ದೆಹಲಿ ಕಣ್ಣೋಟ
ಮತದಾರರ ಪಟ್ಟಿಯ ಗೊಂದಲ, ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳ ನಡುವಿನ ಸೀಟು ಹಂಚಿಕೆ ಜಟಾಪಟಿ ನಡುವೆ ಬಿಹಾರ ರಾಜ್ಯದ ವಿಧಾನಸಭೆ ಮೊದಲ ಹಂತದ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ ಆರಂಭವಾಗಿದೆ. ರಾಜ್ಯ ವಿಧಾನಸಭೆಯ ಒಟ್ಟು ಸ್ಥಾನಗಳು ೨೪೩ ಇದ್ದು ನವೆಂಬರ್ ೬ರಂದು ಮೊದಲ ೧೨೧ಕ್ಷೇತ್ರಗಳಿಗೆ ಹಂತದಲ್ಲಿ ೧೨೧ಕ್ಷೇತ್ರಗಳಲ್ಲಿ ಮತ್ತು ೧೧ರಂದು ಎರಡನೇ ಹಂತದಲ್ಲಿ ೧೨೨ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು ೧೪ರಂದು ಮತ ಎಣಿಕೆ ನಡೆಯಲಿದೆ.
ಇಬ್ಬರ ನಡುವೆ ಪರಸ್ಪರ ಒಳಒಪ್ಪಂದ ಮಾಡಿಕೊಳ್ಳುವುದಕ್ಕೆ ‘ನಾ ಸತ್ತಂಗ ಮಾಡ್ತಿನಿ; ನೀ ಅತ್ತಂಗ ಮಾಡು’ ಎನ್ನುವ ಗಾದೆ ಮಾತನ್ನು ಬಳಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ರೋಜ್‌ಗಾರ್ ಯೋಜನೆಯಂತೆ ಸೆಪ್ಟೆಂಬರ್ ೨೬ರಂದು ದೆಹಲಿಯಲ್ಲಿಯೇ ಕುಳಿತು ವಿಡಿಯೋ ಕಾನರೆನ್ಸ್ ಮೂಲಕ ೭೫ ಲಕ್ಷ ಮಹಿಳೆಯರಿಗೆ ತಲಾ ಹತ್ತು ಸಾವಿರ ರೂ.ಗಳಂತೆ ೭,೫೦೦ ಕೋಟಿ ರೂಪಾಯಿ ಬಿಡುಗಡೆ ಮಾಡಿದರು. ಅದೂ ಸಾಲದು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅಕ್ಟೋಬರ್ ೩ರಂದು ೨೫ ಲಕ್ಷ ಮಹಿಳೆಯರಿಗೆ ೨,೫೦೦ ಕೋಟಿ ರೂಪಾಯಿಯ ನೆರವನ್ನು ಅವರವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಕಾರ್ಯ ನೆರವೇರಿಸಿದರು. ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕೇಂದ್ರ ಚುನಾವಣಾ ಆಯೋಗ ಬಿಹಾರ ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸುವ ಮೂಲಕ ಅಧಿಕೃತವಾಗಿ ಚುನಾವಣೆಯ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಲೋಕಸಭೆ ಚುನಾವಣೆ ನಂತರ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಜನತಾದಳ (ಯು) ತನ್ನ ಹನ್ನೆರಡು ಮಂದಿ ಸದಸ್ಯರು ಬೆಂಬಲ ನೀಡಿದ್ದರ ಫಲವಾಗಿ ೫೪, ೫೭೫ ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳುತಿದೆ. ಇದಲ್ಲದೆ ಕೇಂದ್ರ ಸರ್ಕಾರದಿಂದ ತೆರಿಗೆ ಬಾಬ್ತಿನಿಂದ ೧,೩೮.೫೧೫ ಕೋಟಿ ರೂ. ಹಣವನ್ನು ತನ್ನದಾಗಿಸಿಕೊಳ್ಳುತ್ತಿದೆ. ಮೊದಲ ಹಂತದ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಮತ್ತು ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟವು ಸೀಟು ಹಂಚಿಕೆ ಪ್ರಕ್ರಿಯೆಯನ್ನು ಮುಗಿಸಿದೆ. ಸೀಟು ಹಂಚಿಕೆ ಹೊಂದಾಣಿಕೆ ಬಂದಾಗ ಮೈತ್ರಿಕೂಟಗಳಲ್ಲಿ ಮತ್ತು ಪ್ರತಿಯೊಂದು ಪಕ್ಷದಲ್ಲಿಯೂ ಅಸಮಾಧಾನದ ಬುಗ್ಗೆ ಏಳುವುದು ಸಹಜ. ಅದೀಗ ನಡೆದಿದೆ. ಎನ್‌ಡಿಎ ಮೈತ್ರಿಕೂಟವು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಯು) ಮತ್ತು ಬಿಜೆಪಿ ತಲಾ ೧೦೧ ಕ್ಷೇತ್ರಗಳನ್ನು ಹಂಚಿಕೊಂಡು ಉಳಿದ ಕ್ಷೇತ್ರಗಳನ್ನು ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ ಸೇರಿದಂತೆ ಇತರೆ ಸಣ್ಣಪುಟ್ಟ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ಆದರೆ ಎಲ್‌ಜೆಪಿ (ಪಾಸ್ವಾನ್)ಗೆ ಕೇವಲ ೨೯ ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಟ್ಟಿರುವ ಬಗೆಗೆ ಚಿರಾಗ್ ಪಾಸ್ವಾನ್ ತೀರಾ ಅಸಮಾಧಾನಗೊಂಡಿರುವುದು ಎನ್‌ಡಿಎಗೆ ತಲೆನೋವಾಗಿ ಪರಿಣಮಿಸಿದೆ.
ಇದನ್ನು ಓದಿ: ‘ಅ.೨೭ರಂದು ಕಾವೇರಿ ನದಿ ತೀರದ ಒತ್ತುವರಿ ಸರ್ವೆ’
ಈ ಸೀಟು ಹಂಚಿಕೆ ಮುನ್ನ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಚಿರಾಗ್ ಪಾಸ್ವಾನ್ ಘೋಷಿಸಿ, ನಿತೀಶ್ ವಿರುದ್ಧ ತೊಡೆತಟ್ಟಿ ನಿಂತಿದ್ದ ದಿನಗಳು ಕೇಂದ್ರದ ಎನ್‌ಡಿಎ ನಾಯಕರನ್ನು ಬೆಚ್ಚಿಬೀಳಿಸಿತ್ತು. ಆನಂತರ ಬಿಜೆಪಿಯ ಕೇಂದ್ರದ ನಾಯಕರು ಬಂದು ಚಿರಾಗ್ ಪಾಸ್ವಾನ್ ಅವರನ್ನು ಸಮಾಧಾನಪಡಿಸಿದ್ದು, ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎನ್ನುವ ಸಂದೇಶವನ್ನು ನೀಡಲಾಗಿದೆ. ಆದರೆ ಚಿರಾಗ್ ಪಾಸ್ವಾನ್ ಮತ್ತು ನಿತೀಶ್ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಮುಂದುವರಿದಿದ್ದು, ಚುನಾವಣೆಯ ಮೇಲೆ ಇದು ಹೇಗೆ ಪ್ರಭಾವ ಬೀರಲಿದೆ ಎನ್ನುವುದು ಮುಖ್ಯ.
ಇತ್ತ ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆಯೂ ಅಸಮಾಧಾನ ಸ್ಛೋಟವಾಗಿದೆ. ಕಾಂಗ್ರೆಸ್ ಬಿಹಾರದಲ್ಲಿ ಬಹುತೇಕ ಸತ್ತಂತಿತ್ತು. ಆದರೆ ಮತಗಳ್ಳತನ ಘಟನೆ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆಗಳಲ್ಲಿ ಸುಮಾರು ೬೦ ಲಕ್ಷಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿದ ಚುನಾವಣಾ ಆಯೋಗದ ಕ್ರಮದ ವಿರುದ್ಧ ರಾಹುಲ್ ಗಾಂಧಿ ಹೋರಾಟಕ್ಕಿಳಿದಿದ್ದರಿಂದ ಬಿಹಾರದಲ್ಲಿ ಕಾಂಗ್ರೆಸ್ ಈಗ ಉಸಿರಾಡುವಂತಾಗಿದೆ.
ಈ ಮಧ್ಯೆ ಚುನಾವಣಾ ತಂತ್ರಗಾರಿಕೆಯಲ್ಲಿ ಎತ್ತಿದ ಕೈ ಎಂದು ಹೆಸರುವಾಸಿಯಾಗಿರುವ ಪ್ರಶಾಂತ್ ಕಿಶೋರ್ ತಮ್ಮದೇ ಆದ ಜನ ಸುರಾಜ್ ಪಕ್ಷವನ್ನು ಕಟ್ಟಿದ್ದು ಈಗ ೫೯ ಮಂದಿಯನ್ನು ಕಣಕ್ಕಿಳಿಸುತ್ತಿದ್ದಾರೆ. ಅಚ್ಚರಿ ಎನ್ನುವಂತೆ ಈ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಉತ್ತಮ ಅಡಳಿತವನ್ನು ಬಯಸುವ ಹೊಸ ಪೀಳಿಗೆಯು ಪ್ರಶಾಂತ್ ಕಿಶೋರ್ ಪರ ನಿಂತಿದ್ದಾರೆ. ಆದರೆ ಪ್ರಶಾಂತ್ ಕಿಶೋರ್ ಅಧಿಕಾರಕ್ಕೆ ಬರುವಷ್ಟು ಬಲಿಷ್ಠರಾಗಿಲ್ಲ. ಅವರಿಗೆ ಬಿಹಾರದಲ್ಲಿ ಯಾವುದೇ ರಾಜಕೀಯ ಬೇರುಗಳಿಲ್ಲ. ಆದರೆ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳ ಬಗೆಗೆ ಹತಾಶಗೊಂಡ ಮತದಾರರ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎ ಚುನಾವಣೆ ದುರಿಸಲಿದೆ ಎಂದು ಬಿಜೆಪಿ ಘೋಷಿಸಿದ್ದರೂ, ತನ್ನ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದನ್ನು ಮಾತ್ರ ಘೋಷಿಸದೇ ಇರುವುದು ಅಚ್ಚರಿಯ ಸಂಗತಿಯಾಗಿದೆ. ಬಿಜೆಪಿಯ ಈ ನಿಲುವು ನಿತೀಶ್ ಕುಮಾರ್ ಮತ್ತು ಅವರ ಬೆಂಬಲಿಗರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ. ಆದರೆ ನಿರೀಕ್ಷೆಯಂತೆ ಆರ್‌ಜೆಡಿಯ ತೇಜಸ್ವಿ ಯಾದವ್ ಇಂಡಿಯಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಇತ್ತೀಚೆಗೆ ಕೆಲವು ಚುನಾವಣಾ ಸಮೀಕ್ಷೆ ನಡೆಸುವ ಸಂಸ್ಥೆಗಳು ಮಾಡಿರುವ ಸಮೀಕ್ಷೆ ಪ್ರಕಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವರ್ಚಸ್ಸು ಕುಗ್ಗಿರುವುದು ಕಂಡು ಬಂದಿದೆ. ಅವರ ವರ್ಚಸ್ಸು ಶೇ.೨೪ ಇದ್ದರೆ ತೇಜಸ್ವಿಯಾದವ್ ವರ್ಚಸ್ಸು ಶೇ.೩೫ ಇರುವುದು ಕಂಡು ಬಂದಿರುವುದು ಬಿಜೆಪಿಗೆ ಆತಂಕವನ್ನು ತಂದೊಡ್ಡಿದೆ. ಆದ್ದರಿಂದ ಎನ್ ಡಿ ಎ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಗೋಪ್ಯವಾಗಿ ಇಡಲಾಗಿದೆ. ಬಿಜೆಪಿಯು ಸುಶೀಲ್ ಕುಮಾರ್ ಮೋದಿ ಸಾವಿನ ನಂತರ ವರ್ಚಸ್ವಿ ನಾಯಕನಿಲ್ಲದೆ ನಿತೀಶ್ ಕುಮಾರ್ ಅವರನ್ನು ಆಶ್ರಯಿಸುವಂತಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಮತ್ತೆ ಅಧಿಕಾರಕ್ಕೆ ತರಬಹುದೆಂಬ ನಂಬಿಕೆ ಮತದಾರರಲ್ಲಿದೆ.
ನಿತೀಶ್ ಕುಮಾರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ನೆರವಾಗುವಂತೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ರಾಹುಲ್ ಗಾಂಧಿಯವರ ಇತ್ತೀಚಿನ ಮತಗಳ್ಳತನ ಮತ್ತು ಸಂವಿಧಾನ ಸಂರಕ್ಷಣೆ ಹೆಸರಿನಲ್ಲಿ ನಡೆಸುತ್ತಿರುವ ಹೋರಾಟದಿಂದ ಸಿಗುವ ಬೆಂಬಲ ಈ ಚುನಾವಣೆಯಲ್ಲಿ ಸಹಕಾರಿಯಾಗಲಿದೆ.
ನಿತೀಶ್ ಕುಮಾರ್ ಸರ್ಕಾರದ ಆಡಳಿತ ವಿರೋಧಿ ಅಲೆಯು ಶೇ.೪೨ ಇರುವುದಾಗಿ ಕೆಲವು ಸಮೀಕ್ಷೆ ಗಳು ಹೇಳಿರುವುದು ಬಿಜೆಪಿಯನ್ನು ಆತಂಕಕ್ಕೆ ದೂಡಿದೆ. ಹಾಗಾಗಿ ಮಹಿಳಾ ಮತದಾರರನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವುದಕ್ಕಾಗಿ ತಲಾ ೧೦ ಸಾವಿರ ರೂಪಾಯಿಯನ್ನು ನೀಡುವ ಯೋಜನೆ ಎನ್‌ಡಿಎಗೆ ನೆರವಾಗಬಹುದು ಎಂದು ನಿರೀಕ್ಷಿಸಲಾಗಿದೆ. ವಾಸ್ತವವಾಗಿ ಉತ್ತರ ಭಾರತದ ಇತರೆ ರಾಜ್ಯಗಳಲ್ಲಿರುವಂತೆ ಹಿಂದುತ್ವದ ಹೆಸರಿನಲ್ಲಿ ಮತಗಳಿಕೆ ಬಿಹಾರದಲ್ಲಿ ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಇಲ್ಲಿ ಮುಖ್ಯವಾಗಿ ಜಾತಿ ಆಧಾರಿತ ಮತದಾನ ನಡೆಯುವುದೇ ಹೆಚ್ಚು .
ಚುನಾವಣೆಗಳಲ್ಲಿ ಶೇ.೫೫ರಷ್ಟು ಮಂದಿ ಜಾತಿ ಆಧಾರದ ಮೇಲೆಯೇ ಮತಚಲಾಯಿಸುವ ಸಂಪ್ರದಾಯ ಬಿಹಾರದಲ್ಲಿರುವುದಾಗಿ ಸಮೀಕ್ಷೆಯೊಂದು ಹೇಳಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ನಡೆಸಿರುವ ಜಾತಿ ಜನಗಣತಿಯಂತೆ ಹಿಂದುಳಿದ ವರ್ಗವು ಶೇ.೨೭, ಉನ್ನತ ಜಾತಿಗಳ ಸಂಖ್ಯೆ ಶೇ.೧೫, ಇತರೆ ಆರ್ಥಿಕವಾಗಿ ಹಿಂದುಳಿದ ಜಾತಿಗಳ ಜನಸಂಖ್ಯೆ ಶೇ.೨೨ , ಮುಸ್ಲಿಂ ಶೇ.೧೮ ಇದ್ದು, ಶೇ. ೧೯ ದಲಿತ ವರ್ಗದ ಮತದಾರರಿದ್ದಾರೆ. ಇದೆಲ್ಲದರ ನಡುವೆ ಬಿಹಾರ ಬೇರೆ ರಾಜ್ಯಗಳಂತೆ ಮುಕ್ತ ಆರ್ಥಿಕ ಯೋಜನೆಯ ಲಾಭ ಪಡೆಯಲಾಗದೆ ಉದ್ಯಮ ಕ್ಷೇತ್ರದಲ್ಲಿ ಹಿಂದೆ ಬಿದ್ದಿರುವುದಲ್ಲದೆ, ಕೃಷಿ ಆಧಾರಿತ ರಾಜ್ಯವಾದರೂ ಆ ಕ್ಷೇತ್ರದಲ್ಲೂ ಹೇಳಿಕೊಳ್ಳುವ ಸಾಧನೆಯನ್ನು ಮಾಡಲಾಗಿಲ್ಲ. ಬಡತನ, ನಿರುದ್ಯೋಗ ಹೆಚ್ಚಿರುವ ಕಾರಣ ಲಕ್ಷಾಂತರ ಮಂದಿ ಬಡವರು ದೆಹಲಿ, ಪಶ್ಚಿಮ ಬಂಗಾಳ, ಮುಂಬೈ ಮತ್ತು ಕರ್ನಾಟಕದಂತಹ ರಾಜ್ಯಗಳಿಗೆ ವಲಸೆ ಹೋಗಿ ಬದುಕು ಕಟ್ಟಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಈ ಎಲ್ಲ ಹಿನ್ನೆಲೆಯನ್ನು ಗಮನಿಸಿದರೆ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದ್ದಂತೆ ಎರಡೂ ಮೈತ್ರಿಕೂಟಗಳು ಈಗ ಚುರುಕಾಗಿವೆ. ಎನ್‌ಡಿಎ ತನ್ನ ಆಡಳಿತವನ್ನು ಉಳಿಸಿಕೊಳ್ಳುವುದೇ ಅಥವಾ ಕಾಂಗ್ರೆಸ್ಮ ತ್ತು ಆರ್‌ಜೆಡಿ ನೇತೃತ್ವದ ಇಂಡಿಯಾ ಮೈತ್ರಿಕೂಟವು ಅಽಕಾರ ಗಳಿಸುವುದೇ ಎನ್ನುವುದನ್ನು ಕಾದು ನೋಡಬೇಕಿದೆ. ಎನ್‌ಡಿಎ ಮೈತ್ರಿಕೂಟವು ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸನ್ನೇ ನಂಬಿರುವುದರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಆಡಳಿತದ ಸಾಧನೆಗಿಂತ ಆರ್‌ಜೆಡಿಯನ್ನು ಮತ್ತೆ ಅಧಿಕಾರಕ್ಕೆ ತಂದರೆ ಬಿಹಾರ ಪುನಃ ಜಂಗಲ್ ರಾಜ್ಯವಾಗುವುದರಲ್ಲಿ ಸಂಶಯವಿಲ್ಲ ಎಂದು ಮತದಾರರಿಗೆ ಲಾಲೂ ಪ್ರಸಾದ್ ಯಾದವರ ಎರಡು ದಶಕಗಳ ಹಿಂದಿನ ಭ್ರಷ್ಟಾಚಾರದ ಆಡಳಿತವನ್ನು ನೆನಪು ಮಾಡುವುದರಲ್ಲಿ ನಿರತರಾಗಿದ್ದಾರೆ. ಹೀಗಾಗಿ ಬಿಹಾರದ ಆಡಳಿತ ಚುಕ್ಕಾಣಿಯನ್ನು ಮತದಾರ ಯಾರ ಕೈಗೆ ನೀಡಲಿದ್ದಾನೆ ಎನ್ನುವುದಕ್ಕೆ ನವೆಂಬರ್ ೧೪ರವರೆಗೆ ಕಾಯಲೇಬೇಕಿದೆ.
” ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎ ಚುನಾವಣೆ ಎದುರಿಸಲಿದೆ ಎಂದು ಬಿಜೆಪಿ ಘೋಷಿಸಿದ್ದರೂ, ತನ್ನ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದನ್ನು ಮಾತ್ರ ಘೋಷಿಸದೇ ಇರುವುದು ಅಚ್ಚರಿಯ ಸಂಗತಿಯಾಗಿದೆ.”
–ಶಿವಾಜಿ ಗಣೇಶನ್





