ಸರಕುಗಳು ಮತ್ತು ಸೇವೆಗಳ ತೆರಿಗೆ (Goods And Services Tax) ಸುಧಾರಣೆಗಳ ಅಂಗವಾಗಿ ಇದೇ ತಿಂಗಳ ೨೨ರಿಂದ ಜಾರಿಯಾಗುವಂತೆ ತೆರಿಗೆ ದರಗಳನ್ನು ನಾಲ್ಕು ಪ್ರಮುಖ ದರಗಳಿಂದ (ಶೇ.೦೫, ಶೇ.೧೨, ಶೇ.೧೮ ಮತ್ತು ಶೇ.೨೮) ಎರಡೇ ದರಗಳಿಗೆ (ಶೇ.೦೫ ಮತ್ತು ಶೇ.೧೮) ಇಳಿಸಿರುವುದು ಈಗ ಇತಿಹಾಸ. ಅಂದರೆ ಶೇ.೨೮ರಲ್ಲಿದ್ದ ಸರಕು ಸೇವೆಗಳಲ್ಲಿ ಮಾದಕ ಪೇಯಗಳಂತಹ ‘ಪಾಪಿ ಪದಾರ್ಥಗಳು ಮತ್ತು ಅತಿ ಐಷಾರಾಮಿ ವಸ್ತು, ಸೇವೆಗಳಾದ ಕೆಲವು ಮಾತ್ರ ಶೇ.೪೦ರ ದರಕ್ಕೆ ಹೋಗಿದ್ದು, ಉಳಿದಂತೆ ಎಲ್ಲವೂ ಶೇ.೧೮ ಮತ್ತು ಶೇ.೦೫ ದರಗಳಿಗೆ ಇಳಿಸಲ್ಪಟ್ಟಿವೆ. ಇದು ಗ್ರಾಹಕರಿಗೆ ಅನುಕೂಲವಲ್ಲವೇ ?
ಅದೇ ರೀತಿ ಶೇ. ೧೨ರ ದರದಲ್ಲಿದ್ದವುಗಳಲ್ಲಿ ಕೆಲವನ್ನು ಮಾತ್ರ ಶೇ.೧೮ರ ದರಕ್ಕೆ ಸೇರಿಸಲಾಗಿದ್ದು, ಉಳಿದಂತೆ ಸಾಮಾನ್ಯ ಜನರು ಬಳಸುವ ದೊಡ್ಡ ಸಂಖ್ಯೆಯ ಸರಕು ಮತ್ತು ಸೇವೆಗಳನ್ನು ಶೇ.೦೫ರ ದರಕ್ಕೆ ಸೇರಿಸಲಾಗಿದೆ. ಅಷ್ಟರ ಮಟ್ಟಿಗೆ ಸಂಬಂಧಪಟ್ಟ ಸರಕು, ಸೇವೆಗಳು ಅಗ್ಗವಾಗಬಹುದು.
ಜಿಎಸ್‌ಟಿ ಕೌನ್ಸಿಲ್ಲಿನ ಈ ಸುಧಾರಣಾ ಕ್ರಮಗಳಿಂದಾಗಿ ಈ ದೇಶದ ಗ್ರಾಹಕರಿಗೆ(ಜನರಿಗೆ) ೨.೫ ಲಕ್ಷ ಕೋಟಿ ರೂಪಾಯಿಗಳ ಉಳಿತಾಯವಾಗಲಿದೆ ಎಂದು ಅಧಿಕೃತ ಅಂದಾಜುಗಳು ಹೇಳುತ್ತವೆ. ಇದನ್ನೇ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಒತ್ತು ಕೊಟ್ಟು ಹೇಳುತ್ತಿದ್ದಾರೆ. ಅಷ್ಟೂ ಹಣ ಜನರ ಕೈಯಲ್ಲಿ ಉಳಿಯುವುದರಿಂದ ಅದನ್ನು ಹೆಚ್ಚು ಕೊಳ್ಳುವಿಕೆಗೆ ಬಳಸಬಹುದು. ಸ್ವಲ್ಪ ಭಾಗವನ್ನು ಉಳಿತಾಯ ಮಾಡಿ ಉತ್ಪಾದಕ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬಹುದು. ಇವೆಲ್ಲವುಗಳಿಂದ ಆರ್ಥಿಕ ಬೆಳವಣಿಗೆ ತೀವ್ರಗೊಳ್ಳುವ ಸಾಧ್ಯತೆಗಳಿವೆ ಎಂಬುದು ಸರ್ಕಾರದ ಬಲವಾದ ವಾದ.
ಇದೇ -ಬ್ರವರಿಯಲ್ಲಿ ಮಂಡಿಸಲ್ಪಟ್ಟ ಕೇಂದ್ರ ಮುಂಗಡ ಪತ್ರದಲ್ಲಿ ಹೇಳಿರುವಂತೆ ೧೨ ಲಕ್ಷ ರೂ. ವರೆಗೆ ಆದಾಯವಿರುವವರಿಗೆ ಇನ್ನು ಮುಂದೆ ಆದಾಯ ತೆರಿಗೆ ಇರುವುದಿಲ್ಲ ಎನ್ನುವ ಅಂಶವನ್ನು ಈಗ ನೆನಪಿಸುತ್ತ ಸರ್ಕಾರದ ಉಪಭೋಗಕ (Consumption)ವೆಚ್ಚಗಳು ಗಣನೀಯವಾಗಿ ಹೆಚ್ಚಾಗಲಿವೆ ಎಂದು ಸರ್ಕಾರ ಆಶಾವಾದವನ್ನು ಮುಂದಿಟ್ಟಿದೆ. ಒಟ್ಟಿನಲ್ಲಿ ಅಭಿವೃದ್ಧಿ ಚಟುವಟಿಕೆಗಳು ಹೆಚ್ಚಾಗಲಿವೆ ಎಂಬುದು ಬಲವಾದ ನಂಬಿಕೆ.
ಇದನ್ನು ಓದಿ: ಒಡನಾಡಿ ಸ್ಟ್ಯಾನ್ಲಿ ಮನೆಯಲ್ಲಿ ಸರ್ವಧರ್ಮಗಳ ಬೊಂಬೆ ಪ್ರದರ್ಶನ
ಹಬ್ಬಗಳ ಹಂಗಾಮು, ಖರೀದಿಗಳು: ಜಿ.ಎಸ್.ಟಿ. ಭಾರವನ್ನು ಕಡಿಮೆ ಮಾಡುವ ನಿರ್ಧಾರವನ್ನು ತೆಗೆದುಕೊಂಡ ಸಮಯವು ಒಂದು ಅರ್ಥದಲ್ಲಿ ಸೂಕ್ತವಾಗಿದೆ. ದಸರಾ(ದಶಹರಾ) ದೀಪಾವಳಿ ಮತ್ತು ಕ್ರಿಸ್‌ಮಸ್‌ವರೆಗೆ ಎಲ್ಲ ಸಮುದಾಯಗಳ ಒಂದಿಲ್ಲೊಂದು ಹಬ್ಬಗಳು ಈ ಅವಧಿಯಲ್ಲಿ ಇದ್ದೇ ಇರುತ್ತವೆ. ಈ ಹಬ್ಬಗಳಲ್ಲಿ ಜನರು ಹೆಚ್ಚು ಖರೀದಿ ಮಾಡುವುದು ಸ್ವಾಭಾವಿಕ. ವ್ಯಾಪಾರಿಗಳ ಅನುಭವದಂತೆ ಈ ಹಬ್ಬಗಳ ಹಂಗಾಮಿನಲ್ಲಿ ಶೇ.೧೦ರಿಂದ ಶೇ.೧೫ರಷ್ಟಾದರೂ ಮಾರಾಟ ಹೆಚ್ಚಾಗುತ್ತದೆ. ಇದೇ ಸಮಯದಲ್ಲಿ ಸರ್ಕಾರದ ನಿರ್ಧಾರದಿಂದ ತೆರಿಗೆ ಭಾರ ಇನ್ನಷ್ಟು ಕಡಿಮೆಯಾದರೆ (ನಿತ್ಯೋಪಯೋಗಿ ಉತ್ಪನ್ನಗಳು ಮತ್ತು ಸೇವೆಗಳ ಮೇಲೆ ) ಕೌಟುಂಬಿಕ ಖರೀದಿಗಳು ನಿರೀಕ್ಷೆಗಿಂತ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುವುದಿಲ್ಲವೇ?
ಗ್ರಾಹಕರ ಅಥವಾ ಉಪಭೋಗಕರ ಸ್ವಭಾವವೆಂದರೆ ಒಮ್ಮೆ ಯಾವುದೇ ವಸ್ತು ಅಥವಾ ಸೇವೆಯನ್ನು ಖರೀದಿಸಿ ಉಪಯೋಗಿಸಿದ ಮೇಲೆ ಅದನ್ನು ಪಡೆಯುವ ಆಸಕ್ತಿ ಮುಂದುವರಿಯುತ್ತದೆ. ಮನಸ್ಸು ಖರೀದಿಸಲು ಪ್ರೇರೇಪಿಸುತ್ತಿರುತ್ತದೆ. ವಿಶೇಷ ಸಂದರ್ಭಗಳಲ್ಲಿ ಹೆಚ್ಚಾದ ಮಾರಾಟವು ಮುಂದೆಯೂ ಅದೇ ಪ್ರಮಾಣದಲ್ಲಿ ಮುಂದುವರಿಯದಿದ್ದರೂ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಹೆಚ್ಚಳ ಮುಂದುವರಿಯುತ್ತದೆ. ಹಬ್ಬಗಳಲ್ಲಿ ಹೆಚ್ಚಾದ ಮಾರಾಟವು ಕಡಿಮೆ ಪ್ರಮಾಣದಲ್ಲಿಯಾದರೂ ಹೆಚ್ಚಳ ಮುಂದುವರಿಯಲೇ ಬೇಕು.
ಇದರೊಂದಿಗೆ ಜಿ.ಎಸ್.ಟಿ. ಕಡಿತದಿಂದ ಅಗ್ಗವಾದ ಸರಕುಗಳು ಮತ್ತು ಸೇವೆಗಳು ಗ್ರಾಹಕರನ್ನು ಆಕರ್ಷಿಸುತ್ತವೆ. ಅವುಗಳ ಮಾರಾಟ ಹೆಚ್ಚಾದಂತೆ ಉತ್ಪಾದನೆ ಹೆಚ್ಚಿಸುವುದಕ್ಕೂ ಉತ್ತೇಜನ ದೊರೆಯುತ್ತದೆ. ಪ್ಯಾಕೇಜಿಂಗ್ ಮತ್ತು ಸಾಗಾಣಿಕೆ ಮುಂತಾದ ಪೂರಕ ಚಟುವಟಿಕೆಗಳೂ ಹೆಚ್ಚಾಗಲೇ ಬೇಕಲ್ಲವೇ? ಇನ್ನಷ್ಟು ಸೇವೆ ಮತ್ತು ಸರಕುಗಳು ಈ ಪ್ರಕ್ರಿಯೆಯಲ್ಲಿ ಬೇಕಾಗುತ್ತವೆ. ಈ ಆರ್ಥಿಕ ಸರಪಳಿಯಲ್ಲಿ ಚಟುವಟಿಕೆಗಳು ಹೆಚ್ಚಾದಂತೆ ಉದ್ಯೋಗಾವಕಾಶಗಳೂ ಹೊಸದಾಗಿ ಸೃಷ್ಟಿಯಾಗುತ್ತವೆ. ಇದನ್ನು ಆರ್ಥಿಕ ಚಕ್ರವೆಂದೂ ಕರೆಯಬಹುದು. ಈ ಚಕ್ರದ ತಿರುಗುವ ವೇಗ ಹೆಚ್ಚಾದಂತೆ ಆರ್ಥಿಕ ಬೆಳವಣಿಗೆಯೊಂದಿಗೆ ಸಮಗ್ರ ಅಭಿವೃದ್ಧಿಯಾಗುತ್ತದೆ.
ರಾಜ್ಯ ಸರ್ಕಾರಗಳ ಹಣಕಾಸು:
ಮೊದಲು ದಾಖಲಿಸಿದಂತೆ ಜನರಿಗೆ ಉಳಿತಾಯವಾಗುವ ೨.೫ ಲಕ್ಷ ಕೋಟಿ ರೂ.ಗಳು ಸರ್ಕಾರಗಳಿಗೆ ತೆರಿಗೆ ನಷ್ಟವೂ ಆಗಿರುತ್ತದೆ. ಇದರಲ್ಲಿ ಅರ್ಧ ಕೇಂದ್ರಕ್ಕೂ ಮತ್ತು ಉಳಿದರ್ಧ ರಾಜ್ಯಗಳಿಗೂ ಸೇರಿರುತ್ತದೆ. ತೆರಿಗೆ ಕಡಿತದ ಪರಿಣಾಮವಾಗಿ ಉಂಟಾಗುವ ಆರ್ಥಿಕ ಚಟುವಟಿಕೆಗಳ ವಿಸ್ತರಣೆಯಿಂದ ಸೃಷ್ಟಿಯಾಗುವ ಹೆಚ್ಚುವರಿ ತೆರಿಗೆ ಆದಾಯದಿಂದ ಸರಿಪಡಿಸಿಕೊಳ್ಳಬಹುದು ಎಂದು ಅಭಿಪ್ರಾಯಪಡಬಹುದು. ಇದನ್ನು ಕೇಂದ್ರ ಸರ್ಕಾರದ ವಿಷಯದಲ್ಲಿ ಒಂದು ಮಟ್ಟದಲ್ಲಿ ಒಪ್ಪಬಹುದಾದರೂ ರಾಜ್ಯ ಸರ್ಕಾರಗಳ ವಿಷಯದಲ್ಲಿ ಒಪ್ಪುವುದು ಕಷ್ಟವಾಗುತ್ತದೆ. ಕೇಂದ್ರ ಸರ್ಕಾರ ವಿಶೇಷ ಅನುದಾನ ರೂಪದಲ್ಲಿ ಪರಿಹಾರವನ್ನು ಕೊಡಬೇಕಾಗಬಹುದು.
ಇದನ್ನು ಓದಿ: 21 ಸುತ್ತು ಕುಶಾಲುತೋಪು ಸಿಡಿಸಲು ಫಿರಂಗಿ ಪಡೆ ಸಜ್ಜು
ಬಹುತೇಕ ರಾಜ್ಯ ಸರ್ಕಾರಗಳು ಹಣಕಾಸಿನ ತೊಂದರೆಯನ್ನು ಅನುಭವಿಸುತ್ತಿವೆ. ಎಲ್ಲ ರಾಜ್ಯಗಳ ಒಟ್ಟು ಸಾಲದ ಮೊತ್ತವು ೨೦೧೩-೧೪ ಮತ್ತು ೨೦೨೨-೨೩ರ ನಡುವೆ ೩.೩೯ ಪಟ್ಟು ಹೆಚ್ಚಾಗಿದೆ ಎಂದು ಅಧಿಕೃತ ವರದಿಗಳು ಹೇಳುತ್ತವೆ. ರಾಜ್ಯಗಳ ವಾರ್ಷಿಕ ಒಟ್ಟಾದಾಯಗಳ (Gross State domestic products ಜಿ.ಎಸ್.ಡಿ.ಪಿ.ಗಳು) ಒಟ್ಟು ಮೊತ್ತದ ಪ್ರತಿಶತದ ಪ್ರಮಾಣವನ್ನು ಗಮನಿಸಿದರೆ ಸಾಲದ ಪ್ರಮಾಣವು ಇದೇ ಅವಧಿಯಲ್ಲಿ ಶೇ. ೧೬.೬೬ರಿಂದ ಶೇ.೨೨.೯೬ಕ್ಕೆ ಹೋಗಿದೆ. ಇದೇ ಅಭಿಪ್ರಾಯವನ್ನು ರಿಸರ್ವ್ ಬ್ಯಾಂಕಿನ ಇತ್ತೀಚಿನ ‘ರಾಜ್ಯ ಸರ್ಕಾರಗಳ ಹಣಕಾಸು’ ವರದಿಯು ಪುಷ್ಟೀಕರಿಸುತ್ತದೆ. ಸಾಲ ಹೆಚ್ಚಾಗಿದೆ ಎಂದರೆ ವಾರ್ಷಿಕ ಬಡ್ಡಿ ಸಂದಾಯದ ಭಾರವೂ ಹೆಚ್ಚಾಗುತ್ತದೆ ಎಂದರ್ಥ. ಪರಿಣಾಮವಾಗಿ ವಾರ್ಷಿಕ ಬಜೆಟ್ ವೆಚ್ಚಗಳಲ್ಲಿ ಬಡ್ಡಿ ಸಂದಾಯದ ಪಾಲು ಹೆಚ್ಚಾಗಿ ಉಳಿದ ವೆಚ್ಚಗಳಿಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಕಡಿಮೆ ಸಂಪನ್ಮೂಲ ಉಳಿಯುತ್ತದೆ ಎಂದರ್ಥವಲ್ಲವೇ?
ಇಂಥ ಕಠಿಣ ಸ್ಥಿತಿಯಲ್ಲಿ ಜಿ.ಎಸ್.ಟಿ. ಪಾಲಿನ ಕೊರತೆಯೂ ಸೇರಿಕೊಂಡರೆ ಪರಿಸ್ಥಿತಿ ಇನ್ನೂ ಹದಗೆಡುವ ಸಾಧ್ಯತೆ ಹೆಚ್ಚಾಗಿದೆ. ರಾಜ್ಯಗಳ ಹಣಕಾಸು ಸ್ಥಿತಿ ಸುಧಾರಿಸುವವರೆಗಾದರೂ ಕೇಂದ್ರ ಸರ್ಕಾರ ಜಿ.ಎಸ್.ಟಿ. ಸಂಗ್ರಹದ ಕಡಿತದಲ್ಲಿ ರಾಜ್ಯಗಳ ಪಾಲಿನ ನಷ್ಟಕ್ಕೆ ಪರ್ಯಾಯ ಅನುದಾನ ಕೊಡಬೇಕಾಗುವುದು ಅನಿವಾರ್ಯವಾಗುತ್ತದೆ.
” ಬಹುತೇಕ ರಾಜ್ಯ ಸರ್ಕಾರಗಳು ಹಣಕಾಸಿನ ತೊಂದರೆಯನ್ನು ಅನುಭವಿಸುತ್ತಿವೆ. ಎಲ್ಲ ರಾಜ್ಯಗಳ ಒಟ್ಟು ಸಾಲದ ಮೊತ್ತವು ೨೦೧೩-೧೪ ಮತ್ತು ೨೦೨೨-೨೩ರ ನಡುವೆ ೩.೩೯ ಪಟ್ಟು ಹೆಚ್ಚಾಗಿದೆ ಎಂದು ಅಧಿಕೃತ ವರದಿಗಳು ಹೇಳುತ್ತವೆ.”
-ಪ್ರೊ.ಆರ್.ಎಂ.ಚಿಂತಾಮಣಿ



