ಕೀರ್ತಿ
ಇತ್ತೀಚಿನ ದಿನಗಳಲ್ಲಿ ೫೦ ವರ್ಷ ದಾಟುತ್ತಿದ್ದಂತೆ ನಮಗಿನ್ನು ವಯಸ್ಸಾಯಿತು. ದೈಹಿಕ ವಾಗಿ ಶ್ರಮವೆನಿಸುವ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎಂದುಕೊಳ್ಳುವವರಿಗೆಲ್ಲ ಬೆಳವಾಡಿಯ ರುದ್ರೇಶ್ ಮಾದರಿಯಾಗಿದ್ದಾರೆ.
ಸೆಂಟ್ರಿಂಗ್ ಕೆಲಸ ಮಾಡುವ ರುದ್ರೇಶ್ ತಮ್ಮ ಇಳಿವಯಸ್ಸಿನಲ್ಲಿಯೂ ದುಡಿದು ತಿನ್ನುವ ಛಲ ಬಿಟ್ಟಿಲ್ಲ. ವಯಸ್ಸಾಗುತ್ತಿದ್ದರೇನು ದೇಹ ದಲ್ಲಿ ಇನ್ನೂ ಶಕ್ತಿ ಇದೆ ಎನ್ನುವ ಇವರು ನಿತ್ಯ ಸೆಂಟ್ರಿಂಗ್ ಕೆಲಸ ಮಾಡುತ್ತಾ ತಮ್ಮ ಸಂಪಾ ದನೆಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.
ರುದ್ರೇಶ್ ಮೂಲತಃ ತಿ. ನರಸೀಪುರದವರು. ಕೆಲಸದ ನಿಮಿತ್ತ ಅವರು ಮೈಸೂರಿನ ಬೆಳವಾಡಿಗೆ ಬಂದು ನೆಲೆಸಬೇಕಾಯಿತು. ಆರಂಭದಲ್ಲಿ ಕಿರಾಣಿ ಅಂಗಡಿಗಳಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಅವರನ್ನು, ಪರಿಚಿತರೊಬ್ಬರು ಸೆಂಟ್ರಿಂಗ್ ಕೆಲಸಕ್ಕೆಂದು ಕರೆದುಕೊಂಡು ಹೋದರು. ಅಲ್ಲಿಂದ ಅವರು ಸೆಂಟ್ರಿಂಗ್ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಬೆಳಿಗ್ಗೆ ೮ ಗಂಟೆಗೆ ಇವರ ಕೆಲಸ ಆರಂಭವಾದರೆ ಸಂಜೆಯವರೆಗೂ ಸಾಗುತ್ತಲೇ ಇರುತ್ತದೆ. ದಿನಕ್ಕೆ ಏಳು ನೂರು ರೂಪಾಯಿ ಗಳಿಂದ ೮೦೦ ರೂ. ಗಳವರೆಗೂ ಸಂಪಾದಿಸುತ್ತಾರೆ. ವಯಸ್ಸಾಯಿತು, ಇಂತಹ ಶ್ರಮ ದಾಯಕ ಕೆಲಸಗಳನ್ನು ನನ್ನಿಂದ ಮಾಡಲು ಸಾಧ್ಯವಿಲ್ಲ ಎಂದುಕೊಳ್ಳದೆ ದೇಹದಲ್ಲಿ ಶಕ್ತಿ ಇರುವವರೆಗೂ ದುಡಿಯುತ್ತಿರಬೇಕು ಎಂದು ಯಾರಿಗೂ ಹೊರೆಯಾಗದಂತೆ ಬದುಕು ತ್ತಿರುವ ರುದ್ರೇಶ್ ಇಂದು ಯುವಕರಿಗೂ ಮಾದರಿಯಾಗಿದ್ದಾರೆ.
ನಿತ್ಯ ಬೆಳಿಗ್ಗೆ ೬. ೩೦ರ ವೇಳೆ ಬೆಳವಾಡಿಯ ಸಿದ್ಧಪ್ಪಾಜಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿರುವ ಹರಳಿಕಟ್ಟೆಯಲ್ಲಿ ಕುಳಿತುಕೊಳ್ಳುವ ರುದ್ರೇಶ್‌ರಿಗೆ ನಿತ್ಯ ತಮ್ಮನ್ನು ಯಾರಾದರೂ ಕೆಲಸಕ್ಕೆಂದು ಕರೆದುಕೊಂಡು ಹೋಗಬಹುದು ಎಂಬ ನಂಬಿಕೆ ಇದೆ. ಅವರ ನಂಬಿಕೆಯಂತೆ ನಿತ್ಯವೂ ೮ ಗಂಟೆಯ ಒಳಗೇ ಯಾರಾದರೂ ಬಂದು ಕೆಲಸಕ್ಕೆಂದು ಕರೆದುಕೊಂಡು ಹೋಗುತ್ತಾರೆ.
ಇತ್ತೀಚೆಗೆ ಮನೆಕಟ್ಟುವವರಿಗೇನು ಬರವೇ? ನಗರ ಇಷ್ಟು ವಿಶಾಲವಾಗಿದೆ. ಯಾರಾದರೂ ಮನೆ ಕಟ್ಟುತ್ತಲೇ ಇರುತ್ತಾರೆ. ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣವಾಗುತ್ತಲೇ ಇರುತ್ತವೆ. ಕೂಲಿ ಕೆಲಸದವರು ಬೇಕೇ ಬೇಕು. ಹೀಗಾಗಿ ನಮ್ಮನ್ನು ಯಾರಾದರೂ ಕರೆದುಕೊಂಡು ಹೋಗುತ್ತಾರೆ. ಕೆಲಸ ಮುಗಿದ ಬಳಿಕ ಇಲ್ಲಿಗೆ ತಂದು ಬಿಡುತ್ತಾರೆ ಎನ್ನುವ ರುದ್ರೇಶ್ ಅವರಿಗೆ ಕಾಯಕ ಕುರಿತಾದ ಭರವಸೆಯಿದೆ.
ಕಳೆದ ಮೂವತ್ತು ವರ್ಷಗಳಿಂದಲೂ ಸೆಂಟ್ರಿಂಗ್ ಕೆಲಸ ಮಾಡುತ್ತಿರುವ ರುದ್ರೇಶ್ ಎಲ್ಲರ ಮನೆಯ ಮೇಲ್ಚಾವಣಿಗಳನ್ನು ಭದ್ರ ವಾಗಿ ಕಟ್ಟಿಕೊಟ್ಟಿದ್ದಾರೆ. ದಿನದ ಸಂಪಾದನೆ ನಿತ್ಯದ ಖರ್ಚಿಗೆ ಸಾಕಾಗುತ್ತದೆ. ಆದರೆ ಈ ಹಣದಲ್ಲಿ ತಾವೊಂದು ಸ್ವಂತ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಲೇ ಇದೆ. ಆದರೆ ತನ್ನ ದುಡಿಮೆಯಿಂದ ಬದುಕುತ್ತಿದ್ದೇನಲ್ಲಾ ಎಂಬ ಆತ್ಮತೃಪ್ತಿ ಅವರಲ್ಲಿದೆ.
ರುದ್ರೇಶ್ ಬದುಕಿನಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದರೂ ಬದುಕಿನ ಹೋರಾಟದೊಂದಿಗೆ ಎಂದಿಗೂ ರಾಜಿ ಮಾಡಿ ಕೊಳ್ಳದೆ ಬಂದ ಕಷ್ಟಗಳನ್ನೆಲ್ಲ ಸವಾಲಾಗಿ ಸ್ವೀಕ ರಿಸಿ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಅವರ ಬದುಕು ಇತರರಿಗೆ ಮಾದರಿಯಾಗಿದೆ.
ನಿತ್ಯ ಸೆಂಟ್ರಿಂಗ್ ಕೆಲಸ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇದೆ. ದಿನವೂ ೭೦೦-೮೦೦ ರೂ. ಸಂಪಾದನೆಯಾಗುತ್ತದೆ. ಹೇಗೋ ಜೀವನ ಸಾಗುತ್ತಿದೆ. ತೋಳಿನಲ್ಲಿ ಬಲ ಇರುವವರೆಗೂ ದುಡಿಯೋಣ ಎಂದು ದುಡಿಯುತ್ತಿದ್ದೇನೆ. ಮನೆಯವರೆಲ್ಲರೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. –ರುದ್ರೇಶ್