ರೈತರ ಹೆಸರು ನೋಂದಣಿ ಕಾರ್ಯ ಆರಂಭ; ಜಿಲ್ಲೆಯ ೫ ಕಡೆಗಳಲ್ಲಿ ಖರೀದಿ ಕೇಂದ್ರ
ಮಡಿಕೇರಿ: ಸರ್ಕಾರದ ಬೆಂಬಲ ಬೆಲೆಯಡಿ ಜಿಲ್ಲೆಯಲ್ಲಿ ಭತ್ತ ಹಾಗೂ ರಾಗಿಯನ್ನು ಖರೀದಿ ಮಾಡಲಾಗುತ್ತಿದ್ದು, ಈ ಸಂಬಂಧ ರೈತರ ಹೆಸರು ನೋಂದಣಿ ಈಗಾಗಲೇ ಆರಂಭವಾಗಿದೆ. ಜಿಲ್ಲೆಯಾದ್ಯಂತ ರೈತರಿಗೆ ಅನುಕೂಲವಾಗುವಂತೆ ೫ ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ ೨೦೨೫-೨೬ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಹಾಗೂ ರಾಗಿ ಖರೀದಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಭತ್ತ ಮತ್ತು ರಾಗಿಯನ್ನು ಬೆಂಬಲ ಬೆಲೆಯಡಿ ಖರೀದಿಸಲಾಗುತ್ತಿದೆ.
ಆಹಾರ, ನಾಗರಿಕ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯನ್ನಾಗಿ ಸರ್ಕಾರ ನೇಮಕ ಮಾಡಿದೆ. ಖರೀದಿ ಪ್ರಕ್ರಿಯೆಯು ನಿಗಮದ ಮುಖಾಂತರ ನಡೆಯುತ್ತದೆ. ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿ ಮಾಡಿದ ಭತ್ತ ಹಾಗೂ ರಾಗಿಯ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ನೋಂದಣಿ ಕೇಂದ್ರದಲ್ಲಿ ರೈತರು ಫ್ರೂಟ್ ಐಡಿ, ಆಧಾರ್ ಸಂಖ್ಯೆಗೆ ಜೋಡಣೆಯಾದ ತಮ್ಮ ಎನ್‌ಪಿಸಿಐ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕಿದೆ.
ಭತ್ತ ಖರೀದಿ ನೋಂದಣಿ ಕುರಿತು ಗ್ರಾಮೀಣ ಭಾಗದಲ್ಲಿ ರೈತರಿಗೆ, ಮುಖಂಡರಿಗೆ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ಹೆಚ್ಚಿನ ಮಾಹಿತಿ ನೀಡಲಾಗುತ್ತಿದೆ. ರೈತರ ನೋಂದಣಿ ಕೇಂದ್ರಗಳು ಹಾಗೂ ಭತ್ತ ಖರೀದಿ ಕೇಂದ್ರಗಳ ಕುರಿತು ವಿವರಗಳನ್ನು ನೀಡಬೇಕೆಂದು ಜಿಲ್ಲಾಧಿಕಾರಿ ಖರೀದಿ ಏಜೆನ್ಸಿಯವರಿಗೆ ಸೂಚನೆ ನೀಡಿದ್ದಾರೆ. ಸರ್ಕಾರವು ಪೌಷ್ಟಿಕಾಂಶತೆಯಿಂದ ಕೂಡಿದ ಸಾರವರ್ಧಿತ ಅಕ್ಕಿಯನ್ನು ಫಲಾನುಭವಿಗಳಿಗೆ ನೀಡಲು ಉದ್ದೇಶಿಸಿದ್ದು, ಈ ಸಂಬಂಧ ಅಕ್ಕಿ ಗಿರಣಿಗಳಲ್ಲಿ ಹಲ್ಲಿಂಗ್ ಮಾಡುವಾಗ ಸಾರವರ್ಧಿತ ಅಕ್ಕಿಯನ್ನು ತಯಾರು ಮಾಡಲು ಕಡ್ಡಾಯವಾಗಿ ಅಕ್ಕಿ ಗಿರಣಿ ಮಾಲೀಕರುಗಳು ಬ್ಲೆಂಡಿಂಗ್ ಮಿಷನ್‌ಅನ್ನು ಅಳವಡಿಸಬೇಕಿದೆ.
ಇದನ್ನು ಓದಿ: ಅನಾಥರು, ಬಡವರಿಗೆ ಶಿಕ್ಷಕನ ಅನನ್ಯ ಸೇವೆ
ಬ್ಲೆಂಡಿಂಗ್ ಮಿಷನ್‌ಅನ್ನು ಅಳವಡಿಸ ಅಕ್ಕಿಗಿರಣಿಗಳಿಗೆ ಸರ್ಕಾರದ ಆದೇಶದಂತೆ ಹಲ್ಲಿಂಗ್‌ಗೆ ಭತ್ತವನ್ನು ನೀಡಲು ಸಾಧ್ಯವಿಲ್ಲ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ಖರೀದಿ ಕೇಂದ್ರ?: ಮಡಿಕೇರಿ ಎಪಿಎಂಸಿ ಆವರಣ, ಕುಶಾಲನಗರ ಎಪಿಎಂಸಿ ಆವರಣ, ಗೋಣಿಕೊಪ್ಪ ಎಪಿಎಂಸಿ ಆವರಣ ಹಾಗೂ ಸೋಮವಾರಪೇಟೆ ಎಪಿಎಂಸಿ ಮಾರ್ಕೆಟ್ ಆವರಣದಲ್ಲಿ ಮತ್ತು ವಿರಾಜಪೇಟೆ ಪಟ್ಟಣದ ತಾಲ್ಲೂಕು ಕೃಷಿ ಇಲಾಖೆ ಕಚೇರಿಯಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ರೈತರು ನೋಂದಣಿ ಕೇಂದ್ರಗಳಲ್ಲಿಯೇ ತಮ್ಮ ಭತ್ತ ಮಾರಾಟ ಮಾಡಬೇಕಾಗಿದೆ.
” ಸರ್ಕಾರದ ಬೆಂಬಲ ಬೆಲೆಯಡಿ ಜಿಲ್ಲೆಯಲ್ಲಿ ಭತ್ತ ಹಾಗೂ ರಾಗಿ ಖರೀದಿ ಸಂಬಂಧ ನೋಂದಣಿ ಕಾರ್ಯ ನಡೆಯುತ್ತಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ೫ ಕಡೆಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯ ರೈತರು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು.”
-ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ
” ಭತ್ತವನ್ನು ಮಾರಾಟ ಮಾಡಬೇಕಾದ ರೈತರು ಈಗಾಗಲೇ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರಬೇಕು. ಒಂದು ವೇಳೆ ರೈತರು ನೋಂದಣಿ ಮಾಡದಿದ್ದಲ್ಲಿ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು, ತಾವು ಬೆಳೆದ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ.” -ಮಂಟೇಸ್ವಾಮಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕರು
– ನವೀನ್ ಡಿಸೋಜ





