Mysore
26
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಜನಪರ ಆಡಳಿತಗಾರರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್

ಪ್ರೊ.ವೈ.ಎಚ್.ನಾಯಕವಾಡಿ

ಬಹುಸಂಖ್ಯಾತರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ ಅಧ್ವರ್ಯು

ಇಂದು (ಜೂ.೪) ಮೈಸೂರು ಸಂಸ್ಥಾನದ ಅಗ್ರಗಣ್ಯ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ

ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸುಮಾರು ನಾಲ್ಕು ದಶಕಗಳ ಕಾಲ ಮೈಸೂರನ್ನು ಆಳಿದರು. ಅವರು ಒಬ್ಬ ಪ್ರಾಮಾಣಿಕ ಹಾಗೂ ದಕ್ಷ ಆಡಳಿತಗಾರರಾಗಿದ್ದರು. ಜನಸಾಮಾನ್ಯರ ಏಳಿಗೆಯೇ ಮುಖ್ಯವೆಂದು ನಂಬಿ ಅದೇ ನಿಟ್ಟಿನಲ್ಲಿ ಕೆಲಸ ಮಾಡಿದವರು. ದಕ್ಷ ಆಡಳಿತಗಾರರನ್ನು ನೇಮಕ ಮಾಡಿ ಭ್ರಷ್ಟಾಚಾರಕ್ಕೆ ಆಸ್ಪದ ಕೊಡದವರು. ಜನಸಾಮಾನ್ಯರಿಗಾಗಿ ಜಾರಿ ಮಾಡಿದ ಸಾಮಾಜಿಕ ನ್ಯಾಯ ಮತ್ತು ಮೈಸೂರು ರಾಜ್ಯದ ರಾಜಕೀಯ ಸ್ವಾಯತ್ತತೆಗಾಗಿ ಬ್ರಿಟಿಷರೊಂದಿಗೆ ನಡೆಸಿದ ಸೆಣಸಾಟ ಇವು ಅವರ ಅಪರೂಪದ ಕೊಡುಗೆಗಳು.

ಬ್ರಿಟಿಷ್ ಭಾರತದಲ್ಲಿ ಸುಮಾರು ೬೦೦ ಸಂಸ್ಥಾನಗಳಿದ್ದವು. ಅವುಗಳಲ್ಲಿ ಮೈಸೂರು ರಾಜ್ಯವೂ ಒಂದು. ಒಳಾಡಳಿತದಲ್ಲಿ ರಾಜ ಮತ್ತು ಮಹಾರಾಜರಿಗೆ ಯಾವುದೇ ನಿರ್ಬಂಧಗಳಿರಲಿಲ್ಲ. ಆದರೆ ಮೈಸೂರಿನ ದೊರೆಗಳು ಉತ್ತಮ ಮತ್ತು ಜವಾಬ್ದಾರಿಯುತವಾದ ನಡವಳಿಕೆ ಹಾಗೂ ಆಡಳಿತಗಳೆರಡಕ್ಕೂ ಹೆಸರಾದವರು. ಅದರ ಹಿಂದಿನ ಶತಮಾನದಲ್ಲಿ ಕಮಿಷನರುಗಳ ಆಳ್ವಿಕೆಯ ಸಂದರ್ಭದಲ್ಲಿ ಆಧುನಿಕ ರಾಜ್ಯ ವ್ಯವಸ್ಥೆಗೆ ಬೇಕಾಗಿದ್ದ ಭದ್ರಬುನಾದಿಯನ್ನು ಹಾಕಲಾಗಿತ್ತು. ಆ ಅಡಿಪಾಯದ ಮೇಲೆ ಭಾರತದಲ್ಲಿಯೇ ವಿಶಿಷ್ಟವಾದ ಹಲವು ಕೆಲಸಗಳು ಮೈಸೂರಿನಲ್ಲಿ ನಡೆದವು.

ಅದರಲ್ಲಿ ಪ್ರಮುಖವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಜಾಪ್ರತಿನಿಧಿ ಸಭೆ, ನಗರಗಳ ಯೋಜನೆಗಳು, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಗಳ ಗಣನೀಯ ವಿಸ್ತರಣೆ, ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ಅವಕಾಶ ಕಲ್ಪಿಸಲು ಮೀಸಲಾತಿ ಒದಗಿಸುವ ವ್ಯವಸ್ಥೆ, ರೈಲು ಮತ್ತು ರಸ್ತೆ ಜಾಲಗಳಂತಹ ಮೂಲ ಸೌಕರ್ಯಗಳ ಸೃಷ್ಟಿ, ಆಧುನಿಕ ಅರ್ಥ ವ್ಯವಸ್ಥೆಯನ್ನು ಕಟ್ಟಲು ಬೃಹತ್ ಕೈಗಾರಿಕೆಗಳಿಗೆ ಪ್ರೋತ್ಸಾಹ, ಹಾಗೆಯೇ ಕೃಷಿಗೆ ನೀರಾವರಿ ಒದಗಿಸಲು ಬೃಹತ್ ನೀರಾವರಿ ಯೋಜನೆಗಳನ್ನು ರೂಪಿಸಿದ್ದರು.

ಹೀಗೆ ಪ್ರಜಾಸತ್ತಾತ್ಮಕ ಸುಧಾರಣೆಗಳು, ಕಲ್ಯಾಣ ಕಾರ್ಯಕ್ರಮಗಳು ಈ ಎಲ್ಲವೂ ೨೦ನೆಯ ಶತಮಾನದ ಮೈಸೂರು ಸಂಸ್ಥಾನದಲ್ಲಿ ಕಂಡುಬರುತ್ತವೆ. ನಾಲ್ವಡಿ ಕೃಷ್ಣರಾಜರು ತೆಗೆದುಕೊಂಡ ಅಂದಿನ ಕಾಲಕ್ಕೆ ಕ್ರಾಂತಿಕಾರಕ ತೀರ್ಮಾನವೆಂದರೆ ಸರ್ಕಾರಿ ಮತ್ತು ಸರ್ಕಾರದ ಅನುದಾನ ಪಡೆಯುತ್ತಿದ್ದ ಎಲ್ಲ ಶಾಲೆಗಳಲ್ಲೂ ಜಾತಿ ಮತ ಭೇದವಿಲ್ಲದೆ ಎಲ್ಲ ಮಕ್ಕಳಿಗೂ ಪ್ರವೇಶ ನೀಡಲು ಆಜ್ಞೆ ಹೊರಡಿಸಿದ್ದು, ಸಂಸ್ಕೃತ ಶಾಲೆಗಳಲ್ಲಿಯೂ ಎಲ್ಲರಿಗೂ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು… ಹೀಗೆ ಬಹುಸಂಖ್ಯಾತ ಹಿಂದುಳಿದ ವರ್ಗಗಳಿಗಾಗಿ ಅವರು ಜಾರಿ ಮಾಡಿದ ಸಾಮಾಜಿಕ ನ್ಯಾಯ ಮಾದರಿಯಾಗಿದೆ.

ಹಿಂದುಳಿದ ವರ್ಗದವರು ತಮಗೆ ಚಾರಿತ್ರಿಕವಾಗಿ ಆಗಿದ್ದ; ಆಗುತ್ತಿದ್ದ ಅನ್ಯಾಯ, ತಾರತಮ್ಯಗಳ ಬಗ್ಗೆ ರಾಜರ ಗಮನಕ್ಕೆ ತಂದಾಗ ೧೯೧೬ರಲ್ಲಿ ಈ ಸಮುದಾಯಗಳ ಆರ್ಹರಿಗೆ ಶೇಕಡಾ ೨೫ ರಷ್ಟು ಹುದ್ದೆಗಳನ್ನು ಮೀಸಲಿಡಲಾಯಿತು. ವಿಶೇಷವಾಗಿ ಹಿಂದುಳಿದ ಹಾಗೂ ಅಸ್ಪೃಶ್ಯ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿವೇತನವನ್ನು ನೀಡಲಾಯಿತು. ನಾಲ್ವಡಿಯವರ ಕಾಲದಲ್ಲಿ ಸಾಮಾಜಿಕ ನ್ಯಾಯದ ವಿಚಾರದಲ್ಲಿ ತೆಗೆದುಕೊಂಡ ಮಹತ್ತರ ತೀರ್ಮಾನವೆಂದರೆ ಮಿಲ್ಲರ್ ಸಮಿತಿಯ ನೇಮಕ ಮತ್ತು ಅದರ ವರದಿಯ ಜಾರಿ. ಈ ಬೆಳವಣಿಗೆ ಇಡೀ ಭಾರತದಲ್ಲಿಯೇ ಚರಿತ್ರಾರ್ಹವಾದದ್ದು. ಹಾಗೆಯೇ ಹಿಂದುಳಿದ ವರ್ಗಗಳಿಗಾಗಿ ರಾಜ್ಯದ ಪ್ರಜಾಪ್ರತಿನಿಧಿ ಸಭೆಯಲ್ಲಿ ಮಿಸಲಾತಿ ಕಲ್ಪಿಸಲಾಯಿತು. ಬಹುಸಂಖ್ಯಾತರು ಸಂಘಟಿತರಾಗಲು ಅನುಕೂಲ ಮಾಡಿಕೊಡಲಾಯಿತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜನಸಾಮಾನ್ಯರಿಗಾಗಿ ಹಲವಾರು ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಹಾಕಿಕೊಂಡಂತೆ ಮೈಸೂರು ರಾಜ್ಯದ ರಾಜಕೀಯ ಸ್ವಾಯತ್ತತೆಗೆ ಸಂಬಂಽಸಿದಂತೆ ಬ್ರಿಟಿಷರೊಂದಿಗೆ ತಾತ್ವಿಕವಾದ ಸಂಘರ್ಷಕ್ಕೆ ಇಳಿದಿದ್ದರು ಎಂದರೆ ತಪ್ಪಾಗದು. ವಸಾಹತುಶಾಹಿಯು ರಾಜ್ಯದ ಆಂತರಿಕ ವ್ಯವಹಾರಗಳಲ್ಲಿ ಪ್ರವೇಶ ಮಾಡಿದರೆ, ಅದನ್ನು ಭಾಷಣಗಳ ಮೂಲಕ ಹಾಗೂ ಪತ್ರಗಳನ್ನು ಬರೆದು ತೀವ್ರವಾಗಿ ಖಂಡಿಸುತ್ತಿದ್ದರು. ಉದಾಹರಣೆಗೆ ಬ್ರಿಟಿಷರು ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ವಿಚಾರದಲ್ಲಿ, ರೈಲ್ವೆ ವಿಸ್ತರಣೆ, ಗಣಿ ಹಕ್ಕುಗಳ ಬಗ್ಗೆ ಅನವಶ್ಯಕ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಮೈಸೂರಿನ ದೊರೆ ನಾಲ್ವಡಿಯವರು ಈ ರೀತಿಯಾಗಿ ಬ್ರಿಟಿಷರ ವಿರುದ್ಧ ಸಂಘರ್ಷಕ್ಕೆ ಇಳಿಯಲು ಹಿಂದುಳಿದ ವರ್ಗಗಳ ಬೆಂಬಲವೇ ಕಾರಣವಾಗಿತ್ತು. ರಾಜಕೀಯ ಶಕ್ತಿ ಮತ್ತು ಅಧಿಕಾರವೆಂದರೆ ಅದು ಜನ ಬೆಂಬಲದಿಂದಲೇ ಬರುವಂತಹದ್ದು. ಹೀಗೆ ಮೈಸೂರಿನ ಒಡೆಯರಿಗೆ ಮತ್ತು ವಿಶೇಷವಾಗಿ ನಾಲ್ವಡಿ ಕೃಷ್ಣರಾಜರಿಗೆ ದಶಕಗಳ ಕಾಲ ಬೆಂಬಲವಾಗಿ ನಿಂತವರು ಈ ಬಹುಸಂಖ್ಯಾತ ಹಿಂದುಳಿದ ಸಮುದಾಯಗಳಾಗಿದ್ದವು. ನಾಲ್ವಡಿಯವರು ಆಡಳಿತದಲ್ಲಿ ಇರುವವರೆಗೂ ಈ ಬೆಂಬಲ ಮುಂದುವರಿಯಿತು.

ಈ ಬೆಂಬಲ ಕಾಂಗ್ರೆಸ್ ನೇತೃತ್ವದ ಸ್ವಾತಂತ್ರ್ಯ ಚಳವಳಿಯನ್ನು ನಿಯಂತ್ರಿಸಲು ಪರೋಕ್ಷವಾಗಿಯೂ ಸಹಾಯಕವಾಯಿತು. ಆದರೆ ರಾಷ್ಟ್ರೀಯ ಚಳವಳಿಯ ನಾಯಕರಾಗಲಿ ಅಥವಾ ಪ್ರಾಂತೀಯ ಕಾಂಗ್ರೆಸ್ ನಾಯಕರಾಗಲಿ ಈ ವಿಚಾರದಲ್ಲಿ ಮಾತಾಡುವಂತಿರಲಿಲ್ಲ. ಏಕೆಂದರೆ, ಕಾಂಗ್ರೆಸ್ ನೇತೃತ್ವದಲ್ಲಿ ನಡೆಸುತ್ತಿದ್ದ ಎಲ್ಲ ಬಗೆಯ ಸುಧಾರಣೆಗಳನ್ನೂ ನಾಲ್ವಡಿಯವರು ಹಮ್ಮಿಕೊಂಡಿದ್ದರು.

ಒಟ್ಟಾರೆ ನಾಲ್ವಡಿಯವರ ಸರ್ಕಾರದ ಕಾರ್ಯಕ್ರಮಗಳು ಜನಪರವಾಗಿದ್ದವು. ಸಾಮಾನ್ಯರಿಗೆ ಅತ್ಯವಶ್ಯಕವಾದ ಶಿಕ್ಷಣ, ಆರೋಗ್ಯ, ಉದ್ಯೋಗ, ಗ್ರಾಮೀಣ ನೈರ್ಮಲ್ಯ… ಹೀಗೆ ಹಲವು ಬಾಬ್ತುಗಳಲ್ಲಿ ಮೈಸೂರು ಸಂಸ್ಥಾನದ ಸಾಧನೆ ಖಂಡಿತವಾಗಿಯೂ ಅದ್ಭುತವಾಗಿತ್ತು.

(ಲೇಖಕರು, ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರು)

” ಹಿಂದುಳಿದ ವರ್ಗದವರು ತಮಗೆ ಚಾರಿತ್ರಿಕವಾಗಿ ಆಗಿದ್ದ; ಆಗುತ್ತಿದ್ದ ಅನ್ಯಾಯ, ತಾರತಮ್ಯಗಳ ಬಗ್ಗೆ ರಾಜರ ಗಮನಕ್ಕೆ ತಂದಾಗ ೧೯೧೬ರಲ್ಲಿ ಈ ಸಮುದಾಯಗಳ ಆರ್ಹರಿಗೆ ಶೇಕಡಾ ೨೫ ರಷ್ಟು ಹುದ್ದೆಗಳನ್ನು ಮೀಸಲಿಡಲಾಯಿತು. ವಿಶೇಷವಾಗಿ ಹಿಂದುಳಿದ ಹಾಗೂ ಅಸ್ಪೃಶ್ಯ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿವೇತನವನ್ನು ನೀಡಲಾಯಿತು. ನಾಲ್ವಡಿಯವರ ಕಾಲದಲ್ಲಿ ಸಾಮಾಜಿಕ ನ್ಯಾಯದ ವಿಚಾರದಲ್ಲಿ ತೆಗೆದುಕೊಂಡ ಮಹತ್ತರ ತೀರ್ಮಾನವೆಂದರೆ ಮಿಲ್ಲರ್ ಸಮಿತಿಯ ನೇಮಕ ಮತ್ತು ಅದರ ವರದಿಯ ಜಾರಿ. ಈ ಬೆಳವಣಿಗೆ ಇಡೀ ಭಾರತದಲ್ಲಿಯೇ ಚರಿತ್ರಾರ್ಹವಾದದ್ದು. ಹಾಗೆಯೇ ಹಿಂದುಳಿದ ವರ್ಗಗಳಿಗಾಗಿ ರಾಜ್ಯದ ಪ್ರಜಾಪ್ರತಿನಿಧಿ ಸಭೆಯಲ್ಲಿ ಮಿಸಲಾತಿ ಕಲ್ಪಿಸಲಾಯಿತು. ಬಹುಸಂಖ್ಯಾತರು ಸಂಘಟಿತರಾಗಲು ಅನುಕೂಲ ಮಾಡಿಕೊಡಲಾಯಿತು.”

Tags:
error: Content is protected !!