Mysore
22
mist

Social Media

ಮಂಗಳವಾರ, 10 ಡಿಸೆಂಬರ್ 2024
Light
Dark

Article : ನಂಬಿ ನಾರಾಯಣನ್ – ಅದು ಮರೆಯುವಂತ ಹೆಸರಲ್ಲ !

ಕಾರ್ತಿಕ್ ಕೃಷ್ಣ

ನಂಬಿ ನಾರಾಯಣನ್ ಅವರ ಆತ್ಮಚರಿತ್ರೆಯ ಹೆಸರು ಓರ್ಮಗಳುಡೆ ಭ್ರಮಣಪಥಂ’ (ನೆನಪಿನ ಸುರುಳಿ). ೨೩ನೇ ಅಕ್ಟೋರ್ಬ ೨೦೧೭ರಲ್ಲಿ ಬಿಡುಗಡೆಯಾಗಿದ್ದು, ಈ ಪುಸ್ತಕದಲ್ಲಿ ನಾರಾಯಣನ್ ತಮ್ಮ ಬದುಕು ಸಾಗಿ ಬಂದ ಹಾದಿಯ ಜೊತೆಜೊತೆಗೆ ದೇಶದ ಹಿತ ಬಯಸಿದ ವಿಜ್ಞಾನಿಯೊಬ್ಬ ಎದುರಿಸಿದ ಸಂದಿಗ್ಧ-ಸಂಕಷ್ಟಗಳನ್ನೂ ವಿವರಿಸಿದ್ದಾರೆ. ಅವರ ಬದುಕನ್ನೇ ಆಧರಿಸಿದ ಬಯೊಪಿಕ್ ರಾಕೆಟರಿ – ದಿ ನಂಬಿ ಎಫೆಕ್ಟ್’ ಚಲನಚಿತ್ರ ,ಜುಲೈ ೧ ೨೦೨೨ ರಂದು ತೆರೆಕಾಣುತ್ತಿದೆ.

ಒಂದು ಕಾಲವಿತ್ತು. ಆಗ ಅಂತರಿಕ್ಷ ಕ್ಷೇತ್ರದಲ್ಲಿ ಭಾರತವಿನ್ನೂ ಅಂಬೆಗಾಲಿಡುತ್ತಿತ್ತು. ಆ ಸಮಯದಲ್ಲಿ ಇಸ್ರೋದ ವಿಜ್ಞಾನಿಗಳು ಭಾರತದ ಮೊದಲ ರಾಕೆಟನ್ನು ಉಡಾಯಿಸಲು ತಂಬ ರಾಕೆಟ್ ಉಡ್ಡಯನ ಕೇಂದ್ರಕ್ಕೆ ಸೈಕಲ್ನಲ್ಲಿ ರಾಕೆಟ್ ಸಾಗಾಣಿಕೆ ಮಾಡಿದ್ದರಂತೆ. ಎರಡನೆಯ ರಾಕೆಟ್ ಕೊಂಚ ಭಾರ ಹಾಗು ಗಾತ್ರದಲ್ಲಿ ಹಿರಿದಾಗಿದ್ದರಿಂದ ಅದನ್ನು ಸಾಗಾಣಿಕೆ ಮಾಡಲು ಎತ್ತಿನ ಗಾಡಿ ಬೇಕಾಯಿತಂತೆ. ಇಸ್ರೋ ಇಂತಹ ಸಣ್ಣ ಸಣ್ಣ ಹೆಜ್ಜೆಗಳನ್ನಿಡುತ್ತಾ, ಬಂದ ಕಷ್ಟಗಳನ್ನು ಸಮರ್ಥವಾಗಿ ಎದುರಿಸುತ್ತಾ ಇಂದು The Martian ಎಂಬ ಹಾಲಿವುಡ್ ಸಿನಿಮಾದ ಬಜೆಟಿಗಿಂತ ಕಡಿಮೆ ವೆಚ್ಚದಲ್ಲಿ ಮಾರ್ಸ್ ಓರ್ಬಿಟರ್ ಮಿಷನ್‌ಅನ್ನು ಪೂರ್ಣಗೊಳಿಸಿದೆ ಎಂದರೆ ಅದೆಂತ ಸಾಧನೆ!

ಹಾಗೆಯೇ ಉಪಗ್ರಹ ಉಡಾವಣೆಗೆ ಖಚ್ಚಛಿಗಿ ಖರ್ಚು ಮಾಡುವ ವೆಚ್ಚದ ೧/೪ ಭಾಗದಲ್ಲಿ ಇಸ್ರೋ ಇಂದು ಉಪಗ್ರಹವನ್ನು ಕಕ್ಷೆಗೆ ಸೇರಿಸುತ್ತಿದೆ. ಇದೆಲ್ಲವೂ ಸಾಧ್ಯವಾಗಿದ್ದು ವಿಕ್ರಂ ಸಾರಾಭಾಯಿ,ಅಬ್ದುಲ್ ಕಲಾಂ, ಯು ಆರ್ ರಾವ್ , ಸತೀಶ್ ಧವನ್ ಸೇರಿದಂತೆ ತಮ್ಮ ಜೀವನವನ್ನೇ ಬಾಹ್ಯಾಕಾಶ ಕ್ಷೇತ್ರಕ್ಕೆ ಮುಡಿಪಾಗಿಟ್ಟ ವಿಜ್ಞಾನಿಗಳಿಂದ. ಆ ಸಾಲಿನಲ್ಲಿ ಮತ್ತೊಬ್ಬ ಹೆಮ್ಮೆಯ ವಿಜ್ಞಾನಿಯಿದ್ದಾರೆ. ಅವರು ೨೦೧೯ ರ ಪದ್ಮ ಭೂಷಣ ಪುರಸ್ಕೃತರು. ಆದರೆ ಅದಕ್ಕೂ ಮೊದಲು ದೌರ್ಜನ್ಯಕ್ಕೆ ತುತ್ತಾಗಿದ್ದವರು. ಅವರೇ ಎಸ್ ನಂಬಿ ನಾರಾಯಣನ್.

ಜನವರಿ ೫, ೨೦೧೪ ರಂದು ಸಂಪೂರ್ಣ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಅಳವಡಿಸಿದ್ದ ಜಿಎಸ್‌ಎಲ್‌ವಿ- ಡಿ೫ ಶ್ರೀಹರಿ ಕೋಟಾದಿಂದ ಗಗನಕ್ಕೆ ಜಿಗಿದಾಗ, ತಿರುವನಂತಪುರದ ಮಲೆಯಾಳಿ ಟಿವಿ ಚಾನೆಲ್ ಒಂದರ ಸ್ಟುಡಿಯೊದಲ್ಲಿ ಕುಳಿತಿದ್ದ ವೃದ್ಧ ಎಸ್.ನಂಬಿ ನಾರಾಯಣನ್ ಕಣ್ಣಲ್ಲಿ ಆನಂದಬಾಷ್ಪವಿತ್ತು. ಇಸ್ರೋ ಅಭಿವೃದ್ಧಿ ಪಡಿಸಿದ ಕ್ರೈಯೊಜೆನಿಕ್ ಎಂಜಿನ್ ಹಿಂದೆ ಇದೇ ನಂಬಿ ನಾರಾಯಣನ್ ಅವರ ಪರಿಶ್ರಮ ಅಡಗಿತ್ತು. ರಾಕೆಟ್‌ಗಳಲ್ಲಿ ದ್ರವ ಇಂಧನ ಹಾಗೂ ಕ್ರಯೋಜೆನಿಕ್ ತಂತ್ರಜ್ಞಾನ ಬಳಸುವುದರಿಂದ ಆಗುವ ಲಾಭಗಳನ್ನು ಇವರು ೭೦ರ ದಶಕದಲ್ಲೇ ತಿಳಿದುಕೊಂಡಿದ್ದರು. ನಾಸಾದ ಕೆಲಸವನ್ನು ತಿರಸ್ಕರಿಸಿ ಇಸ್ರೋದಲ್ಲಿ ಕೆಲಸಕ್ಕೆ ಸೇರಿ, ಉಪಗ್ರಹ ಉಡಾವಣೆಗೆ ಬಳಸುವ ಖಔ್ಖ ರಾಕೆಟ್ ನ ‘ವಿಕಾಸ್ ಎಂಜಿನ್’ಅನ್ನು ಅಭಿವೃದ್ಧಿಪಡಿಸಿದ್ದರು. ಭಾರಿತೂಕದ ಉಪಕರಣಗಳನ್ನು ಬಾಹ್ಯಾಕಾಶಕ್ಕೆ ತಳ್ಳುವುದಕ್ಕೆ ಅಗತ್ಯವಾದ ಅಪಾರ ಪ್ರಮಾಣದ ಶಕ್ತಿಯುಳ್ಳ ರಾಕೆಟ್ ಬೇಕಾಗುತ್ತದೆ. ಅಂತಹ ರಾಕೆಟ್ ಗಳಲ್ಲಿ ಶಕ್ತಿ ಕೇಂದ್ರವಾಗಿ ಕ್ರಯೋಜೆನಿಕ್ ಎಂಜಿನ್‌ಗಳು ಬೇಕಾಗುತ್ತದೆ.

೯೦ರ ದಶಕದಲ್ಲಿ ಭಾರತ ಇದನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಕೈ ಹಾಕಿತ್ತು. ನಂಬಿ ನಾರಾಯಣನ್ ಅದರ ರೂವಾರಿಯಾಗಿದ್ದರು. ಈ ಕುರಿತಾಗಿ ರಷ್ಯಾದೊಂದಿಗಿನ ಭಾರತದ ಒಪ್ಪಂದ ಅಮೇರಿಕಾದ ಹಸ್ತಕ್ಷೇಪದಿಂದ ಮುರಿದುಬಿತ್ತು. ಕ್ರಯೋಜೆನಿಕ್ ತಂತ್ರಜ್ಞಾನ ಭಾರತಕ್ಕೆ ಸಿಕ್ಕಿದರೆ ಇಸ್ರೋ ಮುಂದೆ ತನಗೆ ಮುಳುವಾಗಬಹುದು ಎಂಬ ಭಯ ಅಮೆರಿಕಾಗೆ ಇತ್ತೇನೋ !

ರಷ್ಯಾ ದೊಂದಿಗಿನ ಒಪ್ಪಂದ ಮುರಿದುಬಿದ್ದರೂ, ನಂಬಿ ನಾರಾಯಣನ್ ಕೈ ಕಟ್ಟಿ ಕೂರಲಿಲ್ಲ .೧೯೯೯ ರ ಒಳಗಾಗಿ ಕ್ರಯೋಜೆನಿಕ್ ಎಂಜಿನನ್ನು ಅಭಿವೃದ್ಧಿಪಡಿಸುವ ಯೋಜನೆ ಅವರದ್ದಾಗಿತ್ತು. ಆದರೆ ಆಗೊಂದು ದೊಡ್ಡ ಆಘಾತವೇ ನಡೆದುಹೋಯಿತು. ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದ ಹಿರಿಯ ವಿಜ್ಞಾನಿ ನಂಬಿ ನಾರಾಯಣನ್ ಹಣದ ಆಸೆಯಿಂದ ಆ ತಂತ್ರಜ್ಞವನ್ನು ಶತ್ರು ದೇಶಗಳಿಗೆ ಮಾರಾಟ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂಬ ಆರೋಪ ಕೇಳಿಬಂದು, ಕೇರಳದ ಪೊಲೀಸರು ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ವಿಜ್ಞಾನಿ ನಂಬಿ ನಾರಾಯಣನ್ (೫೨ ವರ್ಷ), ಇನ್ನೊಬ್ಬ ವಿಜ್ಞಾನಿ ಶಶಿ ಕುರ್ಮಾ ಮತ್ತೆ ಇಬ್ಬರು ಸಿಬ್ಬಂದಿಗಳನ್ನು ಬಂಧಿಸಿದರು. ೫೦ ದಿವಸಗಳ ಕಾಲ ನಂಬಿಯವರನ್ನು ಜೈಲಿನಲ್ಲಿರಿಸಿ ವಿಪರೀತ ಹಿಂಸೆ ನೀಡಲಾಯಿತು.ಇದರಿಂದಾಗಿ ಕ್ರಯೋಜೆನಿಕ್ ತಂತ್ರಜ್ಞಾನದ ಅಭಿವೃದ್ಧಿ ಸೇರಿದಂತೆ ಇಸ್ರೊದ ಹಲವು ಯೋಜನೆಗಳೂ ಸ್ಥಗಿತಗೊಂಡವು.

ಬಂಧನದಲ್ಲಿದ್ದ ನಂಬಿ ನಾರಾಯಣನ್ ಅವರ ಬಾಯಿ ಬಿಡಿಸಲು ಪೊಲೀಸರು ಅಮಾನುಷವಾಗಿ ನಡೆದುಕೊಂಡಿದ್ದರು. ಮಾನಸಿಕ ಕಿರುಕುಳವನ್ನೂ ನೀಡಿದ್ದರು. ಕೇರಳದ ಪತ್ರಿಕೆಗಳು ನಾರಾಯಣನ್ ದ್ರೋಹಿ ಎಂದು ಬಿಂಬಿಸುವಂತ ಲೇಖನಗಳನ್ನು ಬರೆದು ಜನರನ್ನು ನಂಬಿಸಿದ್ದರು. ತಮ್ಮ ಮಡದಿ ದೇಗುಲಕ್ಕೆ ಹೋದಾಗ ಅಲ್ಲಿನ ಅರ್ಚಕರು ಆಕೆ ನಂಬಿ ನಾರಾಯಣನ್ ಅವರ ಮಡದಿ ಎಂಬ ಕಾರಣಕ್ಕೆ ತೀರ್ಥ ಪ್ರಸಾದ ನೀಡಲು ನಿರಾಕರಿಸಿದ್ದರು ಎಂದು ನಾರಾಯಣನ್ ನೆನಪಿಸಿಕೊಳ್ಳುತ್ತಾರೆ. ಇದೆಲ್ಲಾ ಶುರುವಾಗಿದ್ದು ಅವಧಿ ಮುಗಿದರೂ ಇನ್ನೂ ಭಾರತದಲ್ಲೇ ಇದ್ದ ಮಾಲ್ಡೀವ್ಸ್ನ ಮರಿಯಂ ರಷೀದಾ ಮತ್ತು ಫೌಜಿಯಾ ಹಸನ್ ಅವರ ಬಂಧನದಿಂದ. ಅವರ ಡೈರಿಯಲ್ಲಿ ಇಸ್ರೋದ ವಿಜ್ಞಾನಿಯ ಫೋನ್ ನಂಬರ್ ಇತ್ತು ಎಂಬುದೇ ವಿಜ್ಞಾನಿಗಳ ಬಂಧನಕ್ಕೆ ಕಾರಣವಾಯ್ತು. ಅವರ ಬಳಿ ಇಸ್ರೋಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳೂ ಇದ್ದವೆಂದು ಪೊಲೀಸರು ಆರೋಪಿಸಿದರು.

ಇನ್ನೂ ಅಭಿವೃದ್ದಿಗೊಳ್ಳದ ವಿನ್ಯಾಸವನ್ನು ನಾನು ಹೇಗೆ ಮಾರಿಕೊಳ್ಳಲಿ? ವಿಕಾಸ್ ಎಂಜಿನ್ ನ ಮಾದರಿ open market ನಲ್ಲಿ ಲಭ್ಯವಿದ್ದಾಗ ಅದನ್ನು ಹಣಕ್ಕಾಗಿ ಏತಕ್ಕೆ ಮಾರಿಕೊಳ್ಳಲಿ ? ಎಂಬ ನಾರಾಯಣನ್ ಅವರ ತಾರ್ಕಿಕ ಪ್ರಶ್ನೆಗಳಿಗೆ ಪೊಲೀಸರು ಉತ್ತರಿಸಲಾಗಲಿಲ್ಲ. ಬೇಹುಗಾರಿಕಾ ದಳದಿಂದ ತನಿಖೆಯನ್ನು ಕೈಗೆತ್ತಿಕೊಂಡ ಸಿಬಿಐ ನಂಬಿ ನಾರಾಯಣನ್ ಮೇಲಿನ ಆರೋಪಗಳು ಸಂಪೂರ್ಣ ಸುಳ್ಳು ಎಂಬ ವರದಿ ನೀಡಿತು.

ಸುಪ್ರೀಂ ಕೋರ್ಟ್ ನ ಮೆಟ್ಟಿಲೇರಿದ ಪ್ರಕರಣ ೧೯೯೮ ರಲ್ಲಿ ವಜಾಗೊಂಡಿತು. ನಂಬಿ ಅವರ ಚಾರಿತ್ರ್ಯಹರಣ ಮಾಡಿದ್ದಕ್ಕೆ ಹಾಗು ಅವರ ವೃತ್ತಿ ಜೀವನವನ್ನು ಕೆಡಿಸಿದ್ದಕ್ಕೆ ಕೇರಳ ಸರ್ಕಾರ ಪರಿಹಾರ ಕೊಡಬೇಕು ಎಂದು ಮಾನವ ಹಕ್ಕುಗಳ ಆಯೋಗ ಆದೇಶ ನೀಡಿತು. ಕೇರಳ ಸರ್ಕಾರ ನಂಬಿಯವರಿಗೆ ೧೦ ಲಕ್ಷ ರೂ. ಪರಿಹಾರ ಕೊಡುವಂತೆ ಹಾಗು ಐಬಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಕೇರಳ ಹೈಕೋರ್ಟ್ ಇದೇ ಸಂದರ್ಭದಲ್ಲಿ ಸೂಚಿಸಿತು. ನಂಬಿಯವರು ನಿರ್ದೋಷಿಯೆಂದು ಸಾಬೀತಾದರೂ ಅವರ ೧೩ ವರ್ಷದ ಸೇವೆಯನ್ನು ದೇಶ ಕಳೆದುಕೊಂಡಿತು. ೧೯೯೯ ರಲ್ಲೇ ನನಸಾಗಬೇಕಿದ್ದ ಭಾರತದ ಕ್ರಯೋಜೆನಿಕ್ ಕನಸು ನನಸಾಗಲು ಇನ್ನೂ ೧೫ ವರುಷ ಬೇಕಾಯ್ತು !

ಬಾಹ್ಯಾಕಾಶ ವಿಜ್ಞಾನಕ್ಕೆ ಅಮೋಘ ಕೊಡುಗೆ ನೀಡಿದ್ದರೂ, ಯಾರದೋ ಪಿತೂರಿಗೆ ಬಲಿಯಾಗಿ, ಪೋಲೀಸರ ದೌರ್ಜನ್ಯಕ್ಕೆ ಒಳಗಾಗಿ, ಜನರ ಬಾಯಲ್ಲಿ ದ್ರೋಹಿ ಎಂದು ಕರೆಸಿಕೊಂಡರೆ ಹೇಗಿರಬಹುದು? ತಮ್ಮೆಲ್ಲ ಸಮಯವನ್ನೂ ದೇಶದ ಹಿತಕ್ಕಾಗಿ ಮುಡಿಪಾಗಿಟ್ಟಿದ್ದ ನಂಬಿ ನಾರಾಯಣನ್ ಅವರು ಇಂಥಹ ದೇಶ ದ್ರೋಹದ ಆರೋಪಕ್ಕೆ ತುತ್ತಾಗಿದ್ದು ವಿಪರ್ಯಾಸವೇ ಸರಿ.

ನಂಬಿ ನಾರಾಯಣನ್ ಅವರ ಆತ್ಮಚರಿತ್ರೆಯ ಹೆಸರು ಓರ್ಮಗಳುಡೆ ಭ್ರಮಣಪಥಂ’ (ನೆನಪಿನ ಸುರುಳಿ). ೨೩ನೇ ಅಕ್ಟೋಬ ೨ರ೦೧೭ರಲ್ಲಿ ಬಿಡುಗಡೆಯಾಗಿದ್ದು, ಈ ಪುಸ್ತಕದಲ್ಲಿ ನಾರಾಯಣನ್ ತಮ್ಮ ಬದುಕು ಸಾಗಿ ಬಂದ ಹಾದಿಯ ಜತೆಜತೆಗೆ ದೇಶದ ಹಿತ ಬಯಸಿದ ವಿಜ್ಞಾನಿಯೊಬ್ಬ ಎದುರಿಸಿದ ಸಂದಿಗ್ಧ-ಸಂಕಷ್ಟಗಳನ್ನೂ ವಿವರಿಸಿದ್ದಾರೆ. ಅವರ ಬದುಕನ್ನೇ ಆಧರಿಸಿದ ಬಯೊಪಿಕ್ ‘ರಾಕೆಟರಿ – ದಿ ನಂಬಿ ಎಫೆಕ್ಟ್’ ಚಲನಚಿತ್ರ ಬರವ ಜುಲೈ ೧ ರಂದು ತೆರೆಕಾಣುತ್ತಿದೆ. ದೇಶ ಕಂಡ ಅಮೋಘ ವಿಜ್ಞಾನಿಗಳಲ್ಲಿ ಒಬ್ಬರಾದ ನಂಬಿ ನಾರಾಯಣನ್ ಅವರಿಗೆ ಮತ್ತೊಮ್ಮೆ ನಮನ.

Tags: