ಗೋವಿಂದರಾಜು ಲಕ್ಷ್ಮೀಪುರ
ಪತ್ರಕರ್ತ ಕಾರ್ತಿಕ್ ರಚನೆಯ ಇಂಗ್ಲಿಷ್ ಭಾಷೆಯ ಕಥಾಸಂಕಲನ
ಹಿಂದಿ ಶೀರ್ಷಿಕೆಯಂತೆ ಧ್ವನಿಸುವ ‘ಕಹಾನಿ’ ಕೃತಿಯು, ಅಪ್ಪಟ ಕನ್ನಡ ನೆಲದ ಭಾವಕ್ಕೆ ಬಾಯಾಗಿದೆ. ಲೇಖಕರು ಪತ್ರಿಕಾ ವರದಿಯಲ್ಲಿ ಹೇಳಲಾಗದ ವಿಷಯಗಳಿಗೆ ಇಲ್ಲಿ ಕಥನ ರೂಪ ಕೊಟ್ಟಿದ್ದಾರೆ. ಟೋಪಿ ರಾಮ, ಪಾರ್ವತಿ, ಶಾಂತಿಪುರ, ಸಿಕೋಪಾತ್, ಪುನರ್ಜನ್ಮ, ನಿಷ್ಕಲ್ಮಶ ಮನಸ್ಸು, ಸುಖಾಂತ್ಯ ಇತ್ಯಾದಿ ಹೆಸರಿನ ಮೈಸೂರು ಸುತ್ತಮುತ್ತ ನಡೆಯುವಕತೆಗಳು ಎಲ್ಲೋ ಕೇಳಿದಂತೆ ಕಂಡರೂ ಸಿನಿಮೀಯ ಮಾದರಿಯಲ್ಲಿ ಮನಸ್ಸಿಗೆ ಮುದ ನೀಡುತ್ತವೆ.
ಅಪರಿಚಿತ ಮುಖಗಳು, ದಮನಿತ ದನಿಗಳು, ಪ್ರತಿನಿತ್ಯ ಕಾಣುವ, ಕಾಡುವ ಪ್ರೀತಿ, ನೋವು, ವಿರಹ, ವೇದನೆಗಳು; ತುಳಿತಕ್ಕೊಳಗಾದ, ಕಡೆಗಣಿತ, ಮಹಿಳೆ, ಲಿಂಗತ್ವ ಅಲ್ಪಸಂಖ್ಯಾತ, ದಲಿತ ದಮನಿತ ಮತ್ತು ಇನ್ನಿತರ ನಿರ್ಲಕ್ಷಿತ ಸಮುದಾಯಗಳ ಕತೆಗಳನ್ನು ವಿಶೇಷ ವರದಿಯಂತೆ ತೋರುವ ಪುಟ್ಟ ಕಥನಗಳಾಗಿ ರೂಪಿಸಿದ್ದಾರೆ.೮೦ರ ದಶಕದ ಆಸುಪಾಸಿನಲ್ಲಿ ಮೈಸೂರು, ಕೊಡಗು, ಶ್ರೀರಂಗಪಟ್ಟಣದ ಆಸುಪಾಸಿನಲ್ಲಿ ನಡೆಯುವ ಎಲ್ಲ ಕತೆಗಳೂ ಸ್ಥಳ ವ್ಯಾಪ್ತಿಯನ್ನು ಮೀರಿದ ಅನನ್ಯತೆಯನ್ನು ಕಂಡುಕೊಂಡಿವೆ. ಪಟ್ಟಣದ ಕತೆಗಳಿಗೆ ಶಾಯಿಯಾದಂತೆ ಕಾಣುವ ಕತೆಗಳು, ಅಲ್ಲಿನ ಬಡ ಮತ್ತು ನಿರ್ಲಕ್ಷಿತ ಜನರ ನೋವಿಗೆ ಸ್ಪಂದಿಸಿವೆ. ಎಲ್ಲೂ ಹೆಚ್ಚು ಕಲ್ಪನೆಯ ವಿವರಣೆ ಇಲ್ಲದ ಕತೆಗಳು ಈ ಕಾಲಮಾನದ ಓದುಗರ ಓದಿನ ಓಘಕ್ಕೆ ಹೊಂದಿ ಕೊಳ್ಳುವ ಗುಣವನ್ನು ಗಳಿಸಿಕೊಂಡಿವೆ.
ಇದನ್ನೂ ಓದಿ:-ಲಡಾಖ್ ಬೇಡಿಕೆಗೆ ಕೇಂದ್ರ ವಿಮುಖವಾಗಬಾರದು
ಮುಖ್ಯವಾಹಿನಿ ಗಂಭೀರ ಸಾಹಿತ್ಯ ಕಥನ ಶೈಲಿಯಲ್ಲಿರದ ಇಲ್ಲಿನ ಕತೆಗಳು ಆಧುನಿಕ ಕಥನ ರೂಪ ಪಡೆದಿವೆ. ಕಾಲ್ಪನಿಕ ಕತೆಗಳು ಎಂದು ಆರಂಭದಲ್ಲೇ ಪ್ರಮಾಣ ಮಾಡುವ ಲೇಖಕರ ಕತೆಗಳು ನಿಜ ಜೀವನದ ಸತ್ಯ ಕತೆಗಳು ಎನಿಸಿದರೆ ಆಶ್ಚರ್ಯವಿಲ್ಲ. ಲೇಖಕ ಕಾರ್ತಿಕ್, ದಶಕದಿಂದಲೂ ಇಂಗ್ಲಿಷ್ ದೈನಿಕ ‘ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಂದು ‘ಕಹಾನಿ’ ಕೃತಿ ಬಿಡುಗಡೆ
ಮೈಸೂರು: ಪತ್ರಕರ್ತ ಕೆ.ಕೆ.ಕಾರ್ತಿಕ್ ಅವರ ‘ಕಹಾನಿ’ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಸೆ.೨೮ರಂದು ಸಂಜೆ ೫ಕ್ಕೆ ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ‍್ಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಪುಸ್ತಕವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಮಾನ್ಸೋರೆ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ಪತ್ರಕರ್ತ ಡಾ.ಕೆ.ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ. ಮೈಸೂರು ಪುಸ್ತಕ ಕ್ಲಬ್‌ಗಳ ಚಾರಿಟಬಲ್ ಟ್ರಸ್ಟನ ಸಂಸ್ಥಾಪಕ ಅಧ್ಯಕ್ಷರಾದ ಶುಭಾ ಸಂಜಯ್ ಅರಸ್ ಕೃತಿ ಕುರಿತು ಮಾತನಾಡಲಿದ್ದಾರೆ.





