Columbus
29
broken clouds

Social Media

ಭಾನುವಾರ, 22 ಮಾರ್ಚ್ 2026
Light
Dark

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ವಿರೋಧಿ ಸಿದ್ಧಾಂತದ ರಾಜ್ಯಗಳ ಜತೆ ಬಿಜೆಪಿ ಸೆಣಸಾಟ

೨೦೨೬ರ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಅಖಾಡ ಈಗ ಸಿದ್ಧವಾಗಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ಮೈತ್ರಿಕೂಟದ ಬಿಜೆಪಿ ಮತ್ತು ಸ್ಥಳೀಯ ರಾಜಕೀಯ ಪಕ್ಷಗಳಾದ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್, ತಮಿಳುನಾಡಿನ ಡಿಎಂಕೆ ಮತ್ತು ಕೇರಳದ ಎಡರಂಗದ ಎಲ್‌ಡಿಎಫ್ (ಎಡ ಪಕ್ಷಗಳ ಪ್ರಜಾಸತ್ತಾತ್ಮಕ ರಂಗ) ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ (ಸಂಯುಕ್ತ ಪ್ರಜಾಸತ್ತಾತ್ಮಕ ರಂಗ)ಗೆ ಇದು ಪ್ರತಿಷ್ಠಿತ ಚುನಾವಣೆ.

ಅಸ್ಸಾಂ ಚುನಾವಣೆ ಬಿಜೆಪಿಗೆ ನೀರು ಕುಡಿದಂತೆ ಸುಲಭ ಎನ್ನುವಂತಿದ್ದರೆ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಎನ್.ಆರ್. ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದರೂ ಇಲ್ಲಿನ ಚುನಾವಣೆ ಲೆಕ್ಕಕ್ಕುಂಟು ಆಟಕ್ಕಿಲ್ಲ ಎನ್ನುವಂತಿದೆ.

ಕಳೆದ ಲೋಕಸಭೆ ಚುನಾವಣೆ (೨೦೨೪) ಬಿಜೆಪಿಗೆ ಕಠಿಣವಾಗಿಯೇ ಇತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ೩೦೦ ಸ್ಥಾನಗಳನ್ನು ಸುಲಭವಾಗಿ ಪಡೆಯಲಿದೆ ಎನ್ನುವ ಲೆಕ್ಕಾಚಾರ ತಲೆಕೆಳಗಾಗಿತ್ತು. ಹಾಗಾಗಿ ಸ್ವಂತ ಬಲದಿಂದ ಅಧಿಕಾರ ಉಳಿಸಿಕೊಳ್ಳಲು ಸ್ಪಷ್ಟಬಹುಮತ ಸಿಗದೆ ತೆಲುಗು ದೇಶಂ ಪಕ್ಷ, ಜನತಾದಳ (ಯು) ಮತ್ತು ಎನ್ ಡಿಎ ಮೈತ್ರಿಕೂಟದ ಬೆಂಬಲದಿಂದ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿ ಮುಂದುವರಿಯಿತು.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೋ ಯಾತ್ರೆ ಬಿಜೆಪಿಗೆ ಕೈಕೊಟ್ಟಿತ್ತು ಎನ್ನುವುದು ವಾಸ್ತವ. ಆದರೂ ಕಳೆದ ವರ್ಷ ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ಮತ್ತು ಬಿಹಾರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆ ಮೀರಿ ಅಚ್ಚರಿಯ ಗೆಲುವು ಸಾಧಿಸಿತು.ಆದರೆ ಈಗ ನಡೆಯುವ ಚುನಾವಣೆಗಳಲ್ಲಿ ಬಿಜೆಪಿಯು ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಅಧಿಕಾರ ಹಿಡಿಯುವುದು ಸುಲಭದ ಮಾತಲ್ಲ.

ಪಶ್ಚಿಮ ಬಂಗಾಳ ಒಂದು ಕಾಲಕ್ಕೆ ನಾಲ್ಕು ದಶಕಗಳ ಕಾಲ ಸಿಪಿಎಂ ನೇತೃತ್ವದ ಎಡ ರಂಗಗಳ ಭದ್ರ ನೆಲೆಯಾಗಿತ್ತು. ಆದರೆ ಕಾಂಗ್ರೆಸ್ ಮೂಲದಿಂದ ತಳಮಟ್ಟದಿಂದ ಹೋರಾಟ ಮಾಡಿಕೊಂಡೇ ಬಂದ ಮಮತಾ ಬ್ಯಾನರ್ಜಿ ಹದಿನೈದು ವರ್ಷಗಳ ಹಿಂದೆ ಎಡ ಪಕ್ಷಗಳು ನೆಲಕಚ್ಚುವಂತೆ ಮಾಡಿ ರೈಟರ್ಸ್ ಭವನದ ಆಡಳಿತದ ಚುಕ್ಕಾಣಿ ಹಿಡಿದರು. ಹೀಗೆ ಮಾಡುವ ಮೂಲಕ ಎಡ ಪಕ್ಷಗಳು ಹೇಳ ಹೆಸರಿಲ್ಲದಂತೆ ಮಾಡಿರುವ ಮಮತಾ ಅವರನ್ನು ಈಗ ಬಿಜೆಪಿ ಆ ಕೆಲಸಕ್ಕೆ ಮುಂದಾಗಿದೆ. ಕೇಂದ್ರದಲ್ಲಿನ ತನ್ನ ಅಧಿಕಾರ, ಪಕ್ಷದ ಸಂಪನ್ಮೂಲ ಶಕ್ತಿಯನ್ನು ಹೇರಳವಾಗಿ ಬಳಸುವ ಮೂಲಕ ಮಮತಾ ಎನ್ನುವ ಬಂಗಾಳದ ದೀದಿಯ ನಿದ್ದೆಗೆಡಿಸಿದೆ. ಆದರೆ ಹಠವಾದಿ ದೀದಿ ತನ್ನೆಲ್ಲ ಶಕ್ತಿ ಮೀರಿ ಬಂಡೆಗಲ್ಲಿನಂತೆ ಎದೆಗೊಟ್ಟು ಈ ಚುನಾವಣೆಯನ್ನು ತಮ್ಮ ರಾಜಕೀಯ ಜೀವನದ ಒಂದು ದೊಡ್ಡ ಸವಾಲಾಗಿ ಸ್ವೀಕರಿಸಿದ್ದಾರೆ. ದೀದಿಯ ಹೋರಾಟ ಚುನಾವಣಾ ಆಯೋಗದ ವಿರುದ್ಧವೂ ಬೀದಿ ಹೋರಾಟವಲ್ಲದೆ ಕಾನೂನು ಸಮರವನ್ನೂ ಸಾರಿರುವುದು ಈ ಬಾರಿ ಎರಡು ಪ್ರಬಲ ಶಕ್ತಿಗಳ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಇಳಿದಂತಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭೆಯ ಒಟ್ಟು ೨೯೪ ಸ್ಥಾನಗಳ ಪೈಕಿ ೨೦೦ ಸ್ಥಾನಗಳನ್ನು ಗೆದ್ದು ಅಽಕಾರಕ್ಕೆ ಬಂದಿದ್ದ ಮಮತಾ ಬ್ಯಾನರ್ಜಿ ಈ ಚುನಾವಣೆಯಲ್ಲಿ ಗೆಲ್ಲಲು ಅಸಮರ್ಥರು ಮತ್ತು ಎಡಬಿಡಂಗಿಗಳಂತಿದ್ದ ಸುಮಾರು ೭೪ ಮಂದಿ ಶಾಸಕರಿಗೆ ಟಿಕೆಟ್ ನಿರಾಕರಿಸಿ ಹೊಸ ಮುಖಗಳಿಗೆ ಮಣೆ ಹಾಕಿರುವುದು ಅವರ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿರುವುದಾಗಿ ಹೇಳಲಾಗುತ್ತಿದೆ. ಆದರೆ ಮಮತಾ ದೀದಿಯನ್ನು ಸೋಲಿಸಲೇಬೇಕೆಂದು ಪಣತೊಟ್ಟಿರುವಂತೆ ಕಾಣುವ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ತಮಿಳುನಾಡಿನ ಸರ್ಕಾರಕ್ಕೆ ತಲೆನೋವಾಗಿದ್ದ ರಾಜ್ಯಪಾಲ ಆರ್.ಎನ್.ರವಿ ಅವರನ್ನು ಇಲ್ಲಿಗೆ ತಂದು ಕೂರಿಸಿರುವುದು ಮತ್ತು ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಪ್ರಕಟಿಸಿದ ದಿನವೇ ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಕೊಲ್ಕತ್ತಾ ಪೊಲೀಸ್ ಕಮಿಷನರ್ ಅವರನ್ನು ತಾನೇ ಎತ್ತಂಗಡಿ ಮಾಡಿರುವುದು ಜನತಂತ್ರದ ಅಣಕವಾಗಿದೆ.

ಬಿಜೆಪಿಗೆ ಅತ್ಯಂತ ದೊಡ್ಡ ಸವಾಲಾಗಿರುವುದು ದಕ್ಷಿಣ ರಾಜ್ಯಗಳಲ್ಲಿ ಪ್ರಮುಖವಾದ ತಮಿಳುನಾಡು ಮತ್ತು ಕೇರಳ. ತಮಿಳುನಾಡು ಎಂದರೆ ಅದು ಉತ್ತರ ರಾಜ್ಯಗಳ ದಬ್ಬಾಳಿಕೆಯನ್ನು ಶಕ್ತಿ ಮೀರಿ ಹಿಮ್ಮೆಟ್ಟಿಸುವ ಗಟ್ಟಿತನವನ್ನು ಉಳಿಸಿಕೊಂಡು ಬಂದ ರಾಜ್ಯ. ಹಾಗೆಯೇ ಇದುವರೆಗೆ ಕೇರಳವು ಅದೇ ಸ್ಥಿತಿಯಲ್ಲಿತ್ತಾದರೂ ಅದೀಗ ಕರ್ನಾಟಕದಂತೆ ಬಿಜೆಪಿಯು ಹೆಜ್ಜೆ ಊರಲು ಅಲ್ಲಿನ ನೆಲ ಹದಗೊಂಡಂತೆ ಕಾಣುತ್ತಿದೆ. ತಿರುವನಂತಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿಯ ಹುಮ್ಮಸ್ಸು ನೂರ್ಮಡಿಯಾಗಿದೆ. ಕಾಂಗ್ರೆಸ್ ಮತ್ತು ಸಿಪಿಐ(ಎಂ)ನಿಂದ ಬಿಜೆಪಿಗೆ ಪಕ್ಷಾಂತರವಾಗುತ್ತಿರುವ ಮಾಜಿ ಶಾಸಕರು ಮತ್ತು ಪಕ್ಷಗಳ ಕಾರ್ಯಕರ್ತರ ದಂಡೇ ಹೊರಟಂತಿದೆ. ತಿರುವನಂತಪುರ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಸ್.ಅನುಪ್ ಮತ್ತು ಯುವ ಕಾಂಗ್ರೆಸ್ ನಾಯಕ ಅರುಣ್ ರಾಜ್ ಬಿಜೆಪಿ ಸೇರಿದ್ದಾರೆ. ಹಾಗೆಯೇ ಎಡಪಕ್ಷಗಳ ಮೂವರು ಮಾಜಿ ಶಾಸಕರಾದ ಸಿ.ಸಿ.ಮುಕುಂದನ್, ಕೆ.ಅಜಿತ್ ಮತ್ತು ಎಸ್.ರಾಜೇಂದ್ರನ್ ಈ ಬಾರಿ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿಯುತ್ತಿದ್ದಾರೆ. ಹಾಗಾಗಿ ಬಿಜೆಪಿ ಈ ಬಾರಿ ಕೇರಳದಲ್ಲಿ ಸಾಕಷ್ಟು ಕಡೆಗಳಲ್ಲಿ ಗೆದ್ದರೆ ಅಚ್ಚರಿಯೇನಿಲ್ಲ ಎನ್ನುವಷ್ಟರ ಮಟ್ಟಿಗೆ ಚುನಾವಣಾ ವಾತಾವರಣ ಬದಲಾಗುತ್ತಿದೆ.

ಇನ್ನು ತಮಿಳುನಾಡು ಬಿಜೆಪಿಗೆ ದೊಡ್ಡ ಸವಾಲು. ಡಿಎಂಕೆಗೆ ಈಗ ನೇರ ಸವಾಲು ವಿಜಯ್ ಅವರ ಟಿವಿಕೆ ಪಕ್ಷ. ಹೊರ ನೋಟಕ್ಕೆ ಬೆರಗು ಮೂಡಿಸುವಂತೆ ಬಹಿರಂಗ ಸಭೆಗಳಲ್ಲಿ ಜನವೋ ಜನ. ಆದರೆ ಅದೆಲ್ಲವೂ ಮತವಾಗಿ ಪರಿವರ್ತನೆ ಆಗುವುದೇ ಎನ್ನುವುದು ಪ್ರಶ್ನೆ. ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತ ನಡೆಸುವಾಗ ಸಹಜವಾಗಿ ರಾಜ್ಯದಲ್ಲಿ ಅಧಿಕಾರ ನಡೆಸುವ ಡಿಎಂಕೆ ಇರಲಿ ಅಥವಾ ಎಐಎಡಿಎಂಕೆ ಇರಲಿ ತಮ್ಮ ಬೆಂಬಲ ನೀಡಿ ಕೇಂದ್ರದಿಂದ ಬರಬೇಕಾದ ಸಂಪನ್ಮೂಲವನ್ನು ಸುಲಭವಾಗಿ ಪಡೆದುಕೊಳ್ಳುತ್ತಿದ್ದವು. ಆದರೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ತಮಿಳುನಾಡು ಸರ್ಕಾರ ಕಟ್ಟಾ ವಿರೋಧಿಯಾಗಿ ನಿಂತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಹಿಂದಿ ಹೇರಿಕೆಯ ವಿರೋಧಿ ನೀತಿ ಮತ್ತು ನೂತನ ಶಿಕ್ಷಣ ನೀತಿಯ ವಿರುದ್ಧದ ತನ್ನ ನಿಲುವಿನಿಂದ ಡಿಎಂಕೆ ಸರ್ಕಾರ ಒಂದಿಂಚೂ ಹಿಂದೆ ಸರಿದಿಲ್ಲ. ಈ ನಿಲುವಿನಿಂದ ಕೇಂದ್ರದಿಂದ ಬರಬೇಕಾದ ನೂರಾರು ಕೋಟಿ ರೂಪಾಯಿ ಅನುದಾನವನ್ನು ಕಳೆದುಕೊಳ್ಳುತ್ತಿದ್ದರೂ ಅದಕ್ಕೆಲ್ಲ ಅಂಜದೆ ಮುಖ್ಯಮಂತ್ರಿ ಸ್ಟಾಲಿನ್ ಗಟ್ಟಿಯಾಗಿ ನಿಂತಿರುವುದು ಬಿಜೆಪಿಯ ಚುನಾವಣಾ ಕಾರ್ಯತಂತ್ರಗಳೆಲ್ಲವೂ ತಲೆಕೆಳಕಾಗುವಂತೆ ಮಾಡಿದೆ.

ಜಯಲಲಿತಾ ಅವರು ಬದುಕಿದ್ದಾಗ ಡಿಎಂಕೆಯಂತೆಯೇ ಶಕ್ತಿಶಾಲಿಯಾಗಿದ್ದ ಎಐಎಡಿಎಂಕೆ ಈಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸೀಟು ಹಂಚಿಕೆಗಾಗಿ ದೆಹಲಿಯ ಬಿಜೆಪಿ ನಾಯಕರ ಮನೆಗಳನ್ನು ಕಾಯುವ ಸ್ಥಿತಿಗೆ ಬಂದಿರುವುದು ಶೋಚನೀಯ ಸ್ಥಿತಿ ಎಂದೇ ತಮಿಳುನಾಡಿನ ಜನ ಬದಲಾದ ಪರಿಸ್ಥಿತಿಯ ಬಗೆಗೆ ಅಣಕವಾಡುವಂತಾಗಿದೆ. ಜಯಲಲಿತಾ ಅವರ ಉತ್ತರಾಧಿಕಾರಿಯಂತೆ ಅವರ ನೆರಳಿನಲ್ಲಿ ರಾಜಕಾರಣದಲ್ಲಿ ಬೆಳೆದ ವಿ.ಕೆ.ಶಶಿಕಲಾ ಕಳೆದ ವಾರ ಅಖಿಲ ಭಾರತ ಪುರಚ್ಚಿ ತಲೈವರ್ ಮಕ್ಕಳ್ ಮುನ್ನೇತ್ರ ಕಳಗಂ ಪಕ್ಷವನ್ನು ಹುಟ್ಟುಹಾಕಿ, ಪಿಎಂಕೆಯ ಅಧ್ಯಕ್ಷ ರಾಮದಾಸ್ ಬಣದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ರಾಮದಾಸ್ ಈಗಾಗಲೇ ಎನ್‌ಡಿಎ ಸೇರಲು ವಿಫಲಗೊಂಡು ಮತ್ತು ತಮ್ಮ ಪುತ್ರ ಅನ್ಬುಮಣಿ ರಾಮದಾಸ್ ಪಕ್ಷವನ್ನು ಒಡೆದು ತಮ್ಮದೇ ಆದ ಬಣವನ್ನು ಕಟ್ಟಿಕೊಂಡು ವಣ್ಣಿಯರ್ ಜನಸಂಖ್ಯೆ ಹೆಚ್ಚಿರುವ ಉತ್ತರ ತಮಿಳುನಾಡಿನಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಇದೇನೇ ಇದ್ದರೂ ತಮಿಳುನಾಡಿನಲ್ಲಿ ತ್ರಿಕೋನ ಸ್ಪರ್ಧೆ ಕಂಡುಬಂದರೂ ಡಿಎಂಕೆ ಮೈತ್ರಿಕೂಟವನ್ನು ಸೋಲಿಸುವುದು ವಿಜಯ್ ಮತ್ತು ಎಐಎಡಿಎಂಕೆ  -ಬಿಜೆಪಿ ಮೈತ್ರಿಕೂಟಕ್ಕೆ ಸುಲಭದ ಕೆಲಸವಲ್ಲ ಎನ್ನುವುದು ಈಗಿನ ಚುನಾವಣಾ ಚಿತ್ರ. ಆದರೆ ಬಿಜೆಪಿಗೆ ತಮಿಳುನಾಡು ಮತ್ತು ಕೇರಳದಲ್ಲಿ ನೆಲೆ ಕಂಡು ಕೊಂಡರೆ ಇಡೀ ಭಾರತವನ್ನೇ ಗೆದ್ದಷ್ಟು ಸಂತೋಷ. ಆದರೆ ಅದೀಗ ಇನ್ನೂ ಕನಸು ಎನ್ನುವುದೇ ವಾಸ್ತವ.

” ಬಿಜೆಪಿಗೆ ಅತ್ಯಂತ ದೊಡ್ಡ ಸವಾಲಾಗಿರುವುದು ದಕ್ಷಿಣ ರಾಜ್ಯಗಳಲ್ಲಿ ಪ್ರಮುಖವಾದ ತಮಿಳುನಾಡು ಮತ್ತು ಕೇರಳ. ತಮಿಳುನಾಡು, ಉತ್ತರ ರಾಜ್ಯಗಳ ದಬ್ಬಾಳಿಕೆಯನ್ನು ಶಕ್ತಿ ಮೀರಿ ಹಿಮ್ಮೆಟ್ಟಿಸುವ ಗಟ್ಟಿತನವನ್ನು ಉಳಿಸಿಕೊಂಡು ಬಂದ ರಾಜ್ಯ. ಹಾಗೆಯೇ ಇದುವರೆಗೆ ಕೇರಳವು ಅದೇ ಸ್ಥಿತಿಯಲ್ಲಿತ್ತಾದರೂ ಅದೀಗ ಕರ್ನಾಟಕದಂತೆ ಬಿಜೆಪಿಯು ಹೆಜ್ಜೆ ಊರಲು ಅಲ್ಲಿನ ನೆಲ ಹದಗೊಂಡಂತೆ ಕಾಣುತ್ತಿದೆ.”

 

 

Tags:
error: Content is protected !!