ಡಿ.ವಿ.ರಾಜಶೇಖರ
ಗುಜರಾತ್‌ನ ಅಹಮದಾಬಾದ್ ನಗರದ ಬಳಿ ಸಂಭವಿಸಿದ ಭೀಕರ ವಿಮಾನ ಅಪಘಾತ ಮತ್ತೆ ವಿಮಾನ ಪ್ರಯಾಣ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ತಂದಿದೆ. ಪ್ರತಿ ಬಾರಿ ವಿಮಾನ ಅಪಘಾತ ಸಂಭವಿಸಿದಾಗಲೆಲ್ಲಾ ಈ ಪ್ರಶ್ನೆ ಎದ್ದಿದೆ. ಆದರೆ ಉತ್ತರ ಮಾತ್ರ ಬದಲಾಗಿಲ್ಲ. ಅಪಘಾತಗಳು ಸಂಭವಿಸಿದರೂ ವಿಮಾನ ಯಾನ ಬಹುಪಾಲು ಸುರಕ್ಷಿತ ಮತ್ತು ಪ್ರಯಾಣದ ಅವಧಿಯನ್ನು ಕಡಿಮೆಮಾಡಿರುವ ಏಕೈಕ ತಂತ್ರಜ್ಞಾನ ವಿಮಾನಪ್ರಯಾಣವೆಂದೇ ಒಮ್ಮತದ ಅಭಿಪ್ರಾಯ ವ್ಯಕ್ತವಾಗುತ್ತಾ ಬಂದಿದೆ. ಇಂಥ ಘಟನೆಗಳು ವಿಮಾನದ ಮೂಲಕ ಪ್ರಯಾಣ ಮಾಡುವವರ ಮೇಲೆ ಯಾವುದೇ ಪರಿಣಾಮವನ್ನೂ ಬೀರಿಲ್ಲ. ಯಾವ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ವಿಮಾನ ಅಪಘಾತಕ್ಕೀಡಾಯಿತೂ ಅದೇ ವಿಮಾನ ನಿಲ್ದಾಣ ಈಗ ಪ್ರಯಾಣಿಕರಿಂದ ಕಿಕ್ಕಿರಿದಿದೆ.
ವಿಮಾನ ಅಪಘಾತಗಳಿಗೆ ಬಹಿರಂಗ ಕಾರಣಗಳಿಗಿಂತ ಆಂತರಿಕ ಕಾರಣಗಳೇ ಹೆಚ್ಚು ಇರುವುದರಿಂದ ತಂತ್ರಜ್ಞಾನವನ್ನು ಮತ್ತಷ್ಟು ಕರಾರು ವಾಕ್ಕಾಗಿ ಪರೀಕ್ಷೆ ಗೆ ಒಡ್ಡುವ ಬಗ್ಗೆ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೂ ಎಷ್ಟೋ ಪ್ರಕರಣಗಳಲ್ಲಿ ಅಪಘಾತಕ್ಕೆ ನಿಜವಾದ ಕಾರಣ ಏನು ಎಂಬುದೇ ಗೊತ್ತಾಗದೆ ಉಳಿದಿದೆ. ಅದರಲ್ಲಿಯೂ ಮುಖ್ಯವಾಗಿ ತಂತ್ರಜ್ಞಾನದಲ್ಲಿ ಉಂಟಾಗಿರಬಹುದಾದ ಸಮಸ್ಯೆಗಳು ಗೊತ್ತಾಗುತ್ತಿಲ್ಲ. ಹೀಗಾಗಿ ಬಹಳ ಕಠಿಣವಾದ ಪರೀಕ್ಷಾ ವಿಧಾನಗಳನ್ನು ಜಾರಿಗೆ ತರಲಾಗಿದೆ. ಆದರೂ ವಿಮಾನ ಅಪಘಾತಗಳು ತಪ್ಪಿಲ್ಲ. ಅದರಲ್ಲಿಯೂ ಮುಖ್ಯವಾಗಿ ೬೭ ಜನರ ಸಾವಿಗೆ ಕಾರಣವಾದ ಅಮೆರಿಕದಲ್ಲಿ ಸಂಭವಿಸಿದ ವಿಮಾನಗಳ ಡಿಕ್ಕಿ, ದಕ್ಷಿಣ ಕೊರಿಯಾದಲ್ಲಿ ೧೭೫ ಪ್ರಯಾಣಿಕರ ಸಾವಿಗೆ ಕಾರಣವಾದ ಅಪಘಾತ ನಿಗೂಢವಾಗಿಯೇ ಉಳಿದಿವೆ. ಅಲಾಸ್ಕಾದಲ್ಲಿ ವಿಮಾನ ಹಾರಾಟದಲ್ಲಿದ್ದಾಗ ಅದರ ಬಾಗಿಲು ಕಳಚಿ ಹೊರಬಂದ ಘಟನೆ ವಿಮಾನ ಅಪಘಾತಗಳ ತನಿಖೆಯ ದಿಕ್ಕನ್ನೇ ಬದಲಾಯಿಸಿದೆ. ವಿಮಾನ ನಿರ್ಮಾಣ ಕಾರ್ಯದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಈ ಪ್ರಕರಣದಲ್ಲಿ ಬಯಲಾಗಿದೆ. ಹೀಗಾಗಿಯೇ ವಿಮಾನಗಳನ್ನು ಹಾರಾಟಕ್ಕೆ ಕಳುಹಿಸುವ ಮೊದಲೇ ಇಡೀ ವಿಮಾನವನ್ನು ಸಂಪೂರ್ಣ ಪರೀಕ್ಷೆಗೆ ಒಳಪಡಿಸುವ ವ್ಯವಸ್ಥೆ ಜಾರಿಗೆ ಈಗ ಪ್ರಯತ್ನ ನಡೆಸಲಾಗುತ್ತಿದೆ.
ಅಪಘಾತಗಳಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಬೋಯಿಂಗ್ ವಿಮಾನ ಸಂಸ್ಥೆ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇದೆ. ಆದರೆ ಆ ಸಂಸ್ಥೆ ಮತ್ತೆ ಮತ್ತೆ ಸಂಕಷ್ಟಕ್ಕೆ ಒಳಗಾಗುತ್ತಿದೆ. ವಿಶ್ವದ ಅತಿದೊಡ್ಡ ಈ ಕಂಪೆನಿ ಅಮೆರಿಕ ಮೂಲದ್ದು. ವಾಣಿಜ್ಯ ಉದ್ದೇಶದ ವಿಮಾನಗಳಲ್ಲದೆ ಯುದ್ಧ ವಿಮಾನಗಳು,ಹೆಲಿಕಾಪ್ಟರ್, ಕ್ಷಿಪಣಿಗಳನ್ನು ತಯಾರಿಸುವ ಕಂಪೆನಿ ಇದು. ಅಹಮದಾಬಾದಿನಲ್ಲಿ ಅಪಘಾತಕ್ಕೆ ಒಳಗಾದ ವಿಮಾನ ಬೋಯಿಂಗ್ ಕಂಪೆನಿಯಲ್ಲಿ ಉತ್ಪಾದನೆಯಾದದ್ದು. ವಿಮಾನ ಕೇವಲ ೧೧ ವರ್ಷಗಳಷ್ಟು ಹಳೆಯದು.
ಅದನ್ನು ಮೂಲೆಗೆ ತಳ್ಳುವಂಥ ತಾಂತ್ರಿಕ ದೋಷಗಳು ಅದರಲ್ಲಿರಲಿಲ್ಲ ಎಂದು ತಂತ್ರಜ್ಞರು ಹೇಳುತ್ತಾರೆ. ಆದರೆ ಅದೇ ವಿಮಾನದಲ್ಲಿ ಆ ಹಿಂದೆ ಪ್ರಯಾಣಿಸಿದ ಪ್ರಯಾಣಿಕರೊಬ್ಬರು ಅದಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಮಾನದಲ್ಲಿ ತಾಂತ್ರಿಕ ದೋಷಗಳಿದ್ದುದು ಮೇಲ್ನೋಟಕ್ಕೇ ಗೊತ್ತಾಗುತ್ತಿತ್ತು ಎಂದು ಆ ಪ್ರಯಾಣಿಕರು ಹೇಳಿದ್ದಾರೆ. ಬೇಡಿಕೆ ಪೂರೈಸುವ ಅವಸರದಲ್ಲಿ ವಿಮಾನಗಳ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸದೆ ಇರುವುದನ್ನು ಶಿಳ್ಳೆಗಾರೊಬ್ಬರು (ವಿಷಲ್ ಬ್ಲೋಯರ್) ಅಮೆರಿಕದಲ್ಲಿ ಬಯಲು ಮಾಡಿರುವುದನ್ನು ಕೆಲವು ಮೂಲಗಳು ಬಹಿರಂಗ ಮಾಡಿವೆ. ಮೇಲಕ್ಕೆ ಹಾರುವ ಸಂದರ್ಭದಲ್ಲಿಯೇ ವಿಮಾನ ಸ್ವಲ್ಪ ದೂರ ಹೋಗಿ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದು ಸ್ಛೋಟಗೊಂಡಿರುವುದನ್ನು ನೋಡಿದರೆ ಬಹುಶಃ ಇಂಜಿನ್ ವೈಫಲ್ಯ ಇರಬಹುದೆಂದು ತಜ್ಞರು ಹೇಳುತ್ತಿದ್ದಾರೆ. ಇದೇನೇ ಇದ್ದರೂ ಬ್ಲಾಕ್ ಬಾಕ್ಸ್ ಸಿಕ್ಕಿದ್ದು ನಿಖರ ಮಾಹಿತಿ ದೊರೆತ ನಂತರವೇ ಸತ್ಯ ಬಯಲಿಗೆ ಬರಲಿದೆ.
ಅಹಮದಾಬಾದ್ ವಿಮಾನ ಅಪಘಾತ ಅಂಥದ್ದೇ ಮತ್ತೊಂದು ಅಪಘಾತವನ್ನು ನೆನಪಿಗೆ ತಂದಿದೆ. ೨೦೧೮ರಲ್ಲಿ ಲಯನ್ ಏರ್-ಟ್ ಮತ್ತು ೨೦೧೯ರಲ್ಲಿ ಇಥಿಯೋಪಿಯನ್ ಏರ್‌ಲೈನ್ಸ್‌ನ ವಿಮಾನಗಳು ನೆಲದಿಂದ ಮೇಲಕ್ಕೆ ಹಾರಿದ ಕ್ಷಣದಲ್ಲಿಯೇ ಸ್ಛೋಟಗೊಂಡಿವೆ. ಸುಮಾರು ೩೦೦ ಜನರ ಸಾವಿಗೆ ಕಾರಣವಾದ ಈ ಅಪಘಾತಗಳ ಬಗ್ಗೆ ನಡೆದ ತನಿಖೆಗಳು ವಿಮಾನದ ಸಾ ವೇರ್‌ನಲ್ಲಿಯೇ ದೋಷಗಳಿದ್ದುದನ್ನು ಬಹಿರಂಗಗೊಳಿಸಿವೆ. ತಾಂತ್ರಿಕ ದೋಷ ಇರುವುದನ್ನು ಕಂಪೆನಿ ಮುಚ್ಚಿಟ್ಟದ್ದನ್ನೂ ತನಿಖೆ ಬಹಿರಂಗಗೊಳಿಸಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೋಯಿಂಗ್ ೭೩೭ ಮಾಕ್ಸ್ ನ ವಿಮಾನಗಳ ಹಾರಾಟವನ್ನು ಜಗತ್ತಿನ ಎಲ್ಲ ಕಡೆ ಸುಮಾರು ೨೦ ತಿಂಗಳು ಸ್ಥಗಿತಗೊಳಿಸಲಾಗಿತ್ತು. ಅಲಾಸ್ಕಾ ಏರ್‌ಲೈನ್ಸ್‌ನ ವಿಮಾನ ಆಕಾಶದಲ್ಲಿದ್ದಾಗಲೇ ಬಾಗಿಲು ತೆರೆದು ಕೊಂಡುದಕ್ಕೆ ನಟ್ಟು -ಬೋಲ್ಟು ಸರಿಯಾಗಿ ಫಿಟ್ ಮಾಡದಿದ್ದುದೇ ಕಾರಣ ಎನ್ನುವುದು ಖಚಿತವಾಗಿದೆ. ಈ ವರದಿಗಳ ಹಿನ್ನೆಲೆಯಲ್ಲಿ ಕಂಪೆನಿಯ ಕಾರ್ಮಿಕ ವರ್ಗ ಅಷ್ಟೇ ಅಲ್ಲ, ಆಡಳಿತ ವರ್ಗದಲ್ಲಿ ಸಾಕಷ್ಟು ಬದಲಾವಣೆ ಯನ್ನು ತರಲಾಗಿದೆ. ಆದರೂ ಅಪಘಾತಗಳು ತಪ್ಪಿಲ್ಲ.
ಅಹಮದಾಬಾದಿನ ಅಪಘಾತ ಇದೀಗ ಬೋಯಿಂಗ್ ಕಂಪೆನಿಯನ್ನು ಪರೀಕ್ಷೆಗೆ ಒಡ್ಡಿದೆ. ಪ್ರಯಾಣಿಕರ ವಿಮಾನಗಳನ್ನು ತಯಾರಿಸುವ ಅತಿ ದೊಡ್ಡ ಕಂಪೆನಿ ಬೋಯಿಂಗ್. ಬೋಯಿಂಗ್ ಬಿಟ್ಟರೆ ಫ್ರಾನ್ಸ್ ಮೂಲದ ಯೂರೋಪ್‌ನ ಹಲವು ದೇಶಗಳ ಸಹಯೋಗ ಪಡೆದು ಸ್ಥಾಪಿಸಿರುವ ವಿಮಾನ ಕಂಪೆನಿ ಏರ್ ಬಸ್. ಎರಡೂ ಕಂಪೆನಿಗಳು ವಿವಿಧ ದೇಶಗಳಲ್ಲಿ ತಮ್ಮ ಫ್ಯಾಕ್ಟರಿಗಳನ್ನು ಸ್ಥಾಪಿಸಿವೆ. ಕಳೆದ ವರ್ಷ ಅಮೆರಿಕದ ಬೋಯಿಂಗ್ ನಿರ್ಮಾಣ ಸ್ಥಾವರದಲ್ಲಿ ಕಾರ್ಮಿಕರು ನಡೆಸಿದ ಮುಷ್ಕರ ಆ ಕಂಪೆನಿಯ ನಿರ್ವಹಣೆಯನ್ನು ಇಕ್ಕಟ್ಟಿಗೆ ಒಳಗುಮಾಡಿದೆ. ಕಂಪೆನಿಯ ನಷ್ಟ ದ್ವಿಗುಣಗೊಂಡಿದೆ. ಕಳೆದ ವರ್ಷಾಂತ್ಯಕ್ಕೆ ಕಂಪೆನಿ ಸುಮಾರು ೩೫ ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ ಎಂದು ಹೇಳಲಾಗಿದೆ. ನಷ್ಟದಿಂದಾಗಿ ಕಂಪೆನಿಯ ವಿಮಾನಗಳ ನಿರ್ಮಾಣ ಕಾರ್ಯವೂ ಕುಸಿದಿದೆ. ನಿಗದಿತ ಅವಧಿಯಲ್ಲಿ ವಿಮಾನಗಳನ್ನು ಪೂರೈಸಲಾಗದೆ ವ್ಯವಹಾರ ಸ್ಥಗಿತಗೊಂಡದ್ದೂ ಇದೆ. ಈ ಬೆಳವಣಿಗೆಯಿಂದ ಏರ್‌ಬಸ್ ಕಂಪೆನಿಯ ವಿಮಾನಗಳಿಗೆ ಬೇಡಿಕೆ ಹೆಚ್ಚಾದರೂ ಅದು ಎಲ್ಲ ಬೇಡಿಕೆಯನ್ನೂ ಪೂರೈಸುವ ಸ್ಥಿತಿಯಲ್ಲಿಲ್ಲ. ಇದೇನೇ ಇದ್ದರೂ ಕಳೆದ ತಿಂಗಳಷ್ಟೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಮಾರು ನೂರು ವಿಮಾನಗಳ ಪೂರೈಕೆಯ ಕಂಟ್ರಾಕ್ಟನ್ನು ಕತಾರ್‌ನಿಂದ ಬೋಯಿಂಗ್ ಕಂಪೆನಿಗೆ ದೊರಕಿಸಿಕೊಟ್ಟಿದ್ದಾರೆ. ಇದೀಗ ಅಹಮದಾಬಾದ್ ಬೋಯಿಂಗ್ ವಿಮಾನ ದುರಂತ ಈ ಒಪ್ಪಂದದ ಮೇಲೂ ಕೆಟ್ಟಪರಿಣಾಮ ಬೀರುವ ಸಾಧ್ಯತೆ ಇದೆ.
ಭಾರತವೂ ಸೇರಿದಂತೆ ವಿಶ್ವದ ಹಲವಾರು ದೇಶಗಳಿಗೆ ವಿಮಾನಗಳುಬೇಕು. ಭಾರತದ ವಿಮಾನಯಾನ ಕಂಪೆನಿಗಳು ಒಂದು ಸಾವಿರ ವಿಮಾನಗಳನ್ನು ಕೊಳ್ಳಲು ಸಿದ್ಧವಾಗಿವೆ. ಅದರಲ್ಲಿಯೂ ಸುರಕ್ಷಿತ ಪ್ರಯಾಣದ ಷರತ್ತು ಪೂರೈಸುವಂಥ ವಿಮಾನಗಳು ಬೇಕು. ಎರಡು ವರ್ಷಗಳ ಹಿಂದೆ ವಿಮಾನಯಾನ ಕಂಪೆನಿಯೊಂದು ೨೨೦ ಜಟ್ ವಿಮಾನಗಳು, ಜೊತೆಗೆ ೭೩೭ ಮ್ಯಾಕ್ಸ್‌ನ ೫೦ ವಿಮಾನಗಳು ಮತ್ತು ೭೮೭ ಡ್ರೀಮ್ ಲೈನರ್ ಮಾದರಿಯ ೨೦ ವಿಮಾನಗಳನ್ನು ಕೊಳ್ಳಲು ಚರ್ಚೆ ನಡೆಸಲು ಆರಂಭಿಸಿತ್ತು. ಮತ್ತೊಂದು ಖಾಸಗಿ ಕಂಪೆನಿ ಸುಮಾರು ೯೦೦ ಏರ್‌ಬಸ್ ವಿಮಾನಗಳನ್ನು ಕೊಳ್ಳಲು ಸಿದ್ಧತೆ ನಡೆಸಿದೆ ಎಂದು ಪತ್ರಿಕಾ ವರದಿಗಳು ತಿಳಿಸಿವೆ. ಆದರೆ ಪೂರೈಕೆಯೇ ಸಮಸ್ಯೆ. ಅಹಮದಾಬಾದ್‌ನಲ್ಲಿ ನಡೆದಂತಹ ಅಪಘಾತಗಳು ಇಡೀ ವಹಿವಾಟನ್ನು ಅಸ್ಥಿರಗೊಳಿಸಿವೆ.
ಇದರಿಂದ ಪ್ರಯಾಣಿಕರ ಸುರಕ್ಷತೆ ಸಮಸ್ಯೆ ತಲೆದೋರಲಿದೆ. ದೇಶದ ಕಾರ್ಪೊರೇಟ್ ಕ್ಷೇತ್ರದ ಬಹುಮುಖ್ಯ ವಾಣಿಜ್ಯ ವ್ಯವಹಾರಕ್ಕೆ ವಿಮಾನ ಸೌಲಭ್ಯ ಅನಿವಾರ್ಯ ಎನ್ನುವಂತಾಗಿದೆ. ಇಂಥ ಸ್ಥಿತಿಯಲ್ಲಿ ವಿಮಾನಗಳ ಅಭಾವ ಸಹಜವಾಗಿ ದೇಶದ ಆರ್ಥಿಕತೆಯ ಮೇಲೂ ಕೆಟ್ಟ ಪರಿಣಾಮ ಬೀರಲಿದೆ.
” ವಿಮಾನ ಅಪಘಾತಗಳಿಗೆ ಬಹಿರಂಗ ಕಾರಣಗಳಿಗಿಂತ ಆಂತರಿಕ ಕಾರಣಗಳೇ ಹೆಚ್ಚು ಇರುವುದರಿಂದ ತಂತ್ರಜ್ಞಾನವನ್ನು ಮತ್ತಷ್ಟು ಕರಾರುವಾಕ್ಕಾಗಿ ಪರೀಕ್ಷೆ ಗೆ ಒಡ್ಡುವ ಬಗ್ಗೆ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೂ ಎಷ್ಟೋ ಪ್ರಕರಣಗಳಲ್ಲಿ ಅಪಘಾತಕ್ಕೆ ನಿಜವಾದ ಕಾರಣ ಏನು ಎಂಬುದೇ ಗೊತ್ತಾಗದೆ ಉಳಿದಿದೆ. ಅದರಲ್ಲಿಯೂ ಮುಖ್ಯವಾಗಿ ತಂತ್ರಜ್ಞಾನದಲ್ಲಿ ಉಂಟಾಗಿರಬಹುದಾದ ಸಮಸ್ಯೆಗಳು ಗೊತ್ತಾಗುತ್ತಿಲ್ಲ. ಹೀಗಾಗಿ ಬಹಳ ಕಠಿಣವಾದ ಪರೀಕ್ಷಾ ವಿಧಾನಗಳನ್ನು ಜಾರಿಗೆ ತರಲಾಗಿದೆ. ಆದರೂ ವಿಮಾನ ಅಪಘಾತಗಳು ತಪ್ಪಿಲ್ಲ. ಅದರಲ್ಲಿಯೂ ಮುಖ್ಯವಾಗಿ ೬೭ ಜನರ ಸಾವಿಗೆ ಕಾರಣವಾದ ಅಮೆರಿಕದಲ್ಲಿ ಸಂಭವಿಸಿದ ವಿಮಾನಗಳ ಡಿಕ್ಕಿ, ದಕ್ಷಿಣ ಕೊರಿಯಾದಲ್ಲಿ ೧೭೫ ಪ್ರಯಾಣಿಕರ ಸಾವಿಗೆ ಕಾರಣವಾದ ಅಪಘಾತ ನಿಗೂಢವಾಗಿಯೇ ಉಳಿದಿವೆ. ಅಲಾಸ್ಕಾದಲ್ಲಿ ವಿಮಾನ ಹಾರಾಟದಲ್ಲಿದ್ದಾಗ ಅದರ ಬಾಗಿಲು ಕಳಚಿ ಹೊರಬಂದ ಘಟನೆ ವಿಮಾನ ಅಪಘಾತಗಳ ತನಿಖೆಯ ದಿಕ್ಕನ್ನೇ ಬದಲಾಯಿಸಿದೆ.”





