ್ಟೋ ಮಹಿಳೆಯರಿಗೆ ಸ್ಪೂರ್ತಿಯೂ ಕೂಡ. ಇವರ ಪ್ರಯತ್ನಗಳೆಲ್ಲ ಯಶಸ್ವೀ ಆಗಲೆಂದು ಹಾರೈಸೋಣ.
(Srividya.sahitya@gmail.com)

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ