ಆಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಜಾರಿಗೆ ತಂದ ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ವಿಶ್ವ ವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ), ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮತ್ತು ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಶನ್ ಸಂಸ್ಥೆಗಳನ್ನು ವಿಲೀನಗೊಳಿಸಿ ಹೈಯರ್ ಎಜುಕೇಶನ್ ಕಮೀಷನ್ ಆಫ್ ಇಂಡಿಯಾ (ಎಚ್‌ಇಸಿಐ) ಮಸೂದೆಯೊಂದನ್ನು ತರಲು ಕಳೆದ ವಾರ ನಿರ್ಧರಿಸಿದೆ. ವಿಕಸಿತ್ ಭಾರತ್ ಶಿಕ್ಷಾ ಅಧೀಕ್ಷಣ ಮಸೂದೆ ಹೆಸರಿನಲ್ಲಿ ಈಗ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಅಜೆಂಡಾವನ್ನು ಜಾರಿಗೊಳಿಸುವ ಕ್ರಿಯೆಯಲ್ಲಿ ಸರ್ಕಾರ ಸಕ್ರಿಯವಾಗಿದೆ. ಒಟ್ಟಾರೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲು ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ.
ಯುಜಿಸಿ, ಎಐಸಿಟಿಇ ಮತ್ತು ಎನ್‌ಸಿಟಿಇ ಈ ಮೂರೂ ಸಂಸ್ಥೆಗಳ ಕಾರ್ಯವನ್ನು ಹೈಯರ್ ಎಜುಕೇಷನ್ ಕಮೀಷನ್ ಆಫ್ ಇಂಡಿಯಾ (ಭಾರತೀಯ ಉನ್ನತ ಶಿಕ್ಷಣ ಆಯೋಗ) ನಿರ್ವಹಿಸಲಿದೆ. ವಿಶ್ವವಿದ್ಯಾಲಯಗಳ, ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಮತ್ತು ಶಿಕ್ಷಕರ ಶಿಕ್ಷಣದ ಕಾರ್ಯವನ್ನು ಇದುವರೆಗೆ ಆಯಾ ಆಯೋಗಗಳು ನೋಡಿಕೊಳ್ಳುತ್ತಿದ್ದವು. ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿಯೇ ಉನ್ನತ ಶಿಕ್ಷಣ ಸಮಿತಿಯೊಂದನ್ನು 1945ರಲ್ಲಿಯೇ ಆರಂಭಿಸಲಾಗಿತ್ತು. 1947ರಲ್ಲಿ ಅದರ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲಾಯಿತು. 1956ರಲ್ಲಿ ಕೇಂದ್ರ ಸರ್ಕಾರ ಅದಕ್ಕೆ ಕಾಯ್ದೆ ಸ್ವರೂಪ ನೀಡಿ ಯುಜಿಸಿ ಎಂದು ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ವಿಶ್ವವಿದ್ಯಾಲಯ ವ್ಯವಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ, ಸಂಶೋಧನೆ ಮತ್ತು ಆಗಿಂದಾಗ್ಗೆ ನೀತಿ ನಿರೂಪಣೆಯ ಗುರುತರ ಹೊಣೆಯನ್ನು ಯುಜಿಸಿಗೆ ಹೊರಿಸಲಾಗಿತ್ತು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ನೇತೃತ್ವದ ಸಮಿತಿಯು ಯುಜಿಸಿಗೆ ಹೊಸ ರೂಪ ನೀಡಿತ್ತು. ಅದು ಕಾಯ್ದೆ ರೂಪದಲ್ಲಿ ಅಸ್ತಿತ್ವಕ್ಕೆ ಬಂದಾಗ 1956ರಲ್ಲಿ ಅಂದಿನ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಯುಜಿಸಿಯನ್ನು ಅಧಿಕೃತವಾಗಿ ಉದ್ಘಾಟಿಸಿದ್ದರು. ಎಪ್ಪತ್ತು ವರ್ಷಗಳ ಕಾಲ ಉನ್ನತ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಒತ್ತಿದ್ದ ಯುಜಿಸಿ ಇನ್ನು ಮೇಲೆ ನೆನಪು ಮಾತ್ರ. ಆದರೆ ಅದು ಬೇರೆ ಸ್ವರೂಪದಲ್ಲಿ ತನ್ನ ಕಾರ್ಯವನ್ನು ನಿರ್ವಹಿಸಲಿದೆ. ಅಂದಿನಿಂದ ಇಂದಿನವರೆಗೂ ಯುಜಿಸಿ ಉನ್ನತ ಶೈಕ್ಷಣಿಕ ವಲಯದಲ್ಲಿ ಗುಣಮಟ್ಟ, ಶಿಕ್ಷಕರ ಅರ್ಹತೆ, ಪರೀಕ್ಷೆ ಪದ್ಧತಿ ಮತ್ತು ಸಂಶೋಧನೆಯಂತಹ ಪ್ರಮುಖ ಕಾರ್ಯವನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದನ್ನು ಅಲ್ಲಗಳೆಯಲಾಗುವುದಿಲ್ಲ.
ಇದನ್ನೂ ಓದಿ:-ಬೈಕ್‌ಗೆ ಲಾರಿ ಡಿಕ್ಕಿ : ಸವಾರ ಸಾವು, ಮತ್ತೊರ್ವ ಗಂಭೀರ
ಹೊಸದಾಗಿ ಜಾರಿಗೆ ಬರುವ ಈ ಹೊಸ ಆಡಳಿತ ವ್ಯವಸ್ಥೆಯಿಂದ ವೈದ್ಯಕೀಯ ಮತ್ತು ಕಾನೂನು ಶಿಕ್ಷಣವನ್ನು ಹೊರಗಿಡಲಾಗಿದೆ. ಈ ಎರಡು ವಿಭಿನ್ನ ಕ್ಷೇತ್ರಗಳಾಗಿರುವುದರಿಂದ ಸರ್ಕಾರ ಅವುಗಳ ಸಹವಾಸಕ್ಕೆ ಹೋಗಿಲ್ಲ. ಈ ಮೂರೂ ಸಂಸ್ಥೆಗಳ ಕಾರ್ಯವೈಖರಿಯ ಬಗೆಗೆ ಸಾರ್ವಜನಿಕವಾಗಿ ಅಸಮಾಧಾನ ಮತ್ತು ಟೀಕೆಗಳು ಕೇಳಿ ಬರಲಿಲ್ಲ. ಈ ಹೊಸ ಸಿಂಗಲ್ ವಿಂಡೋ ಶಿಕ್ಷಣ ಪದ್ಧತಿಯ ಎಚ್‌ಇಸಿಐಯನ್ನು 2018ರಲ್ಲಿಯೇ ರೂಪಿಸಿ ಜಾರಿಗೆ ತರುವ ಉದ್ದೇಶ ಸರ್ಕಾರಕಿತ್ತಾದರೂ ಅದು ಹಲವಾರು ಕಾರಣಗಳಿಂದಾಗಿ ಜಾರಿಗೆ ಬರಲಿಲ್ಲ.
ತಮಿಳುನಾಡು ಸರ್ಕಾರ 2020ರ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರದಿರಲು ನಿರ್ಧರಿಸಿದೆ. ಮತ್ತೆ ಕೆಲವು ರಾಜ್ಯಗಳು ಈ ಶಿಕ್ಷಣ ನೀತಿ ಮತ್ತು ತ್ರಿಭಾಷಾ ಸೂತ್ರದ ಬಗೆಗೆ ಅಪಸ್ವರ ಎತ್ತುತ್ತಲೇ ಇರುವುದರಿಂದ ಕೇಂದ್ರ ಸರ್ಕಾರಕ್ಕೆ ಕಿರಿಕಿರಿ ಉಂಟಾಗುತ್ತಿರುವುದನ್ನು ಕೇಂದ್ರ ಸರ್ಕಾರದ ಸಂಬಂಧಿಸಿದ ಸಚಿವರು ಅಲ್ಲಲ್ಲಿ ಪ್ರಸ್ತಾಪಿಸುತ್ತಲೇ ಹಲವು ರಾಜ್ಯಗಳ ಅಸಹಕಾರ ಮತ್ತು ಅರೆಮನಸ್ಸಿನ ಬಗೆಗೆ ಟೀಕಿಸುತ್ತಲೇ ಬಂದಿದ್ದಾರೆ. ತ್ರಿಭಾಷಾ ಸೂತ್ರವನ್ನು ವಿಶೇಷವಾಗಿ ಹಿಂದಿ ಶಿಕ್ಷಣ ಕಲಿಕೆಯನ್ನು ಆರುದಶಕಗಳಿಂದ ತಮಿಳುನಾಡಿನಲ್ಲಿ ಯಾವುದೇ ಪಕ್ಷದ ಸರ್ಕಾರವಿದ್ದರೂ ಸಾರಾಸಗಟಾಗಿ ತಿರಸ್ಕರಿಸುತ್ತಲೇ ಹೊಸದಾಗಿ ಸ್ಥಾಪನೆಯಾಗುವ ಉನ್ನತ ಶಿಕ್ಷಣ ಆಯೋಗವು ನ್ಯಾಷನಲ್ ಹೈಯರ್ ಎಜುಕೇಶನ್ ರೆಗ್ಯೂಲೇಟರಿ ಕೌನ್ಸಿಲ್, ನ್ಯಾಷನಲ್ ಅಕ್ರಿಡಿಟೇಶನ್ ಕೌನ್ಸಿಲ್, ಜನರಲ್ ಎಜುಕೇಷನ್ ಕೌನ್ಸಿಲ್ ಮತ್ತು ಹೈಯರ್ ಎಜುಕೇಷನ್ ಗ್ಯಾಂಟ್ಸ್ ಕೌನ್ಸಿಲ್
ವಿಭಾಗಗಳನ್ನು ಹೊಂದಲಿದೆ. ಇದರಿಂದ ನೂತನ ಶಿಕ್ಷಣ ನೀತಿಯನ್ನು ತಿರಸ್ಕರಿಸಿರುವುದರಿಂದ ಕೇಂದ್ರದಿಂದ ಬರಬೇಕಾಗಿರುವ ನೂರಾರು ಕೋಟಿ ರೂ. ಅನುದಾನದಿಂದಲೂ ಆ ರಾಜ್ಯ ವಂಚನೆಗೆ ಒಳಗಾಗುತ್ತಲೇ ಇದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹಿಂದಿ ಭಾಷೆಯನ್ನು ದಕ್ಷಿಣ ರಾಜ್ಯಗಳ ಮೇಲೆ ಹೇರುತ್ತಿದೆ ಎನ್ನುವ ಆತಂಕ ಮತ್ತು ಕೇಂದ್ರದ ಪ್ರಯತ್ನದ ವಿರುದ್ಧ ತಮಿಳುನಾಡು ತೊಡೆತಟ್ಟಿ ನಿಂತಿದೆ. 1963ರಿಂದಲೂ ಹಿಂದಿ ವಿರುದ್ಧದ ನಿಲುವು ತಳೆದಿರುವ ತಮಿಳುನಾಡು, ಕೇಂದ್ರ ಸರ್ಕಾರದ ಜೊತೆ ಎಂದೂ ರಾಜಿಯಾಗಿಲ್ಲ. ಹಿಂದಿ ಭಾಷೆಯನ್ನು ವಿರೋಧಿಸುವ ತನ್ನ ಬದ್ಧತೆಯಿಂದ ತಮಿಳು ನಾಡು ಸರ್ಕಾರ ಸ್ವಲ್ಪವೂ ಬದಲಾಗಿಲ್ಲ. ಈಗಲೂ ಸಂಸತ್ತಿನ ಒಳಗೂ ಮತ್ತು ಹೊರಗೂ ತನ್ನ ಹೋರಾಟವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದೆ. ಆದರೂ ತನ್ನ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಲೇಬೇಕೆಂದು ಕೇಂದ್ರದ ಬಿಜೆಪಿ ಸರ್ಕಾರ ತಮಿಳುನಾಡಿನ ಡಿಎಂಕೆ ಸರ್ಕಾರವನ್ನು ಬಗ್ಗಿಸಲು ಇನ್ನಿಲ್ಲದ ಹರಸಾಹಸ ಮಾಡುತ್ತಲೇ ಇದೆ. ಸದ್ಯದಲ್ಲಿಯೇ ವಿಧಾನಸಭೆಗೆ ಚುನಾವಣೆ ಬರುತ್ತಿರುವುದರಿಂದ ಕೇಂದ್ರ ಸರ್ಕಾರ ಈ ಉನ್ನತ ಶಿಕ್ಷಣ ಮತ್ತು ಹಿಂದಿ ವಿಷಯದಲ್ಲಿ ಏನು ನಿಲುವು ತೆಗೆದುಕೊಳ್ಳುವುದೋ ಕಾದು ನೋಡಬೇಕು. ಒಟ್ಟಿನಲ್ಲಿ ಉನ್ನತ ಶಿಕ್ಷಣ ಮತ್ತು ಹಿಂದಿ ವಿಷಯದಲ್ಲಿ ಹಗ್ಗ ಜಗ್ಗಾಟ ನಡೆಯುತ್ತಲೇ ಇದೆ.
ಹೊಸದಾಗಿ ಆರಂಭವಾಗುವ ಉನ್ನತ ಶಿಕ್ಷಣ ಆಯೋಗವು ನ್ಯಾಷನಲ್ ಹೈಯರ್ ಎಜುಕೇಶನ್ ರೆಗ್ಯೂಲೇಟರಿ ಕೌನ್ಸಿಲ್, ನ್ಯಾಷನಲ್ ಅಕ್ರಿಡಿಟೇಶನ್ ಕೌನ್ಸಿಲ್, ಜನರಲ್ ಎಜುಕೇಷನ್ ಕೌನ್ಸಿಲ್ ಮತ್ತು ಹೈಯರ್ ಎಜುಕೇಷನ್ ಗ್ಯಾಂಟ್ಸ್ ಕೌನ್ಸಿಲ್ ವಿಭಾಗಗಳನ್ನು ಹೊಂದಲಿದೆ. ಈ ಹೊಸ ಆಯೋಗವು ಕಾಯ್ದೆ ಬದ್ಧವಾಗಿ ಪ್ರತ್ಯೇಕತೆಯನ್ನು ಹೊಂದಿದರೂ ಹಣಕಾಸು ಪೂರೈಕೆಯನ್ನು ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯವೇ ನಿರ್ವಹಿಸಲಿದೆ. ಈ ಮಸೂದೆಯನ್ನು ಈಗಿನ ಚಳಿಗಾಲದ ಅಧಿವೇಶನದಲ್ಲಿಯೇ ಅಂಗೀಕರಿಸಲು ಸರ್ಕಾರ ನಿರ್ಧರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿಯೂ ಯಾವುದೇ ವಿಷಯದ ಮೇಲೂ ಅರ್ಥಪೂರ್ಣ ಚರ್ಚೆ ನಡೆಯದೆ ನಿತ್ಯವೂ ಕಲಾಪವು ಗದ್ದಲದಲ್ಲಿಯೇ ಮುಳುಗಿ ಹೋಗುತ್ತಿರುವುದರಿಂದ ಇಂತಹ ಪ್ರಮುಖ ಮಸೂದೆಯ ಭವಿಷ್ಯ ಏನಾಗುವುದೋ ತಿಳಿಯದು.
ಈ ಮಧ್ಯೆ ಶಿಕ್ಷಣ, ಮಹಿಳೆ, ಮಕ್ಕಳ ಮತ್ತು ಯುವಜನ ಹಾಗೂ ಕ್ರೀಡಾ ಇಲಾಖೆಗಳ ಸಂಸದೀಯ ಸಮಿತಿಯ ಅಧ್ಯಕ್ಷರಾಗಿರುವ ಕಾಂಗ್ರೆಸ್ಸಿನ ರಾಜ್ಯಸಭೆ ಸದಸ್ಯ ದಿಗ್ವಿಜಯ್ ಸಿಂಗ್ ಅವರು ಹೊಸದಾಗಿ ಆರಂಭವಾಗುವ ಉನ್ನತ ಶಿಕ್ಷಣ ಮಂಡಳಿಯಲ್ಲಿ ಎಲ್ಲ ವರ್ಗಗಳಿಗೆ ಸಮನಾಗಿ ಪ್ರಾತಿನಿಧ್ಯ ನೀಡಬೇಕು ಎಂದು ಈಗಾಗಲೇ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಕಳೆದವಾರ ಈ ಸಮಿತಿಯುಸಂಸತ್ತಿಗೆ ತನ್ನ ವರದಿಯೊಂದನ್ನು ಮಂಡಿಸಿದ್ದು, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೂಕ್ತವಾದ ಪ್ರಾತಿನಿಧ್ಯ ನೀಡದಿರುವುದನ್ನು ಸ್ಪಷ್ಟವಾಗಿ ಗುರುತಿಸಿದೆ. ಈ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ಮಾತ್ರವಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಮತ್ತು ಉದ್ಯೋಗಗಳಲ್ಲಿ ಕಟ್ಟು ನಿಟ್ಟಾಗಿ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಶಿಫಾರಸು ಮಾಡಿದೆ. ಈಗಿರುವ ಪ್ರಾತಿನಿಧ್ಯವು ಶೋಚನೀಯವಾಗಿದೆ ಎಂದು ಸಮಿತಿ ಆತಂಕ ವ್ಯಕ್ತಪಡಿಸಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಈ ವರ್ಗಗಳಿಗೆ ಸರಿಯಾಗಿ ಪ್ರಾತಿನಿಧ್ಯವನ್ನೇ ನೀಡಿಲ್ಲ ಎಂದು ಸಮಿತಿ ಹೇಳಿದೆ. ಈ ವರದಿಯಲ್ಲಿ ದಿಗ್ವಿಜಯ್ ಸಿಂಗ್ ಅವರು, ಉನ್ನತ ಶಿಕ್ಷಣ ಇಲಾಖೆಯು ನೀಡಿರುವ ಅಂಕಿ ಅಂಶದ ಪ್ರಕಾರ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸಂಖ್ಯೆ ಶೇ.40 ಇದ್ದರೆ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಸಂಖ್ಯೆ ಶೇ.14.9 ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಸಂಖ್ಯೆ ಶೇ. 5 ಇರುವುದಾಗಿ ತಿಳಿಸಿದ್ದಾರೆ.
2024-25ರ ಸಾಲಿನಲ್ಲಿ ಬಿರ್ಲಾ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ನಲ್ಲಿ 5137 ಮಂದಿ ವಿದ್ಯಾರ್ಥಿಗಳಿದ್ದರೆ ಅವರಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಸಂಖ್ಯೆ 514 (ಶೇ.10) ಇದೆ. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಕೇವಲ 29 (ಶೇ.0.5), ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಸಂಖ್ಯೆ 4 ಮಾತ್ರ. ಓಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯಲ್ಲಿ ಒಟ್ಟು 3,181 ವಿದ್ಯಾರ್ಥಿಗಳಿದ್ದರೆ ಅವರಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಸಂಖ್ಯೆ ಕೇವಲ 28 ಮತ್ತು ಪರಿಶಿಷ್ಟ ವಿದ್ಯಾರ್ಥಿಗಳ ಸಂಖ್ಯೆ 29 ಇದೆ. ಹಾಗೆಯೇ ಶಿವನಾಡ ಯೂನಿವರ್ಸಿಟಿಯಲ್ಲಿ ಒಟ್ಟು 3,359 ವಿದ್ಯಾರ್ಥಿಗಳಿದ್ದರೆ 48 ಮಂದಿ ಪರಿಶಿಷ್ಟ ಜಾತಿ ಮತ್ತು 29 ಮಂದಿ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿದ್ದಾರೆ. ಅಂದರೆ ಈ ವರ್ಗಗಳ ಪ್ರಾತಿನಿಧ್ಯ ಕ್ರಮವಾಗಿ ಶೇ. 1.5 ಮತ್ತು 0.5 ಇದೆ.
ಈ ಶಿಕ್ಷಣ ಸಂಸ್ಥೆಗಳು ತಾರತಮ್ಯ ನೀತಿಯನ್ನು ಅನುಸರಿಸುತ್ತಿವೆ ಎನ್ನುವ ಅಂಶವನ್ನು ಈ ಸಂಸದೀಯ ಸಮಿತಿಯು ಗಮನಿಸಿದ್ದು, ಸಂವಿಧಾನದ ಆರ್ಟಿಕಲ್ 15 (5)ರ ಅನ್ವಯ ಯುಜಿಸಿ, ಹಿಂದುಳಿದ ವರ್ಗಗಳ ಆಯೋಗ, ಎಸ್‌ಸಿ, ಎಸ್‌ಟಿ ಆಯೋಗಗಳು ಆಗಿಂದಾಗ್ಗೆ ತನಿಖೆ ಮಾಡಿತಳಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಶಿಫಾರಸು ಮಾಡಿದೆ.
ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳು ಜಾತಿ ತಾರತಮ್ಯ ಅನುಸರಿಸದಂತೆ ಮತ್ತು ತಳ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಳಲ್ಲಿ ಅರ್ಹತೆ ಹೊಂದಲು ಉನ್ನತ ಶಿಕ್ಷಣ ಇಲಾಖೆಗಳು ತರಬೇತಿ, ಪೂರಕ ಶಿಕ್ಷಣ ಸೌಲಭ್ಯ ಒದಗಿಸುವ ಜೊತೆಗೆ ಇಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಮುಂದೆ ಬರುವ ಈ ವರ್ಗಗಳ ವಿದ್ಯಾರ್ಥಿಗಳಿಗೆ ತಗಲುವ ಹಣಕಾಸು ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಸರ್ಕಾರಕ್ಕೆ ದಿಗ್ವಿಜಯ್ ಸಿಂಗ್ ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ಆದರೆ ಈ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಕಟ್ಟು ನಿಟ್ಟಾಗಿ ಜಾರಿಗೆ ತರುವ ಪ್ರಾಮಾಣಿಕತೆಯನ್ನು ಪ್ರದರ್ಶಿಸುವ ಕಡೆ ಗಮನ ನೀಡುವುದು ಅವಶ್ಯ.





