Mysore
19
few clouds

Social Media

ಬುಧವಾರ, 21 ಜನವರಿ 2026
Light
Dark

ಭ್ರಷ್ಟಾಚಾರ ನಿಗ್ರಹ ಮಸೂದೆಯಲ್ಲಿ ಪ್ರಾಮಾಣಿಕತೆ ಕೊರತೆ 

curraption

ದೆಹಲಿ ಕಣ್ಣೋಟ

ಭ್ರಷ್ಟಾಚಾರ ದೇಶದ ಅಭಿವೃದ್ಧಿಯನ್ನು ತಿಂದು ಹಾಕುತ್ತಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರ ಏನೇ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡರೂ ರಾಜಕೀಯ ಅಧಿಕಾರದ ದುರುಪಯೋಗ ಮತ್ತು ಅಧಿಕಾರಿ ವರ್ಗ ಹಾಗೂ ಕೆಳಗಿನ ನೌಕರ ಸಿಬ್ಬಂದಿಯಲ್ಲಿ ಹೆಚ್ಚಿರುವ ಹಣದಾಹಿತನದಿಂದ ಅಭಿವೃದ್ಧಿ ಎನ್ನುವುದು ಇನ್ನೂ ಮರೀಚಿಕೆಯಾಗಿದೆ. ಈ ದೃಷ್ಟಿಯಿಂದ ಭ್ರಷ್ಟ ವ್ಯವಸ್ಥೆಯನ್ನು ತೊಲಗಿಸುವ ಯಾವುದೇ ಕ್ರಮಗಳನ್ನು ಬೆಂಬಲಿಸಲೇಬೇಕು. ಆದರೆ ಈ ಪ್ರಕ್ರಿಯೆಯು ನಾವು ಒಪ್ಪಿಕೊಂಡಿರುವ ಜನತಂತ್ರ ವ್ಯವಸ್ಥೆಯನ್ನು ದುರ್ಬಲಗೊಳಿಸುವಂತಿರಬಾರದು.

ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಹಣ ಹಳ್ಳಿಯ ಬಡವನಿಗೆ ತಲುಪುವ ಹೊತ್ತಿಗೆ ಒಂದು ರೂಪಾಯಿಯಲ್ಲಿ ಕೇವಲ ೨೦ ಪೈಸೆ ಮಾತ್ರ ಅವನಿಗೆ ದಕ್ಕುತ್ತದೆ. ಉಳಿದ ೮೦ ಪೈಸೆ ಮೇಲಿನಿಂದ ಕೆಳಗಿನವರೆಗೂ ಭ್ರಷ್ಟಾಚಾರದಿಂದ ಹಂಚಿಹೋಗುತ್ತದೆ.  ಇದಕ್ಕೆ ನಮ್ಮ ಆಡಳಿತ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವೇ ಕಾರಣ. ಈ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡದ ಹೊರತು, ಯಾವುದೇ ಯೋಜನೆಯನ್ನು ಜಾರಿಗೆ ತಂದರೂ ಅದು ಹಳ್ಳಿಯ ಬಡವನಿಗೆ ತಲುಪುವುದಿಲ್ಲ ಮತ್ತು ಇದರಿಂದ ಸರ್ಕಾರಕ್ಕೆ ನಿರೀಕ್ಷಿತ ಫಲಿತಾಂಶ ಬರುವುದಿಲ್ಲ ಎಂಬ ಸತ್ಯ ಸಂಗತಿಯನ್ನು ಹೊರಹಾಕಿದ್ದರು.

ಭ್ರಷ್ಟಾಚಾರ ಕೇವಲ ಒಬ್ಬರಿಂದ ಮಾತ್ರ ನಡೆಯುವುದಿಲ್ಲ. ಆಡಳಿತದಲ್ಲಿರುವ ಉನ್ನತ ಮಟ್ಟದ ಅಧಿಕಾರಿಯಿಂದ ಹಿಡಿದು ಕೆಳಗಿನ ನೌಕರನವರೆಗೂ ಈ ಲಂಚಗುಳಿತನ ಹಬ್ಬಿದೆ. ಈ ಲಂಚಗುಳಿತನವು ನಮ್ಮ ಅಭಿವೃದ್ಧಿಯನ್ನು ನಿತ್ಯವೂ ಇಂಚಿಂಚು ತಿನ್ನುತ್ತಾ ಬಂದಿರುವುದರಿಂದ ಬಡತನ ನಿವಾರಣೆ ಇನ್ನೂ ಸಾಧ್ಯವಾಗಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸದರಲ್ಲಿ ನಮ್ಮ ರಾಜಕಾರಣಿಗಳಲ್ಲಿ ಆದರ್ಶ ಎನ್ನುವುದು ಮುಖ್ಯ ಧ್ಯೇಯವಾಗಿತ್ತು. ಆದರೆ ಕಾಲಮಾನ ಬದಲಾದಂತೆ ಅಂತಹ ಯಾವ ಆದರ್ಶವೂ ಈಗ ಉಳಿದಿಲ್ಲ. ಈ ಭ್ರಷ್ಟಾಚಾರ ಎನ್ನುವುದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಭ್ರಷ್ಟಾಚಾರ ವಿಶ್ವರೂಪಿ ಎಂದು ಐದು ದಶಕಗಳ ಹಿಂದೆಯೇ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇಳಿದ್ದರು.

ಭ್ರಷ್ಟಾಚಾರ ಎನ್ನುವುದು ಒಂದು ಸಣ್ಣ ದೇಶವನ್ನೂ ಬಿಟ್ಟಿಲ್ಲ. ಇಂದಿನ ಸುದ್ದಿಯಂತೆ ನಮ್ಮ ನೆರೆಯ ಪುಟ್ಟ ದೇಶವಾದ ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್ ವಿಕ್ರಂ ಸಿಂಘೆ ತಮ್ಮ ಪತ್ನಿಯು ಇಂಗ್ಲೆಂಡ್‌ನಲ್ಲಿ ನಡೆದ ಘಟಿಕೋತ್ಸವದಲ್ಲಿ ಭಾಗವಹಿಸಲು ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡರೆಂಬ  ಕಾರಣಕ್ಕೆ ಅಲ್ಲಿನ ಸಿಐಡಿ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಭ್ರಷ್ಟಾಚಾರವನ್ನು ಪ್ರಧಾನಿ, ಕೇಂದ್ರ ಮತ್ತು ರಾಜ್ಯ ಮಟ್ಟದ ಸಚಿವರು ಹಾಗೂ ಮುಖ್ಯಮಂತ್ರಿಯ ಮಟ್ಟದಿಂದಲೇ ಕಿತ್ತು ಹಾಕಬೇಕೆನ್ನುವ ಉದ್ದೇಶದಿಂದ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸಂವಿಧಾನ ತಿದ್ದುಪಡಿಯ ಮಸೂದೆಯೊಂದನ್ನು ಲೋಕಸಭೆಯಲ್ಲಿ ಮಂಡಿಸಿದೆ. ಈ ಮಸೂದೆಯ ಪ್ರಕಾರ ಪ್ರಧಾನಿ ಇರಲಿ, ಕೇಂದ್ರ ಮತ್ತು ರಾಜ್ಯಗಳ ಸಚಿವರುಗಳಾಗಲಿ ಅಥವಾ ಮುಖ್ಯಮಂತ್ರಿಗಳಾಗಲಿ ಐದು ವರ್ಷಗಳ ಕಾಲ ಶಿಕ್ಷೆ ಅನುಭವಿಸುವ ಅಪರಾಧಗಳ ಆರೋಪಗಳ ಮೇಲೆ ೩೦ ದಿನಗಳಿಗಿಂತಲೂ ಹೆಚ್ಚು ದಿನಗಳ ಕಾಲ ಜೈಲಿನಲ್ಲಿದ್ದರೆ ಅವರು ಚುನಾಯಿತ ಸ್ಥಾನಗಳನ್ನು ಕಳೆದುಕೊಳ್ಳುವರು. ಮೇಲ್ನೋಟಕ್ಕೆ ಇದು ಒಳ್ಳೆಯ ಕಾಯ್ದೆಯಾಗಬಹುದು. ಆದರೆ ವಾಸ್ತವದಲ್ಲಿ ಅದರ ಹಿಂದಿನ ಉದ್ದೇಶವೇ ಬೇರೆ ಇರುವುದನ್ನು ತಿಳಿಯಲು ಯಾವ ಕಾನೂನು ಪಾಂಡಿತ್ಯವೂ ಬೇಕಿಲ್ಲ.

ಶಾಸಕಾಂಗ ವ್ಯವಸ್ಥೆಯು ಕಾಯ್ದೆ ಮಾಡುವ ಮತ್ತು ಸಂವಿಧಾನ ತಿದ್ದುಪಡಿ ಮಾಡುವ ಅವಕಾಶವನ್ನು ಹೊಂದಿದೆ. ಆದರೆ ಅದು ನ್ಯಾಯಾಂಗದ ವ್ಯಾಪ್ತಿ ಯನ್ನು ಆಕ್ರಮಿಸಿಕೊಳ್ಳಬಾರದು. ದೆಶದಲ್ಲಿ ಸ್ವತಂತ್ರ ಆಡಳಿತ ಜಾರಿಗೆ ಬಂದು ೭೫ ವರ್ಷಗಳಾದರೂ ಪ್ರಧಾನಿಯಾದವರ ಮೇಲೆ ಗಂಭೀರವಾದ ಅಂದರೆ ಐದು ವರ್ಷಗಳ ಜೈಲು ಶಿಕ್ಷೆ ಅನುಭವಿಸುವ ಅಪರಾಧಗಳು ಘಟಿಸಿಲ್ಲ. ಅದರೆ ಬಿಜೆಪಿ ನೇತೃತ್ವದ ಆಡಳಿತ ವ್ಯವಸ್ಥೆ ಕೇಂದ್ರದಲ್ಲಿ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಆಳ್ವಿಕೆಯಲ್ಲಿ ಭ್ರಷ್ಟಾಚಾರ ಆರೋಪಗಳೂ ಸೇರಿದಂತೆ ಹಲವು ಕಾರಣಗಳಿಗೆ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಬಂಧನಗಳಾಗಿವೆ. ಈ ಬಂಧನಗಳು ಬಹುತೇಕ ರಾಜಕೀಯ ಕಾರಣಗಳಿಗೆ ನಡೆದಿವೆ ಎನ್ನುವುದು ಬೆಳಕಿನಷ್ಟು ಸತ್ಯ. ಹಾಗಾಗಿ ಹೀಗಿರುವ ಕೇಂದ್ರ ಸರ್ಕಾರದ ಉದ್ದೇಶವನ್ನು ಪ್ರತಿಪಕ್ಷಗಳು ಮತ್ತು ಜನತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿರುವ ಜನರು ಶಂಕಿಸುವಂತಾಗಿದೆ.

ಒಂದು ವೇಳೆ ಈ ಸಂವಿಧಾನ ತಿದ್ದುಪಡಿ ಕಾಯ್ದೆ ಯಥಾವತ್ತಾಗಿ ಜಾರಿಯಾದರೆ ಆರೋಪ ಬಂದವರು ೩೦ ದಿನಗಳ ನಂತರ ತಮ್ಮ ರಾಜಕೀಯ ಅಧಿಕಾರವನ್ನು ಕಳೆದುಕೊಳ್ಳುವರು. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವುದೇ ಪ್ರಕರಣವೂ ಜರೂರಾಗಿ ಇತ್ಯರ್ಥಗೊಂಡ ಉದಾಹರಣೆಗಳಿಲ್ಲ. ತೀರ್ಪು ಹೊರಬೀಳಲು ಹತ್ತಿಪ್ಪತ್ತು ವರ್ಷಗಳೇ ಆಗುತ್ತಿವೆ. ಇದಕ್ಕೆ ವಕೀಲರಾದಿಯಾಗಿ ಕಕ್ಷಿದಾರ, ಸಾಕ್ಷ್ಯ ನುಡಿಯುವವರು, ಸಾಕ್ಷ್ಯ ಸಂಗ್ರಹಣೆಯಲ್ಲಿ ಆಗುವ ನಿಧಾನಗತಿ, ಪ್ರಕರಣದ ಸತ್ಯ ಸಂಗತಿಗಳನ್ನು ಕಲೆಹಾಕಿ ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಲ್ಲಿ ಆಗುವ ವಿಳಂಬ, ಹೀಗೆ  ನೂರಾರು ಕಾರಣಗಳಿಂದ ಯಾವುದೇ ಪ್ರಕರಣಗಳು ಸಕಾಲಕ್ಕೆ ಇತ್ಯರ್ಥವಾಗುತ್ತಿಲ್ಲ. ಹಾಗಾಗಿಯೇ ‘ಗೆದ್ದವನು ಸೋತ: ಸೋತವನು ಸತ್ತ’ ಎನ್ನುವ ಗಾದೆ ಹುಟ್ಟಿಕೊಂಡಿದೆ.

ಒಂದು ವೇಳೆ ಬಂಧಿತ ವ್ಯಕ್ತಿ ಅಂದರೆ ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವರುಗಳ ಮೇಲಿರುವ ಆರೋಪಗಳಿಂದ ಬಂಧಿತರಾಗಿ ೩೦ ದಿನಗಳು ಕಳೆದ ಮೇಲೆ ತಮ್ಮ ರಾಜಕೀಯ ಸ್ಥಾನಮಾನಗಳನ್ನು ಕಳೆದುಕೊಳ್ಳುತ್ತಾರೆ. ಆದರೆ ನಂತರದ ದಿನಗಳಲ್ಲಿ ಆರೋಪಿ ತಮ್ಮ ಮೇಲಿನ ಆರೋಪಗಳಿಂದ ಮುಕ್ತರಾದರೆ ಕಳೆದುಹೋದ ಮಾನ (ಅಧಿಕಾರ) ಮತ್ತೆ ಸಿಗುವುದೇ? ಇಂತಹ ಪರಿಸ್ಥಿತಿಯಲ್ಲಿ ಈಗಿನ ಸಂವಿಧಾನ ತಿದ್ದುಪಡಿ ಮಸೂದೆಯು ನ್ಯಾಯಾಂಗದ ಅಧಿಕಾರವನ್ನು ಆಕ್ರಮಿಸಿಕೊಂಡಂತೆಯೇ. ಪ್ರಧಾನಿಯಾಗಲಿ ಅಥವಾ ಮುಖ್ಯಮಂತ್ರಿಯಾಗಲಿ ಇಂತಹ ಗಂಭೀರ ಆರೋಪ ಎದುರಾಗಿ ಬಂಧನವಾದರೆ ಆಡಳಿತ ವ್ಯವಸ್ಥೆಯೇ ಬದಲಾಗುತ್ತದೆ. ಆದರೆ ಈ ಮಸೂದೆಗೆ ಪ್ರೇರಣೆ ಎಂದರೆ ಹಿಂದಿನ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮ ಮೇಲಿನ ಆರೋಪಗಳಿಂದ ಬಂಧನವಾಗಿ ಜೈಲಿನಲ್ಲೇ ಇದ್ದುಕೊಂಡು ಆಡಳಿತ ಮಾಡಿದ ಪ್ರಸಂಗ ಎನ್ನಲಾಗಿದೆ. ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಇದೊಂದು ಅಪರೂಪದ ಘಟನೆ.

ಪ್ರಧಾನಿ ಮೋದಿ ಮತ್ತು ಗೃಹ ಸಚಿವರ ಅನೇಕ ನಡೆಗಳು ವಿರೋಧಿಗಳನ್ನು ಬಗ್ಗುಬಡಿಯಲು ಕೇಂದ್ರದ ತನಿಖಾ ಸಂಸ್ಥೆಗಳನ್ನು ತಮ್ಮ ರಾಜಕೀಯ ಅಸ್ತ್ರಗಳನ್ನಾಗಿ ಬಳಸಿಕೊಳ್ಳುತ್ತಾ ಬಂದಿರುವುದರಿಂದ ಈ ಸಂವಿಧಾನ ತಿದ್ದುಪಡಿಯನ್ನು ಒಪ್ಪಲಾಗದು ಎನ್ನುವ ದೃಢವಾದ ನಿರ್ಧಾರ ಪ್ರತಿಪಕ್ಷಗಳದ್ದು. ಈ ಮಸೂದೆಯು ನಮ್ಮ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಹಾಗೂ ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾದದ್ದು ಎನ್ನುವ ವಾದವಾದ್ದರಿಂದ ವಿರೋಧ ಪಕ್ಷಗಳ ನಿಲುವನ್ನು ಶಂಕಿಸಲಾಗದು. ಈ ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದ ಇತರೆ ಎರಡು ಮಸೂದೆಗಳು ಸಹ ಸಂವಿಧಾನದ ಮೂಲ ಸ್ವರೂಪವನ್ನು ಉಲ್ಲಂಸುತ್ತವೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರೂಪಿಸಿರುವ ಮೂಲ ಉದ್ದೇಶಗಳಿಗೆ ಇವು ವಿರೋಧವಾಗಿವೆ ಎನ್ನುವುದು ಕಾನೂನು ತಜ್ಞರ ಅಭಿಪ್ರಾಯ. ಸಹಜವಾಗಿ ಈ ಮಸೂದೆಗಳನ್ನು ತಂದಿರುವ ಸರ್ಕಾರ ಅವುಗಳನ್ನು ಸಮರ್ಥಿಸಿಕೊಳ್ಳುತ್ತಿದೆ.

ಭ್ರಷ್ಟ ರಾಜಕಾರಣಿಗಳು ಅಧಿಕಾರದಲ್ಲಿ ಮುಂದುವರಿಯುವುದನ್ನು ಸಹಜವಾಗಿ ಯಾರೂ ಬಯಸುವುದಿಲ್ಲ. ಆದರೆ ಇಂತಹ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಕಾನೂನು ಪ್ರಕ್ರಿಯೆಗಳನ್ನು ಸರಿಯಾಗಿ ಪಾಲಿಸದೆ ಯಾವುದೇ ವ್ಯಕ್ತಿಯ ಮಾನಹಾನಿಯಾಗುವ ಮತ್ತು ಆತ ಹೊಂದಿರುವ ಸ್ಥಾನಮಾನಗಳಿಗೆ ಚ್ಯುತಿ ಬರುವುದನ್ನು ಯಾರೂ ಒಪ್ಪಲಾರರು. ಏಕೆಂದರೆ ಈಗಿನ ಕೇಂದ್ರ ಸರ್ಕಾರ ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದು ಗೊತ್ತಿರುವ ಸಂಗತಿಯಾದ್ದರಿಂದ ಈ ಮಸೂದೆಯ ಸಾಚಾತನದ ಉದ್ದೇಶವನ್ನು ಶಂಕಿಸಲೇಬೇಕಾಗಿದೆ. ಹೀಗಾಗಿ ಪ್ರತಿಪಕ್ಷಗಳ ಭಾರೀ ವಿರೋಧದಿಂದ ಸಂವಿಧಾನ ತಿದ್ದುಪಡಿಯ ೧೩೦ನೇ ಮಸೂದೆಯನ್ನು ಸಂಸತ್ತಿನ ಜಂಟಿ ಸಲಹಾ ಸಮಿತಿಗೆ ಕಳುಹಿಸಲು ತೀರ್ಮಾನಿಸಿರುವುದು ಒಳ್ಳೆಯ ಬೆಳವಣಿಗೆ

. ಸಂಸತ್ತಿನ ಜಂಟಿ ಸಲಹಾ ಸಮಿತಿಯು ಸಹ ಸಹಜವಾಗಿ ಸಮಿತಿಯಲ್ಲಿ ಆಳುವ ಪಕ್ಷದ ಸದಸ್ಯರು ಹೆಚ್ಚಾಗಿದ್ದ ಪಕ್ಷದಲ್ಲಿ ಅದನ್ನು ಯಥಾವತ್ತಾಗಿ ಮತ್ತೆ ಲೋಕಸಭೆಗೆ ಕಳುಹಿಸುವ ಸಾಧ್ಯತೆಗಳನ್ನೂ ತಳ್ಳಿಹಾಕಲಾಗದು. ಸಲಹಾ ಸಮಿತಿಯಲ್ಲಿ ಈ ತಿದ್ದುಪಡಿ  ಮಸೂದೆಯ ಸಾಧಕ ಬಾಧಕಗಳ ಬಗೆಗೆ ವ್ಯಾಪಕವಾಗಿ ಚರ್ಚಿಸಿ ನಮ್ಮ ಜನತಂತ್ರ ವ್ಯವಸ್ಥೆಯನ್ನು ಉಳಿಸುವ ಕಾರ್ಯ ಆಗಬೇಕಿದೆ.

ಪ್ರಧಾನಿ ಮೋದಿ ಅವರು ಕೊಲ್ಕತ್ತಾದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ, ತನ್ನ ಹನ್ನೊಂದು ವರ್ಷಗಳ ಆಡಳಿತದಲ್ಲಿ ತಮ್ಮ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಕಲೆ ಬಂದಿಲ್ಲ. ಆದರೆ ಈ ಹಿಂದೆ ಬಿಹಾರ ಮತ್ತು ದಿಲ್ಲಿಯ ಆಡಳಿತದಲ್ಲೇ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಾ ಜೈಲಿನಲ್ಲಿದ್ದುಕೊಂಡೇ ಮುಖ್ಯಮಂತ್ರಿಗಳು ಆಡಳಿತ ನಡೆಸಿರುವ ಉದಾಹರಣೆಗಳಿವೆ. ಇಂತಹ ಕೆಟ್ಟ ವ್ಯವಸ್ಥೆಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಮಸೂದೆಯನ್ನು ತರಲಾಗಿದೆ. ಕೆಲವು ದಿನಗಳ ಕಾಲ ಭ್ರಷ್ಟಾಚಾರದ ಅರೋಪ ಹೊತ್ತು ಜೈಲಿನಲ್ಲಿದ್ದರೆ ಅಂತಹ ನೌಕರರನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ. ಆದರೆ ಉನ್ನತ ಸ್ಥಾನದಲ್ಲಿರುವವರನ್ನು ಏಕೆ ಸಹಿಸಿ ಕೊಳ್ಳಬೇಕು . ಅಂತಹವರಿಗೆ ರಿಯಾಯಿತಿ ಏಕೆ ಎಂದು ಪ್ರಶ್ನಿಸಿರುವುದನ್ನು ಒಪ್ಪಿಕೊಳ್ಳಬಹುದು. ಆದರೆ ಅವರು ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದಷ್ಟು ಸಮಸ್ಯೆ ಸರಳವಾಗಿಲ್ಲ. ಅವರ ಉದ್ದೇಶವೇ ಬೇರೆಯಾಗಿದೆ ಎನ್ನುವುದು ಗೊತ್ತಿರುವ ಸಂಗತಿ.

ಪ್ರಧಾನಿ ಮೋದಿ ಅವರು ಈ ಮಸೂದೆಗಳ ಬಗೆಗೆ ಎಷ್ಟೇ ಸಮರ್ಥನೆ ಮಾಡಿಕೊಂಡರೂ ಅವರ ಆಡಳಿತದಲ್ಲಿ ವಿರೋಧಿ ನಾಯಕರ ವಿರುದ್ಧ ನಡೆದುಕೊಂಡು ಬಂದಿರುವ ಅಂದರೆ ಸಿಬಿಐ, ಇಡಿ ಮುಂತಾದ ತನಿಖಾ ಸಂಸ್ಥೆಗಳನ್ನು ಮನಸ್ಸಿಗೆ ಬಂದಂತೆ ಬಳಸಿಕೊಂಡು ವಿರೋಧಿ ನಾಯಕರನ್ನು ಬಗ್ಗು ಬಡಿಯುತ್ತಿರುವುದನ್ನು ಗಮನಿಸಿದರೆ ಈ ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರವಾಗಿ ಕಾಯ್ದೆಗಳಾದಾಗ ಅವುಗಳ ದುರುಪಯೋಗ ಆಗುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಹಾಗಾಗಿ ಈ ಮಸೂದೆಯನ್ನು ಕೇಂದ್ರ ಸರ್ಕಾರ ಮರುಪರಿಶೀಲನೆ ಮಾಡುವ ಜೊತೆಗೆ ಸಂಸತ್ತಿನ ಜಂಟಿ ಸಲಹಾ ಸಮಿತಿಯು ನಿಷ್ಪಕ್ಷಪಾತವಾಗಿ ಪರಿಶೀಲಿಸುವುದು ಇಂದಿನ ತುರ್ತು. ಮುಗಿಯಿತು.

” ಪ್ರಧಾನಿ ಮೋದಿ ಅವರು ಕೊಲ್ಕತ್ತಾದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ ತನ್ನ ಹನ್ನೊಂದು ವರ್ಷಗಳ ಆಡಳಿತದಲ್ಲಿ ತಮ್ಮ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಕಲೆ ಬಂದಿಲ್ಲ. ಆದರೆ ಈ ಹಿಂದೆ ಬಿಹಾರ ಮತ್ತು ದಿಲ್ಲಿಯ ಆಡಳಿತದಲ್ಲೇ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತ ಜೈಲಿನಲ್ಲಿದ್ದುಕೊಂಡೇ ಮುಖ್ಯಮಂತ್ರಿಗಳು ಆಡಳಿತ ನಡೆಸಿರುವ ಉದಾಹರಣೆಗಳಿವೆ. ಇಂತಹ ಕೆಟ್ಟ ವ್ಯವಸ್ಥೆಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಮಸೂದೆಯನ್ನು ತರಲಾಗಿದೆ. ಕೆಲವು ದಿನಗಳ ಕಾಲ ಭ್ರಷ್ಟಾಚಾರದ ಅರೋಪ ಹೊತ್ತು ಜೈಲಿನಲ್ಲಿದ್ದರೆ ಅಂತಹ ನೌಕರರನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ. ಆದರೆ ಉನ್ನತ ಸ್ಥಾನದಲ್ಲಿರುವವರನ್ನು ಏಕೆ ಸಹಿಸಿಕೊಳ್ಳಬೇಕು. ಅಂತಹವರಿಗೆ ರಿಯಾಯಿತಿ ಏಕೆ ಎಂದು ಪ್ರಶ್ನಿಸಿರುವುದನ್ನು ಒಪ್ಪಿಕೊಳ್ಳಬಹುದು. ಆದರೆ ಅವರು ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದಷ್ಟುಸಮಸ್ಯೆ ಸರಳವಾಗಿಲ್ಲ. ಅವರ ಉದ್ದೇಶವೇ ಬೇರೆಯಾಗಿದೆ ಎನ್ನುವುದು ಗೊತ್ತಿರುವ ಸಂಗತಿ.”

-ಶಿವಾಜಿ ಗಣೇಶನ್‌ 

Tags:
error: Content is protected !!