Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

‘ಭಾರತದ ಪ್ರಜಾತಂತ್ರೀಯ ಅರ್ಥವ್ಯವಸ್ಥೆ ದೊಡ್ಡ ಸಾಧನೆ’

ಹೀಗೆ ಪ್ರಶಂಸಿಸಿದವರು 2024ರ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ ವಿಜೇತರಲ್ಲೊಬ್ಬರಾದ ಜೇಮ್ಸ್ ಎ. ರಾಬಿನ್ಸನ್‌ರವರು. ಅವರು ಮುಂದುವರಿದು ‘ಹಲವು ಧರ್ಮ, ಜಾತಿ, ಮತ, ಪಂಥಗಳು, ನೂರಾರು ಭಾಷೆಗಳು, ನೈಸರ್ಗಿಕ ವೈವಿಧ್ಯತೆಗಳು ಮತ್ತು ಪ್ರಾಂತೀಯತೆಯ ಭಾವನೆಗಳು ಇವೆಲ್ಲ ವೈವಿಧ್ಯತೆಗಳು ಹಾಗೂ ವೈರುಧ್ಯಗಳ ಹೊರತಾಗಿಯೂ ಭಾರತ ಜಗತ್ತಿನಲ್ಲಿಯೇ ಅತಿವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ’ ಎಂದು ವರ್ಣಿಸಿದ್ದಾರೆ. ವಿಶ್ವದಲ್ಲಿಯ ಆರ್ಥಿಕ ಅಸಮಾನತೆಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಸುಪ್ರಸಿದ್ಧ ಅರ್ಥಶಾಸ್ತ್ರಜ್ಞರೊಬ್ಬರ ಅಭಿಪ್ರಾಯ ಇದಾಗಿದೆ. ಇದು ಭಾರತದ ಪ್ರಜಾಪ್ರಭುತ್ವಕ್ಕೆ ಸಲ್ಲಿಸಿರುವ ಗೌರವ ಎನ್ನಬಹುದು. ಭಾರತಕ್ಕೆ ತನ್ನ ಗುರಿಯ ಬಗ್ಗೆ ಸ್ಪಷ್ಟ ಕಲ್ಪನೆ ಇದ್ದು, ಅದರ ಮೇಲೆ ನಿಯಂತ್ರಣ ಹೊಂದಿದೆ ಎಂದೂ ಹೇಳಿದ್ದಾರೆ.

ಜಾಗತಿಕ ನೊಬೆಲ್ ವಿಚಾರ ವಿನಿಮಯಗಳ ಭಾಗವಾಗಿ ಭಾರತದಲ್ಲಿ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ವಿಷಯ ಮಂಡಿಸುವವರಾಗಿ ರಾಬಿನ್ಸನ್‌ರವರು ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ಅವರು ಇಂದಿನ ಜ್ವಲಂತ ಸಮಸ್ಯೆಗಳ ಬಗ್ಗೆ ಸಭೆಗಳಲ್ಲಿ ಮತ್ತು ಸಂದರ್ಶನಗಳಲ್ಲಿ ಮುಕ್ತ ಮನಸ್ಸಿನಿಂದ ಮಾತನಾಡಿದ್ದಾರೆ. ಅವರ ಅಭಿಪ್ರಾಯಗಳನ್ನು ಇಲ್ಲಿ ಸಂಗ್ರಹ ರೂಪದಲ್ಲಿ ಸಂಕ್ಷಿಪ್ತವಾಗಿ ಕೊಡಲಾಗಿದೆ. ಜಾಗತೀಕರಣಕ್ಕೆ ಹಿನ್ನಡೆಯಾಗಿದೆಯೇ?

ಇದನ್ನು ಓದಿ: ಕೃಷಿ ಪತ್ತಿನ ಸಂಘ ಚುನಾವಣೆಗೆ ಸುಪ್ರೀಂ ಸೂಚನೆ

ಅಮೆರಿಕ, ಚೀನಾ ಸೇರಿದಂತೆ ಹಲವು ದೇಶಗಳ ರಕ್ಷಣಾತ್ಮಕ ನಿಲುವು ಗಳಿಂದ ಇತ್ತೀಚೆಗೆ ಜಾಗತೀಕರಣ ಮತ್ತು ಮುಕ್ತ ವ್ಯಾಪಾರ ನೀತಿಗೆ ಧಕ್ಕೆಯಾಗು ತ್ತಿದೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಸುಮಾರು ಮೂರೂವರೆ ದಶಕಗಳಿಂದ ಕಾಪಾಡಿಕೊಂಡು ಬಂದಿರುವ ಮುಕ್ತ ವ್ಯಾಪಾರ ವ್ಯವಸ್ಥೆ ಬಲಹೀನವಾದರೆ ಮುಂದೇನು ಎಂಬ ಚಿಂತೆಯೂ ಇದೆ. ವಿಶ್ವ ವ್ಯಾಪಾರ ಸಂಸ್ಥೆಯ (World Trade Organisation) ನಿಯಮಗಳು ಮತ್ತು ಆಶಯದಂತೆ ವ್ಯವಹಾರ ನಡೆಯುತ್ತಿದ್ದರೂ ಆತಂಕಗಳಿವೆ. ರಾಬಿನ್ಸನ್‌ರವರ ಖಚಿತ ಅಭಿಪ್ರಾಯದಂತೆ ಜಾಗತೀಕರಣ ಇಂದು ಸ್ವಲ್ಪ ಮಸುಕಾಗಿ ಕಂಡರೂ ಅದರ ಮಹತ್ವ ಕಡಿಮೆಯಾಗಿಲ್ಲ. ಜಾಗತೀಕರಣ ಹೊಸ ಅವಕಾಶಗಳನ್ನು ಬಡ ಮತ್ತು ಶ್ರೀಮಂತ ರಾಷ್ಟ್ರಗಳೆರಡರಲ್ಲಿಯೂ ಸೃಷ್ಟಿಸಿದೆ. ಮುಕ್ತ ವ್ಯಾಪಾರದಿಂದ ಉದ್ಯೋಗಾವಕಾಶಗಳು ಎಲ್ಲ ಕಡೆಗೂ ಸೃಷ್ಟಿಯಾಗುತ್ತಿವೆ. ಆಫ್ರಿಕಾ ಮತ್ತು ಏಷ್ಯಾದ ಅನೇಕ ಬಡ ಮತ್ತು ಅಭಿವೃದ್ಧಿಶೀಲ ದೇಶಗಳ ಅಧ್ಯಯನದ ಅನುಭವದಿಂದ ಅವರು ಈ ಮಾತನ್ನು ಹೇಳುತ್ತಾರೆ.

ಅಮೆರಿಕವೂ ಸೇರಿದಂತೆ ಆಮದು ತೆರಿಗೆಗಳನ್ನು ಹೆಚ್ಚಿಸಿದ್ದ ಎಲ್ಲ ದೇಶಗಳು ತಮ್ಮ ಆಂತರಿಕ ಆರ್ಥಿಕ ಸಮಸ್ಯೆಗಳಿಂದಾಗಿ ಈಗ ಮರು ಚಿಂತನೆ ಮಾಡುತ್ತಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವೂ ಸೇರಿ ಇತರ ಕೆಲವು ದೇಶಗಳ ಮೇಲೆ ವಿಧಿಸಿರುವ ಹೆಚ್ಚುವರಿ ಆಮದು ತೆರಿಗೆಗಳನ್ನು ಕಡಿಮೆ ಮಾಡಲು ತಯಾರಿರುವುದಾಗಿಯೂ ಮುಕ್ತ ವ್ಯಾಪಾರ ಒಪ್ಪಂದಗಳಿಗಾಗಿ ಚರ್ಚೆಗಳು ಮುಂದುವರಿಯುತ್ತಿರುವುದಾಗಿಯೂ ಪ್ರಕಟಿಸಿರುವುದೇ ಇದಕ್ಕೆ ಸಾಕ್ಷಿ. ಚೀನಾವೂ ಅಷ್ಟೇ. ಜಾಗತೀಕರಣಕ್ಕೆ ತೆರೆದುಕೊಂಡಾಗಿ ನಿಂದಲೇ ಆರ್ಥಿಕ ಬೆಳವಣಿಗೆ ವೇಗ ಹೆಚ್ಚಾಗಿದ್ದು ಮತ್ತು ಜಿ.ಡಿ.ಪಿ. ಜಗತ್ತಿನ ಎರಡನೇ ದೊಡ್ಡ ದೇಶವಾಗುವ ಮಟ್ಟಕ್ಕೆ ಬೆಳೆದದ್ದು ಎಂಬುದು ಚೀನಾದ ನಾಯಕರಿಗೆ ಗೊತ್ತು.

ಇದನ್ನು ಓದಿ: ಕೊಡಗಿನಲ್ಲೇ ಕ್ರೀಡಾ ಮೈದಾನಗಳದ್ದೇ ಕೊರತೆ 

ಒಂದು ಎಚ್ಚರಿಕೆ ಮಾತನ್ನು ರಾಬಿನ್ಸನ್‌ರವರು ಹೇಳುತ್ತಾರೆ. ಜಾಗತೀಕರಣದಿಂದ ಸಾಕಷ್ಟು ಹೆಚ್ಚುವರಿ ಸಂಪತ್ತು ನಿರ್ಮಾಣವಾಗಿರಬಹುದು. ಅದರ ಉಪಯೋಗ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳನ್ನು ಕಡಿಮೆ ಮಾಡಲು ಆದಾಗ ಮಾತ್ರ ಸಾರ್ಥಕವಾಗುತ್ತದೆ. ಭಾರತದಂತಹ ದೇಶದಲ್ಲಿ ಹೆಚ್ಚು ಜನರನ್ನು ಬಡತನದ ರೇಖೆಯಿಂದ ಮೇಲೆತ್ತಲು ಸಾಧ್ಯವಾಗಿರುವುದು ಮೆಚ್ಚುವಂತಹದ್ದೇ. ಆದರೆ ಆಫ್ರಿಕದ ಕೆಲ ದೇಶಗಳು ಇನ್ನೂ ಮೇಲ್ಮಟ್ಟಕ್ಕೆ ಬರಲು ಸಾಧ್ಯವಾಗಿಲ್ಲ. ಅಲ್ಲಿಯ ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸಬೇಕಾಗಿದೆ. ಅಷ್ಟೇ ಅಲ್ಲ. ಅಮೆರಿಕದ ಇಷ್ಟೊಂದು ದೊಡ್ಡ ಶ್ರೀಮಂತಿಕೆಯ ಲಾಭ ಅಲ್ಲಿಯ ಕೆಳಮಟ್ಟದ ಸಾಮಾನ್ಯ ಜನರಿಗೆ ತಲುಪಲೇ ಇಲ್ಲ ಎನ್ನುವುದು ರಾಬಿನ್ಸನ್‌ರವರ ಖಚಿತ ಅಭಿಪ್ರಾಯ. ಕೃತಕ ಬುದ್ಧಿಮತ್ತೆ ಮಾತು ಏನೇ ಹೊಸದು ಬಂದರೂ ಅದನ್ನು ಸ್ವೀಕರಿಸುವುದು ಸ್ವಾಭಾವಿಕ. ಆದರೆ ಹೊಸದು ಸಮಾಜದ ಎಲ್ಲ ಸ್ಥರಗಳಲ್ಲಿರುವವರಿಗೆ ಉಪಯುಕ್ತವಾಗಬೇಕು. ಇದು ದೇಶಗಳಿಗೂ ಅನ್ವಯಿಸುತ್ತದೆ. ಇದು ರಾಬಿನ್ಸನ್ ಅಭಿಪ್ರಾಯ. ಕೃತಕ ಬುದ್ಧಿಮತ್ತೆ (Artificial Intelligence) ಯಿಂದ ಪರಿಣಾಮಗಳೇನಾ ಗುತ್ತಿವೆ? ಕೃತಕ ಬುದ್ಧಿಮತ್ತೆಯಿಂದ ಉತ್ಪಾದಕತೆ (Productivity) ಹೆಚ್ಚಾಗುತ್ತದೆ ಎನ್ನುವುದನ್ನು ಒಪ್ಪಬಹುದಾದರೂ ಜನರಿಗೆ ಉದ್ಯೋಗಾವಕಾಶಗಳನ್ನು ಕೃತಕ ಬುದ್ಧಿಮತ್ತೆ ಕಡಿಮೆ ಮಾಡುತ್ತದೆ. ಇದು ನಿರುದ್ಯೋಗ ಸಮಸ್ಯೆಗೆ ಕಾರಣವಾಗಬಹುದೇ? ಈ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ. ಮಾನವಾಭಿವೃದ್ಧಿಗೆ ಧಕ್ಕೆಯಾಗುವುದಾದರೆ ಅದರಿಂದೇನು ಉಪಯೋಗ?

ಇದನ್ನು ಓದಿ: ಆತಂಕದಲ್ಲಿ ಕಾಡಂಚಿನ ಜನ

ರಾಬಿನ್ಸನ್‌ರವರು ಕೇಳುವ ಇನ್ನೊಂದು ಪ್ರಶ್ನೆ ಎಂದರೆ ಕೃತಕ ಬುದ್ಧಿಮತ್ತೆ ಸಂಶೋಧನೆಗಳು ಹೆಚ್ಚಾಗಿ ನಡೆಯುತ್ತಿರುವುದೆಲ್ಲಿ? ಹೆಚ್ಚಿನ ಪ್ರಮಾಣದಲ್ಲಿ ಅದೆಲ್ಲ ನಡೆಯುತ್ತಿರುವುದು. ಶ್ರೀಮಂತ ರಾಷ್ಟ್ರಗಳಲ್ಲಿ. ಅದರರ್ಥ ಶ್ರೀಮಂತರಿಗೇ ಹೆಚ್ಚು ಅನುಕೂಲವಾಗುತ್ತದೆ. ಇದರಿಂದ ಆರ್ಥಿಕ ಸಾಮಾಜಿಕ ಅಸಮಾನತೆ (inequality) ಇನ್ನೂ ಹೆಚ್ಚಾಗುತ್ತದೆಯಲ್ಲವೇ? ಇದು ರಾಬಿನ್ಸನ್‌ರವರ ಮೂಲ ಪ್ರಶ್ನೆ. ಎಲನ್ ಮಸ್ಕ್ ಜಗತ್ತನ್ನು ‘ರೋಬೊಟ್’ಗಳಿಂದ ತುಂಬುತ್ತಾರೆ ಎಂದರೆ ಅದರಿಂದ ಸಾಮಾನ್ಯ ಜನರಿಗೆ ಏನು ಉಪಯೋಗ? ಇದು ರಾಬಿನ್ಸನ್ನರ ಪ್ರಶ್ನೆ. ಜನರು ಅನ್ನ ಕೇಳುತ್ತಾರೆ. ಮತ ಹಾಕುತ್ತಾರೆ. ಪ್ರಶ್ನೆ ಮಾಡುತ್ತಾರೆ. ಆದರೆ ರೋಬೊಟ್‌ಗಳು ಇದಾವುದನ್ನೂ ಮಾಡುವುದಿಲ್ಲ. ಆದ್ದರಿಂದ ಸಂಶೋಧನೆ (ಕೃತಕ ಬುದ್ಧಿಮತ್ತೆಯೂ ಸೇರಿ) ಮಾನವ ಕೇಂದ್ರಿತವಾಗಿರಬೇಕು. ಮಾನವಾಭಿವೃದ್ಧಿಗೆ ಪೂರಕವಾಗಿರಬೇಕು. ಇದು ರಾಬಿನ್ಸನ್‌ರವರ ಅಭಿಪ್ರಾಯ.

” ರಾಬಿನ್ಸನ್‌ರವರ ಖಚಿತ ಅಭಿಪ್ರಾಯದಂತೆ ಜಾಗತೀಕರಣ ಇಂದು ಸ್ವಲ್ಪ ಮಸುಕಾಗಿ ಕಂಡರೂ ಅದರ ಮಹತ್ವ ಕಡಿಮೆಯಾಗಿಲ್ಲ. ಜಾಗತೀಕರಣ ಹೊಸ ಅವಕಾಶಗಳನ್ನು ಬಡ ಮತ್ತು ಶ್ರೀಮಂತ ರಾಷ್ಟ್ರಗಳೆರಡರಲ್ಲಿಯೂ ಸೃಷ್ಟಿಸಿದೆ. ಮುಕ್ತ ವ್ಯಾಪಾರದಿಂದ ಉದ್ಯೋಗಾವಕಾಶಗಳು ಎಲ್ಲ ಕಡೆಗೂ ಸೃಷ್ಟಿಯಾಗುತ್ತಿವೆ. ಆಫ್ರಿಕಾ ಮತ್ತು ಏಷ್ಯಾದ ಅನೇಕ ಬಡ ಮತ್ತು ಅಭಿವೃದ್ಧಿಶೀಲ ದೇಶಗಳ ಅಧ್ಯಯನದ ಅನುಭವದಿಂದ ಅವರು ಈ ಮಾತನ್ನು ಹೇಳುತ್ತಾರೆ.”

ಪ್ರೊ.ಆರ್.ಎಂ.ಚಿಂತಾಮಣಿ

Tags:
error: Content is protected !!