Mysore
25
overcast clouds

Social Media

ಮಂಗಳವಾರ, 24 ಜೂನ್ 2025
Light
Dark

ಉಗ್ರರು ಮತ್ತೆ ತಲೆ ಎತ್ತದಂತಿರಲಿ ಭಾರತದ ಕ್ರಮ

ದೆಹಲಿ ಕಣ್ಣೋಟ

ಶಿವಾಜಿ ಗಣೇಶನ್‌ 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಭಾರತ-ಪಾಕ್ ಗಡಿಯಲ್ಲಿ ಕೆಲವು ವರ್ಷಗಳಿಂದ ತೆಗೆದುಕೊಂಡ ಕಠಿಣ ಕ್ರಮಗಳಿಂದ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದಕರ ಉಪಟಳ ನಿಂತಿತು ಎಂದು ನಿಟ್ಟುಸಿರು ಬಿಡುತ್ತಿದ್ದಂತೆ ಭಯೋತ್ಪಾದಕರು ಭಾರತದ ಜಂಘಾಬಲವನ್ನೇ ಅಲುಗಾಡಿಸುವಂತಹ ಅಮಾನವೀಯ ದಾಳಿಯನ್ನು ಮಾಡಿರುವುದು ದೇಶದ ನೆಮ್ಮದಿಯನ್ನು ಕೆಡಿಸಿದೆ.

ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜನೆ ಮಾಡಿದ ಬಳಿಕ ಅಲ್ಲಿ ಕೈಗೊಂಡ ಕಠಿಣ ಕಾನೂನು ಕ್ರಮದಿಂದ ಭಯೋತ್ಪಾದಕರ ಹುಟ್ಟಡಗಿದೆ ಎಂದೇ ಭಾವಿಸಲಾಗಿತ್ತು.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ನಡೆದ ಚುನಾವಣೆಯಲ್ಲೂ ಯಾವ ಭಯೋತ್ಪಾದಕರೂ ಎಲ್ಲಿಯೂ ಸುಳಿಯದಂತೆ ನೋಡಿಕೊಳ್ಳಲಾಗಿತ್ತು. ಹಾಗಾಗಿ ಚುನಾವಣೆಯು ಶಾಂತಿಯುತವಾಗಿ ನಡೆದು ಅಲ್ಲಿ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆ ಮರುಸ್ಥಾಪನೆ ಆಯಿತು. ಆದರೆ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಅಮಾನವೀಯ ಘಟನೆಯನ್ನು ಗಮನಿಸಿದರೆ ಭಯೋತ್ಪಾದಕರು ಮತ್ತೆ ತಲೆ ಎತ್ತಿರುವುದು ಈಗ ಭಾರತದ ಸಾರ್ವಭೌಮತ್ವಕ್ಕೆ ಸವಾಲು ಒಡ್ಡಿದಂತಾಗಿದೆ.

ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆಸಿದ ಅಮಾನವೀಯ ಗುಂಡಿನ ದಾಳಿಯಿಂದ ೨೮ ಮಂದಿ ಮೃತಪಟ್ಟಿದ್ದು, ಇಪ್ಪತ್ತು ಮಂದಿ ಗಾಯಗೊಂಡಿರುವ ಕಹಿ ಘಟನೆ ಈಗ ಭಾರತವನ್ನು ಮತ್ತಷ್ಟುಜಾಗೃತಗೊಳಿಸಿದೆ. ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ದೇಶದಲ್ಲಿ ಒಗ್ಗಟ್ಟಿನ ದನಿ ಎದ್ದಿದೆ. ಈ ಘಟನೆಯಿಂದ ನೊಂದಿರುವ ಇಡೀ ದೇಶದ ಜನರು ವಿಶೇಷವಾಗಿ ಕಾಶ್ಮೀರದ ಜನರು ಕೂಡ ಭಯೋತ್ಪಾದಕರ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ಛಲವನ್ನು ಖಂಡನೆ, ಪ್ರತಿಭಟನೆ ಮತ್ತು ಬಂದ್ ಆಚರಣೆ ಮೂಲಕ ಪ್ರದರ್ಶಿಸಿರುವುದು ಒಳ್ಳೆಯ ಬೆಳವಣಿಗೆ. ಕಾಶ್ಮೀರ ಕಣಿವೆಯ ಗಡಿ ಭಾಗಗಳಲ್ಲಿ ಮತ್ತು ಆ ಪ್ರದೇಶದಾದ್ಯಂತ ಸದಾಕಾಲ ಶಸ್ತ್ರಸಜ್ಜಿತರಾಗಿ ಓಡಾಡುವ ಗಡಿ ಭದ್ರತಾ ಪಡೆಗಳು ಮತ್ತು ಇತರೆ ಯೋಧರ ಜೊತೆ ಮುಖಾಮುಖಿಯಾಗುವ ಧೈರ್ಯ ತೋರದೆ ಅಮಾಯಕ ಪ್ರವಾಸಿಗರನ್ನು ಗುಂಡಿಟ್ಟು ಕೊಂದಿರುವುದು ಅತ್ಯಂತ ಹೇಯ ಕೃತ್ಯ. ಈ ಘಟನೆಯನ್ನು ತಾನು ನಡೆಸಿರುವುದಾಗಿ ‘ದಿ ರೆಸಿಸ್ಟೆಂಟ್ ಫ್ರಂಟ್’ ಎಂದು ಹೇಳಿಕೊಂಡಿರುವ ಉಗ್ರರ ಸಂಘಟನೆಗೆ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಹಮಾಸ್ ಮತ್ತು ನಿಷೇಧಿತ ಲಷ್ಕರ್- ಎ -ತೊಯ್ಬಾದ ಜೊತೆ ಸಂಬಂಧವಿರುವುದು ಅವರ ಹೇಳಿಕೆಗಳಿಂದ ಗೊತ್ತಾಗಿದೆ.

ಭಾರತಕ್ಕೆ ಪ್ರಮುಖ ದೇಶಗಳ ಗಣ್ಯರು ಭೇಟಿ ನೀಡಿದಾಗ ಈ ಉಗ್ರ ಸಂಘಟನೆಗಳು ದಿಢೀರನೆ ಎಚ್ಚೆತ್ತುಕೊಳ್ಳುತ್ತವೆ. ಈ ಉಗ್ರ ಸಂಘಟನೆಗಳು ಗಡಿಗಳಲ್ಲಿ ಈ ದಾಳಿ ಮಾಡಿಕೊಂಡು ಬಂದಿರುವುದು ಹೊಸದೇನಲ್ಲ. ಎರಡು ಸಾವಿರದ ಇಸವಿಯಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದ್ದಾಗ ಇದೇ ಅನಂತ್‌ನಾಗ್ ಜಿಲ್ಲೆಯ ಸಿಖ್ಖರೇ ಇರುವ ಗಡಿ ಗ್ರಾಮ ಚಿತ್ತಿಸಿಂಗ್‌ಪೋರಾ ಎಂಬಲ್ಲಿ ಉಗ್ರರು ರಾತ್ರಿ ವೇಳೆ ದಾಳಿ ನಡೆಸಿ ಹಿಂಸಾಕೃತ್ಯ ಎಸಗಿದ್ದರು. ಈಗ ಭಾರತ ಪ್ರವಾಸ ಕೈಗೊಂಡಿದ್ದ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರ ಗಮನ ಸೆಳೆಯಲು ಉಗ್ರರು ಈ ಹಿಂಸಾಕೃತ್ಯ ನಡೆಸಿದ್ದಾರೆ. ಅಂದರೆ ಕಾಶ್ಮೀರದ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎನ್ನುವ ಸಂದೇಶ ಸಾರುವುದು ಈ ಭಯೋತ್ಪಾದಕ ಸಂಘಟನೆಗಳ ಉದ್ದೇಶವಾಗಿದೆ. ಇಂತಹ ಘಟನೆಗಳು ಮರುಕಳಿಸಿರುವುದನ್ನು ಗಮನಿಸಿದರೆ ಇತಿಹಾಸದಲ್ಲಿ ನಡೆದಿರುವ ಹಲವಾರು ಘಟನೆಗಳೇ ಸಾಕ್ಷಿಯಾಗಿವೆ.

ಪಾಕ್ ಪ್ರಚೋದಿತ ಉಗ್ರರ ಈ ದಾಳಿಯು ತಮ್ಮನ್ನು ಬೆಳೆಸಿ ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನಕ್ಕೇ ಈಗ ತಿರುಗುಬಾಣವಾಗಿದೆ. ಪಹಲ್ಗಾಮ್ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಮೋದಿ ಸರ್ಕಾರದ ಕಠಿಣ ಕ್ರಮಗಳಿಂದ ಪಾಕಿಸ್ತಾನ ಹಿಂದೆಂದೂ ಅನುಭವಿಸದ ಸಂಕಷ್ಟಗಳನ್ನು ಈಗ ಅನುಭವಿಸಬೇಕಿದೆ. ಕಳೆದ ಮೂರು ದಶಕಗಳಿಂದ ನಿರಂತರವಾಗಿ ಭಯೋತ್ಪಾದಕರನ್ನು ಸಾಕಿ, ಆಶ್ರಯಕೊಟ್ಟು ಅವರನ್ನು ಬೆಳೆಸಿದ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಮಟ್ಟದ ಕಠಿಣ ಕ್ರಮಗಳನ್ನು ಘೋಷಿಸಲಾಗಿದೆ.

ಅರುವತ್ತು ವರ್ಷಗಳ ಹಿಂದೆ ವಿಶ್ವಬ್ಯಾಂಕ್ ನೆರವಿನಿಂದ ಮಾಡಿಕೊಳ್ಳಲಾದ ಸಿಂಧೂ ನದಿ ನೀರು ಒಪ್ಪಂದ ರದ್ದತಿ, ಉಭಯ ದೇಶಗಳ ನಡುವೆ ಸಂಪರ್ಕವಾಗಿರುವ ವಾಘಾ ಮತ್ತು ಅಟ್ಟಾರಿ ರಸ್ತೆ ಗಡಿಗಳ ಬಂದ್, ಪಾಕಿಸ್ತಾನಿಯರಿಗೆ ನೀಡಿದ್ದ ವೀಸಾ ರದ್ದತಿ ಮತ್ತು ಭಾರತದಲ್ಲಿ ವೀಸಾ ಆಧಾರದಿಂದ ನೆಲೆಸಿರುವ ಪಾಕಿಸ್ತಾನ ಪ್ರಜೆಗಳನ್ನು ಅವರ ದೇಶಕ್ಕೆ ಹೊರಗಟ್ಟುವಂತಹ ಕ್ರಮಗಳನ್ನು ಕೈಗೊಂಡು ಪಾಕಿಸ್ತಾನದ ಆಡಳಿತವನ್ನು ದಿಕ್ಕುಗೆಡಿಸುವಂತೆ ಮಾಡಲಾಗಿದೆ.

ನಿರೀಕ್ಷೆಯಂತೆ ಪಾಕಿಸ್ತಾನವು ಭಾರತದ ಪ್ರಜೆಗಳಿಗೆ ನೀಡಿದ್ದ ವೀಸಾವನ್ನು ರದ್ದುಪಡಿಸುವ ಕ್ರಮಕ್ಕೆ ಮುಂದಾಗಿದೆ. ಭಾರತವು ನಮ್ಮ ವಿರುದ್ಧ ಕೈಗೊಂಡಿರುವ ರಾಜತಾಂತ್ರಿಕ ಕ್ರಮಗಳು ವಿಶೇಷವಾಗಿ ಸಿಂಧೂ ನದಿ ನೀರು ಒಪ್ಪಂದ ರದ್ದತಿಯು ‘ನಮ್ಮ ವಿರುದ್ಧದ ಯುದ್ಧದ ಕ್ರಮ’ ಎಂದು ಪಾಕಿಸ್ತಾನ ಪ್ರತಿಕ್ರಿಯಿಸಿದೆ.

ಭಾರತದ ಈ ಕ್ರಮಕ್ಕೆ ಪಾಕಿಸ್ತಾನವು ೧೯೭೨ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಜುಲ್ಛಿಕರ್ ಅಲಿ ಭುಟ್ಟೋ ನಡುವೆ ಆಗಿದ್ದ ‘ಶಿಮ್ಲಾ ಒಪ್ಪಂದ’ವನ್ನು ರದ್ದು ಮಾಡುವುದಾಗಿ ಹೇಳಿಕೊಂಡಿದೆ. ಈ ದ್ವಿಪಕ್ಷೀಯ ಒಪ್ಪಂದವನ್ನು ಮುರಿಯುವುದರಿಂದ ಭಾರತದ ವಿಮಾನಗಳು  ಪಾಕಿಸ್ತಾನದ ವೈಮಾನಿಕ ಪ್ರದೇಶದಲ್ಲಿ ಹಾರಾಟ ನಡೆಸುವಂತಿಲ್ಲ. ಪಹಲ್ಗಾಮ್ ಹಿಂಸಾಕೃತ್ಯದ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರಗಳು ತಮ್ಮ ವಾಯುನೆಲೆಗಳಲ್ಲಿ ಯುದ್ಧ ವಿಮಾನಗಳ ತಾಲೀಮು ನಡೆಸಿವೆ. ಪಾಕಿಸ್ತಾನದ ವಿದೇಶಾಂಗ ಸಚಿವರು, ಪಾಕಿಸ್ತಾನದ ವಿರುದ್ಧ ಏನೇ ಕಠಿಣ ಕ್ರಮಕೈಗೊಳ್ಳುವ ಮುನ್ನ ಭಾರತ ನಮ್ಮ ದೇಶದಲ್ಲಿ ಅಣ್ವಸ್ತ್ರಗಳಿವೆ ಎನ್ನುವುದನ್ನು ಮರೆಯಬಾರದು ಎನ್ನುವ ಎಚ್ಚರಿಕೆ ನೀಡಿರುವ ಬೆದರಿಕೆ ಕರೆಗೆ ಭಾರತ ಈಗ ಹೆದರುವ ಸ್ಥಿತಿಯಲ್ಲಿ ಇಲ್ಲ ಎನ್ನುವುದನ್ನೂ ಅವರು ಅರ್ಥಮಾಡಿಕೊಳ್ಳಬೇಕಿದೆ.

ಈ ಮಧ್ಯೆ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಅಸೀಫ್, ಪಹಲ್ಗಾಮ್ ಘಟನೆಯ ಹಿನ್ನೆಲೆಯಲ್ಲಿ ಲಂಡನ್‌ನಲ್ಲಿ ಸ್ಪೈಯ್ ನ್ಯೂಸ್ ಎನ್ನುವ ಟಿವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಲವು ಸತ್ಯಘಟನೆಗಳನ್ನು ಹೊರಹಾಕಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಪಾಕಿಸ್ತಾನವುಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುವ ಜೊತೆಗೆ ಶಿಬಿರ ನಡೆಸಲು ಮತ್ತು ಹಣಕಾಸು ಒದಗಿಸುವಂತಹ ಅಸಹ್ಯ ಕೆಲಸವನ್ನ ಮಾಡಿಕೊಂಡು ಬರಲಾಗಿದೆ. ಸೋವಿಯತ್ ರಷ್ಯಾ ವಿರುದ್ಧದ ಹೋರಾಟದಲ್ಲಿ ನೆರವಾಗಲು ಹಾಗೂ ಅಮೆರಿಕ ಮತ್ತು ಬ್ರಿಟನ್‌ನಂತಹ ದೇಶಗಳನ್ನು ಮೆಚ್ಚಿಸಲು ‘ಕೆಟ್ಟ ಕೆಲಸಗಳನ್ನು’ ಮಾಡಿಕೊಂಡು ಬಂದಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಪಾಕಿಸ್ತಾನದ ನಿಜವಾದ ಬಣ್ಣವನ್ನು ಆ ದೇಶದ ರಕ್ಷಣಾ ಸಚಿವರೇ ಬಹಿರಂಗಗೊಳಿಸಿರುವುದು ಪಾಕಿಸ್ತಾನವನ್ನು ಬೆಂಬಲಿಸುವ ರಾಷ್ಟ್ರಗಳ ಕಣ್ಣು ತೆರೆಸುವಂತೆ ಮಾಡಿದೆ. ಈ ಸತ್ಯಸಂಗತಿ ಪಾಕಿಸ್ತಾನದ ಈಗಿನ ಆಡಳಿತಕ್ಕೆ ಚೆನ್ನಾಗಿ ಗೊತ್ತಿರುವುದರಿಂದ ತನ್ನ ದೇಶದಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕರನ್ನು ಮಟ್ಟಹಾಕಬೇಕಿದೆ. ಅದರಲ್ಲೂ ಕೆಲವು ವರ್ಷಗಳಿಂದ ಅರಾಜಕ ಸ್ಥಿತಿಯನ್ನು ಎದುರಿಸುತ್ತಿರುವ ಪಾಕಿಸ್ತಾನ ಬೇರೆ ರಾಷ್ಟ್ರಗಳ ವಿಶ್ವಾಸವನ್ನು ಗಳಿಸಬೇಕಾದರೆ ಮೊದಲು ತನ್ನ ದೇಶದಲ್ಲಿ ನೆಲೆಯೂರಿರುವ ಉಗ್ರರನ್ನು ಹೆಡೆಮುರಿ ಕಟ್ಟಬೇಕಿದೆ. ಆದರೆ ಭಾರತದ ವಿರುದ್ಧ ಮೂರ್ನಾಲ್ಕು ದಶಕಗಳಿಂದ ದ್ವೇಷ ಸಾಽಸುತ್ತಾ ಬಂದಿರುವ ಪಾಕಿಸ್ತಾನದ ಆಡಳಿತದಿಂದ ಇಂತಹ ಕ್ರಮಗಳನ್ನು ಕೈಗೊಳ್ಳುವ ಯಾವ ಸಾಧ್ಯತೆಯನ್ನೂ ನಿರೀಕ್ಷಿಸಲಾಗದು. ಏಕೆಂದರೆ ಉಗ್ರರಿಗೆ ಪಾಕಿಸ್ತಾನ ಸ್ವರ್ಗವಿದ್ದಂತೆ.

ಶತ್ರು ರಾಷ್ಟ್ರಗಳಿಂದ ದೇಶಕ್ಕೆ ಸಂಕಷ್ಟ, ಬೆದರಿಕೆ, ಅಪಾಯ ಮತ್ತು ಇತರೆ ಕ್ರೌರ್ಯದ ಘಟನೆಗಳು ನಡೆದಾಗಲೆಲ್ಲ ಎಲ್ಲ ಪಕ್ಷಗಳೂ ತಮ್ಮ ವೈಮನಸ್ಸನ್ನು ಮರೆತು ಆಡಳಿತ ನಡೆಸುವ ಸರ್ಕಾರದ ಬೆನ್ನಿಗೆ ನಿಂತಿವೆ. ಇದು ಭಾರತದ ಪ್ರಜಾಪ್ರಭುತ್ವ ಮತ್ತು ಸಾರ್ವಭೌಮತ್ವದ ಶಕ್ತಿ. ಆದರೆ ಪಹಲ್ಗಾಮ್‌ನಲ್ಲಿ ನಡೆದ ಹಿಂಸಾಕೃತ್ಯದ ಬಗೆಗೆ ಸರ್ಕಾರದ ಬೇಹುಗಾರಿಕೆ ವಿಫಲಗೊಂಡಿದೆ ಎಂಬ ಆರೋಪವನ್ನು ಸರ್ವಪಕ್ಷಗಳ ಸಭೆ ನಡೆಸಿದ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಒಪ್ಪಿಕೊಂಡಿರುವುದಾಗಿ ಹಲವು ಮಾಧ್ಯಮಗಳು ವರದಿ ಮಾಡಿವೆ. ಕೇವಲ ನಾಲ್ಕೈದು ಮಂದಿ ಉಗ್ರರು ೨೬ ಮಂದಿ ಅಮಾಯಕ ಪ್ರವಾಸಿಗರನ್ನು ಗುಂಡಿಟ್ಟು ಕೊಲ್ಲುವಾಗ ನಮ್ಮ ಗಡಿ ಪಹರೆ ನಡೆಸುವ ಭದ್ರತಾ ಪಡೆಗಳು ಎಲ್ಲಿದ್ದವು? ಇಂತಹ ಘಟನೆಗಳ ಬಗೆಗೆ ಬೇಹುಗಾರಿಕೆ ನಡೆಸುವ ಹಲವು ಸಂಸ್ಥೆಗಳಿಗೆ ಮೊದಲೇ ತಿಳಿಯಲಿಲ್ಲವೇ ಎನ್ನುವುದು ಸರ್ಕಾರದ ವೈಫಲ್ಯ ಎನ್ನುವುದು ಸಹಜವಾಗಿ ಎಲ್ಲರ ಮನಸ್ಸಿನಲ್ಲಿ ಮೂಡುವ ಶಂಕೆಗಳು.

ಈ ವೈಫಲ್ಯದ ಬಗೆಗೆ ಆಂತರಿಕವಾಗಿ ತನಿಖೆ ನಡೆಸಿ ಬೇಹುಗಾರಿಕೆಯನ್ನು ಮತ್ತಷ್ಟು ಬಲಗೊಳಿಸಬೇಕಿದೆ. ಉಗ್ರರನ್ನು ಪತ್ತೆ ಹಚ್ಚಿ ಯಾರೂ ಊಹಿಸಲಾಗದಂತಹ ರೀತಿಯಲ್ಲಿ ಅವರನ್ನು ಮುಗಿಸುವುದಾಗಿ ಪ್ರಧಾನಿ ಮೋದಿ ಎಚ್ಚರಿಕೆ ನೀಡಿರುವುದು ಸದ್ಯಕ್ಕೆ ಸಮಾಧಾನ ತರಬಹುದು. ಆದರೆ ಪೆಹಲ್ಗಾಮ್‌ನಲ್ಲಿ ನಡೆಸಿದ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಉಗ್ರರನ್ನು, ಅವರಿಗೆ ಆಶ್ರಯ ನೀಡಿ ಅವರನ್ನು ಬೆಂಬಲಿಸಿಕೊಂಡು ಬಂದವರನ್ನು ಇನ್ನೂ ಪತ್ತೆ ಹಚ್ಚಲಾಗದಿರುವುದು ವಿಪರ್ಯಾಸ. ಈ ಹೇಯ ಕೃತ್ಯ ನಡೆಸಿದವರನ್ನು ಬಂಧಿಸಿದರೆ ಕೆಲವು ತಿಂಗಳಿಂದ ಶಾಂತಿಯುತವಾಗಿ ಇರುವ ಕಾಶ್ಮೀರವನ್ನು ಮತ್ತೆ ತಲ್ಲಣಗೊಳಿಸಿರುವ ಸಂಚುಗಾರರು ಮತ್ತವರ ಜಾಲವನ್ನು ಬೆಳಕಿಗೆ ತಂದಂತಾಗಲಿದೆ. ಈ ಎಲ್ಲ ಕ್ರಮಗಳನ್ನೂ ಕೇಂದ್ರ ಸರ್ಕಾರ ಈಗಾಗಲೆ ಕೈಗೊಂಡಿರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು.

ಪಾಕಿಸ್ತಾನ ವಿರುದ್ಧದ ರಾಜತಾಂತ್ರಿಕ ಕಠಿಣ ಕ್ರಮಗಳ ಜಾರಿ ಮತ್ತು ಉಗ್ರಗಾಮಿ ಸಂಘಟನೆಗಳನ್ನು ಮಟ್ಟಹಾಕುವ ಈ ಸಂದಿಗ್ಧ ದಿನಗಳಲ್ಲಿ ಎದುರಾಗುವ ಸಮಸ್ಯೆ, ಬಿಕ್ಕಟ್ಟು ಹಾಗೂ ಭಾರತದ ಪರವಾಗಿ ವಿಶ್ವಮಟ್ಟದಲ್ಲಿ ಸದಭಿಪ್ರಾಯ ಮೂಡಿಸುವ ಪ್ರಮುಖ ಕ್ರಮಗಳನ್ನೂ ಯಶಸ್ವಿಗಾಗಿ ಕೇಂದ್ರ ಸರ್ಕಾರವು ಎಲ್ಲ ಪ್ರತಿಪಕ್ಷಗಳ ವಿಶ್ವಾಸವನ್ನು ಗಳಿಸುವತ್ತಲೂ ಗಮನ ನೀಡಬೇಕಾದುದು ಇಂದಿನ ಅವಶ್ಯ.

” ಭಾರತಕ್ಕೆ ಪ್ರಮುಖ ದೇಶಗಳ ಗಣ್ಯರು ಭೇಟಿ ನೀಡಿದಾಗ ಈ ಉಗ್ರ ಸಂಘಟನೆಗಳು ದಿಢೀರನೆ ಎಚ್ಚೆತ್ತುಕೊಳ್ಳುತ್ತವೆ. ಎರಡು ಸಾವಿರದ ಇಸವಿಯಲ್ಲಿ ಅಂದಿನ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದ್ದಾಗ ಇದೇ ಅನಂತ್‌ನಾಗ್ ಜಿಲ್ಲೆಯ ಸಿಖ್ಖರೇ ಇರುವ ಗಡಿ ಗ್ರಾಮ ಚಿತ್ತಿಸಿಂಗ್ ಪೋರಾ ಎಂಬಲ್ಲಿ ಉಗ್ರರು ರಾತ್ರಿ ವೇಳೆ ದಾಳಿ ನಡೆಸಿ ಹಿಂಸಾಕೃತ್ಯ ಎಸಗಿದ್ದರು. ಈಗ ಭಾರತ ಪ್ರವಾಸ ಕೈಗೊಂಡಿದ್ದ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರ ಗಮನ ಸೆಳೆಯಲು ಉಗ್ರರು ಈ ಹಿಂಸಾಕೃತ್ಯ ನಡೆಸಿದ್ದಾರೆ. ಅಂದರೆ ಕಾಶ್ಮೀರದ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎನ್ನುವ ಸಂದೇಶ ಸಾರುವುದು ಈ ಭಯೋತ್ಪಾದಕ ಸಂಘಟನೆಗಳ ಉದ್ದೇಶವಾಗಿದೆ.”

Tags:
error: Content is protected !!