Mysore
28
few clouds

Social Media

ಬುಧವಾರ, 21 ಜನವರಿ 2026
Light
Dark

ರಾಜ್ಯದಲ್ಲಿ ಅಧಿಕಾರ ಹಂಚಿಕೆ ಶೀತಲ ಸಮರಕ್ಕೆ ಬ್ರೇಕ್?

ಬಿಹಾರ ಚುನಾವಣೆಯ ನಂತರ ರಾಹುಲ್ ವಿದೇಶಕ್ಕೆ; ಸಂಪುಟ ಪುನಾರಚನೆ ಮುಂದೂಡುವ ಸಾಧ್ಯತೆ

ಅಧಿಕಾರ ಹಂಚಿಕೆಯ ಕ್ಲೆ ಮ್ಯಾಕ್ಸ್ ಕಡೆ ಗಮನ ನೆಟ್ಟಿದ್ದ ರಾಜಕೀಯ ವಲಯಕ್ಕೆ ಕುತೂಹಲಕಾರಿ ವರ್ತಮಾನಗಳು ತಲುಪಿವೆ. ಅದರ ಪ್ರಕಾರ ಅಧಿಕಾರ ಹಂಚಿಕೆಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಮಧ್ಯೆ ನಡೆಯುತ್ತಿದ್ದ ಶೀತಲ ಸಮರಕ್ಕೆ ಬ್ರೇಕ್ ಬೀಳಲಿದೆ.

ಇದೇ ರೀತಿ ಸರ್ಕಾರಕ್ಕೆ ಎರಡೂವರೆ ವರ್ಷ ಭರ್ತಿಯಾದ ತಕ್ಷಣ ಸಂಪುಟ ಪುನಾರಚನೆಯಾಗಲಿದೆ ಎಂಬ ಮಾತಿಗೂ ಬ್ರೇಕ್ ಬಿದ್ದಿದೆ. ಹೀಗೆ ರಾಜ್ಯ ಕಾಂಗ್ರೆಸ್ ಪಾಳೆಯ ಕುತೂಹಲದಿಂದ ಕಾಯುತ್ತಿದ್ದ ಎರಡು ವಿದ್ಯಮಾನಗಳಿಗೆ ಬ್ರೇಕ್ ಬೀಳುತ್ತಿದೆ ಎಂಬ ಮಾಹಿತಿ ತಲುಪಿದ್ದೇ ತಡ, ಮುಂದೇನು ಎಂಬ ಪ್ರಶ್ನೆ ಕಾಣಿಸಿಕೊಂಡಿದೆ.

ಅಂದ ಹಾಗೆ ಕಳೆದ ಹಲವು ಕಾಲದಿಂದ ಚಾಲ್ತಿಯಲ್ಲಿದ್ದ ಅಧಿಕಾರ ಹಂಚಿಕೆಯ ಮಾತು ಕಳೆದ ಕೆಲವು ದಿನಗಳಿಂದ ಎಷ್ಟು ವೇಗ ಪಡೆದಿತ್ತು ಎಂದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ತಿಂಗಳ ಮೂರನೇ ಇಲ್ಲವೇ ನಾಲ್ಕನೇ ವಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದು ಶತಃಸಿದ್ಧ ಎಂಬ ಮಾತು ಕೇಳಿ ಬಂದಿತ್ತು.

ಮೂಲಗಳು ಈ ಸುದ್ದಿಗೆ ಎಷ್ಟು ಬಣ್ಣ ಬಳಿದಿದ್ದವು ಎಂದರೆ ಮುಖ್ಯಮಂತ್ರಿಯಾಗಲು ಡಿ.ಕೆ.ಶಿವಕುಮಾರ್ ಇಷ್ಟು ಆತುರದಲ್ಲಿರುವುದಕ್ಕೆ ಏನು ಕಾರಣ ಎಂಬುದಕ್ಕೆ ಒಂದು ಕತೆಯನ್ನೇ ಚಾಲನೆಗೆ ಬಿಟ್ಟಿದ್ದವು. ಈ ಕತೆಯ ಪ್ರಕಾರ,ಅಸ್ಸಾಂನ ಗುವಾಹಟಿಯ ಸಮೀಪ ಇರುವ ಕಾಮಾಕ್ಯ ದೇವಸ್ಥಾನದ ತಾಂತ್ರಿಕರೊಬ್ಬರು ಡಿ.ಕೆ.ಶಿವಕುಮಾರ್ ಅವರಿಗೆ ಒಂದು ವಿಷಯ ತಿಳಿಸಿದ್ದಾರೆ. ಅದೆಂದರೆ ಸಿಎಂ ಆಗುವುದಾದರೆ ನವೆಂಬರ್ ತಿಂಗಳ ಇಪ್ಪತ್ತಾರರ ಒಳಗೆ ಆಗಬೇಕು. ಇಲ್ಲದಿದ್ದರೆ ಕಷ್ಟ ಎಂಬುದು. ಮೂಲಗಳು ಚಾಲನೆಗೆ ಬಿಟ್ಟ ಈ ಕಲರ್ ಕಲರ್ ಸ್ಟೋರಿಯ ಪ್ರಕಾರ, ಕಾಮಾಕ್ಯ ದೇವಾಲಯದ ಆ ತಾಂತ್ರಿಕರು ನೀಡಿದ ಸೂಚನೆಯನುಸಾರ ಕರ್ನಾಟಕದ ಸ್ವಾಮೀಜಿಯೊಬ್ಬರ ಬಳಿ ಡಿ.ಕೆ.ಶಿವಕುಮಾರ್ ಇದರ ವಿವರ ನೀಡಿದ್ದಾರೆ. ಅದರ ಪ್ರಕಾರ ಈ ಸ್ವಾಮೀಜಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮುಹೂರ್ತಗಳನ್ನು ನಿಗದಿ ಮಾಡಿಕೊಟ್ಟಿದ್ದಾರೆ.

ಇದನ್ನು ಓದಿ: ಪ್ರಸ್ತುತ ವಿದ್ಯಮಾನದ ಮೇಲೆ ಬೆಳಕು ಚೆಲ್ಲಿದ ಕಾರ್ಯಾಗಾರ

ಅದರ ಪ್ರಕಾರ, ನವೆಂಬರ್, ೨೧,೨೪ ಇಲ್ಲವೇ ೨೬ರ ಪೈಕಿ ಒಂದು ದಿನ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಯಿತು. ಆದರೆ ಈ ಕಲರ್ ಕಲರ್ ಕತೆ ಚಾಲನೆಯಲ್ಲಿರುವಾಗಲೇ ದಿಲ್ಲಿಯ ಕಾಂಗ್ರೆಸ್ ಮೂಲಗಳಿಂದ ಮತ್ತೊಂದು ಸುದ್ದಿ ಕೇಳಿ ಬಂತು. ಅದೆಂದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದ ನಂತರ ವಿದೇಶಕ್ಕೆ ತೆರಳಲಿದ್ದಾರೆ ಎಂಬುದು. ಯಾವಾಗ ಈ ಸುದ್ದಿ ಬಂತೋ ಆಗ ಅಧಿಕಾರ ಹಂಚಿಕೆಯ ಕ್ಲೈಮ್ಯಾಕ್ಸ್‌ಗೆ ಕಾಯುತ್ತಿದ್ದ ರಾಜಕೀಯ ವಲಯ ವಿಸ್ಮಯಕ್ಕೊಳಗಾಯಿತು.

ಕಾರಣ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಲು ನಿಗದಿ ಮಾಡಿಕೊಂಡಿದ್ದ ಮುಹೂರ್ತ ಹತ್ತಿರವಾಗುತ್ತಿದ್ದಾಗ ರಾಹುಲ್ ಗಾಂಧಿ ವಿದೇಶಕ್ಕೆ ಹೋಗುವುದು ಎಂದರೇನು? ಇದು ನಿಜವೇ ಆದರೆ ಅಧಿಕಾರ ಹಂಚಿಕೆಯ ಕ್ಲೆ ಮ್ಯಾಕ್ಸ್ ಇನ್ನಷ್ಟು ಕಾಲ ಮುಂದಕ್ಕೆ ಹೋಗಲಿದೆ ಎಂದು ತಾನೇ ಅರ್ಥ? ಹೀಗಾಗಿ ಕಾಂಗ್ರೆಸ್ ವಲಯಗಳಲ್ಲಿ ಒಂದು ಬಗೆಯ ಮೌನ ಆವರಿಸಿದರೆ, ಮತ್ತೊಂದು ಕಡೆಯಿಂದ ಮಗದೊಂದು ಕತೆ ಕೇಳಿಸತೊಡಗಿತು. ಅದರ ಪ್ರಕಾರ, ಎರಡೂವರೆ ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಸಿಎಂ ಹುದ್ದೆಯ ವಿಷಯದಲ್ಲಿ ಸೋನಿಯಾ ಗಾಂಧಿ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಪ್ರಾಮಿಸ್ ಮಾಡಿದ್ದರು. ಇದು ಸಿದ್ದರಾಮಯ್ಯ ಅವರಿಗೂ ಗೊತ್ತು ಎಂಬುದು ಈ ಕಲರ್ ಕಲರ್ ಕತೆಯ ವಾದ.

ಆದರೆ ತಮ್ಮ ಮತ್ತು ಡಿಕೆಶಿ ಮಧ್ಯೆ ಅಧಿಕಾರ ಹಂಚಿಕೆ ಒಪ್ಪಂದವೇ ಆಗಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟ ಧ್ವನಿಯಲ್ಲಿ ಹೇಳಿರುವುದರಿಂದ ಈ ಕತೆಯ ಫೋರ್ಸೂ ಕಡಿಮೆ ಆಯಿತು. ಈಗಿನ ಮಾಹಿತಿಯ ಪ್ರಕಾರ ಅಧಿಕಾರ ಹಂಚಿಕೆಯ ಕ್ಲೆ ಮ್ಯಾಕ್ಸ್ ಗೆ ಕಡಿವಾಣ ಬಿದ್ದಿದೆ. ಅಷ್ಟೇ ಅಲ್ಲ, ಈ ಎಪಿಸೋಡು ತಾತ್ಕಾಲಿಕವಾಗಿ ಯಾದರೂ ಮುಂದಕ್ಕೆ ಹೋಗುವುದು ಸ್ಪಷ್ಟವಾಗಿದೆ.

ಇದನ್ನು ಓದಿ: ಪ್ರಸ್ತುತ ವಿದ್ಯಮಾನದ ಮೇಲೆ ಬೆಳಕು ಚೆಲ್ಲಿದ ಕಾರ್ಯಾಗಾರ

ಇದು ಒಂದು ಕಡೆಗಾದರೆ, ಮತ್ತೊಂದು ಕಡೆ ಸಂಪುಟ ಪುನಾರಚನೆಯ ಎಪಿಸೋಡೂ ಮುಂದಕ್ಕೆ ಹೋಗುವ ಲಕ್ಷಣಗಳು ಕಾಣಿಸಿಕೊಂಡಿವೆ. ಕಾರಣ ರಾಹುಲ್ ಗಾಂಧಿಯವರ ವಿದೇಶ ಪ್ರವಾಸ. ಮೂಲಗಳ ಪ್ರಕಾರ ರಾಹುಲ್ ಗಾಂಧಿ ಅವರ ಉಪಸ್ಥಿತಿ ಇಲ್ಲದೆ ಸಚಿವ ಸಂಪುಟ ಪುನಾರಚನೆಯಂತಹ ಎಪಿಸೋಡು ನಡೆಯುವುದು ಕಷ್ಟ. ಇನ್ನು ನವೆಂಬರ್ ಮಧ್ಯಭಾಗದಲ್ಲಿ ವಿದೇಶಕ್ಕೆ ತೆರಳುವ ರಾಹುಲ್ ಗಾಂಧಿ ಮಾಸಾಂತ್ಯಕ್ಕೆ ಮರಳುತ್ತಾರಾದರೂ ಡಿಸೆಂಬರ್ ಆರಂಭದಲ್ಲಿ ಕರ್ನಾಟಕದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ.

ಈ ರೀತಿ ಅಧಿವೇಶನದ ಕಾಲದಲ್ಲಿ ಸಚಿವ ಸಂಪುಟ ಪುನಾರಚನೆಗೆ ಕೈ ಹಾಕುವುದು ಕಷ್ಟ. ಏಕೆಂದರೆ ಅಧಿವೇಶನದ ಕಾಲದಲ್ಲಿ ಸಂಪುಟ ಪುನಾರಚನೆಗೆ ಕೈ ಹಾಕಿದರೆ ಮಂತ್ರಿ ಮಂಡಲಕ್ಕೆ ಸೇರ್ಪಡೆ ಆಗದ ಆಕಾಂಕ್ಷಿಗಳು ಮತ್ತು ಸಚಿವ ಸಂಪುಟದಿಂದ ಹೊರಬೀಳುವವರ ಅಸಮಾಧಾನ ಭುಗಿಲೇಳುತ್ತದೆ. ಅಽವೇಶನ ನಡೆಯುವ ಕಾಲದಲ್ಲಿ ಇಂತಹ ಅತೃಪ್ತರಿಗೆ ದೊಡ್ಡ ಪವರ್ ದಕ್ಕುತ್ತದೆ. ಹೀಗಾಗಿ ಅಧಿವೇಶನ ಕಾಲದಲ್ಲಿ ಸಂಪುಟ ಪುನಾರಚನೆ ಕಷ್ಟ.

ಇದೇ ರೀತಿ ಅಧಿವೇಶನದ ಬೆನ್ನಿಗೇ ಧನುರ್ಮಾಸ ಶುರುವಾಗುವುದರಿಂದ ಒಂದು ತಿಂಗಳ ಮಟ್ಟಿಗೆ ಎಲ್ಲ ಚಟುವಟಿಕೆಗಳಿಗೂ ಬ್ರೇಕ್ ಬೀಳಲಿದೆ. ಇದಾದ ಕೆಲವೇ ದಿನಗಳಲ್ಲಿ ನಿಗಮ-ಮಂಡಳಿಗಳ ನೇಮಕಾತಿಗೆ ಮತ್ತೊಂದು ರೌಂಡು ಚಾಲನೆ ಸಿಗಲಿದ್ದು ಈ ಭರಾಟೆಯ ನಡುವೆ ಸಂಪುಟ ಪುನಾರಚನೆ ಎಪಿಸೋಡು ನಡೆಯಬೇಕು. ಹೀಗಾಗಿ ಈ ಕೆಲಸ ಫೆಬ್ರವರಿಯ ತನಕ ಮುಂದಕ್ಕೆ ಹೋಗುತ್ತದೆ. ಅರ್ಥಾತ್, ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲ ಕ್ರಾಂತಿಗಳಿಗೂ ಬ್ರೇಕ್ ಬೀಳುವುದು ಸ್ಪಷ್ಟವಾಗಿದ್ದು, ಅವಕಾಶಕ್ಕಾಗಿ ಕಾದು ಕುಳಿತವರಿಗೆ ಇದು ನಿರಾಸೆಯ ಕಾಲ ಅನ್ನಿಸತೊಡಗಿದೆ.

” ನವೆಂಬರ್ ಮಧ್ಯಭಾಗದಲ್ಲಿ ವಿದೇಶಕ್ಕೆ ತೆರಳುವ ರಾಹುಲ್ ಗಾಂಧಿ ಮಾಸಾಂತ್ಯಕ್ಕೆ ಮರಳುತ್ತಾರಾದರೂ ಡಿಸೆಂಬರ್ ಆರಂಭದಲ್ಲಿ ಕರ್ನಾಟಕದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಈ ರೀತಿ ಅಧಿವೇಶನದ ಕಾಲದಲ್ಲಿ ಸಚಿವ ಸಂಪುಟ ಪುನಾರಚನೆಗೆ ಕೈ ಹಾಕುವುದು ಕಷ್ಟ.”

-ಬೆಂಗಳೂರು ಡೈರಿ 
ಆರ್.ಟಿ.ವಿಠ್ಠಲಮೂರ್ತಿ

Tags:
error: Content is protected !!