Mysore
22
mist

Social Media

ಮಂಗಳವಾರ, 10 ಡಿಸೆಂಬರ್ 2024
Light
Dark

ಮೈಸೂರು ಯೋಗಕ್ಕೆ ಶತಮಾನ ದಾಟಿದ ನಂಟು

ಯೋಗ ಎಂದ ತಕ್ಷಣ ಥಟ್ಟನೆ ಮೈಸೂರಿನ ಇತಿಹಾಸ ಚಕ್ರ ಒಂದೂ ಮುಕ್ಕಾಲು ಶತಮಾನದ ಹಿಂದೆ ಓಡುತ್ತದೆ. ಶತಮಾನಗಳ ಹಿಂದೆಯೇ ಋಷಿ ಮುನಿಗಳು ಯೋಗದ ಪರಂಪರೆ ಮುಂದುವರಿಸಿಕೊಂಡು ಬಂದಿರುವುದನ್ನು ಕಾಣಬಹುದಾಗಿದೆ. ಕುಟೀರಗಳು, ಆಶ್ರಮಗಳಲ್ಲಿ ಮಾತ್ರ ಸೀಮಿತಗೊಂಡಿದ್ದ ‘ಯೋಗ’ ಜಾಗತೀಕರಣದ ಹಿನ್ನೆಲೆಯಲ್ಲಿ ವಿಶ್ವವ್ಯಾಪಿಯಾಗಿದೆ. ಸಾವಿರಾರು ಕಿ.ಮೀ ದೂರದಿಂದ ವಿಮಾನದಲ್ಲಿ ಹಾರಿ ಬಂದು ನಮ್ಮೂರಿನಲ್ಲಿ ೫೦-೬೦ ದಿನ ಇದ್ದ ಯೋಗ ಕಲಿತುಕೊಂಡು ಹೋಗುವ ವಿದೇಶಿಯರು ಸಹಸ್ರಾರು. ಸಾಂಸ್ಕೃತಿಕ ನಗರಿ ಮೈಸೂರು ಯೋಗ ಸಂಸ್ಕೃತಿಯನ್ನು ಗಂಧದ ಪರಿಮಳದಂತೆ ವಿಶ್ವದೆಲ್ಲೆಡೇ ಪಸರಿಸುವ ಕಾಯಕದಲ್ಲಿ ತೊಡಗಿದೆ.

ಕೆ.ಬಿ.ರಮೇಶ್ ನಾಯಕ

ಮೈಸೂರು: ಮೈಸೂರು ಎಂದರೆ ಅರಮನೆಗಳ ನಗರಿ ಮಾತ್ರವಲ್ಲ. ಇದು ಯೋಗ ನಗರಿಯಾಗಿಯೂ ಜನಪ್ರಿಯಗೊಂಡಿದೆ. ಏಕೆಂದರೆ ಯೋಗ ಪರಂಪರೆಗೆ ನಾಂದಿ ಹಾಡಿ ಪ್ರಮುಖ ಯೋಗಪಟುಗಳು ತಮ್ಮದೇ ಶೈಲಿ ಯೋಗಗಳನ್ನು ಪರಿಚಯಿಸಿದ್ದು ಒಂದು ಕಡೆಯಾದರೆ, ಮೈಸೂರನ್ನು ದಾಟಿ ನೂರಾರು ದೇಶಗಳಿಗೂ ಸೀಮೋಲ್ಲಂಘನ ಮಾಡಿದ ಯೋಗಕ್ಕೆ ಮೈಸೂರೇ ಮೂಲ. ಈ ಕಾರಣದಿಂದ ದೇಶದಲ್ಲಿ ಯೋಗದ ವಿಚಾರ ಬಂದರೆ ಮೈಸೂರೇ ಮುಂಚೂಣಿಯಲ್ಲಿ ನಿಲ್ಲುತ್ತದೆ. ಬದಲಾದ ಕಾಲಘಟ್ಟದಲ್ಲಿ ಹಿಂದಿನ ಯೋಗ ಪರಂಪರೆಯನ್ನು ಬಿಡದೇ ಹೊಸತನದೊಂದಿಗೆ ಎಲ್ಲ ತಲೆಮಾರುಗಳನ್ನು ತಲುಪುವ ಕೆಲಸವೂ ಆಗುತ್ತಿದೆ. ಸೇವಾ ಯೋಗದ ಜತೆಗೆ ದೇಶ ವಿದೇಶದವರನ್ನು ಆಕರ್ಷಿಸಿ ಆದಾಯದ ಮಾರ್ಗವೂ ಆಗಿ ಮಾರ್ಪಟ್ಟಿದೆ.

ಮಹಾರಾಜರ ಪ್ರೋತ್ಸಾಹ: ಮೈಸೂರಿನ ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಕಲೆ, ಸಂಗೀತದಂತೆ ಯೋಗಕ್ಕೂ ಅಪರಿಮಿತವಾದ ಪ್ರೋತ್ಸಾಹ ನೀಡಿದ್ದಾರೆ. ಸ್ವತಃ ಇವರೇ ಯೋಗಾಸನ ಮಾಡುತ್ತಿದ್ದರು. ಅವರ ಕಾಲದಲ್ಲಿ ಪ್ರಕಟಗೊಂಡ ‘ಶ್ರೀತತ್ವ ನಿಧಿ’ ಎನ್ನುವ ಕೃತಿ ಇದಕ್ಕೆ ಪುರಾವೆ ಒದಗಿಸುತ್ತದೆ. ೧೨೦ಕ್ಕೂ ಹೆಚ್ಚು ಯೋಗದ ಭಿನ್ನ ಆಸನಗಳನ್ನು ಒಳಗೊಂಡ ಕೃತಿ ಇದಾಗಿದ್ದು, ಮುಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಯೋಗ ಇನ್ನಷ್ಟು ಜನಪ್ರಿಯಗೊಂಡಿತು. ದಾಖಲೆಗಳ ಪ್ರಕಾರವೇ ಮೈಸೂರು ಯೋಗ ಶೈಲಿಗೆ ೧೫೦ ವರ್ಷವಾದರೂ ಇತಿಹಾಸವಿರುವುದನ್ನು ಖಚಿತಪಡಿಸುತ್ತದೆ.

ಕೃಷ್ಣಮಾಚಾರ್ಯರ ಪ್ರಯತ್ನ: ಶ್ರೀರಂಗಗುರುಗಳು, ದೇಶಿಕಾಚಾರ್ ಕೂಡ ಯೋಗ ಜನಪ್ರಿಯಗೊಳಿಸಿದವರ ಸಾಲಿನಲ್ಲಿ ನಿಲ್ಲುತ್ತಾರೆ. ಯೋಗ ಗುರುಗಳಾಗಿದ್ದ ಟಿ. ಕೃಷ್ಣಮಾಚಾರ್ಯ ಅವರು ೧೯೩೦ರ ವೇಳೆಗೆ ಮಹಾರಾಜರ ಆಶ್ರಯದೊಂದಿಗೆ ಸಂಸ್ಕೃತ ಪಾಠಶಾಲೆಯಲ್ಲಿ ಯೋಗ ಶಾಲೆ ಆರಂಭಿಸಿದ್ದರು. ನಂತರ ಯೋಗವನ್ನು ಭಾರತದಾಚೆಗೂ ಪಸರಿಸಲು ಕಾರಣರಾಗಿದ್ದಾರೆ. ಇವರ ಶಿಷ್ಯರಾಗಿ ಬೆಳೆದು ಬಂದ ಪಟ್ಟಾಭಿ ಜೋಯಿಸ್ ಹಾಗೂ ಬಿಕೆಎಸ್ ಅಯ್ಯಂಗಾರ್ ಈ ಪರಂಪರೆ ಮುಂದುವರಿಸಿದರು. ಅಷ್ಟಾಂಗ ಯೋಗದ ಮೂಲಕ ಪಟ್ಟಾಭಿಜೋಯಿಸ್ ಜನಪ್ರಿಯರಾದರೆ, ಬಿಕೆಎಸ್ ಅಯ್ಯಂಗಾರ್ ಕೆಲವು ಹಠ ಯೋಗಗಳ ಪಟ್ಟುಗಳನ್ನು ಪರಿಚಯಿಸಿದರು. ಪಟ್ಟಾಭಿಯವರು ಮೈಸೂರಲ್ಲೇ ಉಳಿದರೆ, ಬಿಕೆಎಸ್ ಅಯ್ಯಂಗಾರ್ ಅವರು ಪೂನಾಕ್ಕೆ ತೆರಳಿ ಅಲ್ಲಿ ಯೋಗ ಜನಪ್ರಿಯಗೊಳಿಸಿದರು. ಈಗ ಪಟ್ಟಾಭಿಜೋಯಿಸ್ ಪುತ್ರಿ ಸರಸ್ವತಿ, ಮೊಮ್ಮಗ ಶರತ್ ಪಟ್ಟಾಭಿ ಯೋಗ ಮುಂದುವರಿಸಿದ್ದರೆ, ಬಿಕೆಎಸ್ ಶಿಷ್ಯರಾದ ರಾಘವೇಂದ್ರ ಪೈ, ಭರತ್‌ಶೆಟ್ಟಿ ಅವರ ಪರಂಪರೆ ಕಾಯ್ದುಕೊಂಡಿದ್ದಾರೆ. ಮೈಸೂರಿನಲ್ಲಿ ಯೋಗವನ್ನು ವಿದೇಶಿಯರಿಗೆ ಹೇಳಿಕೊಡುವ ಪರಂಪರೆಗಿಂತ ಸೇವಾ ಮನೋಭಾವದಿಂದ ಈಗಲೂ ಬೆಳೆಸುತ್ತಿರುವ ದೊಡ್ಡ ಪಡೆಯೇ ಇದೆ.

ಅರಮನೆ ಮುಂದೆ ‘ಮೋದಿ’ ಯೋಗ
ಮೈಸೂರಿಗೂ ಯೋಗಕ್ಕೂ ಅವಿನಾಭಾವ ಸಂಬಂಧವಿದೆ. ಮೈಸೂರು ಸಾಂಸ್ಕ ೃತಿಕ ರಾಜಧಾನಿ ಮಾತ್ರವಲ್ಲದೆ ನಗರಿಯಾಗಿಯೂ ಗುರುತಿಸಿಕೊಂಡಿದೆ.  ಯಂತೆ ಯೋಗ ಕೂಡ ಮೈಸೂರಿಗರ ದೈನಂದಿನ ಕಾರ್ಯವಾಗಿದೆ. ಇಲ್ಲಿನ ೋಂಗ ಪರಂಪರೆಯನ್ನು ಗಮನಿಸಿಯೇ ಇದೀಗ ಮೋದಿ ಅವರು ಮೈಸೂರಿನಲ್ಲಿ ಯೋಗಾಸನ ಮಾಡಲಿದ್ದಾರೆ.

ಯೋಗ ಕ್ಷೇತ್ರದಲ್ಲಿ ಮೈಸೂರು ಸಾಕಷ್ಟು ಸಾಧನೆ ಮಾಡಿದ್ದರೂ ಕೂಡ ವಿಶ್ವಮಟ್ಟದಲ್ಲಿ ಇನ್ನಷ್ಟು ತೆರೆದುಕೊಳ್ಳಬೇಕಿದೆ. ಈ ಹಂತದಲ್ಲಿ ಪ್ರಧಾನಿಯೇ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಲ್ಲರ ಗಮನವನ್ನು ಸಾಂಸ್ಕೃತಿಕ ನಗರಿ ಸೆಳೆಯಲಿದೆ.

-ಯೋಗಗುರು ಡಾ.ಕೆ.ರಾಘವೇಂದ್ರ ಪೈ, ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ.

ಯೋಗ ಮನೆತನ ಹಾಗೂ ರಾಜ ಮನೆತನಗಳು ಜತೆಯಾಗಿ ಮೈಸೂರನ್ನು ಯೋಗದ ವಿಶ್ವ ರಾಜಧಾನಿಯನ್ನಾಗಿಸಿವೆ. ಪಾರಂಪರಿಕವಾಗಿ ಯೋಗವನ್ನು ಹೇಳಿಕೊಡುವ ಕೇಂದ್ರಗಳು ಮೈಸೂರಿನಲ್ಲಿ ಇರುವುದರಿಂದ ಎಲ್ಲರೂ ಇಲ್ಲಿ ಬಂದು ಕಲಿಯಲು ಆಸಕ್ತಿ ತೋರುತ್ತಾರೆ. ಈಗಲೂ ಯೋಗ ಪರಂಪರೆ ಮುಂದುವರೆದಿರುವುದು ಸಂತಸದಾಯಕ.

-ನಾಗಭೂಷಣ್, ಜಿಲ್ಲಾ ಸಂಚಾಲಕರು, ಎಸ್‌ಪಿವೈಎಸ್‌ಎಸ್

೨೦೧೫ರಿಂದ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲು ಪ್ರಾರಂಭಿಸಿದ ಮೇಲೆ ಯೋಗದ ಕಡೆಗೆ ಅಕರ್ಷಣೆ ಹೆಚ್ಚಾಗಿದೆ. ಪ್ರಪಂಚದ ೧೯೭ ದೇಶಗಳಲ್ಲಿ ಈ ದಿನವನ್ನು ಆಚರಣೆ ಮಾಡುವುದರಿಂದ ಎಲ್ಲರಿಗೂ ಯೋಗ ಎಂದರೆ ಏನು? ಅದರ ಅವಶ್ಯಕತೆಯ ಏಕೆ ಬೇಕು ಎನ್ನುವುದರ ಅರಿವು ಉಂಟಾಗಿದೆ. ರಾಜಪರಂಪರೆಯಿಂದ ಬೆಳೆದು ಬಂದ ಯೋಗವನ್ನು ಮೈಸೂರಿನಲ್ಲಿ ಈಗ ಹಲವು ಸಂಸ್ಥೆಗಳು ಲಕ್ಷಾಂತರ ಮಂದಿಗೆ ಕಲಿಸುತ್ತಿದ್ದಾರೆ.

 

ದಿನಕ್ಕೊಂದು ಆಸನ

ಶೀರ್ಷಾಸನ

ಶೀರ್ಷ ಎಂದರೆ ತಲೆ. ತಲೆಯನ್ನು ಕೆಳಗೆ ಮಾಡಿ ಕಾಲುಗಳನ್ನು ಮೇಲು ಮಾಡಿ ಅಭ್ಯಾಸ ಮಾಡುವ ಆಸನ. ಆಸನಗಳ ರಾಜ ಎಂದು ಇದನ್ನು ಕರೆಯುತ್ತಾರೆ.

ಅಭ್ಯಾಸ ಕ್ರಮ:

*ಮೊದಲಿಗೆ ಮಂಡಿಗಳನ್ನು ನೆಲದ ಮೇಲೆ ಊರಿ, ಬೆನ್ನು ನೇರ ಮಾಡಿ, ಹಿಮ್ಮಡಿಯ ಮೇಲೆ ಕುಳಿತುಕೊಳ್ಳಿ. ಸಾಕಷ್ಟು ದಪ್ಪವಾಗಿರುವಂತಹ ಹಾಸನ್ನು ಮಡಚಿ ತಲೆ ಕೆಳಗೆ ಇಟ್ಟುಕೊಳ್ಳಿ.
* ಮಂಡಿಯ ಎದುರು ಮೊಣಕೈಯ ಒಂದಳತೆ ಪ್ರಮಾಣದಲ್ಲಿ ಕೈಗಳನ್ನು ಹಾಸಿನ ಮೇಲೆ ಇಟ್ಟುಕೊಳ್ಳಿ. ಎರಡೂ ಕೈ ಬೆರಳನ್ನು ಒಂದಕ್ಕೊಂದು ಹೆಣದುಕೊಳ್ಳಿ. ಅವು ತ್ರಿಕೋನಾಕಾರದಲ್ಲಿ ಇರಲಿ.
* ಮುಂಗೈಗಳ ಮೇಲೆ ಭಾರ ಬರುವಂತೆ ನಡುನೆತ್ತಿಯನ್ನು ಹೆಣೆದ ಕೈಗಳ ನಡುವೆ ಇರಿಸಿ. ಹೆಣೆದ ಕೈ ತಲೆಯ ಹಿಂಭಾಗಕ್ಕೆ ಆಸರೆಯಾಗುವಂತಿರಲಿ.
* ಸೊಂಟದ ಭಾಗವನ್ನು ಮೇಲೆತ್ತುತ್ತಾ, ಕಾಲಿನ ಬೆರಳುಗಳನ್ನು ತಲೆಯ ಕಡೆಗೆ ಸರಿಸುತ್ತಾ ಬೆನ್ನು ನೇರವಾಗುವಂತೆ ತೊಡೆಯು ಎದೆಯ ಹತ್ತಿರ ಬರುವಂತೆ ತಂದು ಎರಡೂ ಪಾದಗಳು ಪೃಷ್ಠಕ್ಕೆ ತಾಗುವಂತೆ ಕಾಲುಗಳ ಭಾಗವನ್ನು ಮೇಲೆತ್ತಿ.
* ಮಡಿಸಿದ ಮಂಡಿಗಳನ್ನು ನೇರವಾಗಿ ಮೇಲುತ್ತುತ್ತಾ ಕಾಲುಗಳನ್ನು ನೇರ ಮಾಡಿ. ಇಡೀ ಶರೀರದ ಭಾರ ಮುಂಗೈಗಳ ಮೇಲಿರಲಿ. ಪೂರ್ಣ ಅಭ್ಯಾಸವಾದ ನಂತರ ತಲೆಯ ಮೇಲೆ ಭಾರ ಕೊಡಬಹುದು.
* ಹೋದ ಕ್ರಮದಲ್ಲಿಯೇ ಹಿಂದಿರುಗಿ.

ಗಮನಿಸಿ:

ಅಭ್ಯಾಸದ ಹಂತದಲ್ಲಿ ಗೋಡೆಯ ಸಹಾಯವನ್ನು ಪಡೆದುಕೊಳ್ಳುವುದು ಒಳ್ಳೆಯದು. ಶೀರ್ಷಾಸನದಿಂದ ಹಿಂದೆ ಬರುವಾಗ ಕೂಡಲೇ ಮೇಲೆಳಬಾರದು. ಸ್ವಲ್ಪ ಸಮಯ ಶಶಾಂಕಾಸನದ ಭಂಗಿಯಲ್ಲಿ ವಿಶ್ರಮಿಸಿ ಮೇಲೇಳಬೇಕು.

ಲಾಭಗಳು:

* ಶಿರೋಭಾಗದ ಕಡೆಗೆ ಶುದ್ಧ ರಕ್ತದ ಪ್ರವಾಹ ಹೆಚ್ಚು ಹರಿಯುವುದರಿಂದ ಇಡೀ ನರಮಂಡಲದ ಅರೋಗ್ಯ ಉತ್ತಮಗೊಳ್ಳುವುದು.
*ಶಿರೋಭಾಗದ ಪಿಟ್ಯೂಟರಿ, ಪೀನಿಯಲ್, ಕುತ್ತಿಗೆ ಭಾಗದ ಥೈರಾಯಿಡ್, ಪ್ಯಾರಾ ಥೈರಾಯಿಡ್, ಎದೆಭಾಗದ ಥೈಮಸ್, ಜಠರದ ಕೆಳಗಿರುವ ಮೇದೋಜಿರಕ, ಮೂತ್ರ ಜನಕಾಂಗದ ಮೇಲ್ಭಾಗದಲ್ಲಿರುವ ಅಡ್ರಿನಲ್, ಕಿಬ್ಬೊಟ್ಟಿಯ ಭಾಗದಲ್ಲಿರುವ ಸ್ತ್ರೀಯರ ಅಂಡಾಶಯ, ಪುರುಷರ ವೃಷಣಗಳು ಮುಂತಾದ ರಸ ಗ್ರಂಥಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಪೂರಕ.
*ಆಗಾಗ ಬರುವ ನೆಗಡಿ, ತಲೆನೋವುಗಳ ತೊಂದರೆ ನಿವಾರಣೆಯಾಗುವುದು.
* ಬೌದ್ಧಿಕ ಚಟುವಟಿಕೆ, ಸ್ಮರಣ, ಗ್ರಹಣ ಶಕ್ತಿ, ಏಕಾಗ್ರತೆಯ ವರ್ಧನಗೆ ಸಹಕಾರಿ.
* ಶುದ್ಧ ರಕ್ತದ ಹೆಚ್ಚಿನ ಸರಬರಾಜಿನಿಂದ ಮುಖಕಾಂತಿ ವೃದ್ಧಿಸುವುದು.
*ಅಜೀರ್ಣ, ಮಲಬದ್ಧತೆಯ ನಿವಾರಣೆಗೆ ಸಹಕಾರಿ.
*ಸಾತ್ವಿಕ ಗುಣವರ್ಧನಗೆ ಇದು ಪೂರಕ.

ಎಚ್ಚರಿಕೆ:
ಕಿವಿ ಸೋರುವವರು, ಕಣ್ಣಿನ ತೀವ್ರ ತೊಂದರೆ ಇರುವವರು, ಹೆಚ್ಚು ಅಥವಾ ಕಡಿಮೆ ರಕ್ತದೊತ್ತಡ ಇರುವವರು, ಎದೆಯ ನೋವು ಇರುವವರು, ಹೃದಯಾಘಾತವಾಗಿದ್ದವರು ಈ ಆಸನವನ್ನು ಅಭ್ಯಾಸ ಮಾಡಬಾರದು.

– ಮಾಹಿತಿ
ಯೋಗಗುರು ಡಾ.ಕೆ.ರಾಘವೇಂದ್ರ ಪೈ, ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ, ಮೈಸೂರು.

Tags: