ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್
ಭಾರತ ಬಹುತ್ವ ರಾಷ್ಟ್ರ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೆ ಸ್ತರು, ಜೈನರು, ಬೌದ್ಧರು, ಸಿಖ್ಖರು ಮುಂತಾದ ಹಲವು ಧರ್ಮಗಳಿಗೆ ಸೇರಿದವರು ತಮ್ಮದೇ ಆದ ಧರ್ಮದ ಸಂಪ್ರದಾಯ ಮತ್ತು ಆಚರಣೆಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಹಾಗಾಗಿ ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡ ದೇಶವಿದು. ಈ ಎಲ್ಲ ಧರ್ಮಗಳಿಗೂ ಸೇರಿದವರನ್ನು ಒಂದೇ ಎಂದು ಭಾವಿಸಿ ಎಲ್ಲರನ್ನೂ ಸಮಾನವಾಗಿ ಕಾಣುವ ಸಂವಿಧಾನ ಇಂದು ದೇಶವನ್ನು ಒಗ್ಗಟ್ಟಿನಲ್ಲಿರಿಸಿದೆ. ಧರ್ಮ, ಜಾತಿ ಮತ್ತು ಭಾಷೆಗಳು ಹಾಗೂ ಪ್ರಾಂತೀಯ ಮನೋಭಾವನೆಯು ಒಮ್ಮೊಮ್ಮೆ ಅತಿರೇಕಕ್ಕೆ ಹೋಗಿ ಪರಸ್ಪರ ಕಾದಾಟ, ವೈಮನಸ್ಯ, ಶೋಷಣೆ ನಡೆದರೂ ಅದನ್ನೆಲ್ಲ ಸಂಭಾಳಿಸಿಕೊಂಡು ಬರುವಲ್ಲಿ ನಮ್ಮ ಸಂವಿಧಾನ ಯಶಸ್ವಿಯಾಗಿರುವುದರಿಂದಲೇ ಭಾರತ ಇಂದು ಪ್ರಬಲ ರಾಷ್ಟ್ರವಾಗಿದೆ. ಈ ಒಗ್ಗಟ್ಟಿನ ಹಿಂದೆ ಸಂವಿಧಾನವನ್ನು ರಚಿಸಿಕೊಟ್ಟ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಅನೇಕ ಮುತ್ಸದ್ದಿಗಳ ಶ್ರಮವಿರುವುದನ್ನು ಮರೆಯಲಾಗದು.
ಭಾರತ ಹಿಂದೂ ರಾಷ್ಟ್ರವಾಗಬೇಕೆಂಬ ಏಕಮಾತ್ರ ಉದ್ದೇಶದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಇಂದಿನವರೆಗೂ ಅದರ ಸಿದ್ಧಾಂತ, ಆಚಾರ ವಿಚಾರಗಳ ಪ್ರಚಾರದಿಂದ ಆಗಿಂದಾಗ್ಗೆ ಕಾಣಿಸಿಕೊಳ್ಳುವ ವಿರೋಧಾಭಾಸ, ಟೀಕೆ ಟಿಪ್ಪಣಿ ನಡುವೆ ಅದೀಗ ನೂರು ವರ್ಷಗಳನ್ನು ಸವೆಸಿದೆ. ಆರ್‌ಎಸ್‌ಎಸ್, ಭಾರತವನ್ನು ಧರ್ಮದ ಆಧಾರದ ಮೇಲೆ ಒಡೆಯುತ್ತಿದೆ ಎನ್ನುವ ಕೂಗು ಬಲವಾಗಿ ಕೇಳಿ ಬರುತ್ತಿದ್ದರೂ ಅದನ್ನೇ ತನ್ನ ರಾಜಕೀಯ ನೀತಿಯನ್ನಾಗಿ ಮಾಡಿಕೊಂಡಿರುವ ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಹತ್ತು ವರ್ಷಗಳಿಂದ ನಿರಂತರವಾಗಿ ಅಧಿಕಾರದಲ್ಲಿದ್ದು ಅದು ದೇಶದ ಬಹುತೇಕ ರಾಜ್ಯಗಳಿಗೆ ತನ್ನ ಆಡಳಿತವನ್ನು ವಿಸ್ತರಿಸಿಕೊಳ್ಳುತ್ತಿದೆ.
ದೇಶದ ಜನಸಾಮಾನ್ಯರನ್ನು ಅದರಲ್ಲೂ ಹಿಂದೂ ಧರ್ಮೀಯರಲ್ಲಿ ಮೇಲ್ನೋಟಕ್ಕೆ ಪುಳಕಿತಗೊಳಿಸುವ ಭಾರತ್ ಮಾತಾ ಕಿ ಜೈ, ಜೈಹಿಂದ್ ಘೋಷಣೆಗಳು ಕೂಡ ಈ ಸಂಘಟನೆಯ ಬೆಳವಣಿಗೆಗೆ ಸಹಕಾರಿಯಾಗಿವೆ. ಹಿಂದೂ ಧರ್ಮದ ಹೆಸರಿನಲ್ಲಿ ರಾಷ್ಟ್ರೀಯತೆ ಪರಿಕಲ್ಪನೆಯು ಸಂಘದ ಬೆಳವಣಿಗೆಗೆ ಸಹಕಾರಿಯಾಗಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಆರ್ ಎಸ್‌ಎಸ್‌ನ ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ಪೂರಕವಾಗಿ ‘ಏಕ್ ಭಾರತ್; ಶ್ರೇಷ್ಠ ಭಾರತ್’ ಘೋಷಣೆಗಳು ಇತ್ತೀಚೆಗೆ ಸೇರಿಕೊಂಡಿವೆ.
೧೯೨೫ರ ಅಕ್ಟೋಬರ್‌ನಲ್ಲಿ ಆರಂಭವಾದ ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ, ದೊಡ್ಡ ಪ್ರಮಾಣದಲ್ಲಿ ಸಂಘಟನೆ ಬೆಳೆದರೂ ಅದು ಕಾನೂನಿನನ್ವಯ ನೋಂದಣಿ ಆಗಿಲ್ಲ, ತನ್ನ ನಾಗ್ಪುರದ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಇನ್ನೂ ಹಾರಿಸಿಲ್ಲ, ಇದು ಮುಸ್ಲಿಂ, ಕ್ರಿಶ್ಚಿಯನ್ನರ ವಿರೋಧಿ, ಚಾತುರ್ವರ್ಣ ವ್ಯವಸ್ಥೆಯ ಪರಿಪಾಲಕ ಸಂಸ್ಥೆ, ಜಾತಿ ಭೇದ, ಅಸ್ಪ ಶ್ಯತೆಯನ್ನು ಆಚರಿಸುವಂತಹ ಯಥಾಸ್ಥಿತಿಯನ್ನು ಪೋಷಿಸಿಕೊಂಡು ಬರುತ್ತಿರುವ ಸಂಘಟನೆ. ಇಂತಹ ಸಂಘಟನೆಯಿಂದ ದೇಶ ಧರ್ಮದ ಆಧಾರದ ಮೇಲೆ ಒಡೆದು ಹೋಗುತ್ತಿದೆ ಎನ್ನುವ ಕಟು ಟೀಕೆಗಳು ನಿರಂತರವಾಗಿ ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳಿಂದ ಕೇಳಿ ಬರುತ್ತಲೇ ಇವೆ. ಈ ಟೀಕೆಗಳಲ್ಲಿ ಸತ್ಯಾಂಶವಿಲ್ಲ ಎಂದೇನಿಲ್ಲ. ಆದರೆ ಈ ಎಲ್ಲ ಆರೋಪಗಳನ್ನು ಸಂಘದ ನಾಯಕರು ಅಲ್ಲಗಳೆಯುತ್ತಲೇ ಬಂದಿದ್ದಾರೆ. ಸಂಘ ಮತ್ತು ಅದರ ಉದ್ದೇಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಪ್ರಾಮಾಣಿಕತೆ ಇದ್ದರೆ ನಾಗ್ಪುರಕ್ಕೆ ಬನ್ನಿ ಮುಕ್ತವಾಗಿ ಚರ್ಚಿಸೋಣ ಎಂದು ಸಂಘದ ಹಿರಿಯ ನಾಯಕರಲ್ಲೊಬ್ಬರಾದ ಶೇಷಾದ್ರಿಚಾರಿ ಟಿವಿ ಸಂದರ್ಶನವೊಂದರಲ್ಲಿ ಮುಕ್ತ ಆಮಂತ್ರಣ ನೀಡಿದ್ದಾರೆ.
ಇದನ್ನೂ ಓದಿ:-ದುಸ್ಥಿತಿಯಲ್ಲಿ ಬ್ರಹ್ಮೇಶ್ವರ ದೇವಾಲಯ
ಸಂಘದ ಮತ್ತೊಬ್ಬ ನಾಯಕರಾದ ರಾಮ್ ಮಾಧವ್ ಮತ್ತೊಂದು ಟಿವಿ ಸಂದರ್ಶನದಲ್ಲಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರ್‌ಎಸ್‌ಎಸ್ ಪಾತ್ರವೇನೂ ಇರಲಿಲ್ಲ ಎನ್ನುವ ಕಾಂಗ್ರೆಸ್ ನಾಯಕರ ಟೀಕೆಯನ್ನು ಅಲ್ಲಗಳೆದಿದ್ದು, ಭಾರತ್ ಮಾತಾಕಿ ಜೈ ಘೋಷಣೆಯನ್ನು ಕೊಡುವ ಮೂಲಕ ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಕೀರ್ತಿ ತಮ್ಮ ಸಂಘಟನೆಗಿದೆ ಎಂದು ವಾದಿಸುತ್ತಾರೆ. ಸಂಘಕ್ಕೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಇದೇ ಅಕ್ಟೋಬರ್ ೧ರಂದು ನಾಗ್ಪುರದಲ್ಲಿ ನಡೆದ ಸಭೆಯಲ್ಲಿ ಸ್ವಯಂ ಸೇವಕರ ಸಮ್ಮುಖದಲ್ಲಿ ಸಂಘದ ಸರಸಂಚಾಲಕ ಅರ್ಥಾತ್ ಮುಖ್ಯಸ್ಥರಾದ ಮೋಹನ್ ಭಾಗ್ವತ್ ಮಾತನಾಡಿ, ಸಂಘದ ದೂರದೃಷ್ಟಿಯ ಐದು ಪ್ರಮುಖ ಕಾರ್ಯಕ್ರಮಗಳನ್ನು ಮುಂದಿಟ್ಟಿದ್ದಾರೆ. ಬಿಜೆಪಿಯು ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಹತ್ತಾರು ತಂತ್ರಗಳನ್ನು ರೂಪಿಸಿ ಅವುಗಳನ್ನು ಶಿಸ್ತುಬದ್ಧವಾಗಿ ಜಾರಿಗೆ ತರುವ ಮೂಲಕ ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ ಸತ್ಯ ಇಡೀ ದೇಶಕ್ಕೆ ಗೊತ್ತಿರುವ ಸಂಗತಿ. ಹಾಗಾಗಿ ಆರ್ ಎಸ್ ಎಸ್ ನಿಂದಲೇ ಬೆಳೆದುಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೆಲವು ಸರ್ವಾಧಿಕಾರಿ ವರ್ತನೆಗೆ ಕಡಿವಾಣವನ್ನೂ ಹಾಕಿದ್ದಾರೆ. ಮೋದಿ ಅವರ ಅನೇಕ ನಡೆ ಮತ್ತು ಕಾರ್ಯವೈಖರಿಯನ್ನು ಪರೋಕ್ಷವಾಗಿ ಟೀಕಿಸುತ್ತಾ ಬಂದಿದ್ದ ಭಾಗ್ವತ್ ಅವರು ಈ ಬಾರಿ ಮೋದಿ ಮತ್ತು ಅವರ ಆಡಳಿತವನ್ನು ಹೊಗಳಿದ್ದಾರೆ. ಮೋದಿಯವರು ಕೂಡ ಆರ್‌ಎಸ್‌ಎಸ್ ಸಂಘಟನೆಯನ್ನು ಮುಕ್ತಮನಸ್ಸಿನಿಂದ ಶ್ಲಾಘಿಸಿದ್ದು ಅಚ್ಚರಿಯೇನಿಲ್ಲ. ಏಕೆಂದರೆ ಅವರು ಕೂಡ ಅಲ್ಲಿಂದಲೇ ಬೆಳೆದು ಬಂದ ನಾಯಕ.
ತಾವೊಬ್ಬ ‘ನಾನ್ ಬಯೋಲಾಜಿಕಲ್ ಮ್ಯಾನ್’ ಎಂದು ಹೇಳಿಕೊಂಡಿದ್ದ ನರೇಂದ್ರ ಮೋದಿ ಅವರ ನಡೆಯನ್ನು ಕೆಲವು ತಿಂಗಳ ಹಿಂದೆ ಆಕ್ಷೇಪಿಸಿದ್ದ ಭಾಗ್ವತ್, ಎಪ್ಪತ್ತೆ ದು ವರ್ಷ ತುಂಬಿದವರು ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕೆಂದು ನೇರವಾಗಿಯೇ ಹೇಳಿದ್ದರು. ಆದರೆ ಭಾಗ್ವತ್ ಅವರಿಗೂ ಎಪ್ಪತ್ತೆ ದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರು ರಾಜಿ ಮಾಡಿಕೊಂಡವರಂತೆ ಈಗ ಪರಸ್ಪರ ಹೊಗಳಿಕೆಯಲ್ಲಿ ತೊಡಗುವ ಮೂಲಕ ತಮ್ಮ ಸ್ಥಾನಗಳನ್ನು ಭದ್ರಮಾಡಿಕೊಳ್ಳುತ್ತಿರುವುದು ಅವರ ಮಾತುಗಳಲ್ಲಿ ಕಾಣಬಹುದು. ಇದೇನೇ ಇದ್ದರೂ ಆರ್‌ಎಸ್‌ಎಸ್ ಮುಖ್ಯಸ್ಥರ ಮಾತುಗಳನ್ನು, ಅದರ ಸೂಚನೆಯನ್ನು ಬಿಜೆಪಿಯ ಕೇಂದ್ರ ಸರ್ಕಾರ ಗಂಭೀರವಾಗಿಯೇ ತೆಗೆದುಕೊಂಡು ಅದನ್ನು ಚಾಚೂ ತಪ್ಪದೆ ಪಾಲಿಸುವುದನ್ನು ನೋಡಬಹುದು. ನೆರೆ ರಾಷ್ಟ್ರಗಳಾದ ನೇಪಾಳ, ಬಾಂಗ್ಲಾದೇಶದಲ್ಲಿ ಸರ್ಕಾರ ಮತ್ತು ಸಮಾಜದ ನಡುವೆ ಕಂದಕ ಏರ್ಪಟ್ಟ ಪರಿಣಾಮ ಅಲ್ಲಿ ದಂಗೆಗಳು ನಡೆದು ಆಡಳಿತ ವ್ಯವಸ್ಥೆಯೇ ಬದಲಾಯಿತು. ಇಂತಹ ಪ್ರಯತ್ನ ನಮ್ಮ ದೇಶದಲ್ಲಿ ಆಂತರಿಕವಾಗಿ ಮತ್ತು ಹೊರಗಿನವರಿಂದಲೂ ನಡೆಯುತ್ತಿರಬಹುದು. ಈ ಬಗೆಗೆ ಸರ್ಕಾರ ತನ್ನ ತಪ್ಪುಗಳಿದ್ದರೆ ತಿದ್ದಿಕೊಂಡು ಎಚ್ಚರಿಕೆಯಿಂದ ಮುನ್ನಡೆಯಬೇಕಿದೆ ಎಂದು ಮೋದಿ ಅವರಿಗೆ ಸಲಹೆ ನೀಡಿರುವುದು ವಿಶೇಷ.
ಹಾಗೆಯೇ ನೈತಿಕ ಪೊಲೀಸ್ ಗಿರಿ ಮತ್ತು ಗೋವು ಸಾಗಾಣಿಕೆಯಂತಹ ವಿಷಯಗಳನ್ನೆತ್ತಿಕೊಂಡು ಕಟ್ಟಾ ಹಿಂದುತ್ವವಾದಿಗಳು ನಡೆಸುವ ಹಿಂಸಾಚಾರಗಳು ಸಂಘಕ್ಕೆ ಕೆಟ್ಟ ಹೆಸರು ತರುತ್ತಿವೆ ಎಂದು ಆಕ್ರಮಣಕಾರಿಯುವಕರ ದಾದಾಗಿರಿಯನ್ನು ಖಂಡಿಸುವ ಮೂಲಕ ಸಂಘದ ಸಿದ್ಧಾಂತದ ಪರಿಪಾಲಕರಾಗಿ ಕಾರ್ಯನಿರ್ವಹಿಸಲು ಸಂಘಪರಿವಾರವನ್ನು ಎಚ್ಚರಿಸಿರುವುದು ಅವಶ್ಯವಾಗಿತ್ತು. ಆದರೆ ಈ ಸಲಹೆಗಳನ್ನು ಈಗಿನ ಆಕ್ರಮಣಕಾರಿ ಸ್ವಭಾವದ ಹಿಂದುತ್ವವಾದಿ ಯುವಕರು ಪಾಲಿಸುವರೇ ಎನ್ನುವುದೇ ಈಗಿನ ಪ್ರಶ್ನೆ .
ಸಂಘದ ಶತಮಾನೋತ್ಸವದ ಐದು ದಿಕ್ಸೂಚಿ ಕಾರ್ಯಕ್ರಮಗಳನ್ನು ಸಂಘವು ಪ್ರಕಟಿಸಿದೆ. ಈ ಪಂಚ ಪರಿವರ್ತನಾ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಸಂಘವು ತನ್ನ ಓಬಿರಾಯನ ಕಾಲದ ಕೆಲವು ಚಿಂತನೆಗಳಿಂದ ಹೊರತಾಗಿ ದೇಶದ ಪಾರಂಪರಿಕ ಸಂಪ್ರದಾಯಗಳನ್ನು ರಕ್ಷಿಸುವುದರ ಜೊತೆಗೆ ರಾಷ್ಟ್ರೀಯತೆಯನ್ನು ಪ್ರೋತ್ಸಾಹಿಸುವ ಈಗಿನ ಸಾಂದರ್ಭಿಕ ವಿಚಾರಗಳಲ್ಲಿ ಸ್ವಯಂ ಸೇವಕರು ಮಾರ್ಗದರ್ಶಕರಾಗಿ ಕೆಲಸ ಮಾಡಬೇಕು. ಎರಡನೆಯದಾಗಿ ಕಡೆಗಣಿಸಲ್ಪಟ್ಟಿರುವ ಸಮುದಾಯಗಳಿಗೆ ನ್ಯಾಯವನ್ನು ಕಲ್ಪಿಸಿಕೊಡುವ ಜೊತೆಗೆ ಸಾಮಾಜಿಕ ಸಂಬಂಧವನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ತೊಡಗಬೇಕು. ಹಾಗೆಯೇ ದೇಶದಲ್ಲಿ ಉಂಟಾಗಿರುವ ಹಲವು ಅಸಮತೋಲನವನ್ನು ಸರಿಮಾಡುವ ನಿಟ್ಟಿನಲ್ಲಿ ತೊಡಗಬೇಕು. ಹಾಗೆಯೇ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಕೌಟುಂಬಿಕ ಮಹತ್ವದ ಬಗೆಗೆ ಜಾಗೃತಿ ಉಂಟು ಮಾಡಬೇಕು.
ಪ್ರತಿಯೊಬ್ಬ ಭಾರತೀಯ ಪ್ರಜೆಯಲ್ಲೂ ನಾಗರಿಕ ಪ್ರಜ್ಞೆ ತರುವ ಸಾಮಾಜಿಕ ಹೊಣೆಗಾರಿಕೆಯನ್ನು ಹೆಚ್ಚಿಸುವ ದಿಕ್ಕಿನಲ್ಲಿ ಕೆಲಸ ಮಾಡಬೇಕು.ಈ ಎಲ್ಲದರ ಜೊತೆಗೆ ನಮ್ಮ ದೇಶದ ಸಂಪನ್ಮೂಲವನ್ನು ಸಂರಕ್ಷಿಸುವುದಕ್ಕಾಗಿ ಪರಿಸರದ ಬಗೆಗೆ ಜನಜಾಗೃತಿ ಉಂಟು ಮಾಡಬೇಕು. ಈ ಎಲ್ಲ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಾದರೆ ಮನೆ ಮನೆಗೆ ಹೋಗಿ ಪ್ರಚಾರದಲ್ಲಿ ತೊಡಗಬೇಕು. ಸ್ಥಳೀಯ ಮಟ್ಟದಲ್ಲಿ ಹಿಂದೂ ಸಮ್ಮೇಳನವನ್ನು ಮಾಡುವ ಮೂಲಕ ಹಿಂದೂಗಳಲ್ಲಿ ಒಗ್ಗಟ್ಟು ಮತ್ತು ಸೌಹಾರ್ದವನ್ನು ಉಂಟು ಮಾಡಬೇಕು. ಈ ಕಾರ್ಯದಲ್ಲಿ ಯುವ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಆರ್‌ಎಸ್‌ಎಸ್‌ನ ಈ ಐದು ಕಾರ್ಯಕ್ರಮಗಳು ತಮ್ಮ ಸರ್ಕಾರದ ವಿಕಸಿತ ಭಾರತ, ಅತ್ಮನಿರ್ಭರ ಭಾರತ್ ಮತ್ತು ಸ್ವಚ್ಛ ಭಾರತ್ ಕಾರ್ಯಕ್ರಮಗಳು ಯಶಸ್ವಿಯಾಗಲು ಆಶಾದಾಯಕವಾಗಿವೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತೂ ಭಾಗ್ವತ್ ಅವರ ಬೆಂಬಲದಿಂದ ಈಗ ಮೋದಿ ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ. ಆದರೆ ಈಗ ದೇಶಕ್ಕೆ ಬೇಕಿರುವುದು ಎಲ್ಲ ಜಾತಿ, ಧರ್ಮಗಳ ಜನರನ್ನು ಒಟ್ಟಿಗೆ ಕರೆದೊಯ್ಯುವ ನಾಯಕತ್ವ ಮತ್ತು ಕಾರ್ಯಕ್ರಮಗಳು.
” ಹಿಂದೂ ಧರ್ಮದ ಹೆಸರಿನಲ್ಲಿ ರಾಷ್ಟ್ರೀಯತೆ ಪರಿಕಲ್ಪನೆಯು ಸಂಘದ ಬೆಳವಣಿಗೆಗೆ ಸಹಕಾರಿಯಾಗಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಆರ್‌ಎಸ್‌ಎಸ್‌ನ ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ಪೂರಕವಾಗಿ ‘ಏಕ್ ಭಾರತ್; ಶ್ರೇಷ್ಠ ಭಾರತ್’ ಘೋಷಣೆಗಳು ಇತ್ತೀಚೆಗೆ ಸೇರಿಕೊಂಡಿವೆ.”





