Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಅಧಿಕಾರ ಹಂಚಿಕೆ: ಸೂಕ್ತ ಸಂದೇಶ ರವಾನಿಸಿದ ಎಚ್‌ಸಿಎಂ

ಅಂದು ‘ಕೈ’ ಹಿಡಿದವರನ್ನು ಇಂದು ಕೈ ಬಿಡದಿರಲು ಸಿಎಂ ಸಿದ್ದರಾಮಯ್ಯಗೆ ಮನವಿ

ಕಳೆದ ವಾರ ಮೈಸೂರಿನಲ್ಲಿ ನಡೆದ ಬೌದ್ಧ ಮಹಾ ಸಮ್ಮೇಳನದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಒಂದು ಸೂಕ್ಷ್ಮ ಸಂಗತಿಯನ್ನು ಪ್ರಸ್ತಾಪಿಸಿದರು.

ಅವರು ಪ್ರಸ್ತಾಪಿಸಿದ ಈ ಸಂಗತಿ ನಡೆದಿದ್ದು ೨೦೦೬ರಲ್ಲಿ. ಇವತ್ತು ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಅವರು ಅವತ್ತು ಜನತಾದಳದಿಂದ ಹೊರಬಿದ್ದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯನ್ನು ಎದುರಿಸಿದ್ದರು.

ಈ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ-ಜಾ.ದಳ ಮೈತ್ರಿಕೂಟ ಅದೆಷ್ಟು ಶ್ರಮ ಹಾಕಿತ್ತೆಂದರೆ ಅದರ ಹೊಡೆತಕ್ಕೆ ಸಿದ್ದರಾಮಯ್ಯ ಅವರು ಗೆಲ್ಲುವುದು ಸುಲಭದ ಮಾತಾಗಿರಲಿಲ್ಲ. ಆದರೆ ಅಂತಿಮವಾಗಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲುವು ಗಳಿಸಿದರು.

ಅಷ್ಟೇ ಅಲ್ಲ, ತಮ್ಮ ಗೆಲುವಿನ ನಂತರ ದಲಿತ ಸಮುದಾಯಕ್ಕೆ ವಿಶೇಷ ಕೃತಜ್ಞತೆಯನ್ನು ಸಲ್ಲಿಸಿದರು. ದಲಿತ ಸಮುದಾಯ ತಮ್ಮ ಕೈ ಹಿಡಿಯಿತು ಎಂದು ಬಣ್ಣಿಸಿದರು. ಕಳೆದ ವಾರ ಈ ಬೆಳವಣಿಗೆಯನ್ನೇ ಪ್ರಸ್ತಾಪಿಸಿದ ಡಾ.ಎಚ್.ಸಿ.ಮಹದೇವಪ್ಪ ಅವರು ಅವತ್ತು ದಲಿತರು ಸಿದ್ದರಾಮಯ್ಯ ಅವರ ಕೈ ಹಿಡಿದರು. ಇವತ್ತು ಸಿದ್ದರಾಮಯ್ಯ ಅವರು ದಲಿತರ ಕೈ ಹಿಡಿಯಬೇಕು ಎಂದು ಸೂಚ್ಯವಾಗಿ ಹೇಳಿದರು.

ಇದನ್ನು ಓದಿ: ಸಾರ್ವಜನಿಕರನ್ನು ಅಣಕಿಸುತ್ತಿರುವ ಕಸದ ರಾಶಿ 

ಸದ್ಯದ ರಾಜಕಾರಣವನ್ನು ಮುಂದಿಟ್ಟುಕೊಂಡು ಎಚ್.ಸಿ. ಮಹದೇವಪ್ಪನವರ ಮಾತುಗಳನ್ನು ಗಮನಿಸಿದರೆ ಕರ್ನಾಟಕದ ರಾಜಕಾರಣ ಯಾವ ದಿಕ್ಕಿನತ್ತ ಹೊರಳುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಅಂದ ಹಾಗೆ ಕರ್ನಾಟಕದ ಸದ್ಯದ ರಾಜಕೀಯ ಪರಿಸ್ಥಿತಿ ಹೇಗಿದೆ? ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷಗಳು ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದತ್ಯಾಗ ಮಾಡಿ, ತಮಗೆ ಮುಖ್ಯಮಂತ್ರಿ ಪಟ್ಟ ಕೊಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಯಸಿದ್ದಾರೆ.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ ಡಿ.ಕೆ. ಶಿವಕುಮಾರ್ ಅವರ ನಡೆಗೆ ಪೂರಕವಾಗಿಲ್ಲ. ಬದಲಿಗೆ ಅವರು ನೇರವಾಗಿಯೇ ಶಾಸಕಾಂಗ ಬಲದಲ್ಲಿ ತಮ್ಮ ಬಲ ಹೆಚ್ಚು. ಈ ಹಿಂದೆ ನಾಯಕತ್ವಕ್ಕಾಗಿ ಶಾಸಕಾಂಗ ಸಭೆಯಲ್ಲಿ ಮತದಾನ ನಡೆದಾಗ ನಾನು ಡಿ.ಕೆ.ಶಿವಕುಮಾರ್ ಅವರನ್ನು ಸೋಲಿಸಿದ್ದೇನೆ. ಈಗಲೂ ಹೆಚ್ಚಿನ ಶಾಸಕರ ಬಲ ನನ್ನ ಜತೆಗಿದೆ ಎಂದು ಹೇಳಿದ್ದಾರೆ.

ಹೀಗೆ ಅಧಿಕಾರ ಹಂಚಿಕೆಯ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ನಡೆಯುತ್ತಿರುವ ಶೀತಲ ಸಮರ ಯಾವ ಹಂತಕ್ಕೆ ತಿರುಗಿದೆ ಎಂದರೆ, ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಅವರು ತುಂಬ ಅಗ್ರೆಸಿವ್ ಆಗಿಯೇ ಹೆಜ್ಜೆ ಇಡುತ್ತಿದ್ದಾರೆ. ಉದಾಹರಣೆಗೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಹೈಕಮಾಂಡ್ ಕೃಪೆ ಮುಖ್ಯ ಎಂದರೆ, ಬಾಗಲಕೋಟೆಗೆ ಹೋಗಿದ್ದ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲು ಹೈಕಮಾಂಡ್ ಕೃಪೆಯೂ ಮುಖ್ಯ. ಆದರೆ ಮುಖ್ಯಮಂತ್ರಿಯಾಗಲು ಶಾಸಕರ ಬೆಂಬಲ ಇರಬೇಕು ಎಂದು ನೇರವಾಗಿಯೇ ಚುಚ್ಚಿದರು.

ಅರ್ಥಾತ್, ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿಯಾಗಬೇಕು ಎಂಬ ವಿಷಯದಲ್ಲಿ ಡಿ.ಕೆ.ಶಿವಕುಮಾರ್ ಅವರು ಹೇಗೆ ಬಿಗಿಯಾಗಿದ್ದಾರೋ ಸಿದ್ದರಾಮಯ್ಯ ಅವರು ಅದಕ್ಕಿಂತ ಬಿಗಿಯಾಗಿದ್ದಾರೆ. ಹೀಗಾಗಿಯೇ ಈ ವಿಷಯದ ಬಗ್ಗೆ ಕಾಂಗ್ರೆಸ್ ಪಕ್ಷದ ವರಿಷ್ಠರೇ ಒಂದು ತೀರ್ಮಾನಕ್ಕೆ ಬರಬೇಕಾದ ಅಗತ್ಯವಿದೆ. ಆದರೆ ಹೀಗೆ ತೀರ್ಮಾನ ತೆಗೆದುಕೊಳ್ಳುವಾಗ ಅವರು ಸಿದ್ದರಾಮಯ್ಯ ಅವರ ಮನಸ್ಸಿಗೆ ವಿರೋಧವಾಗಿ ಕಟ್ಟಪ್ಪಣೆ ಮಾಡುವ ಸ್ಥಿತಿಯಲ್ಲೂ ಇಲ್ಲ. ಏಕೆಂದರೆ, ಕರ್ನಾಟಕದ ನೆಲೆಯಲ್ಲಿ ಅಹಿಂದ ವರ್ಗಗಳ ಸಾಲಿಡ್ಡು ಬೆಂಬಲ ಗಳಿಸಿರುವ ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿಗೆ ಅನಿವಾರ್ಯ ಶಕ್ತಿ. ಒಂದು ವೇಳೆ ಅಂತಹ ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಕೆಳಗಿಳಿಸಲು ಕಾಂಗ್ರೆಸ್ ವರಿಷ್ಠರು ಮುಂದಾದರೆ ಸರ್ಕಾರ ಅಲುಗಾಡುವುದು ನಿಸ್ಸಂಶಯ.

ಹೀಗಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವ ವಿಷಯದಲ್ಲಿ ವರಿಷ್ಠರ ಮನಸ್ಸು ಮಿದುವಾಗಿದ್ದರೂ ಇದಕ್ಕಾಗಿ ತ್ಯಾಗ ಮಾಡುವಂತೆ ಸಿದ್ದರಾಮಯ್ಯ ಅವರಿಗೆ ಹೇಳುವಶಕ್ತಿಯೂ ಅವರಲ್ಲಿಲ್ಲ. ಹೋಗಲಿ, ದೇವರಾಜ ಅರಸು, ವೀರೇಂದ್ರ ಪಾಟೀಲ್, ಬಂಗಾರಪ್ಪ ಅವರನ್ನು ಬಲವಂತವಾಗಿ ಕೆಳಗಿಳಿಸಿದಂತೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಬೇಕು ಎಂದರೆ ಕಾಂಗ್ರೆಸ್ ಹೈಕಮಾಂಡ್‌ಗೆ ಮುಂಚಿನ ಶಕ್ತಿಯಿಲ್ಲ. ಏಕೆಂದರೆ ಮೇಲೆ ಹೇಳಿದ ನಾಯಕರನ್ನು ಅವರ ಇಷ್ಟಕ್ಕೆ ವಿರುದ್ಧವಾಗಿ ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಿದಾಗ ರಾಜಕೀಯವಾಗಿ ರಿಸ್ಕ್ ತೆಗೆದುಕೊಳ್ಳುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿತ್ತು. ಅರ್ಥಾತ್, ಕರ್ನಾಟಕ ಹೊರತುಪಡಿಸಿದಂತೆ ಹತ್ತು ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು.ಆದರೆ ಈಗ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಲು ಕರ್ನಾಟಕ ಹೊರತುಪಡಿಸಿದಂತೆ ಬೇರೆ ಯಾವ ರಾಜ್ಯಗಳಲ್ಲೂ ಸಧೃಢ ಕಾಂಗ್ರೆಸ್ ಸರ್ಕಾರಗಳಿಲ್ಲ.

ಹೀಗಾಗಿ ಸಿದ್ದರಾಮಯ್ಯ ಅವರ ಬಳಿ ತ್ಯಾಗದ ಮಾತನಾಡುವ ಶಕ್ತಿ ಕಾಂಗ್ರೆಸ್ ಹೈಕಮಾಂಡ್‌ಗಿಲ್ಲ. ಇಷ್ಟಾದರೂ ಒಂದು ವಿಷಯದಲ್ಲಿ ಸಿದ್ದರಾಮಯ್ಯನವರು ವಿವಶರಾಗಬಹುದು. ಅದಕ್ಕೆ ಕಾರಣವೂ ಇದೆ. ಅದೆಂದರೆ, ಕರ್ನಾಟಕದಲ್ಲಿ ಪಕ್ಷ ಅಧಿಕಾರ ಹಿಡಿದಾಗ ಸಿಎಂ ಹುದ್ದೆಗೆ ಪೈಪೋಟಿ ನಡೆಯಿತಲ್ಲ, ಆ ಸಂದರ್ಭದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರ ಪರವಾಗಿ ನಿಂತರಾದರೂ, ತದನಂತರ ಸೂಕ್ತ ಕಾಲದಲ್ಲಿ ಹೈಕಮಾಂಡ್ ಕೊಡುವ ಸೂಚನೆಯನ್ನು ನೀವಿಬ್ಬರೂ ಪಾಲಿಸಬೇಕು ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಹೇಳಿದ್ದರು.

ಇದನ್ನು ಓದಿ: ಪ್ರವಾಸಿ ತಾಣಗಳಿಗೆ ಲಗ್ಗೆ ಇಟ್ಟ ಪ್ರವಾಸಿಗರ ದಂಡು

ಅವತ್ತು ಅವರು ಹೇಳಿದ ಈ ಮಾತಿಗಾಗಿ ಸಿದ್ದರಾಮಯ್ಯ ವಿವಶರಾಗಿ ಅಧಿಕಾರ ತ್ಯಾಗಕ್ಕೆ ಮುಂದಾಗಬಹುದು.ಆದರೆ ಅವರು ಅಧಿಕಾರ ತ್ಯಾಗಕ್ಕೆ ಮುಂದಾಗುವುದೇ ಆದರೆ ಪರ್ಯಾಯ ನಾಯಕರಾಗಿ ಡಿಕೆಶಿ ಅವರ ನೇಮಕವನ್ನು ಒಪ್ಪುವುದಿಲ್ಲ. ಬದಲಿಗೆ ಪರ್ಯಾಯ ನಾಯಕನ ಆಯ್ಕೆ ಶಾಸಕಾಂಗ ಪಕ್ಷದ ಸಭೆಯಲ್ಲೇ ಆಗಲಿ ಎನ್ನುತ್ತಾರೆ. ಅವರು ಹಾಗೆ ಹೇಳುವ ಸಂದರ್ಭ ಬಂದರೆ ಶಾಸಕಾಂಗ ನಾಯಕರಾಗಲು ದಲಿತ ನಾಯಕರೊಬ್ಬರು ಮೇಲೆದ್ದು ನಿಲ್ಲಲಿದ್ದಾರೆ. ಅದು ಖರ್ಗೆ ಅವರಾಗಬಹುದು, ಪರಮೇಶ್ವರ್ ಅವರಾಗಬಹುದು ಅಥವಾ ಎಚ್.ಸಿ.ಮಹದೇವಪ್ಪ ಅವರಾಗಬಹುದು.

ಅರ್ಹತೆಯ ದೃಷ್ಟಿಯಿಂದ ನೋಡಿದರೆ ಈ ಮೂರೂ ನಾಯಕರು ಮುಖ್ಯಮಂತ್ರಿ ಹುದ್ದೆಗೆ ಸೂಕ್ತರಾದವರು. ಅಷ್ಟೇ ಅಲ್ಲ, ಯಾವ ಸಮುದಾಯದಿಂದ ಅವರು ಬಂದಿದ್ದಾರೋ? ಆ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ನಿರಂತರವಾಗಿ ಪೊರೆಯುತ್ತಾ ಬಂದಿದೆ. ಸ್ವಾತಂತ್ರ್ಯೋತ್ತರ ಕರ್ನಾಟಕದ ರಾಜಕಾರಣವನ್ನು ನೋಡಿದರೆ, ಅದರಲ್ಲೂ ೧೯೭೨ರ ನಂತರದ ರಾಜಕೀಯ ಸನ್ನಿವೇಶವನ್ನು ನೋಡಿದರೆ ಇದು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟ.

ಹೀಗಾಗಿ ಕಾಂಗ್ರೆಸ್ ಪಕ್ಷ ಕೂಡ ದಲಿತ ಸಮುದಾಯದ ಋಣ ತೀರಿಸಬೇಕಲ್ಲವೇ? ತನ್ನ ನೆಲೆಯನ್ನು ಉಳಿಸಿಕೊಳ್ಳಲು ದಲಿತ ಸಮುದಾಯಗಳ ಶಕ್ತಿಯನ್ನು ನೆಚ್ಚಿಕೊಂಡಿರುವ ಕಾಂಗ್ರೆಸ್ ಪಕ್ಷ ಆ ಸಮುದಾಯದ ನಾಯಕರೊಬ್ಬರನ್ನು ಮುಖ್ಯಮಂತ್ರಿ ಹುದ್ದೆಗೆ ತರುವುದು ನ್ಯಾಯವೇ ತಾನೇ? ಆದರೆ ಇಂತಹ ನ್ಯಾಯ ಸಲ್ಲಬೇಕಾದ ಸಂದರ್ಭದಲ್ಲಿ ಇನ್ಯಾವುದೋ ಕಾರಣಗಳಿಗಾಗಿ ದಲಿತರನ್ನು ವಂಚಿಸುವ ಕೆಲಸವಾದರೆ ಏನರ್ಥ?ಹಾಗಂತಲೇ ಮೈಸೂರಿನ ಬೌದ್ಧ ಮಹಾ ಸಮ್ಮೇಳನದಲ್ಲಿ ಮಾತನಾಡಿದ ಎಚ್.ಸಿ.ಮಹದೇವಪ್ಪನವರು ಏಕಕಾಲಕ್ಕೆ ಸಿದ್ದರಾಮಯ್ಯನವರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಒಂದು ಸೂಕ್ಷ್ಮ ಸಂದೇಶವನ್ನು ರವಾನಿಸಿದ್ದಾರೆ. ಯಾವ ದೃಷ್ಟಿಯಿಂದ ಗಮನಿಸಿದರೂ ಇದು ಬಹಳ ಮಹತ್ವದ ಸಂದೇಶ.

” ತನ್ನ ನೆಲೆಯನ್ನು ಉಳಿಸಿಕೊಳ್ಳಲು ದಲಿತ ಸಮುದಾಯಗಳ ಶಕ್ತಿಯನ್ನು ನೆಚ್ಚಿಕೊಂಡಿರುವ ಕಾಂಗ್ರೆಸ್ ಪಕ್ಷ ಆ ಸಮುದಾಯದ ನಾಯಕರೊಬ್ಬರನ್ನು ಮುಖ್ಯಮಂತ್ರಿ ಹುದ್ದೆಗೆ ತರುವುದು ನ್ಯಾಯವೇ ತಾನೇ?”

-ಬೆಂಗಳೂರು ಡೈರಿ 
ಆರ್.ಟಿ.ವಿಠ್ಠಲಮೂರ್ತಿ 

Tags:
error: Content is protected !!