Mysore
15
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಪಹಲ್ಗಾಮ್ ಹತ್ಯಾಕಾಂಡ; ಪಾಕ್ ಮೇಲೆ ಆಘಾತಕಾರಿ ಪರಿಣಾಮ

ಜಮ್ಮು-ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣದಲ್ಲಿ ಭಯೋತ್ಪಾದಕರು ನಡೆಸಿದ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತ ಸರ್ಕಾರ ತೆಗೆದುಕೊಂಡ ನಿರ್ಣಯಗಳಿಂದಾಗಿ ಪಾಕಿಸ್ತಾನ ತೀವ್ರ ಆರ್ಥಿಕ ಪರಿಣಾಮಗಳನ್ನು ಎದುರಿಸಲಿದೆ. ಈ ಘೋರ ಕೃತ್ಯದಲ್ಲಿ ಪಾಕಿಸ್ತಾನದ ಉಗ್ರಗಾಮಿಗಳ ಪಾತ್ರ ಇದೆ ಎಂದು ಸರ್ಕಾರ ಖಚಿತಪಡಿಸಿಕೊಂಡ ನಂತರ ಭಾರತ ಪ್ರತೀಕಾರ ಕ್ರಮಗಳನ್ನು ತೆಗೆದುಕೊಂಡಿದೆ. ಪಾಕಿಸ್ತಾನ ಈ ಕೃತ್ಯದಲ್ಲಿ ತನ್ನ ಪಾತ್ರ ಏನೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರೂ ಅದನ್ನು ನಂಬುವ ಸ್ಥಿತಿಯಲ್ಲಿ ಭಾರತವಂತೂ ಇಲ್ಲ. ಪಾಕಿಸ್ತಾನ ಭಯೋತ್ಪಾದನೆಯ ಮೂಲ ತಾಣ ಎನ್ನುವುದು ಈಗಾಗಲೇ ಜಗತ್ತಿಗೆ ಗೊತ್ತಿರುವ ಸಂಗತಿಯಾಗಿದೆ.

ಭಾರತ ತೆಗೆದುಕೊಂಡ ಪ್ರತೀಕಾರ ಕ್ರಮಗಳಲ್ಲಿ ಬಹಳ ಮುಖ್ಯವಾದುದು ಎಂದರೆ ಪಾಕಿಸ್ತಾನದ ಆರ್ಥಿಕ ಸೆಲೆಯಾದ ಸಿಂದೂ ನದಿ ಜಲ ಒಪ್ಪಂದವನ್ನು ರದ್ದು ಮಾಡಿರುವುದು. ಚೀನಾದ ಟಿಬೆಟ್ ವಲಯದಲ್ಲಿ ಹುಟ್ಟಿ ಹಿಮಾಲಯ ಪರ್ವತಪ್ರದೇಶದ ಮೂಲಕ ಭಾರತದಲ್ಲಿ ಹರಿದು ಅರಬ್ಬಿ ಸಮುದ್ರ ಸೇರುವ ಈ ನದಿಯ ನೀರು ಹಂಚಿಕೆ ಕುರಿತಂತೆ 1960ರಷ್ಟು ಹಿಂದೆಯೇ ಉಭಯ ದೇಶಗಳ ನಡುವೆ ಒಪ್ಪಂದ ಆಗಿದೆ. ಸಿಂಧೂ ನದಿ ವ್ಯಾಪ್ತಿಯ ಉಪನದಿಗಳಾದ ಝೇಲಂ, ಚಿನಾಬ್, ರಾವಿ, ಬಿಯಾಸ್ ಮತ್ತು ಸಟ್ಲೇಜ್ ನದಿಗಳ ನೀರನ್ನು ಹಂಚಿಕೊಳ್ಳುವ ಸಂಬಂಧವಾದ ಒಪ್ಪಂದ ಇದು. ಒಪ್ಪಂದದ ಪ್ರಕಾರ ಬಿಯಾಸ್, ರಾವಿ, ಸಟ್ಲೇಜ್ ನದಿ ನೀರಿನ ಮೇಲಿನ ನಿಯಂತ್ರಣವನ್ನು ಭಾರತಕ್ಕೆ ನೀಡಲಾಗಿದೆ. ಅಂತೆಯೇ ಸಿಂಧೂ, ಝೇಲಂ ಮತ್ತು ಜಿನಾಬ್ ನದಿ ನೀರಿನ ಮೇಲೆ ಪಾಕಿಸ್ತಾನಕ್ಕೆ ಹೆಚ್ಚಿನ ಹಕ್ಕು ನೀಡಲಾಗಿದೆ. ಈ ನದಿಗಳ ಮೂಲ ಭಾರತದಲ್ಲಿ ಇರುವುದರಿಂದ ಭಾರತ ಶೇ 20ರಷ್ಟು ನೀರನ್ನು ಬಳಸಬಹುದಾಗಿದೆ. ವಿಶ್ವ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ, ಪಾಕಿಸ್ತಾನದ ಅಧ್ಯಕ್ಷ ಹಾಗೂ ಮಿಲಿಟರಿ ಮುಖ್ಯಸ್ಥ ಅಯೂಬ್ ಖಾನ್ 1960 ಸೆಪ್ಟೆಂಬರ್ 19ರಂದು ಕರಾಚಿಯಲ್ಲಿ ಒಪ್ಪಂದಕ್ಕೆ ಸಹಿ ಮಾಡಿದ್ದರು. ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವು ಬಾರಿ ಯುದ್ಧಗಳು ನಡೆದರೂ, ಹಲವು ಬಾರಿ ಘರ್ಷಣೆಗಳು ನಡೆದರೂ ಎಂದೂ ಈ ಒಪ್ಪಂದವನ್ನು ಸ್ಥಗಿತಗೊಳಿಸಿರಲಿಲ್ಲ.

ಈಗ ಒಪ್ಪಂದವನ್ನು ಅಮಾನತ್ತಿನಲ್ಲಿ ಇಟ್ಟಿರುವುದರಿಂದ ಪಾಕಿಸ್ತಾನ ಕೃಷಿ ಕ್ಷೇತ್ರದಲ್ಲಿ ಭಾರಿ ಹಿನ್ನಡೆ ಎದುರಿಸಲಿದೆ. ಪಾಕಿಸ್ತಾನದ ಶೇ. 80 ಭಾಗ ಕೃಷಿ ಭಾರತದಲ್ಲಿ ಹುಟ್ಟಿ ಹರಿಯುವ ರಾವಿ, ಬಿಯಾಸ್ ಮತ್ತು ಸಟ್ಲೇಜ್ ನದಿಗಳನ್ನೇ ಅವಲಂಬಿಸಿದೆ. ಕೃಷಿಯಷ್ಟೇ ಅಲ್ಲ, ಕೈಗಾರಿಕೆ, ವಿದ್ಯುತ್, ಕುಡಿಯುವ ನೀರಿಗೆ ಜನರು ಸಿಂಧೂ ನದಿಯ ಉಪನದಿಗಳ ನೀರನ್ನು ಅವಲಂಬಿಸಿದ್ದಾರೆ. ಗೋಧಿ, ಭತ್ತ, ಕಬ್ಬು, ಹತ್ತಿ ಮುಂತಾದ ಪ್ರಮುಖ ಬೆಳೆಗಳ ಉತ್ಪಾದನೆ ಕುಂಠಿತವಾಗಿ ಆಹಾರ ಕೊರತಯೆ ಉಂಟಾಗಬಹುದು.

ಪಾಕಿಸ್ತಾನದ ಅರ್ಥವ್ಯವಸ್ಥೆ ಶೇ. 20 ರಷ್ಟು ಕೃಷಿಯ ಮೇಲೆ ನಿಂತಿದ್ದು, ಈ ಬೆಳವಣಿಗೆಯಿಂದ ಆ ದೇಶದ ಆರ್ಥಿಕ ಸ್ಥಿರತೆಗೆ ತೊಂದರೆಯಾಗಬಹುದು. ಪಾಕಿಸ್ತಾನ ಈ ಆರ್ಥಿಕ ಅಸ್ಥಿರತೆಯನ್ನು ನಿಭಾಯಿಸುವ ಸ್ಥಿತಿಯಲ್ಲಿ ಇಲ್ಲ. ಈಗಾಗಲೇ ಪಾಕಿಸ್ತಾನ ಆರ್ಥಿಕವಾಗಿ ಕುಸಿದಿದೆ. ಐಎಂಎಫ್, ವಿಶ್ವ ಬ್ಯಾಂಕ್ ಗಳಿಂದ ಪಡೆದ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಹೆಣಗುತ್ತಿದೆ. ಚೀನಾ, ಸೌದಿ ಅರೇಬಿಯಾ ಮತ್ತಿತರ ದೇಶಗಳಿಂದಲೂ ಅಪಾರ ಪ್ರಮಾಣದಲ್ಲಿ ಸಾಲ ಮಾಡಿ ಕೊಂಡಿದೆ. ಸರ್ಕಾರಿ ಸಿಬ್ಬಂದಿ ಮತ್ತು ಸೇನಾ ಸಿಬ್ಬಂದಿಗೆ ವೇತನ ಕೊಡಲೂ ಹೆಣಗುತ್ತಿದೆ. ಇದರಿಂದ ಜನರಲ್ಲಿ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ. ಒಂದು ಕಡೆ ರಾಜಕೀಯ ಸ್ಥಿರತೆ ಇಲ್ಲದ ಸ್ಥಿತಿಯನ್ನು ಸರ್ಕಾರ ಎದುರಿಸುತ್ತಿದೆ. ಮಿತ್ರ ಪಕ್ಷಗಳ ನೆರವಿನಿಂದ ಸರ್ಕಾರ ನಡೆಸುತ್ತಿರುವ ಷಹಬಾಜ್ ಷರೀಫ್‌ಗೆ ಮೊದಲ ಸಮಸ್ಯೆ ಮಾಜಿ ಪ್ರಧಾನಿ ಇಮ್ರಾನ್ ಖಾನ್. ಅವರನ್ನು ಜೈಲಿನಲ್ಲಿಟ್ಟು ವಿರೋಧಪಕ್ಷಗಳನ್ನು ತುಳಿದು ಸರ್ಕಾರ ನಡೆಸಲಾಗುತ್ತಿದೆ. ಆಫ್ಘಾನಿಸ್ತಾನಕ್ಕೆ ನೆರವಾಗಲು ತಾನೇ ಹುಟ್ಟುಹಾಕಿದ ತಾಲಿಬಾನ್ ಉಗ್ರವಾದಿಗಳು ಈಗ ಪಾಕಿಸ್ತಾನದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಸೈನಿಕ ನೆಲೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಬಲೂಚಿಸ್ತಾನದಲ್ಲಿ ಪ್ರತ್ಯೇಕತಾ ಹೋರಾಟ ಬಲವಾಗಿಯೇ ನಡೆಯುತ್ತಿದೆ. ಈ ಎಲ್ಲ ಸಮಸ್ಯೆಗಳನ್ನೂ ನಿಭಾಯಿಸಲು ಷಹಬಾಜ್ ಷರೀಫ್ ಸಮರ್ಥರು ಎಂಬ ಬಗ್ಗೆಯೇ ಮಿತ್ರ ಪಕ್ಷಗಳಲ್ಲಿ ನಂಬಿಕೆ ಇಲ್ಲವಾಗಿದೆ. ಜನರು ರೊಚ್ಚಿಗೇಳಬಹುದು ಎನ್ನುವ ಸ್ಥಿತಿಯನ್ನು ಅವರು ಎದುರಿಸುತ್ತಿದ್ದಾರೆ. ಈ ಸ್ಥಿತಿಯಲ್ಲಿರುವ ಸರ್ಕಾರಕ್ಕೆ ಈಗ ಎದುರಾಗಿರುವುದು ಹೊಸ ಬಿಕ್ಕಟ್ಟು. ಅದನ್ನು ಎದುರಿಸಲು ಪಾಕಿಸ್ತಾನ ಎಂದಿನ ಮಾತಿನ ದಾಳಿಯನ್ನು ಮುಂದುವರಿಸಬಹುದು. ಪಾಕ್ ರಾಷ್ಟ್ರೀಯತೆಯನ್ನು, ಮುಸ್ಲಿಮ್ ಜನಾಂಗೀಯ ಭಾವನೆಯನ್ನು ಕೆರಳಿಸಬಹುದು. ಆದರೆ ಅಂಥ ಯತ್ನಗಳು ಬಹಳ ಕಾಲ ನಡೆಯುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಪಾಕಿಸ್ತಾನದ ಜೊತೆಗಿನ ವಹಿವಾಟನ್ನೂ ಭಾರತ ಸ್ಥಗಿತಗೊಳಿಸಿದೆ. ಕಳೆದ ಸಾಲಿನಲ್ಲಿ ಭಾರತ ಸುಮಾರು 3,800 ಕೋಟಿ ರೂ. ಮೌಲ್ಯದ ಸರಕುಗಳನ್ನು ರಫ್ತು ಮಾಡಿದೆ. ಭಾರತ ಪ್ರಮುಖವಾಗಿ ಸಕ್ಕರೆ, ತರಕಾರಿ, ಕಾಫಿ, ಟೀ, ಸಂಬಾರ ಪದಾರ್ಥ, ದ್ವಿದಳ ಧಾನ್ಯ, ರಬ್ಬರ್ , ಆಟೋ ಬಿಡಿಭಾಗ, ಕುಕ್ಕುಟ ಆಹಾರ ಅಲ್ಲದೆ ರಾಸಾಯನಿಕಗಳು, ಔಷಧ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಪಾಕಿಸ್ತಾನ, ಹಣ್ಣು, ಒಣ ಖರ್ಜೂರ, ಎಣ್ಣೆ ಬೀಜ, ಸಿಮೆಂಟ್ ಮುಂತಾದುವನ್ನು ಭಾರತಕ್ಕೆ ಮಾರುತ್ತಿದೆ. ಭಾರತ ರಫ್ತು ನಿಲ್ಲಿಸುವುದರಿಂದ ಪಾಕಿಸ್ತಾನದ ಮಾರುಕಟ್ಟೆಯ ಮೇಲೆ ದೊಡ್ಡ ಹೊಡೆತ ಬೀಳಲಿದೆ.

ಭಾರತದ ಈ ಕ್ರಮಗಳಿಂದ ಪಾಕಿಸ್ತಾನದ ನಾಯಕರು ಕಂಗೆಟ್ಟಿರುವಂತೆ ಕಾಣುತ್ತಿದೆ. ಭಾರತದಂತೆ ಪಾಕಿಸ್ತಾನವೂ ನಿರ್ಬಂಧಗಳನ್ನು ಹೇರಿದೆ. ವೀಸಾ ನೀಡಿಕೆಯನ್ನು ರದ್ದು ಮಾಡಿದೆ. ಪಾಕಿಸ್ತಾನದಲ್ಲಿರುವ ಭಾರತೀಯರು ತತ್ ಕ್ಷಣ ದೇಶ ಬಿಡುವಂತೆ ತಿಳಿಸಲಾಗಿದೆ. ರಾಜತಾಂತ್ರಿಕರ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಭಾರತ ಏನು ಕ್ರಮ ತೆಗೆದುಕೊಂಡಿತೋ ಅದನ್ನೇ ಪಾಕಿಸ್ತಾನವೂ ಮಾಡಿದೆ. ಒಪ್ಪಂದ ರದ್ದತಿ ವಿರುದ್ಧ ವಿಶ್ವಸಂಸ್ಥೆ ಅಥವಾ ಅಂತಾರಾಷ್ಟ್ರೀಯ ಕೋರ್ಟಿಗೆ ದೂರು ಸಲ್ಲಿಸಲು ಪಾಕಿಸ್ತಾನ ಯೋಚಿಸುತ್ತಿದೆ. ವಿಶ್ವಬ್ಯಾಂಕಿಗೂ ಮನವಿ ಮಾಡಿಕೊಳ್ಳಲಿದೆ. ಸಿಂಧೂ ಜಲ ಒಪ್ಪಂದ ಅಮಾನತ್ತು ಕ್ರಮ ಯುದ್ಧ ಘೋಷಣೆಗೆ ಸಮ ಎಂದು ಪಾಕಿಸ್ತಾನ ಹೇಳಿದೆ. ವಿಮಾನಗಳ ಸಂಚಾರಕ್ಕೆ ಕೊಟ್ಟಿದ್ದ ವಾಯು ಪ್ರದೇಶ ಅನುಮತಿಯನ್ನು ಪಾಕಿಸ್ತಾನ ರದ್ದು ಮಾಡಿರುವುದು ಭಾರತಕ್ಕೆ ಸ್ವಲ್ಪ ಸಮಸ್ಯೆಯಾಗಬಹುದು. ಹತ್ತಿರದ ಮಾರ್ಗ ಬಿಟ್ಟು ಸುತ್ತಿ ಬಳಸಿ ವಿಮಾನಗಳು ಸಂಚರಿಸಬೇಕಾಗಬಹುದು. ಇದರಿಂದ ವಾಯು ಸಂಚಾರ ದರಗಳೂ ಏರಿಕೆಯಾಗಬಹುದು.

ಸಿಂಧೂ ನದಿ ಒಪ್ಪಂದವನ್ನು ಭಾರತ ರದ್ದು ಮಾಡಿರುವ ಕ್ರಮದ ಪರಿಣಾಮ ತತ್‌ಕ್ಷಣ ಕಾಣುವುದಿಲ್ಲ. ಬಹುಶಃ ಮುಂದಿನ ಒಂದೆರಡು ವರ್ಷಗಳಲ್ಲಿ ಅದರ ಕೆಟ್ಟ ಪರಿಣಾಮ ಕಾಣಬಹುದು. ಆದರೆ ವ್ಯಾಪಾರ ವಹಿವಾಟು ರದ್ದು ತತ್ ಕ್ಷಣದ ಪರಿಣಾಮ ಆಗಲಿದೆ. ಮುಖ್ಯವಾಗಿ ಬಾಂಧವ್ಯ ಕೆಟ್ಟುಹೋಗಲಿದೆ. ಇದರಿಂದ ಯುದ್ಧದ ವಾತಾವರಣವೂ ನಿರ್ಮಾಣವಾಗಬಹುದು. ಎರಡೂ ದೇಶಗಳು ಪರಮಾಣು ಅಸ್ತ್ರಗಳುಳ್ಳ ದೇಶಗಳಾದ್ದರಿಂದ ವಿಶ್ವದಾದ್ಯಂತ ಕಳವಳ ಕಂಡುಬಂದಿದೆ. ಅಮೆರಿಕ, ರಷ್ಯಾ ಸೇರಿದಂತೆ ವಿಶ್ವದ ಬಹುಪಾಲು ದೇಶಗಳು ಭಾರತದ ಬೆಂಬಲಕ್ಕೆ ನಿಂತಿವೆ. ಪಾಕಿಸ್ತಾನದ ಮಿತ್ರ ದೇಶ ಚೀನಾ ಕೂಡಾ ಪಹಲ್ಗಾಮ್ ಹತ್ಯಾಕಾಂಡವನ್ನು ಖಂಡಿಸಿದೆ. ಪಾಕಿಸ್ತಾನದ ಗಡಿಯಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತ ಮಿಲಿಟರಿ ದಾಳಿ ನಡೆಸಿದ ಪಕ್ಷದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು. ಬಹುಶಃ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ವಿಶ್ವಮಟ್ಟದಲ್ಲಿಯೇ ಆಗುವ ಸಾಧ್ಯತೆ ಇದೆ.

Tags:
error: Content is protected !!