ಬೆಂಗಳೂರು: ಕೇರಳ ಮೂಲದ ಬಾಹ್ಯಾಕಾಶ ವಿಜ್ಞಾನಿ, ಪರಿಸರ ತಜ್ಞ ಡಾ. ಕೆ. ಕಸ್ತೂರಿರಂಗನ್ ಅವರು ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
1940ರ ಅಕ್ಟೋಬರ್ 24ರಂದು ಕೇರಳದ ಎರ್ನಾಕುಲಂನಲ್ಲಿ ಕೃಷ್ಣಸ್ವಾಮಿ ಅಯ್ಯರ್ ಮತ್ತು ವಿಶಾಲಾಕ್ಷಿ ದಂಪತಿಯ ಪುತ್ರರಾಗಿ ಕಸ್ತೂರಿ ರಂಗನ್ ಜನಿಸಿದರು. ಕಸ್ತೂರಿ ರಂಗನ್ ಅವರ ಪೋಷಕರು ತಮಿಳುನಾಡಿನಿಂದ ಕೇರಳಕ್ಕೆ ಸ್ಥಳಾಂತರಗೊಂಡಾಗ ಪಾಲ್ಕಾಡ್ ಜಿಲ್ಲೆಯ ನಲ್ಲೆಪಲ್ಲಿ ಅಗ್ರಹಾರಂನಲ್ಲಿ ನೆಲೆಸಿದ್ದರು. ಇಸ್ರೋ ನಿವೃತ್ತಿ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು.
ಕಸ್ತೂರಿರಂಗನ್ 2003ರವರೆಗೆ ೯ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ನೇತೃತ್ವ ವಹಿಸಿದ್ದರು. ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮತ್ತು ಬಾಹ್ಯಾಕಾಶ ಇಲಾಖೆಯಲ್ಲಿ ಭಾರತ ಸರ್ಕಾರಕ್ಕೆ ಕಾರ್ಯದರ್ಶಿಯಾಗಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು. 2003-2009ರವೆಗೆ ರಾಜ್ಯಸಭಾ ಸದಸ್ಯರಾಗಿ ದ್ದರು. ದೇಶದ ಅತ್ಯುನ್ಯತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ (1982), ಪದ್ಮಭೂಷಣ (1992) ಮತ್ತು ಪದ್ಮ ವಿಭೂಷಣ (2000) ಪಡೆದುಕೊಂಡಿದ್ದರು.
ಕಸ್ತೂರಿ ರಂಗನ್ ಪ್ರಮುಖ ಕೊಡುಗೆಗಳು: ಈ ಹಿಂದೆ ಅವರು ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿದ್ದರು ಮತ್ತು ಆಧುನಿಕ ಯುಗದ ಬಾಹ್ಯಾಕಾಶ ನೌಕೆ, ಭಾರತೀಯ ರಾಷ್ಟ್ರೀಯ ಉಪ ಗ್ರಹ (ಇನ್ಸಾಟ್-2) ಮತ್ತು ಭಾರತೀಯ ದೂರ ಗ್ರಾಹಿ ಉಪಗ್ರಹಗಳು (ಐಆರ್‌ಎಸ್-1ಎ ಮತ್ತು 1ಬಿ) ಜೊತೆಗೆ ವೈಜ್ಞಾನಿಕ ಉಪಗ್ರಹಗಳ ಅಭಿವೃದ್ಧಿ ಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು. ಇವರ ನಾಯಕತ್ವದಲ್ಲಿ, ಭಾರತದ ಹೆಸರಾಂತ ಉಡಾವಣಾ ವಾಹನಗಳಾದ ಪೋಲಾರ್ ಉಪಗ್ರಹ ಉಡಾವಣಾ ವಾಹನ ಮತ್ತು ಜಿಯೋಸಿಂ ಕ್ರೋನಸ್ ಉಪಗ್ರಹ ಉಡಾವಣಾ ವಾಹನದ ಉಡಾವಣೆ ಮತ್ತು ಕಾರ್ಯನಿರ್ವಹಣೆಯನ್ನು ಒಳಗೊಂಡು ಹಲವು ಪ್ರಮುಖ ಸಾಧನೆಗಳನ್ನು ಕೈಗೊಳ್ಳಲಾಗಿತ್ತು. ಜಿಎಸ್‌ಎಲ್‌ವಿ, ಜಿಎಸ್‌ಎಲ್‌ವಿಎಂಕೆ ಸುಧಾರಿತ ಆವೃತ್ತಿ ಮತ್ತು ಅದರ ಸಂಪೂರ್ಣ ವಿನ್ಯಾಸಗಳ ವ್ಯಾಖ್ಯಾನಗಳ ಅಧ್ಯಯನಗಳನ್ನು ಕೂಡ ಪೂರ್ಣಗೊಳಿಸಲಾಗಿತ್ತು.
ಶಿಕ್ಷಣ ಮತ್ತು ಸಂಶೋಧನೆ ಡಾ. ಕೆ. ಕಸ್ತೂರಿ ರಂಗನ್ ಅವರು ವಿಜ್ಞಾನದಲ್ಲಿ ವಿಶೇಷ ಪದವಿ ಯನ್ನು ಪಡೆದರು ಮತ್ತು ಬಾಂಬೆ ವಿಶ್ವ ವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ವಿಜ್ಞಾನ ಪದವಿಯನ್ನು ಪಡೆದಿದ್ದರು. ಫಿಸಿಕಲ್ ರಿಸರ್ಜ್ ಲ್ಯಾಬೋರೇಟರಿ ಅಹಮದಾಬಾದ್ ನಲ್ಲಿ ಕಾರ್ಯನಿರ್ವಹಿಸುತ್ತಾ 1971ರಲ್ಲಿ ಎಕ್ಸ್ ಪರಿಮೆಂಟಲ್ ಹೈ ಎನರ್ಜಿಯಲ್ಲಿ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದ್ದರು.
ಭೌತ ವಿಜ್ಞಾನಿಯಾಗಿ, ಕಸ್ತೂರಿ ರಂಗನ್ ಅವರ ಸಂಶೋಧನಾ ಆಸಕ್ತಿಗಳಲ್ಲಿ ಹೆಚ್ಚು ಸಾಮಥ್ರ್ಯದ ಎಕ್ಸ್-ರೇ ಮತ್ತು ಗಾಮಾ ಕಿರಣಗಳ ಖಗೋಳ ವಿಜ್ಞಾನ ಹಾಗೂ ಆಪ್ಟಿಕಲ್ ಖಗೋಳ ವಿಜ್ಞಾನಗಳು ಸೇರಿವೆ. ಇವರು ಖಗೋಳ ವಿಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ಅನ್ವಯಿಸುವಿಕೆಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ 224 ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ್ದರು. ಕಸ್ತೂರಿ ರಂಗನ್ ಅವರು 16 ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸಿದ್ದರು. ಫ್ರಾನ್ಸ್‌ನ ಫ್ರೆಂಚ್ ಗಣರಾಜ್ಯದ ಅಧ್ಯಕ್ಷರಿಂದ ‘ಆಫೀಸರ್ ಆಫ್ ದಿ ಲೀಜನ್ ದಿ ಹಾನರ್’ (2002) ಪ್ರಶಸ್ತಿ ಒಲಿದಿತ್ತು.
ಶೈಕ್ಷಣಿಕ ಸುಧಾರಣೆಗಳ ಹರಿಕಾರ: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪಟ್ಟಿ ಮಾಡಲಾದ ಶೈಕ್ಷಣಿಕ ಸುಧಾರಣೆಗಳ ಹಿಂದಿನ ವ್ಯಕ್ತಿ ಕಸ್ತೂರಿ ರಂಗನ್. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2003ರಿಂದ 2009ರವರೆಗೆ ರಾಜ್ಯಸಭೆಯ ಸದಸ್ಯರಾಗಿ ಮತ್ತು ಅಂದಿನ ಭಾರತದ ಯೋಜನಾ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಘಟ್ಟಗಳ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದಂತೆ ಕಸ್ತೂರಿ ರಂಗನ್ ಅವರು ಅಧ್ಯಯನ ನಡೆಸಿದ್ದ ನೀಡಿದ್ದ ವರದಿ ಸಾಕಷ್ಟು ಚರ್ಚೆಯಾಗಿತ್ತು. ಪರ- ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.





