“ವೇದಗಳ ಎದೆಯ ಮೇಲೆ ನಡೆವ ಬೆಳಕು ನಾನು ಬೋಧಿ ವೃಕ್ಷಗಳ ಕೆಳಗೆ ಬುದ್ಧ ನಾನು ಲೋಕ ಕ್ರಾಂತಿಯ ಬೆಂಕಿ ಹಕ್ಕಿ ನಾನು ಜಗದಾದಿ ಕಾವ್ಯದ ಕರಿಬಟ್ಟು ನಾನು ಕ್ರೌರ್ಯದ ಮೋರೆಗೆ ಬೆಂಕಿಯಿಕ್ಕಿದ ಕ್ರೌಂಚ ಪಕ್ಷಿ ನಾನು ಜಗದ ಶಾಂತಿ ಸೂರ್ಯ ನಾನು”(ನೆಲದ ಜೋಗುಳ) ದಮನಿತ ಸಮುದಾಯದ ‘ನೆಲದ ಜೋಗುಳ’ ಹಾಡಿದ ‘ಏಕಾಂಗಿ ಏಕಲವ್ಯ’ ಮುಳ್ಳೂರು ನಾಗ ರಾಜ್ ದಲಿತ ಚಳವಳಿಯ ಸಾಕ್ಷಿಪ್ರಜ್ಞೆ. ಬದುಕಿನ ಬವಣೆ ಹೊತ್ತು ಬಯಲ ಬೆಳದಿಂಗಳ ಬಯಸಿದ ನೆಲದ ಕವಿ. ಬಡತನ, ಹಸಿವು, ಅವಮಾನ, ಸಂಕಟಗಳ ಬದುಕಿಗೆ ಸೃಜನಶೀಲ ಕಾವ್ಯಾಭಿವ್ಯಕ್ತಿಯಾಗುತ್ತ, ಶೋಷಣೆ ರಹಿತ ಸಮಾಜಕ್ಕಾಗಿ ಹಂಬಲಿಸಿದವರು.
ಪ್ರತಿರೋಧದ ನೆಲೆಗಳನ್ನು ನೊಂದವರ ಪರವಾದ ಸಮಾಜ ಪರಿವರ್ತನಾ ಚಳವಳಿಗಳಲ್ಲಿ ಕಂಡುಕೊಂಡ ಮುಳ್ಳೂ ರರು, ಬದುಕು, ವ್ಯಕ್ತಿತ್ವ, ಹೋರಾಟ ಹಾಗೂ ಸಾಹಿತ್ಯಕ್ಕೂ ಕರುಳ ಬಳ್ಳಿಯ ಸಂಬಂಧವಿದೆ ಎಂಬು ದನ್ನು ಸಾಬೀತುಪಡಿಸಿದ ವರು. ಎಂ. ಎಚ್. ಗಂಗಾಧ ರಯ್ಯ ಮತ್ತು ಪುಟ್ಟ ನಂಜಮ್ಮ ದಂಪತಿಯ ಮಗನಾಗಿ ೧೯ನೇ ಮಾರ್ಚ್ ೧೯೫೩ರಂದು, ಮೈಸೂರು ಜಿಲ್ಲೆಯ, ನಂಜನ ಗೂಡು ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಜನಿಸಿದ ಮುಳ್ಳೂರರು, ದಲಿತ ಚಳವಳಿಗಾಗಿ ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿದರು.
ಹೊರನೋಟಕ್ಕೆ ಸೌಮ್ಯ ಸ್ವಭಾವದವರಾಗಿ ಕಂಡರೂ ವ್ಯವಸ್ಥೆಯ ಕ್ರೌರ್ಯ ಕಂಡಾಗ ಸಾತ್ವಿಕ ಸಿಟ್ಟಿನಿಂದ ಒಳ ಗೊಳಗೆ ಕುದಿಯುತ್ತಿದ್ದ ಜ್ವಾಲಾ ಮುಖಿ ಅವರು. ಎಲ್ಲೇ ಅನ್ಯಾಯ ನಡೆದರೂ ಅದರ ವಿರುದ್ಧ ಸಹಜವಾಗಿ ಸ್ಛೋಟಗೊಳ್ಳುತ್ತಿದ್ದರು. ಸದಾ ಅಂತರ್ಮುಖಿಯಾಗಿ, ಸಮಾಜಪರವಾಗಿ ಚಿಂತಿಸುತ್ತಿದ್ದ ಮುಳ್ಳೂರರು ಪ್ರಖರ ನಿಷ್ಠೂರವಾದಿ. ಶೋಷಿತ ಸಮುದಾಯಗಳ ಸಾಂಸ್ಕೃತಿಕ ರೂಪಕ ಗಳ ಮೂಲಕವೇ ಮಾತನಾಡುತ್ತಿದ್ದ ಮುಳ್ಳೂರರು, ಭಾರತೀಯ ಪುರಾಣ ಪರಿಕಲ್ಪನೆಯನ್ನು ಮುರಿದುಕಟ್ಟಿದ್ದಾರೆ.
ಮುಳ್ಳೂರರು ಕರ್ನಾಟಕ ದಲಿತ ಸಂಘರ್ಷ ಸಮಿತಿ ರೂಪಿಸಿದ ಹಲವು ಧರಣಿ, ಸತ್ಯಾಗ್ರಹ, ಜಾಥಾ, ಭೂ ಹೋರಾಟಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿ ಕೊಂಡ ವರು. ನಂಜನಗೂಡಿನ ತಗಡೂರು ಭೂ ಹೋರಾಟದಲ್ಲಿ ಇವರದು ಪ್ರಮುಖ ಪಾತ್ರ. ಕರ್ನಾಟಕದ ಯಾವುದೇ ಮೂಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಾಗ ಮುಳ್ಳೂರರು ಹೋರಾಟದ ಪಂಜಾಗುತ್ತಿ ದ್ದರು. ದಲಿತರ ಕಗ್ಗೊಲೆಯ ಬದನವಾಳು ದುರಂತವನ್ನು ಖಂಡಿಸಿ ಬಹುದೊಡ್ಡ ಹೋರಾಟವನ್ನು ಕಟ್ಟಿದವರಲ್ಲಿ ಇವರೂ ಪ್ರಮುಖರು. ತುರ್ತು ಪರಿಸ್ಥಿತಿ ವಿರೋಧಿಸಿ ಬರೆದ ಇವರ ಕವಿತೆ ಇಂಗ್ಲಿಷ್‌ಗೆ ಅನುವಾದಗೊಂಡು, ಅಮೆರಿಕದ ‘ಜಾನ್ ಆಲಿವರ್ ಪೆರ್ರಿ’ ಸಂಪಾದಿಸಿರುವ ‘ವಾಯ್ಸ್ ಆಫ್ ಎಮರ್ಜೆನ್ಸಿ’ ಪುಸ್ತಕದಲ್ಲಿ ಪ್ರಕಟಗೊಂಡಿದೆ. ದಲಿತರ ಆದಿಮ ಸಂಕಟಕ್ಕೆ ಅಕ್ಷರವಾಗಿರುವ ಇವರು, ದಲಿತರ ಅವಮಾನದ ಪರಂಪರೆ, ಸಾಮಾಜಿಕ ನ್ಯಾಯದ ಹಕ್ಕೊತ್ತಾಯ ಹಾಗೂ ಪ್ರತಿರೋಧದ ನೆಲೆಗಳನ್ನು ಪುರಾಣದ ‘ಏಕಲವ್ಯ’, ‘ಶಂಭೂಕರ ಕಣ್ಣೋಟ’ದ ಮೂಲಕ ಶೋಽಸಿದವರು. ರಾಮಾಯಣ, ಮಹಾ ಭಾರತಗಳನ್ನು ನೊಂದವರ ಸಂವೇದನೆಯಿಂದ ತರ್ಕಕ್ಕೊಳಪಡಿಸುತ್ತ ದಲಿತತ್ವದ ಅನನ್ಯತೆಯನ್ನು ಅಭಿವ್ಯಕ್ತಿಸಿದ್ದಾರೆ. ಸಾವಿನ ಕೊನೆಗಾಲದವರೆಗೂ ಸಮಸ್ಯೆ-ಸವಾಲುಗಳೊಟ್ಟಿಗೆ ಬದುಕಿದ ನಾಗ ರಾಜ್ ಅವರ ಹೆಸರಿಗಂಟಿಕೊಂಡಿರುವ ‘ಮುಳ್ಳೂರು’ ಅವರ ಹುಟ್ಟೂರು ಹೌದು ಹಾಗೂ ಅವರ ಬದುಕಿನ ಅನ್ವರ್ಥನಾಮವೂ ಹೌದು.
“ನೆಲದ ಜೋಗುಳ, ಏಕಾಂಗಿ ಏಕಲವ್ಯ, ಮರಣ ಮಂಡಲ ಮಧ್ಯದೊಳಗೆ, ದಂಡಕಾರಣ್ಯ, ಸಿಂಗಳೀಕ, ಮಾಮರದ ಮೇಲೊಂದು ಕೋಗಿಲೆ, ಮುಳ್ಳೂರರ ವಚನ, ಬದನವಾಳು ದುರಂತ” ಮುಂತಾದ ಕೃತಿಗಳ ಮೂಲಕ ದಲಿತ ಕೇರಿಯ ಕನವರಿಕೆ ಹಾಗೂ ಪ್ರತಿರೋಧವನ್ನು ಬರಹವಾಗಿಸಿ ದವರು. ‘ಪಂಚಮ, ಮುಳ್ಳೂರು’ ಪತ್ರಿಕೆಗಳ ಸಂಪಾದಕರಾಗಿ, ‘ಸುದ್ದಿ ಸಂಗಾತಿ, ಮುಂಜಾನೆ, ನಿಜದನಿ, ಮಾರ್ದನಿ, ಭುವನ ಸಂಗಾತಿ’ ಪತ್ರಿಕೆಗಳ ವರದಿಗಾರರಾಗಿ ತಮ್ಮ ತೀಕ್ಷ್ಣ ಬರಹದ ಮೂಲಕ ವೈಚಾರಿಕ ಜಿಜ್ಞಾಸೆಯನ್ನು ಮೂಡಿಸಿದವರು. ಮುಳ್ಳೂರರ ಸಾಹಿತ್ಯಕ ಹಾಗೂ ಸಾಮಾಜಿಕ ಕೊಡುಗೆಯನ್ನು ಪರಿಗಣಿಸಿ ೨೦೦೭ರಲ್ಲಿ ‘ಡಾ. ಬಿ. ಆರ್. ಅಂಬೇಡ್ಕರ್ ಪ್ರಶಸ್ತಿ’, ೨೦೦೮ರ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ’ ಹಾಗೂ ೨೦೦೯ರ ‘ಅಖಿಲ ಭಾರತ ದಲಿತ ಸಾಹಿತ್ಯ ಪರಿಷತ್ ಗೌರವ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.
ಮುಳ್ಳೂರು ನಾಗರಾಜ್ ಅವರನ್ನು, ಅವರ ಸಾಹಿತ್ಯವನ್ನು ಸದಾ ಜೀವಂತವಾಗಿಡುವ ಸಲುವಾಗಿ, ಚಾಮರಾಜನಗರದ ಸಿ. ಎಂ. ನರಸಿಂಹಮೂರ್ತಿಯ ವರು ತಮ್ಮ ‘ರಂಗವಾಹಿನಿ’ ಸಂಸ್ಥೆಯ ಮೂಲಕ ಕಳೆದ ಹದಿಮೂರು ವರ್ಷಗಳಿಂದ ಕವಿ ಮುಳ್ಳೂರು ನಾಗರಾಜರ ಗೌರವಾರ್ಥ ನಾಡಿನ ಯುವ ಕವಿಗಳನ್ನು ಗುರುತಿಸಿ ಅವರ ಕವನ ಸಂಕಲನಕ್ಕೆ ರಾಜ್ಯ ಮಟ್ಟದ “ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ” ನೀಡುತ್ತಾ ಬರುತ್ತಿರುವುದು ಹೆಮ್ಮೆಯ ಸಂಗತಿ. ೨೦೨೩ನೇ ಸಾಲಿಗೆ ಚಾಂದ್ ಪಾಷ ಎನ್. ಎಸ್. ಅವರ “ಒದ್ದೆಗಣ್ಣಿನ ದೀಪ” ಹಾಗೂ ೨೦೨೪ನೇ ಸಾಲಿಗೆ ಪಿ. ನಂದಕುಮಾರ್ ಅವರ “ಹಂಗಿನ ಕಿರೀಟಕ್ಕೆ ಜೋತುಬಿದ್ದ ನಾಲಿಗೆ” ಕವನ ಸಂಕಲನಗಳು ಆಯ್ಕೆಯಾಗಿವೆ.
‘ರಂಗವಾಹಿನಿ, ರಾಮಮನೋಹರ ಲೋಹಿಯಾ ಟ್ರಸ್ಟ್, ನೆಲೆ ಹಿನ್ನೆಲೆ ಸಂಸ್ಥೆ’ಗಳ ಸಹಯೋಗದಲ್ಲಿ ೧೦ನೇ ಮೇ ೨೦೨೫ರಂದು ಸಂಜೆ ೫ಕ್ಕೆ ‘ಮುಳ್ಳೂರು ನಾಗ ರಾಜ ಕಾವ್ಯ ಪ್ರಶಸ್ತಿ’ ಸಮಾರಂಭವನ್ನು ಮೈಸೂರಿನ ಕಲಾಮಂದಿರದ ‘ಕಿರುರಂಗಮಂದಿರ’ದಲ್ಲಿ ಹಮ್ಮಿ ಕೊಳ್ಳಲಾಗಿದೆ. ಮುಳ್ಳೂರು ನಾಗರಾಜ್ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಜೊತೆಗೆ ‘ರಾಜಶೇಖರ ಕೋಟಿ’ ಅವರ ನೆನಪಿನ ಕಾರ್ಯಕ್ರಮವನ್ನು ಹಮ್ಮಿ ಕೊಂಡಿರುವುದು ವಿಶೇಷ. ‘ಆಂದೋಲನ’ ದಿನ ಪತ್ರಿಕೆಯ ಸಂಸ್ಥಾಪಕ ಸಂಪಾದಕ ರಾದ ರಾಜಶೇಖರ ಕೋಟಿ ಅವರು ನಾಡು ಕಂಡ ಬದ್ಧತೆವುಳ್ಳ ಪ್ರಾಮಾಣಿಕ ಪತ್ರಕರ್ತರಾಗಿದ್ದವರು. ದಲಿತ, ರೈತ, ಪ್ರಗತಿಪರ ಚಳವಳಿಗಳ ಆಪ್ತ ಒಡನಾಡಿ ಯಾಗಿದ್ದ ಕೋಟಿ ಅವರು, ಆಂದೋಲನ ಪತ್ರಿಕೆಯನ್ನು ಸಮಾ ಜಮುಖಿಯಾಗಿ ರೂಪಿಸುವ ಮೂಲಕ, ಕನ್ನಡ ಭಾಷೆಯ ಪರವಾದ ಚಿಂತನೆಯನ್ನು ವಿಸ್ತರಿಸಿದ್ದಾರೆ.
ಮುಳ್ಳೂರರ ಬರಹ, ಹೋರಾಟ, ವ್ಯಕ್ತಿತ್ವವನ್ನು ಹತ್ತಿರ ದಿಂದ ಬಲ್ಲವರಾಗಿದ್ದ ಕೋಟಿ ಅವರಿಗೆ ಮುಳ್ಳೂರರ ಬಗೆಗೆ ಆತ್ಮೀಯ ಪ್ರೀತಿ, ಒಡನಾಟವಿತ್ತು. ತಾವು ಬದುಕಿರುವಷ್ಟು ಕಾಲ ಪ್ರತಿ ವರ್ಷ ಮುಳ್ಳೂರು ನಾಗರಾಜ್ ಕಾವ್ಯ ಪ್ರಶಸ್ತಿ ಸಮಾರಂಭಕ್ಕೆ ತಮ್ಮ ರಾಮಮನೋಹರ ಲೋಹಿಯಾ ಟ್ರಸ್ಟ್ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದರು.
ಈ ಅರ್ಥಪೂರ್ಣ ಸಮಾರಂಭದಲ್ಲಿ, ಪರಸ್ಪರ ಆತ್ಮೀಯ ಒಡನಾಡಿಗಳಾಗಿದ್ದ ಮುಳ್ಳೂರು ನಾಗರಾಜ್ ಹಾಗೂ ರಾಜಶೇಖರ ಕೋಟಿ ಅವರ ಬದುಕು, ಹೋರಾಟ, ಸಾಹಿತ್ಯ ಕುರಿತು ಚರ್ಚಿಸುವ ಮೂಲಕ ಆ ಹಿರಿಯ ಚೇತನಗಳಿಗೆ ಗೌರವ ಸಲ್ಲಿಸುತ್ತಿರುವುದು ಮಹತ್ವದ ಸಂಗತಿ.
ಅಪ್ಪಗೆರೆ ಸೋಮಶೇಖರ್,
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ





