ಜ್ಞಾಪಕ ಶಕ್ತಿಯ ಹೆಚ್ಚಳದ ಮಾರ್ಗ ಅಧ್ಯಯನಶೀಲತೆ
ಇತ್ತೀಚೆಗೆ ನಾನು ರೈಲಿನಲ್ಲಿ ಪ್ರಯಾಣಿಸುವಾಗ ನಡೆದ ೨ ಘಟನೆಗಳು ಈಗಿನ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿವೆ.
ಘಟನೆ ೧: ನಾನು ಪ್ರಯಾಣ ಮಾಡುತ್ತಿದ್ದ ರೈಲಿನಲ್ಲಿ ಚಹ ಮಾರುತ್ತಿದ್ದ ಹುಡುಗನೊಬ್ಬ ನನಗೆ ಹೇಳಿದ- ಮೇಡಮ್ ಇಡೀ ರೈಲು ಸುತ್ತಾಡಿ ಬಂದೆ. ಎಲ್ಲರೂ ತಮ್ಮ ಮೊಬೈಲ್‌ಗಳಲ್ಲಿಯೇ ಮುಳುಗಿ ಹೋಗಿದ್ದಾರೆ. ಆದರೆ ಪುಸ್ತಕ ಹಿಡಿದು ಓದುತ್ತಿರುವವರು ನೀವು ಮಾತ್ರ ಎಂದು.
ಘಟನೆ ೨: ಹಲವು ವರ್ಷಗಳಿಂದ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಅಲ್ಲಿಗೆ ಪುಸ್ತಕಗಳನ್ನು ಹಿಡಿದು ಮಾರಲು ಒಬ್ಬ ವ್ಯಕ್ತಿ ಬರುತ್ತಿದ್ದರು. ರೈಲಿನಲ್ಲಿ ಹೊತ್ತು ಕಳೆಯಲು ಜನರು ಅವುಗಳನ್ನು ಖರೀದಿಸಿ ಓದುತ್ತಿದ್ದರು. ಅದೇ ವ್ಯಕ್ತಿ ಈಗ ಹಲವು ಸಮಯದಿಂದ ತಿಂಡಿ ತಿನಿಸುಗಳನ್ನು ಮಾರುತ್ತಿದ್ದಾರೆ. ಪುಸ್ತಕಗಳ ಕುರಿತಾಗಿ ಕೇಳಿದಾಗ ಅವರೆಂದರು- ಈಗ ಹೊತ್ತು ಕಳೆಯಲು ಎಲ್ಲರ ಕೈಯಲ್ಲೂ ಮೊಬೈಲುಗಳಿವೆ, ಪುಸ್ತಕಗಳನ್ನು ಯಾರೂ ಕೊಳ್ಳುವುದಿಲ್ಲವೆಂದು.
ಈ ಎರಡೂ ಸಂದರ್ಭಗಳಲ್ಲಿಯೂ ನನಗನ್ನಿಸಿದ್ದು ಹಾಗಾದರೆ ಓದುವ ಹವ್ಯಾಸ ನಶಿಸುತ್ತಿದೆಯೇ?! ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಒಬ್ಬರು ಓದಲು ಪೇಪರ್ ಖರೀದಿಸಿದರೆ, ಇಡೀ ಬೋಗಿಯಲ್ಲಿ ಇದ್ದವರೆಲ್ಲರೂ ಅದನ್ನು ಎರವಲು ಪಡೆದು ಓದುತ್ತಿದ್ದ ದಿನಗಳು ಈಗ ನೆನಪು ಮಾತ್ರವೇ! ಸ್ನೇಹಿತರ ಹುಟ್ಟುಹಬ್ಬಗಳಿಗೆ ಅಥವಾ ಮುಂತಾದ ಶುಭ ಸಂದರ್ಭಗಳಲ್ಲಿ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವುದು ಈಗ ಔಟ್ ಆಫ್ ಫ್ಯಾಶನ್ ಆಗಿದೆಯೇ?… ಹೀಗೆ ಯೋಚಿಸುತ್ತಿರುವಾಗಲೇ ನಡೆದ ಇನ್ನೂ ಕೆಲವು ಘಟನೆಗಳು, ನನ್ನ ಮುಂದೆ ಓದುವ ಹವ್ಯಾಸ ಮತ್ತು ಪುಸ್ತಕ ಪ್ರೀತಿಯನ್ನು ಇನ್ನೂ ಜೀವಂತವಾಗಿರಿಸಲು ಶ್ರಮಿಸುತ್ತಿರುವ ಪುಸ್ತಕ ಪ್ರೇಮಿಗಳ ಇನ್ನೊಂದು ಆಯಾಮವನ್ನೂ ತೆರೆದಿಟ್ಟಿತು.
ಇದನ್ನು ಓದಿ: ದ್ವೇಷ ಭಾಷೆ ಎಂಬ ನುಣುಚು ಹಾದಿ
ಘಟನೆ ೧: ವೈದ್ಯರಿಂದ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಹೋಗುವಾಗ ರೋಗಿಗಳು ಪ್ರೀತಿಪೂರ್ವಕವಾಗಿ ಹಣ್ಣು – ಹಂಪಲು ಅಥವಾ ಸಿಹಿ ತಿನಿಸುಗಳನ್ನು ಕೊಡುವುದು ಸಾಮಾನ್ಯ. ಆದರೆ ಇತ್ತೀಚೆಗೆ ಪತ್ರಕರ್ತರೂ- ಬರಹಗಾರರೂ ಆದ ನನ್ನ ರೋಗಿಯೊಬ್ಬರು ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದು ನನಗೆ ಅತ್ಯಾನಂದವನ್ನು ಉಂಟುಮಾಡಿತ್ತು.
ಘಟನೆ ೨: ಹಾಸನದಿಂದ ಶ್ರವಣಬೆಳಗೊಳಕ್ಕೆ ಪ್ರಯಾಣಿಸುತ್ತಿದ್ದೆ. ಮಾರ್ಗ ಮಧ್ಯದಲ್ಲಿ ಹೋಟೆಲ್ ಒಂದರಲ್ಲಿ ಉಪಾಹಾರಕ್ಕೆ ನಿಲ್ಲಿಸಿದೆವು. ಆ ಹೋಟೆಲ್‌ನ ಬಿಲ್ಲು ಪಾವತಿಸಲು ಮುಂದಾದಾಗ, ನನಗೆ ಆಶ್ಚರ್ಯ ಮತ್ತು ಆನಂದ ಎರಡೂ ಉಂಟಾಗಿದ್ದು- ಅಲ್ಲಿ ಇಡಲಾಗಿದ್ದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವನ್ನು ಕಂಡು. ಮತ್ತಿನ್ನೇನು ಬೇಕು? ಉಪಾಹಾರವಾದ ಮೇಲೆ ಹೀರಿದ ಬಿಸಿ ಕಾಫಿಯಿಂದ ದೊರೆತ ಆಹ್ಲಾದ ಇಮ್ಮಡಿಯಾದಂತೆ ನನಗೆ ಭಾಸವಾಯಿತು. ಆ ಮಾಲೀಕರಿಗೊಂದು ಮೆಚ್ಚುಗೆಯ ಮಾತನ್ನು ಆಡಿ ಪುಸ್ತಕವೊಂದನ್ನು ಕೊಂಡುಕೊಂಡು ಅವರ ಹೊಸ ರೀತಿಯ ಪ್ರಯತ್ನಕ್ಕೆ ಪ್ರೋತ್ಸಾಹಿಸಿದ್ದೂ ಆಯಿತು.
ಓದುವ ಹವ್ಯಾಸದ ಹಲವು ಪ್ರಯೋಜನಗಳು
ಹೆಚ್ಚುವ ಕ್ರಿಯಾಶೀಲತೆ: ಈಗಿನ ಮೊಬೈಲು, ದೂರದರ್ಶನ ಅಥವಾ ಇಂಟರ್‌ನೆಟ್‌ಗಳಂತೆ ಪುಸ್ತಕಗಳು ದೃಶ್ಯ ಮಾಧ್ಯಮವನ್ನು ನಮ್ಮ ಮುಂದೆ ತೆರೆದಿಡುವುದಿಲ್ಲ. ಪುಸ್ತಕವನ್ನು ಓದುತ್ತಾ ಹೋದಂತೆ ನಮ್ಮ ಕಲ್ಪನೆ ಗರಿ ಬಿಚ್ಚಿಕೊಳ್ಳುತ್ತದೆ. ತನ್ನದೇ ರೀತಿಯಲ್ಲಿ ಆ ಪುಸ್ತಕದಲ್ಲಿನ ಚಿತ್ರಣ ನಮ್ಮ ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಪುಸ್ತಕದಲ್ಲಿನ ಪಾತ್ರಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತಾ ಹೋಗುತ್ತವೆ. ಆ ಕಲ್ಪನಾ ಲೋಕದಲ್ಲಿ ವಿಹರಿಸುವುದೇ ಒಂದು ಚಂದ. ಅದಕ್ಕೆ ನಾವು ನೋಡುವ ಯಾವುದೇ ದೃಶ್ಯಮಾಧ್ಯಮ ಸರಿಸಾಟಿಯಾಗಲಾರದು. ಹಾಗಾಗಿಯೇ ನೀವು ಯಾವುದಾದರೂ ಪುಸ್ತಕ ಆಧಾರಿತ ಸಿನೆಮಾವನ್ನು ನೋಡಿದ ಓದುಗರನ್ನು ಕೇಳಿ ನೋಡಿ. ಪುಸ್ತಕ ಓದುವಾಗಿನ ಆನಂದ ಚಲನಚಿತ್ರದಿಂದ ದೊರೆಯಲಿಲ್ಲ ಎಂದೇ ಹೇಳುತ್ತಾರೆ. ಇದೇ ತರಹದ ಅನುಭವ ನಮ್ಮ ಬಾಲ್ಯವನ್ನು ನೆನೆಸಿಕೊಂಡಾಗಲೂ ಆಗುತ್ತದೆ. ಹಿರಿಯರು ಹೇಳುತ್ತಿದ್ದ ಕತೆಗಳನ್ನು ಕೇಳಿ ಅಥವಾ ಪುಸ್ತಕದಲ್ಲಿ ಓದಿ ಅವುಗಳನ್ನು ಊಹಿಸಿಕೊಂಡು ಪಡುತ್ತಿದ್ದ ಆನಂದಕ್ಕೆ ಪಾರವೇ ಇರಲಿಲ್ಲ. ಆ ರೀತಿಯ ಪುಳಕವನ್ನು ಈಗಿನ ಯ್ಯೂಟೂಬ್‌ನಲ್ಲಿ ಕಥೆಗಳನ್ನು ನೋಡುವ ಮಕ್ಕಳು ಅನುಭವಿಸಲು ಸಾಧ್ಯವೇ ಇಲ್ಲ.
ಇದನ್ನು ಓದಿ: ಮಹಾಪಂಚ್ ಕಾರ್ಟೂನ್
ಬೆಳೆಯುವ ಭಾಷಾಜ್ಞಾನ: ಕೇವಲ ಒಬ್ಬ ಓದುಗ ಮಾತ್ರ ಒಳ್ಳೆಯ ಬರಹಗಾರನಾಗಬಹುದು. ಏಕೆಂದರೆ ಓದುವಿಕೆಯಿಂದ ಪದಗಳ ಕಣಜ ಎಂದಿಗೂ ತುಂಬಿರುತ್ತದೆ. ಓದುವುದು ಕಡಿಮೆಯಾದಾಗ ಬರೆಯಲೂ ಕೂಡ ಪದ ದಾರಿದ್ರ್ಯ ಕಾಡುವುದನ್ನು ಪ್ರತೀ ಬರಹಗಾರರೂ ಅನುಭವಿಸಿರುತ್ತಾರೆ.
ಪುಸ್ತಕಗಳು ಸ್ನೇಹಿತರಿದ್ದಂತೆ: ಒಂದು ಒಳ್ಳೆಯ ಪುಸ್ತಕ ಒಳ್ಳೆಯ ಸ್ನೇಹಿತನಿದ್ದಂತೆ. ಬದುಕಿನ ಹಲವು ಕಠಿಣ ಸನ್ನಿವೇಶಗಳಲ್ಲಿ ಅದು ಮಾರ್ಗದರ್ಶನ ಒದಗಿಸಬಲ್ಲದು. ಸರಿ ತಪ್ಪುಗಳ ವಿವೇಚನೆ ಒದಗಿಸಿ ಪುಸ್ತಕಗಳು ದಾರಿ ದೀಪವಾಗಬಲ್ಲವು.
ಏಕಾಗ್ರತೆಗೆ ದಾರಿ: ಕಥೆ ಅಥವಾ ಕಾದಂಬರಿ ಅದರಲ್ಲಿಯೂ ಪತ್ತೇದಾರಿ ಕಾದಂಬರಿಯನ್ನು ಓದುವವರನ್ನು ನೋಡಿ, ಆ ಪುಸ್ತಕ ಮುಗಿಯುವವರೆಗೆ ಬಿಡದಂತೆ ಹಿಡಿದು ಓದುತ್ತಿರುತ್ತಾರೆ. ಪುಸ್ತಕಗಳಿಗೆ ಓದುಗರ ಏಕಾಗ್ರತೆಯನ್ನು ತನ್ನಲ್ಲೇ ಹಿಡಿದಿಡುವ ಶಕ್ತಿ ಇದೆ. ಕಡಿಮೆ ಸಮಯದ ರೀಲ್ಸ್ ಮತ್ತು ವಿಡಿಯೋಗಳನ್ನೇ ನಿರಂತರವಾಗಿ ನೋಡಿ, ಕೂತು ಓದುವ ಮತ್ತು ಗ್ರಹಿಸುವ ಏಕಾಗ್ರತೆಯನ್ನೇ ಕಳೆದುಕೊಂಡಿರುವ ಇಂದಿನ ಯುವಪೀಳಿಗೆಯನ್ನು ಬಹುಶಃ ಪುಸ್ತಕ ಓದುವ ಹವ್ಯಾಸ ದಾರಿಗೆ ತರಬಹುದೇನೋ?
ಜ್ಞಾಪಕ ಶಕ್ತಿಯ ಹೆಚ್ಚಳ: ಪರೀಕ್ಷೆಯ ಸಮಯದಲ್ಲಿ ಮಾತ್ರ ಓದಿ, ಉರುಹೊಡೆದು ನಂತರ ಮರೆತುಬಿಡುವ ಇಂದಿನ ವಿದ್ಯಾರ್ಥಿಗಳಿಗೆ ಪಠ್ಯೇತರ ಪುಸ್ತಕಗಳನ್ನು ಆಸಕ್ತಿಯಿಂದ ಓದಿದರೆ ಹೆಚ್ಚಾಗುವ ಜ್ಞಾಪಕ ಶಕ್ತಿಯ ಅರಿವೇ ಇಲ್ಲ. ಬೇಕಾದ ಎಲ್ಲ ವಿಷಯಗಳನ್ನೂ ಯ್ಯೂಟೂಬ್‌ನಲ್ಲಿ ಹುಡುಕಿ, ಮಾಡಿ, ತಕ್ಷಣ ಮರೆತು ಬಿಡುವ ಇಂದಿನ ಕಾಲಕ್ಕೆ ಪುಸ್ತಕಗಳಲ್ಲಿ ತಡಕಾಡಿ, ನಮ್ಮ ವಿವೇಚನೆಯನ್ನೂ ಉಪಯೋಗಿಸಿ ಮಾಡುತ್ತಿದ್ದಾಗ ಉಳಿಯುತ್ತಿದ್ದಷ್ಟು ನೆನಪುಗಳು ಈಗ ಇರುವುದೇ ಇಲ್ಲ. ದೇಶ ಸುತ್ತು ಅಥವಾ ಕೋಶ ಓದು’ – ಎಂಬ ಹಳೆಯ ನಾಣ್ನುಡಿ ಇಂದಿಗೂ ಪ್ರಸ್ತುತ. ಆ ಮಾತಿನಂತೆ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪುಸ್ತಕಗಳನ್ನು ಓದುವ ಹವ್ಯಾಸ ಬಹುಮುಖ್ಯ.
(ಲೇಖಕರು, ಮೈಸೂರಿನ ಮಹಾರಾಜ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಸಹ ಪ್ರಾಧ್ಯಾಪಕರು)
ಸ್ಪೂರ್ತಿಯ ಸೆಲೆ: ಸಾಧಕರ, ಮಹಾನುಭಾವರ ಜೀವನದ ಯಶೋಗಾಥೆಯನ್ನು ಬಣ್ಣಿಸುವ ಹಲವು ಪುಸ್ತಕಗಳು, ಅನೇಕರಿಗೆ ಸ್ಛೂರ್ತಿ ನೀಡುವ ಚಿಲುಮೆಗಳಂತೆ ಭಾಸವಾಗುತ್ತವೆ. ತಮ್ಮ ಸಂಘರ್ಷದ ದಿನಗಳಲ್ಲಿಯೂ ಎದೆಗುಂದದೆ ಮುನ್ನಡೆಯಲು ಇಂತಹ ಪುಸ್ತಕಗಳು ಬಹು ಸಹಕಾರಿ.
–ಡಾ.ಎಸ್.ಎನ್.ಶಿಲ್ಪ





