ಶಿವಾಜಿ ಗಣೇಶನ್ ಅವರ ವಾರದ ಅಂಕಣ
ನಶಿಸಿ ಹೋಗುತ್ತಿದ್ದ ಬೌದ್ಧ ಧರ್ಮ ಮರುಹುಟ್ಟು ಪಡೆದ ಪುಣ್ಯಭೂಮಿ
ವಿಜಯದಶಮಿ ಬಂತೆಂದರೆ ದೇಶದಾದ್ಯಂತ ಹಬ್ಬದ ಸಂಭ್ರಮ. ಈ ಸಂಭ್ರಮ ನಾಗ್ಪುರದಲ್ಲಿ ಬೇರೆಯದೇ ಆಗಿರುವುದು ವಿಶೇಷ. ನಶಿಸಿ ಹೋಗುತ್ತಿದ್ದ ಬೌದ್ಧ ಧರ್ಮ ಇಲ್ಲಿ ಮರುಹುಟ್ಟು ಪಡೆದ ಪುಣ್ಯಭೂಮಿ. ಶಾಂತಿ, ಸಹನೆ ಮತ್ತು ಸಮಾನತೆಯನ್ನು ಬೋಧಿಸುವ ನವಯಾನ ಬೌದ್ಧ ಧರ್ಮದ ಆಚರಣೆ ಒಂದು ಕಡೆಯಾದರೆ ಅದೇ ನಾಗ್ಪುರದ ಮತ್ತೊಂದು ಕಡೆ, ಜಾತಿ, ಅಸ್ಪೃಶ್ಯತೆಯಂತಹ ತಾರತಮ್ಯ ನೀತಿಯನ್ನು ಅನುಸರಿಸುವ ಸನಾತನ ಧರ್ಮ ಪಾಲನೆಯ ಬೋಧನೆ ನಡೆಯುವುದು ವಿಪರ್ಯಾಸ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯ ಕಾರ್ಯಾಲಯವಿರುವ ಇಲ್ಲಿ ವಿಜಯದಶಮಿ ದಿನದಂದು ಸಂಘದ ಸರಸಂಚಾಲಕರು ತನ್ನ ಧರ್ಮಪಾಲಕರಿಗೆ ನೀಡುವ ವಿಶೇಷ ಸಂದೇಶವು ಹನ್ನೊಂದು ವರ್ಷಗಳಿಂದ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷಕ್ಕೆ ಅಕ್ಷರಶಃ ಮಾರ್ಗದರ್ಶನವಾಗಿದೆ. ಬಿಜೆಪಿ ಮತ್ತು ಆರ್ ಎಸ್ಎಸ್ನದ್ದು ಒಂದೇ ಸೈದ್ಧಾಂತಿಕ ವಿಚಾರವಾದ್ದರಿಂದ ಬಿಜೆಪಿಯ ನಾಯಕರ ಕಿವಿ ಸಂಘದ ಮುಖ್ಯಸ್ಥರ ಭಾಷಣಕ್ಕೆ ತೆರೆದುಕೊಳ್ಳುತ್ತದೆ. ಹೀಗಾಗಿ ಸಂಘದ ಮುಖ್ಯಸ್ಥರು ಮಾಡುವ ದಿಕ್ಸೂಚಿ ಭಾಷಣ ನಮ್ಮ ಆಡಳಿತ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಬಿಜೆಪಿ ನೇತೃತ್ವದ ಆಡಳಿತವನ್ನು ಗಮನಿಸಿದರೆ, ಬಜೆಟ್ ಭಾಷಣ, ಕೆಂಪುಕೋಟೆಯ ಮೇಲೆ ಪ್ರಧಾನಿ ಮಾಡುವ ಭಾಷಣ ಮತ್ತು ಅವರ ಮನದ ಮಾತಿಗೆ (ಮನ್ ಕಿ ಬಾತ್ ) ಇರುವಷ್ಟೇ ಮಹತ್ವ ಮೋಹನ್ ಭಾಗವತ್ ಅವರ ವಿಜಯದಶಮಿ ಭಾಷಣದ ಪರಿಣಾಮವು ಸರ್ಕಾರದ ನೀತಿಗಳಲ್ಲಿ ಮತ್ತು ಪ್ರಧಾನಿ ಮೋದಿ ಅವರ ನಡೆಯಾಗುವ ಬದಲಾವಣೆಯಲ್ಲಿ ಅನಾವರಣಗೊಳ್ಳುತ್ತದೆ.
ನಾಗ್ಪುರದಲ್ಲಿಯ ವಿಜಯದಶಮಿಯಂದು ನಡೆಯುವ ಎರಡು ವಿಭಿನ್ನ ಧರ್ಮಗಳ ಆಚರಣೆ ಮತ್ತು ಉದ್ದೇಶ ಬೇರೆ ಬೇರೆಯದ್ದೇ. ಎರಡೂ ತದ್ವಿರುದ್ಧ ದಿಕ್ಕಿನಲ್ಲಿ ಹೋಗುವ ವಿಚಾರಗಳು ಮುಖಾಮುಖಿ ಆಗುವುದೇ ಇಲ್ಲಿನ ವಿಜಯದಶಮಿಯ ವಿಶೇಷ.
ಹಿಂದೂ ಧರ್ಮದಲ್ಲಿನ ಶೋಷಣೆ, ದಮನಿತರ ಮೇಲಿನ ನಿರಂತರ ದೌರ್ಜನ್ಯ, ಅಮಾನವೀಯವಾದ ಅಸ್ಪೃಶ್ಯತೆ ಮತ್ತು ಜತಿ ತಾರತಮ್ಯದ ಆಚರಣೆಯನ್ನು ಸ್ವತಃ ಅನುಭವಿಸಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ೧೯೩೫ರ ಅಕ್ಟೋಬರ್ ೧೩ರಂದು ನಾಸಿಕ್ನಲ್ಲಿ ಸೇರಿದ್ದ ತನ್ನ ಲಕ್ಷಾಂತರ ಜನರ ಬೃಹತ್ ಸಭೆಯಲ್ಲಿ ಮಾತನಾಡುತ್ತಾ ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ನಾನು ಹಿಂದೂವಾಗಿ ಸಾಯಲಾರೆ ಎಂದು ಶಪಥ ಮಾಡಿದರು. ಈ ಘೋಷಣೆ ಮಾಡಿದ ನಂತರ ಬಾಬಾ ಸಾಹೇಬರು ವಿಶ್ವದ ಹಲವಾರು ಧರ್ಮಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಆದರೆ ಭಾರತದ ಹುಟ್ಟಿ ಅದು ನಶಿಸಿ ಹೋಗುತ್ತಿದ್ದ ಮಾನವೀಯತೆಯನ್ನು ಸಾರುವ ಬೌದ್ಧ ಧರ್ಮವೇ ಶ್ರೇಷ್ಠ. ಇದು ಈ ನೆಲದ ಧರ್ಮ ಎಂದು ಬೌದ್ಧ ಧರ್ಮಕ್ಕೆ ಮರಳಲು ನಿರ್ಧರಿಸಿದರು.
ಮಧ್ಯಪ್ರದೇಶದ ಮೌವ್ನಲ್ಲಿ ಹುಟ್ಟಿದರೂ, ಮಹಾರಾಷ್ಟ್ರವನ್ನು ತಮ್ಮ ಕರ್ಮಭೂಮಿ ಮಾಡಿಕೊಂಡಿದ್ದ ಬಾಬಾಸಾಹೇಬರು, ಬೌದ್ಧ ಧರ್ಮೀಯರಾಗಿದ್ದ ನಾಗಾ ಜನರು ನೆಲೆಸಿದ್ದ ನಾಗ್ಪುರವೇ ಬೌದ್ಧ ಧರ್ಮಕ್ಕೆ ಮರಳಲು ಸೂಕ್ತ ಎಂದು ನಿರ್ಧರಿಸಿದರು. ತಮ್ಮ ಈ ತೀರ್ಮಾನದಂತೆ ತಾವು ಮಾಡಿದ್ದ ಶಪಥದಂತೆ ಬಾಬಾ ಸಾಹೇಬರು ೧೯೫೬ರ ಅಕ್ಟೋಬರ್ ೧೪ರಂದು ಸುಮಾರು ಆರು ಲಕ್ಷ ಮಂದಿಯನ್ನು ಸೇರಿಸಿ ಬೌದ್ಧ ಧರ್ಮಕ್ಕೆ ಮರಳುವ ಮೂಲಕ ಹಿಂದೂ ಧರ್ಮದ ಸಂಕೋಲೆಯಿಂದ ವಿಮೋಚನೆ ಪಡೆದದ್ದು ಇತಿಹಾಸ.
ಹಿಂದೂ ಧರ್ಮದಲ್ಲಿನ ಅಸ್ಪೃಶ್ಯತೆ ಮತ್ತು ಜತಿ ತಾರತಮ್ಯದಿಂದ ನಲುಗಿ ಹೋಗಿದ್ದ ಜನರಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ೧೯೫೬ರ ಅಕ್ಟೋಬರ್ ೧೪ರಂದು ತೆಗೆದುಕೊಂಡ ಬೌದ್ಧ ಧರ್ಮದ ದೀಕ್ಷೆಯ ನೆನಪಿಗಾಗಿ ವಿಜಯದಶಮಿ ಬಂತೆಂದರೆ ನಾಗ್ಪುರದಲ್ಲಿ ಹಿಂದೂ ಧರ್ಮದ ಶೋಷಣೆಯಿಂದ ಬಿಡುಗಡೆ ಪಡೆಯುವ ಸಂಭ್ರಮ ವರ್ಷ ವರ್ಷವೂ ಹೆಚ್ಚುತ್ತಾ ಬಂದಿದೆ. ದೇಶದಲ್ಲಿ ಶೋಷಿತ ಜನರಿಗೆ ಹಲವಾರು ವರ್ಷಗಳಿಂದ ನಾಗ್ಪುರ ಆಕರ್ಷಣೆಯ ಪುಣ್ಯಭೂಮಿ ಆಗಿದೆ.
ಬಾಬಾ ಸಾಹೇಬರು ಬೌದ್ಧ ಧರ್ಮದ ದೀಕ್ಷೆ ಪಡೆದ ನೆನಪಿಗಾಗಿ ೧೯೭೮ರಲ್ಲಿ ಬೌದ್ಧ ಸ್ತೂಪವನ್ನು ನಿರ್ಮಿಸುವ ಕಾರ್ಯಕ್ಕೆ ಅಡಿಗಲ್ಲು ಹಾಕಲಾಯಿತು. ಡಾ. ಅಂಬೇಡ್ಕರ್ ಸ್ಮಾರಕ ಸಮಿತಿಯು ಪುರಾತನ ಸಾಂಚಿ ಸ್ತೂಪದ ಮಾದರಿಯ ಈ ಸ್ತೂಪವನ್ನೂ ನಿರ್ಮಿಸಿದೆ. ೨೦೦೧ರಲ್ಲಿ ಈ ಸ್ತೂಪ ಪೂರ್ಣಗೊಂಡಾಗ ಅದೇ ವರ್ಷ ಡಿಸೆಂಬರ್ ೧೮ರಂದು ಅಂದಿನ ರಾಷ್ಟ್ರಪತಿ ಕೆ. ಆರ್. ನಾರಾಯಣನ್ ಈ ಪವಿತ್ರ ಸ್ತೂಪದ ಉದ್ಘಾಟನೆ ನೆರವೇರಿಸಿದರು. ಅಂದಿನಿಂದ ಇಂದಿನವರೆಗೂ ಈ ಪುಣ್ಯಭೂಮಿ ಶೋಷಿತ ಜನರಿಗೆ ಜಗೃತಿ ಮತ್ತು ಪ್ರೇರಣಾ ಸ್ಥಳವಾಗಿ ರೂಪುಗೊಂಡಿದೆ. ಇಲ್ಲಿಗೆ ಬರುವ ಲಕ್ಷಾಂತರ ಜನರು ದಮ್ಮ ದೀಕ್ಷೆ ಪಡೆಯುತ್ತಾರೆ. ಹೀಗೆ ಮಹಾರಾಷ್ಟ್ರದಲ್ಲಿ ಶೋಷಿತರು ಬೌದ್ಧ ಧರ್ಮ ದೀಕ್ಷೆ ಪಡೆದು ಆಚರಣೆ ಮತ್ತು ನಡೆ ನುಡಿಯಲ್ಲಿ ಬೌದ್ಧ ಧರ್ಮೀಯರಾಗಿ ಹಿಂದೂ ಧರ್ಮದ ಸಂಕೋಲೆಯಿಂದ ವಿಮುಕ್ತಿ ಪಡೆದವರಾಗಿದ್ದಾರೆ.
ಬೇರೆ ರಾಜ್ಯಗಳಿಂದ ಇಲ್ಲಿಗೆ ಬರುವ ಜನರು ಬೌದ್ಧ ಧರ್ಮ ದೀಕ್ಷೆ ಪಡೆದು ತಮ್ಮ ನಿತ್ಯದ ಬದುಕಿನಲ್ಲಿ ಬುದ್ಧನ ವಿಚಾರ ಮತ್ತು ಆಚರಣೆ ಮಾಡುವುದು ಈ ದಿನಗಳಲ್ಲಿ ಸಾಮಾನ್ಯವಾಗಿದೆ. ಹಾಗಾಗಿ ನಾಗ್ಪುರದ ವಿಜಯದಶಮಿ ಶೋಷಿತ ಜನರಿಗೆ ಬೆಳಕು ತೋರುವ ಪುಣ್ಯ ಕ್ಷೇತ್ರವಾಗಿರುವುದು ವಿಶೇಷ. ಈ ನಾಗ್ಪುರ ಶೋಷಿತರಿಗೆ ಎಷ್ಟು ಪುಣ್ಯ ಭೂಮಿಯೋ ಹಾಗೆ ಸನಾತನ ಧರ್ಮೀಯರಿಗೂ ಮತ್ತು ಈ ಧರ್ಮದ ರಕ್ಷಣೆ ಮತ್ತು ಪೋಷಣೆಗೆ ಕಟಿಬದ್ಧವಾಗಿರುವ ಭಾರತೀಯ ಜನತಾ ಪಕ್ಷ ಮತ್ತು ಅದರ ಬೆಳವಣಿಗೆಗೆ ಹೆಗಲುಕೊಟ್ಟು ದುಡಿಯುತ್ತಿರುವ ಆರ್ಎಸ್ಎಸ್ ಸ್ವಯಂ ಸೇವಕರಿಗೂ ಆ ಸಿದ್ಧಾಂತವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವ ಹಿಂದೂಗಳಿಗೂ ಪವಿತ್ರ ಸ್ಥಳವೇ ಆಗಿದೆ.
ಆರ್ಎಸ್ಎಸ್ನ ಕೇಂದ್ರ ಸ್ಥಾನವಾಗಿರುವ ನಾಗ್ಪುರದಲ್ಲಿ ಪ್ರತಿ ವಿಜಯದಶಮಿ ದಿನದಂದು ಈ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಾಡುವ ಭಾಷಣ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ತಪ್ಪು ಹಾದಿ ಹಿಡಿದಾಗ ಪರೋಕ್ಷವಾಗಿ ಟೀಕಿಸುವುದು, ಅವರ ನಡೆ ನುಡಿಯ ಬಗೆಗೆ ಅಸಮಾಧಾನ ವ್ಯಕ್ತಪಡಿಸುವುದು ಇದುವರೆಗೆ ನಡೆದು ಬಂದಿತ್ತು. ಜೊತೆಗೆ ಭಾಗವತರು ರಾಷ್ಟ್ರಪ್ರೇಮ, ದೇಶಭಕ್ತಿಯ ಬಗೆಗೆ ತನ್ನ ಸ್ವಯಂ ಸೇವಕರಿಗೆ ಉಪದೇಶ ಕೊಡುವುದು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.
ಈ ಬಾರಿ ಮೋಹನ್ ಭಾಗವತ್ ಅವರು, ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಬದಲಿಗೆ ಅವರ ಆಡಳಿತವನ್ನು ಸಮರ್ಥಿಸಿಕೊಂಡಿರುವುದು ವಿಶೇಷ. ಜೆನ್ ಝೀ ಹೋರಾಟದಿಂದ ಬಾಂಗ್ಲಾ, ನೇಪಾಳದಲ್ಲಿ ನಡೆದ ಆಡಳಿತ ಬದಲಾವಣೆ, -ನ್ಸ್ ಮತ್ತು ಅಲ್ಬೇನಿಯಾದಲ್ಲಿ ಉಂಟಾಗಿರುವ ಅರಾಜಕತೆ ಮತ್ತು ಹಿಂಸಾಚಾರವನ್ನು ಪ್ರಸ್ತಾಪಿಸಿ, ಭಾರತದಲ್ಲೂ ವಿದೇಶಿಗರ ಕೈವಾಡದಿಂದ ಅರಾಜಕತೆ ಸೃಷ್ಟಿಸುವ ಮತ್ತು ಆಡಳಿತ ವ್ಯವಸ್ಥೆಯನ್ನು ಬದಲಾಯಿಸುವ ಮಾತುಗಳು ಕೇಳಿ ಬಂದಿರುವುದು ದುರದೃಷ್ಟಕರ.
ಇಂತಹ ಚಟುವಟಿಕೆಗೆ ಭಾರತ ಅವಕಾಶ ಕೊಡಬಾರದು. ಈ ಬಗೆಗೆ ಕೇಂದ್ರ ಸರ್ಕಾರ ಎಚ್ಚರಿಕೆಯಿಂದ ನಡೆದುಕೊಳ್ಳಬೇಕೆನ್ನುವ ಮೂಲಕ ಸರ್ಕಾರದ ಪರವಾಗಿ ನಿಲ್ಲುವ ಮಾತುಗಳನ್ನಾಡಿರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆನೆ ಬಲ ಬಂದಂತಾಗಿದೆ. ನೀಟ ಪರೀಕ್ಷೆ ಅಕ್ರಮದ ಹಿನ್ನೆಲೆಯಲ್ಲಿ ನಡೆದ ಸಿಜೆಪಿ ಹೋರಾಟ ಮತ್ತು ಈಗ ನಿರಂತರವಾಗಿ ಮುಖ್ಯ ಚುನಾವಣಾ ಕಮಿಷನರ್ ನಡೆಸುತ್ತಿರುವ ಮತದಾರರ ಪರಿಷ್ಕರಣೆಯಿಂದ ಕೇಳಿ ಬರುತ್ತಿರುವ ಕೋಟ್ಯಂತರ ಮತದಾರರ ಹೆಸರನ್ನು ಕೈಬಿಟ್ಟಿರುವ ಬಗೆಗೆ ನಡೆಯುತ್ತಿರುವ ಚಳವಳಿಯಿಂದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆತಂಕಗೊಂಡಿರುವುದಂತೂ ನಿಜ. ಅವರ ಭಾಷಣದಲ್ಲಿ ವ್ಯಕ್ತವಾಗಿರುವ ದನಿಯಲ್ಲಿ ಇದು ಸ್ಪಷ್ಟವಾಗಿ ಕೇಳಿ ಬಂದಿರುವುದನ್ನು ಬಿಜೆಪಿ ಸರ್ಕಾರ ಹೇಗೆ ಗ್ರಹಿಸುವುದೋ ನೋಡಬೇಕು.
“ ನೀಟ್ ಪರೀಕ್ಷೆ ಅಕ್ರಮದ ಹಿನ್ನೆಲೆಯಲ್ಲಿ ನಡೆದ ಸಿಜೆಪಿ ಹೋರಾಟ ಮತ್ತು ಈಗ ನಿರಂತರವಾಗಿ ಮುಖ್ಯ ಚುನಾವಣಾ ಕಮಿಷನರ್ ನಡೆಸುತ್ತಿರುವ ಮತದಾರರ ಪರಿಷ್ಕರಣೆಯಿಂದ ಕೇಳಿ ಬರುತ್ತಿರುವ ಕೋಟ್ಯಂತರ ಮತದಾರರ ಹೆಸರನ್ನು ಕೈಬಿಟ್ಟಿರುವ ಬಗೆಗೆ ನಡೆಯುತ್ತಿರುವ ಚಳವಳಿಯಿಂದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆತಂಕಗೊಂಡಿರುವುದಂತೂ ನಿಜ.”




