Mysore
28
light rain

Social Media

ಶುಕ್ರವಾರ, 16 ಅಕ್ಟೋಬರ್ 2026
Light
Dark

ನಿನ್ನೆ ರಷ್ಯಾದಲ್ಲಿ ‘ರೂಬಿ ಕ್ಯೂಬ್’, ನಾಳೆ ಟೊರೆಂಟೊದಲ್ಲಿ ‘ಮಹಿಮಾ’

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ 

ರಷ್ಯಾ-ಭಾರತ ಸಂಬಂಧದ ಹಿನ್ನೆಲೆಯಲ್ಲಿ ಚಿತ್ರೋತ್ಸವ ಆಯೋಜನೆ

ಎರಡು ಕನ್ನಡ ಚಿತ್ರಗಳು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣುತ್ತಿರುವ ಸುದ್ದಿ. ನಿನ್ನೆ ಪಿ. ಶೇಷಾದ್ರಿ ನಿರ್ದೇಶನದ ‘ರೂಬಿ ಕ್ಯೂಬ್’ ರಷ್ಯಾದ ಟಾಟರ್ಸ್ತಾನ್ ಗಣರಾಜ್ಯದ ಕಜನ್ ನಗರದಲ್ಲಿ ನಡೆಯುತ್ತಿರುವ ಭಾರತೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತು. ನಾಳೆ ಟೊರೆಂಟೊದಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ, ಅಲ್ಲಿ ಉದ್ಯಮಿಯಾಗಿರುವ ಕಿರಣ್ ಭಾರ್ತೂರ್ ನಿರ್ಮಿಸಿರುವ ‘ಮಹಿಮಾ’ ಪ್ರೀಮಿಯರ್ ಪ್ರದರ್ಶನ ಕಾಣಲಿದೆ. ವಿಶ್ವಾದ್ಯಂತ ಹತ್ತು ಸಾವಿರಕ್ಕೂ ಅಧಿಕ ಚಿತ್ರೋತ್ಸವಗಳು ಈಗ ನಡೆಯುತ್ತಿವೆ.

ಅವುಗಳಲ್ಲಿ ಪ್ರತಿಷ್ಠಿತ ಚಿತ್ರೋತ್ಸವಗಳು ಕೆಲವು. ಬೇರೆಬೇರೆ ಪ್ರದೇಶಗಳಿಗೆ ಸೀಮಿತವಾದ, ಬೇರೆ ಬೇರೆ ದೇಶಗಳಿಗೆ ಸೀಮಿತವಾದ ಉತ್ಸವಗಳಿವೆ. ಬೇರೆ ಬೇರೆ ವಿಷಯ, ವಸ್ತುಗಳನ್ನಾಧರಿಸಿದ ಚಿತ್ರೋತ್ಸವಗಳೂ ಇವೆ. ‘ರೂಬಿ ಕ್ಯೂಬ್’ ಪ್ರದರ್ಶನ ಕಂಡ ಚಿತ್ರೋತ್ಸವವನ್ನು ರಷ್ಯಾ-ಭಾರತ ಸಂಬಂಧದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದೆ. ಈ ಚಿತ್ರೋತ್ಸವವು ಭಾರತೀಯ ಸಿನಿಮಾವನ್ನು ರಷ್ಯಾದ ಪ್ರೇಕ್ಷಕರಿಗೆ ಪರಿಚಯಿಸುವ ಪ್ರಮುಖ ಸಾಂಸ್ಕೃತಿಕ ವೇದಿಕೆಯಾಗಿ ರೂಪುಗೊಳ್ಳುತ್ತಿದೆ.

ಭಾರತೀಯ ಸಿನಿಮಾವನ್ನು ಕೇವಲ ಮನರಂಜನೆಯ ಮಾಧ್ಯಮವಾಗಿ ಮಾತ್ರವಲ್ಲದೆ, ವಿವಿಧ ದೇಶಗಳ ಜನರ ನಡುವೆ ಸಾಂಸ್ಕೃತಿಕ ಸಂವಾದ ಮತ್ತು ಪರಸ್ಪರ ಅರಿವನ್ನು ಬೆಳೆಸುವ ಮಾಧ್ಯಮವಾಗಿ ಪರಿಚಯಿಸುವುದು ಚಿತ್ರೋತ್ಸವದ ಪ್ರಮುಖ ಆಶಯವಾಗಿದೆ. ಭಾರತೀಯ ನಿರ್ದೇಶಕರು, ನಿರ್ಮಾಪಕರು ಮತ್ತು ರಷ್ಯಾದ ಪ್ರೇಕ್ಷಕರ ನಡುವೆ ಸಂವಾದಕ್ಕೆ ಅವಕಾಶ ಕಲ್ಪಿಸುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಚಿತ್ರ ನಿರ್ಮಾಣ ಮತ್ತು ವಿತರಣೆಯ ಕ್ಷೇತ್ರಗಳಲ್ಲಿ ಸಹಕಾರದ ಸಾಧ್ಯತೆಗಳನ್ನು ಅನ್ವೇಷಿಸಲು ಈ ವೇದಿಕೆ ಅವಕಾಶ ಒದಗಿಸಲಿದೆ ಎಂದು ಮೂಲಗಳು ತಿಳಿಸಿವೆ. ಈ ಭಾರತೀಯ ಚಿತ್ರೋತ್ಸವವು ‘ಟೈಮ್: ಟಾಟರ್‌ಸ್ತಾನ್ ಇನಿಷಿಯೇಟಿವ್ ಮ್ಯೂಚಿಯಲ್ ಎಫೆಶಿಯೆನ್ಸಿ’ಎಂಬ ರಷ್ಯಾ-ಭಾರತ ವ್ಯವಹಾರ ವೇದಿಕೆಯ ಅಂಗವಾಗಿ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಕಜಾನ್‌ನಲ್ಲಿ ನಡೆಯಲಿರುವ ಭಾರತೀಯ ಚಿತ್ರೋತ್ಸವವುಭಾರತೀಯ ಸಿನಿಮಾವನ್ನು ರಷ್ಯಾದ ಪ್ರೇಕ್ಷಕರಿಗೆ ಪರಿಚಯಿಸುವುದರ ಜೊತೆಗೆ, ಭಾರತ ಮತ್ತು ರಷ್ಯಾ ನಡುವಿನ ಸಾಂಸ್ಕೃತಿಕ ಸಂಬಂಧಗಳಿಗೆ ಹೊಸ ಸಂವಾದದ ವೇದಿಕೆಯನ್ನು ರೂಪಿಸುವ ಪ್ರಯತ್ನವಾಗಿದೆ. ಕನ್ನಡ ಚಿತ್ರ ‘ರೂಬಿ ಕ್ಯೂಬ್’ ಈ ಚಿತ್ರೋತ್ಸವದ ಭಾಗವಾಗಿರುವುದು ಕನ್ನಡ ಚಿತ್ರರಂಗಕ್ಕೆ ಸಾಂಸ್ಕೃತಿಕ ವಿನಿಮಯದಲ್ಲಿ ಒಂದು ಮಹತ್ವದ ಉಪಸ್ಥಿತಿ ಒದಗಿಸಿದೆ. ಅಲ್ಲಿ ರಷ್ಯನ್ ಉಪಶೀರ್ಷಿಕೆಗಳೊಂದಿಗೆ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ‘ರೂಬಿಕ್ಯೂಬ’ ಚಲನಚಿತ್ರ ಒಂದು ಆಳವಾದ ಭಾವನಾತ್ಮಕ ಕೌಟುಂಬಿಕ ಕಥೆ. ಸಂಬಂಧಗಳ ಸಂಕೀರ್ಣತೆ, ಮುರಿದುಹೋಗಿರುವ ಬಾಂಧವ್ಯಗಳು ಮತ್ತು ಒಪ್ಪಿಕೊಳ್ಳುವಿಕೆಯತ್ತ ಸಾಗುವ ನಿಧಾನ ಪ್ರಯಾಣ ಈ ಚಿತ್ರದ ಕೇಂದ್ರಬಿಂದು. ‘ರೂಬಿಕ್ಸ್ ಕ್ಯೂಬ’ ಎಂಬ ಆಟಿಕೆ ಈ ಕಥೆಯ ರೂಪಕ. ಜೀವನದಂತೆಯೇ ಇದನ್ನು ಸರಿಹೊಂದಿಸಲು ಅಸಾಧ್ಯವೆನಿಸುತ್ತದೆ. ಆದರೆ ತಾಳ್ಮೆ, ಸಹಾನುಭೂತಿ, ನಿರಂತರ ಪ್ರಯತ್ನದಿಂದ ಇದರ ಮುಖಗಳನ್ನು ಜೋಡಿಸಬಹುದು. ಪ್ರಥಮ ಎಸ್. ಅವರ ಕತೆ ಆಧರಿಸಿದ ಈ ಚಿತ್ರದಲ್ಲಿ ದತ್ತಣ್ಣ, ವಿದ್ಯಾಮೂರ್ತಿ, ರಾಧ್ಯಾ, ದೇವ್ ದೇವಯ್ಯ ನಟಿಸಿzರೆ.

ಚಿತ್ರೋತ್ಸವದ ಜೊತೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪಿ. ಶೇಷಾದ್ರಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದಾರೆ. ನಿನ್ನೆ ಕಜಾನ್‌ನ ಸೆಂಟರ್ ಫರ್ ಯೂನಿಕ್ ಮಾಸ್ಟರಿಯಲ್ಲಿ ನಡೆದ ಫಿಲ್ಮಿಂಗ್ ದ ಫೀಚರ್: ಆಪರ್ಚುನಿಟೀಸ್ ಇನ್ ಇಂಡಿಯಾ-ರಷ್ಯಾ ಸಿನೆಮಾ(ಭವಿಷ್ಯದಲ್ಲಿ ಚಲನಚಿತ್ರ : ಭಾರತ ಮತ್ತು ರಷ್ಯಾದಲ್ಲಿ ಅವಕಾಶಗಳು) ಎಂಬ ಅಧಿವೇಶನದಲ್ಲಿ ಅವರು ರಷ್ಯಾ-ಭಾರತ ಸಾಂಸ್ಕೃತಿಕ ಸಹಕಾರದ ಭವಿಷ್ಯ, ಅದರಲ್ಲಿನ ಸವಾಲುಗಳು ಹಾಗೂ ಅವಕಾಶಗಳ ಕುರಿತ ಈ ಅಧಿವೇಶನದಲ್ಲಿ ತಮ್ಮ ಚಿತ್ರರಂಗದ ಅನುಭವವನ್ನು ಹಂಚಿಕೊಂಡಿದ್ದಾರೆ.

ಇನ್ನು ‘ಮಹಿಮಾ’ ವಿಷಯ. ಟೊರೆಂಟೊದಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅದರ ಪ್ರೀಮಿಯರ್ ಪ್ರದರ್ಶನ ನಾಳೆ ಆಗಲಿದೆ. ಕಿರಣ್ ಕನ್ನಡ ಚಿತ್ರರಂಗಕ್ಕೆ ಹೊಸಬರಲ್ಲ. ಕಳೆದ ವರ್ಷ ತೆರೆಕಂಡ ‘ರಾಜು ಜೇಮ್ಸ ಬಾಂಡ್’ ಚಿತ್ರದ ನಿರ್ಮಾಪಕರೂ ಆಗಿರುವ ಕಿರಣ್ ಭಾರ್ತೂರ್, ಡ್ರೀಮ್ಸ ಮೀಡಿಯಾ ಸಂಸ್ಥೆಯ ಮೂಲಕ ಇದುವರೆಗೂ ೫೦ಕ್ಕೂ ಹೆಚ್ಚು ಕನ್ನಡ ಚಿತ್ರಗಳನ್ನು ಕೆನಡಾದಲ್ಲಿ ವಿತರಣೆ ಮಾಡಿದ್ದಾರೆ. ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಹಾಗೂ ಉದ್ಯಮಿ, ಕೆನಡಾ ನಿವಾಸಿ ನವೀನ್ ಕುಮಾರ್ ರಚನೆ, ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಕೆನಡಾದ ನಡೆದಿರುವುದು ವಿಶೇಷ. ಮೂಲತಃ ದಕ್ಷಿಣ ಕನ್ನಡದವರಾದ, ಕೆನಡಾದ ಹೆಸರಾಂತ ವ್ಲಾಗರ್ ಪ್ರe ಜೈನ್, ‘ಮಹಿಮಾ’ ಪಾತ್ರದಲ್ಲಿ ಕಾಣಿಸಿಕೊಂಡಿzರೆ. ರಘುರಾಮ್ (ಮಾಲ್ಗುಡಿ ಡೇಸ್), ಬಿಯೆಟಾ ನಿಕೋಲ್ ಆಮ್ರೆ, ಕಾವ್ಯಶ್ರೀ, ಪಾಲ್ ಹಾಪ್ಕಿನ್ಸ್, ಮಂಜುಳಾ ರಾಣೆ ತಾರಾಬಳಗದಲ್ಲಿದ್ದಾರೆ. ‘ಮಹಿಮಾ’ ಇದಕ್ಕೂ ಮುನ್ನ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಇತ್ತೀಚೆಗೆ ನಡೆದ ಅಕ್ಕ ಸಮ್ಮೇಳನದಲ್ಲೂ ಪ್ರದರ್ಶನಗೊಂಡಿತ್ತು.

ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಎರಡು ಕನ್ನಡ ಚಿತ್ರಗಳ ಪ್ರದರ್ಶನ ವರ್ತಮಾನದ ಬೆನ್ನಲ್ಲಿ, ಚಿತ್ರೋತ್ಸವಗಳ ಹೆಸರಿನಲ್ಲಿ ನಡೆಯುತ್ತಿರುವ ದಂಧೆಯ ನೆನಪಾಗುತ್ತದೆ. ವಿಶ್ವದಾದ್ಯಂತ ಹತ್ತು ಸಾವಿರಕ್ಕಿಂತ ಹೆಚ್ಚು ಚಿತ್ರೋತ್ಸವಗಳು ನಡೆಯುತ್ತಿದ್ದರೂ ಅವುಗಳ ಪ್ರತಿಶತ ಒಂದೋ ಎರಡೋ ಮಾತ್ರ ಪ್ರತಿಷ್ಠಿತ ಚಿತ್ರೋತ್ಸವಗಳು. ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಚಿತ್ರೋತ್ಸವಗಳು, ಇತರ ಪ್ರತಿಷ್ಠಿತ ಉತ್ಸವಗಳನ್ನು ಹೊರತುಪಡಿಸಿದರೆ ಉಳಿದವು ಬಹಳಷ್ಟು ನಕಲಿ ಚಿತ್ರೋತ್ಸವಗಳು ಎನ್ನಲಾಗುತ್ತಿದೆ. ಅವು ಒಂದು ರೀತಿಯಲ್ಲಿ ಪ್ರಶಸ್ತಿಗಳನ್ನು ಬಿಕರಿಗಿಟ್ಟಿರುವ ಅಂಗಡಿಗಳೇ ಸರಿ ಎನ್ನುವ ಮಾತೂ ಇದೆ. ನಕಲಿ ಚಿತ್ರೋತ್ಸವಗಳ ಕುರಿತು ಹೊಸ ನಿರ್ಮಾಪಕ/ನಿರ್ದೇಶಕರಿಗೆ ಮಾಹಿತಿ ಕಡಿಮೆ ಇರುತ್ತದೆ. ಈಗ ಎಲ್ಲವನ್ನೂ ಜಲತಾಣಗಳ ಮೂಲಕ ಹುಡುಕುವ ಪರಿಪಾಠ. ಇಂತಹ ಎಲ್ಲ ಚಿತ್ರೋತ್ಸವಗಳದ್ದೂ ಜಲತಾಣಗಳಿರುತ್ತವೆ. ಸಾಮಾನ್ಯವಾಗಿ ಯಾವುದೇ ಚಿತ್ರೋತ್ಸವ ಒಂದು ಪ್ರವೇಶ ಶುಲ್ಕ ಕೇಳುತ್ತದೆ. ಆದರೆ ಈ ನಕಲಿ ಚಿತ್ರೋತ್ಸವಗಳೋ ಪ್ರತಿ ವಿಭಾಗಕ್ಕೂ ಪ್ರತ್ಯೇಕ ಶುಲ್ಕ ವಿಧಿಸುತ್ತದೆ. ಚಿತ್ರನಿರ್ಮಾಪಕರಿಗೆ ಆಸೆ ಹುಟ್ಟಿಸಲು ಅವರು, ‘ನಿಮ್ಮ ಸಿನಿಮಾ ಅತ್ಯುತ್ತಮವಾಗಿದೆ. ಇದನ್ನು ಕೇವಲ ‘ಅತ್ಯುತ್ತಮ ಚಿತ್ರ’ ವಿಭಾಗಕ್ಕೆ ಮಾತ್ರವಲ್ಲದೆ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಕಲನ, ಅತ್ಯುತ್ತಮ ನಟ, ಅತ್ಯುತ್ತಮ ಚಿತತ್ರಕಥೆ ವಿಭಾಗಗಳಿಗೂ ಕಳುಹಿಸಿ. ಇದರಿಂದ ನಿಮಗೆ ಪ್ರಶಸ್ತಿ ಗೆಲ್ಲುವ ಅವಕಾಶ ಹೆಚ್ಚುತ್ತದೆ’ ಎಂದು ಸಂದೇಶ ಕಳುಹಿಸುತ್ತಾರೆ.

ನೈಜ ಮತ್ತು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ (ಉದಾಹರಣೆಗೆ ಆಸ್ಕರ್ ಅಥವಾ ಕಾನ್) ಪ್ರಶಸ್ತಿ ವಿಭಾಗಗಳು ಸೀಮಿತವಾಗಿರುತ್ತವೆ. ಆದರೆ ಸಂದೇಹಾಸ್ಪದ ಉತ್ಸವಗಳಲ್ಲಿ ಪ್ರಶಸ್ತಿಗಳದ್ದೇ ಸುರಿಮಳೆ ಇರುತ್ತದೆ. ಇವರು ಕೇವಲ ಮುಖ್ಯ ವಿಭಾಗಗಳನ್ನಷ್ಟೇ ಇಟ್ಟುಕೊಳ್ಳುವುದಿಲ್ಲ. ಬದಲಿಗೆ ಅತ್ಯುತ್ತಮ ವಿದ್ಯಾರ್ಥಿ ಚಿತ್ರ, ಅತ್ಯುತ್ತಮ ಮಹಿಳಾ ನಿರ್ದೇಶಕಿ, ಅತ್ಯುತ್ತಮ ಮೊದಲ ಪ್ರಯತ್ನದ ಸಿನಿಮಾ, ಅತ್ಯುತ್ತಮ ಪೋಸ್ಟರ್, ಅತ್ಯುತ್ತಮ ಟ್ರೈಲರ್, ಅತ್ಯುತ್ತಮ ಹಿನ್ನೆಲೆ ಸಂಗೀತ, … ಹೀಗೆ ೫೦ ರಿಂದ ೧೦೦ಕ್ಕೂ ಹೆಚ್ಚು ವಿಭಾಗಗಳನ್ನು ಸೃಷ್ಟಿಸುತ್ತಾರೆ. ಎಷ್ಟು ಹೆಚ್ಚು ವಿಭಾಗಗಳಿರುತ್ತವೆಯೋ, ಅಷ್ಟು ಹೆಚ್ಚು ಪ್ರವೇಶ ಶುಲ್ಕ ಸಿಗುತ್ತದೆ. ಜೊತೆಗೆ, ಭಾಗವಹಿಸಿದ ಬಹುತೇಕ ಎಲ್ಲರಿಗೂ ಯಾವುದಾದರೂ ಒಂದು ವಿಭಾಗದಲ್ಲಿ ‘ಪ್ರಶಸ್ತಿ’ ಅಥವಾ ‘ಗೌರವಾನ್ವಿತ ಉಖ’ ನೀಡಿ ಖುಷಿ ಪಡಿಸಬಹುದು. ಇದರಿಂದ ಯಾರೂ ಇವರ ಮೇಲೆ ಸಂಶಯ ಪಡುವುದಿಲ್ಲ. ಸಿನಿಮಾ ಉತ್ಸವಗಳು ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಮಾತ್ರ ನಡೆಯುತ್ತವೆ. ಆದರೆ ಈ ಕೆಲವು ನಕಲಿ ಜಲಗಳು ‘ತಿಂಗಳ ಉತ್ಸವ’ ಪರಿಕಲ್ಪನೆಯನ್ನು ತಂದಿವೆ. ಜನವರಿ ಆವೃತ್ತಿ, ಫೆಬ್ರವರಿ ಆವೃತ್ತಿ.. ಎಂದು ವರ್ಷದ ೧೨ ತಿಂಗಳೂ ಇವರು ಸಿನಿಮಾಗಳನ್ನು ಸ್ವೀಕರಿಸುತ್ತಲೇ ಇರುತ್ತಾರೆ. ಪ್ರತಿ ತಿಂಗಳ ಕೊನೆಯಲ್ಲಿ ವಿಜೇತರ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುತ್ತಾರೆ.

ಸಾಮಾನ್ಯವಾಗಿ ಹೊಸ ಚಿತ್ರನಿರ್ಮಾಪಕರು, ಸ್ವತಂತ್ರ ಸಿನಿಮಾ ಮಾಡುವವರು ಮತ್ತು ಕಿರುಚಿತ್ರಗಳ ನಿರ್ದೇಶಕರೇ ಈ ಜಲಗಳ ಮುಖ್ಯ ಗುರಿ. ತಮ್ಮ ಸಿನಿಮಾಗೆ ಅಂತರರಾಷ್ಟ್ರೀಯ ಮಟ್ಟದ ಮಾನ್ಯತೆ ಸಿಗಲಿ ಎಂಬ ನಿರ್ದೇಶಕರ ಆಸೆಯನ್ನು ಇವರು ಬಂಡವಾಳ ಮಾಡಿಕೊಳ್ಳುತ್ತಾರೆ. ಸಿನಿಮಾ ಪ್ರದರ್ಶನ ಮಾಡದಿದ್ದರೂ, ಕೇವಲ ‘ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾ’ ಎಂಬ ಸುಳ್ಳು ಹಣೆಪಟ್ಟಿ ನೀಡಿ ಹಣ ಲೂಟಿ ಮಾಡುತ್ತಾರೆ. ತಮ್ಮ ಚಿತ್ರಗಳನ್ನು ಚಿತ್ರೋತ್ಸವಕ್ಕೆ ಕಳುಹಿಸಿದ ಪ್ರತಿಯೊಬ್ಬರಿಗೂ ವಾಟ್ಸಾಪ್ ಅಥವಾ ಇಮೇಲ್‌ನಲ್ಲಿ ಅದ್ದೂರಿ ಲಾರೆಲ್ಸ (ಲಾರೆಲ್ಸ – ಚಿತ್ರೋತ್ಸವದ ಲೋಗೋ) ಕಳುಹಿಸಿ ಖುಷಿಪಡಿಸುತ್ತಾರೆ. ಸಿನಿಮಾ ಆಯ್ಕೆಯಾದ ನಂತರ ಸರ್ಟಿಫಿಕೆಟ್, ಟ್ರೋಫಿ, ಗಾಲಾ ಡಿನ್ನರ್ ಪಾಸ್ ಅಥವಾ ವಿಮರ್ಶೆ ಬರೆಯಲು ಭಾರಿ ಮೊತ್ತದ ಡಾಲರ್‌ಗಳನ್ನು ಬೇಡಿಕೆ ಇಡುವುದೂ ಇದೆ. ಪ್ರತಿಷ್ಠಿತ ಚಿತ್ರೋತ್ಸವಗಳ ಹೆಸರನ್ನೋ, ಇಲ್ಲವೇ ಲಂಡನ್, ಪ್ಯಾರಿಸ್. ಲಂಡನ್, ರೋಮ, ಹೀಗೆ ಅವುಗಳು ನಡೆಯುವ ಊರಿನ ಹೆಸರನ್ನೋ ಈ ಉತ್ಸವಗಳಿಗೆ ಇಡುತ್ತಾರೆ. ವಿಶ್ವದ ಪ್ರತಿಷ್ಠಿತ ಚಿತ್ರೋತ್ಸವ ಕಾನ್‌ನದು. ಕಾನ್ ಫಿಲಂ ಅವಾರ್ಡ್ಸ್, ಕಾನ್ ವಲ್ಡ ಫಿಲಂ ಫೆಸ್ಟಿವಲ, ಕಾನ್ ಇಂಟರ್‌ನ್ಯಾಶನಲ್ ಫಿಲಂ ಫೆಸ್ಟಿವಲ್, ಕಾನ್ ಸ್ಕ್ರಿಪ್ಟ್ ಅವಾರ್ಡ್.. ಹೀಗೆ ಕಾನ್ ಹೆಸರಿನ ನಕಲಿ ಉತ್ಸವಗಳಿವೆ!

ಇಂತಹ ಚಿತ್ರೋತ್ಸವಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನ ಒಂದೇ ಇರುವುದಿಲ್ಲ. ಹಲವು ಇರುತ್ತವೆ! ಪ್ರಶಸ್ತಿಗಳು ಹತ್ತಾರು! ಹೊಸಬರಿಗೆ, ಅಂತಾರಾಷ್ಟ್ರೀಯ ಎನ್ನುವ ಹೆಸರೊಂದೇ ಸಾಕು, ಈ ಆಕರ್ಷಣೆಗೆ ಬಲಿಯಾಗಿತ್ತಾರೆ. ಹೊಸಬರು ಮಾತ್ರವಲ್ಲ, ಹಳಬರೂ! ನಾಡಿನ ವಿವಿಗಳಲ್ಲಿ ಸಾಧಕರಿಗೆ ಗೌರವ ಡಾಕ್ಟೊರೇಟ್ ಕೊಡುವುದಿದೆ. ಕನ್ನಡ ಚಿತ್ರರಂಗದಲ್ಲಿ ಹಲವು ಸಾಧಕರು ಅದನ್ನು ಪಡೆದಿzರೆ. ಅದರಂತೆಯೇ ಕೆಲವು ವರ್ಚುವಲ್ ವಿವಿಗಳು ಇವನ್ನು ಮಾರುವುದಿದೆ. ಅವುಗಳಿಗೆ ದುಂಬಾಲು ಬೀಳುವವರೂ ಇದ್ದರೆನ್ನಿ. ಕೆಲವು ನಕಲಿ ಚಿತ್ರೋತ್ಸವಗಳ ಬಗ್ಗೆ ಆಸಕ್ತರು ಈ ಕೊಂಡಿಯಲ್ಲಿ ನೋಡಬಹುದು –  – https://usercontent.one/wp/www. submittingtofilmfestivals.com/wp-content/ uploads/2025/04/Dubious-Film-List-151224. pdf?media=1740581752 ಇಂತಹ ಚಿತ್ರೋತ್ಸವಗಳಿಂದ ದೂರವಿರುವುದು ಲೇಸಲ್ಲವೇ?

” ಸಿನಿಮಾ ಉತ್ಸವಗಳು ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಮಾತ್ರ ನಡೆಯುತ್ತವೆ. ಆದರೆ ಈ ಕೆಲವು ನಕಲಿ ಜಲಗಳು ‘ತಿಂಗಳ ಉತ್ಸವ’ ಪರಿಕಲ್ಪನೆಯನ್ನು ತಂದಿವೆ. ಜನವರಿ ಆವೃತ್ತಿ, ಫೆಬ್ರವರಿ ಆವೃತ್ತಿ ಎಂದು ವರ್ಷದ ೧೨ ತಿಂಗಳೂ ಇವರು ಸಿನಿಮಾಗಳನ್ನು ಸ್ವೀಕರಿಸುತ್ತಲೇ ಇರುತ್ತಾರೆ. ಪ್ರತಿ ತಿಂಗಳ ಕೊನೆಯಲ್ಲಿ ವಿಜೇತರ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುತ್ತಾರೆ.”

 

 

Tags:
error: Content is protected !!