ಮೈಸೂರು : ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಟೆಲಿಕಾಂ ಇಲಾಖೆ(ಡಿಒಟಿ) ಸ್ಮಾರ್ಟ್ ಪೋನ್ ತಯಾರಕರಿಗೆ ಎಲ್ಲಾ ಹೊಸ ಮೊಬೈಲ್‌ಗಳಲ್ಲಿ ಸರ್ಕಾರಿ ಭದ್ರತಾ ಅಪ್ಲಿಕೇಶನ್ ಸಂಚಾರ್ ಸಾಥಿ ಅನ್ನು ಪ್ರಿ ಇನ್‌ಸ್ಟಾಲ್‌ಗೊಳಿಸುವುದನ್ನು ಕಡ್ಡಾಯಗೊಳಿಸಿ ಆದೇಶಿಸಿತ್ತು. ಇದಕ್ಕೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಆದೇಶವನ್ನು ಹಿಂಪಡೆದಿದೆ. ಸಂಚಾರ್ ಸಾಥಿ ಆಪ್ ಕಡ್ಡಾಯವಾದರೆ ಪ್ರತಿಯೊಬ್ಬರ ಖಾಸಗಿತನಕ್ಕೆ ಹೇಗೆ ಧಕ್ಕೆಯಾಗುತ್ತದೆ ಎಂದು ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ವಿನಯ್ ಶ್ರೀನಿವಾಸ್ ‘ಆಂದೋಲನ’ದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಮೊಬೈಲ್‌ಗಳಲ್ಲಿ ಸಂಚಾರ್ ಸಾಥಿ ಆಪ್ ಅಳ ವಡಿಕೆಯನ್ನು ಸರ್ಕಾರ ಕಡ್ಡಾಯಗೊಳಿಸಿದರೆ ಮೊಬೈಲ್ ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತದೆ. ನಮ್ಮ ಖಾತೆಯ ವಿವರ, ನಾವು ಯಾರ ಜೊತೆ ಮಾತಾಡು ತ್ತಿದ್ದೇವೆ, ನಮ್ಮ ಕುಟುಂಬ ಮತ್ತು ಸ್ನೇಹಿತರ ಜತೆ ಏನು ಮಾತನಾಡುತ್ತಿದ್ದೇವೆ? ನಮಗೆ ಒಳಬರುವ ಹಾಗೂ ನಮ್ಮಿಂದ ಹೊರಹೋಗುವ ಕರೆಗಳು, ಮೆಸೇಜ್‌ಗಳು ಮೊದಲಾದ ಎಲ್ಲಾ ಮಾಹಿತಿಗಳು ಮೊಬೈಲ್‌ನಲ್ಲಿ ಸಂಗ್ರಹವಾಗಿರುತ್ತವೆ. ಈ ಆಪ್‌ನ್ನು ಕಡ್ಡಾಯ ಮಾಡಿದಾಗ ಮೊಬೈಲ್ ಬಳಕೆದಾರರು ಆತಂಕಗೊಳ್ಳುವುದು ಸಹಜ. ಅನಗತ್ಯ ಕರೆಗಳನ್ನು ವರದಿ ಮಾಡಲು, ಮೊಬೈಲ್ -ನ್‌ಗಳು ಕಳವಾಗುವುದನ್ನು ನಿರ್ಬಂಧಿಸಲು ವಂಚನೆಯ ಕರೆಗಳನ್ನು ಪತ್ತೆಹಚ್ಚಲು ಮತ್ತು ಅವರ ಹೆಸರಿನಲ್ಲಿ ನೀಡಲಾದ ಸಿಮ್‌ಗಳನ್ನು ಪರಿಶೀಲಿಸಲು ಈ ಆಪ್ ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳಿದರೂ ಅದು ಸುಳ್ಳು ಎಂದು ತಂತ್ರಜ್ಞರೂ ಆಗಿರುವ ವಿನಯ್ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.
ಈ ಆಪ್‌ನಲ್ಲಿ ಕೆಲ ಲಿಸ್ಟ್ ಆಫ್ ಪರ್ಮಿಷನ್ ಏನಿದೆ ಎಂದು ತಿಳಿಸಿದ್ದಾರೆ. ಈ ಆಪ್‌ನಲ್ಲಿ ನಮ್ಮಲ್ಲಿನ ಮೆಸೇಜ್ ಓದಬಹುದು, ಕಳುಹಿಸಬಹುದು. ಮತ್ತೆ ನಮ್ಮ ಮೊಬೈಲ್ ಫೋನ್‌ನ ಎಲ್ಲಾ ಮಾಹಿತಿ ತಿಳಿದುಕೊಳ್ಳಬಹುದು. ಇದರಿಂದ ನಮ್ಮ ಮೊಬೈಲ್ ಫೋನ್ ನಿಯಂತ್ರಣ ಸರ್ಕಾರದ ಬಳಿ ಇರುತ್ತದೆ. ಸರ್ಕಾರ ಇದರಿಂದ ಏನು ಬೇಕಾದರೂ ತೆಗೆದುಕೊಳ್ಳಬಹುದು. ಇದು ಸರ್ಕಾರದ ಯಾವುದೋ ಒಂದು ಸರ್ವರ್‌ನಲ್ಲಿ ಸ್ಟೋರ್ ಆಗಿರುತ್ತದೆ. ಈಗ ನಮ್ಮ ಆಧಾರ್ ಮಾಹಿತಿಯನ್ನೇ ಕದ್ದು ಬೇರೆಯವರಿಗೆ ಮಾರಾಟ ಮಾಡಲಾಗುತ್ತಿದೆ. ಹೀಗಿದ್ದಾಗ ನಮ್ಮ ಮೊಬೈಲ್‌ನಲ್ಲಿರುವ ಮಾಹಿತಿ ಹ್ಯಾಕರ್ಸ್ ಗಳಿಗೆ ಸಿಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಮೈಸೂರು ವಿಭಾಗದಲ್ಲಿ ಶೂನ್ಯಕ್ಕಿಳಿದ ಡೆಂಗ್ಯು ಮರಣ
ಈ ಆಪ್ ನ್ಯಾಯಯುತವಾಗಿಯೂ ಇಲ್ಲ ಹಾಗೂ ಖಾಸಗಿತನವನ್ನು ದುರ್ಬಳಕೆ ಮಾಡಿಕೊಳ್ಳಲು ಅನುಕೂಲ ಕಲ್ಪಿಸಿದಂತಾಗಿದೆ. ಸರ್ವೋಚ್ಚ ನ್ಯಾಯಾಲಯ ಕೆ. ಪುಟ್ಟಸ್ವಾಮಿ ಪ್ರಕರಣದ ತೀರ್ಪಿನಲ್ಲಿ ಖಾಸಗಿತನ ನಮ್ಮ ಮೂಲಭೂತ ಹಕ್ಕು ಎಂದು ಹೇಳಿದೆ. ಹಾಗಾಗಿ ಇದು ಕಾನೂನಿನ ಅಡಿಯಲ್ಲಿ ಇಲ್ಲ. ದೇಶದ ೧೪೦ ಕೋಟಿ ಜನರು ಒಂದು ಅಪ್ಲಿಕೇಷನ್ ಅಳವಡಿಕೆ ಮಾಡಬೇಕಿಲ್ಲ.
ಯಾವುದೋ ಒಂದು ಸೈಬರ್ ವಂಚನೆಯನ್ನು ನಿಗ್ರಹಿಸಲು ಈ ಮಟ್ಟದಲ್ಲಿ ಕ್ರಮಕೈಗೊಳ್ಳುವುದು ಸರಿಯಲ್ಲ. ಇದು ಹೇಗಿದೆ ಎಂದರೆ ಶೀತ ಬಂದರೆ ಮೂಗನ್ನೇ ಕೊಯ್ದರು ಎಂಬ ನಾಣ್ಣುಡಿಯಂತಿದೆ.
ಸಾಮಾಜಿಕ ಜಾಲತಾಣ ಬಳಸಲೂ ಭಯಪಡುವ ವಾತಾವರಣ : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೇಲೂ ಸರ್ಕಾರ ನಿಗಾ ವಹಿಸಿರುವುದರಿಂದ ಸರ್ಕಾರ ಏನಾದರೂ ನಮ್ಮ ಮೇಲೆ ಕ್ರಮ ತೆಗೆದುಕೊಳ್ಳಬಹದು ಎಂದು ಜಾಲತಾಣಗಳಲ್ಲಿ ಸಾರ್ವಜನಿಕರು ಮುಕ್ತವಾದ ಅಭಿಪ್ರಾಯವನ್ನು ವ್ಯಕ್ತಪಡಿಸಲು ಭಯಪಡುತ್ತಿದ್ದಾರೆ.
ಹೀಗಿದ್ದಾಗ ನಮ್ಮ ಫೋನ್ ಸಂಪೂರ್ಣ ಸರ್ಕಾರದ ನಿಯಂತ್ರಣದಲ್ಲಿದ್ದರೆ ಏನು ಗತಿ ಎಂದು ಜನರು ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಕರ್ನಾಟಕದ ಎಲ್ಲಾ ಸಂಸದರೂ ಕೂಡ ಇದರ ಬಗ್ಗೆ ಧ್ವನಿ ಎತ್ತಬೇಕು ಎಂದು ವಿನಯ್ ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಈ ಆಪ್‌ನಲ್ಲಿ ನಮ್ಮಲ್ಲಿನ ಮೆಸೇಜ್ ಓದಬಹುದು
ನಮ್ಮ ಮೊಬೈಲ್ ಫೋನ್‌ನ ಎಲ್ಲಾ ಮಾಹಿತಿ ತಿಳಿದುಕೊಳ್ಳಬಹುದು
ನಮ್ಮ ಮೊಬೈಲ್‌ನಲ್ಲಿರುವ ಮಾಹಿತಿ ಹ್ಯಾಕರ್ಸ್‌ಗಳಿಗೆ ಸಿಗುವ ಸಾಧ್ಯತೆಯಿದೆ
ಯಾವುದೋ ಒಂದು ಸೈಬರ್ ವಂಚನೆಯನ್ನು ನಿಗ್ರಹಿಸಲು ಈ ಮಟ್ಟದಲ್ಲಿ ಕ್ರಮ ಕೈಗೊಳ್ಳುವುದು ಸರಿಯಲ್ಲ.





