Mysore
18
few clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ:  ನಿತಿನ್ ನೇಮಕ: ಬಿಜೆಪಿ ಹಿಡಿತ ಮೋದಿ, ಶಾ ಕೈಯಲ್ಲೇ 

ಯಶಸ್ವಿ ರಾಜಕೀಯ ನಾಯಕತ್ವಕ್ಕೆ ಈಗ ಬೇಕಾಗಿರುವುದು ವರ್ಚಸ್ಸು ಮತ್ತು ಜನಪ್ರಿಯತೆ. ಈ ಗುಣಗಳಿದ್ದರೆ ಸರ್ಕಾರ ಮತ್ತು ಪಕ್ಷದಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಈ ಕಾಲಘಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಎನ್ನುವ ಜೋಡಿಯೇ ಉದಾಹರಣೆ. ಯಾವಾಗ ಏನು ಮಾಡುತ್ತಾರೆ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವುದು ಹೊರ ಸಮಾಜಕ್ಕೆ ತಿಳಿಯದಂತೆ ದಿಢೀರ್ ಮತ್ತು ಅಚ್ಚರಿ ಉಂಟು ಮಾಡುವ ನಿರ್ಧಾರಗಳು ಇವರದ್ದು. ಈ ಇಬ್ಬರದ್ದೂ ಲೆಕ್ಕಾಚಾರದ ತೀರ್ಮಾನಗಳು. ಹೌದು ಎಲ್ಲ ರಾಜಕೀಯ ಪಕ್ಷಗಳಲ್ಲಿ ಎಲ್ಲ ನಾಯಕರೂ ಅನೇಕ ವಿಷಯಗಳಲ್ಲಿ ಅಳೆದು ತೂಗಿ ಲೆಕ್ಕಾಚಾರ ಹಾಕುವುದು ಹೀಗೆಯೇ. ಅವರ ತೀರ್ಮಾನ ಹೊರಬೀಳುವಷ್ಟರಲ್ಲಿ ಅನೇಕ ರಹಸ್ಯ ನಿರ್ಧಾರಗಳೆಲ್ಲ ಹಾದಿ ಬೀದಿಯಲ್ಲಿ ಓಡಾಡುವವರ ಬಾಯಲ್ಲಿ ಹತ್ತಾರು ರೆಕ್ಕೆ ಪುಕ್ಕಗಳು ಸೇರಿ ಗೊಂದಲದ ಗೂಡಾಗಿರುತ್ತದೆ. ಆದರೆ ಈ ಇಬ್ಬರು ನಾಯಕರ ಲೆಕ್ಕಾಚಾರ ನಿಗೂಢ. ರಾಷ್ಟ್ರಪತಿ ದ್ರೌಪದಿ ಮುರ್ಮು ಆಯ್ಕೆ ಇರಬಹುದು, ಉಪ ರಾಷ್ಟ್ರಪತಿ ರಾಧಾಕೃಷ್ಣನ್ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಆಯ್ಕೆ ಇರಬಹುದು. ಎಲ್ಲವೂ ಅಚ್ಚರಿಗೊಳಿಸುವ ನಿರ್ಧಾರ.

೨೦೧೯ರಿಂದ ಎರಡು ಅವಧಿಯನ್ನು ಪೂರೈಸಿರುವ ಹಿಮಾಚಲ ಪ್ರದೇಶದ ಆರ್‌ಎಸ್‌ಎಸ್ ಮೂಲದಿಂದ ಬಂದಿರುವ ಜಗತ್ ಪ್ರಕಾಶ್ ನಡ್ಡಾ ಅವರ ಉತ್ತರಾಧಿಕಾರಿಗಾಗಿ ಎರಡು ವರ್ಷಗಳಿಂದ ಹುಡುಕಾಟ ನಡೆದೇ ಇತ್ತು. ನಡ್ಡಾ ಅವರ ಉತ್ತರಾಧಿಕಾರಿಯಾಗಿ ಈಗ ಪಕ್ಷದ ಕಾರ್ಯಾಧ್ಯಕ್ಷರಾಗಿ ಬಿಹಾರದ ೪೫ ವರ್ಷದ ನಿತಿನ್ ನಬೀನ್ ನೇಮಕಗೊಳ್ಳುವ ಮೂಲಕ ಬಿಜೆಪಿಯಲ್ಲಿಯೇ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಇದುವರೆಗೆ ಪಕ್ಷದ ಅಧ್ಯಕ್ಷರಾಗಿದ್ದವರ ವಯಸ್ಸನ್ನು ಗಮನಿಸಿದಾಗ ನಿತಿನ್ ನಬೀನ್ ಕಿರಿಯ ವಯಸ್ಸಿನವರಾಗಿದ್ದಾರೆ. ಬಿಜೆಪಿ ಸ್ಥಾಪನೆಯಾದ ೧೯೮೦ರಲ್ಲಿಯೇ ನಬೀನ್ ಹುಟ್ಟಿರುವುದು. ಪಕ್ಷಕ್ಕಾಗಿರುವಷ್ಟೇ ವರ್ಷ ಹೊಸ ಸಾರಥಿಗೂ ಕೂಡ ಎನ್ನುವುದು ಕಾಕತಾಳೀಯ. ಪಕ್ಷದ ನಿಯಮಾವಳಿ ಪ್ರಕಾರ ಮೂರು ಅವರ್ಷದ ಅವಧಿಗೆ ಅಧ್ಯಕ್ಷರ ಆಯ್ಕೆ ಆಗಬೇಕು. ಎರಡು ಅವಧಿಗಿಂತ ಹೆಚ್ಚಿಗೆ ಅಧ್ಯಕ್ಷರಾಗಲು ಅವಕಾಶವಿಲ್ಲ. ಇದುವರೆಗೆ ಆಗಿರುವ ಅಧ್ಯಕ್ಷರೆಲ್ಲ ಪಕ್ಷದೊಳಗಿನ ಹಿರಿಯರ ನಡುವಿನ ಒಮ್ಮತಾಭಿಪ್ರಾಯದಿಂದ ನೇಮಕಗೊಂಡವರೇ. ನಂತರ ಪಕ್ಷದ ನಿಯಮಾವಳಿಯ ಪ್ರಕಾರ ಈ ನೇಮಕವನ್ನು ಸ್ಥಿರೀಕರಿಸುವುದು ಬಿಜೆಪಿಯಲ್ಲಿ ನಡೆದು ಬಂದಿರುವ ಸಂಪ್ರದಾಯ.

ಬಿಜೆಪಿ ಸ್ಥಾಪನೆಯಾದಾಗಿನಿಂದ ಆರಂಭದಲ್ಲಿ ಪಕ್ಷದ ಹಿರಿಯ ಮತ್ತು ವರ್ಚಸ್ವಿ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ, ನಂತರ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿಮನೋಹರ ಜೋಷಿ ಅವರನ್ನು ಬಿಟ್ಟರೆ ಉಳಿದವರೆಲ್ಲ ಪಕ್ಷದ ಸಿದ್ಧಾಂತ ಮತ್ತು ಅದರ ಜನಪ್ರಿಯತೆಯಿಂದ ಅಽಕಾರದ ಗದ್ದುಗೆಗೆ ಏರಿದವರು. ಇದೇ ಸಾಲಿನಲ್ಲಿ ಬರುವವರು ಈಗ ಪಕ್ಷದ ಹನ್ನೆರಡನೇ ಅಧ್ಯಕ್ಷರಾಗುತ್ತಿರುವ ನಿತಿನ್ ನಬೀನ್. ಪಕ್ಷದಲ್ಲಿರುವ ಹಿರಿಯ ನಾಯಕರಾದ ರಾಜ್ ನಾಥ್ ಸಿಂಗ್, ನಿತಿನ್ ಗಡ್ಕರಿ ಮತ್ತು ಅಮಿತ್ ಶಾ ಪಕ್ಷದ ಚುಕ್ಕಾಣಿ ಹಿಡಿದವರೇ. ಇನ್ನು ಉಳಿದಿರುವವರಲ್ಲಿ ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿ ಸ್ಥಾನಕ್ಕೆ ನೇಮಕ ಮಾಡಿ ಮತ್ತೆ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಪರಿಗಣಿಸದೇ ಇರುವ ಮೂಲಕ ಅವರ ಸಕ್ರಿಯ ರಾಜಕಾರಣವನ್ನು ಕೊನೆಗೊಳಿಸುವಂತೆ ಮಾಡಲಾಗಿದೆ. ವೆಂಕಯ್ಯ ನಾಯ್ಡು ಕೂಡ ೨೦೦೨ರಿಂದ ೨೦೦೪ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರೇ ಆಗಿದ್ದಾರೆ. ಹಾಗಾಗಿ ಹೊಸ ನಾಯಕನ ಹುಡುಕಾಟವನ್ನು ಸರ್ಕಾರ ಮತ್ತು ಪಕ್ಷದ ಮೇಲೆ ಹಿಡಿತ ಹೊಂದಿರುವ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೋಡಿಯೇ ಮಾಡಿದೆ.

ಮೋದಿ ಮತ್ತು ಶಾ ಅವರು ಮಾಡಿರುವ ಈ ಆಯ್ಕೆ ಪಕ್ಷದೊಳಗೆಯೇ ಆಶ್ಚರ್ಯ ಉಂಟು ಮಾಡಿದರೂ ಒಬ್ಬರೂ ಕೂಡ ಅಪಸ್ವರ ತೆಗೆದಿಲ್ಲ. ಬಿಹಾರದ ಈ ನಾಯಕನ ಆಯ್ಕೆಗೆ ಹಿರಿಯ ಕಿರಿಯರೆನ್ನದೆ ಎಲ್ಲರೂ ತಲೆಬಾಗಿ ಗೌರವಿಸುತ್ತಿದ್ದಾರೆ. ಡಿಸೆಂಬರ್ ೧೪ರಂದು ನಿತಿನ್ ನಬೀನ್ ನೇಮಕ ಹೊರಬಿದ್ದಿದ್ದು ಅವರೀಗಾಗಲೇ ಪಕ್ಷದ ಕಾರ್ಯಾಧ್ಯಕ್ಷರಾಗಿ ಅಽಕಾರ ಸ್ವೀಕಾರ ಮಾಡಿದ್ದಾರೆ. ಜನವರಿಯಲ್ಲಿ ಅವರು ಪೂರ್ಣ ಪ್ರಮಾಣದ ಅಧ್ಯಕ್ಷರಾಗಿ ಪದಗ್ರಹಣ ಮಾಡುವುದು ಈಗಾಗಲೇ ನಿರ್ಧಾರವಾಗಿದೆ. ಬಿಜೆಪಿಯ ನಾಯಕತ್ವದ ಚುಕ್ಕಾಣಿ ಹಿಡಿದವರೆಲ್ಲರೂ ಬಹುತೇಕವಾಗಿ ಆರ್‌ಎಸ್‌ಎಸ್ ಅಥವಾ ಸಂಘಪರಿವಾರದ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯಿಂದ ಬಂದವರೇ ಆಗಿದ್ದಾರೆ. ನಬೀನ್ ಆರ್‌ಎಸ್‌ಎಸ್ ಸಂಪರ್ಕ ಹೊಂದಿರುವುದನ್ನು ಬಿಟ್ಟರೆ ಅವರು ರಾಜಕೀಯ ಕುಟುಂಬದಿಂದ ಬಂದವರಾಗಿದ್ದಾರೆ. ಅವರ ತಂದೆ ನಬೀನ್ ಕಿಶೋರ್ ಪ್ರಸಾದ್ ಸಿನ್ಹಾ ಬಿಹಾರದಲ್ಲಿ ಬಿಜೆಪಿ ಶಾಸಕರಾಗಿದ್ದವರು. ೨೦೦೬ರಲ್ಲಿ ನಿತೀನ್ ನಬೀನ್ ಜಾರ್ಖಂಡ್‌ನ ಮೇಸ್ರಾದಲ್ಲಿರುವ ಬಿರ್ಲಾ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ಕೋರ್ಸ್ ಓದುತ್ತಿದ್ದಾಗಲೇ ತಂದೆ ತೀರಿಕೊಳ್ಳುತ್ತಾರೆ. ಆಗ ಅವರ ತಂದೆಯ ಸ್ಥಾನಕ್ಕೆ ಉಪಚುನಾವಣೆ ನಡೆದಾಗ ಪಕ್ಷವು ಅವರ ತಾಯಿಯನ್ನು ಚುನಾವಣೆಗೆ ನಿಲ್ಲಿಸಲು ಮುಂದಾದಾಗ ಅವರು ತಮ್ಮ ಮಗನಿಗೆ ಟಿಕೆಟ್ ನೀಡಿ ಎಂದು  ಮಾಡಿದ ಮನವಿಯನ್ನು ಪಕ್ಷ ಒಪ್ಪಿಕೊಳ್ಳುತ್ತದೆ. ನಿತಿನ್ ನಬೀನ್ ಬಿಹಾರದ ಪ್ರತಿಷ್ಠಿತ ಕಾಯಸ್ತ ಜಾತಿಗೆ ಸೇರಿದವರು.

ಬಿಹಾರದ ರಾಜಕಾರಣದಲ್ಲಿ ಕಾಯಸ್ತ ಜಾತಿ ತನ್ನದೇ ಪ್ರತಿಷ್ಠಿತ ಸ್ಥಾನವನ್ನು ಕಂಡುಕೊಂಡಿದೆ. ತಂದೆ ಸಾವಿನಿಂದ ಮತ್ತು ಪಕ್ಷದ ಒತ್ತಡದಿಂದ ತಮ್ಮ ವ್ಯಾಸಂಗವನ್ನು ಅಷ್ಟಕ್ಕೇ ನಿಲ್ಲಿಸಿ ಪಟ್ನಾ ಪಶ್ಚಿಮ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಸ್ಪರ್ಧಿಸಿ ಗೆಲ್ಲುವ ಮೂಲಕ ರಾಜಕಾರಣಕ್ಕೆ ತಂದೆಯ ಉತ್ತರಾಧಿಕಾರಿಯಾಗಿ ಕಾಲಿಡುತ್ತಾರೆ. ನಂತರ ಕ್ಷೇತ್ರ ಪುನರ್ ವಿಂಗಡಣೆ ಆದಾಗ ಆ ಕ್ಷೇತ್ರ ಬಂಕಿಪುರ ಕ್ಷೇತ್ರವಾಗಿ ಬದಲಾಗಿದೆ. ಈ ಕ್ಷೇತ್ರದಿಂದ ಐದು ಬಾರಿ ಗೆದ್ದು ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವಿ ನಿತಿನ್ ನಬೀನ್ ಸರ್ಕಾರದಲ್ಲಿ ಕೆಲಸ ಮಾಡಿದ್ದಕ್ಕಿಂತ ಪಕ್ಷವು ತನಗೆ ವಹಿಸಿದ ಹೊಣೆಗಾರಿಕೆಯನ್ನು ನಿಷ್ಠೆ ಮತ್ತು ಜವಾಬ್ದಾರಿಯಿಂದ ಯಶಸ್ವಿಯಾಗಿ ಮಾಡಿದ್ದಾರೆ.

ಕಾಲಲ್ಲಿ ತೋರಿಸಿದ್ದನ್ನು ಕೈಯಲ್ಲಿ ಮಾಡುವ ಗುಣವಿರುವ ನಿತಿನ್ ನಬೀನ್ ಅವರಿಗೆ ೨೦೧೯ರಲ್ಲಿ ಸಿಕ್ಕಿಂ ವಿಧಾನಸಭೆ ಚುನಾವಣೆಯ ಹೊಣೆಯನ್ನು ವಹಿಸಲಾಗಿತ್ತು . ಐದು ಬಾರಿ ಮುಖ್ಯಮಂತ್ರಿ ಆಗಿದ್ದ ಪವನ್ ಚಾಮ್ಲಿಂಗ್ ಸೋಲುವಂತೆ ಅಮಿತ್ ಶಾ ರೂಪಿಸಿದ ತಂತ್ರಗಾರಿಕೆಯನ್ನು ಎದೆಗೊತ್ತಿಕೊಂಡು ಮಾಡಿದ ಛಾತಿ ನಿತಿನ್ ಅವರದ್ದು. ಹಾಗೆಯೇ ಅವರಿಗೆ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಉಸ್ತುವಾರಿಯನ್ನೂ ವಹಿಸಲಾಗಿತ್ತು. ಅಲ್ಲಿಯೂ ತಮ್ಮ ಶಕ್ತಿ ಮೀರಿ ಪಕ್ಷದ ಅಣತಿಯಂತೆ ಕೆಲಸ ಮಾಡಿ ಮೋದಿ ಮತ್ತು ಶಾ ಅವರಿಂದ ಶಬ್ಬಾಸ್ ಗಿರಿ ಪಡೆದವರು. ಈ ಮೂಲಕ ನಬೀನ್ ಅವರ ಪಕ್ಷ ನಿಷ್ಠೆ ಮತ್ತು ತಾವು ವಹಿಸುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿರುವ ಅರ್ಹತೆಯನ್ನು ಮೋದಿ ಮತ್ತು ಶಾ ಗುರುತಿಸಿರುವುದೇ ಈ ನೇಮಕಕ್ಕೆ ಕಾರಣ. ಸಾಮಾನ್ಯವಾಗಿ ಬಿಜೆಪಿಯ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ವಿಷಯದಲ್ಲಿ ಆರ್‌ಎಸ್‌ಎಸ್ ನಾಯಕತ್ವ ಮೂಗುತೂರಿಸುವುದು ಸಹಜವಾಗಿ ನಡೆದು ಬಂದಿರುವ ಆಂತರಿಕ ರಾಜಕಾರಣದ ವಾಸ್ತವ ಸಂಗತಿ. ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗ್ವತ್ ಅವರ ಹಲವು ಹೇಳಿಕೆಯಿಂದ ಕಿರಿಕಿರಿ ಅನುಭವಿಸಿರುವ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆಯಿಂದ ಪಕ್ಷದ ಸೂತ್ರ ತಮ್ಮ ಕೈಯಲ್ಲೇ ಇರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿಯ ರಾಜಕೀಯ ವ್ಯವಹಾರದಲ್ಲಿ ತಮ್ಮ ಸಂಘಟನೆಯ ಪಾತ್ರವೇನೂ ಇಲ್ಲ ಎಂದು ಆಗಿಂದ್ದಾಗ್ಗೆ ಹೇಳುವ ಭಾಗ್ವತ್ ತಮ್ಮ ಸಂಘದ ಬಲ ಮತ್ತು ಪಕ್ಷದೊಳಗೆ ಇರುವ ಬಹುತೇಕ ನಾಯಕರೆಲ್ಲರೂ ಸಂಘದ ಹಿನ್ನೆಲೆಯಿಂದಲೇ ಬಂದವರಾದ್ದರಿಂದ ಅವರ ಮಹತ್ವವನ್ನು ಕಡೆಗಣಿಸುವಂತಿಲ್ಲ ಎನ್ನುವುದು ವಾಸ್ತವ.

ನಿತಿನ್‌ಗೆ ದೆಹಲಿ ಮತ್ತು ರಾಷ್ಟ್ರರಾಜಕಾರಣ ಹೊಸದಾದರೂ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಅಣತಿಯಂತೆ ಈಗಾಗಲೇ ತಮ್ಮಮಕಾರ್ಯವನ್ನು ಆರಂಭಿಸಿದ್ದಾರೆ. ಪಕ್ಷದ ಯಾವ ನಾಯಕರು ಅವರ ಆಯ್ಕೆಗೆತುಟಿಪಿಟಕ್ಕೆನ್ನದೆ ಹಾರ ತುರಾಯಿ ತಂದು ಅವರಿಗೆ ಹಾಕುವ ಮೂಲಕ ಪಕ್ಷದ ನೂತನ ನಾಯಕನನ್ನು ಅಭಿನಂದಿಸುತ್ತಿದ್ದಾರೆ. ಇದು ಆ ಪಕ್ಷದ ಮೇಲೆ ಪ್ರಧಾನಿ ಮೋದಿ ಮತ್ತು ಶಾ ಹೊಂದಿರುವ ಬಲವಾದ ನಿಯಂತ್ರಣವನ್ನು ತೋರಿಸುತ್ತದೆ. ಹೊಸ ನಾಯಕನ ಮುಂದೆ ಈಗ ಹೊಸ ಸವಾಲುಗಳೆಂದರೆ ಬಿಜೆಪಿಗೆ ಕಬ್ಬಿಣದ ಕಡಲೆ ಆಗಿರುವ ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ವಿಧಾನಸಭೆ ಚುನಾವಣೆಗಳು. ಅಚ್ಚರಿ ಎನಿಸುವಂತೆ ಕೇರಳದಲ್ಲಿ ಮೊದಲ ಬಾರಿಗೆ ತಿರುವಂತಪುರ ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯುವ ಮೂಲಕ ಬಿಜೆಪಿ ತನ್ನ ಮಾರ್ಗವನ್ನು ಕಂಡುಕೊಂಡಿದೆ. ತಮಿಳುನಾಡಿನಲ್ಲಿ ದ್ರಾವಿಡ ಸಂಸ್ಕೃತಿ ಹಾಗೂ ರಾಜಕಾರಣದ ಭದ್ರ ಬುನಾದಿಯನ್ನು ಅಲುಗಾಡಿಸಲು ಬಿಜೆಪಿ ಎಐಎಡಿಎಂಕೆ ಜೊತೆ ಮೈತ್ರಿ ಬೆಳೆಸಿಕೊಂಡಿದೆ.

ಎರಡು ದಶಕಗಳ ಹಿಂದೆ ಎಡಪಕ್ಷಗಳ ಭದ್ರ ನೆಲೆಯಾಗಿದ್ದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಆ ಪಕ್ಷಗಳು ನೆಲಕಚ್ಚುವಂತೆ ಮಾಡಿದ್ದಾರೆ. ಆದರೆ ಅವರಿಗೆ ಈಗ ಸವಾಲು ಮತ್ತು ನೇರಸ್ಪರ್ಧಿ ಬಿಜೆಪಿಯೇ ಆಗಿರುವುದರಿಂದ ಅಲ್ಲಿ ಹೆಸರಿಗೆ ತ್ರಿಕೋನ ಹೋರಾಟ ನಡೆದರೂ ನೇರ ಸ್ಪರ್ಧೆ ಟಿಎಂಸಿ ಮತ್ತು ಬಿಜೆಪಿ ನಡುವೆಯೇ ಎನ್ನುವುದು ಸತ್ಯ. ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿ ಇಲ್ಲದಂತಾಗಿರುವುದು ಅವರ ಸೈದ್ಧಾಂತಿಕ ವಿಚಾರಗಳಿಗೆ ಆಗಿರುವ ಹಿನ್ನಡೆ. ಈ ದಿಶೆಯಲ್ಲಿ ಬಿಜೆಪಿ ಈ ರಾಜ್ಯಗಳಲ್ಲಿ ಪ್ರಧಾನಿ ಮೋದಿ ಮತ್ತು ಶಾ ಅವರ ರಾಜಕೀಯ ತಂತ್ರಗಾರಿಕೆಯನ್ನು ನೂತನ ನಾಯಕ ನಿತಿನ್ ನಬೀನ್ ಪಾಲಿಸುವುದೊಂದೇ ಇರುವ ಮಾರ್ಗ. ಬಿಜೆಪಿ ಈಗ ದೇಶದ ರಾಜಕಾರಣದಲ್ಲಿ ಬಲವಾಗಿ ಬೇರೂರಿವುದರಿಂದ ಪಕ್ಷದ ನಾಯಕನ ಕೆಲಸ ಸುಲಭವಾಗಿದೆ. ಆ ಅದೃಷ್ಟ ಈಗ ನಿತಿನ್ ನಬೀನ್ ಅವರದ್ದು.

” ಮೋದಿ ಮತ್ತು ಶಾ ಅವರು ನಿತಿನ್ ನಬೀನ್ ಅವರನ್ನು ಆಯ್ಕೆ ಮಾಡಿರುವುದು ಪಕ್ಷದೊಳಗೆಯೇ ಆಶ್ಚರ್ಯ ಉಂಟು ಮಾಡಿದರೂ ಒಬ್ಬರೂ ಕೂಡ ಅಪಸ್ವರ ತೆಗೆದಿಲ್ಲ. ಬಿಹಾರದ ಈ ನಾಯಕನ ಆಯ್ಕೆಗೆ ಹಿರಿಯ ಕಿರಿಯರೆನ್ನದೆ ಎಲ್ಲರೂ ತಲೆಬಾಗಿ ಗೌರವಿಸುತ್ತಿದ್ದಾರೆ.”

-ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್‌ 

Tags:
error: Content is protected !!