Mysore
28
overcast clouds

Social Media

ಬುಧವಾರ, 04 ನವೆಂಬರ್ 2026
Light
Dark

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಕಬ್ಬಿನ ಸಿಹಿಯನ್ನು ಹೆಚ್ಚಿಸಿದ ಜಾನಕಿ ಅಮ್ಮಾಳ್  

ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಪ್ರಪ್ರಥಮ ಭಾರತೀಯ ಮಹಿಳೆ 

ಸಸ್ಯಶಾಸ್ತ್ರದಲ್ಲಿ ಗಿಡ, ಮರ ಮತ್ತು ಹೂಗಳ ಹೆಸರುಗಳು ಬಹಳ ಆಸಕ್ತಿದಾಯಕವಾಗಿರುತ್ತವೆ. ಆನೇಕ ಗಿಡ, ಮರ ಮತ್ತು ಹೂಗಳ ಹೆಸರುಗಳು ಅವುಗಳನ್ನು ಕಂಡು ಹಿಡಿದ ಅಥವಾ ಅವುಗಳ ಮೇಲೆ ಮಹತ್ವದ ಸಂಶೋಧನೆಗಳನ್ನು ನಡೆಸಿದ ಸಸ್ಯ ವಿಜ್ಞಾನಿಗಳ ಹೆಸರಾಗಿರುತ್ತವೆ. ಹಾಗೂ ಇಂತಹ ಹೆಸರುಗಳು ಸಾಮಾನ್ಯವಾಗಿ ವಿದೇಶಗಳ ವಿಜ್ಞಾನಿಗಳ ಹೆಸರಾಗಿರುತ್ತವೆ. ಭಾರತೀಯ ವಿಜ್ಞಾನಿಗಳ  ಹೆಸರಾಗಿರುವ ಸಾಧ್ಯತೆ ತೀರಾ ತೀರಾ ಕಡಿಮೆ. ಅದರಲ್ಲೂ, ಒಬ್ಬ ಭಾರತೀಯ ಮಹಿಳಾ ವಿಜ್ಞಾನಿಯ ಹೆಸರಾಗಿರುವುದಂತೂ ಇಲ್ಲವೇ ಇಲ್ಲ ಅನ್ನುವಷ್ಟು ಅಪರೂಪ. ಅಂತಹ ಒಂದು ಹೆಸರು ಮ್ಯಾಗ್ನೊಲಿನಾ ಕೋಬಸ್ ಜಾನಕಿ ಅಮ್ಮಾಳ್.

ಜಾನಕಿ ಅಮ್ಮಾಳ್‌ರ ಜೀವನ ಕತೆಯೇ ಒಂದು ಸಾಹಸಗಾತೆ. ಅವರ ಪೂರ್ಣ ಹೆಸರು ಎಡವಳೆತ್ ಕಕ್ಕತ್ ಜಾನಕಿ ಅಮ್ಮಾಳ್. ಅವರು ಹುಟ್ಟಿದುದು ೧೮೯೭ರ ನವೆಂಬರ್ ೪ ರಂದು. ಕೇರಳದ ಒಂದು ತೀಯಾ ಕುಟುಂಬದಲ್ಲಿ. ಅವರ ತಂದೆ ದಿವಾನ್ ಬಹದೂರ್ ಇ ಕೆ ಕೃಷ್ಣನ್. ಅವರು ಆಗ ಮದ್ರಾಸ್ ಪ್ರಾಂತದಲ್ಲಿದ್ದ ತೆಲಿಶೆರಿಯಾದ ಸಬ್-ಜಜ್ ಆಗಿದ್ದರು. ಅವರಿಗೆ ಇಬ್ಬರು ಹೆಂಡತಿಯರಿದ್ದು ಒಟ್ಟು ೧೯ ಮಕ್ಕಳಿದ್ದರು. ನೈಸರ್ಗಿಕ ವಿಜ್ಞಾನದಲ್ಲಿ ತೀವ್ರ ಆಸಕ್ತರಾಗಿದ್ದ ಅವರು ಉತ್ತರ ಮಲಬಾರ್ ಪ್ರದೇಶದ ಹಕ್ಕಿಗಳ ಮೇಲೆ ಎರಡು ಪುಸ್ತಕಗಳನ್ನು ಬರೆದಿದ್ದರು.

ಇತರ ಸಹೋದರಿಯರು ಆ ಕಾಲದ ಸಂಪ್ರದಾಯದಂತೆ ಸಣ್ಣಪ್ರಾಯದಲ್ಲೇ ಮದುವೆಯಾಗಿ ಹೋದರೆ, ತಂದೆಯ ವಿಜ್ಞಾನದ  ಆಸಕ್ತಿಯನ್ನು ಬಳುವಳಿಯಾಗಿ ಪಡೆದ ಜನಕಿ ಅಮ್ಮಾಳ್ ಮಾತ್ರ ತೆಲಿಶೆರಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ಮದ್ರಾಸಿಗೆ ಹೋದರು. ಅಲ್ಲಿ ಅವರು ಕ್ವೀನ್ಸ್ ಮೇರಿ ಕಾಲೇಜಿನಲ್ಲಿ ಬ್ಯಾಚಲರ್ ಡಿಗ್ರಿ ಪಡೆದು, ನಂತರ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಸ್ಯಶಾಸ್ತ್ರದಲ್ಲಿ ಆನರ‍್ಸ್ ಮಾಡಿದರು. ಅದರ ನಂತರ ಅವರು ಮದ್ರಾಸಿನ ವುಮೆನ್ಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಮೂರು ವರ್ಷ ಕಲಿಸಿದರು. ನಂತರ ಅವರಿಗೆ ಆಗಿನ ಖ್ಯಾತ ಬಾರ್ಬೋರ್ ಸ್ಕಾಲರ್‌ಶಿಪ್ ಸಿಕ್ಕಿ, ೧೯೨೪ರಲ್ಲಿ ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಕಲಿಯಲು ಹೋದರು. ೧೯೨೫ರಲ್ಲಿ ವಿಜನದಲ್ಲಿ ಮಾಸ್ಟರ‍್ಸ್ ಪಾಸ್ ಮಾಡಿ, ೧೯೩೧ರಲ್ಲಿ ಸಸ್ಯಶಾಸದಲ್ಲಿ ಡಾಕ್ಟರೇಟ್ ಪಡೆದ ಪ್ರಪ್ರಥಮ ಭಾರತೀಯ ಮಹಿಳೆ ಎಂಬ ದಾಖಲೆ ಬರೆದರು.

ಡಾಕ್ಟರೇಟ್‌ನೊಂದಿಗೆ ಭಾರತಕ್ಕೆ ಮರಳಿದ ಜಾನಕಿ ಅಮ್ಮಾಳ್ ೧೯೩೨-೧೯೩೪ರ ನಡುವೆ ತಿರುವನಂತಪುರಂನ ‘ಮಾಹಾರಾಜಸ್ ಕಾಲೇಜ್ ಆಫ್ ಸೈನ್ಸ್’ನಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡಿದರು. ನಂತರ, ಕೊಯಂಬತೂರಿನ ‘ಶುಗರ್‌ಕೇನ್ ಬ್ರೀಡಿಂಗ್ ಇನ್ಸ್ಟಿಟ್ಯೂಟ್’ನಲ್ಲಿ ಜಿನೆಸಿಸ್ಟ್ ಆಗಿ ಸೇರಿದರು. ಆಗ ಭಾರತ ಕಬ್ಬನ್ನು ಪರದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಏಕೆಂದರೆ, ಆಗ ಭಾರತದಲ್ಲಿ ಹೇರಳ ಪ್ರಮಾಣದಲ್ಲಿ ಕಬ್ಬನ್ನು ಬೆಳೆಯಲಾಗುತ್ತಿದ್ದರೂ, ಅದು ಆಮದಾಗುವ ಕಬ್ಬಿನಷ್ಟು ಸಿಹಿ ಇರುತ್ತಿರಲಿಲ್ಲ. ಹಾಗಾಗಿ, ಭಾರತದಲ್ಲಿ ಬೆಳೆಯಲಾಗುವ ಕಬ್ಬಿನ ಸಿಹಿಯನ್ನು ಹೆಚ್ಚಿಸಲು ಸಂಶೋಧನೆ ನಡೆಸುವ ಸಲುವಾಗಿ ಕೊಯಂಬತ್ತೂರಿನಲ್ಲಿ ‘ಶುಗರ್ ಕೇನ್ ಬ್ರೀಡಿಂಗ್ ಇನ್ಸ್ಟಿಟ್ಯೂಟ್’ ನ್ನು ಸ್ಥಾಪಿಸಲಾಗಿತ್ತು.

೧೯೩೪ರಲ್ಲಿ ಜನಕಿ ಅಮ್ಮಾಳ್ ‘ಶುಗರ್‌ಕೇನ್ ಬ್ರೀಡಿಂಗ್ ಇನ್ಸ್ಟಿಟ್ಯೂಟ್’ ಸೇರಿ, ಕಬ್ಬಿನ ಮೇಲೆ ನಡೆಸಿದ ಪ್ರಯೋಗ ಮತ್ತು ಸಂಶೋಧನೆಗಳ ಫಲವಾಗಿ ಹೆಚ್ಚು ಸಿಹಿ ರುಚಿಯ ಕಬ್ಬಿನ ತಳಿಗಳು ಆವಿಷ್ಕಾರಗೊಂಡವು. ಈ ಕಾರಣಕ್ಕಾಗಿ ಅವರನ್ನು ‘ಭಾರತದ ಕಬ್ಬಿನ ಸಿಹಿಯನ್ನು ಹೆಚ್ಚಿಸಿದ ಮಹಿಳೆ’ ಎಂದು ಕರೆಯಲಾಗುತ್ತದೆ. ಆದರೆ, ತನ್ನ ಲಿಂಗ, ಜಾತಿ ಮತ್ತು ಅವಿವಾಹಿತೆ ಎಂಬ ಕಾರಣಗಳಿಂದಾಗಿ ಎದುರಿಸಬೇಕಾಗಿ ಬಂದ ಕಿರುಕುಳಗಳಿಂದ ಬೇಸತ್ತ ಅವರು ೧೯೪೦ರಲ್ಲಿ ದೇಶವನ್ನು ತೊರೆದು, ಲಂಡನ್ನಿಗೆ ಹೋಗಿ, ಅಲ್ಲಿನ ‘ಜಹ್ನ್ ಇನ್ನಸ್ ಹಾರ್ಟಿಕಲ್ಚರಲ್ ಇನ್ಸ್ಟಿಟ್ಯೂಷನ್’ ಸೇರಿದರು.

ಅದು ಇಂಗ್ಲೆಂಡ್ ಜರ್ಮನಿ ಮೇಲೆ ಯುದ್ಧ ಘೋಷಿಸಿದ ಸಮಯ. ಬಾಂಬುಗಳ ದಾಳಿಯಲ್ಲಿ ವಿದ್ಯುತ್ ಹೋಗುತ್ತಿತ್ತು. ಕಿಟಕಿ ಗಾಜುಗಳು ಚೂರಾಗುತ್ತಿದ್ದವು. ಜಾನಕಿ ಅಮ್ಮಾಳ್ ರಾತ್ರಿ ಹೊತ್ತು ಮಂಚದಡಿ ಅಡಗಿಕೊಂಡು, ಬೆಳಿಗ್ಗೆ ಪ್ರಯೋಗಾಲಯಕ್ಕೆ ಹೋಗಿ, ಗಾಜಿನ ಚೂರುಗಳನ್ನೆಲ್ಲ ಗುಡಿಸಿ ಹೊರ ಹಾಕಿ, ಗಿಡಗಳ ಮೇಲಿನ ತಮ್ಮ ಸಂಶೋಧನಾ ಕೆಲಸವನ್ನು ಮಾಡುತ್ತಿದ್ದರು. ೧೯೪೬ರಲ್ಲಿ ಅವರು ವೇಸ್ಲಿಯ ‘ರಾಯಲ್ ಹಾರ್ಟಿಕಲ್ಚರಲ್ ಸೊಸೈಟಿ ’ ಸೇರಿದರು. ಅಲ್ಲಿ ಅವರು ಬಿಳಿ ಹೂ ಬಿಡುವ ಮ್ಯಾಗ್ನೊಲಿನಾ ಎಂಬ ಗಿಡದ ಮೇಲಿನ ಮಹತ್ತರ ಸಂಶೋಧನೆಗಾಗಿ ಆ ಹೂವಿನ ಗಿಡಕ್ಕೆ ‘ಮ್ಯಾಗ್ಲೊಲಿನಾ ಕೋಬಸ್ ಜನಕಿ ಅಮ್ಮಾಳ್’ ಎಂದು ನಾಮಕರಣ ಮಾಡಿ ಅವರನ್ನು ಗೌರವಿಸಲಾಯಿತು.

೧೯೫೨ರಲ್ಲಿ ಆಗಿನ ಪ್ರಧಾನಿ ಜವಾಹರ ಲಾಲ್ ನೆಹರೂ ದೇಶದ ಕೃಷಿಯನ್ನು ಉತ್ತಮಗೊಳಿಸಲು ಸಹಕರಿಸಬೇಕೆಂದು ಕೇಳಿಕೊಂಡ ಮೇರೆಗೆ ಜನಕಿ ಅಮ್ಮಾಳ್ ಭಾರತಕ್ಕೆ ಮರಳಿ, ‘ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ’ ಸಂಸ್ಥೆಯ ಪ್ರಪ್ರಥಮ ಡೈರೆಕ್ಟರ್ ಜನರಲ್ ಆದರು.

೧೯೭೭ರಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ತನ್ನ ಜೀವಿತದ ೬೦ ವರ್ಷಗಳನ್ನು ಜೆನೆಟೆಸಿಸ್ಟ್, ಫೀಲ್ಡ್ ಬಯಾಲಾಜಿಸ್ಟ್, ಪೇಲಿಓಬೋಟಾನಿಸ್ಟ್, ಎತ್ನೋಬೋಟಾನಿಸ್ಟ್ ಹಾಗೂ ಎಕ್ಸ್ಪರಿಮೆಂಟಲ್ ಬ್ರೀಡರ್ ಆಗಿ ನೂರಾರು ಹೂ ಗಿಡಗಳ ಮೇಲೆ ಸಂಶೋಧನೆ ಮಾಡುತ್ತ ಕಳೆದ ಜಾನಕಿ ಅಮ್ಮಾಳ್ ೧೯೮೪ರ ಫೆಬ್ರವರಿಯಲ್ಲಿ ತಮ್ಮ ೮೭ನೇ ವಯಸ್ಸಿನಲ್ಲಿ ನಿಧನರಾದರು. ೨೦೦೦ ದಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಅವರ ಹೆಸರಲ್ಲಿ ‘ಜಾನಕಿ ಅಮ್ಮಾಳ್ ನೇಷನಲ್ ಅವಾರ್ಡ್ ಆಫ್ ಟ್ಯಾಕ್ಸೊನೋಮಿ’ ಎಂಬ ಒಂದು ಪ್ರಶಸ್ತಿಯನ್ನು ಹುಟ್ಟು ಹಾಕಿತು. ೧೯೫೯ರಿಂದ ೧೯೬೯ರ ತನಕ ಅವರು ಕೆಲಸ ಮಾಡಿದ್ದ ಜಮ್ಮುವಿನ ಹರ್ಬೇರಿಯಮ್ ಸಂಸ್ಥೆಗೆ ‘ಜಾನಕಿ ಅಮ್ಮಾಳ್ ಹರ್ಬೇರಿಯಮ್’ ಎಂದು ಅವರ ಹೆಸರನ್ನು ನೀಡಲಾಯಿತು.

ಭಾರತದಲ್ಲಿ ಮಹಿಳೆಯರು ಸಾಮಾನ್ಯ ಶಾಲಾ ಶಿಕ್ಷಣ ಪಡೆಯುವುದೇ ಅಪರೂಪವಾಗಿದ್ದ ಕಾಲಘಟ್ಟದಲ್ಲಿ ಹಿಂದುಳಿದ ಸಮುದಾಯದ ಜನಕಿ ಅಮ್ಮಾಳ್ ಒಬ್ಬ ಅಂತಾರಾಷ್ಟ್ರೀಯ ಮಟ್ಟದ ವಿಜನಿಯಾಗಿ ಬೆಳೆದ ಪರಿ ಬೆರಗುಗೊಳಿಸುವಂತಹದು. ಅವರ ನಂತರ ಭಾರತದಲ್ಲಿ ಅವರಂತಹ ಇನ್ನೊಬ್ಬ ಜೆನೆಟೆಸಿಸ್ಟ್ ಹುಟ್ಟಿಲ್ಲ ಅನ್ನುವುದು ಅವರ ಸಾಧನೆಯ ಹೆಗ್ಗಳಿಕೆಯನ್ನು ಸಾಬೀತು ಪಡಿಸುತ್ತದೆ.

” ಹಿಂದುಳಿದ ಸಮುದಾಯದ ಜಾನಕಿ ಅಮ್ಮಾಳ್ ಒಬ್ಬ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನಿಯಾಗಿ ಬೆಳೆದ ಪರಿ ಬೆರಗುಗೊಳಿಸುವಂತಹದು. ಅವರ ನಂತರ ಭಾರತದಲ್ಲಿ ಅವರಂತಹ ಇನ್ನೊಬ್ಬ ಜೆನೆಟೆಸಿಸ್ಟ್ ಹುಟ್ಟಿಲ್ಲ ಅನ್ನುವುದು ಅವರ ಸಾಧನೆಯ ಹೆಗ್ಗಳಿಕೆಯನ್ನು ಸಾಬೀತು ಪಡಿಸುತ್ತದೆ.”

 

 

 

Tags:
error: Content is protected !!