Mysore
23
overcast clouds
Light
Dark

ಮ್ಯಾನ್ಮಾರ್: ಮತ್ತೆ ತುರ್ತು ಪರಿಸ್ಥಿತಿ ವಿಸ್ತರಣೆ, ಕುಸಿಯುತ್ತಿದೆಯೇ ಮಿಲಿಟರಿ ಹಿಡಿತ?

ಡಿ.ವಿ ರಾಜಶೇಖರ

ಭಾರತದ ನೆರೆಯ ದೇಶ ಮ್ಯಾನ್ಮಾರ್‌ನಲ್ಲಿ (ಹಿಂದಿನ ಬರ್ಮಾ) ಅಧಿಕಾರದಲ್ಲಿರುವ ಜನರಲ್ ಮಿನ್ ಆಂಗ್ ಲಯಿಂಗ್ ನೇತೃತ್ವದ ಮಿಲಿಟರಿ ಆಡಳಿದ ಕ್ರಮೇಣ ಹಿಡಿತ ಕಳೆದುಕೊಳ್ಳುತ್ತಿರುವಂತೆ ಕಾಣುತ್ತವೆ. ಮಿಲಿಟರಿ ಆಡಳಿತದ ವಿರುದ್ಧ ಹೋರಾಡುತ್ತಿರುವ ಬಂಡುಕೋರ ಹೋರಾಟಗಾರರು ಮೇಲುಗೈ ಸಾಧಿಸುತ್ತಿರುವ ಸೂಚನೆಗಳು ಈಗ ಲಭ್ಯವಾಗಿವೆ. ಕಳೆದ ವರ್ಷ ತುರ್ತು ಪರಿಸ್ಥಿತಿ ವಿಸ್ತರಿಸಿದ್ದ ಮಿಲಿಟರಿ ಆಡಳಿತ ಈಗ ಮತ್ತೆ ತುರ್ತುಪರಿಸ್ಥಿತಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ದೇಶ ಮಿಲಿಟರಿ ಆಡಳಿತಕ್ಕೆ ಒಳಪಟ್ಟು ಮೂರು ವರ್ಷಗಳು ಕಳೆದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ.

ವಿರೋಧಿ ಗೆರಿಲ್ಲಾಗಳು ಮತ್ತು ಸ್ಥಳೀಯ ಬುಡಕಟ್ಟು ಗೆರಿಲ್ಲಾಗಳು ಇದೀಗ ಸಂಘಟಿತವೇದಿಕೆ ರಚಿಸಿಕೊಂಡು ಪರಸ್ಪರ ಸಹಕಾರದಿಂದ ಹೋರಾಡುತ್ತಿರುವ ಕಾರಣದಿಂದ ಸೇನೆ ತತ್ತರಿಸಿದೆ. ಗಡಿಯಲ್ಲಿ ನೂರಾರು ಸೇನಾ ನೆಲೆಗಳನ್ನು ಬಂಡುಕೋರರು ವಶಪಡಿಸಿಕೊಂಡಿದ್ದು, ಸೈನಿಕರು ನೆರೆಯ ಭಾರತ ಮತ್ತು ಬಾಂಗ್ಲಾ ದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ. ರಾಕೀನಾ ಪ್ರಾಂತ್ಯದಲ್ಲಿ ಸಂಘರ್ಷ ಹೆಚ್ಚಾಗಿದ್ದು, ಅಲ್ಲಿ ನೆಲೆಸಿರುವ ಭಾರತೀಯರು ತುರ್ತಾಗಿ ಭಾರತಕ್ಕೆ ಹಿಂತಿರುಗುವಂತೆ ಭಾರತದ ವಿದೇಶಾಂಗ ಸಚಿವಾಲಯ ಸೂಚನೆ ನೀಡಿದೆ. ಜನರ ವಲಸೆಯೂ ಹೆಚ್ಚಾಗುತ್ತಿದ್ದು, 1643 ಕಿ.ಮೀ, ಗಡಿಯಲ್ಲಿ ಮೊದಲ ಬಾರಿಗೆ ಬೇಲಿ ನಿರ್ಮಿಸಲು ಭಾರತ ನಿರ್ಧರಿಸಿದೆ. ಮ್ಯಾನ್ಮಾರ್ ವಲಸೆಗಾರರು ಮತ್ತು ಗಡಿಯ ರಾಜ್ಯಗಳಾದ ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶಗಳಲ್ಲಿನ ಸ್ಥಳೀಯರ ನಡುವೆ ಘರ್ಷಣೆಗಳು ಹೆಚ್ಚಾಗುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ದಕ್ಷಿಣ ಏಷ್ಯಾ ದೇಶಗಳ ನಡುವೆ ಉತ್ತಮ ವಾಣಿಜ್ಯ ಬಾಂಧವ್ಯ ವೃದ್ಧಿಸುವ ಉದ್ದೇಶದಿಂದ ಗಡಿಯಲ್ಲಿ ಮುಕ್ತ ಸಂಚಾರಕ್ಕೆ 2018ರಿಂದ ಅವಕಾಶ ಕಲ್ಪಿಸಲಾಗಿತ್ತು. ಈ ಮುಕ್ತ ಗಡಿ ನಾನಾ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಮುಕ್ತ ಗಡಿ ನೀತಿಯನ್ನು ರದ್ದು ಮಾಡಲು ತೀರ್ಮಾನಿಸಿದೆ.

ಉತ್ತರದ ಚೀನಾ ಗಡಿಯಲ್ಲಿರುವ ಶಾನ್ ರಾಜ್ಯದ ಕೊಕಾಂಗ್ ಪ್ರದೇಶದ ರಾಜಧಾನಿ ಲಾಕೈ ನಗರವನ್ನು ಪ್ರಜಾತಂತ್ರ ಮೈತ್ರಿಕೂಟದ ಬಂಡುಕೋರರು ಇತ್ತೀಚೆಗೆ ವಶಪಡಿಸಿಕೊಂಡು ಮುನ್ನುಗ್ಗುತ್ತಿರುವುದು ಸೇನೆಗೆ ಆಘಾತ ಉಂಟುಮಾಡಿದೆ. ಈ ಬೆಳವಣಿಗೆಯಲ್ಲಿ ಸೇನೆ ಬಂಡುಕೋರರಿಗೆ ಶರಣಾಗಿರುವುದು ಮಿಲಿಟರಿ ಆಡಳಿತಗಾರರನ್ನು ಕೆರಳಿಸಿದೆ. ಈ ಪ್ರದೇಶದ ಮಿಲಿಟರಿ ಉಸ್ತುವಾರಿ ಹೊತ್ತಿದ್ದ ಆರು ಮಂದಿ ಬ್ರಿಗೇಡಿಯರ್ ಮಟ್ಟದ ಸೇನಾಧಿಕಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ.

ಈ ಪ್ರದೇಶದಲ್ಲಿ ಬಂಡುಕೋರರು ಮೇಲುಗೈ ಸಾಧಿಸಲು ಮುಖ್ಯ ಕಾರಣ ಮಿಲಿಟರಿ ಆಡಳಿತದ ವಿರುದ್ಧ ಹೋರಾಡುತ್ತಿರುವ ಮ್ಯಾನ್ಮಾರ್ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್, ತಾಂಗ್ ನ್ಯಾಷನಲ್ ಲಿಬರೇಷನ್ ಆರ್ಮಿ ಮತ್ತು ಅರಕನ್ ಪ್ರದೇಶದ ಬಂಡುಕೋರರು ಮೈತ್ರಿ ಕೂಟ ರಚಿಸಿಕೊಂಡು ಹೋರಾಡುತ್ತಿರುವುದೇ ಆಗಿದೆ. ದೇಶದ ವಿವಿಧ ಭಾಗಗಳಲ್ಲಿರುವ ಬಂಡುಕೋರರು ಈ ಮೈತ್ರಿಕೂಟಕ್ಕೆ ಇದೀಗ ಬೆಂಬಲ ಘೋಷಿಸಿದ್ದು ಮಿಲಿಟರಿ ವಿರುದ್ಧದ ಹೋರಾಟಕ್ಕೆ ಹೊಸ ಚೈತನ್ಯ ಬಂದಂತಾಗಿದೆ.

ಮ್ಯಾನ್ಮಾರ್ ಬೆಳವಣಿಗೆಗಳ ಬಗ್ಗೆ ಅಂತಾರಾಷ್ಟ್ರೀಯ ಗಮನ ಕಡಿಮೆಯೇ. ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ದಾಳಿ ಮತ್ತು ಗಾಜಾ ಮೇಲೆ ಇಸ್ರೇಲ್ ಮಿಲಿಟರಿ ದಾಳಿಗೆ ಸಿಕ್ಕಷ್ಟು ಮಹತ್ವ ಮ್ಯಾನ್ಮಾರ್ ಬೆಳವಣಿಗೆಗಳ ಬಗ್ಗೆ ಸಿಕ್ಕಿಲ್ಲ. ಮೂರು ವರ್ಷಗಳ ಹಿಂದೆ ಮ್ಯಾನ್ಮಾರ್‌ನ ಆಡಳಿತವನ್ನು ಸೇನೆ ಕಬಳಿಸಿದಾಗ ಆ ಪ್ರಶ್ನೆ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಕ್ಕೆ ಬಂದಿತ್ತು. ಆಗ ಚೀನಾ ಅದು ಆಂತರಿಕ ವಿಷಯ ಎಂದು ವಾದಿಸಿ ಖಂಡನಾ ನಿರ್ಣಯ ಅಂಗೀಕಾರವಾಗದಂತೆ ಮಾಡಿತು. ಇದಕ್ಕೆ ಕಾರಣ ಚೀನಾ ಅಪಾರ ಪ್ರಮಾಣದಲ್ಲಿ ಮ್ಯಾನ್ಮಾರ್‌ನಲ್ಲಿ ಬಂಡವಾಳ ಹೂಡಿರುವುದೇ ಆಗಿತ್ತು. ಮಿಲಿಟರಿ ಆಡಳಿತದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಚೀನಾ ಸಾಕಷ್ಟು ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಮಾರಿದೆ ಎಂದು ಹೇಳಲಾಗಿದೆ. ಮ್ಯಾನ್ಮಾರ್ ಮಿಲಿಟರಿ ಆಡಳಿತದ ಮೇಲೆ ವಿಶ್ವಸಂಸ್ಥೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ಅದರಲ್ಲಿ ಯುದ್ಧಾಸ್ತ್ರಗಳನ್ನು ಮ್ಯಾನ್ಮಾರ್‌ಗೆ ಯಾವುದೇ ದೇಶ ಮಾರಕೂಡದು ಎಂಬುದೂ ಒಂದು ನಿರ್ಬಂಧ ನಿರ್ಬಂಧಗಳಿದ್ದರೂ ಚೀನಾ, ರಷ್ಯಾ, ಉತ್ತರ ಕೊರಿಯಾ ಮತ್ತು ಹಲವು ಮುಂದುವರಿದ ದೇಶಗಳ ಯುದ್ಧಾಸ್ತ ಉತ್ಪಾದಕರು ರಹಸ್ಯವಾಗಿ ಯುದ್ಧಾಸ್ತ್ರಗಳನ್ನು ಮಾರುತ್ತಿದ್ದಾರೆ.

ಮ್ಯಾನ್ಮಾರ್ ಮಿಲಿಟರಿ ವಿರುದ್ಧ ಹೋರಾಡುವ ಇಚ್ಛಾಶಕ್ತಿ ಬಂಡುಕೋರರಲ್ಲಿ ಸಾಕಷ್ಟು ಇದೆ. ಆದರೆ ಹೋರಾಡಲು ಬೇಕಾದ ಶಸ್ತ್ರಾಸ್ತ್ರಗಳಿಲ್ಲ. ವಿದೇಶಗಳಿಂದ ನೆರವು ಸಿಗುತ್ತಿಲ್ಲ. ಸ್ಥಳೀಯವಾಗಿ ತಯಾರಿಸಿದ ದೇಶೀಯ ಶಸ್ತ್ರಾಸ್ತ್ರಗಳಿಂದಲೇ ಅವರು ಮಿಲಿಟರಿ ವಿರುದ್ಧ ಯುದ್ಧಕ್ಕಿಳಿದಿದ್ದಾರೆ. ವಿದೇಶೀ ಶಸ್ತ್ರಗಳಿಗಾಗಿ ಅವರು ಕಂಡುಕೊಂಡಿರುವ ಮತ್ತೊಂದು ಮಾರ್ಗ ಆಫ್ಘಾನಿಸ್ತಾನದ ತಾಲಿಬಾನ್‌ಗಳು ಮಾಡಿದಂತೆ ಓಪಿಯಂ ಬೆಳೆದು ಅದನ್ನು ಮಾರಿ ಯುದ್ಧಾಸ್ತ್ರಗಳನ್ನು ಕೊಳ್ಳುವುದು. ಮಿಲಿಟರಿ ಆಡಳಿತದ ಶಸ್ತ್ರಾಗಾರಗಳ ಮೇಲೆ ದಾಳಿ ಮಾಡಿ ಅವುಗಳನ್ನು ಅಪಹರಿಸುವ ಮಾರ್ಗವನ್ನೂ ಬಂಡುಕೋರರು ತುಳಿದಿದ್ದಾರೆ. ಆದರೆ ದೇಶದ ಮಿಲಿಟರಿ ಎದುರಿಸಲು ಈ ಶಸ್ತ್ರಗಳು ಸಾಲವು. ಹೀಗಾಗಿ ರಹಸ್ಯವಾಗಿ ಚೀನಾದಿಂದಲೇ ಶಸ್ತ್ರಗಳನ್ನು ಬಂಡುಕೋರರು ಕೊಳ್ಳುತ್ತಿದ್ದಾರೆಂಬ ಮಾಹಿತಿ ಇದೆ. ಇದನ್ನು ಚೀನಾ ಅಲ್ಲಗಳೆಯುತ್ತಿದೆ ಯಾದರೂ ಬಂಡುಕೋರರಿಗೆ ಹೊಸ ಧೈರ್ಯ ಚೀನಾದಿಂದಲೇ ಬಂದಿರಬೇಕು ಎಂಬುದು ಅಂತಾರಾಷ್ಟ್ರೀಯ ವೀಕ್ಷಕರ ಲೆಕ್ಕಾಚಾರ. ಇದು ನಿಜವೇ ಆಗಿದ್ದಲ್ಲಿ ಮ್ಯಾನ್ಮಾರ್ ವಿಚಾರದಲ್ಲಿ ಇದೊಂದು ದೊಡ್ಡ ತಿರುವು.

ಮೂರು ವರ್ಷಗಳ ಹಿಂದೆ ನಡೆದ ರಾಷ್ಟ್ರೀಯ ಚುನಾವಣೆಗಳಲ್ಲಿ ದೇಶದ ಪ್ರಜಾತಂತ್ರ ಹೋರಾಟದ ನಾಯಕಿ ಆಂಗ್ ಸಾನ್ ಸೂಕಿ ಅವರ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಜಯಗಳಿಸಿತ್ತು. ಸೇನೆ ಬೆಂಬಲ ನೀಡಿದ್ದ ನಿವೃತ್ತ ಸೇನಾಧಿಕಾರಿಗಳ ಯೂನಿಯನ್ ಸಾಲಿಡಾರಿಟಿ ಅಂಡ್ ಡೆವಲಪ್‌ಮೆಂಟ್ ಪಾರ್ಟಿ ಹೀನಾಯ ಸೋಲು ಅನುಭವಿಸಿತು. ಇದರಿಂದ ಕೆರಳಿದ ಸೇನಾಧಿಕಾರಿಗಳು ಕ್ಷಿಪ್ರಕ್ರಾಂತಿ ನಡೆಸಿ ಚುನಾವಣಾ ಫಲಿತಾಂಶಗಳನ್ನು ರದ್ದು ಮಾಡಿ ಅಧಿಕಾರವನ್ನು ಕಬಳಿಸಿದರು. ಚುನಾಯಿತ ಎನ್‌ಎಲ್‌ಡಿ ಸದಸ್ಯರನ್ನು ಬಂಧಿಸಿ ಜೈಲಿಗೆ ಹಾಕಲಾಯಿತು. ಆಗ್ಗಾಗಲೆ ಸೂಕಿ ಅವರು ಜೈಲಿನಲ್ಲಿದ್ದರು. ಮಿಲಿಟರಿ ವಿರುದ್ಧ ಪ್ರಕರಣವೊಂದರಲ್ಲಿ ಅವರಿಗೆ ಮಿಲಿಟರಿ ಕೋರ್ಟ್ 33 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದೆ. ಅಧಿಕಾರ ಕಬಳಿಸಿದ ಮಿಲಿಟರಿಯ ವಿರುದ್ಧ ಜನರು ಬೀದಿಗಿಳಿದರು. ಮಿಲಿಟರಿ ಬಂದೂಕಿನ ಮೂಲಕ ವಿರೋಧವನ್ನು ಹತ್ತಿಕ್ಕುವ ದಾರಿ ತುಳಿಯಿತು. ಸಾವಿರಾರು ಮಂದಿ ಮಿಲಿಟರಿ ಗುಂಡಿಗೆ ಬಲಿಯಾದರು. ಆದರೂ ಯುವಕರು ಮಿಲಿಟರಿಗೆ ಹೆದರದೆ ವಿರೋಧಿ ಚಳವಳಿಯನ್ನು ಗ್ರಾಮಗಳ ವಿರೋಧ ಪ್ರತಿ ಊರಿನಲ್ಲಿಯೂ ನೆಲೆಕಂಡುಕೊಂಡಿತು. ಸೇನೆಯ ಗುಂಡಿಗೆ ಕಳೆದ ಮೂರು ವರ್ಷಗಳಲ್ಲಿ 1,500ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂದು ಥೈಲ್ಯಾಂಡ್‌ನ ಸ್ವಯಂಸೇವಾ ಸಂಸ್ಥೆಯೊಂದು ವರದಿ ಮಾಡಿದೆ. ಬಂಡುಕೋರರಿರುವ ಮಾಹಿತಿಯಿರುವ ಊರುಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಲಾಗಿದೆ. ಸುಮಾರು 40 ಸಾವಿರ ಹಳ್ಳಿಗಳನ್ನು ಸುಟ್ಟು ನಾಶಮಾಡಲಾಗಿದೆ. ನಾಶವಾದ ಶಾಲೆಗಳು, ಆಸ್ಪತ್ರೆಗಳು ಲೆಕ್ಕವಿಲ್ಲ. ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ. ಅಷ್ಟೇ ಸಂಖ್ಯೆಯಲ್ಲಿ ಜನರು ವಲಸೆಹೋಗಿದ್ದಾರೆ. ರೊಹಿಂಗ್ಯಾ ಮುಸ್ಲಿಮರ ಮೇಲೆ ನಡೆದ ದೌರ್ಜನ್ಯ ಮತ್ತು ಆ ಜನರು ವಲಸೆ ಹೋದದ್ದು ಮತ್ತು ಪ್ರಾಣ ಕಳೆದುಕೊಂಡಿದ್ದು ಈ ಶತಮಾನದ ದೊಡ್ಡ ದುರಂತವೆಂದೇ ಹೇಳಲಾಗಿದೆ.

ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಹಾಗೂ ಯುರೋಪ್ ದೇಶಗಳು ಮ್ಯಾನ್ಮಾರ್ ದೇಶದ ಮೇಲೆ ಹಲವು ರೀತಿಯ ನಿರ್ಬಂಧಗಳನ್ನು ಹಾಕಿವೆ. ಆ ದೇಶಕ್ಕೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಯಾವುದೇ ದೇಶ ಮಾರುವಂತಿಲ್ಲ. ಹಾಗಿದ್ದರೂ ಕಳ್ಳಮಾರ್ಗದಲ್ಲಿ ಚೀನಾ, ಉತ್ತರ ಕೊರಿಯಾ ಮತ್ತು ಭೂಗತ ಮೂಲಗಳಿಂದ ಮ್ಯಾನ್ಮಾರ್ ಮಿಲಿಟರಿ ಯುದ್ಧಾಸ್ತ್ರಗಳನ್ನು ಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ನಿರ್ಬಂಧಗಳನ್ನು ಬಿಗಿಗೊಳಿಸಬೇಕೆಂದು ವಿಶ್ವಸಂಸ್ಥೆಯ ಮಾನವ ಹಕ್ಕು ಸಂಘಟನೆ ಒತ್ತಾಯಿಸಿದೆ. ಮುಖ್ಯವಾಗಿ ಯುದ್ಧ ವಿಮಾನಗಳಲ್ಲಿ ಬಳಸಲಾಗುವ ತೈಲದ ಮಾರಾಟವನ್ನು ನಿರ್ಬಂಧಿಸಬೇಕೆಂದು ಒತ್ತಾಯಿಸಲಾಗಿದೆ. ಯಾವುದೇ ರೀತಿಯ ನಿರ್ಬಂಧಗಳು ಜಾರಿಗೊಂಡರೂ ಅವುಗಳನ್ನು ವಿಫಲಗೊಳಿಸುವ ಕಲೆಯನ್ನು ಮಿಲಿಟರಿ ಸರ್ಕಾರ ಕರಗತಮಾಡಿಕೊಂಡಿರುವುದೇ ಮ್ಯಾನ್ಮಾರ್‌ನ ದುರಂತ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ