Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಪಂಜು ಗಂಗೊಳ್ಳಿ  ವಾರದ ಅಂಕಣ:  ಕರಿ-ದೋಸೆಯಲ್ಲಿ ಬದುಕು ಕಟ್ಟಿಕೊಂಡ ವೀಣಾ

ಅಂಗ ವೈಕಲ್ಯವನ್ನು ಮೀರಿ ಸ್ವಾವಲಂಬನೆಯಿಂದ ಇತರರಿಗೆ ಮಾದರಿ

2002ರ ಜುಲೈ ತಿಂಗಳಲ್ಲಿ ಕಾಲೇಜು ವಿದ್ಯಾರ್ಥಿನಿ ಹಾಗೂ ನೃತ್ಯಗಾರ್ತಿಯಾಗಿದ್ದ ೧೮ ವರ್ಷ ಪ್ರಾಯದ ಬೆಂಗಳೂರಿನ ವೀಣಾ ಅಂಬರೀಶ್ ಕಾಲೇಜಿಗೆ ಹೋಗುವ ಸಲುವಾಗಿ ರಸ್ತೆ ದಾಟುತ್ತಿದ್ದರು. ಆಗ ‘ಸಿಗ್ನಲ್ ಜಂಪ್’ ಮಾಡಿ ಬಂದ ಒಂದು ಬಿಎಂಟಿಸಿ ಬಸ್ಸು ಅವರ ಮೇಲೆ  ಹರಿದು, ಅವರ ಬಲ ಪಾದ ಗಂಭೀರ ರೂಪದಲ್ಲಿ ಘಾಸಿಗೊಂಡು, ಆಸ್ಪತ್ರೆ ಸೇರಿದರು. ಏನಾದರೂ ಮಾಡಿ ಅವರ ಕಾಲನ್ನು ಉಳಿಸಿಕೊಳ್ಳಬೇಕು ಎಂದು ವೈದ್ಯರು ಮೂರು ಶಸ್ತ್ರಚಿಕಿತ್ಸೆಗಳನ್ನು ಮಾಡಿದರೂ ಪ್ರಯೋಜನವಾಗಲಿಲ್ಲ. ಆಗ ಅವರು ವೀಣಾರ ಎಡ ತೊಡೆಯ ಮಾಂಸವನ್ನು ತೆಗೆದು ಗಾಯಗೊಂಡ ಪಾದಕ್ಕೆ ಕಸಿ ಮಾಡಿದರು. ಆ ಪ್ರಯತ್ನವೂ ಯಶಸ್ವಿಯಾಗಲಿಲ್ಲ. ಅದರ ನಂತರ, ಇನ್ನೂ ಮೂರು ಬಾರಿ ಮಾಂಸ ತೆಗೆದು ಕಸಿ ಮಾಡಿದರು. ಅವುಗಳಿಂದಲೂ ಏನೂ ಪ್ರಯೋಜನವಾಗಲಿಲ್ಲ. ಆಗ ವೈದ್ಯರು ಬೇರಾವ ದಾರಿಯೂ ಇಲ್ಲ ಎಂದು ಹೇಳಿ, ಬೇರೆಡೆಯ ಇನ್ನೊಂದಷ್ಟು ಚರ್ಮವನ್ನು ತೆಗೆದು ಗಾಯದ ಮೇಲೆ ಕಸಿ ಮಾಡಿ, ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದರು.

ಆಸ್ಪತ್ರೆಯಿಂದ ಮನೆಗೆ ಬಂದ ವೀಣಾ ಮುಂದಿನ ಎರಡು ವರ್ಷಗಳ ಕಾಲ ಊರುಗೋಲು ಹಿಡಿದು ನಡೆದರು. ಪ್ರತೀ ಹೆಜ್ಜೆಯೂ ಅವರಿಗೆ ತೀವ್ರ ನೋವು ಕೊಡುತ್ತಿತ್ತು. ಮೂರು ಬಾರಿ ಶಸ್ತ್ರಚಿಕಿತ್ಸೆ ಮಾಡುವಾಗ ಬೆನ್ನುಮೂಳೆಗೆ ಅರಿವಳಿಕೆ ಇಂಜೆಕ್ಷನ್ ಕೊಟ್ಟ ಪರಿಣಾಮವಾಗಿ ಅವರ ಬೆನ್ನು ಮೂಳೆ ದುರ್ಬಲಗೊಂಡಿತ್ತು. ಕಾಲೇಜು ಶಿಕ್ಷಣದ ಜೊತೆಯಲ್ಲಿ ನೃತ್ಯವನ್ನೂ ಕಲಿಯುತ್ತಿದ್ದ ವೀಣಾಗೆ ಮೂರು ಹೆಜ್ಜೆ ಹಾಕುವುದೂ ಅತ್ಯಂತ ಶ್ರಮದ ಕೆಲಸವಾಯಿತು. ಕೋಲು ಹಿಡಿದು ನಡೆಯುವಂತಾದ ತನ್ನ ಪರಿಸ್ಥಿತಿಯನ್ನು ನೋಡಿ ಅವರಿಗೆ ಸಹಜವಾಗಿಯೇ ತಮ್ಮ ಭವಿಷ್ಯದ ಬಗ್ಗೆ ಆತಂಕ ಹುಟ್ಟಿ, ಖಿನ್ನತೆಗೆ ಜಾರಿ, ಆತ್ಮಹತ್ಯೆಗೂ ಪ್ರಯತ್ನಿಸಿದರು.

೨೦೧೩ರಲ್ಲಿ ವೀಣಾ ತನ್ನ ಬೋರ್ಡ್ ಪರೀಕ್ಷೆಗೆ ಎರಡು ತಿಂಗಳಿರುವಾಗ ತಂದೆಯ ಸಹಾಯದಿಂದ ಒಂದು ಕೋಚಿಂಗ್ ತರಗತಿಗೆ ಸೇರಿ, ಅಭ್ಯಾಸ ಮಾಡಿ, ಒಳ್ಳೆ ಅಂಕಗಳನ್ನು ಪಡೆದು ಪಾಸಾದರು. ಆದರೆ, ತನ್ನ ಅಂದಿನ ದೈಹಿಕ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಕಾಲೇಜಿಗೆ ಹೋಗಿ ಬರುವುದು ಬರುವುದು ಬಹಳ ಕಷ್ಟವಾಗಿ ಪರಿಣಮಿಸಿ, ಅವರು ಪಾಂಡಿಚೇರಿಯಲ್ಲಿದ್ದ ತಮ್ಮ ಅಜ್ಜಿ ಮನೆಯಲ್ಲಿ ನೆಲೆಸಿ ಡಿಗ್ರಿ ಮುಗಿಸಿದರು. ಮುಂದೆ ಅವರು ಕೆಲವು ಸಮಯ ಬ್ಯಾಂಕೊಂದರಲ್ಲಿ ಕೆಲಸ ಮಾಡಿ, ನಂತರ ಒಂದು ಅಮೆರಿಕನ್ ಐಟಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಅವರು ಬೆಳಿಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಆರರ ತನಕ ಕೆಲಸ ಮಾಡುವುದರ ಜೊತೆಗೆ ಕೆಲವೊಮ್ಮೆ ರಾತ್ರಿ ಒಂಬತ್ತೂವರೆ ಹೊತ್ತಿಗೆ ಗ್ರಾಹಕರ ಸಂದರ್ಶನ ಮಾಡುತ್ತ ಅದು ಬೆಳಿಗ್ಗೆ ಒಂದು, ಎರಡು ಗಂಟೆಯ ತನಕವೂ ನಡೆಯುತ್ತಿತ್ತು. ಅದು ಅವರ ಕಾಲು ನೋವಿನ ಮೇಲೆ ಒತ್ತಡ ಹೇರಿ ಸೋಂಕು ತಗಲಿ, ೧೫ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ನಂತರ ಅವರು ತಮ್ಮ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟರು.

ಇದನ್ನು ಓದಿ: ನಯನ ಮನೋಹರ ಭೂ ಶಿರ – ಕೇಪ್‌ಟೌನ್

ಈ ಮಧ್ಯೆ ನಡೆದ ಒಂದು ಸಣ್ಣ ಘಟನೆ ವೀಣಾ ತನ್ನ ಬದುಕನ್ನು ನೋಡುತ್ತಿದ್ದ ದೃಷ್ಟಿಕೋನವನ್ನೇ ಬದಲಾಯಿಸಿತು. ಈಗಲೂ ಅವರ ಪಾದದ ಗಾಯ ಗುಣವಾಗಿಲ್ಲ. ಪ್ರತೀ ಬಾರಿ ಅವರು ಮನೆಯಿಂದ ಹೊರ ಹೋಗುವಾಗ ಆ ಭಾಗಕ್ಕೆ ಬ್ಯಾಂಡೇಜು ಹಚ್ಚಬೇಕಾಗುತ್ತದೆ. ಆ ದಿನ ಅವರು ಅಂಗವೈಕಲ್ಯ ಪ್ರಮಾಣ ಪತ್ರ ಪಡೆದುಕೊಳ್ಳುವ ಸಲುವಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಅವರು ಒಂದು ಚಿಕ್ಕ ಮಗುವಿನ ಆರೈಕೆ ಮಾಡುತ್ತ, ಅದರೊಂದಿಗೆ ಆಟವಾಡುತ್ತಿದ್ದ ಒಬ್ಬಳು ಮಹಿಳೆಯನ್ನು ನೋಡಿದರು. ಆಕೆಗೆ ಎರಡೂ ಕಾಲುಗಳಿರಲಿಲ್ಲ. ಆದರೂ ಆಕೆ ತುಮಕೂರಿನಿಂದ ತನ್ನ ಮಗುವನ್ನು ಎತ್ತಿಕೊಂಡು ಬೆಂಗಳೂರಿಗೆ ಬಂದಿದ್ದಳು. ಆಕೆಯನ್ನು ಮಾತಾಡಿಸಿದಾಗ ಮನೆಯಲ್ಲಿ ಅಡುಗೆ ಮಾಡುವುದೂ ಆಕೆಯೇ ಎಂಬುದು ತಿಳಿಯಿತು. ಎರಡೂ ಕಾಲುಗಳಿಲ್ಲದ ಆಕೆ ಅಷ್ಟು ಸಂತೋಷದಿಂದ ಒಬ್ಬಳು ಸಾಮಾನ್ಯಳಂತೆ ಬದುಕುವುದನ್ನು ನೋಡಿ ವೀಣಾರಿಗೆ ತನ್ನ ನೋವು ಏನು ಮಹಾ ಎಂಬ ಭಾವನೆ ಹುಟ್ಟಿ ಅವರ ಧೋರಣೆ ಬದಲಾಯಿತು. ಎರಡೂ ಕಾಲುಗಳಿಲ್ಲದ ಆಕೆ ಅಷ್ಟೆಲ್ಲ ಮಾಡುವುದು ಸಾಧ್ಯವಾದರೆ ಪಾದದ ಒಂದು ಗಾಯವನ್ನು ಮೀರಲು ನನಗೇಕೆ ಸಾಧ್ಯವಾಗುವುದಿಲ್ಲ? ಎಂದು ಅವರು ಆಲೋಚಿಸಿದರು.

ವೀಣಾರಿಗೆ ಈಗ ೩೧ ವರ್ಷ ಪ್ರಾಯ. ಅಡುಗೆ ಮಾಡುವುದು ಅವರ ಬಲು ಅಚ್ಚುಮೆಚ್ಚಿನದಾಗಿತ್ತು. ಉದ್ಯೋಗಕ್ಕೆ ರಾಜೀನಾಮೆ ನೀಡಿದ ನಂತರ ಅವರು ಮುಂದೇನು ಮಾಡುವುದೆಂದು ಚಿಂತಿಸುತ್ತಿದ್ದಾಗ ಬೆಂಗಳೂರಲ್ಲಿ ಸಣ್ಣದೊಂದು ‘ಫುಡ್ ಕಾರ್ಟ್’ ಪ್ರಾರಂಭಿಸಬಾರದೇಕೆ ಎಂದು ಯೋಚಿಸಿದರು. ಆದರೆ, ಕೊರೊನಾ ನಂತರ ಈಗ ಎಲ್ಲೆಡೆಗಳಲ್ಲೂ ಒಂದಲ್ಲ ಒಂದು ರೀತಿಯ ಫುಡ್ ಕಾರ್ಟ್‌ಗಳು ಅಣಬೆಗಳಂತೆ ತಲೆ ಎತ್ತಿರುವುದನ್ನು ಕಾಣಬಹುದು.

ಅಂತಹದರಲ್ಲಿ ತಾನು ಏನಾದರೂ ವಿಶೇಷ ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಿ ಮಾರಿದರೆ ಮಾತ್ರವೇ ಯಶಸ್ಸು ಸಿಗುವ ಸಾಧ್ಯತೆ ಇದೆ ಎಂದು ಆ ನಿಟ್ಟಿನಲ್ಲಿ ಆಲೋಚಿಸಿದಾಗ ಅವರಿಗೆ ಹೊಳೆದದ್ದು ಕರಿ ದೋಸೆ. ಕರಿ ದೋಸೆ ಒಂದು ವಿಶಿಷ್ಟವಾದ ದೋಸೆ. ಇದು ತಮಿಳುನಾಡಿನ ಮಧುರೈ ಮೂಲದ್ದು ಎನ್ನಲಾಗುತ್ತದೆ. ಇದು ಅಲ್ಲಿನ ಕುರಿಗಾಹಿ ಕೋಣಾರ್ ಸಮುದಾಯದ ದಪ್ಪನೆ ವಿಶಿಷ್ಟ ದೋಸೆ. ಅದರಲ್ಲಿ ಮೂರು ಪದರಗಳಿರುತ್ತವೆ. ಮೊದಲ ಪದರ ಸಾಮಾನ್ಯ ದೋಸೆಯಂತಿರುತ್ತದೆ. ಅದರ ಎರಡನೇ ಪದರ ಮೊಟ್ಟೆಯದು. ಮೂರನೇ ಪದರ ಮಟನ್ ಕೀಮಾ. ಮೊದಲಿಗೆ ಸಾಮಾನ್ಯ ದೋಸೆಯಂತೆ ಅಕ್ಕಿ ಮತ್ತು ಉದ್ದು ಕಡೆದು ತಯಾರಿಸಿದ ಬಂದವನ್ನು ಬಿಸಿ ಕಾವಲಿಯ ಮೇಲೆ ಹುಯ್ಯಲಾಗುತ್ತದೆ. ಅದರ ಮೇಲೆ ಒಂದು ಅಥವಾ ಎರಡು ಮೊಟ್ಟೆಗಳನ್ನು ಒಡೆದು ಹಾಕಿ ಎರಡನೇ ಪದರವನ್ನು ಮಾಡಲಾಗುತ್ತದೆ.

ಆ ಪದರದ ಮೇಲೆ ಮೂರನೇ ಪದರವಾಗಿ ಮಟನ್ ಕೀಮಾವನ್ನು ಸವರಲಾಗುತ್ತದೆ. ಅದಕ್ಕೆ ವಿಶೇಷವಾಗಿ ತಯಾರಿಸಿದ ಮಸಾಲಾ ಹಚ್ಚಿ,ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ, ಮಗುಚಿ ಹಾಕಿದರೆ ಕರಿ ದೋಸೆ ತಯಾರ್. ತೆಂಗಿನಕಾಯಿ ಚಟ್ನಿ ಅಥವಾ ಮಟನ್ ಗ್ರೇವಿಯ ಜೊತೆ ತಿನ್ನಲುಬಲು ರುಚಿಯಾಗಿರುತ್ತದೆ. ಮಟನ್ ಬದಲು ಚಿಕನ್ ಕೀಮಾ ಬಳಸಿಯೂ ಕರಿ ದೋಸೆ ಮಾಡಬಹುದು.

ಇದನ್ನು ಓದಿ: ಭತ್ತ ಖರೀದಿಗೆ ಮುಂದಾಗದ ರಾಜ್ಯ ಸರ್ಕಾರ

ಕರಿ ದೋಸೆ ವೀಣಾರ ಬಹಳ ಅಚ್ಚುಮೆಚ್ಚಿನ ತಿನಿಸು ಆಗಿತ್ತು. ತನ್ನ ಬಾಲ್ಯದಿಂದಲೂ ಬೆಂಗಳೂರಲ್ಲೆಲ್ಲಿಯೂ ಕರಿ ದೋಸೆ ಮಾರುವ ಒಂದೇ ಒಂದು ಹೋಟೆಲೂ ಅವರಿಗೆ ಕಂಡಿರಲಿಲ್ಲ. ಕರಿ ದೋಸೆಗೆ ವಿಶೇಷ ರುಚಿಕೊಡುವುದು ಅದಕ್ಕೆ ಬಳಸುವ ಮಸಾಲೆ. ವೀಣಾ ಅಂಬರೀಶ್ ಎರಡು ತಿಂಗಳು ಶ್ರಮಪಟ್ಟು ಕರಿ ದೋಸೆ ಮಸಾಲೆಯನ್ನು ತಯಾರಿಸುವುದನ್ನುಕಲಿತುಕೊಂಡರು. ನಂತರ ಏಪ್ರಿಲ್ ೨೦೨೩ರಲ್ಲಿ ಜೆ.ಪಿ.ನಗರದಲ್ಲಿ ಒಂದುಫುಡ್ ಕಾರ್ಟನ್ನು ಪ್ರಾರಂಭಿಸಿದರು. ವೀಣಾರ ಕಾಲಿನ ಸಮಸ್ಯೆ ಕಾರಣಕ್ಕೆ ಅವರ ಮನೆಯವರು ಪ್ರಾರಂಭದಲ್ಲಿ ಅವರ ನಿರ್ಧಾರವನ್ನು ಅನುಮೋದಿಸದಿದ್ದರೂ ವೀಣಾ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಅವರ ಪ್ರಕಾರ ತಾನು ಆಫೀಸಲ್ಲಿ ಕುಳಿತು ದಿನಕ್ಕೆ ಎಂಟು ಗಂಟೆಗಳ ಕಾಲ ಡೆಸ್ಕ್ ಕೆಲಸ ಮಾಡಲು ಸಾಧ್ಯವಾದರೆ ನಾಲ್ಕು ಗಂಟೆಗಳ ಕಾಲ ಒಂದು ಫುಡ್ ಕಾರ್ಟನ್ನು ನಡೆಸುವುದು ಬಹಳ ಕಷ್ಟವೇನಲ್ಲ. ಅವರ ಪತಿ ಅವರ ಬೆಂಬಲಕ್ಕೆ ನಿಂತದ್ದು ಅವರಿಗೆ ಇನ್ನಷ್ಟು ಬಲ ನೀಡಿತು.

ಆದರೆ, ಐಟಿ ಕಂಪೆನಿ ಕೆಲಸ ಎಷ್ಟೇ ಕಷ್ಟಾವಾದರೂ ಹವಾನಿಯಂತ್ರಿತ ತಣ್ಣನೆ ಕೋಣೆಯಲ್ಲಿ ಕುಳಿತು ಕೆಲಸ ಮಾಡುವುದಕ್ಕೂ ರಸ್ತೆ ಬದಿಯಲ್ಲಿ ಬೆವರುಸುರಿಸುತ್ತ, ದೂಳು ತಿನ್ನುತ್ತ ದುಡಿಯುವುದಕ್ಕೂ ಎಷ್ಟು ವ್ಯತ್ಯಾಸವಿದೆ ಎಂದು ಅರಿವಾಗಲು ವೀಣಾರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಬೆಳಿಗ್ಗೆ ನಾಲ್ಕೂವರೆ ಗಂಟೆಗೆ ಅವರ ದಿನಚರಿ ಶುರುವಾಗುತ್ತದೆ. ಮುಂದಿನ ಮೂರು ಗಂಟೆಗಳ ಕಾಲ ಕರಿ ದೋಸೆ ತಯಾರಿಗೆ ಬೇಕಾಗುವ ಮಸಾಲೆ, ಚಟ್ನಿ ಮೊದಲಾದವುಗಳನ್ನು ಅಡುಗೆ ಮಾಡಿಟ್ಟುಕೊಂಡು, ಏಳೂವರೆಯಿಂದ ಹನ್ನೊಂದೂವರೆ ತನಕ ವ್ಯಾಪಾರ ಮಾಡುತ್ತಾರೆ. ಒಂದು ಸಾಮಾನ್ಯ ದೋಸೆಗೆ ೧೦ ರೂಪಾಯಿಯಾದರೆ ಒಂದು ಕರಿ ದೋಸೆಗೆ ೧೫೦ ರೂಪಾಯಿ ತನಕ ದರ. ಫಿಟ್‌ನೆಸ್ ಟ್ರೈನರ್ಆಗಿರುವ ಅವರ ಪತಿ ಪ್ರತಿ ದಿನ ಫುಡ್‌ಕಾರ್ಟನ್ನು ತಯಾರು ಮಾಡಲು ಸಹಕರಿಸುತ್ತಾರೆ. ಉಳಿದಂತೆ ಮಾಂಸ, ಮೊಟ್ಟೆ ಹಾಗೂ ಇತರ ಎಲ್ಲಾ ಅಡುಗೆ ಸಾಮಾನುಗಳ ಖರೀದಿಯನ್ನು ವೀಣಾ ತಾವೇ ಏಕಾಂಗಿಯಾಗಿ ಮಾಡುತ್ತಾರೆ.

ಪ್ರತೀದಿನ ನಾಲ್ಕು ಗಂಟೆಗಳ ಕಾಲ ನಿಂತೇ ವ್ಯಾಪಾರ ಮಾಡುವುದು ಕಷ್ಟವಾದರೂ ವೀಣಾ ಅಂಬರೀಶ್, ‘…ಇನ್ನೂ ನನ್ನ ಕಾಲು ನೋವು ಇದೆ. ಆದರೆ, ನನಗಿಂತಲೂ ಶೋಚನೀಯ ಸ್ಥಿತಿಯಲ್ಲಿರುವವರನ್ನು ನೋಡಿ ನನಗೆ ಆ ಪರಿಸ್ಥಿತಿ ಇಲ್ಲವಲ್ಲ ಎಂಬ ಸಮಾಧಾನದಿಂದ ಬದುಕನ್ನು ಕಟ್ಟಿಕೊಳ್ಳುತ್ತಿದ್ದೇನೆ. ಕಷ್ಟಗಳನ್ನು ದಾಟಿ ಹೋದರೇನೇ ಬದುಕಲ್ಲವೇ?’ ಎಂದು ಹೇಳುತ್ತಾರೆ.

” ಬೆಳಿಗ್ಗಿನ ನಾಲ್ಕೂವರೆ ಗಂಟೆಗೆ ವೀಣಾ ಅವರ ದಿನಚರಿ ಶುರುವಾಗುತ್ತದೆ. ಮುಂದಿನ ಮೂರು ಗಂಟೆಗಳ ಕಾಲ ಕರಿ ದೋಸೆ ತಯಾರಿಗೆ ಬೇಕಾಗುವ ಮಸಾಲೆ, ಚಟ್ನಿ ಮೊದಲಾದವುಗಳನ್ನು ಅಡುಗೆ ಮಾಡಿಟ್ಟುಕೊಂಡು, ಏಳೂವರೆಯಿಂದ ಹನ್ನೊಂದೂವರೆ ತನಕ ವ್ಯಾಪಾರ ಮಾಡುತ್ತಾರೆ.”

Tags:
error: Content is protected !!