Mysore
22
broken clouds

Social Media

ಸೋಮವಾರ, 26 ಜನವರಿ 2026
Light
Dark

ಕಾಂತಾರ ಕಾರಣ ರಿಷಭ್-ಅಮಿತಾಭ್ ಮಾತುಕತೆ: ನಡುವೆ ರಾಜ್ – ದಂತಕಥೆ 

ಕಳೆದ ಶುಕ್ರವಾರ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮ ಮಾಮೂಲಿಗಿಂತ ಭಿನ್ನ. ವಿಶೇಷ ಕಾರ್ಯಕ್ರಮ. ವರ್ಚಸ್ವೀ ವ್ಯಕ್ತಿಗಳು, ಜನಪ್ರಿಯ ಮಂದಿಯ ಮುಂದೆ ಅಮಿತಾಭ್. ಗಳಿಸುವ ಮೊತ್ತ ಅವರ ದತ್ತಿಗೆ ಇಲ್ಲವೇ ಸಾರ್ವಜನಿಕ ಸೇವೆಗೆ. ಮೊನ್ನೆ ಅಮಿತಾಭ್ ಮುಂದೆ ರಿಷಭ್ ಶೆಟ್ಟಿ ಇದ್ದರು. ಕಾರ್ಯಕ್ರಮದಲ್ಲಿ ಹೊಂಬಾಳೆಯ ಚಲುವೇ ಗೌಡರ ಉಪಸ್ಥಿತಿ ಇತ್ತು.

ಆರಂಭದಲ್ಲಿಯೇ ರಿಷಭ್ ತಮ್ಮ ದತ್ತಿಯ ಬಗ್ಗೆ ಹೇಳಿದರು. ರಿಷಭ್ ಫೌಂಡೇಶನ್ ಅವರ ದತ್ತಿ. ಅದು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದು ಅದಕ್ಕೆ ಬೇಕಾದ ಸೌಲಭ್ಯಗಳನ್ನು ಕೊಡುವ ಕೆಲಸ ಮಾಡುತ್ತದೆ. ಜೊತೆಗೆ ಭೂತ ನರ್ತಕರ ಕ್ಷೇಮಾಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ನೆರವಾಗುತ್ತದೆ. ಮೊನ್ನೆ ರಿಷಭ್ ಗೆದ್ದ ಮೊತ್ತ ರೂ. ೧೨.೫ ಲಕ್ಷ.

ರಿಷಭ್ ವಿಶೇಷ ಅತಿಥಿ. ಅದಕ್ಕೆ ಕಾರಣ ‘ಕಾಂತಾರ’. ದೇಶವಿದೇಶಗಳಲ್ಲಿ ಜನಮನ ಸೂರೆಗೊಳ್ಳುತ್ತಿರುವ ‘ಕಾತಾರ: ಒಂದು ದಂತಕಥೆ ಅಧ್ಯಾಯ ೧’ ಹೊಂಬಾಳೆ ಸಂಸ್ಥೆ ನಿರ್ಮಿಸಿ, ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಚಿತ್ರ. ಅದರ ಜನಮನ್ನಣೆ ರಿಷಭ್ ಅವರನ್ನು ಅಮಿತಾಭ್‌ರ ಮುಂದೆ ಕೂರಿಸಲು ಕಾರಣವಾಗಿತ್ತು.

ಹಿಂದೊಮ್ಮೆ ಅಮಿತಾಭ್‌ರನ್ನು ಭೇಟಿಯಾಗಲು ಅವರ ಮನೆಯ ಬಳಿ ರಿಷಭ್ ಹೋಗಿದ್ದರಂತೆ. ಭೇಟಿಯಾಗಲು ಸಾಧ್ಯವಾಗದೆ ಮರಳಿದ ಪ್ರಸಂಗವನ್ನು ಅವರೇ ಹೇಳಿದರು. ಅದು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಕೊಡುಗೆ: ರಾಮಣ್ಣ ರೈ’ ನಂತರದ ದಿನಗಳು. ಭಾರತೀಯ ಭಾಷೆಗಳು ಈ ದಿನಗಳಲ್ಲಿ ಎದುರಿಸುತ್ತಿರುವ ಸಮಸ್ಯೆಯನ್ನು ಹೇಳಿದ ಆ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡುವ ಯೋಚನೆ ರಿಷಭ್ ಅವರಿಗಿತ್ತಂತೆ. ಅದರಲ್ಲಿ ಅನಂತನಾಗ್ ನಿರ್ವಹಿಸಿದ ಪಾತ್ರಕ್ಕೆ ಅಮಿತಾಭ್ ಸೂಕ್ತ ಎಂದು ಅವರ ಭೇಟಿಗೆ ಬಂದಿದ್ದರಂತೆ. ಅವರನ್ನು ಭೇಟಿಯಾಗಲು ಆಗದೆ ಜಯಾ ಬಚ್ಚನ್ ಅವರನ್ನು ನೋಡಿ ಬಂದ ಸಂಗತಿಯನ್ನು ನೆನಪಿಸಿಕೊಂಡರು ರಿಷಭ್. ಅದೇ ರಿಷಭ್ ಆಹ್ವಾನಿತರಾಗಿ ಅಮಿತಾಭ್ ಮುಂದೆ ಕುಳಿತಿದ್ದರು. ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ!

ಅವರಿಬ್ಬರ ಮಾತುಕತೆಯ ನಡುವೆ ರಿಷಭ್ ಕೋರಿಕೆಯೊಂದನ್ನು ಮುಂದಿಟ್ಟರು. ಅದು ರಾಜಕುಮಾರ್ ಮತ್ತು ಅಮಿತಾಭ್ ನಡುವಿನ ಒಂದು ನೆನಪಿನ ಮೆಲುಕು. ಅದನ್ನು ಕೇಳಲು ಅವರದೇ ಆದ ಕಾರಣವನ್ನೂ ಹೇಳಿದರು. ಅವರು ಬೆಳ್ಳಿತೆರೆಯ ಹತ್ತಿರ ಬರುವ ವೇಳೆ ರಾಜ್ ಕಾಲವಾಗಿ ಐದು ವರ್ಷಗಳು ಕಳೆದಿತ್ತು. ಅವರ ಅಭಿನಯದ ಚಿತ್ರಗಳನ್ನು ನೋಡಿ, ಅದನ್ನೇ ಸ್ಛೂರ್ತಿಯಾಗಿಸಿದ್ದ ರಿಷಭ್‌ಗೆ ಅಮಿತಾಭ್‌ರಂತಹ ಮಹಾನ್ ಕಲಾವಿದರೂ ಸ್ಛೂರ್ತಿ. ತಾವು ಮಾತನಾಡಲಾಗದ ರಾಜ್ ಮತ್ತು ಈಗ ತಮ್ಮೆದುರು ಇರುವ, ಮಾತನಾಡುತ್ತಿರುವ ಅಮಿತಾಭ್ ನಡುವಿನ ನೆನಪಿನ ಬುತ್ತಿ ಬಿಚ್ಚಲು ಕೋರಿದರು ರಿಷಭ್, ‘ರಾಜಕುಮಾರ್ ಕರ್ನಾಟಕದ ಮಂದಿಯ ಪಾಲಿಗೆ ದೇವರು. ಅದೊಂದು ಮಹಾನ್ ವ್ಯಕ್ತಿತ್ವ. ಜನಪ್ರಿಯ ವ್ಯಕ್ತಿ ಆದರೂ ತೀರಾ ಸರಳ ವ್ಯಕ್ತಿ ಅವರು. ಅವರ ದಿನಗಳಲ್ಲಿ ಸದಾ ನಾವು ಪರಸ್ಪರ ಸಂಪರ್ಕದಲ್ಲಿ ಇರುತ್ತಿದ್ದೆವು. ಅವರ ಮಕ್ಕಳ ಜೊತೆ ಈಗಲೂ ಸಂಪರ್ಕದಲ್ಲಿದ್ದೇನೆ. ಅವರೆಲ್ಲ ಈಗ ಮಹಾನ್ ಕಲಾವಿದರಾಗಿ ಬೆಳೆದಿದ್ದಾರೆ’ ಎಂದು ರಾಜ್ ಗುಣಗಾನ ಮಾಡಿದರು. ಮಾತ್ರವಲ್ಲ ತಮಗಾಗಿ ರಾಜ್ ಅವರು ಪ್ರಾರ್ಥಿಸಿದ ವಿಷಯವನ್ನು ನೆನಪಿಸಿಕೊಂಡರು.

ಇದನ್ನು ಓದಿ: ಬಡರೋಗಿಗಳ ನೆರವಿಗಾಗಿ ಬಿರಿಯಾನಿ ಚಾಲೆಂಜ್‌

ಅದು ಅವರು ನಟಿಸುತ್ತಿದ್ದ ‘ಕೂಲಿ’ಚಿತ್ರದ ಚಿತ್ರೀಕರಣದ ವೇಳೆ ನಡೆದ ಅಪಘಾತದ ಸಂದರ್ಭದ್ದು. ೧೯೮೨ರ ಜುಲೈ ೨೬. ಬೆಂಗಳೂರಿನಲ್ಲಿ ಈ ಚಿತ್ರದಸಾಹಸ ದೃಶ್ಯ ಚಿತ್ರೀಕರಣ. ನಟ ಪುನೀತ್ ಇಸ್ಸಾರ್ ಎದುರಾಳಿ. ಆತನ ಹೊಡೆತಕ್ಕೆ ಅಲ್ಲಿದ್ದ ಮೇಜಿನ ಮೇಲೆ ಬೀಳಬೇಕು. ತಪ್ಪಿ ಮೇಜಿನ ಮೂಲೆಗೆ ಬಿದ್ದರು. ಹೊಟ್ಟೆಗೆ ಬಿದ್ದ ಏಟು ಮಾರಣಾಂತಿಕವಾಗಿತ್ತು. ತೀವ್ರತರ ಆಂತರಿಕ ಗಾಯಗಳಾಗಿದ್ದವು. ಕೆಲಕ್ಷಣ ಅವರು ’clinically dead’ ಆಗಿದ್ದರು ಎಂದು ವರದಿಯಾಗಿತ್ತು.

ದೇಶದ ಉದ್ದಗಲಕ್ಕೂ ಅಭಿಮಾನಿಗಳು, ಆತ್ಮೀಯರು, ಹಿತೈಷಿಗಳು ಅವರ ಆರೋಗ್ಯಕ್ಕಾಗಿ ಹರಕೆ ಹೊತ್ತರು, ಪ್ರಾರ್ಥಿಸಿದರು. ಅಮೆರಿಕಕ್ಕೆ ಹೊರಟಿದ್ದ ರಾಜೀವ್ ಗಾಂಧಿ, ಗೆಳೆಯನ ಅಪಘಾತದ ಸುದ್ದಿ ಕೇಳಿ ಪ್ರಯಾಣ ಮೊಟಕುಗೊಳಿಸಿ ಬಂದರು. ರಾಜಕುಮಾರ್ ಅವರು ಈ ವೇಳೆ ಮಂತ್ರಾಲಯಕ್ಕೆ ತೆರಳಿ ಅಲ್ಲಿ ಉರುಳು ಸೇವೆ ಮಾಡಿ ತಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಪ್ರಸಂಗವನ್ನು ರಿಷಭ್ ಮುಂದೆ ಪ್ರಸ್ತಾಪಿಸಿದರು ಅಮಿತಾಭ್. ಇಬ್ಬರೂ ಕ್ಷಣಕಾಲ ಭಾವುಕರಾದರು.

‘ಕೂಲಿ’ ಚಿತ್ರದ ಆ ಘಟನೆಯ ಕೆಲವು ವರ್ಷಗಳ ನಂತರ ಸ್ವತಃ ಅವರೇ ತಮ್ಮ ಅನಾರೋಗ್ಯದ ಕುರಿತಂತೆ ಹೇಳಿಕೊಂಡಿದ್ದಾರೆ. ನಾನು ಕ್ಷಯ(ಟಿಬಿ)ದಿಂದ ಬದುಕಿ ಉಳಿದವನು, ಹೆಪಟೈಟ್ ಬಿಯಿಂದ ಪಾರಾದವನು ಎಂದು ಬಹಿರಂಗವಾಗಿ ಹೇಳಲು ಅಭ್ಯಂತರವಿಲ್ಲ. ಅಪಘಾತದ ನಂತರ ಚಿಕಿತ್ಸೆಯ ವೇಳೆ ನೀಡಿದ ರಕ್ತದ ಒಂದು ಬಾಟಲಿ ಸೋಂಕು ತಗಲಿದ್ದಾಗಿತ್ತು. ಅದು ನನ್ನ ೭೫%ರಷ್ಟು ಯಕೃತ್ತನ್ನು ತಿಂದಿತ್ತು. ನಾನೀಗ ೨೫% ಯಕೃತ್ತಿನೊಂದಿಗೆ ಬದುಕುತ್ತಿದ್ದೇನೆ ಎನ್ನುವುದು ಅಪಘಾತ ಕಳೆದು ೨೦ ವರ್ಷಗಳ ನಂತರ ತಿಳಿಯಿತು ಎಂದು, ತಾವು ರಾಯಭಾರಿಯಾಗಿದ್ದ ಔಷಧ ಸಂಸ್ಥೆಯೊಂದರ ಪ್ರಚಾರದ ವೇಳೆ ಅವರು ಹೇಳುತ್ತಾ ಸಾಧ್ಯವಾದಷ್ಟು ಬೇಗ ರೋಗನಿರ್ಣಯ ಮಾಡಿಕೊಳ್ಳಲು ಹೇಳಿದ್ದು ವರದಿಯಾಗಿತ್ತು.

ರಾಜಕುಮಾರ್ ತಮಗಾಗಿ ಉರುಳು ಸೇವೆ ಮಾಡಿದ ಪ್ರಸಂಗವನ್ನು ಅವರು ಪ್ರಸ್ತಾಪಿಸಿದರೇನೋ ಹೌದು. ಆದರೆ ಅದಕ್ಕೂ ಎರಡು ಮೂರು ತಿಂಗಳ ಹಿಂದೆ ಅವರು ರಾಜಕುಮಾರ್ ಅವರನ್ನು ಬೆಂಗಳೂರು ಅರಮನೆಯಲ್ಲಿ ಭೇಟಿಯಾದ ಪ್ರಸಂಗವೊಂದು ನಡೆದಿತ್ತು. ಅದು ಅವರ ‘ನಮಕ್ ಹಲಾಲ್’ ಚಿತ್ರದ ಬಿಡುಗಡೆಯ ದಿನಗಳ ಬೆಳವಣಿಗೆ. ಹಿಂದಿ ಚಿತ್ರರಂಗದ ವ್ಯವಹಾರಗಳ ವಿವರ ತಿಳಿಸುವ ‘ಟ್ರೇಡ್ ಗೈಡ್’ ಪತ್ರಿಕೆಯಲ್ಲಿ ರಾಜ್ ಕುರಿತಂತೆ ಪ್ರಕಟವಾದ ಪುಟ್ಟ ಟಿಪ್ಪಣಿ ಕಾರಣ.

ಗೋಕಾಕ್ ಚಳವಳಿಯ ಬಿಸಿಯ ದಿನಗಳವು. ಕನ್ನಡ ಪಾರಮ್ಯಕ್ಕಾಗಿ, ಗೋಕಾಕ್ ವರದಿ ಅನುಷ್ಠಾನಕ್ಕೆ ಬರಬೇಕು ಎಂದು ಒತ್ತಾಯಿಸಿ ರಾಜ್ಯಾದ್ಯಂತ ರಾಜ್ ಸಂಚರಿಸಿದ ನಂತರದ ಬೆಳವಣಿಗೆ. ಅವರ ಅಭಿನಯದ ‘ಹಾಲುಜೇನು’ ಚಿತ್ರದ ಬಿಡುಗಡೆಯ ಸಿದ್ಧತೆ ನಡೆದಿತ್ತು. ಕೆಂಪೇಗೌಡ ರಸ್ತೆಯ ಪ್ರಮುಖ ಚಿತ್ರಮಂದಿರಗಳಲ್ಲಿ ಒಂದಾದ ಸಂತೋಷದಲ್ಲಿ ಚಿತ್ರ ಬಿಡುಗಡೆ ಎಂದು ಪ್ರಕಟವಾಗಿತ್ತು. ಅಲ್ಲೇ ‘ನಮಕ್ ಹಲಾಲ್’ ಚಿತ್ರ ಬಿಡುಗಡೆ ಮಾಡಬೇಕು ಎನ್ನುವುದು ಅದರ ಮಾಲೀಕರ ಯೋಚನೆ ಇತ್ತು ಎನ್ನುವುದು ಮುಂದಿನ ದಿನಗಳ ಬೆಳವಣಿಗಳ ನಂತರ ತಿಳಿದು ಬಂದ ವಿಷಯ.

ಸಾಮಾನ್ಯವಾಗಿ ರಾಜ್ ಅಭಿನಯದ ಚಿತ್ರಗಳ ಬಿಡುಗಡೆಗೆ ಐದಾರು ದಿನಗಳ ಮೊದಲೇ ಮುಂಗಡ ಬುಕ್ಕಿಂಗ್ ಆರಂಭವಾಗುತ್ತಿತ್ತು. ಆದರೆ ‘ಹಾಲುಜೇನು’ ಚಿತ್ರದ ಮುಂಗಡ ಟಿಕೆಟ್ ನೀಡಲು ಮಾಲೀಕರು ಮೀನಮೇಷ ಎಣಿಸತೊಡಗಿದರು. ‘ನಮಕ್ ಹಲಾಲ್’ ಚಿತ್ರದ ಬಿಡುಗಡೆಗೆ ತಮ್ಮ ಚಿತ್ರಮಂದಿರ ಕಾದಿರಿಸುವ ಯೋಚನೆ ಇದಕ್ಕೆ ಕಾರಣ ಎನ್ನುವ ಸುದ್ದಿ ಬರುತ್ತಿದಂತೆ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರೂ ಸೆಟೆದು ನಿಂತರು. ಅದೇ ತಾನೇ ಸ್ಥಾಪನೆಯಾಗಿದ್ದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವೂ ಇದನ್ನು ಗಂಭೀರವಾಗಿ ಪರಿಗಣಿಸಿತು. ಅಭಿಮಾನಿಗಳ ಒತ್ತಡವೂ ಅಲ್ಲಿತ್ತು. ಗತ್ಯಂತರವಿಲ್ಲದೆ ‘ಹಾಲುಜೇನು’ ಚಿತ್ರವನ್ನು ಆ ಚಿತ್ರಮಂದಿರದಲ್ಲಿ ಪ್ರದರ್ಶಿಸಿದರು. ಅಲ್ಲಿ ಅದು ರಜತೋತ್ಸವವನ್ನೂ ಕಂಡಿತು. ‘ನಮಕ್ ಹಲಾಲ್’ ಬದಲು ‘ಹಾಲು ಜೇನು’ ಚಿತ್ರವನ್ನು ಹಾಕಿದ ಮುಂದಿನ ವಾರ ‘ಟ್ರೇಡ್ ಗೈಡ್’ ನಲ್ಲಿ ಪುಟ್ಟ ಟಿಪ್ಪಣಿ ಒಂದು ಪ್ರಕಟವಾಯಿತು.

ಇದನ್ನು ಓದಿ: ವರ್ಷದಲ್ಲಿ ಮೂರನೇ ಬಾರಿಗೆ ಕೆಆರ್‌ಎಸ್‌ ಭರ್ತಿ

‘ರಾಜಕುಮಾರ್’ ‘ಮಿನಿ ಹಿಟ್ಲರ್’ ನಂತೆ ವರ್ತಿಸುತ್ತಿದ್ದಾರೆ ಎಂದು, ಗೋಕಾಕ್ ಚಳವಳಿ, ಕನ್ನಡ ಪಾರಮ್ಯಗಳ ಹಿನ್ನೆಲೆಯಲ್ಲಿ ಹೇಳಿತ್ತು. ‘ಟ್ರೇಡ್ ಗೈಡ್’ ಪತ್ರಿಕೆಗೆ ಅಮಿತಾಭ್ ಬಳಗದ ನಿಕಟ ಸಂಬಂಧ ಇದೆ ಎನ್ನುವ ಮಾತೂ ಇತ್ತು. ಆಗ ಅತ್ಯಂತ ಜನಪ್ರಿಯವಾಗಿದ್ದ ಕನ್ನಡ ಸಿನಿಮಾ ವಾರ ಪತ್ರಿಕೆ ‘ಚಿತ್ರದೀಪ’ ಅದು ಈ ಮಿನಿ ಹಿಟ್ಲರ್ ಟಿಪ್ಪಣಿಯನ್ನು ಅತಿ ಗಂಭೀರವಾಗಿ ತೆಗೆದುಕೊಂಡು, ಪ್ರಮುಖ ಸುದ್ದಿಯಾಗಿ ಪ್ರಕಟಿಸಿತು.

‘ಚಿತ್ರದೀಪ’ದ ಆ ವರದಿಯಿಂದ ಹಿಂದಿ ಚಿತ್ರರಂಗವನ್ನು ತಲ್ಲಣಗೊಳಿಸುವ ಬೆಳವಣಿಗೆಗಳಾದವು. ಮೊದಲು ‘ನಮಕ್ ಹಲಾಲ್’ ಚಿತ್ರ ಪ್ರದರ್ಶನ ಆಗುವಚಿತ್ರಮಂದಿರಗಳಿಗೆ ಅಭಿಮಾನಿಗಳ ದಾಳಿ. ಆ ಚಿತ್ರವನ್ನು ಚಿತ್ರಮಂದಿರಗಳಿಂದ ತೆಗೆದು ಹಾಕಿದ್ದಷ್ಟೇ ಅಲ್ಲದೆ, ಯಾವ ಹಿಂದಿ ಚಿತ್ರಗಳೂ ಕರ್ನಾಟಕದಲ್ಲಿ ಬಿಡುಗಡೆ ಕೂಡದು ಎನ್ನುವವರೆಗೆ ಚಳವಳಿ ನಡೆಯಿತು. ಮೊದಲೇ ಹೇಳಿದಂತೆ ಗೋಕಾಕ್ ಚಳವಳಿಯ ಕಾವು ಇನ್ನೂ ಕಡಿಮೆ ಆಗಿರಲಿಲ್ಲ. ಕರ್ನಾಟಕದ ಈ ಬೆಳವಣಿಗೆ ಕಂಡ ಅಮಿತಾಭ್ ಬಚ್ಚನ್ ತಮ್ಮ ನಿರ್ಮಾಪಕ ಮಿತ್ರ, ಕನ್ನಡಿಗ ರಾಮನಾಥನ್ (ನಟ ಶಿವರಾಂ ಸೋದರ) ಮೂಲಕ ಈ ಸಮಸ್ಯೆಗೆ ಪರಿಹಾರ ಕಾಣುವ ಪ್ರಯತ್ನ ಮಾಡಿದರು. ಅದರಂತೆ ‘ಚಿತ್ರದೀಪ’ ಪತ್ರಿಕೆಯ ಸಂಪಾದಕರಾದ ಆರ್.ನರಸಿಂಹ ಅವರನ್ನು ರಾಮನಾಥನ್ ಭೇಟಿಯಾದರು. ಅವರ ಮಧ್ಯಸ್ಥಿಕೆಯಲ್ಲಿ ರಾಜಕುಮಾರ್ ಮತ್ತು ಅಮಿತಾಭ್ ಭೇಟಿಯ ಬಗ್ಗೆ ಹೇಳಿದರು. ಆದರೆ ಅವರು, ‘ನನ್ನ ಅಗತ್ಯವೇನೂ ಇಲ್ಲ, ಅವರಿಬ್ಬರು ಭೇಟಿಯಾಗುವ ವೇಳೆ ನಮ್ಮ ಛಾಯಾಗ್ರಾಹಕರು ಬರುತ್ತಾರೆ.

ಅದು ಸಾಕು. ಮುಂದಿನ ವಾರ ಆ ಚಿತ್ರ ಪ್ರಕಟಿಸುತ್ತೇವೆ’ ಎಂದರು. ಅಲ್ಲಿ ಆಗ ಇದ್ದವರು ಹೆಸರಾಂತ ಪತ್ರಿಕಾ ಛಾಯಾಗ್ರಾಹಕ ಜಿ.ಎಸ್.ನಾರಾಯಣ ಸ್ವಾಮಿ. ರಾಜಕುಮಾರ್ ಅವರಿಗೂ ನಿಕಟವಾಗಿದ್ದವರು. ರಾಜ್ ಮತ್ತು ಅವರ ಕುಟುಂಬ ಯೋಗಾಸನದ ಚಿತ್ರಗಳನ್ನು ತೆಗೆದವರು ಅವರೊಬ್ಬರೇ. ರಾಮನಾಥನ್ ಮಧ್ಯಸ್ಥಿಕೆಯಲ್ಲಿ ರಾಜ್ ಮತ್ತು ಅಮಿತಾಭ್ ಬಚ್ಚನ್ ಭೇಟಿ ಅರಮನೆಯಲ್ಲಿ ಆಯಿತು. ಪಾರ್ವತಮ್ಮ ರಾಜಕುಮಾರ್, ಅವರ ಸೋದರ ಚಿನ್ನೇಗೌಡರು, ಪುಟಾಣಿ ಪುನೀತ್ (ಆಗ ಲೋಹಿತ್) ಜೊತೆಗಿದ್ದರು. ಅದೊಂದು ಅಪೂರ್ವ ಮಿಲನ. ಮುಂದಿನ ವಾರ ‘ಚಿತ್ರದೀಪ’ ಅವರಿಬ್ಬರ ಭೇಟಿಯ ಚಿತ್ರ ಪ್ರಕಟಿಸಿತು.

ಅದಾದ ಕೆಲವೇ ದಿನಗಳಲ್ಲಿ ‘ಕೂಲಿ’ ಅಪಘಾತ. ರಾಜ್ ಅವರು ಮಂತ್ರಾಲಯದಲ್ಲಿ ಉರುಳುಸೇವೆಯ ಮೂಲಕ ಅಮಿತಾಭ್ ಆರೋಗ್ಯಕ್ಕಾಗಿ ರಾಯರನ್ನು ಬೇಡಿದ ಪ್ರಸಂಗ. ಅದನ್ನು ಅಮಿತಾಭ್ ಅವರೇ ಹೇಳಿದರು. ‘ಮಿನಿ ಹಿಟ್ಲರ್’ ಪ್ರಸಂಗದ ವೇಳೆ ಈ ಅಂಕಣಕಾರ ‘ಚಿತ್ರದೀಪ’ ದಲ್ಲಿ ಕೆಲಸಮಾಡುತ್ತಿದ್ದ. ಈ ಬೆಳವಣಿಗೆಯ ಹಿಂದೆ ಕೂಡ

” ‘ರಾಜಕುಮಾರ್ ಕರ್ನಾಟಕದ ಮಂದಿಯ ಪಾಲಿಗೆ ದೇವರು. ಅದೊಂದು ಮಹಾನ್ ವ್ಯಕ್ತಿತ್ವ. ಜನಪ್ರಿಯ ವ್ಯಕ್ತಿ ಆದರೂ ತೀರಾ ಸರಳ ವ್ಯಕ್ತಿ ಅವರು. ಅವರ ದಿನಗಳಲ್ಲಿ ಸದಾ ನಾವು ಪರಸ್ಪರ ಸಂಪರ್ಕದಲ್ಲಿ ಇರುತ್ತಿದ್ದೆವು. ಅವರ ಮಕ್ಕಳ ಜೊತೆ ಈಗಲೂ ಸಂಪರ್ಕದಲ್ಲಿದ್ದೇನೆ. ಅವರೆಲ್ಲ ಈಗ ಮಹಾನ್ ಕಲಾವಿದರಾಗಿ ಬೆಳೆದಿದ್ದಾರೆ’ ಎಂದು ಅಮಿತಾಭ್ ಅವರು ರಾಜ್‌ಕುಮಾರ್ ಅವರ ಗುಣಗಾನ ಮಾಡಿದರು.”

ವೈಡ್‌ ಆಂಗಲ್‌
ಬಾ.ನಾ.ಸುಬ್ರಹ್ಮಣ್ಯ 

 

Tags:
error: Content is protected !!