Mysore
34
few clouds

Social Media

ಭಾನುವಾರ, 26 ಏಪ್ರಿಲ 2026
Light
Dark

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ | ಸೋಲಾದದ್ದು ಮುಚ್ಚುಮರೆಯ ಕ್ಷೇತ್ರ ಪುನರ್‌ ವಿಂಗಡಣೆಗೆ

ದೆಹಲಿ ಕಣ್ಣೋಟ

ಸಂಸತ್ತು ಅಂಗೀಕರಿಸಬೇಕಿದ್ದ ಸಂವಿಧಾನದ ೧೩೧ನೇ ತಿದ್ದುಪಡಿ ಮಸೂದೆ ಮಹಿಳಾ ಮೀಸಲಾತಿಯೋ ಅಥವಾ ಜನಗಣತಿಯ ನಂತರ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಕ್ಷೇತ್ರ ಮರುವಿಂಗಡಣೆಯೋ? ಈ ಎರಡೂ ವಿಷಯಗಳನ್ನು ಒಂದುಗೂಡಿಸಿ ಕೇಂದ್ರ ಸರ್ಕಾರ ತಂದಿದ್ದ ಗೊಂದಲಕಾರಿ ಸಂವಿಧಾನ ತಿದ್ದುಪಡಿ ಮಸೂದೆ ೧೩೧ಕ್ಕೆ ಸೋಲುಂಟಾದದ್ದು ಈಗ ಇತಿಹಾಸ. ಏಪ್ರಿಲ್ ೧೭ರಂದು ಶುಕ್ರವಾರ ಲೋಕಸಭೆಯಲ್ಲಿ ೫೪೩ ಮಂದಿ ಸದಸ್ಯರ ಪೈಕಿ ಹಾಜರಿದ್ದವರು ೫೨೮. ಇವರಲ್ಲಿ ಮಸೂದೆಯ ಪರ ಬಿದ್ದ ಮತಗಳು ೨೯೮, ವಿರುದ್ಧ ಬಿದ್ದ ಮತಗಳು ೨೩೦. ಈ ಮಸೂದೆ ಅಂಗೀಕಾರವಾಗಲು ಬೇಕಾಗಿದ್ದ ಮತಗಳು ೩೫೨. ಅಂದರೆ ಸರ್ಕಾರ ಮಂಡಿಸಿದ ಸಂವಿಧಾನ ತಿದ್ದುಪಡಿ ಮಸೂದೆಗೆ ಬೇಕಾಗಿದ್ದ ಎರಡನೇ ಮೂರರಷ್ಟು ಮತಗಳು ಬರಲಿಲ್ಲ. ಇಂತಹ ಪ್ರಮುಖ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕರಿಸುವಾಗ ಆಡಳಿತ ಪಕ್ಷವು ತಮ್ಮ ಸದಸ್ಯರಿಗೆ ‘ವ್ಹಿಪ್’ ನೀಡದೆ ಹೋದದ್ದು ಏಕೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲದೆ ಇರುವುದು ಕೂಡ ಹತ್ತಾರು ಶಂಕೆಗಳಿಗೆ ಎಡೆಮಾಡಿಕೊಡುತ್ತದೆ.

ಹೀಗಾಗಿ ಸಹಜವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಮುಖಭಂಗವಾದದ್ದು ನಿಜ. ಈ ಹನ್ನೊಂದು ವರ್ಷಗಳ ಆಡಳಿತಾವಧಿಯಲ್ಲಿ ಮೊದಲ ಬಾರಿಗೆ ಲೋಕಸಭೆಯಲ್ಲಿ ಸರ್ಕಾರಕ್ಕೆ ಸೋಲಾಗಿದೆ. ಏಕೆ ಹೀಗಾಯಿತು ಎಂದು ವಿಶ್ಲೇಷಿಸುವ ಬದಲಿಗೆ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಸಹಜವಾಗಿ ಕೆಸರೆರಚಾಟ ನಡೆದಿದೆ. ಆದರೆ ರಾಜಕೀಯ ವಿಶ್ಲೇಷಕರು ಮತ್ತು ಮಾಧ್ಯಮಗಳು ಜನತೆಗೆ ಸರಿಯಾದ ವಿವರವನ್ನು ನೀಡಬೇಕಾದುದು ಆಯಾ ಕ್ಷೇತ್ರದ ವೃತ್ತಿಧರ್ಮ.

‘ಈ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗದಂತೆ ಪ್ರತಿಪಕ್ಷಗಳು ನಡೆಸಿದ ಮೋಸವನ್ನು ದೇಶದ ಮಹಿಳೆಯರು ಕ್ಷಮಿಸುವುದಿಲ್ಲ. ಇವರ ಶಾಪ ಅವರಿಗೆ ತಟ್ಟದೆ ಬಿಡುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಬಿಜೆಪಿ ಮಾತ್ರವಲ್ಲ ಎನ್‌ಡಿಎಗೆ ಸೇರಿದ ಎಲ್ಲ ಸಣ್ಣಪುಟ್ಟ ಪಕ್ಷಗಳ ನಾಯಕರೂ ಭಾಷಣ ಮತ್ತು ಪತ್ರಿಕಾಗೋಷ್ಠಿ ಮೂಲಕ ವಿರೋಧ ಪಕ್ಷಗಳು ಕುತಂತ್ರ ನಡೆಸಿವೆ ಎಂದು ಹೇಳುತ್ತಿರುವುದು ಮುಂದುವರಿದೇ ಇದೆ. ಹಾಗಾದರೆ ೨೦೨೩ರ ಸೆಪ್ಟೆಂಬರ್ ೧೬ ಮತ್ತು ೧೭ರಂದು ಕ್ರಮವಾಗಿ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಅಂಗೀಕಾರವಾದ ಮಹಿಳಾ ಮಸೂದೆ ಯಾವುದು ? ಅದರ ವಾಸ್ತವ ಸ್ಥಿತಿ ಏನು? ಈ ಮಸೂದೆ ಅಂಗೀಕಾರವಾಗಿ ಭಾರತ ಸರ್ಕಾರದ ಗೆಜೆಟ್ಟಿನಲ್ಲಿ ಪ್ರಕಟವಾಗಿರುವ ಮಾಹಿತಿ ಪ್ರಕಾರ ಈ ಕಾಯ್ದೆ ೨೦೨೬ರ ಏಪ್ರಿಲ್ ೧೬ರಿಂದ ಜಾರಿಗೆ ಬರುವುದಾಗಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಿದ್ದು ಈ ಕಾಯ್ದೆಯನ್ನು ಮತ್ತೆ ಸಂವಿಧಾನ ತಿದ್ದುಪಡಿ ಮಸೂದೆಯಾಗಿ ಕ್ಷೇತ್ರಗಳ ಪುನರ್ ವಿಂಗಡಣೆ ಜೊತೆ ಸೇರಿಸಿ ತರುವುದರ ಹಿಂದಿನ ಮರ್ಮವಾದರೂ ಏನಿತ್ತು? ಈ ಕಾಯ್ದೆಯ ಜಾರಿಗೆ ಸರ್ಕಾರದ ಅಽಕೃತ ಪ್ರಕಟಣೆ ಹೊರಡಿಸಿದ ನಂತರವೂ ಸಂಸತ್ತಿನಲ್ಲಿ ಮತ್ತೆ ತರುವ ಮೂಲಕ ದೇಶದ ಜನರನ್ನು ದಾರಿತಪ್ಪಿಸುವ ಪ್ರಯತ್ನ ನಡೆಸಿದ್ದು ಸರಿಯೇ? ಈ ಪ್ರಶ್ನೆಗೆ ಸರ್ಕಾರದಿಂದ ಸ್ಪಷ್ಟ ಉತ್ತರ ಏಕಿಲ್ಲ?

ನಿಜ. ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆದ ಮೇಲೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಕ್ಷೇತ್ರಗಳ ಮರುವಿಂಗಡಣೆ ನಡೆಯಬೇಕು. ೧೯೭೬ರಲ್ಲಿ ನಡೆದಿದ್ದ ಕ್ಷೇತ್ರಗಳ ಮರುವಿಂಗಡಣೆ ಕಾರ್ಯವನ್ನು ಎಲ್ಲ ರಾಜಕೀಯ ಪಕ್ಷಗಳ ಒಪ್ಪಿಗೆ ಮೇರೆಗೆ ೨೫ ವರ್ಷಗಳ ನಂತರ ಪುನರ್ ವಿಂಗಡಣೆ ಕಾರ್ಯವನ್ನು ಕೈಗೊಳ್ಳಬೇಕೆಂಬ ತೀರ್ಮಾನ ಮಾಡಲಾಗಿತ್ತು. ಹಾಗಾಗಿ ೧೯೭೧ರ ಜನಗಣತಿಯ ದತ್ತಾಂಶವನ್ನು ಆಧರಿಸಿ ೨೦೦೨ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಕಾರ್ಯವನ್ನು ಕೈಗೊಳ್ಳಲಾಗಿತ್ತು.

೨೦೧೧ರಲ್ಲಿ ನಡೆದ ಜನಗಣತಿಯ ನಂತರ ೨೦೨೧ರಲ್ಲಿ ಗಣತಿ ಕಾರ್ಯ ನಡೆಯಬೇಕಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ ರೋಗ ದೇಶವನ್ನು ವ್ಯಾಪಿಸಿದ್ದ ಕಾರಣ ಜನಗಣತಿ ಕಾರ್ಯ ಅನಿವಾರ್ಯವಾಗಿ ಮುಂದಕ್ಕೆ ಹೋಯಿತು. ಈ ಜನಗಣತಿ ಕಾರ್ಯವನ್ನು ಈಗ ೨೦೨೬ರಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಜನಗಣತಿಯ ನಂತರ ಕ್ಷೇತ್ರಗಳ ಮರುವಿಂಗಡಣೆ ನಡೆಯಬೇಕಿದೆ. ಈ ಮಧ್ಯೆ ಲೋಕಸಭೆ ಚುನಾವಣೆಯು ೨೦೨೯ಕ್ಕೆ ನಡೆಯಬೇಕಿದೆ. ಜನಗಣತಿ ಕಾರ್ಯ ೨೦೨೭ಕ್ಕೆ ಮುಗಿಯುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆದರೆ ಇದರಿಂದ ದೊರೆಯುವ ದತ್ತಾಂಶ ಬರುವುದು ತಡವಾಗಬಹುದು ಎನ್ನುವ ಲೆಕ್ಕಾಚಾರ ಕೇಂದ್ರ ಸರ್ಕಾರದ್ದು.

ಈ ಹಿನ್ನೆಲೆಯಲ್ಲಿ ೨೦೧೧ರ ಜನಗಣತಿಯ ದತ್ತಾಂಶವನ್ನೇ ಆಧರಿಸಿ ಕ್ಷೇತ್ರಗಳ ಮರುವಿಂಗಡಣೆಯನ್ನು ಮುಗಿಸಿ ೨೦೨೯ರ ಲೋಕಸಭೆಗೆ ಸಿದ್ಧವಾಗಬೇಕೆನ್ನುವುದು ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗದ ಉದ್ದೇಶ. ಉತ್ತರ ಭಾರತದ ರಾಜ್ಯಗಳ ಅನಿಯಂತ್ರಿತ ಜನಸಂಖ್ಯೆ ಹೆಚ್ಚಳದಿಂದ ದೇಶದ ರಾಜಕಾರಣದಲ್ಲಿ ಉತ್ತರ ಭಾರತದ ಪಾರಮ್ಯವೇ ಮೆರೆಯಲಿದೆ. ಇದರ ಪರಿಣಾಮ ನಿಯಂತ್ರಣದಲ್ಲಿರುವ ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳ ಲೋಕಸಭೆಯಲ್ಲಿನ ಪ್ರಾತಿನಿಧ್ಯ ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಆಗಲಿವೆ. ಇದರ ಪರಿಣಾಮ ಲೋಕಸಭೆಯಲ್ಲಿ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗುವ ಸತ್ಯಸಂಗತಿಯನ್ನು ಮುಚ್ಚಿಡಲಾಗದು. ಈ ಸಮಸ್ಯೆಯನ್ನು ಎದುರಿಸಲಾಗದೆ ಕೇಂದ್ರ ಸರ್ಕಾರ ಈ ಮಸೂದೆಗೆ ಮಹಿಳಾ ಮೀಸಲಾತಿಯ ಹೆಸರನ್ನು ಸೇರಿಸಿ ಎಡವಟ್ಟು ಮಾಡಿಕೊಂಡಿರುವುದು ಪ್ರಜಾತಂತ್ರ ವ್ಯವಸ್ಥೆಯನ್ನು ಅಣಕಿಸಿದಂತಾಗಿದೆ. ಸಂಸದೀಯ ಇತಿಹಾಸದಲ್ಲಿ ಇಂತಹ ಕಣ್ಕಟ್ಟಾಟದ ಪ್ರಯತ್ನ ನಡೆದಿರುವುದು ಪ್ರಾಯಶಃ ಇದೇ ಮೊದಲಿರಬಹುದು!

ಸಂಸತ್ತಿನಲ್ಲಿ ಯಾವುದೇ ಪ್ರಮುಖ ಮಸೂದೆ ಅದರಲ್ಲೂ ಸಂವಿಧಾನ ತಿದ್ದುಪಡಿಯಂತಹ ಮಸೂದೆಯನ್ನು ತರುವಾಗ ಹಿಂದಿನಿಂದ ನಡೆದು ಬಂದಿರುವ ಪದ್ಧತಿಯನ್ನು ಗಮನಿಸಿದರೆ ಪ್ರಧಾನಿಯಾದವರು ಸಂಸತ್ತಿನ ಸರ್ವಪಕ್ಷಗಳ ನಾಯಕರ ಮತ್ತು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಅವರೊಡನೆ ಸಂವಿಧಾನ ತಿದ್ದುಪಡಿ ಮಸೂದೆಯ ಸಾಧಕ ಬಾಧಕಗಳ ಬಗೆಗೆ ಚರ್ಚಿಸಿ ಮಸೂದೆಯ ಉದ್ದೇಶವನ್ನು ಮನವರಿಕೆ ಮಾಡಿಕೊಟ್ಟು ಮಸೂದೆಯ ಬಗೆಗೆ ಒಮ್ಮತ ಮೂಡಿಸುವುದು ನಡೆದು ಬಂದಿರುವ ಸಂಪ್ರದಾಯ. ಪ್ರಧಾನಿ ಮೋದಿ ಅವರು ಸರ್ವ ಪಕ್ಷಗಳ ನಾಯಕರ ಮತ್ತು ಮುಖ್ಯಮಂತ್ರಿಗಳ ಸಭೆ ಕರೆಯುವ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಿರುವ ಪರಿಣಾಮ ಅವರಿಗೇ ಈ ಸೋಲು ಈಗ ತಿರುಗುಬಾಣವಾಗಿರುವುದು ವಿಪರ್ಯಾಸ.

ಈ ಮಧ್ಯೆ ಕ್ಷೇತ್ರಗಳ ಮರುವಿಂಗಡಣೆ ಕಾರ್ಯವನ್ನು ೨೦೨೭ರಲ್ಲಿ ಮುಗಿಯುವ ಜನಗಣತಿ ನಂತರವೇ ಮಾಡಬೇಕೆನ್ನುವ ವಾದ ಒಂದು ಕಡೆಯಾದರೆ ೨೦೨೯ಕ್ಕೆ ನಡೆಯುವ ಲೋಕಸಭೆ ಚುನಾವಣೆ ಹೊತ್ತಿಗೆ ಈ ಕಾರ್ಯ ಅಸಾಧ್ಯ ಎನ್ನುವುದು ಮತ್ತೊಂದು ವಾದ. ಹಾಗಾಗಿ ೨೦೧೧ರ ಜನಗಣತಿ ದತ್ತಾಂಶವನ್ನೇ ಗಣನೆಗೆ ತೆಗೆದುಕೊಂಡು ಮಾಡುವ ಕ್ಷೇತ್ರಗಳ ಮರುವಿಂಗಡಣೆಯಿಂದ ಲೋಕಸಭೆಯ ಈಗಿನ ೫೪೫ ಸ್ಥಾನಗಳು ೮೫೦ಕ್ಕೆ ಏರಿಕೆಯಾಗಲಿದೆ. ಕ್ಷೇತ್ರಗಳ ಮರುವಿಂಗಡಣೆಯಲ್ಲಿ ರಾಜ್ಯಗಳಲ್ಲಿ ಹೆಚ್ಚು ಸದಸ್ಯರ ಸಂಖ್ಯೆ ಹೀಗಿದೆ: ಉತ್ತರ ಪ್ರದೇಶ ೮೦ರಿಂದ ೧೨೦, ಬಿಹಾರ ೪೦ರಿಂದ ೬೦, ಮಹಾರಾಷ್ಟ್ರ ೪೮ರಿಂದ ೭೨, ಪಶ್ಚಿಮ ಬಂಗಾಳ ೨೯ರಿಂದ ೪೦, ಮಧ್ಯಪ್ರದೇಶ ೨೯ರಿಂದ ೪೦, ರಾಜಸ್ತಾನ ೨೫ರಿಂದ ೩೭, ಕರ್ನಾಟಕ ೨೮ರಿಂದ ೪೧,ಆಂಧ್ರ ಪ್ರದೇಶ ಮತ್ತು ತೆಲಂಗಾಣ ಕ್ರಮವಾಗಿ ೩೮ ಮತ್ತು ೨೬, ಕೇರಳ ೨೦ರಿಂದ ೨೩.

ಈ ಪುನರ್ ವಿಂಗಡಣೆಯಾದರೆ ಈಗಾಗಲೇ ಸಂಸತ್ತಿನಲ್ಲಿ ಅಂಗೀಕಾರವಾಗಿರುವ ಮಹಿಳಾ ಮೀಸಲಾತಿ ಮಸೂದೆಯ ಪ್ರಕಾರ ಮಹಿಳೆಯರ ಕ್ಷೇತ್ರಗಳ ಸಂಖ್ಯೆ ೨೭೩ ಆಗಲಿವೆ. ಈ ಕ್ಷೇತ್ರ ಪುನರ್ ವಿಂಗಡಣೆಗೆ ಅನುಸರಿಸುವ ಮಾನದಂಡ ಜನಸಂಖ್ಯೆ. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ತಾನ ಮುಂತಾದ ಉತ್ತರ ಭಾರತದ ರಾಜ್ಯಗಳ ಜನಸಂಖ್ಯೆ ಹೆಚ್ಚಳದಿಂದ ಈ ರಾಜ್ಯಗಳ ರಾಜಕಾರಣ ಮತ್ತು ದನಿ ಮತ್ತಷ್ಟು ಗಟ್ಟಿಯಾಗಲಿದೆ. ಜನಸಂಖ್ಯೆಯೇ ಲೋಕಸಭೆಯ ಪ್ರಾತಿನಿಧ್ಯ ಗೊತ್ತುಪಡಿಸುವಲ್ಲಿ ಮಾನದಂಡವಾಗುವುದರಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುವ ಸತ್ಯವನ್ನು ಮರೆಮಾಚಲಾಗುತ್ತಿದೆ. ಈ ಮಾನದಂಡದ ಬಗೆಗೆ ಹೊಸ ಚಿಂತನೆ ಮತ್ತು ಪುನರ್ ಪರಿಶೀಲನೆ ಆಗುವುದು ಅವಶ್ಯ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ವೈಫಲ್ಯವನ್ನು ಒಪ್ಪಿಕೊಂಡು ಈಗಲಾದರೂ ಸರ್ವಪಕ್ಷಗಳ ನಾಯಕರ ಮತ್ತು ಮುಖ್ಯಮಂತ್ರಿಗಳ ಸಭೆ ಕರೆದು ಮುಂದೆ ಮಾಡಬೇಕಿರುವ ಕ್ಷೇತ್ರಗಳ ಮರುವಿಂಗಡಣೆ ಮತ್ತು ಅದರಲ್ಲಿ ಮಹಿಳಾ ಮೀಸಲು ಕ್ಷೇತ್ರಗಳನ್ನು ಗೊತ್ತುಪಡಿಸಲು ಕ್ಷೇತ್ರ ಪುನರ್ ವಿಂಗಡಣಾ ಆಯೋಗವನ್ನು ರಚಿಸುವ ಬಗೆಗೆ ವ್ಯಾಪಕವಾಗಿ ಚರ್ಚಿಸಿ ಮತ್ತೆ ಹೊಸದೊಂದು ತಿದ್ದುಪಡಿ ಮಸೂದೆಯನ್ನು ತರುವ ಕಡೆ ಗಮನ ಹರಿಸುವುದು ಅವಶ್ಯ.

Tags:
error: Content is protected !!