Mysore
14
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಅಂಚೆ ಚೀಟಿ ಮೂಲಕ ಟಿಪ್ಪು ಸುಲ್ತಾನ್ ವಂಶಸ್ಥೆಯನು ಗೌರವಿಸಿದ ಫ್ರಾನ್ಸ್‌ 

ಶತ್ರುಗಳಿಗೆ ಸೆರೆ ಸಿಕ್ಕು ಚಿತ್ರ ಹಿಂಸೆ ಅನುಭವಿಸಿದರೂ ಗುಟ್ಟು ಬಿಡದ ನೂರ್ ಇನಾಯತ್ ಖಾನ್‌ 

ನವೆಂಬರ್ ತಿಂಗಳಲ್ಲಿ ಫ್ರಾನ್ಸ್ ಸರ್ಕಾರ ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ಹಿಡಿತದಿಂದ ಫ್ರಾನ್ಸನ್ನು ಬಿಡುಗಡೆಗೊಳಿಸಲು ಗೂಢಚಾರಿಣಿಯಾಗಿ ಕಾರ್ಯ ನಿರ್ವಹಿಸಿ ಮಡಿದ ಭಾರತೀಯ ಮೂಲದ ನೂರ್ ಇನಾಯತ್ ಖಾನ್‌ರ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿ ತನ್ನ ಗೌರವವನ್ನು ಸೂಚಿಸಿತು. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನನ ಈ ಮರಿ ಮರಿ ಮೊಮ್ಮಗಳನ್ನು ಇಂಗ್ಲೆಂಡ್ ಕೂಡಾ ಇದೇ ರೀತಿಯಲ್ಲಿ ಒಂದು ಅಂಚೆಚೀಟಿ ಬಿಡುಗಡೆ ಮಾಡಿ ಹಾಗೂ ತನ್ನ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ‘ಜಾರ್ಜ್ ಕ್ರಾಸ್’ ನೀಡಿ ಗೌರವಿಸಿತ್ತು.

ನೂರ್ ಇನಾಯತ್ ಖಾನ್ ೧೯೧೪ರ ಜನವರಿ ೧ರಂದು ಮಾಸ್ಕೋದಲ್ಲಿ ಜನಿಸಿದರು. ನಾಲ್ಕು ಮಕ್ಕಳಲ್ಲಿ ಹಿರಿಯವಳಾದ ಅವರ ಪೂರ್ಣ ಹೆಸರು ನೂರುನ್ನಿಸಾ ಇನಾಯತ್ ಖಾನ್. ಟಿಪ್ಪು ಸುಲ್ತಾನನ ವಂಶಸ್ತೆಯಾಗಿದ್ದರೂ ಆತನಂತೆ ಈಕೆಯಾಗಲೀ, ಈಕೆಯ ತಂದೆತಾಯಿಯಾಗಲೀ ಯೋಧ ಹಿನ್ನೆಲೆಯವರಲ್ಲ. ಬದಲಿಗೆ, ಇವರದ್ದು ಸೂಫಿ ಸಂಗೀತಗಾರರ ವಂಶ. ನೂರ್‌ರ ಒಬ್ಬ ತಮ್ಮ ವಿಲಾಯತ್ ಇನಾಯತ್ ಖಾನ್ ಲೇಖಕ ಹಾಗೂ ಸೂಫಿ ಶಿಕ್ಷಕ. ಇನ್ನೊಬ್ಬ ತಮ್ಮ ಹಿದಾಯತ್ ಇನಾಯತ್ ಖಾನ್ ಸಂಗೀತಗಾರ ಹಾಗೂ ಸೂಫಿ ಶಿಕ್ಷಕ. ನೂರ್‌ರಂತೂ ಕವಿತೆ, ಸಂಗೀತ ಹಾಗೂ ಸೂಫಿ ತತ್ವಶಾಸ್ತ್ರದ ಪೋಷಣೆಯಲ್ಲಿ ಬೆಳೆದವರು. ಬರೋಡಾದಲ್ಲಿ ಜನಿಸಿದ ನೂರ್‌ರ ತಂದೆ ಇನಾಯತ್ ಖಾನ್ ನಂತರ ಯುರೋಪಿಗೆ ನೆಲೆ ಬದಲಾಯಿಸಿ ಅಲ್ಲಿ ಸೂಫಿ ಸಂಗೀತಗಾರರಾಗಿ ಜೀವಿಸಿದ್ದರು. ಅವರು ಪಾಶ್ಚಿಮಾತ್ಯದ ‘ಸೂಫಿ ಆರ್ಡರ್ ಇಂಟರ್ನೇಷನಲ್’ನ ಮುಖ್ಯಸ್ಥರಾಗಿದ್ದರು. ನಂತರ ಅದು ‘ಇನಾಯತಿ ಆರ್ಡರ್’ ಎಂದು ನಾಮಕರಣಗೊಂಡಿತು. ನೂರ್‌ರ ತಾಯಿ ಅಮೆರಿಕನ್ ಮೂಲದ ಪಿರಾಣಿ ಅಮೀನಾ ಬೇಗಂ. ಇವರ ಮೂಲ ಹೆಸರು ಓರಾ ರೇ ಬೇಕರ್.

ಸೂಫಿ ಹಿನ್ನೆಲೆಯ ನೂರ್‌ರ ಬದುಕಿನುದ್ದಕ್ಕೂ ಮಹಾಯುದ್ಧದ ಕರಿನೆರಳು ಹಿಂಬಾಲಿಸಿಕೊಂಡೇ ಬಂದಿತ್ತು. ಅವರು ಹುಟ್ಟಿದ ಕೆಲವೇ ತಿಂಗಳಲ್ಲಿ, ಅಂದರೆ ಜುಲೈ ೨೮ರಂದು ಮೊದಲ ಜಾಗತಿಕ ಮಹಾಯುದ್ಧ ಪ್ರಾರಂಭವಾಯಿತು. ಮೊದಲ ಜಾಗತಿಕ ಮಹಾಯುದ್ಧ ಪ್ರಾರಂಭವಾಗುವ ಸ್ವಲ್ಪ ಸಮಯದ ಮೊದಲು ನೂರ್‌ರ ಕುಟುಂಬ ಮಾಸ್ಕೋವನ್ನು ಬಿಟ್ಟು ಬ್ರಿಟನ್ನಿಗೆ ತೆರಳಿತ್ತು. ನಂತರ, ಅಲ್ಲಿಂದ ೧೯೨೦ರಲ್ಲಿ ಅವರ ಕುಟುಂಬ ಫ್ರಾನ್ಸಿಗೆ ತನ್ನ ನೆಲೆ ಬದಲಾಯಿಸಿ, ಅಲ್ಲಿನ ಸೂರೆನ್ ಎಂಬಲ್ಲಿ ಸೂಫಿ ಚಳವಳಿಯ ಪೋಷಕರೊಬ್ಬರು ಕೊಟ್ಟ ಮನೆಯಲ್ಲಿ ವಾಸವಾಗಿತ್ತು.

ಇದನ್ನು ಓದಿ: ಮಂಜಿನ ನಗರಿಯಲ್ಲಿ ಮೈ ಕೊರೆಯುವ ಚಳಿ  

೧೯೨೭ರಲ್ಲಿ ತಂದೆ ತೀರಿಕೊಂಡಾಗ ಅವರ ತಾಯಿ ತೀವ್ರ ದುಃಖಿತರಾದ ಕಾರಣ ಆಗ ಕುಟುಂಬದ ಹಿರಿಯ ಮಗಳಾಗಿದ್ದ ನೂರ್ ತನ್ನ ೧೩ನೇ ವಯಸ್ಸಿನ ಚಿಕ್ಕ ಪ್ರಾಯದಲ್ಲಿ ತಮ್ಮಂದಿರ ಪೋಷಣೆಯ ಜವಾಬ್ದಾರಿ ಹೊರಬೇಕಾಯಿತು. ತುಂಬಾ ಸೂಕ್ಷ , ನಾಚಿಕೆ, ಮೌನ ಸ್ವಭಾವದ ಭಾವನಾಜೀವಿಯಾಗಿದ್ದ ಅವರು ಚೆನ್ನಾಗಿ ಹಾರ್ಪ್ ಮತ್ತು ಪಿಯಾನೋ ನುಡಿಸುತ್ತಿದ್ದರು. ಮಕ್ಕಳ ಮನಃಶಾಸ್ತ್ರ ಹಾಗೂ ಸಂಗೀತವನ್ನು ಅಭ್ಯಸಿಸಿದ್ದರು. ಜೊತೆಯಲ್ಲಿ, ಅವರು ಬರವಣಿಗೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದರು. ಪತ್ರಿಕೆಗಳಿಗೆ ಫ್ರೆಂಚ್ ಮತ್ತು ಇಂಗ್ಲಿಷಿನಲ್ಲಿ ಕತೆ, ಕವನ, ಮಕ್ಕಳ ಕತೆಗಳನ್ನು ಬರೆಯುತ್ತಿದ್ದರು. ಫ್ರೆಂಚ್ ರೇಡಿಯೋಗೆ ಕಾರ್ಯಕ್ರಮ ಕೊಡುತ್ತಿದ್ದರು. ೧೯೩೯ರಲ್ಲಿ ‘ಟ್ವೆಂಟಿ ಜಾತಕ ಟೇಲ್ಸ್’ ಎಂಬ ಇಪ್ಪತ್ತು ಜಾತಕ ಕತೆಗಳ ಪುಸ್ತಕವನ್ನು ಪ್ರಕಟಿಸಿದ್ದರು.

೧೯೩೯ರ ಸೆಪ್ಟೆಂಬರ್‌ನಲ್ಲಿ ಎರಡನೇ ಮಹಾಯುದ್ಧ ಶುರುವಾಗಿ, ಹಿಟ್ಲರ್ ಫ್ರಾನ್ಸನ್ನು ಆಕ್ರಮಿಸಿಕೊಂಡ ನಂತರ ನೂರ್ ಕುಟುಂಬ ೧೯೪೦ರ ಜೂನ್ ತಿಂಗಳಲ್ಲಿ ಸಮುದ್ರದ ಮೂಲಕ ಇಂಗ್ಲೆಂಡಿಗೆ ವಾಪಸಾಯಿತು. ಭಾರತೀಯ ಮೂಲದವಳಾದ ತಾನು ಬ್ರಿಟಿಷ್ ಮಿಲಿಟರಿ ಸೇರಿ ಜರ್ಮನಿ ವಿರುದ್ಧ ಹೋರಾಡಿದರೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸಂಬಂಧವನ್ನು ಉತ್ತಮಗೊಳಿಸಲು ಚಿಕ್ಕ ಕೊಡುಗೆ ನೀಡಬಹುದು ಎಂದು ನೂರ್ ಆಲೋಚಿಸಿದರು. ಆದರೆ, ಗಾಂಽಜಿಯ ಸತ್ಯ ಹಾಗೂ ಅಹಿಂಸಾ ತತ್ವದಿಂದ ಪ್ರಭಾವಿತರಾಗಿದ್ದ ಅವರು ಯಾವುದೇ ರೀತಿಯ ಹಿಂಸೆಯ ವಿರೋಧಿಯಾಗಿದ್ದರು. ಆ ಹಿನ್ನೆಲೆಯಲ್ಲಿ ಅವರು ಅದೇ ವರ್ಷ ನವೆಂಬರ್ ತಿಂಗಳಲ್ಲಿ ಬ್ರಿಟಿಷ್ ವಾಯುದಳದ ಮಹಿಳಾ ವಿಭಾಗವನ್ನು ಸೇರಿ, ವೈರ್‌ಲೆಸ್ ಆಪರೇಟರ್ ಆಗಿ ತರಬೇತಿ ಪಡೆದರು. ನಂತರ, ೧೯೪೩ರ ಜೂನ್ ತಿಂಗಳಲ್ಲಿ ‘ವಿಶೇಷ ವೈರ್‌ಲೆಸ್ ಆಪರೇಟರ್’ ಆಗಿ ಜರ್ಮನ್ ಆಕ್ರಮಿತ ಫ್ರಾನ್ಸಿಗೆ ಹೋದರು. ಆ ಮೂಲಕ ಅಂತಹ ಅಪಾಯಕಾರಿ ಕೆಲಸಕ್ಕೆ ಇಂಗ್ಲೆಂಡಿನಿಂದ ನೇಮಿಸಲ್ಪಟ್ಟ ಪ್ರಪ್ರಥಮ ಮಹಿಳೆ ಎಂಬ ದಾಖಲೆಗೆ ಪಾತ್ರರಾದರು.

ನೂರ್ ಚಿಕ್ಕ ಗಾತ್ರದ ಶರೀರ ಹೊಂದಿದ್ದರೂ ಒಮ್ಮೆ ನೋಡಿದರೆ ಇನ್ನೊಮ್ಮೆ ತಿರುಗಿ ನೋಡುವಂತಹ ಆಕರ್ಷಕ ಸೌಂದರ್ಯವತಿಯಾಗಿದ್ದರು. ಯಾರ ಗಮನಕ್ಕೂ ಬಾರದಂತೆ ಇರುವುದು ಅಸಾಧ್ಯವಾಗುವ ಸುಂದರಿಯೊಬ್ಬಳನ್ನು ಇಂತಹ ಗೌಪ್ಯ ಸೇನಾ ಕಾರ್ಯಕ್ಕೆ ಕಳಿಸುವುದು ಅಪಾಯಕಾರಿ ತೀರ್ಮಾನವಾಗಿತ್ತು. ಅದು ಗೊತ್ತಿದ್ದೂ ನೂರ್ ತಾವೇ ಆ ಕೆಲಸಕ್ಕೆ ಸ್ವಯಂಪ್ರೇರಣೆಯಿಂದ ಮುಂದಾಗಿದ್ದರು. ಅದೂ ಅಲ್ಲದೆ ಆ ಹೊತ್ತಲ್ಲಿ ಬ್ರಿಟಿಷ್ ಹಾಗೂ ಅದರ ಮಿತ್ರ ರಾಷ್ಟ್ರಗಳ ಸೇನೆಗಳಲ್ಲಿ ನುರಿತ ರೇಡಿಯೋ ಆಪರೇಟರ್‌ಗಳ ಕೊರತೆ ಇತ್ತು. ಮತ್ತು, ನೂರ್‌ಗೆ ತುಂಬಾ ಚೆನ್ನಾಗಿ ಫ್ರೆಂಚ್ ಭಾಷೆ ಬರುತ್ತಿದ್ದುದು ಹಾಗೂ ಅವರಿಗೆ ಪಿಯಾನೋ ನುಡಿಸಲು ಬರುತ್ತಿದ್ದುದರಿಂದ ರೇಡಿಯೋ ಸಂದೇಶಗಳನ್ನು ಸುಲಭದಲ್ಲಿ ಟೈಪ್ ಮಾಡಬಲ್ಲವರಾಗಿದ್ದುದೂ ಆ ತೀರ್ಮಾನಕ್ಕೆ ಇತರ ಕಾರಣಗಳಾಗಿದ್ದವು. ‘ಮೇಡಲಿನ್’ ಎಂಬ ಕೋಡ್‌ನೇಮ್‌ನಿಂದ ಅವರು ತಮ್ಮ ಕೆಲಸ ಶುರು ಮಾಡಿದರು.

ಇದನ್ನು ಓದಿ: ಸಣ್ಣ ಕಾಲುವೆಗಳನ್ನು ಮುಚ್ಚಿ ಒತ್ತುವರಿ: ಆರೋಪ  

ಯುದ್ಧದ ಸಮಯದಲ್ಲಿ ಗುಪ್ತ ರೇಡಿಯೋ ಆಪರೇಟರ್‌ಗಳ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ. ಅವರು ಕಳಿಸುವ ಗೌಪ್ಯ ಮಾಹಿತಿ, ವೈರಿ ಸೇನೆಗಳ ಚಲನವಲನಗಳ ಮಾಹಿತಿ, ಸಂದೇಶಗಳ ಮೂಲಕವಷ್ಟೇ ಯುದ್ಧ ನಿರತ ಸೈನಿಕರು ಮತ್ತು ಅವರ ಸೇನಾ ಹೆಡ್ ಕ್ವಾರ್ಟರ್ಸ್‌ಗಳ ನಡುವೆ ಸಂಪರ್ಕವನ್ನು ಏರ್ಪಡಿಸುತ್ತವೆ. ಅವರಿಲ್ಲದಿದ್ದರೆ ಸೇನೆ ಮತ್ತು ಹೆಡ್ ಕ್ವಾರ್ಟರ್ಸ್‌ಗಳ ನಡುವಿನ ಸಂಪರ್ಕ ಕಳಚಿ ಹೋಗಿ ಯುದ್ಧ ಯೋಜನೆಗಳು ಅಸ್ತವ್ಯಸ್ತವಾಗುತ್ತವೆ. ಆದರೆ, ಗುಪ್ತ ರೇಡಿಯೋ ಆಪರೇಷನ್ ಕಾರ್ಯ ಅಷ್ಟೇ ಅಪಾಯಕಾರೀ ಕೆಲಸವೂ ಆಗಿತ್ತು. ಒಬ್ಬ ರೇಡಿಯೋ ಆಪರೇಟರ್‌ಗೆ ಆರು ವಾರಗಳಿಗಿಂತ ಹೆಚ್ಚು ಕಾಲ ವೈರಿ ಸೇನೆಯ ಕಣ್ಣು ತಪ್ಪಿಸಿ ಇರಲು ಸಾಧ್ಯವಿರಲಿಲ್ಲ. ಅಷ್ಟರೊಳಗೆ ಅವರ ಅಡಗು ತಾಣಗಳು ಪತ್ತೆ ಹಚ್ಚಲ್ಪಟ್ಟು ಬಂಧಿಸಲ್ಪಡುತ್ತಿದ್ದರು. ಅಥವಾ ಕೆಲವರು ಹೇಗೋ ತಪ್ಪಿಸಿಕೊಂಡು ತಮ್ಮ ಸ್ವಸ್ಥಾನಕ್ಕೆ ವಾಪಸಾಗುತ್ತಿದ್ದರು. ಆದರೆ, ನೂರ್ ನಾಲ್ಕು ತಿಂಗಳ ಕಾಲ ಯಶಸ್ವಿಯಾಗಿ ತಮ್ಮ ಆಪರೇಷನ್ ನಡೆಸಿ, ೧೯೪೩ರ ಅಕ್ಟೋಬರ್ ೧೩ರಂದು ಜರ್ಮನ್ ಪೊಲೀಸರ ಕೈಗೆ ಸಿಕ್ಕರು.

ತಮ್ಮ ಬಂಧನದ ಅವಧಿಯಲ್ಲಿ ಎರಡು ಬಾರಿ ಅವರು ತಪ್ಪಿಸಿಕೊಳ್ಳುವ ವಿಫಲ ಯತ್ನ ನಡೆಸಿದರು. ಅದರಿಂದಾಗಿ ಜರ್ಮನ್ ಸೇನೆ ಅವರನ್ನು ‘ಅತ್ಯಂತ ಅಪಾಯಕಾರಿ ಯುದ್ಧ ಕೈದಿ’ ಎಂದು ಪರಿಗಣಿಸಿ ಅವರನ್ನು ಜರ್ಮನಿಗೆ ಕೊಂಡೊಯ್ದು ಅಲ್ಲಿ ಅವರ ಕೈಕಾಲುಗಳಿಗೆ ಕೋಳ ಹಾಕಿಸಿ ಒಬ್ಬಂಟಿಯಾಗಿ ಅತ್ಯಂತ ಬಂದೋಬಸ್ತಿನ ಕಾರಾಗೃಹದಲ್ಲಿರಿತು. ನೂರ್ ಅಲ್ಲಿ ಹತ್ತು ತಿಂಗಳ ಕಾಲ ವಿವಿಧ ರೀತಿಯ ಚಿತ್ರಹಿಂಸೆಗಳನ್ನು ಅನುಭವಿಸಿದರೂ ಯಾವುದೇ ಗುಟ್ಟನ್ನು ಬಿಟ್ಟುಕೊಡಲಿಲ್ಲ. ೧೯೪೪ರ ಸೆಪ್ಟೆಂಬರ್ ೧೨ರಂದು ಡಾಕಾವ್ ಕಾನ್ಸಂಟ್ರೇಶನ್ ಕ್ಯಾಂಪಲ್ಲಿ ಇತರ ಮೂವರು ಯುದ್ಧ ಕೈದಿಗಳ ಜೊತೆ ಅವರನ್ನು ಕುತ್ತಿಗೆ ಹಿಂಭಾಗಕ್ಕೆ ಗುಂಡಿಕ್ಕಿ ಸಾಯಿಸಲಾಯಿತು. ಆಗ ಆಕೆಗೆ ೩೦ ವರ್ಷ ಪ್ರಾಯವಾಗಿತ್ತು. ಸಾಯುವ ಮೊದಲು ನೂರ್ ಫ್ರೆಂಚ್ ಭಾಷೆಯಲ್ಲಿ ಉಚ್ಚರಿಸಿದ ಪದ ಲಿಬರ್ಟೆ. ಅಂದರೆ, ಸ್ವಾತಂತ್ರ್ತ್ಯ. ೧೯೪೯ರಲ್ಲಿ ಇಂಗ್ಲೆಂಡ್ ನೂರ್‌ಗೆ ಮರಣೋತ್ತರವಾಗಿ ತನ್ನ ಅತ್ಯುನ್ನತ ಮಿಲಿಟರಿ ಗೌರವವಾದ ‘ಜಾರ್ಜ್ ಕ್ರಾಸ್’ ನೀಡಿ ಗೌರವಿಸಿತು.  ೨೦೧೨ರಲ್ಲಿ ಆಕೆಯ ಮನೆಯ ಹತ್ತಿರ ಆಕೆಯ ಕಂಚಿನ ಮೂರ್ತಿಯನ್ನು ನಿಲ್ಲಿಸಿತು. ೨೦೧೪ರಲ್ಲಿ ನೂರ್ ಜನ್ಮ ದಿನದ ಶತಮಾನೋತ್ಸವದ ಸಮಯದಲ್ಲಿ ಆಕೆಯ ಸ್ಮರಣೆಯಲ್ಲಿ ಒಂದು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಈಗ ಫ್ರಾನ್ಸ್ ಆ ಕೆಲಸವನ್ನು ಮಾಡಿದೆ. ಆದರೆ, ಆಕೆಯ ಮೂಲವಾದ ಭಾರತದಲ್ಲಿ ಆಕೆಯನ್ನು ನೆನಪಿಸಿಕೊಳ್ಳುವ ಯಾವ ಪ್ರಯತ್ನವೂ ನಡೆಯುತ್ತಿಲ್ಲ ಎಂದು ‘ಸ್ಪೈ ಪ್ರಿನ್ಸೆಸ್: ದಿ ಲೈಫ್ ಆಫ್ ನೂರ್ ಇನಾಯತ್ ಖಾನ್’ ಎಂಬ ಹೆಸರಲ್ಲಿ ಅವರ ಆತ್ಮಚರಿತ್ರೆಯನ್ನು ಬರೆದಿರುವ ಲಂಡನ್ ವಾಸಿ ಭಾರತ ಮೂಲದ ಲೇಖಕಿ ಶ್ರಬಣಿ ಬಸು ಹೇಳುತ್ತಾರೆ.

” ೧೯೪೯ರಲ್ಲಿ ಇಂಗ್ಲೆಂಡ್ ನೂರ್‌ಗೆ ಮರಣೋತ್ತರವಾಗಿ ತನ್ನ ಅತ್ಯುನ್ನತ ಮಿಲಿಟರಿ ಗೌರವವಾದ ‘ಜಾರ್ಜ್ ಕ್ರಾಸ್’ ನೀಡಿ ಗೌರವಿಸಿತು. ೨೦೧೨ರಲ್ಲಿ ಆಕೆಯ ಮನೆಯ ಹತ್ತಿರ ಆಕೆಯ ಕಂಚಿನ ಮೂರ್ತಿಯನ್ನು ನಿಲ್ಲಿಸಿತು. ೨೦೧೪ರಲ್ಲಿ ನೂರ್ ಜನ್ಮ ದಿನದ ಶತಮಾನೋತ್ಸವದ ಸಮಯದಲ್ಲಿ ಆಕೆಯ ಸ್ಮರಣೆಯಲ್ಲಿ ಒಂದು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು.”

ಪಂಜುಗಂಗೊಳ್ಳಿ 

Tags:
error: Content is protected !!