ಪ್ರೊ.ಆರ್.ಎಂ.ಚಿಂತಾಮಣಿ
ಜಾಗತಿಕ ಆರ್ಥಿಕ ಸಂಸ್ಥೆಗಳಾದ ವಿಶ್ವಬ್ಯಾಂಕು ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜಾಗತಿಕ ಆರ್ಥಿಕ ಮುನ್ನೋಟ ಮತ್ತು ವಿವಿಧ ದೇಶಗಳ ರಾಷ್ಟ್ರೀಯ ಒಟ್ಟಾದಾಯದ (ಜಿಡಿಪಿ) ಬೆಳವಣಿಗೆಯ ಗತಿಗಳನ್ನು ಕಳೆದ ವಾರ ಪ್ರಕಟಿಸಿವೆ. ಬಹುತೇಕ ಎರಡರ ಅಂದಾಜುಗಳೂ ಒಂದೇ ಆಗಿವೆ. ಭಾರತ ಇಂದಿಗೂ ಜಿಡಿಪಿ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿಯೇ ಮುಂದುವರಿದಿದೆ.
ಮೊದಲು ವಿಶ್ವಬ್ಯಾಂಕು ತನ್ನ ಮುನ್ನೋಟ ಮತ್ತು ಜಿಡಿಪಿ ಬೆಳವಣಿಗೆಗಳ ಅಂದಾಜುಗಳನ್ನು ಪ್ರಕಟಿಸಿತು. ಅದರಂತೆ ಜಾಗತಿಕ ಜಿಡಿಪಿ ಬೆಳವಣಿಗೆ (ಎಲ್ಲ ದೇಶಗಳ ಒಟ್ಟು ಜಿಡಿಪಿ) ೨೦೨೫ ಮತ್ತು ೨೦೨೬ರಲ್ಲಿ ಶೇ.೨.೭ ಆಗಲಿದೆ ಎಂದು ಹೇಳಲಾಗಿದೆ. ೨೦೨೪ರಲ್ಲೂ ಇದೇ ಮಟ್ಟದಲ್ಲಿತ್ತು. ಶ್ರೀಮಂತ ದೇಶಗಳ ಜಿಡಿಪಿ ಈ ಅವಧಿಯಲ್ಲಿ ಶೇ.೦.೯ರಿಂದ ಶೇ.೨.೩ರವರೆಗೆ ಬೆಳವಣಿಗೆ ಕಾಣಬಹುದು. ಭಾರತ ಮಾತ್ರ ವಾರ್ಷಿಕ ಶೇ.೬.೭ ದರದಲ್ಲಿ ಹೆಚ್ಚಿನ ವೇಗದಲ್ಲಿ ಬೆಳೆಯಲಿದೆ. ಇತರ ತೀವ್ರ ಬೆಳೆಯುತ್ತಿರುವ ದೇಶಗಳು (Emerging Economics ಚೀನಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಮುಂ.) ಶೇ.೪.೫ರಿಂದ ಶೇ.೬.೨ರವರೆಗೆ ಬೆಳವಣಿಗೆ ಗತಿಯಲ್ಲಿ ನಡೆಯಲಿವೆ ಎಂದು ಮುನ್ನೋಟ ವರದಿಯಲ್ಲಿ ದಾಖಲಿಸಲಾಗಿದೆ.
ಭಾರತ ಮತ್ತು ಚೀನಾ ದೇಶಗಳಲ್ಲಿ ಸರಾಸರಿ ತಲಾ ಆದಾಯವೂ (Per Capita Income) ಅತಿ ವೇಗವಾಗಿ ಬೆಳೆಯುತ್ತಿವೆ ಎಂದೂ ವರದಿಹೇಳುತ್ತದೆ. ವಿಶೇಷವಾಗಿ ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಸೇವಾ ವಲಯವನ್ನು ವರದಿ ಪ್ರಸ್ತಾಪಿಸಿದ್ದಲ್ಲದೆ ಉತ್ಪಾದಕ ಉದ್ದಿಮೆಗಳು ಸರ್ಕಾರದ ಉತ್ತೇಜನಗಳು ಮತ್ತು ತೆರಿಗೆ ರಿಯಾಯಿತಿಗಳಿಂದ ವೇಗವನ್ನು ಹೆಚ್ಚಿಸಿಕೊಂಡಿವೆ ಎಂದೂ ವರದಿ ಪ್ರತಿಪಾದಿಸಿದೆ. ಹೀಗಾಗಿ ಭಾರತದ ‘ಬೆಳವಣಿಗೆಯ ನಾಯಕ’ ಸ್ಥಾನ ಇನ್ನೂ ಗಟ್ಟಿಗೊಂಡಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎರಡು ಯುದ್ಧಗಳು, ಭೌಗೋಳಿಕ-ರಾಜಕೀಯ ಅನಿಶ್ಚಿತತೆಗಳು ಮತ್ತು ಹಣದುಬ್ಬರ ಮುಂತಾದ ಕಾರಣಗಳಿಂದ ಜಾಗತಿಕ ಅರ್ಥವ್ಯವಸ್ಥೆ ನಲುಗಿ ಹೋಗಿದೆ. ಜಾಗತಿಕ ವಿತರಣಾ ಸರಪಳಿಯಲ್ಲಿ ಅಡೆತಡೆಗಳು ಉಂಟಾಗಿವೆ. ಇವೆಲ್ಲ ಜಿಡಿಪಿ ಬೆಳವಣಿಗೆಯ ಮೇಲೆ ಪರಿಣಾಮ ಬೀರಿವೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ೨೦೨೩-೨೪ರಲ್ಲಿ ಶೇ.೮.೨ಷ್ಟು ಜಿಡಿಪಿ ಬೆಳವಣಿಗೆ ಕಂಡಿದ್ದ ಭಾರತ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕೇವಲ ಶೇ.೫.೪ರ ಬೆಳವಣಿಗೆಯಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಮರುದಿನವೇ ಐಎಂಎಫ್ ಅಂದಾಜುಗಳು ಹೊರಬಂದವು. ಇಲ್ಲಿ ೨೦೨೫ಕ್ಕಲ್ಲದೆ ಮುಂದಿನ ಎರಡು ವರ್ಷಗಳ (೨೦೨೬ ಮತ್ತು ೨೦೨೭) ಅಂದಾಜುಗಳಿವೆ. ಐಎಂಎಫ್ ಸಾಮಾನ್ಯವಾಗಿ ಕ್ಯಾಲೆಂಡರ್ ವರ್ಷಗಳಿಗೆ ಅಂದಾಜುಗಳನ್ನು ಪ್ರಕಟಿಸುತ್ತದೆ. ಭಾರತಕ್ಕೆ ಸಂಬಂಧಿಸಿದಂತೆ ನಮ್ಮ ಹಣಕಾಸು ವರ್ಷಕ್ಕೆ ಹೊಂದಾಣಿಕೆ ಮಾಡಿ ಪ್ರಕಟಿಸುತ್ತದೆ. ಇಲ್ಲಿರುವ ಸಂಖ್ಯಾಪಟ್ಟಿಯಲ್ಲಿ ಮೂರು ವರ್ಷಗಳ ಪ್ರಮುಖ ದೇಶಗಳ ಜಿಡಿಪಿ ಬೆಳವಣಿಗೆಗಳನ್ನು ಐಎಂಎಫ್ ಅಂದಾಜಿಸಿದಂತೆ ಕೊಡಲಾಗಿದೆ.
ಭಾರತದ ಜಿಡಿಪಿ ಬೆಳವಣಿಗೆ ವಿಷಯದಲ್ಲಿ ಐಎಂಎಫ್ ೨೦೨೫ಕ್ಕೆ ಸಂಬಂಧಿಸಿದಂತೆ ಮೊದಲು ಶೇ.೭.೦ಕ್ಕೆ ಅಂದಾಜು ಮಾಡಿತ್ತು. ಈಗ ಅದನ್ನು ಕಡಿತಗೊಳಿಸಿ ಶೇ.೬.೫ಕ್ಕೆ ತಂದು ನಿಲ್ಲಿಸಿದೆ. ಈ ಬದಲಾವಣೆ ನಮ್ಮ ಎಲ್ಲ ಅಂದಾಜುಗಳಲ್ಲಿ ಕಂಡುಬರುತ್ತದೆ.
ಆತ್ಮಾವಲೋಕನ: ಅಂತಾರಾಷ್ಟ್ರೀಯ ಮಟ್ಟದಲ್ಲೇನೊ ಭಾರತ ಹೊಳೆಯುತ್ತಿದೆ. ಜಾಗತಿಕ ಸ್ಥಿತಿಯಿಂದಾಗಿ ಬಹುತೇಕ ಎಲ್ಲ ದೇಶಗಳ ಜಿಡಿಪಿಗಳು ದೊಡ್ಡ ಪ್ರಮಾಣದಲ್ಲಿ ಕುಸಿದಿದ್ದರಿಂದ ಅವುಗಳ ನಡುವೆ ಸ್ಪಲ್ಪ ಮುಂದೆ ಇರುವ ನಾವು ಹೆಚ್ಚು ಬೀಗಬೇಕಾಗಿಲ್ಲ. ಪೂರ್ಣ ಕುರುಡರ ನಡುವೆ ಮೆಳ್ಳೆಗಣ್ಣಿನವನು ಶ್ರೇಷ್ಠ ಎನ್ನುವಂತಾಗಿದೆ. ಆದರೆ ನಮ್ಮನ್ನೇ ನಾವು ನೋಡಿಕೊಂಡರೆ ವರ್ಷದ ಹಿಂದೆ ಶೇ.೮ರ ಮೇಲೆ ಇದ್ದ ಬೆಳವಣಿಗೆ ದರ ಒಮ್ಮೆಲೆ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅದರ ಅರ್ಧಕ್ಕಿಂತ ಹೆಚ್ಚು ಮಟ್ಟಕ್ಕೆ ಕುಸಿಯುತ್ತದೆ ಎಂದರೆ ಏನರ್ಥ? ಸ್ಪಲ್ಪಮಟ್ಟಿಗೆ ಅಂತಾರಾಷ್ಟ್ರೀಯ ಸ್ಥಿತಿ ಕಾರಣವಿರಬಹುದು ಅದಕ್ಕಿಂತಲೂ ಮೂಲಭೂತವಾದ ಸಮಸ್ಯೆ ಇರಲೂಬಹುದು ಅದನ್ನು ಕಂಡುಹಿಡಿದು ಈಗಲೇ ಸರಿಪಡಿಸಬೇಕಾಗುತ್ತದೆ.
ನಮ್ಮ ಕೇಂದ್ರ ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್‌ರವರು ‘ಅಂಥದ್ದೇನು ದೊಡ್ಡ ಸಮಸ್ಯೆ ಇಲ್ಲ. ಅದು ತಾತ್ಕಾಲಿಕ ತೊಂದರೆ’ ಎಂದು ಸಮಜಾಯಿಸಿ ನೀಡಿದ್ದಾರೆ. ಇದಿಷ್ಟೇ ಸಾಲದು ಸರ್ಕಾರ ಅರ್ಥ ವ್ಯವಸ್ಥೆಯನ್ನು ಮೇಲೆತ್ತಲು ಗಟ್ಟಿಕ್ರಮಗಳನ್ನು ತೆಗೆದುಕೊಳ್ಳಬೇಕು.ಬರುವ ಬಜೆಟ್ ಈ ದಿಕ್ಕಿನಲ್ಲಿ ಕ್ರಾಂತಿಕಾರಿಯಾಗಬೇಕು. ನಮ್ಮ ರಿಸರ್ವ್ ಬ್ಯಾಂಕು ಮತ್ತು ಸರ್ಕಾರದ್ದೇ ಅಂಕಿಸಂಖ್ಯಾ ಇಲಾಖೆ ಈ ವರ್ಷದ ಜಿಡಿಪಿ ಬೆಳವಣಿಗೆ ಶೇ.೬.೬ ಎಂದು ಅಂದಾಜು ಮಾಡಿವೆ. ಅಂದರೆ ಕನಿಷ್ಠ ಬರುವ ಎರಡು ಮೂರು ವರ್ಷಗಳವರೆಗಾದರೂ ನಮ್ಮ ಜಿಡಿಪಿ ಬೆಳವಣಿಗೆ ಶೇ.೭.೦ರ ಒಳಗೇ ಮುಂದುವರಿಯುವುದೆ? ಇದೇ ರೀತಿ ಮುಂದುವರಿದರೆ ನಾವು ‘ವಿಕಸಿತ ಭಾರತ’ವಾಗುವುದು ಯಾವಾಗ? ಮೋದಿಯವರ ಕನಸು ನನಸಾಗುವುದು ೨೦೪೭ರಲ್ಲಿ ಸಾಧ್ಯವಾದೀತೆ?
೨೦೪೭ರ ಹೊತ್ತಿಗೆ ‘ವಿಕಸಿತ ಭಾರತ’ವಾಗಬೇಕಾದರೆ ನಾವು ವಾರ್ಷಿಕ ಕನಿಷ್ಠ ಶೇ.೮.೦ರಿಂದ ಶೇ.೮.೫ರಷ್ಟಾದರೂ ಬೆಳವಣಿಗೆ ಕಾಣಬೇಕು ಮತ್ತು ಅದೇ ಪ್ರಮಾಣದಲ್ಲಿ ನಮ್ಮ ಸರಾಸರಿ ತಲಾ ಆದಾಯವು ಹೆಚ್ಚಬೇಕು ಎಂದು ಎರಡು ವರ್ಷಗಳ ಹಿಂದೆಯೇ ಹೇಳಲಾಗುತ್ತಿತ್ತು. ಬರುವ ಮೂರು-ನಾಲ್ಕು ವರ್ಷಗಳವರೆಗಂತೂ ಆ ಮಟ್ಟ ತಲುಪುವುದಿಲ್ಲ. ಈಗಿನಂತೆ ಮುಂದುವರಿದರೆ ಗುರಿ ತಲುಪುವುದು ಯಾವಾಗ?
ಈಗ ಸರ್ಕಾರ ಮನಸ್ಸು ಮಾಡಬೇಕು. ಮತ್ತು ಅದು ಜನರಿಗೆ ಅರ್ಥವಾಗಿ ಅವರು ಈ ನಿಟ್ಟಿನಲ್ಲಿ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಂಡು ಎಲ್ಲ ವಲಯಗಳಲ್ಲೂ ಉತ್ಪಾದಕತೆಯನ್ನು ಹೆಚ್ಚಿಸಲು ಬದ್ಧತೆಯನ್ನು ತೋರಬೇಕು. ಸರ್ಕಾರ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ವಿವಿಧ ವಲಯಗಳಲ್ಲಿ ಹೂಡಿಕೆಗಳನ್ನು ಹೆಚ್ಚಿಸಬೇಕು. ಖಾಸಗಿ ಹೂಡಿಕೆಗಳು ತಾವೇ ಅನುಸರಿಸುತ್ತವೆ. ಸರ್ಕಾರ ಮತ್ತು ಜನರು ಒಂದೇ ಗುರಿಯತ್ತ ದುಡಿದರೆ ವಿಕಸಿತ ಭಾರತವಾಗುವುದು ತಡವಾಗುವುದಿಲ್ಲ.