Mysore
26
overcast clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ಮಾಹಿತಿ ಹಕ್ಕು ಕಾಯ್ದೆ ನಿರಾಕರಣೆಯ ಹಾದಿಯಲಿ

ಪ್ರಜಾತಂತ್ರದ ರಕ್ಷಣೆಯ ಹಾದಿಯಲ್ಲಿ ಸಾರ್ವಭೌಮ ಪ್ರಜೆಗಳ ಮಾಹಿತಿ ಹಕ್ಕು ಅತ್ಯಮೂಲ್ಯವಾದುದು

ಪ್ರಜಾಪ್ರಭುತ್ವದ ಮೂಲ ತತ್ವ ಇರುವುದು ಚುನಾಯಿತ ಪ್ರತಿನಿಧಿಗಳ ಸಂವಿಧಾನ ಬದ್ಧತೆ, ಶಾಸನ ಬದ್ಧತೆ, ಪ್ರಾಮಾಣಿಕತೆ, ಸಾಂವಿಧಾನಿಕ ನೈತಿಕತೆ, ಪಾರದರ್ಶಕತೆ ಹಾಗೂ ಬಹಳ ಮುಖ್ಯವಾಗಿ ಜನ ಬದ್ಧತೆಯಲ್ಲಿ. ವರ್ತಮಾನದ ಸಂದರ್ಭದಲ್ಲಿ ಈ ಎಲ್ಲ ಮೌಲ್ಯಗಳೂ ಶಿಥಿಲವಾಗುತ್ತಿರುವುದನ್ನು ನೋಡುತ್ತಲೇ ಬಂದಿದ್ದೇವೆ. ಈ ಹಿಂದೆ ಅನುಷ್ಠಾನಗೊಳಿಸಿದ್ದ ಜನಸ್ನೇಹಿ ಕಾಯ್ದೆಗಳನ್ನೂ ಕೂಡ, ಕಾರ್ಪೋರೇಟ್-ಬಂಡವಾಳಶಾಹಿ ಸ್ನೇಹಿ (Crony capitalism) ಆರ್ಥಿಕ ನೀತಿಗಳ ಸಲುವಾಗಿ, ಶಿಥಿಲಗೊಳಿಸುತ್ತಿರುವುದನ್ನೂ ನೋಡುತ್ತಿದ್ದೇವೆ. ಆದಾಗ್ಯೂ ಈ ಕಾಯ್ದೆಗಳು ತಮ್ಮ ಶಾಸನಬದ್ಧ ಪ್ರಸ್ತುತತೆಯನ್ನು ಉಳಿಸಿಕೊಂಡು ಬಂದಿವೆ.

ಸಮಾಜದ ಅವಕಾಶವಂಚಿತ-ಶೋಷಿತ ಸಮುದಾಯಗಳನ್ನು, ಅಂಚಿನಲ್ಲಿರುವ ಸಮಾಜಗಳನ್ನು ಸುಸ್ಥಿರ-ನಿಶ್ಚಿತ ಬದುಕಿನ ಕಡೆಗೆ ಕರೆದೊಯ್ಯುವ ಹಾದಿಯಲ್ಲಿ ಸಂವಿಧಾನ ಕಲ್ಪಿಸಿರುವ ಮೂಲ ತತ್ವ ಸಂಹಿತೆಗಳ ಜೊತೆಗೇ ಕೆಲವು ಜನರ ಕಾಯ್ದೆಗಳೂ ಕೂಡ ಸಮಾಜಗಳ ಸರ್ವತೋಮುಖ ಬೆಳವಣಿಗೆಗೆ, ಆ ಸಮಾಜಗಳ ಸದಸ್ಯರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಪೂರಕವಾಗಿ ಕಾರ್ಯನಿರ್ವಹಿಸಿವೆ.

ಪಾರದರ್ಶಕ ಆಡಳಿತ ಅಥವಾ ಆಳ್ವಿಕೆ ಎಂಬ ಉದಾತ್ತ ಮೌಲ್ಯವನ್ನು ಬಹುತೇಕ ರಾಜಕೀಯ ಪಕ್ಷಗಳು ಗ್ರಾಂಥಿಕ ರೂಪದಲ್ಲಿ ಮಾತ್ರವೇ ಅನುಸರಿಸುವುದರಿಂದ, ಚುನಾಯಿತ ಸರ್ಕಾರಗಳ ಮೇಲೆ ಪಾರದರ್ಶಕತೆಯ ಜವಾಬ್ದಾರಿಯನ್ನು ಹೇರುವ ಕಾಯ್ದೆ ಕಾನೂನುಗಳು ಸಮಾಜದ ಅಭ್ಯುದಯದ ದೃಷ್ಟಿಯಿಂದ, ಜನಸಾಮಾನ್ಯರಿಗೆ ಅಪ್ಯಾಯಮಾನವಾಗಿ ಕಾಣುತ್ತವೆ. ಇಂತಹ ಒಂದು ಕ್ರಾಂತಿಕಾರಿ ಕಾನೂನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ). ಪ್ರಜಾಪ್ರಭುತ್ವದ ಉಳಿವಿಗಾಗಿ ‘ಜನರ, ಜನರಿಂದ, ಜನರಿಗಾಗಿ ಆಳ್ವಿಕೆ’ ಇದು ಪ್ರಜಾಪ್ರಭುತ್ವದ ಮೂಲ ಅಂತಃಸ್ವತ್ವ. ಅರ್ಥಾತ್ ಸರ್ಕಾರದ ಬಳಿ ಇರುವ ಎಲ್ಲ ಮಾಹಿತಿ ದತ್ತಾಂಶಗಳೂ ಸಹ ಜನರಿಗೆ ಲಭ್ಯವಾಗಬೇಕು. ಈ ಮಾಹಿತಿಗಳು ಸಾರ್ವಭೌಮ ಪ್ರಜೆಗಳ ಹಕ್ಕು, ಅದನ್ನು ಜನರ ಪರವಾಗಿ ಕಾಪಿಡುವ ಜವಾಬ್ದಾರಿ ಚುನಾಯಿತ ಸರ್ಕಾರಗಳ ಮೇಲಿರುತ್ತದೆ. ಈ ಸೂತ್ರದ ಅನುಸಾರ ಆರ್‌ಟಿಐ ಕಾಯ್ದೆಯ ಅಡಿಯಲ್ಲಿ ಸರ್ಕಾರಗಳು ಎಲ್ಲ ಮಾಹಿತಿಗಳನ್ನೂ ಜನರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಆದರೆ ದೇಶದ ಸಾರ್ವಭೌಮತ್ವ, ರಕ್ಷಣೆ ಮತ್ತು ಭದ್ರತೆಯ ದೃಷ್ಟಿಯಿಂದ ಕೆಲವು ವಿನಾಯಿತಿಗಳನ್ನೂ ಅಳವಡಿಸಲಾಗಿರುತ್ತದೆ.

ಇದನ್ನು ಓದಿ : ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿರುವ ಅರ್ಜಿಯನ್ನು ಉಡಾಫೆ ಮಾಡಬೇಡಿ : ಕೆ.ಬದ್ರುದ್ದೀನ್

ಆರ್‌ಟಿಐ ಕಾಯ್ದೆಯಲ್ಲಿ ಅಂತಹ ಒಂದು ವಿನಾಯಿತಿ ಕಾಯ್ದೆಯ ಸೆಕ್ಷನ್ ೮(೧)(ಜೆ) ನಿರೂಪಿಸುತ್ತದೆ. ಇದು ವೈಯಕ್ತಿಕ ಮಾಹಿತಿಯನ್ನು ಕುರಿತಾದ ನಿಬಂಧನೆ. ಈ ಸೆಕ್ಷನ್‌ನ ಮೂಲ ಸ್ವರೂಪದಲ್ಲಿ ಮಾಹಿತಿ ಹಕ್ಕನ್ನು ವ್ಯಕ್ತಿಗತ ಗೋಪ್ಯತೆಯೊಂದಿಗೆ ಸಮತೋಲನಗೊಳಿಸುವ ಉದ್ದೇಶವನ್ನು ಕಾಣಬಹುದು. ಸಾರ್ವಜನಿಕ ಚಟುವಟಿಕೆಗಳಿಗೆ ಸಂಬಂಧ ಇಲ್ಲದಿದ್ದಲ್ಲಿ ಅಥವಾ ವ್ಯಕ್ತಿಯ ಗೋಪ್ಯತೆಯ ಮೇಲೆ ಅನಗತ್ಯವಾಗಿ ಅತಿಕ್ರಮಿಸುವ ಉದ್ದೇಶ ಇದ್ದಲ್ಲಿ ವೈಯಕ್ತಿಕ ಮಾಹಿತಿಯನ್ನು ನೀಡಲು ನಿರಾಕರಿಸಬಹುದು ಎಂದು ಹೇಳುತ್ತದೆ. ಈಗ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ ಕಾಯ್ದೆ (ಡಿಪಿಡಿಪಿ) ಆರ್‌ಟಿಐ ಕಾಯ್ದೆಯ ಸೆಕ್ಷನ್ ೮(೧)(ಜೆ)ಗೆ ತಿದ್ದುಪಡಿ ಮಾಡಿದೆ.

ಈ ಕಾಯ್ದೆಯ ಅನುಸಾರ ಬಹುಪಾಲು ಮಾಹಿತಿಗಳನ್ನು ಸುಲಭವಾಗಿ ನಿರಾಕರಿಸಬಹುದಾಗಿದೆ. ಇಲ್ಲಿ ವೈಯಕ್ತಿಕ ಮಾಹಿತಿ ಎಂಬ ಪದದ ವ್ಯಾಖ್ಯಾನವೇ ಕಳಕಳಿಯ ವಿಷಯವಾಗಿದೆ. ತಿದ್ದುಪಡಿ ಮಾಡಲಾಗಿರುವ ಆರ್‌ಟಿಐ ಕಾಯ್ದೆಯಲ್ಲಿ, ಹೊಸ ಡಿಪಿಡಿಪಿ ಕಾಯ್ದೆಗೆ ಸಂಬಂಧಿಸದಂತೆ, ‘ವೈಯಕ್ತಿಕ ಮಾಹಿತಿ’ ಯನ್ನು ಸ್ಪಷ್ಟವಾಗಿ, ದೃಢತೆಯಿಂದ ನಿರ್ವಚಿಸಲಾಗಿಲ್ಲ. ವ್ಯಕ್ತಿ ಎನ್ನುವ ಪದವನ್ನು ಸಾಮಾನ್ಯ ನೆಲೆಯಲ್ಲಿ ಪರಿಗಣಿಸುವುದು ಅಂದರೆ ಸ್ವಾಭಾವಿಕ-ಸಾಮಾನ್ಯ ವ್ಯಕ್ತಿ ಎಂದು ಭಾವಿಸುವುದು. ಎರಡನೆಯದಾಗಿ ಡಿಪಿಡಿಪಿ ಕಾಯ್ದೆಯ ಅನುಸಾರ ಪರಿಭಾವಿಸುವುದು ಈ ಕಾಯ್ದೆಯ ವ್ಯಾಖ್ಯಾನವು ವಿಶಾಲ ಸ್ತರವನ್ನು ಹೊಂದಿದ್ದು ‘ಹಿಂದೂ ಅವಿಭಕ್ತ ಕುಟುಂಬ, ಉದ್ದಿಮೆ, ಕಂಪೆನಿ ಹಾಗೂ ವ್ಯಕ್ತಿಗಳ ಯಾವುದೇ ಸಂಘ ಮತ್ತು ಪ್ರಭುತ್ವ ’ವನ್ನು ಸೂಚಿಸುತ್ತದೆ.

ಈ ವ್ಯಾಖ್ಯಾನವನ್ನು ಪರಿಗಣಿಸಿದಲ್ಲಿ, ಎಲ್ಲ ಮಾಹಿತಿಗಳೂ ವೈಯಕ್ತಿಕ ಆಗಿಬಿಡುತ್ತವೆ. ಬಹುಪಾಲು ಮಾಹಿತಿಗಳನ್ನು ಕೆಲವು ವ್ಯಕ್ತಿಗಳಿಗೆ ಸಂಬಂಧಿಸಿದೆ ಎಂದು ನಿರೂಪಿಸಬಹುದು. ಹಾಗಾಗಿ ಮಾಹಿತಿ ನಿರಾಕರಿಸಲು ಕಾನೂನಾತ್ಮಕ ಸಮ್ಮತಿ ದೊರೆಯುತ್ತದೆ. ಇದು ಅಕ್ಷರಶಃ ಮಾಹಿತಿ ಹಕ್ಕು ಎನ್ನುವುದನ್ನು ಮಾಹಿತಿ ನಿರಾಕರಣೆಯ ಹಕ್ಕು ಎಂದು ಅರ್ಥೈಸುವಂತಾಗುತ್ತದೆ. ಈ ವಿಶಾಲ ವ್ಯಾಖ್ಯಾನವು ಪಾರದರ್ಶಕತೆಯ ತಾತ್ವಿಕ ನೀತಿಯನ್ನು ಮೂಲದಲ್ಲೇ ಭಂಗಗೊಳಿಸುತ್ತದೆ. ಈ ಕಾಯ್ದೆಯ ವಾಸ್ತವಿಕ ಪರಿಣಾಮ ಎಂದರೆ ಸಾರ್ವಜನಿಕ ಉತ್ತರದಾಯಿತ್ವ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟಗಳಿಗೆ ಧಕ್ಕೆ ಉಂಟಾಗುತ್ತದೆ. ಇತರ ಶಾಸನಾತ್ಮಕ ಭ್ರಷ್ಟಾಚಾರ ನಿರ್ಬಂಧಕ ಕ್ರಮಗಳು ನಿಷ್ಪ್ರಯೋಜಕವಾಗಿರುವುದರಿಂದ, ಇದು ಗಂಭೀರ ವಿಚಾರವಾಗಿ ಕಾಣುತ್ತದೆ.

ಎರಡನೆಯ ಅಂಶ ಎಂದರೆ, ‘ ವೈಯಕ್ತಿಕ ಮಾಹಿತಿಯ’ ನಿರ್ವಚನೆ ವಿಶಾಲ ನೆಲೆಯಲ್ಲಿರುವುದರಿಂದ ಲೌಕಿಕವಾದರೂ ನಿರ್ಣಾಯಕವಾದ ದಸ್ತಾವೇಜುಗಳನ್ನು ತಡೆಹಿಡಿಯುವುದು ಸಾಧ್ಯವಾಗುತ್ತದೆ. ಉದಾಹರಣೆಗೆ ನಾಗರಿಕರ ತಿದ್ದುಪಡಿಯಾದ ಅಂಕಪಟ್ಟಿಯನ್ನೂ ವೈಯಕ್ತಿಕ ಎಂದು ಪರಿಗಣಿಸಬಹುದು. ಒಬ್ಬ ಅಧಿಕಾರಿ ಸಹಿ ಮಾಡಿರುವ ಸಣ್ಣ ದಸ್ತಾವೇಜನ್ನು ಕೂಡ ವೈಯಕ್ತಿಕ ಮಾಹಿತಿ ಎಂದು ನಿರಾಕರಿಸಬಹುದು. ತತ್ಪರಿಣಾಮವಾಗಿ ಶೇಕಡಾ ೯೦ರಷ್ಟು ಮಾಹಿತಿಗಳನ್ನು ನಿರಾಕರಿಸುವ ಅವಕಾಶವಿರುತ್ತದೆ. ಮೂರನೆಯ ಅಂಶ ಎಂದರೆ, ನಿರ್ಬಂಧಗಳೇ ಇಲ್ಲದ ಭ್ರಷ್ಟಾಚಾರ. ಈ ತಿದ್ದುಪಡಿಗಳು ಭ್ರಷ್ಟರಾಗುವುದನ್ನು ಸುಲಭವಾಗಿಸುತ್ತವೆ. ರಾಜಸ್ಥಾನದಲ್ಲಿ ಅಗೋಚರ ಉದ್ಯೋಗಿ ಅಥವಾ ಪಿಂಚಣಿದಾರರನ್ನು ಗುರುತಿಸಿ, ವೇತನ ತಡೆಹಿಡಿದ ಉದಾಹರಣೆಯ ಹಿನ್ನೆಲೆಯಲ್ಲಿ ನೋಡಿದಾಗ, ಈ ತಿದ್ದುಪಡಿಗಳು ಇಂತಹ ಅಗೋಚರ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆಯುವುದನ್ನೇ ದುಸ್ತರವಾಗಿಸುತ್ತವೆ.

ಇದನ್ನು ಓದಿ : ಮಾಹಿತಿ ಹಕ್ಕು ಆಯೋಗ : ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ನವೆಂಬರ್‌ನಲ್ಲಿ ಕಲಾಪ

ಆರ್‌ಟಿಐ ಕಾಯ್ದೆಯ ಪ್ರಸ್ತುತತೆ-ಮಹತ್ವ ಆರ್‌ಟಿಐ ಕಾಯ್ದೆಯಲ್ಲಿ ಈಗಲೂ ಸೆಕ್ಷನ್ ೮(೨) ಅನ್ವಯ ‘ವಿಶಾಲ ಸಾರ್ವಜನಿಕ ಹಿತಾಸಕ್ತಿ’ಯ ಪರಿಕಲ್ಪನೆ ಮಾನ್ಯತೆ ಪಡೆದಿದ್ದರೂ, ಅದನ್ನು ವಾಸ್ತವದಲ್ಲಿ ಜಾರಿಮಾಡುವುದು ಅಪರೂಪವೂ, ಕಷ್ಟಕರವೂ ಆಗಿರುತ್ತದೆ. ಮಾಹಿತಿ ಪಡೆಯುವುದು ನಾಗರಿಕರ ಮೂಲಭೂತ ಹಕ್ಕು ಆಗಿರುವುದರಿಂದ ಜನರಿಗೆ ಈ ವಿಶಾಲ ಸಾರ್ವಜನಿಕ ಹಿತಾಸಕ್ತಿಯನ್ನು ನಿರೂಪಿಸುವ ಅಗತ್ಯವೇ ಇರುವುದಿಲ್ಲ. ಮಾಹಿತಿಯು ಈಗಾಗಲೇ ವಿನಾಯಿತಿ ಪಡೆದಿದ್ದಲ್ಲಿ ಮಾತ್ರ ಇದು ಅನ್ವಯವಾಗುತ್ತದೆ. ಈ ತಿದ್ದುಪಡಿಗಳ ಗಂಭೀರ ಸ್ವರೂಪದ ಹೊರತಾಗಿಯೂ, ಈ ಹಿಂದಿನ ಆರ್‌ಟಿಐ ತಿದ್ದುಪಡಿಗಳ ಸಂದರ್ಭಕ್ಕೆಹೋಲಿಸಿದರೆ, ಸಾರ್ವಜನಿಕ ವಲಯ ಮತ್ತು ಮಾಧ್ಯಮಗಳು ಹೆಚ್ಚಾಗಿ ಪ್ರತಿರೋಧ ವ್ಯಕ್ತಪಡಿಸದಿರುವುದು, ಚರ್ಚೆ ಮಾಡದಿರುವುದು ಅಚ್ಚರಿ ಮೂಡಿಸುತ್ತದೆ.

ಬಹುಶಃ ಈ ತಿದ್ದುಪಡಿಗಳು ‘ದತ್ತಾಂಶ ರಕ್ಷಣೆ’ಯ ಹೊದಿಕೆ ಹೊಂದಿರುವುದೂ ಈ ನಿರ್ಲಿಪ್ತತೆಯ ಕಾರಣ ಇರಬಹುದು. ಡಿಪಿಡಿಪಿ ಕಾಯ್ದೆಯ ಸೆಕ್ಷನ್ ೮(೨) ಮತ್ತು ಸೆಕ್ಷನ್ ೪೪(೩) ಭಾರತದ ಪ್ರಜಾತಂತ್ರ ವ್ಯವಸ್ಥೆಯ ದೃಷ್ಟಿಯಿಂದ ಮೂಲಭೂತ ಹಿಂಚಲನೆಯ ಸೂಚಕವಾಗಿ ಕಾಣುತ್ತದೆ. ಇಲ್ಲಿ ನಾಲ್ಕು ಅಂಶಗಳನ್ನು ಗಂಭೀರವಾಗಿ ಪರಾಮರ್ಶಿಸ ಬೇಕಾಗುತ್ತದೆ. ಮೊದಲನೆಯದಾಗಿ ದೇಶಾದ್ಯಂತ ಸಾರ್ವಜನಿಕರ ನಡುವೆ, ಮಾಧ್ಯಮಗಳಲ್ಲಿ ವ್ಯಾಪಕವಾದ ಚರ್ಚೆ ನಡೆಯಬೇಕು. ಎರಡನೆಯದಾಗಿ ರಾಜಕೀಯ ಉತ್ತರದಾಯಿತ್ವದ ದೃಷ್ಟಿಯಿಂದ, ಈ ತಿದ್ದುಪಡಿಗಳನ್ನು ರದ್ದು ಮಾಡುವ ಆಶ್ವಾಸನೆಯನ್ನು ಚುನಾವಣೆಗಳ ವೇಳೆ ರಾಜಕೀಯ ಪಕ್ಷಗಳಿಂದ ನಾಗರಿಕರು ಆಗ್ರಹಿಸಬೇಕು. ಮೂರನೆಯದಾಗಿ ಮಾಧ್ಯಮಗಳ ಪರವಾಗಿ ಬಲವಾದ ಸಾರ್ವಜನಿಕ ಅಭಿಪ್ರಾಯವನ್ನು ಸೃಷ್ಟಿಸಬೇಕು. ನಾಲ್ಕನೆ ಯದಾಗಿ ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಇತರ ಯಾವುದೇ ರಾಷ್ಟ್ರ ಮಟ್ಟದ ಚರ್ಚೆಯಂತೆಯೇ ಈ ವಿಷಯವೂ ಕೂಡ ಗಮನ ಸೆಳೆಯಬೇಕು. ಏಕೆಂದರೆ ಮಾಹಿತಿ ಪಡೆಯುವ ಮೂಲಭೂತ ಹಕ್ಕು ಇಲ್ಲಿ ನಷ್ಟವಾಗುತ್ತಿದೆ.

” ‘ಜನರ, ಜನರಿಂದ, ಜನರಿಗಾಗಿ ಆಳ್ವಿಕೆ’ ಇದು ಪ್ರಜಾಪ್ರಭುತ್ವದ ಮೂಲ ಅಂತಃಸ್ವತ್ವ. ಅರ್ಥಾತ್ ಸರ್ಕಾರದ ಬಳಿ ಇರುವ ಎಲ್ಲ ಮಾಹಿತಿ ದತ್ತಾಂಶಗಳೂ ಕೂಡ ಜನರಿಗೆ ಲಭ್ಯವಾಗಬೇಕು”

-ನಾ.ದಿವಾಕರ

Tags:
error: Content is protected !!